ಆಕೆ ಅಪ್ರತಿಮ ಕಲಾವಿದೆ. ಕನ್ನಡ ಚಿತ್ರರಂಗ ಕಂಡ ಅದ್ಭುತ ಅಭಿನೇತ್ರಿ. 1960-70 ರ ದಶಕದಲ್ಲಿ ಕನ್ನಡ ಚಿತ್ರರಂಗದ ಅಭಿಮಾನಿಗಳ ಪಾಲಿನ ಕಣ್ಮಣಿ ಅವಳು. ಪ್ರಸಿದ್ಧ ನಿರ್ದೇಶಕ ಪುಟ್ಟಣ್ಣ ಕಣಗಾಲರ ಮುದ್ದಿನ ನಟಿಯಾಗಿದ್ದವಳು, ನಿರ್ದೇಶಕ ಬಿ.ಆರ್. ಪಂತುಲು ಅವರ ಗರಡಿಯಲ್ಲಿ ಪಳಗಿದವಳು, ಸಾಕಷ್ಟು ಸೋಲು, ಅವಮಾನಗಳ ನಂತರವೂ ಕನ್ನಡ ಚಿತ್ರರಂಗದಲ್ಲಿ ಅಪೂರ್ವ ಯಶಸ್ಸನ್ನು ಸಾಧಿಸಿದ ಮೇರು ನಟಿ ಆಕೆ. ಕನ್ನಡ ಚಿತ್ರರಂಗದವರ ಮನದಲ್ಲಿ, ಅಭಿಮಾನಿಗಳ ಮನದಲ್ಲಿ ಮಿನುಗುತಾರೆಯೆಂದೇ ಪ್ರಖ್ಯಾತವಾಗಿ ಕೊನೆಗೆ ದುರಂತ ದಂತಕಥೆಯಾಗಿ ಹೋದ ದುರ್ದೈವಿ ಅವಳು. ಇದೀಗ ನಿಮಗೆ ಗೊತ್ತಾಗಿರಬಹುದು ನಾನು ಯಾರ ಕುರಿತು ಹೇಳುತ್ತಿರುವೆನೆಂದು.. ಯೆಸ್ ಅವಳು ಮತ್ತಾರೂ ಅಲ್ಲ, ಅದೇ ಕಲ್ಪನಾ. ಶರತ್ ಲತಾ ಆಗಿ ಹುಟ್ಟಿ, ಸಿನಿಮಾ ರಂಗದಲ್ಲಿ ಮಿನುಗುತಾರೆ ಕಲ್ಪನಾ ಆಗಿ ಎಲ್ಲರ ಮೆಚ್ಚುಗೆ, ಅಭಿಮಾನವನ್ನು ಗಳಿಸಿದ ಆಕೆ ಇದೀಗ ಕೇವಲ ನೆನಪು ಮಾತ್ರ. ಇದೀಗ ಆ ಮಿನುಗುತಾರೆ ನಮ್ಮಿಂದ ದೂರಾಗಿ, ನಕ್ಷತ್ರ ಲೋಕವನ್ನು ಸೇರಿ 40 ವರ್ಷಗಳೇ ಕಳೆದಿವೆ. ಅವಳ ಸಾವಿನ ಕುರಿತು ಅದೆಷ್ಟೋ ಪತ್ರಿಕೆಗಳು ಬರೆದಿವೆ. ಜನರ ಊಹಾಪೋಹಗಳೆಲ್ಲಾ ಮುಗಿದು ಜನಮಾನಸದಿಂದ ಎಂದೋ ದೂರಾಗಿದ್ದಾಳೆ. ಆದರೂ ಅವಳ ಬಗ್ಗೆ ಈಗೇಕೆ ಬರೆಯುತ್ತಿರಬಹುದು ಎಂದು ನಿಮಗೆ ಅನಿಸುತ್ತಿರಬಹುದು. ಕಾರಣವಿದೆ. ರವಿ ಬೆಳೆಗೆರೆಯವರು ಬರೆದ “ಕಲ್ಪನಾ ವಿಲಾಸ” ಎಂಬ ಕಲ್ಪನಾರ ಕುರಿತಾದ ಪುಸ್ತಕವನ್ನು ಓದಿದ ಮೇಲೆ ಅವಳ ಬಗ್ಗೆ ಬರೆಯದೇ ಇರಲು ಸಾಧ್ಯವಾಗಲೇ ಇಲ್ಲ.. ಒಮ್ಮೆ ಅವಳ ಆ ದುರಂತ ಕಥೆಯನ್ನು ಅದರಲ್ಲಿ ಓದಿದಾಗ ಒಂದು ರೀತಿಯ ವಿಚಿತ್ರ ಸಂಕಟವಾದದ್ದಂತೂ ನಿಜ. ಅದೇಕೋ ಗೊತ್ತಿಲ್ಲ ಆ ಪುಸ್ತಕವನ್ನು ಓದಿದ ಮೇಲೆ ಎಂದೋ ಮರೆತಿದ್ದ ಮಿನುಗುತಾರೆಯ ನೆನಪುಗಳು ಮತ್ತೆ ಮನದಲ್ಲಿ ಹಾದು ಬಂದು ಒಂದು ರೀತಿಯ ವಿಷಾದದ ಛಾಯೆ ಆವರಿಸಿತು. ಮನಸ್ಸು ಅವಳ ಕೊನೆಯ ದಿನಗಳ ಆ ಸಂಕಟವನ್ನು ಕಲ್ಪಿಸಿಕೊಂಡು ಒಳಗೊಳಗೇ ಅತ್ತಿತು. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಷಯವೇನೆಂದರೆ ಕಲ್ಪನಾ ಆತ್ಮಹತ್ಯೆ ಮಾಡಿಕೊಂಡು ಸತ್ತಳು ಎಂಬುದು. ಆದರೆ ಅವಳು ಆತ್ಮಹತ್ಯೆ ಮಾಡಿಕೊಳ್ಳಲು ನಿಜವಾದ ಕಾರಣ ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಅವಳು ಮಿನುಗುತಾರೆಯಾಗಿ ಸಿನಿಮಾದ ಪರದೆಯ ಮೇಲೆ ಮಿನುಗಿದ್ದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಆದರೆ ಆ ಪರದೆಯ ಹಿಂದಿನ ಅವಳ ಸೋಲು, ಅವಮಾನ, ಹತಾಶೆಯ ಭಾವ, ದುರಂತ ಅಧ್ಯಾಯ ಹೆಚ್ಚಿನ ಜನರಿಗೆ ಗೊತ್ತಿರಲಿಕ್ಕಿಲ್ಲ. ಹೌದು ಎಲ್ಲರಿಗೂ ಕಲ್ಪನಾರ ಅಭಿನಯ ಗೊತ್ತು, ಆದರೆ ಕಲ್ಪನಾರ ವ್ಯಕ್ತಿತ್ವದ ಪರಿಚಯ ಅದೆಷ್ಟು ಜನರಿಗೆ ಇತ್ತು..? ಅದೆಲ್ಲಾ ಬಿಡಿ, ಅಂತಹ ಅಪ್ರತಿಮ ಕಲಾವಿದೆ ಅಂತಹ ಘೋರ ಸಾವನ್ನು ಯಾಕೆ ತನಗೆ ತಾನೇ ಆಹ್ವಾನಿಸಿಕೊಂಡು ತನ್ನ ಜೀವನವನ್ನು ಅಂತ್ಯಗೊಳಿಸಿಕೊಂಡಳು ಎಂಬುದು ತಿಳಿಯಬೇಕಾದರೆ, ಆ ಮೇರು ನಟಿಯ ವ್ಯಕ್ತಿತ್ವದ ಪರಿಚಯ ಆಗಲೇಬೇಕು. ಅವಳ ಸುತ್ತಮುತ್ತಲಿನ ಜನ ಅವಳನ್ನು ಯಾವ ರೀತಿ ನಡೆಸಿಕೊಂಡರು ಎಂಬುದನ್ನು ತಿಳಿಯಬೇಕಾಗಿದೆ.. ಹೌದು ಕಲ್ಪನಾರ ಕೊನೆಯ ಕೆಲವು ವರ್ಷಗಳು ಅದೆಷ್ಟು ಯಾತನಾಮಯವಾಗಿತ್ತು, ಅವಳು ಅದೆಷ್ಟು ಸಂಕಟಪಟ್ಟಳು ಎಂಬುದು ತಿಳಿದರೆ, ಒಮ್ಮೆ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದರಲ್ಲಿ ಯಾವ ತಪ್ಪಿಲ್ಲ ಅಂತ ಅನಿಸಿಬಿಡುತ್ತದೆ. ಎಂದೂ ಕಾಣದ ವಿಚಿತ್ರ ಸಂಕಟವೊಂದು ನಮಗೇ ತಿಳಿಯದೇ ಆವರಿಸಿಬಿಡುತ್ತದೆ. ಹಾಗಾದರೆ ಬನ್ನಿ ನೋಡೋಣ ಮಿನುಗುತಾರೆ ಮಂಕಾದ ಬಗೆಯನ್ನು..
