ಸಿನಿಮಾ - ಕ್ರೀಡೆ

ವಿಶ್ವಕಪ್ ಯಾರೇ ಜಯಿಸಲಿ ಕ್ರಿಕೆಟ್ ಮಾತ್ರ ಸೋಲಬಾರದು.!

“It’s been one of the toughest decisions of my career, I have been very passionate about playing for Zimbabwe; but it’s a decision I had to make. I can’t give you that answer, because it’s the first time going there. I just want to go there and play some good cricket and provide my family. Thats the main thing behind it”.

ಜಿಂಬಾಬ್ವೆ ಕ್ರಿಕೆಟ್ ತಂಡಕ್ಕೆ ಗುಡ್ ಬೈ ಹೇಳಿ ಕೌಂಟಿ ಕ್ರಿಕೆಟ್ ಗೆ ತೆರಳುತ್ತಿರುವ ಬ್ರೆಂಡನ್ ಟಯ್ಲರ್ ಹೀಗೆ  ಹೇಳುವಾಗ ಎಲ್ಲರಿಗೂ ಆಶ್ಚರ್ಯವಾಗಿರಬಹುದು. ಕೆಲವರು ಛೇ ಎಂದು ಉದ್ಗರಿಸಿರಬಹುದು. ಆಟವಾಡದೆಯೇ ಕೋಟಿ ಸಂಪದಿಸುವವರ ಆಟದಲ್ಲಿ ಇದ್ದುಕೊಂಡೇ ಟಯ್ಲರ್ ಗೆ ಇಂತಹಾ ಹೀನಾಯ ಸ್ಥಿತಿಯಾ ಅಂತ ನೀವೆಲ್ಲರೂ ತಲೆಗೆ ಹುಳ ಬಿಟ್ಟುಕೊಂಡಿರಬಹುದು. ಟಯ್ಲರ್ ಪಂದ್ಯ ಸೋತಿರಬಹುದು. ಆದರೆ ಕೋಟಿ ಜನರ ಮನ ಗೆದ್ದಿದ್ದಾರೆ. ಕೊನೆಯ ಪಂದ್ಯದಲ್ಲಿ ಬಾರಿಸಿದ 138 ಸೇರಿ ಒಟ್ಟೂ 433 ರನ್ ಬಾರಿಸಿದ್ದ ಟಯ್ಲರ್ ಎಂಬ ಜಿಂಬಾಬ್ವೆಯ ಅದ್ಭುತ ಪ್ರತಿಭೆ ಕುಟುಂಬ ಪೋಷಿಸಲು ಹಣಕಾಸು ಸಾಕಾಗುತ್ತಿಲ್ಲವೆಂದು 29ನೇ ವಯಸ್ಸಿನಲ್ಲಿಯೇ ಕ್ರಿಕೆಟಿನಿಂದಲೇ ನಿವೃತ್ತಿಯಾಗುತ್ತಾರೆಂದರೆ ಅದಕ್ಕೆ ಯಾರು ಕಾರಣ? ಜಿಂಬಾಬ್ವೆ ಕ್ರಿಕೆಟ್ ಸಂಸ್ಥೆ ಮತ್ತೆ ಐಸಿಸಿ ಉತ್ತರಿಸಬೇಕು.

