ಕಥೆ

ಬಸರಿಯ ಮೀರಿದ ಶಬರಿಯ ತಾಳ್ಮೆ

ರಾಮಲಕ್ಷ್ಮಣರು ಸೀತೆಯನ್ನು ಹುಡುಕುತ್ತಾ ಕಾಡಿನಲ್ಲಿ ಅಲೆಯುತ್ತಿರುತ್ತಾರೆ. ಆ ದುರ್ಗಮವನದಲ್ಲಿ ಹುಡುಕುತ್ತಾ ಅತ್ತಿತ್ತ ಅಲೆದಾಡಿ ದಣಿದ ಸಮಯದಲ್ಲಿ ಅವರನ್ನು ವಾತ್ಸಲ್ಯಭರಿತ ಕಣ್ಗಳ ವೃದ್ಧೆಯೊಬ್ಬಳು ಎದುರುಗೊಂಡಳು. ಬಿಲ್ಲು ಧರಿಸಿದ, ಕಾವಿಯುಟ್ಟ ದಷ್ಟಪುಷ್ಟವಾದ ಈ ತರುಣರನ್ನು ನೋಡುತ್ತಲೇ ಆಕೆ ಇವರನ್ನು ಸನಿಹಿಸಿದಳು. “ಕಾವಿಯುಟ್ಟ ನಿಮ್ಮನ್ನು ಮೊದಲು ನೋಡಿದಾಗ ನೀವು ಮತಂಗ ಮಹರ್ಷಿಗಳ ಆಶ್ರಮದವರಿರಬಹುದೆಂದು ಭಾವಿಸಿದೆ. ಆದರೆ ಕೈಯಲ್ಲಿ ಬಿಲ್ಲನ್ನು ನೋಡಿ ತಿಳಿಯಿತು ನೀವು ಆಶ್ರಮವಾಸಿಗಳಲ್ಲವೆಂದು. ನನ್ನ ಊಹೆ ಸರಿಯಲ್ಲವೇ? ಈ ಘೋರ ಕಾನನದಲ್ಲಿ ಎತ್ತ ಸಾಗುತ್ತಲಿರುವಿರಿ? ಎಲ್ಲಿಂದ ಬಂದಿರುವಿರಿ” ಎಂದು ಪ್ರಶ್ನಿಸಿದಳು.

“ಏನೆಂದು ಹೇಳಲಿ ತಾಯಿ, ನನ್ನ ಪತ್ನಿಯನ್ನು ನಾವಿಲ್ಲದ ವೇಳೆಯಲ್ಲೊಬ್ಬ ಅಪಹರಿಸಿಕೊಂಡು ಹೋದ. ಅವನ ಹುಡುಕಿ ಅಲೆಯುತ್ತಿದ್ದೇವೆ. ಈ ದಂಡಕಾರಣ್ಯದೊಳಗೆ ಎಲ್ಲಿ ಹೋಗಬೇಕು ಎಲ್ಲಿ ನಿಲ್ಲಬೇಕೆಂದೇ ತಿಳಿಯುತ್ತಿಲ್ಲ. ಉತ್ತರದಿಂದ ಹೊರಟು ದಕ್ಷಿಣದ ಕಡೆಗೆ ಬಂದವರು ನಾವು. ನಾವಾದರೂ ಯುವಕರು, ಆದರೆ ನೀವು ಈ ಇಳಿವಯಸ್ಸಿನಲ್ಲಿ ಇಂತಹ ಅಗಮ್ಯಕಾನನದಲ್ಲಿ ಇಲ್ಲೇನು ಮಾಡುತ್ತಿರುವಿರಿ? ಈಗ ನೀವು ನಮ್ಮನ್ನು ಮತಂಗ ಋಷಿಗಳ ಆಶ್ರಮದವರಿರಬಹುದೆಂದು ಊಹಿಸಿದರಲ್ಲವೇ? ಅಂದಮೇಲೆ ಮತಂಗ ಋಷಿಗಳ ಆಶ್ರಮ ಇಲ್ಲೇ ಎಲ್ಲೋ ಸನಿಹದಲ್ಲಿ ಇರಬೇಕು. ದಯಮಾಡಿ ನಮಗೆ ಅವರ ಆಶ್ರಮಕ್ಕೆ ಹೋಗುವ ದಾರಿ ತೋರಿಸುವಿರಾ?” ಎಂದನು ಶ್ರೀ ರಾಮ.