ನಾಟಕ ಕಂಪನಿಗಳಲ್ಲಿ ನಾಟ್ಯ ಮಾಡುತ್ತಾ, ಯಾವುದೋ ಚಿಕ್ಕ, ಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ಕಲ್ಪನಾ, ಸಿನಿಮಾ ನಟಿಯಾಗಬೇಕೆಂದು ಮದ್ರಾಸ್ ಗೆ ಕಾಲಿಟ್ಟಾಗ ಆಗಿನ್ನೂ ಹದಿನಾರರ ಎಳೆಯ ಪ್ರಾಯ ಅವಳಿಗೆ. ಆಗ ಅವಳು ಶರತ್‍ಲತಾ ಆಗಿದ್ದಳು. ಆಗೆಲ್ಲಾ ಕನ್ನಡ ಚಿತ್ರವನ್ನು ಮದ್ರಾಸ್ ನಲ್ಲೇ ಚಿತ್ರಿಕರಿಸಬೇಕಿತ್ತು, ಯಾಕೆಂದರೆ ಆಗಿನ್ನೂ ಬೆಂಗಳೂರು ಚಿತ್ರಿಕರಣದ ವಿಷಯದ ತಂತ್ರಜ್ಞಾನದಲ್ಲಿ ಅಷ್ಟೊಂದು ಮುಂದುವರೆದಿರಲಿಲ್ಲ. ಹಾಗೆ ಮದ್ರಾಸ್ ಗೆ ಕಾಲಿಟ್ಟ ಶರತಲತಾ ಮೊದಲು ಭೇಟಿಯಾಗಿದ್ದು ಕನ್ನಡ ಚಿತ್ರರಂಗದ ಹಾಸ್ಯ ನಟ ನರಸಿಂಹ ರಾಜುವನ್ನು. ಯಾವಾಗಲೂ ವಿಲಾಸಿಯಾಗಿ, ಶೋಕಿ ಜೀವನ ನಡೆಸುತ್ತಿದ್ದ ನರಸಿಂಹರಾಜು ತನ್ನ ಮನೆಯಲ್ಲೇ ಅವಳಿಗೆ ಆಶ್ರಯ ಕೊಟ್ಟಿದ್ದ. ಆಶ್ರಯ ಪಡೆದ ತಪ್ಪಿಗೆ, ಕಲ್ಪನಾ ತನ್ನನ್ನು ತಾನೇ ನರಸಿಂಹ ರಾಜುವಿಗೆ ಅರ್ಪಿಸಿಕೊಂಡಿದ್ದಳು. ಆದರೆ ಅದಾಗಲೇ ನರಸಿಂಹ ರಾಜುವಿಗೆ ಮದುವೆಯಾಗಿ ಮಕ್ಕಳೂ ಇದ್ದರು ಆ ವಿಚಾರ ಬೇರೆ. ಇಲ್ಲಿಂದ ಮುಂದೆ ಕಲ್ಪನಾರ ಜೀವನದಲ್ಲಿ ಬಂದವರೆಲ್ಲಾ ವಿವಾಹಿತ ಗಂಡಸರೇ. ಅಫಕೋಸ್ ಕಲ್ಪನಾ ಕೂಡ ವಿವಾಹಿತ ಗಂಡಸರತ್ತಲೇ ಹೆಚ್ಚು ಒಲವು ತೋರಿದಳು. ವಿವಾಹಿತ ಗಂಡಸರ ಎರಡನೇ ಹೆಂಡತಿಯಾಗಿ ತನಗೆ ಸಾಕಷ್ಟು ಭದ್ರತೆ ಸಿಗುತ್ತದೆ, ಸಾಕಷ್ಟು ಹಣವೂ ಸಿಗುತ್ತದೆ, ಜೀವನದಲ್ಲಿ ಹಾಯಾಗಿರಬಹುದು ಎಂದು ಕಲ್ಪನಾ ಅದು ಹೇಗೆ ಭಾವಿಸಿದಳೋ, ಅದೇಕೆ ಭಾವಿಸಿದಳೋ ಗೊತ್ತಿಲ್ಲ.. ಆದರೆ ಇದೇ ಕಲ್ಪನಾರ ಜೀವನ ಹಂತ ಹಂತವಾಗಿ ಅಧಃಪತನವಾಗಲು ಕಾರಣವಾಯಿತು ಎಂಬುದಂತೂ ಸತ್ಯ. ಅದಿರಲಿ ಕಲ್ಪನಾ ನರಸಿಂಹ ರಾಜುವನ್ನೇ ನಂಬಿ ಬಂದಿದ್ದಳು. ಅದಕ್ಕೇ ಅವಳು ತನ್ನನ್ನು ತಾನು ಅರ್ಪಿಸಿಕೊಳ್ಳಬೇಕಾಯಿತು. ಇದಕ್ಕೆ ನರಸಿಂಹರಾಜು ಮಾಡಿದ ಮಹದುಪಕಾರವೆಂದರೆ, ಕಲ್ಪನಾಳನ್ನು ಸಿನಿಮಾ ಇಂಡಸ್ಟ್ರಿಗೆ ಪರಿಚಯಿಸಿದ್ದು. ಆಗಿನ ಪ್ರಸಿದ್ಧ ನಿರ್ದೇಶಕರಾಗಿದ್ದ ಬಿ.ಆರ್.ಪಂತುಲು ಅವರ ಸಹಾಯಕ ನಿರ್ದೇಶಕರಾಗಿದ್ದ ಪುಟ್ಟಣ್ಣ ಕಣಗಾಲ್ ಗೆ ಕಲ್ಪನಾಳನ್ನು ಪರಿಚಯ ಮಾಡಿಕೊಡುತ್ತಾ, “ಇವಳು ನನಗೆ ಗೊತ್ತಿರುವ ಹುಡುಗಿ, ತುಂಬಾ ಚೆನ್ನಾಗಿ ಅಭಿನಯ ಮಾಡ್ತಾಳೆ, ಇವಳಿಗೊಂದು ಅವಕಾಶ ಕೊಡಿ..” ಎಂದು ಹೇಳಿದ್ದ. ಹೀಗೆ ಪುಟ್ಟಣ್ಣ ಕಣಗಾಲ್ ರ ಪ್ರಯತ್ನ ಹಾಗೂ ಎಂ.ವಿ.ರಾಜಮ್ಮನವರ ಬೆಂಬಲದಿಂದಾಗಿ ಪಂತುಲು ತಮ್ಮ “ಸಾಕು ಮಗಳು” ಚಿತ್ರದಲ್ಲಿ ಕಲ್ಪನಾಳಿಗೆ ಮೊಟ್ಟ ಮೊದಲ ಬಾರಿಗೆ ಪ್ರಧಾನ ಪಾತ್ರವನ್ನೇ ಕೊಟ್ಟರು. ಆದರೆ ಒಂದೇ ಮಾತಿನಲ್ಲಿ ಕಲ್ಪನಾಳ ಧ್ವನಿಯನ್ನು ತಿರಸ್ಕರಿಸಿ, “ಈ ಹುಡುಗಿಯ ಕಂಠ ಸರಿಯಿಲ್ಲ, ಕೀರಲಾಗಿದೆ. ಧ್ವನಿಯನ್ನು ಬೇರೆಯವರಿಂದ ಡಬ್ ಮಾಡಿಸಿ” ಎಂದು ಬಿಟ್ಟರು. ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ, ಅಚ್ಚ ಕನ್ನಡತಿಯಾಗಿದ್ದ ಕಲ್ಪನಾಳಿಗೆ ಪ್ರಧಾನ ಪಾತ್ರ ಕೊಟ್ಟೂ, ಧ್ವನಿಯನ್ನು ಬೇರೆಯವರಿಂದ ಡಬ್ ಮಾಡಿಸಿದ ಮೊದಲ ನಿರ್ದೇಶಕ ಪಂತುಲು. ಅಚ್ಚ ಕನ್ನಡತಿಯಾಗಿದ್ದೂ ಬೇರೆಯವರಿಂದ ಧ್ವನಿಯನ್ನು ಡಬ್ ಮಾಡಿಸಿಕೊಂಡ ದುರದೃಷ್ಟವಂತೆ ಕಲ್ಪನಾ. ಆದರೆ ಕಲ್ಪನಾ ಈ ಘಟನೆಯನ್ನು ಅದೆಷ್ಟು ಧನಾತ್ಮಕವಾಗಿ ತೆಗೆದುಕೊಂಡಳೆಂದರೆ, ಯಾವ ತನ್ನ ಧ್ವನಿಯನ್ನು ಕೀರಲು ಎಂದು ತಿರಸ್ಕರಿಸಿದ್ದರೋ, ಅದೇ ಧ್ವನಿಯಿಂದ ತನ್ನ ಅದ್ಭುತ ಅಭಿನಯದಿಂದ ಪ್ರೇಕ್ಷರು ಹುಚ್ಚೆದ್ದು ಕುಣಿವಂತೆ ಪರಿವರ್ತಿಸಿಕೊಂಡಳು.
ಅದೆಲ್ಲಾ ಮುಂದಿನ ಕಥೆ.. ಅದಿರಲಿ ಸಿನಿಮಾ ಕ್ಷೇತ್ರಕ್ಕೆ ಕಾಲಿಡುತ್ತಿದ್ದಂತೆ ಶರತಲತಾ ಆಗಿದ್ದವಳು ಕಲ್ಪನಾ ಆದಳು. ಆದರೆ ಮಿನುಗು ತಾರೆ ಆಗಿನ್ನೂ ಆಗಿರಲಿಲ್ಲ. ಮೊದಲ ಚಿತ್ರ “ಸಾಕು ಮಗಳು” ಪ್ರೇಕ್ಷಕರ ಗಮನವೇನೋ ಸೆಳೆಯಿತು. ಮೊದಲ ಚಿತ್ರದಲ್ಲೇ ನಾಯಕಿಯಾಗಿ ಕಲ್ಪನಾ ಗುರುತಿಸಿಕೊಂಡಳು. ಮುಂದಿನದ್ದೆಲ್ಲಾ ಶರವೇಗದಲ್ಲಿ ಆಗುತ್ತದೆ, ಕಲ್ಪನಾಳ ಯಶಸ್ಸಿಗೆ ಇನ್ನು ಅಡೆತಡೆಯಿಲ್ಲ ಎಂದು ಅಂದುಕೊಂಡವರಿದ್ದರು. ಆದರೆ ಆದದ್ದೇ ಬೇರೆ. ಎರಡನೇ ಚಿತ್ರ “ಚಿನ್ನದ ಗೊಂಬೆ” ಯಲ್ಲಿ ನಟಿಸುವ ಅವಕಾಶವೇನೋ ಸಿಕ್ಕಿತು. ಆದರೆ ಅದು ಪೋಷಕ ಪಾತ್ರದಲ್ಲಿ. ಮೊದಲ ಚಿತ್ರದಲ್ಲೇ ನಾಯಕ ನಟಿಯಾಗಿ ಗುರುತಿಸಿಕೊಂಡವಳು, ಎರಡನೇ ಚಿತ್ರದಲ್ಲಿ ಪೋಷಕ ಪಾತ್ರಕ್ಕೇ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂತು. ಮೊದಲ ಚಿತ್ರದಲ್ಲಿ ಕಲ್ಪನಾಳ ಕಂಠ ಸರಿಯಿಲ್ಲ ಎಂದ ಪಂತುಲು, ಎರಡನೇ ಚಿತ್ರದ ಹೊತ್ತಿಗೆ ಇವಳು ನಾಯಕಿಯೇ ಅಲ್ಲ ಎಂದು ಬಿಟ್ಟರು. ಆ ಸಮಯದಲ್ಲಿ ಕಲ್ಪನಾಳ ಕಣ್ಣೀರು ಯಾರಿಗೂ ಕಾಣಲೇ ಇಲ್ಲ. ಅವಳ ಯಶಸ್ಸಿನ ಏಣಿ ನಡುಗಿತು. ಆ ಸಮಯದಲ್ಲಿ ಕಲ್ಪನಾಳ ಕೈ ಹಿಡಿದು ಸಂತೈಸುವ ಮತ್ತೊಂದು ಕೈ ಇರಲೇ ಇಲ್ಲ. ಅವಳ ಹತಾಶೆಯ ಭಾವಕ್ಕೆ ಆಶಾವಾದವನ್ನು ತುಂಬಿ ಮುನ್ನಡೆಸಬಲ್ಲ ಆತ್ಮೀಯರಾರೂ ಕಲ್ಪನಾಳ ಜೊತೆಯಿರಲಿಲ್ಲ. ಹೀಗೆ ಆರಂಭದಲ್ಲೇ ಕನ್ನಡ ಚಿತ್ರರಂಗ ಕಲ್ಪನಾರನ್ನು ಸಾಕಷ್ಟು ಡಿಫೀಟ್ ಮಾಡಿತು. ಇಷ್ಟೆಲ್ಲಾ ನಡೆಯುವ ಹೊತ್ತಿಗೆ ಪಂತುಲು ಅವರೊಂದಿಗಿನ ಕಲ್ಪನಾಳ ಕಾಂಟ್ರಾಕ್ಟು ಮುಗಿಯುತ್ತಾ ಬಂದಿತ್ತು. ಈಗಾಗಲೇ ಅವರಿಂದ ಸಾಕಷ್ಟು ಅವಮಾನ, ನೋವು ಅನುಭವಿಸಿದ್ದ ಕಲ್ಪನಾ, ಮತ್ತೆ ಅವರೊಂದಿಗೆ ಕಾಂಟ್ರಾಕ್ಟು ಮುಂದುವರಿಸುವ ಮನಸ್ಥಿತಿಯಲ್ಲಿರಲಿಲ್ಲ. ಹಾಗೇನಾದರೂ ಮುಂದುವರೆಸಿದ್ದರೆ, ಕನ್ನಡ ಚಿತ್ರರಂಗ ಮಿನುಗುತಾರೆ ಕಲ್ಪನಾಳನ್ನು ನೋಡುತ್ತಿರಲಿಲ್ಲ. ಕಲ್ಪನಾ ಪಂತುಲು ಅವರ ಹಂಗಿನಿಂದ ಹೊರಬಂದ ಮೇಲೆ, ಒಪ್ಪತ್ತಿನ ಊಟಕ್ಕೂ ಗತಿಯಿಲ್ಲದಂತಾಯಿತು. ಬಹುಶಃ 18ಈ ದಿನಗಳಲ್ಲೇ ಕಲ್ಪನಾ ಹಸಿವಿಗೆ ಸೋತು ಹಾದಿ ತಪ್ಪಿದ್ದು. ತಮಿಳು ಪತ್ರಿಕೆಗಳು ಅವಳನ್ನು ವೇಶ್ಯೆ ಎಂದು ಬರೆದದ್ದು. ಇಷ್ಟೆಲ್ಲಾ ಆದಾಗ ಕಲ್ಪನಾಳಿಗೆ ಒಂದು ಆಶೆಯ ಕಿರಣವಾಗಿ ಗೋಚರಿಸಿದ್ದು, ಪುಟ್ಟಣ್ಣ ಕಣಗಾಲ್. ಔಟಿಛಿe ಚಿgಚಿiಟಿ ಮತ್ತೊಬ್ಬ ವಿವಾಹಿತ. “ನಿನ್ನನ್ನು ಲೋಕವೇ ಕೊಂಡಾಡುವಂತ ದೊಡ್ಡ ತಾರೆಯನ್ನಾಗಿ ಮಾಡುವೆ” ಎಂದು ಅದೇ ಪುಟ್ಟಣ್ಣ ಕಣಗಾಲ್ ಕಲ್ಪನಾಳಿಗೆ ಭರವಸೆಯಿತ್ತಿದ್ದರು. ಪಂತುಲು ಗರಡಿಯಿಂದ ಹೊರಬಿದ್ದ ಕಲ್ಪನಾ ಪುಟ್ಟಣ್ಣ ಕಣಗಾಲ್ ಜೊತೆ ಪ್ರೇಮ್ ಕಹಾನಿಯಲ್ಲಿ ತೊಡಗಿಬಿಟ್ಟಿದ್ದಳು. ಅವಳು ಹತಾಶೆಯಲ್ಲಿ ತೊಳಲಾಡುತ್ತಿದ್ದ ಸಂದರ್ಭದಲ್ಲಿ, ಇದೇ ಪುಟ್ಟಣ್ಣ ಕಣಗಾಲ್ ಭರವಸೆಯ ನೆರಳಾಗಿ ಬಂದಿದ್ದರು. ಔಜಿ ಛಿouಡಿse ಕಲ್ಪನಾ ಸಹಜವಾಗಿ ಅವರತ್ತ ಆಕರ್ಷಿತಳಾಗಿದ್ದಳು. ಅದರಲ್ಲೂ ಪುಟ್ಟಣ್ಣ ಕಣಗಾಲ್ ರವರೇ ಸ್ವತಂತ್ರವಾಗಿ ನಿರ್ದೇಶಿಸುತ್ತಿದ್ದ “ಬೆಳ್ಳಿಮೋಡ” ಚಿತ್ರದಲ್ಲಿ ಕಲ್ಪನಾಳಿಗೇ ಪ್ರಧಾನ ಪಾತ್ರ ಕೊಟ್ಟ ಮೇಲಂತೂ ಕೇಳಲೇ ಬೇಡಿ. ನಿಜ ವಿಷಯವೇನೆಂದರೆ, ಬೆಳ್ಳಿ ಮೋಡ ಚಿತ್ರಿಕರಿಸುವಾಗ ಪುಟ್ಟಣ್ಣ ಕಣಗಾಲ್ ರ ಮನದಲ್ಲಿದ್ದದ್ದು ಜಯಂತಿ ಆಗಿತ್ತಂತೆ, ಆದರೆ ಕಲ್ಪನಾಳಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಕಲ್ಪನಾಳನ್ನು ನಾಯಕ ನಟಿಯನ್ನಾಗಿ ಮಾಡಿದರು. ಇದೀಗ ಮಿನುಗು ತಾರೆ ಅಕ್ಷರಶಃ ಮಿನುಗತೊಡಗಿದ್ದಳು..
ಆದರೆ ಇದೆಲ್ಲಕ್ಕಿಂತ ಮುಂಚೆ ಮತ್ತೊಂದು ಘಟನೆ ನಡೆದಿತ್ತು. ಆ ಸಂದರ್ಭದಲ್ಲಿ ಕಲ್ಪನಾ ಏನಾದರೂ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದರೆ, ಅವಳ ಜೀವನದ ಗತಿಯೇ ಬದಲಾಗುತ್ತಿತ್ತೇನೋ..? ಮಿನುಗು ತಾರೆ ಇಂದಿಗೂ ನಮ್ಮ ಮುಂದೆ ಮಿನುಗುತ್ತಿರುತ್ತಿದ್ದಳು. ಆದರೆ ವಿಧಿಯ ನಿಯಮವೇ ಬೇರೆ ಇತ್ತು. ಕಲ್ಪನಾರ ದುರಂತ ಸಾವಿಗೆ ಆ ವಿಧಿ ತಾನು ಸಾಕ್ಷಿಯಾಗಬೆಕೆಂದುಕೊಂಡಿತ್ತೋ ಏನೋ..? ಒಟ್ಟಿನಲ್ಲಿ ಕಲ್ಪನಾ ಬಲಿಪಶುವಾದಳು. ಹೌದು ‘ನಿನ್ನನ್ನು ಎಲ್ಲರೂ ನಿಬ್ಬೆರಗಾಗುವ ದೊಡ್ಡ ನಟಿಯಾಗಿ ಮಾಡುತ್ತೇನೆಂದು ಮಾತು ಕೊಟ್ಟಿದ್ದ ಪುಟ್ಟಣ್ಣ ಕಣಗಾಲ್ ಅಂದಿನ ಪ್ರತಿಭಾವಂತ ನಿರ್ದೆಶಕ ಎಸ್.ಲಕ್ಷ್ಮೀನಾರಾಯಣ್ ಅವರಿಗೆ ಕಲ್ಪನಾರನ್ನು ಪರಿಚಯಿಸಿದ್ದರು. ಅದೇ ಸಂದರ್ಭದಲ್ಲಿ ಲಕ್ಷ್ಮೀನಾರಾಯಣ್ ಕನ್ನಡಿಗರು ಎಂದೂ ಮರೆಯಲಾಗದಂತಹ “ನಾಂದಿ” ಚಿತ್ರವೊಂದನ್ನು ತಯಾರಿಸಲು ಸಿದ್ಧವಾಗಿದ್ದರು. ಅದರಲ್ಲಿ ನಿರ್ಮಲಾ ಪಾತ್ರಕ್ಕೆ ಸರಿಹೊಂದುವ ನಟಿಯನ್ನು ಹುಡುಕಿದ್ದರು. ಆಗಲೇ ಪುಟ್ಟಣ್ಣ ಕಣಗಾಲ್ ಕಲ್ಪನಾಳನ್ನು ಅವರಿಗೆ ಪರಿಚಯಿಸಿದ್ದರು. ಆ ಪಾತ್ರ ಚಿಕ್ಕದೇ ಆದರೂ ಅದಕ್ಕೊಂದು ಸ್ವತಂತ್ರ ವ್ಯಕ್ತಿತ್ವವಿತ್ತು. ಈ ಪಾತ್ರದಲ್ಲಿ ಕಲ್ಪನಾ ಅದೆಷ್ಟು ಚೆನ್ನಾಗಿ ಅಭಿನಯಿಸಿದಳೆಂದರೆ, ಆ ಪಾತ್ರ ಅವಳಿಗೆ ‘ಉತ್ತಮ ಪೋಷಕ ನಟಿ’ ಪ್ರಶಸ್ತಿಯನ್ನು ತಂದು ಕೊಟ್ಟಿತು. ಮಾತ್ರವಲ್ಲ, ಕಲ್ಪನಾಳಲ್ಲಿ ಒಬ್ಬ ಶಕ್ತ ಕಲಾವಿದೆ ಇದ್ದಾಳೆಂಬುದನ್ನು ಸಿನಿ ಪ್ರಿಯರಿಗೆ ಮನದm್ಟು ಮಾಡಿಕೊಟ್ಟಿತ್ತು. ಈ ನಡುವೆ ಕಲ್ಪನಾಳ ಸೌಂದರ್ಯ, ಸ್ವಭಾವ, ಅವಳ ಅಭಿರುಚಿ ಎಲ್ಲವೂ ನಿರ್ದೆಶಕ ಲಕ್ಷ್ಮೀನಾರಾಯಣರನ್ನು ಆಕರ್ಷಿಸಿಬಿಟ್ಟಿತ್ತು. ಅವರು ಕಲ್ಪನಾಳನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ತಂದೆ ತಾಯಿಯರಿಗೆ ‘ಭಾವೀ ಸೊಸೆ’ ಎಂಬಂತೆ ಪರಿಚಯ ಕೂಡ ಮಾಡಿಸಿ ಕೊಟ್ಟಿದ್ದರು. ಕಲ್ಪನಾ ಎಡವಿದ್ದು ಇಲ್ಲೇ. ಆಗೇನಾದರೂ ಕಲ್ಪನಾ ಅವರ ಪ್ರೀತಿಯನ್ನು ಒಪ್ಪಿಕೊಂಡು ಮದುವೆಯಾಗಿಬಿಟ್ಟಿದ್ದರೆ, ಕನ್ನಡ ಚಿತ್ರರಂಗ ಅದೆಷ್ಟು ಅದ್ಭುತ ಚಿತ್ರಗಳನ್ನು ನೋಡುತ್ತಿತ್ತೋ..? ಎಲ್ಲಕ್ಕಿಂತ ಮುಖ್ಯವಾಗಿ ಕಲ್ಪನಾ ಮಿನಿಗು ತಾರೆಯಾಗಿ ಇಂದು ನಮ್ಮ ಮುಂದೆ ಬದುಕಿರುತ್ತಿದ್ದಳೋ ಏನೋ..? ಆದರೆ ಕಲ್ಪನಾ ಅವರ ಪ್ರೀತಿಯನ್ನು ಸಾರಾಸಗಟಾಗಿ ತಿರಸ್ಕರಿಸಿಬಿಟ್ಟಿದ್ದಳು. ಹಾಗಾದರೆ ಈ ಸಂದರ್ಭದಲ್ಲಿ ಕಲ್ಪನಾಳ ಮನದಲ್ಲಿ ಪುಟ್ಟಣ್ಣ ಕಣಗಾಲ್ ಇದ್ದರೆಂದು ನೀವು ಭಾವಿಸಿದರೆ ಅದು ತಪ್ಪು. ಅದಾಗಲೇ ಚಿತ್ರ ನಿರ್ಮಾಪಕ ಆಂದ್ರದ ರೆಡ್ಡಿ ಅವಳ ಜೀವನದಲ್ಲಿ ಪ್ರವೇಶಿಸಿ ಬಿಟ್ಟಿದ್ದ. ಶುದ್ಧ ಹೆಣ್ಣು ತೆವಲಿನ ಮನುಷ್ಯ ಆ ವೆಂಕರಮಣ ರೆಡ್ಡಿ. ಅದಕ್ಕಾಗೇ ಸಿನಿಮಾಗಳ ನಿರ್ಮಾಣಕ್ಕಾಗಿ ಕೈ ಹಾಕುತ್ತಿದ್ದವನು. ಮೇಲಾಗಿ ವಿವಾಹಿತ ಬೇರೆ. ಇಷ್ಟೆಲ್ಲಾ ಇದ್ದು ಅಂತಹ ಸಭ್ಯ ಮನುಷ್ಯ ಲಕ್ಷ್ಮೀನಾರಾಯಣರನ್ನು ಬಿಟ್ಟು, ಈ ರೆಡ್ಡಿ ಎಂಬ ಮನೆಹಾಳು ಮನುಷ್ಯನ ಸಂಗವನ್ನೇಕೆ ಮಾಡಿದಳೋ ಕಲ್ಪನಾ..? ಇದಕ್ಕೆ ಉತ್ತರಿಸಲು ಕಲ್ಪನಾ ಇಂದು ಬದುಕಿಲ್ಲ. ಆದರೆ ರೆಡ್ಡಿಯ ಜೊತೆಯ ಸ್ನೇಹವೂ ಬಹಳ ಕಾಲ ಮುಂದುವರೆಯಲಿಲ್ಲ. ಒಂದು ಹಂತದಲ್ಲಿ ಅದೂ ಕೂಡ ಮುರಿದು ಬಿತ್ತು. ಹೇಳಿ ಕೇಳಿ ಹೆಣ್ಣು ತೆವಲಿನ ಮನುಷ್ಯ ಆತ. ಕಲ್ಪನಾಳ ಆಯ್ಕೆ ಮತ್ತೆ ತಪ್ಪಾಗಿತ್ತು.
ಕಲ್ಪನಾಳ ನಿಜವಾದ ಯಶಸ್ಸಿನ ಪಯಣ ಶುರುವಾಗಿದ್ದು, “ಮಂತ್ರಾಲಯದ ಮಹಾತ್ಮೆ” ಸಿನಿಮಾದ ನಂತರ. ಈ ಚಿತ್ರ ರಾಜ್ ಕುಮಾರ್ ರ ಜೀವನ ಶೈಲಿಯನ್ನೇ ಬದಲಾಯಿಸಿತು. ಅಷ್ಟೇ ಅಲ್ಲ ಕಲ್ಪನಾಳಿಗೂ ಹಲವಾರು ಅವಕಾಶಗಳು ಹುಡುಕಿಕೊಂಡು ಬಂದವು. ಒಂದಾದ ಮೇಲೊಂದರಂತೆ ಕಾಂಟ್ರಾಕ್ಟುಗಳು ಸಹಿಯಾದವು. ನೋಡನೋಡುತ್ತಿದ್ದಂತೆ ಕಲ್ಪನಾ ಮಿನುಗುತಾರೆಯೇ ಆಗಿಬಿಟ್ಟಳು ಜನಮಾನಸದಲ್ಲಿ. ಕಲ್ಪನಾಳ ಮೇಲಿದ್ದ ಬಡತನದ ನೆರಳೂ ದೂರಾಯಿತು. ಇದರೊಂದಿಗೆ ಕಲ್ಪನಾಳಲ್ಲಿ ಅಹಂಕಾರದ ಛಾಯೆಯೂ ಮೂಡತೊಡಗಿತು. ಆಮೇಲೆ ನಡೆದದ್ದೆಲ್ಲಾ ಇತಿಹಾಸ. ಕಲ್ಪನಾ ಮತ್ತು ಪುಟ್ಟಣ್ಣ ಕಣಗಾಲ್ ಕನ್ನಡ ಚಿತ್ರರಂಗದಲ್ಲಿ ಒಂದು ಕ್ರಾಂತಿಯನ್ನೇ ಮಾಡಿಬಿಟ್ಟರು. ಮೊದಲೆಲ್ಲವೂ ಚೆನ್ನಾಗೇ ಇತ್ತು. ಪುಟ್ಟಣ್ಣ ಕಣಗಾಲ್ ರೊಂದಿಗೆ ಕಲ್ಪನಾಳ ಪ್ರೀತಿ ಪರಾಕಾಷ್ಠೆಯನ್ನು ತಲುಪಿತ್ತು. ಇದೆಲ್ಲಾ “ಆರತಿ” ಎಂಬ ಮೊದಲ ಮಿಂಚು ಸೋಕುವ ತನಕ ಮಾತ್ರ. ಹೌದು ಕಲ್ಪನಾಳನ್ನು ಹಾಕಿಕೊಂಡು ಪುಟ್ಟಣ್ಣ ಕಣಗಾಲ್ ಮಾಡಿದ ಹಲವು ಚಿತ್ರಗಳು ಯಶಸ್ಸನ್ನು ಕಂಡವು, ಮಾತ್ರವಲ್ಲ ಕಲ್ಪನಾ ಮಹಾನ್ ತಾರೆಯಾಗಿ ಹೆಸರನ್ನೂ ಮಾಡಿದಳು. ಕಲ್ಪನಾಳಿಗೆ ಪುಟ್ಟಣ್ಣ ಕಣಗಾಲ್ ರನ್ನು ಮದುವೆಯಾಗುವ ಇರಾದೆ ಇತ್ತು, ಅವರು ವಿವಾಹಿತರೆಂದು ತಿಳಿದೂ ಸಹ. ಅವಳೇ ಅವರನ್ನು ಕೇಳಿದ್ದಳು ಬಹಳ ಆಸೆಯಿಂದ ಒಮ್ಮೆ, “ಪುಟ್ಟಣ್ಣ ಜೀ ನಂಗೆ ವೈವಾಹಿಕ ಬದುಕು ಕೊಡ್ತೀರಾ?” ಅಂತ. ಆದರೆ ಅಷ್ಟರಲ್ಲಾಗಲೇ ಪುಟ್ಟಣ್ಣ ಕಣಗಾಲ್ ರ ವೈವಾಹಿಕ ಜೀವನದಲ್ಲಿ ಕೋಲಾಹಲ ಪ್ರಾರಂಭವಾಗಿಬಿಟ್ಟಿತ್ತು. ಅವರಿಗೆ ಕಲ್ಪನಾಳ ಮೇಲೆ ಮೊದಲಿದ್ದ ಆಸಕ್ತಿಯೂ ಇರಲಿಲ್ಲ. ಎಲ್ಲಿ ತನ್ನ ವೈವಾಹಿಕ ಸಂಬಂಧ ಮುರಿದು ಬಿದ್ದು, ಇವಳೆಲ್ಲಿ ತನಗೇ ಕಚ್ಚಿಕೊಂಡು ಬಿಡುತ್ತಾಳೋ ಎಂದೋ, ಅಥವಾ ಅದಾಗಲೇ ಚಿತ್ರರಂಗ ಪ್ರವೇಶಿಸಿದ ಆರತಿಯ ಮೇಲಿನ ವ್ಯಾಮೋಹದಿಂದಲೋ ಏನೋ, ಪುಟ್ಟಣ್ಣ ಕಣಗಾಲ್ ಕಲ್ಪನಾಳನ್ನು ಮದುವೆಯಾಗಲು ಒಪ್ಪಲಿಲ್ಲ. ಅಷ್ಟೇ ಅಲ್ಲ, ಪುಟ್ಟಣ್ಣ ಕಣಗಾಲ್ ರ ಪತ್ನಿ ಕಲ್ಪನಾಳ ವಿಷಯದಿಂದ ಬೇಸತ್ತು ಆತ್ಮಹತ್ಯೆಗೂ ಯತ್ನಿಸಿದ್ದಳು ಒಮ್ಮೆ. ಇವೆಲ್ಲಾ ಕಾರಣಗಳು, ಕಲ್ಪನಾ ಮತ್ತೆ ನಿರಾಶೆಯಾಗುವಂತೆ, ಮತ್ತೆ ಒಬ್ಬಂಟಿಯಾಗುವಂತೆ ಮಾಡಿತು. ಆದರೂ ಪುಟ್ಟಣ್ಣ ಕಣಗಾಲ್ ಹಾಗೂ ಕಲ್ಪನಾಳ ಮನದಲ್ಲಿ ಪ್ರೀತಿ ಹಾಗೇ ಇತ್ತು, ಪುಟ್ಟಣ್ಣ ಕಣಗಾಲ್ ಆರತಿಯ ಜ್ವಾಲೆಗೆ ಸಂಪೂರ್ಣ ಕರಗುವ ತನಕ, ಕಲ್ಪನಾ ಮತ್ತೊಬ್ಬ ವಿವಾಹಿತ ಬಿ.ಎಸ್.ವಿಶ್ವನಾಥ್ ಗೆ ಮರುಳಾಗುವ ತನಕ. ಬಿ.ಎಸ್.ವಿಶ್ವನಾಥ್ ನಟನಲ್ಲ, ಸಾಹಿತಿಯಲ್ಲ, ರಾಜಕಾರಣಿಯಲ್ಲ. ಇದೆಲ್ಲವನ್ನೂ ಬುಡದಿಂದಲೇ ಚೆನ್ನಾಗಿ ಬಲ್ಲವನು, ಎಲ್ಲರಿಗೂ ಬೇಕಾದ ವ್ಯಕ್ತಿ. ಸ್ಪುರದ್ರೂಪಿ. ಆತ ಒಬ್ಬ ವಿವಾಹಿತ, ಮಕ್ಕಳೂ ಇದ್ದರೂ, ಜೊತೆಗೆ ಹೆಣ್ಣಿನ ಬಲಹೀನತೆಯೂ ಇತ್ತು.. ಈ ಎಲ್ಲಾ ಬಲಹೀನತೆಗಳನ್ನು ತಿಳಿದೂ ಕಲ್ಪನಾ ಅದು ಹೇಗೆ ಕಲ್ಪನಾ ವಿಶ್ವನಾಥರಿಗೆ ಮರುಳಾದಳೋ..? ದಾರಿ ತಪ್ಪಿ ಅವನ ತೋಳ ತೆಕ್ಕೆಯಲ್ಲಿ ಬಂಧಿಯಾದಳೋ ದೇವರೇ ಬಲ್ಲ.. ನರಸಿಂಹ ರಾಜು, ಪುಟ್ಟಣ್ಣ ಕಣಗಾಲ್, ವೆಂಕಟರಮಣ ರೆಡ್ಡಿ ಹೀಗೆ ಹಲವು ವಿವಾಹಿತ ಗಂಡಸರಿಂದ ಮೋಸ ಹೋದರೂ ಕಲ್ಪನಾ ಮತ್ತೆ ದಾರಿ ತಪ್ಪಿದ್ದಳು. ಕಲ್ಪನಾ ವಿಶ್ವನಾಥರನ್ನು ಗಾಂಧರ್ವ ರೀತಿಯಲ್ಲಿ ವಿವಾಹವಾಗಿದ್ದಳು ಎಂದು ಅವಳ ಆಪ್ತ ಸಹಾಯಕಿ ಚಿನ್ನಮ್ಮ ಸಾಕ್ಷಿ ಹೇಳುತ್ತಾಳೆ. ಅದು ಎಷ್ಟು ನಿಜವೋ ಯಾರಿಗೂ ತಿಳಿದಿಲ್ಲ. ಒಟ್ಟಿನಲ್ಲಿ ವಿಶ್ವನಾಥರೊಂದಿಗಿನ ಸ್ನೇಹವೂ ಬಹಳ ಕಾಲ ಉಳಿಯಲಿಲ್ಲ ಎಂಬುದಂತೂ ನಿಜ.
