ಕಥೆ

ಕೈಲಾಸನಾಥ

ಮಹಾರಾಣಿ ಮಾಣಕಾವತಿ ತನ್ನ ಅಂತಃಪುರದಲ್ಲಿ ಚಿಂತಾಕ್ರಾಂತಳಾಗಿ ಕುಳಿತಿದ್ದಳು. ಆಕೆಯ ಅನ್ಯಮನಸ್ಕತೆಗೆ ಕಾರಣ ದಾಸಿಯರಿಗೂ ತಿಳಿದಿರಲಿಲ್ಲ. ಎರಡು ದಿನಗಳ ಹಿಂದೆಯಷ್ಟೆ ದಿನವಷ್ಟೇ ರಾಜಪರಿವಾರ ಕಾಂಚೀಪುರದ ಪ್ರವಾಸದಿಂದ ಹಿಂದಿರುಗಿತ್ತು. ಹೋಗುವಾಗ ಅತೀ ಉತ್ಸಾಹದ ಚಿಲುಮೆಯಂತಿದ್ದ ರಾಣಿ ಬರುವಾಗ ಚಿಂತೆಯ ಮುದ್ದೆಯಾಗಿದ್ದಳು. ದಾಸಿಯರು ಪರಿಪರಿಯಾಗಿ ವಿಚಾರಿಸಿದರೂ ಏನೂ ಉಪಯೋಗವಾಗಲಿಲ್ಲ. ಇನ್ನು ಮಹಾರಾಜರು ಬಂದು ರಮಿಸಿದಾಗಲೇ ರಾಣಿಯವರು ಸಾಂತ್ವನಗೊಳ್ಳಬಹುದೆಂದು ದಾಸಿಯರು ಮಾತಾಡಿಕೊಳ್ಳುತ್ತಿದ್ದರು. ದಾಸರ ಮುಖಾಂತರ ಮಹಾರಾಜರಿಗೆ ಸೂಜ್ಞವಾಗಿ ತಿಳಿಸಿದರೂ, ಮಹಾರಾಜರೇಕೋ ಇನ್ನೂ ಇತ್ತಕಡೆಗೆ ದಯಮಾಡಿಸುವ ಮನಸ್ಸು ಮಾಡಿಲ್ಲ. ಕಳೆದ ನಾಲ್ಕಾರು ತಿಂಗಳಲ್ಲಿ  ರಾಜ್ಯಾಡಳಿತವನ್ನು ಕಡೆಗಣಿಸಿದ್ದರಿಂದ ಆಸ್ಥಾನ ಸಮಾಲೋಚನೆಗಳಲ್ಲಿ ಮಗ್ನರಾಗುವುದು ಅವರಿಗೂ ಅನಿವಾರ್ಯವಾಗಿತ್ತೇನೋ, ಆದರಿಲ್ಲಿ ರಾಣಿಯವರ ದುಃಖವನ್ನು ನೋಡಲಾಗುತ್ತಿಲ್ಲ. ಮಾತುಕತೆಯೂ ಇಲ್ಲದೇ ಶೂನ್ಯದತ್ತ ನೋಡುತ್ತ ಕುಳಿತರೆ ರಾಣಿಯವರಿಗೆ ಊಟತಿಂಡಿಯ ಪರಿವೆಯೂ ಇರುತ್ತಿರಲಿಲ್ಲ.

ದಾಸಿಯರು ತಮ್ಮ ಊಹಾಪೋಹಗಳಲ್ಲಿ ಮುಳುಗಿದ್ದರೂ ಮಹಾರಾಣಿಗೆ ಮಾತ್ರ ಅದರ ಪರಿವೆಯೇ ಇರಲಿಲ್ಲ. ಆಕೆಯ ಮನಸ್ಸೆಲ್ಲೋ ಕಳೆದುಹೋದಂತಿತ್ತು.  ನಾಲ್ಕು ದಿನಗಳಲ್ಲಿ ತನ್ನಲ್ಲಾದ ಬದಲಾವಣೆಯಿಂದ ಆಕೆಗೇ ಇರುಸುಮುರುಸಾಗಿತ್ತು. ಗಾಂಭೀರ್ಯದಿಂದಿರಲು ಎಷ್ಟು ಪ್ರಯತ್ನಿಸಿದರೂ ಮನಸ್ಸಿನ ತಳಮಳ ಮುಖದಲ್ಲಿ ವ್ಯಕ್ತವಾಗದೇ ಇರಲಿಲ್ಲ. ಆದ್ದರಿಂದಲೇ ಆದಷ್ಟು ದಾಸಿಯರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಳು. ತಳಮಳಕ್ಕೆ ಸಮಾಧಾನ ಹೇಳುವುದು ಮಹಾರಾಜರಿಂದ ಮಾತ್ರ ಸಾಧ್ಯವೆನ್ನುವುದು ಆಕೆಗೇನೂ ತಿಳಿಯದ್ದಲ್ಲ. ಆದ್ದರಿಂದಲೇ ಅವರ ಬರುವಿಕೆಗಾಗಿ ಕಾಯುವುದರ ವಿನಹ ಪರ್ಯಾಯವಿರಲಿಲ್ಲ. ಮಹಾರಾಣಿಯ ಮನಸ್ಸು ಹಿಂದಕ್ಕೋಡಿತು. ತಾನು ಮಹಾರಾಣಿಯಾಗಿದ್ದು ನಿನ್ನೆ,ಮೊನ್ನೆ ನಡೆದಹಾಗಿದೆ.

