ಸಿನಿಮಾ - ಕ್ರೀಡೆ

42 ವರ್ಷಗಳ  ಕೆಳಗೆ…

ಹೊಟ್ಟೆ ಬಿರಿದು ತೇಗುತ್ತಿರುವವನ ಬಾಯಿಗೆ ಕಡುಬು ಗಿಡುಗಿದಂತಹ ಸ್ಥಿತಿ ಇಂದು ವಿಶ್ವ ಕ್ರಿಕೆಟ್ನದ್ದು. ಇಂದು  ESPN ಕ್ರಿಕೆಟ್ ವೆಬ್ಸೈಟ್ ಅನ್ನು ಒಮ್ಮೆ ಇಣುಕಿ ನೋಡಿದರೆ ಕಡೆ ಪಕ್ಷ ಒಂದೆರೆಡು ಡಜನ್ ಪಂದ್ಯಗಳಾದರೂ ಏಕಕಾಲಕ್ಕೆ ವಿಶ್ವದ ವಿವಿಧೆಡೆ ಜರುಗುತ್ತಿರುತ್ತವೆ. ಇನ್ನು ವಾರ, ತಿಂಗಳು ಹಾಗೂ ವರ್ಷಗಳನ್ನು ಗಣನೆಗೆ ತೆಗೆದುಕೊಂಡು ಲೆಕ್ಕ ಹಾಕಿದರೆ  ಸಾಗರೋಪಾದಿಯಲ್ಲಿ ಇವುಗಳ ಸಂಖ್ಯೆ ಮೂಡುತ್ತವೆ. ಸಾಕು ಸಾಕಪ್ಪ ಅನ್ನುವಷ್ಟು. ಆಡುವ ಪ್ರತಿಯೊಂದು ಪಂದ್ಯಗಳನ್ನು ನೆನಪಿರಿಸಿ, ಚರ್ಚಿಸುವ ಕಾಲವೂ ಇಂದಿಲ್ಲ. ಪಂದ್ಯಗಳೂ ಅಂತಹ  ಚರ್ಚಿಸುವ ಸಮಯವನ್ನು ಒದಗಿಸಿದರೆ ತಾನೆ. ಹೀಗೆ ಸಾಗರದ ಅಲೆಗಳಂತೆ ಒಂದರ ಬೆನ್ನಿಗೊಂದು ತಳ್ಳಿಕೊಂಡು ಬರುತ್ತಲೇ ಇರುತ್ತವೆ. ಪರಿಣಾಮ ಪ್ರಸ್ತುತ ಯುಗ ರೆಕಾರ್ಡ್ ಬ್ರೇಕಿಂಗ್’ಗಾಗಿಯೇ ಮೂಡಿರುವಂತಿದೆ. ಇಲ್ಲಿ ಮೂಡುವ, ಮುರಿಯುವ ದಾಖಲೆಗಳಿಗೆ ಆಕಾಶವೇ ಕೊನೆ!  

ಅದೊಂದು ಕಾಲವಿತ್ತು. ಹೆಚ್ಚೇನೂ ಇಲ್ಲ, ಕೇವಲ ಎರಡು ಮೂರು ದಶಕಗಳ ಕೆಳಗೆ. ವಿದೇಶಿ ತಂಡಗಳು ನಮ್ಮಲ್ಲಿ ಆಟವಾಡಲು ಬಂದವೆಂದರೆ ಆ ಸರಣಿ ಮುಗಿಯುವವರೆಗೂ ಹಬ್ಬದ ವಾತಾವರಣ ಎಲ್ಲೆಡೆ. ಕೇಳರಿಯದ ಆಂಗ್ಲ ಅಥವಾ ಮತ್ಯಾವುದೂ ಭಾಷೆಯ ನಾಮಪದಗಳೆಲ್ಲ ಬಾಯಿಪಾಠ ಮಕ್ಕಳಿಗೆ. ಭಾನುವಾರದ ನಾಲ್ಕು ಘಂಟೆಯ ಚಲನಚಿತ್ರಕ್ಕಿಂತಲೂ ಅಂದು ಹೆಚ್ಚಾಗಿ ಚರ್ಚಿಸಲ್ಪಡುತ್ತಿದ್ದದ್ದು ಕ್ರಿಕೆಟ್ ಪಂದ್ಯದ ಆಳೆತ್ತರಗಳೇ. ಅತ್ತ ಪಂದ್ಯ ನೋಡದಿರುವವರು (ಹೆಚ್ಚಾಗಿ ಅಮ್ಮ, ಅಕ್ಕ, ಅಜ್ಜ, ಅಜ್ಜಿಯರು) ಲೊಟಲೊಟ ಶಾಪವನ್ನು ಹಾಕುತ್ತ ನಿಮ್ ಹಾಳಾದ್ ಟಿಕೆಟ್ ಮುಗಿತಾಎನ್ನುತ್ತಾ ಭಾನುವಾರ ಪೂರ್ತಿ ಶಬರಿಯ ತಪಸ್ಸನ್ನು ಮಾಡಿ ರಾತ್ರಿಯಾದರೂ ಕಪ್ಪು ಬಿಳುಪಿನ ಟಿವಿಯ ಮುಂದೆ ಅಂಟಿಕೊಂಡಿರುವ ಗುಂಪನ್ನು ಕಂಡು ಖಿನ್ನರಾಗಿ ತಾವು ಮಲಗುವ ಕೋಣೆಯೊಳಗೆ ಧಾವಿಸುತ್ತಿದ್ದರು. ಇನ್ನು ಸಚಿನ್, ಗಂಗೂಲಿ, ದ್ರಾವಿಡ್, ಕಪಿಲ್, ಗವಾಸ್ಕರ್ ಅಂತಹ ದಿಗ್ಗಜರು ಸೆಂಚುರಿಯನ್ನೇನಾದರೂ ಬಾರಿಸಿದರಂತೂ ಮಕ್ಕಳಿಗೆ ತಾವು ಕಲಿತ ಮಗ್ಗಿ, ಕಾಗುಣಿತ, ಗುಣಾಕಾರ, ಭಾಗಕಾರಗಳೆಲ್ಲವೂ ಮಂಗಮಾಯವಾಗಿ ಆ ಜಾಗದಲ್ಲಿ ಪ್ರತಿಷ್ಠಾಪಿಸಲ್ಪಡುತ್ತಿದ್ದದ್ದು ಅವರುಗಳ ಸಿಕ್ಸು, ಫೋರು, ಆವರೇಜ್ ಹಾಗೂ ಸ್ಟ್ರೈಕ್ ರೇಟ್’ಗಳೆಂಬ ರಂಜನೆಯ ಸಂಖ್ಯಾಶಾಸ್ತ್ರಗಳೇ! ಇನ್ನು ಸರ್ಕಾರಗಳ ಪವರ್ ಪ್ರಾಬ್ಲಮ್’ಗಳನ್ನು ಅಲ್ಲಿ ಯಾರು ಆಲಿಸುತ್ತಿದ್ದರು? ಹೊಟ್ಟೆಕಿಚ್ಚಿಗೋ ಏನೋ ಎಂಬಂತೆ ವಾರಕ್ಕೊಮ್ಮೆಯೂ ಕೊಂಚ ರಿಯಾಯ್ತಿಯನ್ನು ನೀಡದೆ ವಿದ್ಯುತ್ತನ್ನು ತುಂಡರಿಸುತ್ತಿದ್ದ ಪಾಪದ ಲೈನ್ ಮ್ಯಾನ್ಗಳ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜಾಕುತ್ತಾ, ಘಂಟೆಗಳ ನಂತರ ಬರುತ್ತಿದ್ದ ವಿದ್ಯುತ್ತ್ರಾಯನಿಗೆ ಕೈ ಮುಗಿದು ಮತ್ತೊಮ್ಮೆ ಟಿವಿಯನ್ನು ಆನ್ ಮಾಡಿ ಬಿಟ್ಟರೆ ಮತ್ತದೇ ಕಲ್ಲು ಬಂಡೆಯಂತೆ ಅಲ್ಲಲ್ಲೇ ತಟಸ್ಥವಾಗಿಬಿಡುತ್ತಿದ್ದರು. ಒಂದು ವೇಳೆ ವಿದ್ಯುತ್ತ್  ಕಾಣೆಯಾದ ಈ ಮೂರ್ನಾಲ್ಕು ಘಂಟೆಗಳಲ್ಲಿ  ಭಾರತ ತೀರಾ ಕಳಪೆ ಪ್ರದರ್ಶನವೇನಾದರೂ ಮಾಡಿದ್ದರೆ ಅಥವಾ ಪಂದ್ಯವೇನಾದರೂ ಸೋತಿದ್ದರೆ ದೋಷವೆಲ್ಲವನ್ನೂ  ಲೈನ್ ಮ್ಯಾನ್ ಒಬ್ಬನ ಮೇಲೆ ಒರಿಸಿ ಆತನೇ ತಂಡವನ್ನು ಸೋಲಿಸಿದನೇನೋ ಎಂಬಂತೆ ಅಟ್ಟಾಡಿಸಿಕೊಂಡು ಒಡೆಯಲೂ ಹಿಂಜರಿಯುತ್ತಿರಲಿಲ್ಲ, ತಮ್ಮನ್ನೇ ತಾವು ಭಾರಿ ಅಭಿಮಾನಿಗಳೆಂದುಕೊಳ್ಳುತ್ತಿದ್ದ ಎಳೆಯ ಮರಿಗಳು.

