ಅಂಕಣ ಕಥೆ

ಮರಣದ ನಂತರವೂ ದೇಶವನ್ನು ಕಾಯ್ದ ಯೋಧ

(ಯಾವುದೇ ಉತ್ಪ್ರೇಕ್ಷೆ ಇಲ್ಲದ, ಮರಣದ ನಂತರವೂ ಪ್ರಕಟವಾದ ಯೋಧನೋರ್ವನ ಆತ್ಮದ ಕಥೆ.)

“ಆತ್ಮ ಕಥೆ” ಎಂದಾಕ್ಷಣ ಸಾಹಿತಿಗಳು, ರಾಜಕಾರಣಿಗಳು ತಮ್ತಮ್ಮ ಜೀವನದ ಬಗ್ಗೆ ಬರೆದುಕೊಳ್ಳುವ ಕಥೆ ಎಂದು ಭಾವಿಸಬೇಡಿ. ಇದೀಗ ನಿಮ್ಮ ಮುಂದೆ ಪ್ರಸ್ತುತ ಪಡೆಸುತ್ತಿರುವ ಕಥೆ ನಂಬಲು ಅಸಾಧ್ಯವಾದ, ಯಾವುದೇ ಉತ್ಪ್ರೇಕ್ಷೆ ಇಲ್ಲದ, ಯೋಧನೋರ್ವನ ಮರಣಾನಂತರದ ಕಥೆ ನೈಜ ಘಟನೆಗಳನ್ನಾಧರಿಸಿ ಬರೆದಿರುವಂತದ್ದು. ಮರಣದ ನಂತರವೂ ಅಸ್ತಿತ್ವವಿರುತ್ತದೆಂದು ಭಾರತದಲ್ಲಿನ ಧಾರ್ಮಿಕ ನಂಬಿಕೆ. ಆತ್ಮದ ಕುರಿತಾಗೇ ಸನಾತನ ಧರ್ಮ ತನ್ನ ಆಳವಾದ ವೈಚಾರಿಕತೆಯನ್ನು ಹೊಂದಿದೆ.
ದೇಹದೊಳಗೊಂದು ಆತ್ಮವಿರುತ್ತದೆ. ಆತ್ಮದ ಇಚ್ಛಾನುಸಾರವಾಗಿ, ಪಾಪಪುಣ್ಯವನ್ಬು ಅನುಭವಿಸುವುದಕ್ಕಾಗಿ ಆತ್ಮವು ದೇಹವನ್ನು ಪಡೆಯುತ್ತಾನೆ. ಹೀಗೆ ಬಹಳ ಆಳವಾಗಿ ಆತ್ಮದ ಕುರಿತಾದ ಪ್ರಸ್ತಾಪನೆಯನ್ನು ಸನಾತನ ಧರ್ಮದಲ್ಲಿ ಕಾಣಬಹುದು. ಆತ್ಮವು ದೇಹವನ್ನು ತೊರೆದ ನಂತರ ಮುಂದೆ ಮತ್ತೊಂದು ದೇಹ ಸಿಗುವವರೆಗಿನ ನಡುವಿನ ಸ್ಥಿತಿಯನ್ನು “ಪ್ರೇತಜನ್ಮ” ಎನ್ನಲಾಗುತ್ತದೆ. ಅರ್ಥಾತ್‌ “ಪ್ರ ಇತಃ – ಪ್ರೇತಃ, ಕನ್ನಡದಲ್ಲಿ ಇಲ್ಲಿಂದ ಮುಂದಕ್ಕೆ” ಎನ್ನುವ ಅರ್ಥ. ಇರಲಿ, ಇಲ್ಲಿನ ರೋಚಕ ವಿಷಯವೇ ಬೇರೆ‌.