ಮದುವೆಯಾದಾಗ ಮಾಣಕಾವತಿಗಿನ್ನೂ ಚಿಕ್ಕವಯಸ್ಸು. ಚಾಲುಕ್ಯರ ಸಾಮಂತನಾದ ಇಂದ್ರನ ತಮ್ಮ ಕೃಷ್ಣನೇ ಮಾಣಕಾವತಿಯನ್ನು ಬಯಸಿದಾಗ ಅವಳ ಅಪ್ಪ, ಅಮ್ಮನ ಸಡಗರ ಅಷ್ಟಿಷ್ಟಲ್ಲ. ಅವರ ಮದುವೆಯಾದ ಕೆಲವೇ ದಿನಗಳಲ್ಲಿ ಸಾಮಂತನಾದ ಇಂದ್ರ ಚಾಲುಕ್ಯರ ಮೇಲೆ ಯುದ್ಧ ಘೋಷಿಸಿದ್ದ. ಅವನ ಮಗ ದಂತಿದುರ್ಗ ಚಾಲುಕ್ಯರನ್ನು ಸೋಲಿಸಿ ಅವರ ಪ್ರಾಂತ್ಯಗಳಾದ ಗುಜರಾತ್, ಕೊಲ್ಲಾಪುರ, ಸಾತಾರ, ಬಾದಾಮಿಗಳನ್ನು ವಶಪಡಿಸಿಕೊಂಡು ರಾಷ್ಟ್ರಕೂಟ ಸಾಮ್ರಾಜ್ಯವನ್ನು ಸ್ಥಾಪಿಸಿದನು. ಅಂದಿನಿಂದ ಇಲ್ಲಿಯವರೆಗೂ ಮಾನ್ಯಖೇಟವೇ ರಾಜಧಾನಿ. ನಿರಂತರ ಯುದ್ಧಗಳಿಂದ ಅನಾರೊಗ್ಯಗೊಂಡ ದಂತಿದುರ್ಗ ಚಿಕ್ಕವಯಸ್ಸಿನಲ್ಲೇ ತೀರಿಕೊಂಡಾಗ, ಅವನಿಗೆ ಉತ್ತರಾಧಿಕಾರರಿಯಿಲ್ಲದೇ ಕೃಷ್ಣ ಪಟ್ಟವನ್ನೇರಿ ಮಾಣಕಾವತಿ ಮಹಾರಾಣಿಯಾದಳು. ನಂತರ ಸಹ ಮಹಾರಾಜ ಕೃಷ್ಣನ ಲಕ್ಷ್ಯವೆಲ್ಲ ಸಾಮ್ರಾಜ್ಯವನ್ನು ಬೆಳೆಸುವತ್ತಲೇ. ಉತ್ತರದಲ್ಲಿ ಉಜ್ಜಯನಿಯವರೆಗೂ ಸಾಮ್ರಾಜ್ಯವಿಸ್ತಾರದ ನಂತರ ಮಹಾರಾಜ ಕೃಷ್ಣನಿಗೆ ಶುಭತುಂಗ, ಅಕಾಲವರ್ಷನೆಂಬ  ಬಿರುದುಗಳು ಒಲಿದುಬಂದವು. ತದನಂತರ ದಕ್ಷಿಣದತ್ತ ಸಾಗಿದ ದಿಗ್ವಿಜಯ, ತಲಕಾಡಿನಲ್ಲಿರುವ ಗಂಗರ ರಾಜನಾದ ಶ್ರೀಪುರುಷನನ್ನು ಸೋಲಿಸುವುದರೊಂದಿಗೆ ಕೊನೆಗೊಂಡಿತು. ತನ್ನ ಶರಣಾಗತಿಯನ್ನು ಪ್ರಕಟಿಸಿದ ಶ್ರೀಪುರುಷನು ಕೃಷ್ಣನನ್ನು ಪರಿವಾರದೊಂದಿಗೆ ಕಾಂಚೀಪುರಕ್ಕೆ ಆಹ್ವಾನಿಸಿದನು. ದೇಗುಲಗಳ ನಗರಿಯಾದ ಕಾಂಚೀಪುರಕ್ಕೆ ಹೋಗುವುದು ಮಾಣಕಾವತಿಗೂ ಸಂತಸತಂದಿತ್ತು. ಅನೇಕ ವರ್ಷಗಳ ನಂತರ ಮಹಾರಾಜ ಸಹ ರಾಜಕಾರಣದ ಜಂಜಡವಿಲ್ಲದೆ ಪ್ರಸನ್ನರಾಗಿದ್ದ. ಸಾಮಂತನಾದ ಶ್ರೀಪುರುಷನು ತನ್ನ ಪರಿವಾರದೊಂದಿಗೆ ರಾಷ್ಟ್ರಕೂಟರನ್ನು ಯಥೋಚಿತವಾಗಿ ಆದರಿಸಿದನು. ರಾಜನ ಸೂಚನೆಯಂತೆ ಆತನ ರಾಣಿ  ನೇತ್ರಾವತಿ ಮಾಣಕಾವತಿಗೆ ಜೊತೆಯಾದಳು. ಗಂಗವಂಶದ ಮಹಾರಾಣಿಯಾದ ತಾನು ಯುದ್ಧದಲ್ಲಿ ಸೋತದ್ದೇ ನೆಪವಾಗಿ ಇನ್ನೊಬ್ಬ ರಾಣಿಯ ಆಶ್ರಿತಳಂತೆ ವ್ಯವಹರಿಸುವುದು ನೇತ್ರಾವತಿಗೆ ಸರಿಬರಲಿಲ್ಲ. ಆದರೆ ಗತ್ಯಂತರವಿಲ್ಲದೇ  ಮಾಣಕಾವತಿಗೆ ಜೊತೆಯಾದರೂ ಅವಳು ತನ್ನ ಬಿಗುಮಾನವನ್ನು ಬಿಡಲಿಲ್ಲ. ಸೂಕ್ಷ್ಮಸಂವೇದಿನಿಯಾದ ಮಾಣಕಾವತಿಗೆ ಇದರಿಂದ ಸ್ವಲ್ಪ ಬೇಜಾರಾದರೂ ಅವಳದನ್ನು ಅರ್ಥೈಸಿಕೊಂಡು ಆದಷ್ಟು ನೇತ್ರಾವತಿಯನ್ನು ಅನುಸರಿಸಿಕೊಂಡು ಹೋದಳು.