ಇದೆಲ್ಲ ಆಗಿನ ಕಾಲ. ಇಂದು ದಿನದ ಇಪ್ಪತ್ನಾಲ್ಕು ಘಂಟೆಯೂ ವಿದ್ಯುತ್ತು.  ಇಲ್ಲವಾದರೆ ಯು.ಪಿ.ಎಸ್. ಜೊತೆಗೆ ಮೊಬೈಲ್ ಹಾಗೂ ಇಂಟರ್ನೆಟ್ಗಳ ಲೈವ್ ಅಪ್ಡೇಟ್ಸ್.  ಇಷ್ಟೆಲ್ಲಾ ಇದ್ದರೂ ಅಂದಿನ ಖುಷಿಯ ಇಂದಿನಿತೂ ಇಂದಿಲ್ಲ.  ದಿನಕ್ಕೊಂದು ನಾಲ್ಕಾರು ಸರಣಿಗಳು. ಪೊರು ಸಿಕ್ಸರ್ ಗಳ ಸುರಿ ಮಳೆ. ಅಂದು ಪಂದ್ಯಕ್ಕೊಂದೋ ಎರಡೂ ಕಾಣ ಸಿಗುತ್ತಿದ್ದ ಸಿಕ್ಸರ್’ಗಳು ಇಂದು ಪ್ರತಿ ಓವರ್’ಗಳಲ್ಲೂ ಸಿಡಿಯಲ್ಪಡುತ್ತವೆ. ಟಿ20 ಪಂದ್ಯಗಳು ಶುರುವಾದ ಮೇಲಂತೂ ಇಂತಹ ಸಿಕ್ಸರ್’ಗಳ ರಸಸ್ವಾದನೆಯ ಖುಷಿಯೇ ಇಲ್ಲದಂತಾಗಿದೆ. ಆತುರದ ಜೀವನಶೈಲಿಯಲ್ಲಿ,  ಹಣದ ಹೊಳೆಯಲ್ಲಿ ಇಂದು ಚುಟುಕು ಪಂದ್ಯಗಳು ಇಪ್ಪತ್ತರಿಂದ ಹತ್ತು, ಐದು ಓವರ್’ಗಳಿಗೆ ಬಂದು ಮುಟ್ಟಿವೆ. ಟೆಸ್ಟ್ ಕ್ರಿಕೆಟ್ನಲ್ಲಿ ಇಂದಿನ ಅದೆಷ್ಟೋ ತಂಡಗಳ ಕಳಪೆ ಪ್ರದರ್ಶನಗಳಿಗೂ ಚುಟುಕು ಮಾದರಿಯ ಇಂತಹ ಪಂದ್ಯಗಳೇ ಕಾರಣವೆಂಬುದು ಬಿಡಿಸಿ ಹೇಳಬೇಕಾಗಿಲ್ಲ. ವೆಸ್ಟ್ ಇಂಡೀಸ್ ತಂಡ 2012 ಹಾಗೂ 2016 ರ ಟೀ20 ವಿಶ್ವಕಪ್ ಅನ್ನು ಗೆದ್ದರೂ ಟೆಸ್ಟ್ ಶ್ರೇಯಾಂಕದಲ್ಲಿ ತಳಮಟ್ಟದಲ್ಲಿಯೇ ಉಳಿದಿದ್ದಿತು. ಇಂತಹ ಕಾಲದಲ್ಲಿ ಟೆಸ್ಟ್ ಕ್ರಿಕೆಟ್’ಗಳನ್ನು ಐದೈದು ದಿನಗಳ ಕಾಲ ಸಾವಕಾಶವಾಗಿ ಕಾದು ನೋಡುವವರಾದರೂ ಯಾರು? ಆ ಮಟ್ಟಿನ ತಾಳ್ಮೆಯಾಗಲಿ, ಸಮಯವಾಗಲಿ ಇಂದಿನ ಜನಮಾನಸದಲ್ಲಿಲ್ಲ ಎಂಬುದು ಜಗಜ್ಜಾಹೀರಾದ ವಿಷಯವೇ. ಅಲ್ಲದೆ ಇಂದು ಟೆಸ್ಟ್ ಪಂದ್ಯಗಳು ಸಂಪೂರ್ಣ ಐದು ದಿನಗಳೂ ಎಲ್ಲಿ ನಡೆಯುತ್ತವೆ. ಹೊಡಿ ಬಡಿ ಆಟದಲ್ಲಿ ಮೂರೋ ಅಥವಾ ನಾಲ್ಕೇ ದಿನಗಳಲ್ಲಿ ಪಂದ್ಯಗಳು ಕೊನೆಗೊಳ್ಳುವುದು ಸಾಮಾನ್ಯದ ಸಂಗತಿ. ಪ್ರಸ್ತುತ ದಕ್ಷಿಣ ಆಫ್ರಿಕಾದ ಟೆಸ್ಟ್ ಸರಣಿಯಲ್ಲೂ ಭಾರತ ತಂಡದ ಪ್ರದರ್ಶನ ಇಂತಹ ಅಂಶಗಳನ್ನೇ ಎತ್ತಿ ಹಿಡಿಯುತ್ತಿತ್ತು. ನಮ್ಮ ನೆಲದಲ್ಲಿ ಅದೆಷ್ಟೇ ಹಾರಾಡಿ ಅರಚಾಡಿದರೂ ವಿದೇಶಿ ನೆಲದಲ್ಲಿ ತಂಡದ ಸಾಧನೆ ಅಷ್ಟಕಷ್ಟೇ ಎಂಬ ಅಪವಾದ ಭಾರತ ತಂಡದ ಮೇಲೆ ದಶಕಗಳಿಂದ ಇದೆ. ಇಂದು ಮೇನ್ ಕೋಚ್, ಬ್ಯಾಟಿಂಗ್ ಕೋಚ್, ಬೌಲಿಂಗ್ ಕೋಚ್,  ಫೀಲ್ಡಿಂಗ್ ಕೋಚ್, Physiotherapist  ಎಂಬ ಮತ್ತೊಂದು ಮಗದೊಂದು ಬೆಂಬಲ ತುಂಬುವ, ದಾರಿ ತೋರುವ ಹಲವರಿದ್ದರೂ ಕೆಲವೊಮ್ಮೆ ತಂಡ ತೀರ ಹೀನಾಯ ಪ್ರದರ್ಶನವನ್ನು ನೀಡುತ್ತದೆ.

ಟೆಸ್ಟ್ ಪಂದ್ಯಗಳನ್ನೂ ಟೀ20 ಪಂದ್ಯಗಳಂತೆ ಆಡುವ ಪ್ರಸ್ತುತ ಕಾಲದಲ್ಲಿ ಅಂದೊಂದು ದಿನ ಭಾರತ – 1983 ರ ವಿಶ್ವಕಪ್ ಗೆಲ್ಲುವ ಮೊದಲು, ನಾಲ್ಕನೇ ಇನ್ನಿಗ್ಸ್’ನಲ್ಲಿ ವಿಶ್ವದ ಯಾವುದೇ ಘಟಾನುಘಟಿ ತಂಡಗಳು ಪೇರಿಸಿರದ ಮೊತ್ತವನ್ನು ಪೇರಿಸಿ ಗೆಲುವನ್ನು ಮುಡಿಗೇರಿಸಿಕೊಂಡಿತ್ತು. ಕೊನೆಯ ದಿನದ ಕೊನೆಯ ಕೆಲ ನಿಮಿಷಗಳವರೆಗೂ ನೋಡುಗರನ್ನು ಹಾಗೂ ಕೇಳುಗರನ್ನು ಕಾಲ ತುದಿಯ ಮೇಲೆ ನಿಲ್ಲಿಸಿದ ಪಂದ್ಯಕ್ಕೆ  ಸುಮಾರು 42 ವರ್ಷಗಳು ತುಂಬಿವೆ!