“ಆಗಲಿ, ನಾನೂ ಕೂಡಾ ಮತಂಗ ಋಷಿಗಳಿಂದ ಆಶ್ರಿತಳು. ಮತಂಗ ಋಷಿಗಳ ಆಶ್ರಮದ ಸಮೀಪದಲ್ಲೇ ನನ್ನದೊಂದು ಕುಠೀರವಿದೆ. ಬಹಳ ಹಿಂದೆ ಜೀವನದಲ್ಲಿ ವೈರಾಗ್ಯವನ್ನು ಹೊಂದಿ ಮುಕ್ತಿಯ ದಾರಿ ಕೋರಿ ಮತಂಗ ಋಷಿಗಳ ಬಳಿ ಹೋದೆ. ಅವರು ಮುಕ್ತಿಗಾಗಿ ಶ್ರೀ ರಾಮನನ್ನು ಜಪಿಸು, ಶ್ರೀ ರಾಮ‌ ಒಂದಲ್ಲ ಒಂದು ದಿನ ನಿನಗೆ ದರ್ಶನ ನೀಡುತ್ತಾನೆ. ಆಗ ನಿನಗೆ ಮುಕ್ತಿ ದೊರೆಯುತ್ತದೆ ಎಂದು ಉಪದೇಶಿಸಿದರು. ಹಾಗಾಗಿ ರಾಮಜಪದಲ್ಲಿ ನಿರತಳಾಗಿ, ರಾಮದರ್ಶನಕ್ಕೆ ಕಾಯುತ್ತಾ ದಿನಕಳೆಯುತ್ತಿದ್ದೇನೆ. ಅವನು ಬಂದರೆ ಅವನಿಗೆ ಉಪಚರಿಸಲು ಏನಾದರೂ ಬೇಕಲ್ಲವೇ? ನನ್ನ ಬಳಿ ಏನೂ ಇಲ್ಲವಾದ್ದರಿಂದ ಇಲ್ಲಿರುವ ಹಣ್ಣುಗಳನ್ನೇ ಕಿತ್ತಿಟ್ಟು ಅವನಿಗಾಗಿ ಕಾಯುತ್ತಿರುವೆ. ಅದಿರಲಿ ನೀವು ಯಾರು? ನಿಮ್ಮ ಮಡದಿಯು ಎಲ್ಲಿ ಅಪಹೃತಳಾದಳು?”ಎಂದು ಪ್ರಶ್ನಿಸಿದಳು.

“ನೀವು ಯಾರ ದರ್ಶನಕ್ಕಾಗಿ ಹಗಲಿರುಳು ಕಾಯುತ್ತಿರುವಿರೋ, ಯಾರ ನಾಮವನ್ನು ನಿಮ್ಮ ನಾಲಿಗೆಯು ಜಪಿಸುತ್ತಿದೆಯೋ ಅವನೇ ಇವನು. ಅಯೋಧ್ಯಾ ಮಹಾರಾಜ ದಶರಥನ ಪುತ್ರ ಶ್ರೀರಾಮಚಂದ್ರ. ನಾನಿವನ ತಮ್ಮ. ನನ್ನ ಅತ್ತಿಗೆ ಸೀತಾಮಾತೆಯೇ ಅಪಹೃತಳು. ಅವರನ್ನು ಹುಡುಕಿಕೊಂಡೇ ಹೊರಟಿದ್ದೇವೆ” ಎಂದನು ಲಕ್ಷ್ಮಣ.

ಈ ಮಾತುಗಳು ಆಕೆಯ ಕಿವಿಗೆ ಬೀಳುತ್ತಿದ್ದಂತೆ ನೆರಿಗೆಗಟ್ಟಿದ ಮುಖದ ನಡುವೆ ಇರುವ ಆಕೆಯ ಕಣ್ಗಳಲ್ಲಿ ಮಿಂಚೊಂದು ಮೂಡಿತು. ಮಿಂಚಿನ ನಂತರ ಮಳೆ ಬರುವಂತೆ ಕಣ್ಣೀರು ಬರಲಾರಂಭಿಸಿತು. “ಶ್ರೀರಾಮ, ಇಷ್ಟು ವರ್ಷಗಳ ನನ್ನ ಕಾಯುವಿಕೆ ಈಗ ಅಂತ್ಯವಾಯಿತು. ನಿನ್ನ ದರ್ಶನದಿಂದ ನನ್ನ ಜೀವನ ಸಾರ್ಥಕವಾಯಿತು. ನಿನ್ನ ದರ್ಶನದಿಂದ ಮೂಡಿದ ಆನಂದಬಾಷ್ಪವೋ ಇದು ಅಥವಾ ನಾ ಜಪಿಸುತ್ತಿದ್ದ ಶ್ರೀರಾಮನಿಗೆ ಇಂತಹ ದುಸ್ಥಿತಿ ಬಂದಿತಲ್ಲ ಎಂಬ ದುಃಖಕ್ಕೆ ಬರುತ್ತಿರುವ ಕಣ್ಣೀರೋ ಇದು ಎಂಬುದೇ ತಿಳಿಯುತ್ತಿಲ್ಲ. ನನಗೆ ದರ್ಶನನೀಡಿ ನನ್ನನ್ನು ಧನ್ಯಳನ್ನಾಗಿಸಿದೆ. ಆದರೆ ಇಂತಹ ದುಸ್ಥಿತಿಯಲ್ಲಿರುವ ನಿನಗೆ ವೃದ್ಧಳಾದ ನನ್ನಿಂದ ಏನೂ ಸಹಾಯ ಮಾಡಲಾಗುತ್ತಿಲ್ಲವೆಂಬ ನೋವು ಕಾಡುತ್ತಿದೆ. ಹೇಳು ರಾಮಚಂದ್ರ ನಾ ಯಾವ ರೀತಿಯಲ್ಲಿ ನಿನಗೆ ಸಹಾಯ ಮಾಡಲಿ?” ಎಂದು ರಾಮಚಂದ್ರನಿಗೆ ನಮಸ್ಕರಿಸಿದಳು.

“ತಾಯಿ, ನನ್ನ ನೋಡದಿದ್ದರೂ ನನಗಾಗಿ ಇಷ್ಟು ವರ್ಷಗಳ ಕಾಲ ಕಾದಿರಲ್ಲಾ, ಈ ನಿಮ್ಮ ತಾಳ್ಮೆ ನನಗೂ ಸ್ಫೂರ್ತಿ ನೀಡಿದೆ. ಪತ್ನಿಯನ್ನು ಕಳೆದುಕೊಂಡು ಮಾನಸಿಕವಾಗಿ ಕುಗ್ಗಿಹೋಗಿ, ಮನಸ್ಸು ಹತೋಟಿಯಲ್ಲಿರದೇ, ಏನು ಮಾಡಬೇಕೆಂದು ತೋಚದೆ, ಅತ್ತಿತ್ತ ಹುಡುಕುತ್ತಾ ಹೊರಟ ನನಗೆ, ನಿಮ್ಮ ತಾಳ್ಮೆಯ ನೋಡಿ ನಾನೂ ತಾಳ್ಮೆಯನ್ನು ಹೊಂದಬೇಕೆಂಬ ಸಂಕಲ್ಪ ಮೂಡಿದೆ. ಇದಕ್ಕಿಂತ ಹೆಚ್ಚಿನ ಸಹಾಯವಾದರೂ ಏನು ಬೇಕು. ವಯೋವೃದ್ಧರಾದ ನಿಮ್ಮ ವಾತ್ಸಲ್ಯವೊಂದಿದ್ದರೆ ಸಾಕು. ನಮಗೆ ಮತಂಗ ಋಷಿಗಳ ಆಶ್ರಮಕ್ಕೆ ಹೋಗುವ ದಾರಿ ತೋರಿಸಿ” ಎಂದನು ರಾಮ.

“ಶ್ರೀರಾಮ, ಮತಂಗ ಋಷಿಗಳ ಆಶ್ರಮಕ್ಕೆ ಸಮೀಪವೇ ನನ್ನ ಕುಠೀರವಿದೆ. ಮೊದಲು ಅಲ್ಲಿಗೆ ಹೋಗೋಣ. ನಿನಗಾಗಿ ಈ ಕಾಡುಗಳಲ್ಲಿ ದೊರೆಯುವ ಹಣ್ಣುಗಳನ್ನು ಶೇಖರಿಸಿಟ್ಟಿದ್ದೇನೆ. ದಯಾಮಾಡಿ ಬರಬೇಕು” ಎಂದು ತನ್ನ ಕುಠೀರಕ್ಕೆ ಕರೆದುಕೊಂಡು ಹೋದಳು. ಅಲ್ಲಿ ತಾನು ಕಾಡಿನಿಂದ ತಂದು ಶೇಖರಿಸಿಟ್ಟ ಹಣ್ಣುಗಳನ್ನು ತೆಗೆದು ಒಂದೊಂದನ್ನೇ ಕಚ್ಚಿ ನೋಡಿ ಸ್ವಾದಿಷ್ಟವಾದ ಹಣ್ಣುಗಳನ್ನು ಮಾತ್ರ ರಾಮಲಕ್ಷ್ಮಣರಿಗೆ ನೀಡಿ ಹಾಲು ತರುವೆ ಕುಳಿತಿರಿ ಎಂದು ಒಳಗೆ ಹೋದಳು.