ಕಲ್ಪನಾಳ ಸ್ವಭಾವವೇ ವಿಚಿತ್ರ.. ಅವಳು ಅತಿಯಾದ ಭಾವುಕ ಜೀವಿಯಾಗಿದ್ದಳು. ಇದೀಗ ಕೋಪದಿಂದ ಕಿರುಚಾಡಿದರೂ, ಕೈಗೆ ಸಿಕ್ಕದ್ದನ್ನು ತೆಗೆದು ಹೊಡೆದರೂ, ಮರುಕ್ಷಣ ಪ್ರೇಮ, ವಾತ್ಸಲ್ಯವೇ ತುಂಬಿದ ಪ್ರೇಮಮಯಿಯಾಗುತ್ತಿದ್ದಳು. ಒಮ್ಮೊಮ್ಮೆ ತನಗೆ ಯಾವುದೂ ಬೇಡ ಎಂದು ಕಾವಿ ಬಟ್ಟೆ ತೊಟ್ಟು ಸರ್ವ ಸಂಗ ಪರಿತ್ಯಾಗಿಯಾಗಿ ಕುಳಿತು ಬಿಡುತ್ತಿದ್ದಳು. ಹಾಗಾದರೆ ಕಲ್ಪನಾ ಮಾನಸಿಕ ರೋಗಿಯಾಗಿದ್ದಳೇ..? ಹೌದು ಕಲ್ಪನಾ ಬಹು ವ್ಯಕ್ತಿತ್ವ ಅಸಮಾನತೆಯಿಂದ ನರಳುತ್ತಿದ್ದಳು. ಇದೆಲ್ಲಕ್ಕಿಂತ ಹೆಚ್ಚಾಗಿ ಕಲ್ಪನಾ “ನಿಂಪೋಮೇನಿಯಕ್” ಆಗಿದ್ದಳು. ಕಲ್ಪನಾ ಒಬ್ಬಳು ಚಿರವಿರಹಿ, ಅವಳಲ್ಲೊಬ್ಬ ಅತೃಪ್ತ ಕಾಮಿ ಇದ್ದಳು. ಅದೇನೇ ಇದ್ದರೂ ಕಲ್ಪನಾ ಉತ್ತಮ ಅಭಿನೇತ್ರಿಯಾಗಿದ್ದಳು, ಸಿನಿ ಪ್ರೀಯರ ಮಿನುಗು ತಾರೆಯಾಗಿದ್ದಳು. ಅವಳೆಷ್ಟೇ ಧನದಾಹಿಯಾಗಿದ್ದರೂ, ಅತೀ ಭಾವುಕತೆ ತೋರಿದರೂ ಅವಳು ಬಯಸಿದ್ದು ಹಿಡಿ ಪ್ರೀತಿಯನ್ನು.. ತನಗೂ ಒಂದು ಸ್ವಂತ ಕುಟುಂಬ ಬೇಕು, ಮಕ್ಕಳಿರಬೇಕು ಎಂದು ಬಯಸಿದವಳು ಕಲ್ಪನಾ. ಆದರೆ ಜೀವನದ ದಾರಿಯುದ್ದಕ್ಕೂ ಕಲ್ಪನಾಳನ್ನು ಹರಿದು ತಿನ್ನುವವರೇ ಸಿಕ್ಕರು. ಅವಳ ಹತಾಶೆ, ನೋವು, ಅವಮಾನಗಳೇ ಅವಳನ್ನು ಮಾನಸಿಕವಾಗಿ ಜರ್ಜರಿತವಾಗುವಂತೆ ಮಾಡಿತು. ಬರುಬರುತ್ತಾ ಕಲ್ಪನಾಳ ಅತಿಯಾದ ಭಾವುಕತೆ, ಅವಳ ಅಹಂಕಾರದ ಸ್ವಭಾವವೇ ಅವಳಿಗೆ ಉರುಳಾಯಿತು. ಅದರಲ್ಲೂ ಆರತಿ ಬಂದ ಮೇಲಂತೂ ಕಲ್ಪನಾಳನ್ನು ಕೇಳುವವರೇ ಇಲ್ಲದಂತಾಯಿತು. ಕನ್ನಡ ಚಿತ್ರರಂಗ ಕಲ್ಪನಾಳನ್ನು ಕೈ ಬಿಟ್ಟಿತು. ಮಿನುಗುತಾರೆ ಮಂಕಾಗತೊಡಗಿತು. ಇದೀಗ ಕಲ್ಪನಾಳಿಗೆ ಸಹಾಯ ಹಸ್ತ ಚಾಚುವವರಾರೂ ಇರಲಿಲ್ಲ. ಕಲ್ಪನಾಳ ತಾಯಿ, ಅವಳ ಲೋಕವೇ ಬೇರೆ. ಇನ್ನು ಅವಳ ಚಿಕ್ಕಮ್ಮ ಹಾಗೂ ತಮ್ಮ ಇಬ್ಬರೂ ಅವಳ ಹಣಕ್ಕಾಗಿ ಬಾಯಿಬಿಟ್ಟುಕೊಂಡು ಕುಳಿತವರು. ಸುಖವಿದ್ದಾಗ ಅವಳಿಗೆ ಸಾಥ್ ನೀಡಿದರೂ, ಸೋತಾಗ ಸಾಂತ್ವನದ ಮಾತನ್ನೂ ಅವರು ಹೇಳಲಿಲ್ಲ. ಅವಳ ತಮ್ಮನೋ, ದೊಡ್ಡ ಕುಡುಕನಾಗಿದ್ದ. ಅವನನ್ನು ದೊಡ್ಡ ಕ್ಯಾಮರಾ ಮೆನ್ ಆಗಿ ಮಾಡಬೇಕು, ಸಿನಿಮಾ ರಂಗದಲ್ಲಿ ಅವನಿಗೆ ಒಂದು ಒಳ್ಳೆಯ ಭವಿಷ್ಯ ಕಲ್ಪಸಿಕೊಡಬೇಕೆಂದು ಕಲ್ಪನಾ ಅಂದುಕೊಂಡಿದ್ದಳು. ಆದರೆ, ಆ ಮಹಾನುಭಾವ ಮಾತ್ರ ಯಾವತ್ತೂ ಡಿಸ್ಕೋ, ಪಾರ್ಟಿ ಎನ್ನುತ್ತಲೇ ಹಾಳಾಗಿ ಹೋದ. ಈ ನಡುವೆ ಕಲ್ಪನಾ ಬೆಂಗಳೂರಿನಲ್ಲಿ ದೊಡ್ಡ ಬಂಗಲೆ ಕೊಂಡುಕೊಂಡು, ತನ್ನ ಇಡೀ ಫ್ಯಾಮಿಲಿಯನ್ನು ಅಲ್ಲಿ ಕರೆತಂದು ಸಾಕುತ್ತಿದಳು. ಆ ಮನೆಯನ್ನು ಅಲಂಕರಿಸಲು ಸಾಕಷ್ಟು ಖರ್ಚು ಮಾಡಿದ್ದಳು. ದುಡಿಯವವಳು ಕಲ್ಪನಾ ಒಬ್ಬಳೇ.. ಉಳಿದವರೆಲ್ಲಾ ಕುಳಿತು ತಿನ್ನುವವರಾಗಿದ್ದರು ಕಲ್ಪನಾಳ ಮನೆಯಲ್ಲಿ. ಇದೆಲ್ಲದರ ಪರಿಣಾಮ ಸಾಲದ ಹೊರೆ ಬೆಟ್ಟದಷ್ಟಾಯಿತು. ಇತ್ತ ಸಿನಿಮಾ ರಂಗ ಕಲ್ಪನಾಳ ಕೈ ಬಿಟ್ಟಿತ್ತು. ಅತ್ತ ಸಾಲವೂ ಅಧಿಕವಾಗಿತ್ತು.