ವಿಂಡೀಸ್ ತಂಡವೆಂದರೆ ಇತರ ತಂಡಗಳು ಬಾಡಿ ಬೆಂಡಾಗಿ ಹೋಗುತ್ತಿದ್ದ ಕಾಲವದು. ಭಾರತ ನಾಲ್ಕು ಪಂದ್ಯಗಳ  ಸರಣಿಗೆ ವೆಸ್ಟ್ ಇಂಡೀಸ್’ನ್ನು ತಲುಪಿ ಕೊನೆಯಲ್ಲಿ ಸರಣಿಯನ್ನು 2-1 ರ ಅಂತರದಲ್ಲಿ ಸೋತಿತ್ತಾದರೂ ಈ ಸರಣಿ ಭಾರತಕ್ಕೆ ಅವಿಸ್ಮರಣೀಯವಾದದ್ದು. ಟೆಸ್ಟ್ ಕ್ರಿಕೆಟನ್ನು ಆಡಲು ಶುರುವಿಟ್ಟ 8 ದಶಕಗಳಲ್ಲಿ ಭಾರತ ನಾಲ್ಕನೇ ಇನ್ನಿಂಗ್ಸ್’ನಲ್ಲಿ ಗಳಿಸಿ ಗೆದ್ದಿರುವ ಗರಿಷ್ಟ ಮೊತ್ತ 406. ಇಂದಿಗೂ ಇದು ವಿಶ್ವದಲ್ಲೇ ಮೂರನೇ ಅತಿ ಹೆಚ್ಚಿನ ರನ್ ಚೇಸ್. ಆಗಿನ ಕಾಲಕ್ಕೆ ನಂಬರ್ ಒನ್!  ಇಂತಹ ಬೃಹತ್ ಮೊತ್ತವನ್ನು ಕಲೆ ಹಾಕಿ ಗೆದ್ದ ಪಂದ್ಯವೇ ಈ ಸರಣೀಯ ಮೂರನೇ ಪಂದ್ಯ. ಮೊದಲ ಪಂದ್ಯವನ್ನು ಸೋತು, ಎರಡನೇ ಪಂದ್ಯವನ್ನು ಡ್ರಾನಲ್ಲಿ ಕೊನೆಗೊಳಿಸಿಕೊಂಡಿದ್ದ ಭಾರತ ಸರಣಿಯಲ್ಲಿ ಜೀವಂತವಾಗಿರಲು ಮೂರನೇ ಪಂದ್ಯವನ್ನು ಗೆಲ್ಲುವ ಅನಿವಾರ್ಯತೆಯಲ್ಲಿದ್ದಿತು. ವಿದೇಶಿ ನೆಲ, ಹೊತ್ತಿ ಉರಿಯುವ ರಣ ಬಿಸಿಲು, ಕೋಚ್, ತೆರಪಿಸ್ಟ್’ಗಳೆಂದರೇ ಏನೆಂದು ಅರಿಯದ ತಂಡ, ಆಡಲೊ ಅಥವ ಒಡೆಯಲೋ ಎಂಬಂತೆ ದಾಳಿ ನಡೆಸುವ ದೈತ್ಯ ವಿಂಡೀಸ್ ಬೌಲರ್ಗಳು, ಅವರುಗಳ ಕುಹಕ ನುಡಿಗಳು ಇವೆಲ್ಲವನ್ನು ನೀಗಿ ಭಾರತ ಅಡಿ ಇಡಬೇಕಿದ್ದಿತು. ಪೋರ್ಟ್ ಆಫ್ ಸ್ಪೇನ್ನಲ್ಲಿ ಅಂದು ಬಿಷನ್ ಸಿಂಗ್ ಬೇಡಿ ನೇತೃತ್ವದ ತಂಡ ಬಹುಶಃ ಕನಸಿನಲ್ಲಿಯೂ ಅವೊಂದು  ಬಗೆಯ ಫಲಿತಾಂಶವನ್ನು ಕೊನೆಯಲ್ಲಿ ನಿರೀಕ್ಷಿಸಿರಲಿಲ್ಲ. ಮೊದಲನೇ ಇನ್ನಿಂಗ್ಸ್’ನಲ್ಲಿ ವಿಂಡೀಸ್ ತಂಡದ 359 ರನ್ ಗಳನ್ನು ಬೆನ್ನತ್ತಿದ  ಭಾರತ 228 ರನ್ ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಒಪ್ಪಿಸಿಕೊಂಡಿತು. ಎರಡನೇ ಇನ್ನಿಂಗ್ಸ್ನಲ್ಲಿ ಮತ್ತೊಮ್ಮೆ ಬ್ಯಾಟ್ ಬೀಸಿದ ವಿಂಡೀಸ್ ತಂಡ 271 ರನ್’ಗಳಿಗೆ ಡಿಕ್ಲೇರ್ ಮಾಡಿಕೊಂಡು 403 ರನ್’ಗಳ ಬೃಹತ್  ಮೊತ್ತವನ್ನು ಭಾರತದ ಮುಂದಿಟ್ಟಿತು. ಸರಣಿ ತನ್ನದೇ ಎಂಬಂತೆ ಅದು ನಿರಾಳವಾಯಿತು. ಭಾರತಕ್ಕೆ ಅದು, ಮಾಡು ಇಲ್ಲವೇ ಮಡಿ ಪಂದ್ಯ. ಟೆಸ್ಟ್ ಇತಿಹಾಸದ ಹಿಂದೆಂದೂ ಈ ಮಟ್ಟಿನ ಒಂದು ಮೊತ್ತವನ್ನು ಪೇರಿಸಿ ಗೆದ್ದಿರುವ ಉದಾಹರಣೆಗಳೇ ಇದ್ದಿರಲಿಲ್ಲ. ಸುನಿಲ್ ಗವಾಸ್ಕರ್ ಹಾಗೂ ಅಂಶುಮಾನ್ ಗಾಯಕ್ವಾಡರ  ಜೋಡಿ ಆಟದ ಅಂಗಳಕ್ಕೆ ಇಳಿಯಿತು. ನಾಲ್ಕನೇ ದಿನದ ಕೊನೆಯ ಕೆಲ ಘಂಟೆಗಳು ಹಾಗೂ ಮಾರನೇಯ ಇಡೀ ದಿನವಷ್ಟೇ ಉಳಿದ ಸಮಯ. ಇಂದಿನ ಅಬ್ಬರಿಸಿ ಬೊಬ್ಬೆಯೊಡೆಯುವ ಯುಗದಲ್ಲೂ ಇಂತಹ ಒಂದು ಮೊತ್ತವನ್ನು ಪೇರಿಸಲು ತಿಣುಕಾಡಯುವ ಕಾಲದಲ್ಲಿ ಭಾರತ ಅಂದು ಡ್ರಾ ದೂರದ ಮಾತು, ಪಂದ್ಯವನ್ನು ಗೆದ್ದೇ ತೀರುತ್ತೇನೆಂಬತೆ ಬ್ಯಾಟ್ ಬೀಸಿತು. ಮೊದಲ ಜೋಡಿ 69 ರನ್ ಗಳ ಜೊತೆಯಾಟವನ್ನು ಮಾಡಿತು. ವಿಂಡೀಸ್ ಬೌಲರ್ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಲು ಈ ಜೊತೆಯಾಟ ಮಹತ್ವದಾಗಿದ್ದಿತು. ಅಲ್ಲಿಂದ ಮುಂದೆ ಗವಾಸ್ಕರ್ ಹಾಗೂ ಗುಂಡಪ್ಪ ವಿಶ್ವನಾಥ್ ರ ಶತಕ ಹಾಗೂ ಮಹೇಂದರ್ ಅಮರನಾಥ್ ಹಾಗೂ ಬೃಜೇಶ್ ಪಟೇಲರ ಸಮಯೋಚಿತ ಆಟದ ಮೂಲಕ ಭಾರತ ಆರು ಓವರ್ಗಳು ಬಾಕಿ ಇರುವಂತೆಯೇ ಗೆಲುವನ್ನು ತನ್ನ ಮುಡಿಗೇರಿಸಿಕೊಂಡಿತು. ಈ ಗೆಲುವು ಮುಂದೆ ಭಾರತವನ್ನು