ಸಿನಿಮಾ - ಕ್ರೀಡೆ

ಐಪಿಎಲ್- ಕಿಕ್ ಮತ್ತು ಕಿರಿಕ್!!

ಐಪಿಎಲ್- ಕಿಕ್ ಮತ್ತು ಕಿರಿಕ್!!

ತುಂಬಿ ತುಳುಕುವ ಮೈದಾನಗಳು, ಕಿವಿಗಡಚಿಕ್ಕುವ ವೀಕ್ಷಕ ವಿವರಣೆ, ನವ್ಜೋತ್ ಸಿಂಗ್ ಶಾಯರಿ, ಡ್ಯಾನಿ ಮೋರಿಸನ್ ಕಣ್ಣಿನ ವಾರೆ ನೋಟ, ರವಿಶಾಸ್ತ್ರಿ ಮೋಡಿ, ಮೈದಾನದ ಗ್ಯಾಲರಿಯಲ್ಲಿ ಕುಳಿತು ಹೃದಯ ಕದ್ದ ಸಂಗಾತಿಗಳ ಆಟವನ್ನು ಕಣ್ತುಂಬಿಗೊಂಡು ಚಪ್ಪಾಳೆ ತಟ್ಟುವ ಚೆಲುವೆಯರು, ದಾಂಡಿಗರು ಎತ್ತುವ ಸಿಕ್ಸರ್ ಗಳ ಮಜಾ, ಅಬ್ಬರಿಸುವ ಬ್ಯಾಟಿಂಗ್ ವೀರರ ನಡುವೆಯೂ ವೇಗಿಗಳ ಆರ್ಭಟ, ಸ್ಪಿನ್ನರ್ ಗಳ ಜಾದೂ, ಬೌಂಡರಿ ಸಿಕ್ಸರ್ ಸಿಡಿಸಿದಾಗ, ವಿಕೆಟ್ ಬಿದ್ದಾಗ ಮೋಹಕವಾಗಿ ಸೊಂಟವನ್ನು ಕುಣಿಸುವ ಚಿಯರ್ ಗರ್ಲ್ಸ್, ಲಾಸ್ಟ್ ಬಾಲ್ ಫಿನಿಶ್, ಸೂಪರ್ ಒವರ್!!!

ವಾಹ್!!!  ಇಂಡಿಯನ್ ಪ್ರೀಮಿಯರ್ ಲೀಗ್!