ಕಾಂಚಿಪುರದ ದೇವಾಲಯಗಳ ದರ್ಶನಗೈಯುತ್ತ ಕೊನೆಯದಾಗಿ ಎಲ್ಲರೂ ಕೈಲಾಸನಾಥ ಮಂದಿರಕ್ಕೆ ಬಂದರು.  ಕೈಲಾಸನಾಥ ಮಂದಿರವನ್ನು ನೋಡುತ್ತಿದ್ದಂತೆ ರಾಷ್ಟ್ರಕೂಟ ಪರಿವಾರವು ದಿಗ್ಭ್ರಮೆಗೊಂಡಿತು. ಅಂತಹ ದೇವಸ್ಥಾನವನ್ನು ಅವರು ಇದುವರೆಗೂ ನೋಡಿರಲಿಲ್ಲ. ಕೈಲಾಸನಾಥ ದೇವಸ್ಥಾನವನ್ನು ಕಟ್ಟಿಸಿದ್ದು ಪಲ್ಲವರ ರಾಜನಾದ ರಾಜಸಿಂಹ.ಕಾಂಚೀಪುರದಲ್ಲಿರುವ ಎಲ್ಲ ದೇವಾಲಯಗಳಲ್ಲಿ ಇದು ಅತ್ಯಂತ ಸುಂದರವಾದದ್ದು. ವಿಶಾಲವಾದ ಗರ್ಭಗುಡಿ, ಅದರ ಮೇಲೆ ಸುಂದರ ವಿಮಾನ, ಕಂಬಗಳಿಂದ ಕೂಡಿದ ಮಂಟಪ, ಸುತ್ತಲ ಪ್ರಾಕಾರದಲ್ಲಿರುವ ಅನೇಕ ಗುಡಿಗಳು, ಮರಳುಗಲ್ಲಿನಿಂದ ಮಾಡಲ್ಪತ್ತಿರುವ ಶಿವವಿಗ್ರಹಗಳು ವರ್ಣನಾತೀತ. ಈಗ ನೇತ್ರಾವತಿ ಅತೀ ಉತ್ಸಹದಿಂದ ವಿವರಿಸುವುದನ್ನು ಗಮನಿಸಿ ಮಾಣಕಾವತಿಯೂ ಪ್ರಸನ್ನಳಾದಳು.ಇಬ್ಬರೂ ಅತ್ಮೀಯ ಗೆಳತಿಯರಂತೆ ಹರಟಿದರು. ದೇವಸ್ಥಾನದಿಂದ ಹೊರಬಂದು ಇನ್ನೇನು ಒಬ್ಬರಿಗೊಬ್ಬರು ಬೀಳ್ಕೊಂಡು ಹೊರಡಬೇಕೆನ್ನುವಷ್ಟರಲ್ಲಿ, ರಾಣಿ ನೇತ್ರಾವತಿಯು ಮಾತಿನ ಭರದಲ್ಲಿಯೆಂಬಂತೆ, ಮಾಣಕಾವತಿಯನ್ನುದ್ದೇಶಿಸಿ, “ ತರಹದ ಭವ್ಯ ದೇವಸ್ಥಾನಗಳು ನಿಮ್ಮ ರಾಜ್ಯದಲ್ಲಿವೆಯೇ, ನಿಮ್ಮ ವಂಶದವರು ಇಂತಹದನ್ನು ಕಟ್ಟಿಸಿದ್ದಾರೆಯೇಎಂದುಬಿಟ್ಟಳು. ಮಾಣಕಾವತಿ ಒಮ್ಮಿಂದೊಮ್ಮೆಲೆ ಮಂಕಾದಳು. ಕಳೆಗುಂದಿದ ಮಾಣಕಾವತಿಯ ಮುಖವನ್ನು ನೋಡಿ ನೇತ್ರಾವತಿಯು ಹೆಮ್ಮೆಯಿಂದ ಬೀಗಿದಳು. ಮಾಣಕಾವತಿ ಮಾತ್ರ ಅದನ್ನು ಗಮನಿಸದೇ ತನ್ನಲ್ಲಿಯೇ ಮುಳುಗಿ ವಿಚಾರಮಗ್ನಳಾದಳು. ರಾಷ್ಟ್ರಕೂಟರ ರಾಜ್ಯದಲ್ಲೆಲ್ಲೂ ಇಂತಹ ದೇವಾಲಯವಿಲ್ಲವೆಂಬುದು ಆಕೆಗೆ ದೊಡ್ಡ ಕೊರತೆಯಾಗಿ ಕಂಡಿತು.  ಪ್ರಯಾಣದಲ್ಲೆಲ್ಲೂ ಮಹಾರಾಜನೊಂದಿಗೆ ಆಕೆಗೆ ಮಾತಾಡಲೇ ಆಗಲಿಲ್ಲ. ಮಾನ್ಯಖೇಟಕ್ಕೆ ಬಂದಮೇಲೂ  ಅವಳ ಕಿವಿಯಲ್ಲಿ ನೇತ್ರಾವತಿ ಹೇಳಿದ ಮಾತುಗಳೆ ಗುಣುಗುಣಿಸುತ್ತಿದ್ದವು.