ಮುಂದಿನ ವಿಶ್ವಕಪ್ ಗೆ ಕೆಲವೊಂದು ಬದಲಾವಣೆಗಳನ್ನು ಮಾಡಬೇಕೆಂದು ಪ್ರಸ್ತಾಪಿಸಿದೆ. ಅದರಲ್ಲಿ ಮುಖ್ಯವಾದುದು, ಒಟ್ಟು ತಂಡಗಳ ಸಂಖ್ಯೆಯನ್ನು ಕಡಿತಗೊಳಿಸುವುದು. ಈಗಿರುವ 14ಕ್ಕೆ ಬದಲು 10ಕ್ಕೆ ಕಡಿತಗೊಳಿಸುವುದು ಐಸಿಸಿ ಯೋಚನೆ. ನನ್ನ ಪ್ರಶ್ನೆ, ಈ ಯೋಜನೆಯ ಉದ್ದೇಶವೇನು? ಯಾವುದಾದರೂ ಸದುದ್ದೇಶಕ್ಕಾಗಿ ಈ ಥರಾ ಯೋಚಿಸಲಾಗಿದೆಯಾ ಅಥವಾ ಸಣ್ಣ ರಾಷ್ಟ್ರಗಳ ಆಟದಿಂದ ಕಡಿಮೆ ಆದಾಯ ಬರುತ್ತಿದೆ ಅಂತಾನಾ? ಐಸಿಸಿಯ ಮುಖ್ಯ ಅಜೆಂಡಾವೇನೆಂಬುದೇ ತಿಳಿಯುತ್ತಿಲ್ಲ. ಈಗಾಗಲೇ ಕ್ರಿಕೆಟ್ ಆಡುತ್ತಿರುವ ರಾಷ್ಟ್ರಗಳನ್ನು ಸಂಘಟಿಸಿ ದೊಡ್ಡ ದೊಡ್ಡ ಟೂರ್ನಿಗಳನ್ನು ಹಮ್ಮಿಕೊಂಡು ಹಣ ಮಾಡುವುದೇ ಐಸಿಸಿ ಗುರಿಯಾ ಅಥವಾ ಕ್ರಿಕೆಟ್ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಅಫ್ಘಾನಿಸ್ತಾನ, ಸ್ಕಾಟ್ಲಾಂಡ್, ಯುಎಯಿ, ಕೆನಡಾ ಮುಂತಾದ ಸಣ್ಣ ರಾಷ್ಟ್ರಗಳಲ್ಲೂ ಕ್ರಿಕೆಟ್ ಅಭಿವೃದ್ಧಿಗೊಳಿಸುವುದರತ್ತ ಗಮನ ಹರಿಸುತ್ತಾ ಐಸಿಸಿ?

ವಿಶ್ವಕಪ್ಪೆಂದರೆ ಅದು ವಿಶ್ವ ಕ್ರಿಕೆಟಿನ ಮಹಾಹಬ್ಬ. ಈ ಬಾರಿಯ ವಿಶ್ವಕಪ್ಪನೇ ಗಮನಿಸಿ, ಅಫ್ಘಾನಿಸ್ತಾನ, ಯುಎಯಿ,ಐರ್ಲೆಂಡ್,ಸ್ಕಾಟ್ಲೆಂಡ್,ಬಾಂಗ್ಲಾದೇಶ,ಜಿಂಬಾಬ್ವೆಯಂತಹ ಹೆಚ್ಚು ಅಂತರಾಷ್ಟ್ರೀಯ ಕ್ರಿಕೆಟ್ ಆಡದ, ಟೆಸ್ಟ್ ಮಾನ್ಯತೆ ಪಡೆಯದ ರಾಷ್ಟ್ರಗಳು ಹಿಂದೆಂದಿಗಿಂತಲೂ ಉತ್ಶಾಹದಿಂದ ಭಾಗವಹಿಸಿದೆ.  ಜಿಂಬಾಬ್ವೆಯೇನು ಕ್ರಿಕೆಟ್ ಶಿಶುವೇನಲ್ಲ, ಆಂಡಿ ಫ್ಲವರ್, ಗ್ರಾಂಟ್ ಫ್ಲವರ್, ಆಲಿಸ್ಟರ್ ಕ್ಯಾಂಬೆಲ್ ರಂತಹ ಘಟಾನುಟಿ ಆಟಗಾರರನ್ನು ಹೊಂದಿದ್ದ ತಂಡ ಒಂದು ಕಾಲದಲ್ಲಿ ವಿಶ್ವ ಶ್ರೇಷ್ಟ ತಂಡಗಳಾದ ಭಾರತ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಗಳಿಗೆ ಸಮನಾಗಿ ಸೆಣಸಾಡುತ್ತಿತ್ತು. ೨೦೦೩ರಲ್ಲಿ ಸೆಮಿಫೈನಲ್ ತನಕ ತಲುಪಿದ್ದ ಕೀನ್ಯಾ, ನಮೀಬಿಯಾ, ಕೆನಡಾದಂತಹ ರಾಷ್ಟ್ರಗಳೂ ವಿಶ್ವಕಪ್ ನಲ್ಲಿ ಭಾಗವಹಿಸಿದ್ದವು. ವಿಶ್ವಕಪ್ ಗೆ ಮುನ್ನ ಅರ್ಹತಾ ಸುತ್ತು ನಡೆಸುವ ಐಸಿಸಿ ಯಾವ ಕಾರಣಕ್ಕಾಗಿ ತಂಡಗಳನ್ನು ಕಡಿಮೆ ಮಾಡಲು ಯೋಚಿಸಿದೆಯೋ ಗೊತ್ತಿಲ್ಲ.

ಮೇಲಿನ ಸಣ್ಣ ರಾಷ್ಟ್ರಗಳ ಪಂದ್ಯಗಳು ನೀರಸವಾಗಿರುತ್ತದೆ ಎಂಬುದು ಕಾರಣವಿರಬಹುದೆ? ಅದರಿಂದ ಆದಾಯವಿಲ್ಲ ಎಂದಿರಬಹುದಾ? ಬರೀ ಮೂರ್ಖತನ! ಐರ್ಲೆಂಡ್, ವೆಸ್ಟ್ ಇಂಡೀಸ್ ನೀಡಿದ 307 ರನ್ ಗಳನ್ನು ಯಶಸ್ವಿಯಾಗಿ ಛೇಸ್ ಮಾಡಿದ್ದು, ನ್ಯೂಜಿಲಾಂಡ್ ಸ್ಕಾಟ್ಲೆಂಡ್ ನೀಡಿದ್ದ  ರನ್ನು ಛೇಸ್ ಮಾಡಲು ಹೆಣಗಾಡಿದ್ದು, ಆಫ್ರಿಕಾ ನೀಡಿದ 360 ರನ್ ಗಳನ್ನು ಬೆನ್ನತ್ತಿದ ಜಿಂಬಾಬ್ವೆ 280 ರವರೆಗೆ ಬೆಳೆದಿದ್ದು, ಯುಎಯಿ ಜಿಂಬಾಬ್ವೆ ನಡುವೆ ದೊಡ್ಡ ಮೊತ್ತದ ಆಟ ನಡೆದಿದ್ದು, ವೆಸ್ಟ್ ಇಂಡೀಸ್ ನೀಡಿದ 360 ರನ್ನುಗಳಿಗೆ ಜಿಂಬಾಬ್ವೆ 290 ರವರೆಗೆ ಮುಂದುವರಿದಿದ್ದು, ಐರ್ಲೆಂಡ್ ಯುಎಯಿ ನಡುವೆ ನಡೆದ ಪಂದ್ಯದಲ್ಲಿ ಐರ್ಲೆಂಡ್ ಎರಡು ವಿಕೆಟ್ ಗಳಿಂದ ಜಯಗಳಿಸಿದ್ದು, ಸ್ಕಾಟ್ಲೆಂಡ್ ಅಫ್ಘಾನ್  ಪಂದ್ಯದಲ್ಲಿ ಅಫ್ಘಾನಿಸ್ತಾನ 1 ವಿಕೆಟ್ ಜಯಗಳಿಸಿದ್ದು, ಜಿಂಬಾಬ್ವೆ ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದ್ದು, ಜಿಂಬಾಬ್ವೆ ಐರ್ಲೆಂಡ್ 5 ರನ್ನುಗಳ ಜಯಗಳಿಸಿದ್ದು, ಬಾಂಗ್ಲಾ ದೇಶ ಇಂಗ್ಲೆಡನ್ನು ಹೊರಗಟ್ಟಿದ್ದು, ಐರ್ಲೆಂದ್ ಮತ್ತು ಜಿಂಬಾಬ್ವೆ ತಂಡಗಳು ಭಾರತದ ಕೊನೇಯ ಎರಡು ಪಂದ್ಯಗಳಲ್ಲಿ ಭಾರತೀಯರಿಗೆ ತಣ್ಣಗೆ ನಡುಕ ಹುಟ್ಟಿಸಿದ್ದು, ಇವೆಲ್ಲಾ ಕ್ರಿಕೆಟ್ ನ ಸಣ್ಣ ರಾಷ್ಟ್ರಗಳು ಆಡಿದ ಪಂದ್ಯದ ರೋಚಕತೆಯ ಕಂಪ್ಲೀಟ್ ಡೀಟೈಲ್. ಇಷ್ಟು ಮಾತ್ರವಲ್ಲದೇ, ಒಬ್ರಿಯಾನ್, ಪೋರ್ಟರ್ ಫೀಲ್ಡ್, ಮಹಮದುಲ್ಲಾ, ಬ್ರೆಂಡನ್ ಟಯ್ಲರ್, ಪಾಲ್ ಸ್ಟರ್ಲಿಂಗ್, ಕೈಲ್ ರಂತಹ ಎಷ್ಟೋ ಆಟಗಾರರು ತಮ್ಮ ಪ್ರತಿಭೆಯನ್ನು ಪ್ರೂವ್ ಮಾಡಿದ್ದಾರೆ. ಇಂತಹಾ ತಂಡಗಳನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲವೆಂದು ಅಂದಾಜಿಸಿದ್ದ ಇತರ ತಂಡಗಳ ಲೆಕ್ಕಾಚರವನ್ನು ಅಡಿಮೇಲಾಗಿಸಿವೆ!

