ಸಿನಿಮಾ - ಕ್ರೀಡೆ

ಮಿಸ್ ಯೂ ಸಂಗ ಆಂಡ್ ಮಹೇಲಾ!!

“That’s it… Kumar Sangakkara and Mahela Jayawardene does it again for Srilanka.. What a partnership under pressure… Srilanka wins…!!!”

Yes.. ಈ commentary ಇನ್ನು ಮುಂದೆ ಕ್ರಿಕೆಟ್ ಮೈದಾನದಿಂದ ಕೇಳೋದಿಲ್ಲ. ಯಾಕಂದ್ರೆ ಅರ್ಜುನ ರಣತುಂಗ, ಅರವಿಂದ ಡಿಸಿಲ್ವ, ಮುರಳೀಧರನ್, ಜಯಸೂರ್ಯ, ಚಾಮಿಂಡ ವಾಸ್ ,ಅಟ್ಟಪಟ್ಟು ನಂತರ ಶ್ರೀಲಂಕಾ ಕ್ರಿಕೆಟ್ ಜವಾಬ್ಧಾರಿಯನ್ನು ತಮ್ಮ ಹೆಗಲಿಗೇರಿಸಿಕೊಂಡು ವಿಶ್ವ ಕ್ರಿಕೆಟ್ನಲ್ಲಿ ಶ್ರೀಲಂಕಾವನ್ನು ಯಶಸ್ಸಿನ ಉತ್ತುಂಗಕ್ಕೇರಿಸಿದ್ದ ಸಾರ್ವಕಾಲಿಕ ಶ್ರೇಷ್ಟ ಜೋಡಿ ಕುಮಾರ ಸಂಗಕ್ಕಾರ ಮತ್ತು ಮಹೇಲಾ ಜಯವರ್ಧನೆ ಏಕದಿನ ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ದಾರೆ. ಶ್ರೀಲಂಕಾ ಕ್ರಿಕೆಟ್ ಆಯ್ಕೆಮಂಡಳಿ ಇನ್ನು ಮುಂದಿನ ಸರಣಿಗಳಿಗೆ ಮೂರನೇ ಮತ್ತು ನಾಲ್ಕನೇ ಕ್ರಮಾಂಕಕ್ಕೆ ಆಟಗಾರರನ್ನು ಆಯ್ಕೆ ಮಾಡಲು ಬಹಳ ಯೋಚನೆ ಮಾಡಬೇಕಾದ ಕಾಲ ಬಂದಿದೆ. ದಶಕಗಳಿಂದ ಈ ಎರಡೂ ಕ್ರಮಾಂಕವನ್ನು ತಮ್ಮ ಸುಪರ್ದಿಯಲ್ಲಿ ಹಿಡಿದಿಟ್ಟುಕೊಂಡು ಶ್ರೀಲಂಕಾ ಕ್ರಿಕೆಟ್ ಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿದ್ದ ಮಹೇಲಾ-ಸಂಗ ಜೋಡಿ ಮೊನ್ನೆ ನಡೆದ ಆಫ್ರಿಕಾ ವಿರುದ್ಧದ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯದ ಮೂಲಕ ವಿಶ್ವ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ.

ಶ್ರೀಲಂಕಾ ತಂಡ ಟಿ೨೦ ಚಾಂಪಿಯನ್ , ಎರಡು ಸಲ ೫೦ ಓವರ್ ವಿಶ್ವಕಪ್ ಫೈನಲ್ ತಲುಪಲು ಈ ಜೋಡಿಯ ಕೊಡುಗೆ ಬಹಳ ಮಹತ್ತರವಾಗಿದೆ. ಹೇಡನ್-ಲಾಂಗರ್, ವಾರ್ನ್-ಮೆಕ್ಗ್ರಾತ್, ಸಚಿನ್-ಗಂಗೂಲಿ, ಸೆಹ್ವಾಗ್-ಗಂಭೀರ್

ಎಂಬ ನುಡಿಗಟ್ಟು ವಿಶ್ವ ಕ್ರಿಕೆಟ್ ನಲ್ಲಿ ಹೇಗೆ ಚಾಲ್ತಿಯಲ್ಲಿದೆಯೋ, ಸಂಗ-ಮಹೇಲಾ ಪದ ಕೂಡಾ ಶ್ರೀಲಂಕಾ ಕ್ರಿಕೆಟ್ ನಲ್ಲಿ ಚಾಲ್ತಿಯಲ್ಲಿದೆ. ಶ್ರೀಲಂಕಾ ಕ್ರಿಕೆಟ್ನ ಮಧ್ಯಮ ಕ್ರಮಾಂಕದ ಬೆನ್ನೆಲುಬಾಗಿ, ತಮ್ಮ ತಂಡ ಸಂಕಷ್ಟದಲ್ಲಿದ್ದಾಗ ಆಪದ್ಭಾಂದವರಂತೆ ತಂಡಕ್ಕೆ ನೆರವಾಗಿ ಶ್ರೀಲಂಕಾ ಕ್ರಿಕೆಟ್ ಎತ್ತರವನ್ನು ಹೆಚ್ಚಿಸಿದ್ದಾರೆ ಈ ಜೋಡಿ ಎಂದರೆ ಅದು ಅತಿಶಯೋಕ್ತಿಯಲ್ಲ. ಶ್ರೀಲಂಕಾ ತಂಡದ ನಾಯಕರಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು ವಿಶ್ವ ಕ್ರಿಕೆಟ್ ಕಂಡ ಈ ಅದ್ವಿತೀಯ ಜೋಡಿ.!!.