ಮತ್ತೆರಡು ದಿನಗಳು ಕಳೆದ ನಂತರ ರಾಣಿಯ ಅಂತಃಪುರಕ್ಕೆ ಮಹಾರಾಜ ಕೃಷ್ಣನ ಆಗಮನವಾಯಿತು. ಮಾಣಕಾವತಿಯ ಅನ್ಯಮನಸ್ಕತೆ ಅವನ ಗಮನಕ್ಕೂ ಬಂದು ಒಲುಮೆಯಿಂದ ವಿಚಾರಿಸುತ್ತಿದ್ದಂತೆ, ಇಷ್ಟುದಿನಗಳಿಂದ ಮನಸ್ಸಿನಲ್ಲಿ ಹುದುಗಿಸಿದ್ದನ್ನೆಲ್ಲ ಆಕೆ ಹೇಳಿಬಿಟ್ಟಳು. ಕೇಳಿ ಮಹಾರಾಜ ಸಹ ಗಂಭೀರನಾದ. “ಅಂತಹ ದೇಗುಲವೊಂದು ನಮ್ಮ ರಾಜ್ಯದಲ್ಲಿಲ್ಲದಿರುವುದು ನಿಜವೇಅವನ ಮಾತನ್ನು ಮಧ್ಯದಲ್ಲೇ ತುಂಡರಿಸಿ ಮಾಣಕಾವತಿ ಉತ್ಸಾಹದಿಂದ ಹೇಳಿದಳುಹಾಗಾದರೆ ನಾವು ಅದಕ್ಕಿಂತ ದೊಡ್ಡ ದೇವಸ್ಥಾನವೊಂದನ್ನು ಕಟ್ಟಿಸಿಬಿಡೋಣ“. ಮಹಾರಾಜ ಶಾಂತನಾಗಿದೇವಸ್ಥಾನವನ್ನು ಕಟ್ಟಿಸುವುದು ಅಷ್ಟು ಸುಲಭವಲ್ಲ. ಈಗಾಗಲೇ ಯುದ್ಧದಿಂದಾಗಿ ನಾನು ಬಳಲಿದ್ದೇನೆ. ಅದೂಅಲ್ಲದೆ ರಾಜ್ಯಭಾರದ ಕಡೆಗೆ ಗಮನಹರಿಸಬೇಕಾಗಿರುವುದು ಸದ್ಯದ  ಅವಶ್ಯಕತೆಯಾಗಿದೆ. ಕೆಲ ಸಮಯದ ನಂತರ ಸಮಾಲೋಚಿಸೋಣರಮಿಸುವಂತಿದ್ದ ಮಹಾರಾಜನ ಮಾತುಗಳನ್ನು ಕೇಳಿ ಅಸಮಾಧಾನವಾದರೂ ಮಾಣಕಾವತಿಯು ಎದುರುಹೇಳಲಾಗದೆ ಹ್ಞೂಂಗುಟ್ಟಿದಳು.

ದಿನಗಳುರುಳಿ ತಿಂಗಳುಗಳೆ ಕಳೆದರೂ ಮಹಾರಾಜನಿಂದ ದೇವಸ್ಥಾನದ ನಿರ್ಮಾಣದ ಪ್ರಸ್ತಾಪವೇ ಬರದೆ ಮಾಣಕಾವತಿ ಕಂಗೆಟ್ಟಳು. ಅವಳು ಕೆಲವೊಮ್ಮೆ ಕೆದಕಿ ಕೇಳಿದಾಗ ಮಹಾರಾಜನು ಹೇಳಿದ ಕಾರಣಗಳೆಲ್ಲ ಅವಳಿಗೆ ಸಬೂಬುಗಳಂತೆ ಭಾಸ.

ಕಾಂಚೀಪುರದಿಂದ ಹಿಂದಿರುಗಿ ಆರು ತಿಂಗಳುಗಳೆ ಕಳೆದಿದ್ದವು. ಮಹಾರಾಜ ಅಂತಃಪುರಕ್ಕೆ ಬಂದಾಗ ಮಾಣಕಾವತಿಯು ಎಂದಿನಂತೆ ಅವನನ್ನು ಆದರಿಸಲಿಲ್ಲ. ಕನಸುಮನಸಿನಲ್ಲಿ ಕಾಡುವ ಕೈಲಾಸನಾಥ ದೇವಾಲಯ ಹಾಗೂ ರಾಣಿ ನೇತ್ರಾವತಿಯ ಮಾತುಗಳಿಂದ ಅವಳಿಗೆ ಬಿಡುಗಡೆ ಬೇಕಿತ್ತು.  ಅವಳ ಮಾತುಗಳು ಮೊನಚಾಗಿದ್ದು ಕಂಡು ಮಹಾರಾಜನು ಅನುನಯಿಸಿದಂತೆ ಹೇಳಿದನಿನ್ನ ಆಸೆಯನ್ನು ನೆರವೇರಿಸಬೇಕೆಂಬುದೇ ನನ್ನ ಇಚ್ಛೆ. ಆದರೆ ನಮ್ಮ ರಾಜ್ಯದಲ್ಲಿ ಕಲ್ಲಿನ ಕೆತ್ತನೆಗಳಿರುವ ದೇಗುಲಗಳಿಲ್ಲ. ಶಿಲ್ಪಕಾರರ ಸಂಖ್ಯೆಯೂ ಕಡಿಮೆ. ಬಾದಾಮಿಯಲ್ಲಿರುವಂತೆ ನಮ್ಮ ಏಲಾಪುರದಲ್ಲೂ ಗುಡ್ಡಗಳನ್ನು ಕೊರೆದು ಗುಹೆಗಳನ್ನು ನಿರ್ಮಿಸಿದ್ದಾರೆ. ಅವುಗಳಲ್ಲೂ ಸುಂದರವಾದ ಕೆತ್ತನೆಗಳಿವೆ. ಅವುಗಳಲ್ಲಿ ಹೆಚ್ಚಿನವು ಬೌದ್ಧಸಂನ್ಯಾಸಿಗಳ ದಿನಕ್ರಮಗಳಿಗನುಗುಣವಾಗಿ ರೂಪುಗೊಂಡವು. ಸುಮಾರು ಇನ್ನೂರು ವರ್ಷಗಳ ಹಿಂದೆ ಚಾಲುಕ್ಯರ ಪ್ರೋತ್ಸಾಹದಿಂದ ಶುರುವಾದ ಗುಹಾನಿರ್ಮಾಣ ಇಂದಿಗೂ ಮುಂದುವರೆದಿದೆ. ಬೌದ್ಧ ಗುಹೆಗಳಲ್ಲದೆಇತ್ತೀಚೆಗೆ ಸನಾತನ ಧರ್ಮದವರಿಗಾಗಿಯೂ ಗುಹೆಗಳನ್ನು ನಿರ್ಮಿಸಿದ್ದಾರೆಂದು ಕೇಳಿದ್ದೇನೆ. ಅಲ್ಲಿಗೆ ಬೇಕಾದರೆ ಹೋಗಿಬರೋಣವಂತೆ. ಈಗ ಮಾತ್ರ ಮಹಾರಾಣಿ ಕೆರಳಿದಳು. “ನನಗೆ ಬೇಕಾದದ್ದು ಪೂರ್ಣಪ್ರಮಾಣದ ದೇವಸ್ಥಾನವೆ ಹೊರತು, ಗುಹೆಯಲ್ಲ. ಇದೊಂದು ಹಂಬಲ ನನ್ನನ್ನು ಕೊರೆಯುತ್ತಿದೆ. ದೇವಸ್ಥಾನದ ಗೋಪುರವನ್ನು ನೋಡುವವ್ರೆಗೂ ನಾನು ಅನ್ನಾಹಾರಗಳನ್ನು ತ್ಯಜಿಸುತ್ತೇನೆಎಂದು ಘೋಷಿಸಿಬಿಟ್ಟಳು. ಮಹಾರಾಜ ದಿಗ್ಭ್ರಮೆಗೊಂಡ. ಇಷ್ಟು ಕ್ಷಿಪ್ರವಾಗಿ ದೇವಸ್ಥಾನದ ನಿರ್ಮಾಣ ಸಾಧ್ಯವಿಲ್ಲವೆಂದು ಪರಿಪರಿಯಾಗಿ ತಿಳಿಸಿಹೇಳಿದರೂ ಮಹಾರಾಣಿಯು ತನ್ನ ನಿರ್ಧಾರವನ್ನು ಬದಲಿಸಲಿಲ್ಲ.  