ಐಪಿಎಲ್ ಪಂದ್ಯಗಳೇ ಹಾಗೆ. ಕ್ಷಣ ಕ್ಷಣಕ್ಕೂ ರೋಮಾಂಚನ, ಕ್ಷಣ ಕ್ಷಣಕ್ಕೂ ಭ್ರಮನಿರಸನ. ಸೀಸನ್ ಗೊಂದು ಟೈಟಲ್ ಸಾಂಗ್ ಸಿದ್ಧಮಾಡಿಕೊಂಡು ನಮ್ಮ ಮುಂದೆ ಬರುತ್ತೆ ಐಪಿಎಲ್ ಹಬ್ಬ. ಇಲ್ಲಿ ಒಂದು ಓವರ್ ಮುಗಿಯುವಷ್ಟರಲ್ಲಿ ಹೊಸ ಸ್ಟಾರ್ ಉದಯಿಸಿರುತ್ತಾನೆ, ಮತ್ತೊಬ್ಬ ಸ್ಟಾರ್ ಬಿದ್ದಿರುತ್ತಾನೆ.! ಪ್ರಾಯ ೪೨ ಆದರೂ ತನ್ನ ಕರಾರುವಕ್ಕಾದ ಬೌಲಿಂಗ್ ನಿಂದ ಎದುರಾಳಿಗಳನ್ನು ಕಟ್ಟಿಹಾಕಿ ವಿಕೆಟ್ ಪಡೆದಾಗ ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸುವ ಬ್ರಾಡ್ ಹಾಗ್, ಪ್ರವೀಣ್ ತಾಂಬೆ ಒಂದೆಡೆಯಾದರೆ, ಇನ್ನೂ ಚಿಗುರು ಮೀಸೆಯ ಹುಡುಗ ಆರ್ಸಿಬಿಯ ವಾಮನ ಮೂರ್ತಿ ಸರ್ಫರಾಜ್ ಖಾನ್ ಬ್ಯಾಟಿಂಗ್ ಮೋಡಿ ಇನ್ನೊಂದೆಡೆ. ಇನ್ನೇನು ಪಂದ್ಯ ಕೈ ತಪ್ಪಿಯೇ ಹೋಯ್ತು ಅನ್ನುವಷ್ಟರಲ್ಲಿ ಕೆರೆಬಿಯನ್ ದೈತ್ಯರಾದ ರಸೆಲ್, ಪೋಲಾರ್ಡ್, ಗೇಯ್ಲ್, ಬ್ರಾವೋ ಪಂದ್ಯದ ಗತಿಯನ್ನೇ ಬದಲಿಸಿ ತಮ್ಮ ತಂಡಗಳನ್ನು ಜಯದೆಡೆಗೆ ಕೊಂಡೊಯ್ಯುವ ಪರಿಯಂತೂ ಅದ್ಭುತ. ಪಿಚ್ ನಲ್ಲಿ ಕುಳಿತು ಚೆಂಡನ್ನು ತಲೆಯ ಮೇಲಿಂದ ಥರ್ಡ್ ಮ್ಯಾನ್ ಕಡೆಗೆ ಅಟ್ಟುವ ಡಿವಿಲಿಯರ್ಸ್, ಮೈದಾನದಾಚೆಗೆ ಚೆಂಡನ್ನಟ್ಟುವ ಗೈಲ್, ಮೆಕಲಮ್.. ಬೆಂಕಿಯುಂಡೆಯಂತಹ ಯಾರ್ಕರ್ ಎಸೆಯುವ ಮಾಲಿಂಗ, ವಿಕೆಟ್ ಕಿತ್ತಾಗ ನೃತ್ಯ ಮುಖೇನ ಸಂಭ್ರಮಿಸುವ ಬ್ರಾವೋ, ಹರ್ಭಜನ್, ಮೈದಾನವಿಡೀ ಓಡೋ ಇಮ್ರಾನ್ ತಾಹೀರ್, ಅಗ್ರೆಸಿವ್ ನಾಯಕ ಕೊಹ್ಲಿ, ಕೂಲ್ ಕ್ಯಾಪ್ಟನ್ ಧೋನಿ, ಗಂಭೀರ್, ಬೈಲಿ. ಇದೆಲ್ಲವೂ ಕಾಣ ಸಿಗುವುದು ಐಪಿಎಲ್ ಎಂಬ ಕ್ರಿಕೆಟ್ ಜೈತ್ರಯಾತ್ರೆಯಲ್ಲಿ.!! ಕನ್ನಡಿಗರ ತಂಡವಾದ ಆರ್ಸಿಬಿಯಲ್ಲಿ ಕನ್ನಡಿಗರೇ ಇಲ್ಲ ಎಂಬುದು ವಿಷಾದದ ಸಂಗತಿಯಾದರೂ ಕನ್ನಡಿಗರಾದ ಉತ್ತಪ್ಪ, ರಾಹುಲ್, ಪಾಂಡೆ, ವಿನಯ್ ಕುಮಾರ್, ಕರುಣ್ ನಾಯರ್, ಬಿನ್ನಿ, ಸುಚಿತ್, ಅಗರವಾಲ್, ಕಾರ್ಯಪ್ಪ ದಾಖಲೆಯ ಮೊತ್ತಕ್ಕೆ ಬೇರೆ ತಂಡಕ್ಕೆ ಆಯ್ಕೆಯಾಗಿ ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ.

 ದೇಶೀ ಕ್ರಿಕೆಟ್ ನಲ್ಲಿ ಮಿಂಚಿದ ಆಟಗಾರರಿಗೆ ತಮ್ಮ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ಹೆಬ್ಬಾಗಿಲು ಐಪಿಎಲ್. ಪ್ರಥಮ ಆವೃತ್ತಿಯಲ್ಲಿ ಗರಿಷ್ಟ ರನ್ ಗಳಿಸಿದ್ದ ಶಾನ್ ಮಾರ್ಶ್ ಐಪಿಎಲ್ ಸಾಧನೆಯ ಮಾನದಂಡದಲ್ಲಿಯೇ ಆಸ್ಟ್ರೇಲಿಯಾ ತಂಡಕ್ಕೆ ಆಯ್ಕೆಯಾಗಿದ್ದರು. ಹೀಗೆ ಹಲವಾರು ಆಟಗಾರರ ದೊಡ್ಡ ಸಾಧನೆಗಳಿಗೆ ಮುನ್ನುಡಿ ಬರೆದಿದೆ ಐಪಿಎಲ್. ಈ ಸಲದ ಪಂದ್ಯಾವಳಿಯಲ್ಲಿ ಭಾರತೀಯರಾದ ರಹಾನೆ, ದೀಪಕ್ ಹೂಡಾ, ಸಂಜು ಸಾಮ್ಸನ್, ಶ್ರೇಯಸ್ ಅಯ್ಯರ್, ಸರ್ಫರಾಜ್, ಕರುಣ್ ನಾಯರ್, ಮಂದೀಪ್ ಸಿಂಗ್, ಭುವನೇಶ್ವರ್ ಕುಮಾರ್, ಕೇದಾರ್ ಜಾದವ್ ಒಳ್ಳೆಯ ಪ್ರದರ್ಶನ ತೋರಿ ಭಾರತ ಕ್ರಿಕೆಟ್ ಕೂಡಾ ಅತ್ಯುತ್ತಮ ಯುವ ಪ್ರತಿಭೆಗಳನ್ನು ಹೊಂದಿದೆ ಎಂದು ಜಗಜ್ಜಾಹೀರು ಮಾಡಿದ್ದಾರೆ. ಪಂದ್ಯದಿಂದ ಪಂದ್ಯಕ್ಕೆ, ಸೀಸನ್ ನಿಂದ ಸೀಸನ್ ಗೆ ಮತ್ತಷ್ಟು ರೋಚಕವಾಗಿ ಕ್ರಿಕೆಟ್ ಪ್ರಿಯರಿಗೆ ಮತ್ತಷ್ಟು ಕಿಕ್ ಕೊಡುವ ಐಪಿಲ್ ಗೆ ಐಪಿಎಲ್ಲೇ ಸಾಟಿ!