ಕಳೆದ ಎರಡು ವರ್ಷಗಳಲ್ಲಿ ಏಕದಿನ ಕ್ರಿಕೆಟ್ನಲ್ಲಿ ಸುಮಾರು 60ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಸಂಗಕ್ಕಾರ 11 ಶತಕಗಳು ಹಾಗೂ 20 ಅರ್ಧಶತಕಗಳನ್ನು ಸಿಡಿಸಿದ್ದಾರೆ. ತನ್ನ ಏಕದಿನ ಕ್ರಿಕೆಟ್ ಜೀವನದಲ್ಲಿ 42 ರ ಸರಾಸರಿಯಲ್ಲಿ 404 ಪಂದ್ಯಗಳಿಂದ 25 ಶತಕ ಹಾಗೂ 93 ಅರ್ಧಶತಕಗಳನ್ನು ಸಿಡಿಸಿದ್ದಾರೆ ಸಿಡಿಲಮರಿ ಸಂಗಕ್ಕಾರ. ಕಳೆದೆರಡು ವರ್ಷಗಳಲ್ಲಿ ಟೆಸ್ಟ್ ನಲ್ಲಿ 72.50 ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ ಕುಮಾರ್. ಒಟ್ಟು 130 ಟೆಸ್ಟ್ ಗಳಲ್ಲಿ 12203 ರನ್ ಗಳಿಸಿದ್ದ ಸಂಗಕ್ಕಾರ, 2015ರ ವಿಶ್ವಕಪ್ನಲ್ಲಿ 4 ಸತತ ಶತಕಗಳನ್ನು ಭಾರಿಸಿ ದಾಖಲೆಯ ಶಿಖರವನ್ನೇರಿದ್ದರು!!

ಇನ್ನು ಜಯವರ್ಧನೆ ವಿಚಾರಕ್ಕೆ ಬಂದಾಗ, 35ರ ಸರಾಸರಿಯಲ್ಲಿ ಕಳೆದೆರಡು ವರ್ಷಗಳಲ್ಲಿ ಏಕದಿನದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಈ ಸಲದ ವಿಶ್ವಕಪ್ ನಲ್ಲಿ ತನ್ನ ತಂಡ ಅಫ್ಗನ್ನರ ವಿರುದ್ಧ 51ಕ್ಕೆ 4 ಹುದ್ದರಿ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ವೈಯ್ಯಕ್ತಿಕ 19ನೇ ಶತಕ ಭಾರಿಸಿ ತಂಡವನ್ನು ಜಯದೆಡೆಗೆ ಮುನ್ನೆಡೆಸಿದ್ದರು. ಒಟ್ಟು 448 ಏಕದಿನ ಪಂದ್ಯಗಳಿಂದ 12659 ರನ್ ಕಲೆಹಾಕಿರುವ ಇವರು 149 ಟೆಸ್ಟ್ ಆಡಿ 11814 ರನ್ ಗಳಿಸಿದ್ದಾರೆ.

293 ಬಾರಿ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಜೊತೆಯಾದ ಈ ಜೋಡಿ  ಒಟ್ಟು 13368 ರನ್ ಕಲೆ ಹಾಕಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಕೊಲಂಬೋ ಟೆಸ್ಟ್ನಲ್ಲಿ 157 ಓವರ್ ಜೊತೆಯಾಟವಾಡಿದ ಈ ಜೋಡಿಯು ಬರೋಬ್ಬರಿ ಮೂರು ದಿನ ಆಫ್ರಿಕಾ ಬೌಲರ್ಗಳ ಬೆವರಿಳಿಸಿ 624 ರನ್ ಪೇರಿಸಿದ್ದನ್ನು ಮರೆಯೋಕೆ ಸಾಧ್ಯವೇ ಇಲ್ಲ. ಐಪಿಲ್ ನಲ್ಲಿಯೂ ಕಿಂಗ್ಸ್ ಇಲೆವೆನ್ ತಂಡದ ಪರವಾಗಿ ಒಟ್ಟಾಗಿ ಆಡಿದ್ದಾರೆ ಸಂಗ ಮತ್ತು ಮಹೇಲಾ. ಒಂದೇ ವಯಸ್ಸಿನವರಾದ ಈ ಜೋಡಿ ಕ್ರಿಕೆಟ್ ದುನಿಯಾದ ಹೊರಗೂ ತಮ್ಮ ಗೆಳೆತನವನ್ನು ಹಿಡಿದಿಟ್ಟಿದ್ದು, ಕೊಲಂಬೋದಲ್ಲಿ ರೆಸ್ಟಾರೆಂಟ್ ಒಂದನ್ನು ಜೊತೆಯಾಗಿ ಮುನ್ನಡೆಸುತ್ತಿದ್ದಾರೆ.