ಅವನೊಬ್ಬ ಯೋಧ. ಸ್ವಾತಂತ್ರ್ಯಾ ಪೂರ್ವದಲ್ಲಿ ಈಗಿನ ಪಾಕಿಸ್ತಾನದ ಪಂಜಾಬಿನ ಪ್ರಾಂತ್ಯದಲ್ಲಿ ಅವನ ಜನನವಾಯಿತು. ಭಾರತ ಮತ್ತು ಪಾಕ್ ಇಬ್ಭಾಗವಾದಾಗ ಅವನ ಕುಟುಂಬದವರು ಭಾರತದ ಪಂಜಾಬ್ ರಾಜ್ಯಕ್ಕೆ ಬಂದು ನೆಲೆಸಿದರು. ಅವನು ಸೈನ್ಯದಲ್ಲಿ ಪಂಜಾಬ್ ರೆಜಿಮೆಂಟಿನಲ್ಲಿ ತನ್ನ ಸೇವೆ ಸಲ್ಲಿಸುತ್ತಿದ್ದನು. ಆತನಿಗೆ ಗಡಿಕಾಯುವ ಜವಾಬ್ದಾರಿ ನೀಡಿ “ಸಿಕ್ಕಿಂ ರಾಜ್ಯದ ನಾಥುಲಾ ಪಾಸ್” ಬಳಿ
ಅತ್ಯಂತ ದುರ್ಗಮವಾದ ಗಡಿಯಲ್ಲಿ ನಿಯೋಜಿಸಲಾಯಿತು. ಅಂದು ಅಕ್ಟೋಬರ್‌ 4 1968ನೇ ಇಸವಿ. ಮೇಘಸ್ಫೋಟದ ರೀತಿಯ ಮಳೆಯಿಂದ ಹವಾಮಾನ ವೈಪರೀತ್ಯಗೊಂಡಿತ್ತು. ಕೆಳಗೆ ತಳದಲ್ಲಿರುವ ತನ್ನ ಬೆಟಾಲಿಯನ್ನಿನಿಂದ ತನ್ನ ಚೆಕ್ ಪೋಸ್ಟ್ ಗೆ ಅತ್ಯಂತ ಕಡಿದಾದ ಬೆಟ್ಟವನ್ನೇರಿ ಹೋಗುವಾಗ ಹಾದಿಯಲ್ಲಿ ಜಾರಿ ಪ್ರಪಾತಕ್ಕೆ ಬಿದ್ದು ಅಸುನೀಗಿದನು. ಮೊದಲೇ ದುರ್ಗಮವಾದ ಕಣಿವೆ ಅದರಲ್ಲೂ ಹವಾಮಾನ ಎಷ್ಟು ವೈಪರೀತ್ಯವಾಗಿತ್ತೆಂದರೆ ಮಳೆಯ ತೀವ್ರತೆಗೆ ಆತನ ದೇಹ ಕೊಚ್ಚಿಕೊಂಡು ಎಲ್ಲಿ ಹೋಯಿತು ಎಂದು ಎಷ್ಟು ಹುಡುಕಿದರೂ ಸುಳಿವು ಸಿಗಲೇ ಇಲ್ಲ. ಕೆಲ ದಿನಗಳ ನಂತರ ಆತನ ಯುನಿಟ್ಟಿನ ಸಹ ಯೋಧನಿಗೆ ಕನಸೊಂದು ಬೀಳುತ್ತದೆ. ಅದರಲ್ಲಿ ಆತ ಕಾಣಿಸಿಕೊಳ್ಳುತ್ತಾನೆ. ತನ್ನ ದೇಹವಿರುವ ಜಾಗವನ್ನು ಹೇಳುತ್ತಾನೆ. ಜೊತೆಗೆ ತೀರಿಕೊಂಡರೂ ತಾನು ದೇಶಸೇವೆ ಮಾಡುವುದಾಗಿ ಹೇಳುತ್ತಾನೆ. ಕನಸಾದ್ದರಿಂದ ಆ ಸಹಯೋಧ ಅದನ್ನು ನಿರ್ಲಕ್ಷಿಸುತ್ತಾನೆ. ಮತ್ತೊಂದು ದಿನ ಮತ್ತೊಬ್ಬ ಸಹಯೋಧನ ಕನಸಿನಲ್ಲೂ ಇದು ಮರುಕಳಿಸುತ್ತದೆ. ಆಗ ಆ ಯೋಧರು ತಮ್ಮ ಕನಸಿನ ಸತ್ಯಾಸತ್ಯತೆ ಪರೀಕ್ಷಿಸಲು ಆ ಜಾಗವನ್ನು ಹುಡುಕಿ ಹೊರಡುತ್ತಾರೆ. ಅವರಿಗೆ ಅತ್ಯಾಶ್ಚರ್ಯದ ಸಂಗತಿ ಕಾದಿರುತ್ತದೆ. ಕನಸಿನಲ್ಲಿ ಆತ ಹೇಳಿದ ಜಾಗದಲ್ಲೇ ಅವನ ನಜ್ಜುಗುಜ್ಜಾದ ದೇಹ ಸಿಗುತ್ತದೆ. ಮುಂದೆ ಅಲ್ಲಿಯೇ ಅವನಿಗೊಂದು ಸಮಾಧಿಯನ್ನೂ ನಿರ್ಮಿಸಲಾಗುತ್ತದೆ.