ಹೀಗೆ ಯುವ ಆಟಗಾರರಿಗೆ ತಮ್ಮ ಪ್ರತಿಭೆ, ಕೌಶಲ್ಯಗಳನ್ನು ವೃದ್ಧಿಸಲು, ತಮ್ಮ ತಾಂತ್ರಿಕತೆಯನ್ನು ಒರೆ ಹಚ್ಚಲು ಉತ್ತಮ ವೇದಿಕೆ ಐಪಿಎಲ್ ಪಂದ್ಯಾವಳಿ. ಅಂತರಾಷ್ಟ್ರೀಯ ಸ್ಟಾರ್ ಆಟಗಾರರ ಜೊತೆಗಿನ ಒಡನಾಟ ಬೇರೆ ಪ್ಲಸ್ ಪಾಯಿಂಟ್. ಸ್ಟಾರ್‍ ಆಟಗಾರರು ಮಾತ್ರವಲ್ಲದೆ ಜಾನ್ ರೈಟ್, ಜಾನ್ ಬುಕಾನನ್, ಟಾಮ್ ಮೂಡಿ, ಜಾಂಟಿ ರೋಡ್ಸ್,ಅಲನ್ ಡೊನಾಲ್ಡ್, ಪಾಂಟಿಂಗ್, ಗ್ಯಾರಿ ಕೃಸ್ಟ್ರನ್ ಮುಂತಾದ ಅಂತಾರಾಷ್ಟ್ರೀಯ ಮಟ್ಟದ ಕೋಚ್ ಗಳ ಕೈಕೆಳಗೆ ಪಳಗುವ ಯೋಗವೂ ನಮ್ಮ ಕಿರಿಯ ಆಟಗಾರರಿಗೆ ಐಪಿಎಲ್ ನಿಂದಾಗಿ ಸಿಕ್ಕಿದೆ. ಆದರೆ ಯುವ ಜನತೆಗೆ ಹಲವು ರೀತಿಯಲ್ಲಿ ಕಿಕ್ ಕೊಡುವ ಐಪಿಲ್ ಬರೀ ಕಿಕ್ ಮಾತ್ರವಲ್ಲ, ಕಿರಿಕ್ಕಿಗೂ ಫೇಮಸ್ಸಾಗಿದೆ. ರಾಜಕೀಯ ಪುಢಾರಿಗಳು, ಸಿನಿಮಾ ತಾರೆಯರು ಹಾಗೂ ಕಾರ್ಪೋರೇಟ್ ಜಗತ್ತಿನ ದೊಡ್ಡ ಕುಳಗಳಿಗೆ ತಮ್ಮ ಕಪ್ಪು ಹಣವನ್ನು ಬಿಳಿಮಾಡಿಕೊಳ್ಳಲು ಐಪಿಲ್ ವೇದಿಕೆಯಾಗುತ್ತಿರುವುದು ಕಳವಳದ ಸಂಗತಿ. ಪ್ರಥಮ ಆವೃತ್ತಿಯಲ್ಲೇ ಭಜ್ಜಿ ಶ್ರೀಶಾಂತ್ ಗೆ ಕಪಾಳಮೋಕ್ಷ ಮಾಡಿದ್ದು ಬಹಳ ಸುದ್ದಿಯಾಗಿತ್ತು. ನಂತರದ ಆವೃತ್ತಿಗಳಲ್ಲಿ ಮೈದಾನದಲ್ಲಿ ಸಿಗರೇಟ್ ಸೇದುವ ಮೂಲಕ ಶಾರುಕ್ ಖಾನ್ ದುಂಡಾವರ್ತನೆ, ವಾಂಖೆಡೆ ಮೈದಾನದಲ್ಲಿ ಸಿಬಂದಿಗಳೊಂದಿಗೆ ಕಿಂಗ್ ಖಾನ್ ಕಿರಿಕ್, ಸಿದ್ಧಾರ್ಥ ಮಲ್ಯ- ದೀಪಿಕಾ ಹಾಗೂ ಶೇನ್ ವಾರ್ನ್ – ಲೀಸ್ ಹರ್ಲೆ ಲಿಪ್ ಲಾಕ್ ಪ್ರಕರಣಗಳು, ಹರ್ಭಜನ್ ನೀತಾ ಅಂಬಾನಿ ಅಪ್ಪುಗೆ, ಪ್ರೀತಿ ಜಿಂಟಾ ನೆಸ್ ವಾಡಿಯಾ ಕಿತ್ತಾಟ, ಚಿಯರ್ ಗರ್ಲ್ಸ್ ಮೈಕಾಣುವಂತೆ ಅಸಹ್ಯವಾಗಿ ತುಂಡುಡುಗೆ ಧರಿಸಿದ್ದು, ಲಲಿತ್ ಮೋದಿ ಅವ್ಯವಹಾರ ಹೀಗೆ ಹತ್ತು ಹಲವು ವಿವಾದಗಳಿಂದ ಸುದ್ದಿಗೀಡಾಗಿತ್ತು ಐಪಿಎಲ್ ಎಂಬ ಚುಟುಕು ಕ್ರಿಕೆಟ್. ಕೋಟಿಗಟ್ಟಲೇ ಹಣ ಪಡೆಯುವ ತಮ್ಮ ತಂಡದ ಇತರ ಆಟಗಾರರನ್ನು ನೋಡಿ ಜುಜುಬಿ ಮೊತ್ತದ ಹಣ ಪಡೆಯುವ ಸ್ಥಳೀಯ ಆಟಗಾರರು ಅಸೂಯೆಗೊಳಗಾಗುತ್ತಿದ್ದಾರೆ ಎನ್ನುವುದು ಪ್ರಚಲಿತದಲ್ಲಿರುವ ಮಾತು. ಕೇವಲ ಹಣ, ಗ್ಲಾಮರ್, ಮಧ್ಯ, ಲೇಟ್ ನೈಟ್ ಪಾರ್ಟಿಗಳೇ ವಿಜ್ರಂಭಿಸುವ ಈ ಪಂದ್ಯಾವಳಿಯಲ್ಲಿ ತಾವೂ ಕೂಡಾ ವಿಲಾಸಿ ಜೀವನ ನಡೆಸಲು ವಾಮಮಾರ್ಗ ಅನುಸರಿಸಿದರೆ ತಪ್ಪೇನು ಎಂಬ ವಾದ ಕೆಲವು ಆಟಗಾರರದ್ದು. ಇದರ ಫಲವೇ ಐಪಿಎಲ್ ೬ನೇ ಆವೃತ್ತಿಯ ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್, ಟವಲ್ ಫಿಕ್ಸಿಂಗ್!! ಶ್ರೀಶಾಂತ್, ಅಂಕಿತ್ ಚವಾಣ್, ಚಂಡೀಲಾ ನಂತಹ ಕೆಲವು ಆಸೆಬುರುಕ ಆಟಗಾರರಿಂದಲೂ, ಗುರುನಾಥನ್ ಮೇಯಪ್ಪನ್, ರಾಜ್ ಕುಂದ್ರಾ ನಂತಹ ಲಜ್ಜೆಗೆಟ್ಟ ಮಾಲಕರಿಂದಾಗಿ ಐಪಿಲ್ ಕಡೆಗೆ ಇಡೀ ದೇಶವೇ ಅನುಮಾನದಿಂದ ನೋಡುವಂತಾಯ್ತು.

