ನಿಮಗೆ ನೆನಪಿದೆಯಾ?
ಬೆನ್ನಿಗೊಂದು ಬ್ಯಾಗು ನೇತುಹಾಕಿಕೊಂಡು ನಡಕೊಂಡೋ, ಬಸ್ಸಲ್ಲೋ ಶಾಲೆಗೆ ಹೋದದ್ದು; ಹೋಮ್’ವರ್ಕು ಮಾಡದೆ ಟೀಚರ ಕೈಲಿ ಪೆಟ್ಟು ತಿಂದದ್ದು, ಶಾಲೆಯ ಹೊರಗೆ ಮಾರುತ್ತಿದ್ದ ರೂಪಾಯಿಯ ಐಸ್ ಕ್ಯಾಂಡಿಗಾಗಿ ಬಸ್ಸಲಿ ಹೋಗದೆ ಉಳಿಸಿಟ್ಟ ಹಣ ಕೊಟ್ಟು ಮೈಯೆಲ್ಲ ಬಾಯಾದದ್ದು. ಮರೆತೋಗಿದೆಯಾ? ಚಿಂತಿಸಬೇಡಿ, ನಿರ್ದೇಶಕ ರಿಷಭ್ ಶೆಟ್ಟಿ ಮತ್ತೆ ನಿಮ್ಮನ್ನ ಕರಕೊಂಡು ಹೋಗಿ ಶಾಲೆಯಲ್ಲಿ ಕೂರಿಸುತ್ತಾರೆ. ನೆನಪುಗಳ ಮಲ್ಲಿಗೆ ಪರಿಮಳವ ಆಸ್ವಾದಿಸುವಂತೆ ಮಾಡುತ್ತಾರೆ.
ಗಡಿನಾಡಲ್ಲಿ ಹುಟ್ಟಿ ಬೆಳೆದ ನಮ್ಮಂತವರಿಗೆ, ಮಲಯಾಳದ ಜೊತೆ ಏಗಬೇಕಾದ ಕಷ್ಟ ಚೆನ್ನಾಗೇ ಗೊತ್ತು. ನಮ್ಮವರಿರುವ ಕಾಸರಗೋಡು ಕೇರಳದ ಪಾಲಾದಾಗ ಹಿರಿಯರು ಅನುಭವಿಸಿದ ನೋವೂ ಕೇಳಿ ಗೊತ್ತು. ಅವನ್ನೆಲ್ಲ ಒಂದೊಳ್ಳೆಯ ಕ್ಯಾನ್ವಾಸ್ ಅಲ್ಲಿ ರಂಗು ರಂಗಾಗಿ ತಂದಿದ್ದಾರೆ.
ಸಿನಿಮಾದ ಟ್ರೈಲರ್ ನಿಮಗೆ ಕತೆಯನ್ನೆಲ್ಲ ಹೇಳುವುದರಿಂದ ಮುಂದೇನಾಗುತ್ತದೆ ಅಂತ ಉಸಿರು ಬಿಗಿ ಹಿಡಿದು ಕಾಯುವ ಆತಂಕ ಇಲ್ಲ. ಹಾಗಾಗಿ ಜಾತ್ರಯಲ್ಲಿ ಎರಡು ರೂಪಾಯಿ ಕಡಲೆ ತಿನ್ನುತ್ತಾ ಕಣ್ಣು ಹಾಯಿಸಿದಲ್ಲೆಲ್ಲ ಬೆರಗುಗೊಳ್ಳುತ್ತಾ ನೋಡುವ ಭಾಗ್ಯ!