ಆ ಮರಣ ಹೊಂದಿದ ಯೋಧನೇ “ಹರ್ ಭಜನ್ ಸಿಂಗ್”. ತನ್ನ ಇಪ್ಪತ್ತೆರಡನೇ ವಯಸ್ಸಿನಲ್ಲಿ ದೇಹತ್ಯಾಗ ಮಾಡಿದ ಅವನು ಮುಂದೆ “ಬಾಬಾ ಹರ್ ಭಜನ್ ಸಿಂಗ್” ಎಂದು ಪ್ರಖ್ಯಾತನಾದವನು ಜೊತೆಜೊತೆಗೇ “ಮರಣಾನಂತರವೂ ಸೈನ್ಯದಲ್ಲಿ ಬಡ್ತಿ ಹೊಂದಿ ಕ್ಯಾಪ್ಟನ್ ಆಗಿ ನಿವೃತ್ತಿಯೂ ಹೊಂದಿದವನು” ಎಂದರೆ ನಿಮಗೆ ಆಶ್ಚರ್ಯವಾಗಬಹುದು.

ಸಹಯೋಧರ ಕನಸಿನ ವಿಚಾರವಾಗಿ ಸಾಕಷ್ಟು ಪರ ವಿರೋಧ ಅನಿಸಿಕೆಗಳು ಬರುತ್ತದೆ. ಆದರೆ ಮುಂದೆ ಇದಕ್ಕೆ ಪೂರಕವಾದ ಘಟನೆಗಳು ಒಂದರ ಮೇಲೊಂದು ಜರುಗತೊಡಗಲು ಆರಂಭಿಸುತ್ತದೆ. ಗಡಿ ಕಾಯುವಾಗ ರಾತ್ರಿ ಸಂದರ್ಭದಲ್ಲಿ ಮಂಪರು ಬಂದಾಗ ಯಾರೋ ಬಂದು ತಟ್ಟಿದ ಅನುಭವ, ಕುದುರೆಯ ಮೇಲೇರಿ ಸೈನ್ಯದ ಸಮವಸ್ತ್ರ ತೊಟ್ಟ ಒಬ್ಬಂಟಿ ಮಾನವ ಗಡಿಭಾಗದಲ್ಲಿ ಸುತ್ತಾಡುವುದನ್ನು ಕ‌ಂಡಿದ್ದು, ಎಷ್ಟೋ ಜನ ಯೋಧರನ್ನು ಮಾತನಾಡಿಸಿದ ಅನುಭವಗಳು ಒಬ್ಬರ ನಂತರ ಒಬ್ಬರ ಮೂಲಕ ಸರದಿಯಾಗಿ ಬರತೊಡಗಿದವು. ಕೇವಲ ನಮ್ಮ ಯೋಧರ ಅನುಭವವಷ್ಟೇ ಅಲ್ಲ. ಚೀನೀ ಯೋಧರೂ ಕುದುರೆಯನೇರಿ ಅಲೆದಾಡುವ ಒಬ್ಬಂಟಿ ಯೋಧನನ್ನು ಗಡಿ ಭಾಗದಲ್ಲಿ ನೋಡುತ್ತಿದ್ದೇವೆ ಎಂಬ ವರದಿ ನೀಡತೊಡಗಿದರು. ಇಷ್ಟಕ್ಕೇ ಮುಗಿಯಲಿಲ್ಲ ಶೀತಲ ಯುದ್ಧ ನಡೆಯುವ ಮುನ್ಸೂಚನೆಯನ್ನೂ ಮೊದಲೇ ಕಾರ್ಯ ನಿರತ ಯೋಧರ ಕನಸಿನಲ್ಲಿ ಬಂದು ಎಚ್ಚರಿಸತೊಡಗಿದನು. ಚೀನೀ ಸೈನಿಕರು ಯಾವ ಯಾವ ಯೋಜನೆ ರೂಪಿಸಿ ಎಲ್ಲಿ ಯಾವಾಗ ಆಕ್ರಮಣ ಮಾಡುವ ಸಂಚು ರೂಪಿಸಿದ್ದಾರೆ ಎಂಬ ನಿಖರವಾದ ಮಾಹಿತಿಯನ್ನು ಯೋಧರ ಕನಸಿನ ಮೂಲಕ ಎಚ್ಚರಿಸುತ್ತಾ ಬಂದಮೇಲೆ ಸೈನ್ಯದ ಅಧಿಕಾರಿಗಳೂ ಅಧಿಕೃತವಾಗಿ ಅವನ ಈ ಮರಣದ ನಂತರದ ವಿದೇಹವಾದ ಸೇವೆಯನ್ನು ಪರಿಗಣಿಸಿದರು.