ಇದೆಲ್ಲದರ ಪರಿಣಾಮ ಕಲ್ಪನಾಳನ್ನು ಮತ್ತೆ ನಾಟಕದತ್ತ ಎಳೆದೊಯ್ದಿತು. ಆಕಾಶಕ್ಕೇರಿದವಳು ಮತ್ತೆ ಭೂಮಿಗೆ ಬಿದ್ದಿದ್ದಳು. ಲಕ್ಷದಷ್ಟಿದ್ದ ಅವಳ ಸಂಪಾದನೆ ಕೇವಲ ಕೆಲವು ಸಾವಿರಗಳಾಯಿತು. ಪಾಪ..! ಕಲ್ಪನಾ ಅದೆಷ್ಟು ಸಂಕಟಪಟ್ಟಿರಬೇಡ..? ಇತ್ತ ಕಲ್ಪನಾ ತನ್ನ ಸಾಲ ತೀರಿಸಲು ನಾಟಕದಲ್ಲಿ ಅಭಿನಯ ಮಾಡಲು ಒಪ್ಪಿಕೊಂಡಾಗ ಸಿಕ್ಕವನೇ ಉತ್ತರ ಕರ್ನಾಟಕದ ನಾಟಕ ಕಂಪನಿಯ ಮಾಲೀಕ ಗುಡಿಗೇರಿ ಬಸವರಾಜು. ಇಲ್ಲೇ ಕಲ್ಪನಾಳ ನಿಜವಾದ ಅವನತಿ ಪ್ರಾರಂಭವಾಗಿದ್ದು. ಸುಮ್ಮನೇ ನಾಟಕದಲ್ಲಿ ಅಭಿನಯಿಸಿ, ಸಂಬಳ ತೆಗೆದುಕೊಂಡು ತನ್ನ ಪಾಡಿಗೆ ತಾನಿದ್ದರೆ ಕಲ್ಪನಾ ಇಂದು ಜೀವಂತವಾಗಿರುತ್ತಿದ್ದಳು. ಆದರೆ ಕಲ್ಪನಾ ಅಲ್ಲಿ ಮತ್ತೆ ದಾರಿ ತಪ್ಪಿದ್ದಳು. ಅವಳು ಗುಡಿಗೇರಿ ಬಸವರಾಜುವಿಗೆ ಮನಸೋತಿದ್ದಳು. ಅವನೂ ವಿವಾಹಿತನೇ.. ಅದರಲ್ಲೂ ಅವನಿಗೆ ಹೆಣ್ಣಿನ ತೆವಲು ಸ್ವಲ್ಪ ಜಾಸ್ತಿಯೇ ಇತ್ತು. ಕಲ್ಪನಾ ಅವನಿಗೆ ಸಂಪೂರ್ಣ ವಶವಾಗಿದ್ದಳು. “ತನ್ನನ್ನು ಎರಡನೇ ಹೆಂಡತಿಯಾಗಿ ಸ್ವೀಕರಿಸು ಬಸೂ..” ಎಂದು ಕಲ್ಪನಾ ಅವನಿಗೆ ಗಂಟು ಬಿದ್ದಿದ್ದಳು. ಮೊದ ಮೊದಲು ಬಸವರಾಜು ತಿರಸ್ಕರಿಸಿದರೂ, ನಂತರ ಒಪ್ಪಿಕೊಂಡ. ಮದುವೆಯೂ ಆಯಿತು. ಮತ್ತೆ ಇದಕ್ಕೆ ಸಾಕ್ಷಿ ಅದೇ ಚಿನ್ನಮ್ಮ. ಕಲ್ಪನಾಳ ಅವನತಿ ಅದಾಗಲೇ ಪ್ರಾರಂಭವಾಗಿತ್ತು. ಮೊದಲೆಲ್ಲವೂ ಚೆನ್ನಾಗೇ ಇದ್ದರೂ, ಬರುಬರುತ್ತಾ ಬಸವರಾಜು ಮತ್ತು ಕಲ್ಪನಾಳ ಮಧ್ಯ ಹಲವಾರು ಭಿನ್ನಾಭಿಪ್ರಾಯಗಳು, ಕಲಹಗಳು, ಹೊಡೆದಾಟ, ಮನಸ್ತಾಪಗಳು ಸಾಮಾನ್ಯವಾಗತೊಡಗಿತು. ಕರ್ನಾಟಕದಲ್ಲಿ ಮನೆ ಮಾತಾಗಿದ್ದ ಮಿನುಗುತಾರೆ ಕಲ್ಪನಾ ಎಲ್ಲಿ, ಒಬ್ಬ ಯಕಃಶ್ಚಿತ್ ನಾಟಕ ಕಂಪನಿಯ ಗುಡಿಗೇರಿ ಬಸವರಾಜು ಎಲ್ಲಿ..? ಕಲ್ಪನಾ ಅದು ಹೇಗೆ ಅವನಿಗೆ ವಶವಾದಳೋ..? ಒಟ್ಟಿನಲ್ಲಿ ತನ್ನ ಅವನತಿಗೆ ತಾನೇ ಕಾರಣವಾದಳು. ಇವರಿಬ್ಬರ ಮನಸ್ತಾಪ ಅದೆಷ್ಟರ ಮಟ್ಟಿಗೆ ಹೋಗಿತ್ತೆಂದರೆ, ಬಸವರಾಜು ಕಲ್ಪನಾ ಸಾಯುವ ಹಿಂದಿನ ದಿನ ಅವಳನ್ನು ಚೆನ್ನಾಗಿ ಬಡಿದಿದ್ದ..
ಅದು 1979 ನೇ ಇಸವಿಯ ಮೇ ತಿಂಗಳು. ಬೆಳಗಾವಿ ಬಳಿಯ ಗೋಟೂರು ಐ.ಬಿ ಯಲ್ಲಿ ಕಲ್ಪನಾ 14 ನಿದ್ದೆ ಮಾತ್ರೆಗಳ ಜೊತೆ ತನ್ನ ವಜ್ರದ ಹರಳಿನ ಉಂಗುರವನ್ನು ಪುಡಿ ಮಾಡಿಕೊಂಡು ಕುಡಿದು ತನ್ನ ಬಣ್ಣದ ಬದುಕಿಗೆ ವಿದಾಯ ಹೇಳಿದ್ದಳು. ಅಂತಹ ಮೇರು ನಟಿ. ಅದ್ಭುತ ಅಭಿನೇತ್ರಿ, ಮಿನುಗುತಾರೆ ಹೀಗೆ ದುರಂತವಾಗಿ ತನ್ನ ಜೀವನವನ್ನು ಅಂತ್ಯ ಮಾಡಿಕೊಂಡು ಅನಾಥ ಶವವಾಗಿ ಹೋಗಿದ್ದು ವಿಷಾದವಲ್ಲವೇ..? ಪಾಪ..! ಅದೆಷ್ಟು ಸಂಕಟಪಟ್ಟಿರಬಹುದು ಆ ಜೀವ..? ಅವಳ ಈ ದುರಂತ ಕಥೆಯನ್ನು ಕೇಳಿದಾಗ, ಇಂತಹ ಅದ್ಭುತ ಅಭಿನೇತ್ರಿಗೆ ಇಂತಹ ದುರ್ಮರಣವೇ ಎಂದೆನಿಸಿ ಕರುಳು ಚುರುಕ್ ಎನ್ನುವುದು. ಅಂದು ಅವಳ ಸಾವಿನ ದಿನ ಇಡೀ ಚಿತ್ರರಂಗ, ಹಾಗೂ ಅಭಿಮಾನಿಗಳ ಕಣ್ಣೀರ ಕೋಡಿಯೇ ಹರಿಯಿತು. ಮಿನುಗು ತಾರೆ ತನ್ನ ಹೊಳಪನ್ನು ಕಳೆದುಕೊಂಡು ಚಿರ ನಿದ್ರೆಗೆ ಜಾರಿತ್ತು.. 30-35 ರ ಯುವ ನಟಿ, ಕನ್ನಡಿಗರ ಪಾಲಿಗೆ ಕೇವಲ ನೆನಪಾಗಿ ಹೋದಳು..
ಮಾಹಿತಿ ಕೃಪೆ : ಗೂಗಲ್ ಮತ್ತು ರವಿ ಬೆಳೆಗೆರೆಯವರು ಬರೆದ “ಕಲ್ಪನಾ ವಿಲಾಸ” ಎಂಬ ಪುಸ್ತಕ.