ಒಂದು ವಾರ ಕಳೆದರೂ ಮಹಾರಾಣಿಯು ತನ್ನ ನಿರ್ಧಾರವನ್ನು ಸಡಿಲಿಸಲಿಲ್ಲ. ದಿನದಿಂದ ದಿನಕ್ಕೆ ಆಕೆ ಕ್ಷೀಣವಾಗತೊಡಗಿದಳು. ಮಹಾರಾಜ ತನಗೊದಗಿದ ಸಮಸ್ಯೆಯನ್ನು ಮಂತ್ರಿಗಳ ಜೊತೆ ಚರ್ಚಿಸಿದ. ಅವರ ಸಲಹೆಯಂತೆ ಪರಿಹಾರವನ್ನು ಕೋರಿ ರಾಜ್ಯದಲ್ಲೆಲ್ಲ ಡಂಗೂರವನ್ನು ಸಾರಿದ್ದೂ ಆಯಿತು. ಪರಿಣಾಮ ಮಾತ್ರ ಶೂನ್ಯ. ಈಗ ಮಹಾರಾಜನಿಗೆ ನಿಜವಾಗಿಯೂ ಪಶ್ಚಾತ್ತಾಪವಾಗುತ್ತಿತ್ತು. ಮಹಾರಾಣಿಯನ್ನು ಕಡೆಗಣಿಸಿದೆನೆಂಬ ಭಾವನೆಯೆ ಅವನನ್ನು ಸತಾಯಿಸುತ್ತಿತ್ತು.