ಮರಣಾನಂತರವೂ ಅವನನ್ನು ಸೈನ್ಯದಲ್ಲಿ ಮುಂದುವರಿಸಲಾಯಿತು ಎಂಬುದೇ ಅಚ್ಚರಿಯ ವಿಷಯ. ಬಹುಶಃ ಜಗತ್ತಿನ ಇನ್ಯಾವುದೇ ದೇಶದಲ್ಲಿ ಇಂತಹ ಒಂದು ಉದಾಹರಣೆ ದೊರಕಲಾರದು. ತಿಂಗಳ ಸಂಬಳದ ಜೊತೆಜೊತೆಗೆ ಅವನಿಗೆ ಕಾಲಕಾಲಕ್ಕೆ ತಕ್ಕಂತೆ ಮುಂಬಡ್ತಿಯನ್ನೂ ನೀಡಲಾಯಿತು. ಅಷ್ಟೇ ಅಲ್ಲ ವಾರ್ಷಿಕ ರಜೆಯನ್ನೂ ನೀಡಲಾಗುತ್ತಿತ್ತು. ಪ್ರತೀವರ್ಷ ಸೆಪ್ಟೆಂಬರ್ 11ನೇ ತಾರೀಖು ಅವನಿಗೆ ವಾರ್ಷಿಕ ರಜೆ ನೀಡಿ ಅವನ ಊರಾದ ಪಂಜಾಬಿನ ಕಪುರ್ತಲಾ ಎಂಬ ಹಳ್ಳಿಗೆ “ಅವನಿಗೆ ರೈಲಿನಲ್ಲಿ ವಿಶೇಷ ಮುಂಗಡ ಟಿಕೆಟ್ ಕಾಯ್ದಿರಿಸಿ” ಕಳುಹಿಸಿ ಕೊಡಲಾಗುತ್ತಿತ್ತು. ಅವನ ಬಟ್ಟೆ ಮುಂತಾದ ಅವಶ್ಯಕ ವಸ್ತುಗಳನ್ನು ಟ್ರಂಕ್ ಒಂದರಲ್ಲಿ ಹಾಕಿ ಇಬ್ಬರು ಯೋಧರ ಜೊತೆ ಆ ಟ್ರಂಕನ್ನು ಮೂರು ವಿಶೇಷ ಮುಂಗಡ ಟಿಕೆಟ್ ಪಡೆದು ಕಪುರ್ತಲಾ ಹಳ್ಳಿಯ ಆತನ ಮನೆಗೆ ಕೊಟ್ಟು ಬರುತ್ತಿದ್ದರು. ರಜೆಯ ಕೊನೆಯಲ್ಲಿ ಯಥಾರೀತಿಯಲ್ಲಿ ಪುನಃ ಕರೆದುಕೊಂಡು ಬರುವ ವಾಡಿಕೆ ಒಂದೆರಡು ವರ್ಷವಲ್ಲ, ಆತ ನಿವೃತ್ತಿ ಹೊಂದುವವರೆಗೂ ಮುಂದುವರೆಸಿಕೊಂಡು ಬರಲಾಯಿತು.