“ಅಣ್ಣಾ, ಹಣ್ಣುಗಳನ್ನು ಕಚ್ಚಿಕೊಟ್ಟಳಲ್ಲಾ‌, ಅವಳ ಉದ್ದೇಶವೇನೋ ಸರಿ. ಸಿಹಿಯಾದ, ಸ್ವಾದಿಷ್ಟವಾದ ಹಣ್ಣುಗಳನ್ನು ನೀಡಲು ಹೀಗೆ ಮಾಡಿದ್ದಿರಬಹುದು ಆದರೆ ಕಚ್ಚಿದರೆ ಎಂಜಲಾಗುವುದೆಂಬ ಆಲೋಚನೆಯೂ ಆಕೆ ಮಾಡಲಿಲ್ಲವಲ್ಲ” ಎಂದನು ಲಕ್ಷ್ಮಣ.

“ಲಕ್ಷ್ಮಣ, ಒಮ್ಮೆ ಅವಳ ಸ್ಥಾನದಲ್ಲಿ ನಿಂತು ನೋಡು. ಗರ್ಭವತಿಯಾದ ಹೆಣ್ಣು ತನ್ನ ಗರ್ಭದಲ್ಲಿರುವ, ತಾನಿನ್ನೂ ನೋಡದಿರುವ ಮಗುವಿನ ಬಗೆಗೆ ಕಾಳಜಿ ವಹಿಸುತ್ತಾಳೆ. ವಾತ್ಸಲ್ಯ ಹೊಂದಿರುತ್ತಾಳೆ. ಆದರೆ ಅವಳ ತಾಳ್ಮೆ ಕೇವಲ ಒಂಭತ್ತು ತಿಂಗಳು ಮಾತ್ರ. ನಂತರವೂ ಅದೇ ಕಾಳಜಿ, ವಾತ್ಸಲ್ಯವಿದ್ದರೂ ಮಗುವನ್ನು ನೋಡದೆಯೇ ತೋರಿದ ವಾತ್ಸಲ್ಯದ ಅವಧಿ ಕೇವಲ ಒಂಭತ್ತು ತಿಂಗಳು. ಆದರೆ ಈಕೆಯ ಕುರಿತು ಆಲೋಚಿಸು. ಗರ್ಭವತಿಯಾದ ಹೆಣ್ಣು ಮಗುವನ್ನು ನೋಡದೆಯೇ ಒಂಭತ್ತು ತಿಂಗಳು ತಾಳ್ಮೆಯಿಂದ ಇರುತ್ತಾಳಾದರೆ ಈಕೆ ಅದೆಷ್ಟು ವರ್ಷಗಳಿಂದ ನನಗಾಗಿ ತಾಳ್ಮೆಯಿಂದ ಕಾದಿದ್ದಾಳೆ. ತಾಯಿ ತನ್ನ ಮಗುವಿಗೆ ಯಾವುದನ್ನು ಕೊಡಬೇಕು, ಏನನ್ನು ಕೊಡಬಾರದು ಎಂದು ಕಾಳಜಿ ವಹಿಸುವಂತೆ ಇವಳೂ ಸಹ ತಾನು ಪರೀಕ್ಷಿಸಿ ಯೋಗ್ಯವಾದದ್ದನ್ನು ನಮಗೆ ನೀಡಿದ್ದಾಳೆ. ಅಂದಮೇಲೆ ಇವಳೂ ಸಹ ತಾಯಿಯಂತೆಯೇ ಅಲ್ಲವೇ.. ಹಾಗಾಗಿ ಈಕೆ ಪರೀಕ್ಷಿಸಿದ ರೀತಿಯನ್ನು ಲೋಕಾರೂಢಿಯಲ್ಲಿರುವ ಕ್ರಮಕ್ಕೆ ಹೋಲಿಕೆ ಮಾಡಬಾರದು..
ತಾಯಿಯಾದ ಶಬರಿ ಕಚ್ಚಿ ಪರೀಕ್ಷಿಸಿ ನೀಡಿದ ವಾತ್ಸಲ್ಯಭರಿತ ಹಣ್ಣುಗಳು ರಾಮನಿಗೆ ಎಂಜಲಾಗುವುದಾದರೂ ಹೇಗೆ?” ಎಂದು ಫಲ ಸ್ವೀಕರಿಸಿ, ಅವಳಿಗೆ ಮುಕ್ತಿನೀಡಿ ಮುಂದೆ ಹೊರಟರು.

*========================*

ಶಬರೀದತ್ತ ಫಲಾಶನ ರಾಮ….
ಮಂಗಳಕರ ಜಯ ಮಂಗಳ ರಾಮ….

ರಾಮ ರಾಮ ಜಯ ರಾಜಾರಾಮ….
ರಾಮ ರಾಮ ಜಯ ಸೀತಾ ರಾಮ….

Facebook ಕಾಮೆಂಟ್ಸ್

ಲೇಖಕರ ಕುರಿತು

Vikram Jois

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!