ವಿಶ್ವ ಚಾಂಪಿಯನ್ ತಂಡವಾಗಿ ಮಾರ್ಪಡಿಸುವಲ್ಲಿ ಮಹತ್ತರವಾದ ಪಾತ್ರವನು ವಹಿಸಿತು. ವಿಶ್ವವೇ ಭಾರತದ ಈ ಸಾಧನೆಯತ್ತ ಹುಬ್ಬೇರಿಸಿ ನೋಡುವಂತೆ ಮಾಡಿತು. ಏಪ್ರಿಲ್ 12 ರ ಆ ದಿನ ಭಾರತಕ್ಕೆ ಅವಿಸ್ಮರಣೀಯ ದಿನವಾಯಿತು. ಭಾರತದ ಸಾಮರ್ಥ್ಯ ವಿಶ್ವಕ್ರಿಕೆಟ್’ಗೆ ಮನವರಿಕೆಯಾಯಿತು. ಆದರೆ ನಂತರದ ಪಂದ್ಯದ ಸೋಲು ಭಾರತಕ್ಕೆ ಸರಣಿ ಸೋಲಿನ ಆಘಾತವನ್ನು ನೀಡಿತ್ತಾದರೂ ಅಂದಿನ ಕ್ರಿಕೆಟ್ ಪ್ರೇಮಿಗಳಿಗೆ ಈ ಮ್ಯಾಚ್ ಮಾತ್ರ ತಮ್ಮ ಆಲ್ ಟೈಮ್ ಫೆವೋರೇಟ್’ಗಳಲ್ಲಿ ಒಂದಾಯಿತು.

ಇಂದು ಭಾರತ ವಿಶ್ವ ಶ್ರೇಯಾಂಕದಲ್ಲಿ  ಅಗ್ರಸ್ಥಾನದಲ್ಲಿದ್ದರೂ ಪುಟಿದೇಳುವ ವಿದೇಶಿ ಪಿಚ್ಗಳಲ್ಲಿ ಪಳಗಬೇಕಾದ ಅನಿವಾರ್ಯತೆ ವಿಶ್ವ ಶ್ರೇಯಾಂಕದಲ್ಲಿ  ಇನ್ನೂ ಹೆಚ್ಚಿದೆ. ಪ್ರಮುಖವಾಗಿ ಟೆಸ್ಟ್ ಪಂದ್ಯಗಳಲ್ಲಿ. ಅಲ್ಲದೆ ಅಂದಿನ ಘಟಾನುಘಟಿ ದೈತ್ಯ ಆಟಗಾರರ ನಡುವೆ ಸೆಣೆಸಿ ಗಳಿಸಿಕೊಳ್ಳುತ್ತಿದ್ದ ಗೆಲುವು ಇಂದು ಮೀಸೆ ಚಿಗುರುವ ಪೋರರ ಮೇಲೆ ಸ್ಥಾಪಿಸಿದಷ್ಟು ಸುಲಭವಾಗಿರಲಿಲ್ಲ. ಅದೆಷ್ಟೋ ಬಾರಿ ವೆಂಡಿಸ್ ಬೌಲರ್ಗಳ ಕಾಯಕ ಎದುರು ಬದಿಯ ಬ್ಯಾಟ್ಸ್’ಮಾನ್’ಗಳ ಮುಖ ಮೂತಿಯನ್ನೂ ಲೆಕ್ಕಿಸದೆ ಬಾಲನ್ನು ಎಸೆದೇ ಪಂದ್ಯವನ್ನು ಗೆಲ್ಲುವುದಾಗಿದ್ದಿತು. ಅಂತಹ ಕಾಲದಲ್ಲೂ ಸಾವಿರಾರು ಕಿಲೋಮೀಟರ್ ಸಮುದ್ರಮಾರ್ಗವಾಗಿ ಚಲಿಸಿ, ಅಲ್ಲಿನ ವಾತಾವರಣಕ್ಕೆ ಒಗ್ಗಿಕೂಂಡು, ತಮಗೆ ತಾವೇ ಕೋಚ್, ಫಿಸಿಸಿಸ್ಟ್ಗಳಾಗಿ ಪಡೆಯುತ್ತಿದ್ದ ಗೆಲುವು ಮೌಂಟ್ ಎವರೆಸ್ಟ್ ಅನ್ನು ಏರಿ ದಣಿದ ನಗೆಯನ್ನು ಬೀರಿದಂತೆ ಅಮೋಘ, ಅವಿಸ್ಮರಣೀಯ!