ಚಿಂತಾಕ್ರಾಂತನಾಗಿ ಕುಳಿತ ಮಹಾರಾಜನನ್ನು ಭೇಟಿಯಾಗಲು ಏಲಾಪುರದಿಂದ ಒಬ್ಬ ಶಿಲ್ಪಿಯು ಬಂದಿದ್ದಾನೆ ಎಂದು ಪಹರೆಯವನು ಬಂದು ಹೇಳಿದ. ಶಿಲ್ಪಿ ಎಂದೊಡನೆ ಮಹಾರಾಜನ ಕಿವಿ ನಿಮಿರಿತು. ತಕ್ಷಣ ಆತನನ್ನು ಭೇಟಿಯಾದ.

ಮಹಾರಾಜನಿಗೆ ವಂದನೆಗಳನ್ನು ಸಲ್ಲಿಸಿದ ಶಿಲ್ಪಿ ಹೇಳಿದನುಮಹಾಸ್ವಾಮಿ, ಮಹಾರಾಣಿಯವರ ಬಯಕೆ ನನಗೆ ನಿನ್ನೆಯಷ್ಟೆ ಗೊತ್ತಾಯಿತು. ಇದು ದೇವರ ಸಂಕಲ್ಪವೆ ಇರುವಂತಿದೆ, ನಾನು ತಕ್ಷಣ ಹೊರಟುಬಂದೆ

ಒಗಟಿನಂತಿರುವ ಆತನ ಮಾತುಗಳು ಮಹಾರಾಜನಿಗೆ ಅರ್ಥವಾಗಲಿಲ್ಲ. ಅದನ್ನರಿತ ಆಗಂತುಕ ಮುಂದುವರಿಸಿದನಾನು ಮಹಾಬಲಿಪುರದವನು. ತಲೆತಲಾಂತರದಿಂದ ನಮ್ಮ ವಂಶದವರು ಶಿಲ್ಪಕಲೆಯನ್ನೇ ಜೀವನಾಧಾರವಾಗಿಸಿಕೊಂಡವರು. ನೀವು ಕಾಂಚೀಪುರಕ್ಕೆ ಬಂದಾಗ, ನಾನೂ ಸಹ ಅಲ್ಲಿ ಬಂದಿದ್ದೆ. ನಿಮ್ಮ ಸೈನ್ಯದಲ್ಲಿರುವ ಕೆಲವರಿಂದ ಏಲಾಪುರದ ಗುಹೆಗಳಬಗ್ಗೆ ಕೇಳಿ ಕುತೂಹಲದಿಂದ ಅವುಗಳನ್ನು ನೋಡುವ ಆಸೆಯಿಂದ ಬಂದೆ. ನಿಮಗೀಗಾಗಲೇ ಗೊತ್ತಿರಬಹುದು, ಮಹಾಬಲಿಪುರದಲ್ಲಿರುವ ಗುಡ್ಡಗಳಲ್ಲಿ ಎಲ್ಲ ಕಡೆಯೂ ಶಿಲ್ಪಗಳನ್ನು ಕೆತ್ತಲಾಗಿದೆ. ಏಲಾಪುರದ ಗುಡ್ಡಗಳನ್ನು ನೋಡುತ್ತಿದ್ದಂತೆ ನನಗೆ ಅತೀವ ಆನಂದವಾಯಿತು. ಆದರೇಕೋ ನನಗೆ ಗುಹೆ ನಿರ್ಮಾಣ ಅಷ್ಟಾಗಿ ಹಿಡಿಸಲಿಲ್ಲ. ಒಂದು ಹೊಸ ಪ್ರಯೋಗ ಮಾಡಲು ನಿರ್ಧರಿಸಿದೆ. ದೊಡ್ಡ ಬಂಡೆಯೊಂದನ್ನು ಮೇಲಿನಿಂದ ಕೊರೆಯುತ್ತ ದೇವಾಲಯವನ್ನು ನಿರ್ಮಿಸುವುದು. ರೀತಿಯಾದ ಕೆಲವು ಮಾದರಿಗಳನ್ನು ಮಹಾಬಲಿಪುರದಲ್ಲಿ ನಮ್ಮ ಹಿರಿಯರು ಮಾಡಿದ್ದಾರೆ, ಆದರೆ ಅವೆಲ್ಲ ಸಣ್ಣ ಬಂಡೆಗಲ್ಲುಗಳು.  ಕಳೆದ ಆರು ತಿಂಗಳಲ್ಲಿ ನನ್ನ ಸಂಗಡಿಗರೊಂದಿಗೆ ನಾನು ದೇವಾಲಯವೊಂದರ ಶಿಖರವೊಂದನ್ನು ಕೆತ್ತಿದ್ದೇನೆ. ಮಹಾರಾಣಿಯವರ ಗೋಪುರ ನೋಡುವ ಬಯಕೆ ಪೂರೈಸುತ್ತದೆ. ಇದನ್ನೇ ನಾನು ದೇವರ ಸಂಕಲ್ಪವೆಂದದ್ದು“.