“ನಿವೃತ್ತಿಯಾಗುತ್ತಿರುವುದು ಫಾರ್ಮಿನ ಸಮಸ್ಯೆಯಿಂದಲ್ಲ. ಇನ್ನೆರಡು ವರ್ಷ ಆಡಬಲ್ಲ ಸಾಮರ್ಥ್ಯ ನನಗಿದೆ. ಆದರೆ ನಿವೃತ್ತಿ ಕಾಲವೀಗ ಪಕ್ವವಾಗಿದೆ. ನನಗಿಂತ ಶ್ರೇಷ್ಟ ಆಟಗಾರರು ನಿವೃತ್ತಿಯಾದಾಗಲೂ ಆಟ ಮುಂದುವರಿದಿದೆ, ಇತರ ಆಟಗಾರರು ಆ ಜವಾಭ್ದಾರಿಯನ್ನು ನಿಭಾಯಿಸಿದ್ದಾರೆ” ಎಂದು ತಮ್ಮ ನಿವೃತ್ತಿಯ ಬಗ್ಗೆ ಪ್ರತಿಕ್ರಯಿಸಿದ್ದಾರೆ ಸಂಗ.

“ನಾನು ಇನ್ನು ಆರಾಮಾಗಿ ನನ್ನ ಉಳಿದ ಜೀವನವನ್ನು ಖುಶಿಯಾಗಿ ಕಳೆಯುತ್ತೇನೆ. ನಮ್ಮ ಕಾಲ ಮುಗಿದಿದೆ, ನಾವು ಬಹಳ ಶಾಂತಿಯಿಂದ ನಿವೃತ್ತಿಯಾಗಿ ನಮ್ಮ ಸಾಧನೆಗೆ ಖುಶಿ ಪಡಬೇಕಾಗಿದೆ” ಎಂದು ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ ಜಯವರ್ಧನೆ.

ಸಂಗ-ಮಹೇಲಾ ಜೋಡಿಗೆ ನಿವೃತ್ತಿಯಾಗುವಂತೆ ಯಾವುದೇ ಒತ್ತಡವಿರಲಿಲ್ಲ. ಆದರೆ ನಾಟಕದಲ್ಲಿ ಪಾತ್ರಧಾರಿಗೆ ತನ್ನ ಪಾತ್ರದ ಕಾಲಾವಧಿ ಮುಗಿದದ್ದು ತಿಳಿದು ತೆರೆಯ ಪಕ್ಕಕ್ಕೆ ಸರಿಯದಿದ್ದರೆ ವೀಕ್ಷಕರಿಗೂ ಆಭಾಸ ಹಾಗೂ ತೊಂದರೆ. ತನ್ನ ಪಾತ್ರದಲ್ಲಿ ವಿಫಲರಾದರೆ ಪಾತ್ರಧಾರಿಗೂ ಹಿಂಸೆ. ಇದನ್ನು ಅರ್ಥ ಮಾಡಿಕೊಳ್ಳದಷ್ಟು ದಡ್ಡರಲ್ಲ ಈ ಜೋಡಿ. ಹಾಗಂತ ಈ ಜೋಡಿ ಕಳಪೆ ಫಾರ್ಮ್ ನಿಂದ ಬಳಲುತ್ತಿರಲಿಲ್ಲ. ತಮ್ಮ ಸುದೀರ್ಘ ಕ್ರಿಕೆಟ್ ಜೀವನದಲ್ಲಿ ಯಾವುದೇ ಕಾಂಟ್ರೋವರ್ಸಿಗೆ ಒಳಗಾಗದೆ ಕಾಲಕ್ಕೆ ತಕ್ಕ ಹೊಂದಿಕೊಂಡು ಯುವ ಆಟಗಾರರಿಗೆ ಉತ್ತಮ ತಳಹದಿಯನ್ನು ಹಾಕಿಕೊಟ್ಟಿದ್ದಾರೆ. ಜಯವರ್ಧನೆ ಎಲ್ಲಾ ಕ್ರಿಕೆಟ್ ಪ್ರಕಾರಗಳಿಂದ ನಿವೃತ್ತಿಯಾಗಿದ್ದರೆ ಸಂಗಕ್ಕಾರ ಆಟವನ್ನು ಟೆಸ್ಟ್ ಕ್ರಿಕೆಟ್ ನಲ್ಲಿ ಇನ್ನೂ ಕಣ್ತುಂಬಿಕೊಳ್ಳಬಹುದಾಗಿದೆ. ಏನೇ ಹೇಳಿ ಕ್ರಿಕೆಟ್ ಜಗತ್ತು ಇವರಿಬ್ಬರ ಏಕದಿನ ನಿವೃತ್ತಿಯಿಂದ ಬಡವಾಗಿದ್ದಂತೂ ಸತ್ಯ. ಇವರಿಬ್ಬರ ಸ್ಥಾನವನ್ನು ತುಂಬುವುದು ಸಧ್ಯಕ್ಕಂತೂ ಕಷ್ಟವೇ ಸರಿ!!

All the best Sanga and Mahela!!!

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!