ಸಿನಿಮಾ ಶುರುವಾಗುವಾಗಲೇ ಕಾಸರಗೋಡಿನ ದರ್ಶನ ಮಾಡಿಸುವ ನಿರ್ದೇಶಕರು, ನಿಧಾನವಾಗಿ ನಿಮ್ಮನ್ನು ಅಲ್ಲಿಗೆ ಒಗ್ಗಿಸಿಕೊಳ್ಳುತ್ತಾರೆ. ಹಿಂದಿನ ಬೆಂಚಿನ ಹುಡುಗರು, ಅವರ ತುಂಟಾಟಗಳು, ಅವರ ಮನೆಯ ಪರಿಸ್ಥಿತಿ, ಮೇಷ್ಟ್ರುಗಳ ಕಷ್ಟ, ಮಾಸಿದ ಕಟ್ಟಡ, ಊರ ಜನ ಹೀಗೆ ಒಂದು ಹಳ್ಳಿಯ ಸಮಸ್ತವೂ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಡ್ರಾಮಾ ಜೂನಿಯರ್ಸ್ ನ ಮಕ್ಕಳ ಕರೆತಂದು ಅವರಿಂದ ಪಾತ್ರ ಮಾಡಿಸಿದ್ದು , ಪ್ರತೀ ನಟರೂ ಪಾತ್ರವೇ ಆಗಿರುವುದು ಸಿನಿಮಾದ ಹೆಗ್ಗಳಿಕೆ, ವಾಸುಕಿ ವೈಭವ್ ಅವರ ಸಂಗೀತವಂತೂ ಕಿವಿಗೆ ಖುಷಿ ಕೊಡುತ್ತದೆ. ಕ್ಯಾಮೆರಾ ಇಂಚಿಂಚನ್ನೂ ಸರಿಯಾಗಿ ಸೆರೆಹಿಡಿವ ಕಾರಣ ಕಣ್ಣು ಮಿಟುಕಿಸಿದರೆ ಎಲ್ಲಿ ಏನು ತಪ್ಪಿ ಹೋಗುತ್ತದೋ ಅಂತಾಗುತ್ತದೆ.
ಮಧ್ಯಂತರದವರೆಗೆ ತುಂಟಾಟದಲ್ಲಿ ಸಾಗುವ ಸಿನಿಮಾ ಆಮೇಲೆ ಗಂಭೀರವಾಗುತ್ತದೆ. ಶಾಲೆಯ ಉಳಿಸಿಕೊಳ್ಳಲು ಮಾಡುವ ಹೋರಾಟಕ್ಕೆ ಅನಂತನಾಗ್ ಜೊತೆಯಾಗುತ್ತಾರೆ. ಅವರ ಅಭಿನಯದ ಬಗ್ಗೆ ಮಾತಾಡಬೇಕೇ? ಇಡೀ ಸಿನಿಮಾವೇ ಗಡ್ ಬಡ್ ಐಸ್ಕ್ರೀಮ್ ಆದರೆ, ಅದರ ಮೇಲಿನ ಚೆರ್ರಿ ಅವರು! ಪ್ರತೀ ಸನ್ನಿವೇಶವೂ ನಗಿಸುವ ಕಾರಣ ಗಂಭೀರ ವಿಷಯವ ಕಾಮಿಕ್ ಧಾಟಿಯಲ್ಲಿ ದಾಟಿಸುತ್ತಾರೆ.
ಆಡುಭಾಷೆಯ ಬಳಕೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳದಿರುವುದು, ಮಲಯಾಳಂನ ಕೆಟ್ಟದಾಗಿ ಚಿತ್ರಣ ಮಾಡದಿರುವುದು, ಕಾಸರಗೋಡನ್ನು ಇದ್ದ ಹಾಗೆ ತೋರಿಸಿರುವುದು, ನಿತ್ಯ ಜೀವನದ ಹಳವಂಡಗಳ ಹಾಸ್ಯವಾಗಿಸಿರುವುದು ಸಿನಿಮಾದ ಬಹುದೊಡ್ಡ ಶಕ್ತಿ.