ಮಹಾರಾಜನಿಗಾದ ಆನಂದ ಅಷ್ಟಿಷ್ಟಲ್ಲ. ತನ್ನ ಸ್ಥಾನದಿಂದೆದ್ದು ಶಿಲ್ಪಿಯನ್ನು ಆಲಂಗಿಸಿದನು. ಅಲ್ಲೇ ಕುಳಿತಿದ್ದ ಮಂತ್ರಿಗಳು ಕೇಳಿದರು, ” ತಮ್ಮ ಹೆಸರೇನು ಶಿಲ್ಪಿಗಳೆ?”,

ಆತ ನಗುತ್ತ ಹೇಳಿದ,”ಹೆಸರಲ್ಲೇನಿದೆ ಮಹಾಸ್ವಾಮಿ?, ಶಿಲ್ಪಿ ಅನ್ನಿ ಸಾಕು“.

ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಮಂತ್ರಿಗಳಿಗೆ ಹೇಳಿ ಮಹಾರಾಜನು ಅಂತಃಪುರದತ್ತ ಧಾವಿಸಿದ. ನಿಃಶಕ್ತಿಯಿಂದಾಗಿ ತೂಗುಮಂಚದಲ್ಲಿ ಒರಗಿಕೊಂಡಿದ್ದ ಮಾಣಕವತಿಯನ್ನು ಸಮೀಪಿಸಿದ, ” ಮಹಾರಾಣಿ, ನಾವೀಗ ಏಲಾಪುರಕ್ಕೆ ಹೋಗಬೇಕಾಗಿದೆ, ನಿನ್ನ ಆಸೆ ನೆರವೇರುವ ಕಾಲ ಸಮೀಪಿಸಿದೆ.”ಉದ್ವೇಗದಿಂದ ಮಾತಾಡಲು ಪ್ರಯತ್ನಿಸಿದ ಮಹಾರಾಣಿಗೆ ಸುಮ್ಮನಿರಲು ಹೇಳಿ, ದಾಸಿಯರಿಗೆ ಕೊಡಾಬೇಕಾದ ಸೂಚನೆಗಳನ್ನು ಕೊಟ್ಟು ಮಹಾರಾಜ ಹಿಂತಿರುಗಿದ. ಒಂದಿಡಿ ದಿನದ ಪ್ರಯಾಣವನ್ನು ಪೂರೈಸಿ, ಏಲಪುರವನ್ನು ತಲುಪಿದಾಗ  ಆಗಲೇ ಸಂಜೆಯಾಗಿತ್ತು.

ಶಿಲ್ಪಿಯು ತೋರಿದತ್ತ ಎಲ್ಲರೂ ತಲೆಯೆತ್ತಿ ನೋಡಿದರು. ಗೋಪುರವನ್ನು ಕಂಡ ಮಹಾರಾಣಿ ಮಾಣಕಾವತಿ ಸಂಭ್ರಮ, ಸಂತೋಷ ಒಟ್ಟಿಗೇ ಮೇಳೈಸಿದಂತೆ ಅಳಲಾರಂಭಿಸಿದಳು. ಮಹಾರಾಜನು ಅವಳನ್ನು ಸಂತೈಸಿ ಜೊತೆಗೆ ತಂದಿದ್ದ ಹಣ್ಣಿನ ರಸ ಕುಡಿಸಿದನು.

Facebook ಕಾಮೆಂಟ್ಸ್

ಲೇಖಕರ ಕುರಿತು

Usha Jogalekar

ಉತ್ತರ ಕರ್ನಾಟಕದ ಗದಗಿನಲ್ಲಿ ಬೆಳೆದಿದ್ದು. ಸದ್ಯಕ್ಕೆ ಪುಣೆಯಲ್ಲಿ ವಾಸ. ಕಂಪ್ಯೂಟರ್ ಎಂಜಿನಿಯರಿಂಗ್ ಮಾಡಿ ಕಾಲೇಜೊಂದರಲ್ಲಿ ಅಸಿಸ್ಟಂಟ್ ಪ್ರೊಫೆಸರ್. ಓದು, ಭರತನಾಟ್ಯ, ಪ್ರವಾಸ ಆಸಕ್ತಿಯ ವಿಷಯಗಳು. ಚಿಕ್ಕ ಕಥೆ, ಲೇಖನ ಬರೆಯುವ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!