ಇಷ್ಟೆಲ್ಲಾ ಇರುವಾಗ ಐಸಿಸಿ ಯಾವ ಮಾನದಂಡ ಇಟ್ಟುಕೊಂಡು ತಂಡಗಳನ್ನು ಕಡಿಮೆ ಮಾಡಲು ಹೊರಟಿದೆ? ಸಣ್ಣ ರಾಷ್ಟ್ರಗಳ ಪಂದ್ಯಗಳು ನೀರಸವಾಗಿರುತ್ತದೆ ಅಂತ ಹೇಳುವುದಾದರೆ ಅದಕ್ಕೂ ಐಸಿಸಿ ಕಾರಣ ತಾನೆ? ಅಂತಹಾ ರಾಷ್ಟ್ರಗಳಿಗೆ ಎಷ್ಟು ಅಂತರಾಷ್ಟ್ರೀಯ ಪಂದ್ಯಗಳ ಅವಕಾಶ ನೀಡುತ್ತಿದೆ ಐಸಿಸಿ? ಅಲ್ಲಿ ಕ್ರಿಕೆಟ್ ಮೂಲಭೂತ ಸೌಕರ್ಯಗಳ, ಅಕಾಡೆಮಿಗಳ ಕಥೆಯೇನು? ಟಯ್ಲರ್ ಏನೋ ಪ್ರಾಮಾಣಿಕವಾಗಿ ವೇತನ ಸಾಕಾಗುತ್ತಿಲ್ಲವೆಂದು ರಿಟೈರ್ ಆದರು. ಈ ಮಧ್ಯೆ ಬುಕ್ಕಿಗಳು ಹಣದಾಸೆ ತೋರಿಸಿ ಫಿಕ್ಸಿಂಗ್ ಗಾಗಿ ಸಂಪರ್ಕಿಸಿದಿದ್ದರೆ ಏನಾಗಿದ್ದಿರಬಹುದು? ಮತ್ತು ಯಾವ ಕರ್ಮಕ್ಕಾಗಿ ಐಸಿಸಿಯ ಭ್ರಷ್ಟಾಚಾರ ನಿಗ್ರಹ ಸಮಿತಿ ಇವೆಲ್ಲಾ? ಜಿಂಬಾಬ್ವೆ ಕ್ರಿಕೆಟ್ ಮಂಡಳಿ ಟಯ್ಲರ್ ಗೆ ಕಡಿಮೆ ವೇತನ ನೀಡುತ್ತಿತ್ತು ಎಂದಾದರೆ, ಜಿಂಬಾಬ್ವೆ ಕ್ರಿಕೆಟ್ ಬೋರ್ಡ್ ಗೆ ಆದಾಯ ಕಡಿಮೆ ಇತ್ತು ಎಂದರ್ಥ. 2003ರ ವಿಶ್ವಕಪ್ಪನ್ನು ಆಫ್ರಿಕಾ ಜತೆಗೂಡಿ ಆಯೋಜಿಸಿದ್ದ ಜಿಂಬಾಬ್ವೆ ಆಟಗಾರರಿಗೆ ಸಂಭಾವನೆ ಕೊಡದೇ ಇರುವಷ್ಟು ದರಿದ್ರ ಬಂದಿದೆಯಾ? ಐಸಿಸಿ ಜಿಂಬಾಬ್ವೆಗೂ ಹೆಚ್ಚು ಅಂತರಾಷ್ಟ್ರೀಯ ಪಂದ್ಯ ಏರ್ಪಡಿಸಿದರೆ ತಾನೆ ಜಿಂಬಾಬ್ವೆಗೆ ಆದಾಯ ಬರುವುದು? ಈಚೆಗಿನ ದಿನಗಳಲ್ಲಿ ಎಷ್ಟು ಪಂದ್ಯಗಳನ್ನು ಜಿಂಬಾಬ್ವೆಗಾಗಿ ಏರ್ಪಡಿಸಿದೆ? ಐಸಿಸಿಯಿಂದ ಸರಿಯಾದ ಪ್ರೋತ್ಸಾಹ ಸಿಗದೆ ಟಯ್ಲರ್, ಒಬ್ರಿಯಾನಂತವರು ಕಳೆದುಹೋಗುತ್ತಿದ್ದಾರೆ. ಇದೂ ಅಲ್ಲದೆ ನಮಗೆ ತಿಳಿಯದೆಯೇ ಅದೆಷ್ಟು ಜನರ ಪ್ರತಿಭೆ ಚಿವುಟಿ ಹೋಗಿದೆಯೋ ಗೊತ್ತಿಲ್ಲ. ಕ್ರಿಕೆಟ್ಟೇ ಇಲ್ಲದ ರಾಷ್ಟ್ರಗಳಲ್ಲಿ ಕ್ರಿಕೆಟನ್ನು ಹಬ್ಬಿಸಿ ಅಲ್ಲಿನ ಪ್ರತಿಭೆಗಳಿಗೂ ಸೂಕ್ತ ವೇದಿಕೆ ಕಲ್ಪಿಸಬೇಕಾದ ಐಸಿಸಿ ಹಣದ ಹಿಂದೆ ಬಿದ್ದಿರುವುದು ವಿಷಾದಕರ. ಐರ್ಲೆಂಡ್, ಜಿಂಬಾಬ್ವೆ, ಬಾಂಗ್ಲಾ, ಸ್ಕಾಟ್ಲಾಂಡ್ ಮುಂತಾದ ತಂಡಗಳನ್ನು ಇತರ ರಾಷ್ಟ್ರಗಳ ಜೊತೆ ಸರಿ ಸಮವಾಗಿ ಹೋರಾಡುವ ತಂಡಗಳಾಗಿ ರೂಪಿಸಲು ಸಾಧ್ಯವಾಗುತ್ತಿಲ್ಲವೆಂದಾದರೆ ವಿಶ್ವಕಪ್ ನಲ್ಲಿ ಅವುಗಳನ್ನು ಸೇರಿಸಿರುವುದಾದರೂ ಯಾಕೆ? ಬರೀ ಆರು ಶ್ರೇಷ್ಠ ತಂಡಗಳನ್ನು ಮಾತ್ರ ಸೇರಿಸಬಹುದಿತ್ತಲ್ಲಾ? ಇದನ್ನು ನೋಡಿದಾಗ ನಿಜವಾಗಿಯೂ ಕ್ರಿಕೆಟನ್ನು ಕೊಲ್ಲುತ್ತಿರುವುದು ಐಸಿಸಿಯೇ ಎಂದು ಅನಿಸದೇ ಇರದು. ಕ್ರಿಕೆಟ್ ವಿಶ್ವ ವ್ಯಾಪಿಯಾಗಲಿ ಎಂದು ನಾವೆಲ್ಲರೂ ಬಯಸುತ್ತಿರುವಾಗ, 192 ರಾಷ್ಟ್ರಗಳಿರುವ ಜಗತ್ತಿನಲ್ಲಿ ಹತ್ತು-ಹನ್ನೆರಡು ರಾಷ್ಟ್ರಗಳನ್ನು ಸೇರಿಸಿ ಟೂರ್ನಿ ನಡೆಸಿದರೆ ಅದಕ್ಕೆ ‘ವಿಶ್ವ’ಕಪ್ ಎಂಬ ಅರ್ಥ ಬರದು.

ಕಡೆಗೊಂದು ಮಾತು, ವಿಶಕಪ್ಪ್ ಯಾರೇ ಜಯಿಸಲಿ ಕ್ರಿಕೆಟ್ ಮಾತ್ರ ಸೋಲಬಾರದು.!

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!