ಅಂದು ಅನೇಕರು ತಮ್ಮ ಪಾಸ್ ಗಳನ್ನು ಹರಿದು ಬಿಸಾಕಿರಬಹುದು. ತಮ್ಮ ನೆಚ್ಚಿನ ಆಟಗಾರರ ಬಗ್ಗೆ ಅನುಮಾನಿಸಿರಬಹುದು ಅಥವಾ ಪಂದ್ಯಗಳನ್ನು ನೋಡೋದೇ ಬೇಡ ಅಂತಾ ಶಪಥ ಮಾಡಿರಬಹುದು. ಆದರೆ ಭಾರತದಲ್ಲಿ ಕ್ರಿಕೆಟ್ ಕ್ರೇಜ್ ಅಂದರೆ ಹಾಗೆಯೇ. ಕೇವಲ ಮೂರು ಗಂಟೆಯಲ್ಲಿ ಮುಗಿಯುವ ಕಿರು ಕ್ರಿಕೆಟ್ ಸಮರ ಮನರಂಜನೆಗೆ ಯಾವತ್ತೂ ಮೋಸ ಮಾಡಿಲ್ಲ. ಯಾರೋ ನಾಲ್ಕು ಜನ ತಪ್ಪು ಮಾಡಿದ ಕೂಡಲೇ ಇಡೀ ಪಂದ್ಯಾವಳಿಯನ್ನು ಬಹಿಷ್ಕರಿಸುವಂತ ಜನ ನಾವಲ್ಲ. ಆದರೂ ಒಂದು ವಿಷಯವಂತೂ ಸತ್ಯ. ಫಿಕ್ಸಿಂಗ್ ಪ್ರಕರಣಗಳು ಮರುಕಳಿಸಿದರೆ ಐಪಿಲ್ ಪಂದ್ಯ ನೋಡಲು ಕೇವಲ ಖಾಲಿ ಸೀಟ್ ಗಳು ಇರುವುದರಲ್ಲಿ ಅನುಮಾನವೇ ಇಲ್ಲ. ಪ್ರೇಕ್ಷಕ ಒಮ್ಮೆ ಕ್ರೀಡಾಂಗಣದಿಂದ ಬಹಳ ದೂರ ಸಾಗಿದ ಮೇಲೆ ಆತನನ್ನು ಮತ್ತೆ ಕರೆ ತರುವುದು ಬಹಳ ಕಷ್ಟ. ಟಿಕೆಟ್ ಗಾಗಿ ಅಷ್ಟೊಂದು ದುಡ್ಡನ್ನು ವ್ಯಯಿಸಿ ಯಾರೂ ತಮ್ಮನ್ನು ತಾವೇ ಮೂರ್ಖರನ್ನಾಗಿಸಲು ಇಷ್ಟಪಡುವುದಿಲ್ಲ. ಉತ್ತಮ ಕ್ರಿಕೆಟ್ ಆಡಿ ಜನರ ಹಣಕ್ಕೆ ಪೂರ್ತಿ ಮನರಂಜನೆ ನೀಡುವ ಪಂದ್ಯಾವಳಿಯಾಗಲಿ ಐಪಿಎಲ್. ಕೇವಲ ಕಿರಿಕ್ ಗಳಿಂದಾಗಿ ವಿಶ್ವದ ಗಮನ ಸೆಳೆಯದೇ ಕ್ರಿಕೆಟ್ ಆಟದ ನಿಜವಾದ ಕಿಕ್ ಕೊಟ್ಟರೆ ಉತ್ತಮ.

Long Live Cricket!!!

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!