ರಿಷಭ್ ಶೆಟ್ರೇ ನಿಮಗೊಂದು ನಮಸ್ಕಾರ ಮಾರಾಯ್ರೇ,
ಮತ್ತೆ ಬೆನ್ನಿಗೆ ಬ್ಯಾಗು ನೇತುಹಾಕಿಕೊಂಡು ಗೆಳೆಯರೊಟ್ಟಿಗೆ ಶಾಲೆಗೆ ನಡ್ಕೊಂಡು ಹೋಗಿ, ಲಾಸ್ಟ್ ಬೆಂಚಲ್ಲಿ ಕೂತು, ಆ ಕಡೆ ಹುಡುಗಿಯರ ಸೈಡಲ್ಲಿ ಎರಡನೆಯ ಬೆಂಚಿನ ಮೊದಲ ಹುಡುಗಿಯ ಜುಮುಕಿ ನೋಡುತ್ತಾ ರೋಮಾಂಚನಗೊಂಡ ಕ್ಷಣಗಳ ನೆನಪಿಸಿದ್ದಕ್ಕೆ ಮತ್ತು ಆ ಕಾಲಕ್ಕೆ ಕರಕೊಂಡು ಹೋಗಿದ್ದಕ್ಕೆ.
ಎಲ್ಲರಿಗೂ ಇದರ ತಮಾಷೆ ಇಷ್ಟವಾಗಬಹುದು. ನಮಗೆ ಕರಾವಳಿ ಮತ್ತು ಗಡಿನಾಡವರಿಗೆ ನಮ್ಮ ಹೋರಾಟವೂ,ಅವಸ್ಥೆಯೂ ಒಟ್ಟಿಗೆ ನೆನಪಾಗಿ ಕಣ್ಣೆಲ್ಲ ತುಂಬಿಕೊಳ್ಳಬಹುದು. ಆದರಿದು ಖುಷಿಯ ಕಣ್ಣೀರು!
ಬಿದ್ದು ಬಿದ್ದು ನಗಿಸಿ ಒಳಗೆಲ್ಲೋ ಭಾವತಂತಿ ಮೀಟಿದ ಒಳ್ಳೆಯ ಸಿನಿಮಾ ನೋಡಿ ಬಂದದ್ದರ ಪರಿಣಾಮ ಇದು.
ನೋಡಿ
ಮರೆಯದೆ!
ಅಂದಹಾಗೆ, ಈ ಸಿನಿಮಾಗೆ 4.5/5 ನಿಲ್ಲಿ ನಿಲ್ಲಿ ನನ್ನದೊಂದು ಖಾಸಗಿ ಅರ್ಧ ಅಂಕ. ಹಾಂ, ಎಷ್ಟಾಯಿತೀಗ? 5/5.
ಕಾಸರಗೋಡಿನ ಸೊಬಗು, ಕರಾವಳಿಯ ಭಾಷೆ, ಪಾತ್ರಗಳ ಕಡೆದ ಶೈಲಿ ವ್ಹಾ! ಏನಂತ ಹೇಳಲಿ?
ಸಿನಿಮಾ ಮುಗಿಸಿ ಮಂಗಳೂರಿಂದ ಸುರತ್ಕಲ್’ಗೆ ಡ್ರೈವ್ ಮಾಡ್ತಾ ಬರೋವಾಗ ನಾನೂ ಹೆಂಡತಿಯೂ ದಾರಿಯುದ್ದಕ್ಕೂ ಸಂಭಾಷಣೆಗಳ ಹೇಳ್ತಾ ನಗುತ್ತಾ ಬಂದ್ವಿ ಅಂದರೆ ನೆನೆಸಿಕೊಳ್ಳಿ ಎಷ್ಟರಮಟ್ಟಿಗೆ ಇಷ್ಟವಾಗಿರಬಹುದು ಅಂತ.
ಧನಾತ್ಮಕ ಅಂಶಗಳು
ಕತೆ
ನಿರ್ದೇಶನ
ಪಾತ್ರ
ಅಭಿನಯ
ಸಂಗೀತ
ಕ್ಯಾಮೆರಾ ಕೆಲಸ
ಋಣಾತ್ಮಕ ಅಂಶಗಳು
ಇಲ್ಲ!
ನೋಡಿ,ನೋಡಿಸಿ.
ಇಂತಹ ಸಿನಿಮಾಗಳು ಕನ್ನಡದ ಹೆಮ್ಮೆ!
– Prashanth Bhat