ಇದು ಭಾರತೀಯ ಸೈನಿಕರ ಪದ್ಧತಿಯಾದರೆ ಚೀನೀಯರದೇ ಬೇರೆ. ಅವರೂ ಸಹ ಈ ವಿದೇಹ ಸೈನಿಕನ ಇರುವಿಕೆಯನ್ನು ಒಪ್ಪಿಕೊಂಡಿದ್ದರು. ಅಷ್ಟೇ ಅಲ್ಲ, ಎರಡೂ ದೇಶಗಳ ನಡುವೆ ತಿಂಗಳಿಗೊಮ್ಮೆ ನಡೆಯುವ ‘ಫ್ಲಾಗ್ ಮೀಟ್’ನಲ್ಲಿ ಆತನಿಗಾಗಿ ವಿಶೇಷವಾದ ಕುರ್ಚಿಯನ್ನು ಕಾಯ್ದಿರಿಸಿ ಅದರಮೇಲೆ ಆತನ ಫೋಟೋ ಇಟ್ಟು ಗೌರವಿಸುತ್ತಿದ್ದರು. ಅರ್ಥಾತ್ ಅವನ ಸಾಕ್ಷಿಯಾಗಿಯೇ ಫ್ಲಾಗ್ ಮೀಟ್ ನಡೆಸುತ್ತಿದ್ದರು.

ಹೀಗೆ ಒಬ್ಬ ಸೈನಿಕ ಮರಣಾನಂತರವೂ ದೇಶಕ್ಕಾಗಿ ಸೇವೆ ಸಲ್ಲಿಸಿ, ಸೈನಿಕರ ದೃಷ್ಟಿಯಲ್ಲಿ, ಅಲ್ಲಿಯ ಜನರ ದೃಷ್ಟಿಯಲ್ಲಿ “ಬಾಬಾ ಹರಭಜನ್ ಸಿಂಗ್ ” ಎಂದು ಕರೆಯಲ್ಪಟ್ಟನು. ಆತನ ದೇಹ ದೊರಕಿದ ಸ್ಥಳದಲ್ಲಿ ಆತನ ಮಂದಿರವನ್ನೂ ಕಟ್ಟಲಾಗಿದೆ. ಅಲ್ಲಿ ಅನೇಕ ಪವಾಡಗಳು ಇಂದಿಗೂ ನಡೆಯುತ್ತವೆ ಎಂದು ಹೇಳಲಾಗುತ್ತದೆ. ಇಲ್ಲಿಯ ಪವಾಡಗಳ ಬಗ್ಗೆ ಬೇಕಾದಷ್ಟು ಕಥೆಗಳು ಸಿಗುತ್ತವೆ. ಏನೇ ಇರಲಿ, ಆತ್ಮ ಪ್ರಕಟಗೊಂಡ ಕಥೆಗಳು ನಮ್ಮ ಸುತ್ತ ಮುತ್ತ ಹಲವಾರು ಸಿಗುತ್ತವೆ. ಆದರೆ “ದಾಖಲೆಗಳ ಮೂಲಕ ಅಧಿಕೃತ ಮಾನ್ಯತೆ” ಪಡೆದ ಆತ್ಮ ಕಥೆ ಇದರ ಹೊರತಾಗಿ ಬಹುಶಃ ಇನ್ನೊಂದು ಇಲ್ಲವೇನೋ. ಈತನ ಆತ್ಮಕಥೆಯ ಬಗೆಗಿನ ನಂಬಿಕೆ ವಯಕ್ತಿಕ ವಿಷಯವಾದರೂ ಕುತೂಹಲ ಕೆರಳಿಸುವುದಂತೂ ಸತ್ಯ.

Facebook ಕಾಮೆಂಟ್ಸ್

ಲೇಖಕರ ಕುರಿತು

Vikram Jois

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!