ಒಂದು ಕೋನದಲ್ಲಿ ನೋಡಿದರೆ ಈ ಮಟ್ಟಿನ ಸಾಧನೆಗಳು ಅಂದು ಮೂಡಲು ಕಾರಣ ಆಟವನ್ನು ಆಟವಾಗಿಯೇ ಆಡಲಾಗುತ್ತಿದ್ದದ್ದು. ಇಂದು ಆಟವೆಂಬುದು ಭಾರಿ ಪ್ರೊಫೆಷನ್. ಡಯಟ್, ಆವರೇಜ್, ಸ್ಟ್ರೈಕ್ ರೇಟ್, ಸ್ಪೀಡ್ ಎಂಬ ಇಲ್ಲ ಸಲ್ಲದ ಅಂಕಿ ಅಂಶಗಳ ಸುತ್ತ ಸುತ್ತುವ ಆಟಗಾರರು ಹಾಗೂ ಅವರ ಪಂದ್ಯಗಳು ಒಂದು ತರಹ ಪರೀಕ್ಷೆಗಳಿಗೆ ತಲ್ಲಣಗೊಂಡು ತಯಾರಾಗುವ ವಿದ್ಯಾರ್ಥಿಗಳಂತೆ ಆಗಿದೆ. ಇದು ಕ್ರಿಕೆಟ್’ನಷ್ಟೇ ಅಲ್ಲದೆ ಭಾಗಶಃ ಇತರೆ ಎಲ್ಲ ಬಗೆಯ ಆಟೋಟವನ್ನೂ ಆವರಿಸಿದೆ. ಮನೋಲ್ಲಾಸಕ್ಕೆ ಆಡುತ್ತಿದ್ದ ಆಟಗಳಿಂದು ಮನೋಖಿನ್ನತೆಯನ್ನೂ ಮೂಡಿಸುತ್ತಿವೆ. ಉತ್ತರ ಕೊರಿಯದ ದೊರೆ ಕಿಮ್ ಜೊಂಗ್ ಒಲಿಂಪಿಕ್ಸ್ ನಲ್ಲಿ ಪದಕಗಳನ್ನು ತರದಿದ್ದರೆ ಆಟಗಾರನ್ನು ಜೈಲಿಗೆ ತಳ್ಳುವ, ಕಾರ್ಖಾನೆಗಳಲ್ಲಿ ದುಡಿಸುವ ಬೆದರಿಕೆಯನ್ನು ಹಾಕುತ್ತಾನೆ. ಹೀಗೆ ಆಟಗಾರರನ್ನು ಒತ್ತಡದ ಕೂಪದೊಳಗೆ ನೂಕಿ ಗೆದ್ದರೂ ಅದೆಂತಹ ಗೆಲುವು ಸ್ವಾಮಿ? ಸೋಲಲ್ಲೂ ಗೆಲುವನ್ನು ಕಾಣದ ಈ ಪೀಳಿಗೆ ಕೇವಲ ಗೆಲುವನ್ನೇ ಜಪಿಸುತ್ತಾ ಸಾಗುವುದು ನಿಜವಾಗಿಯೂ ಆತಂಕಕರ.

ಇವೆಲ್ಲವುಗಳ ಹಿನ್ನೆಲೆಯಲ್ಲಿ  ತಾಳ್ಮೆ ಎಂಬ ಜೊತೆಗಾರನನ್ನು ಮರೆತೇ ಬಿಟ್ಟಂತೆ ಆಗಿರುವ ಆಟಗಾರರು, ತಂಡಗಳು ಅದೆಂದಿನವರೆಗೆ ಟೆಸ್ಟ್ ಪಂದ್ಯಗಳ ಸೊಗಡನ್ನು ಕಾಪಾಡುತ್ತವೆ ಎಂಬುದನ್ನು ಮಾತ್ರ ಕಾದು ನೋಡಬೇಕು.

Facebook ಕಾಮೆಂಟ್ಸ್

ಲೇಖಕರ ಕುರಿತು

Sujith Kumar

ಹವ್ಯಾಸಿ ಬರಹಗಾರ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!