ಕಥೆ

ಹೆಣ್ಣು ಹುಟ್ಟಿತು

ನಾನು ಶಾರಿತಾಯಿಯನ್ನು ಮೊದಲ ಬಾರಿ ನೋಡಿದಾಗ ಅತ್ತ ಹುಡುಗಿಯೂ ಅಲ್ಲದ, ಇತ್ತ ಹೆಂಗಸೂ ಅಲ್ಲದ ಸ್ಥಿತಿಯಲ್ಲಿದ್ದಳು. ಉದ್ದನೆಯ ಊಟದ ಒಳದಲ್ಲಿ ಹನ್ನೆರಡು ಜನ ಮಕ್ಕಳು, ಜೊತೆಗೆ ಅತಿಥಿಯಾಗಿದ್ದ ನನ್ನನ್ನೂ ಸೇರಿ ಹದಿಮೂರು ಜನ ಮಕ್ಕಳ ಬೇಕು ಬೇಡಗಳನ್ನು ಪೂರೈಸುತ್ತ, ಆಗಾಗ ಹಾಸ್ಯಮಾಡುತ್ತ, ಚಿಕ್ಕ ಮಕ್ಕಳನ್ನು ರಮಿಸುತ್ತ, ಕೈಲಿದ್ದ ಕೋಲೊಂದನ್ನು ಝಳಪಿಸುತ್ತ ತಟ್ಟೆಯಲ್ಲಿ ಒಂದು ಅಗುಳು ಅನ್ನವೂ ವ್ಯರ್ಥವಾಗದಂತೆ ನೋಡಿಕೊಂಡು, ಮಕ್ಕಳು ಕೈಗಳನ್ನು ಸರಿಯಾಗಿ ತೊಳೆದುಕೊಂಡರೋ ಎನ್ನುವಲ್ಲಿಯವರೆಗೂ ಪರೀಕ್ಷಿಸಿದ್ದಳು. ಹೆಂಗಸರ ಪಂಕ್ತಿಯಲ್ಲಿ ಉಂಡು, ಪಾತ್ರೆ ತೊಳೆಯಲೋ ಎಂಜಲು ನೆಲ ಒರೆಸಲೋ ನೆರವಾಗಿ ಮಧ್ಯಾಹ್ನ ಎರಡು ಗಂಟೆಯ ಸುಮಾರಿಗೆ ಮಹಡಿಗೆ ಬಂದು ತಗ್ಗಿದ ದನಿಯಲ್ಲಿಇವತ್ತೂ ಹೊಳೆಗೆ ಹೋಗನಎಂದಿದ್ದಳು. ಗೆಳತಿ ಲಕ್ಷ್ಮಿಯ ಮನೆಗೆ ಮೊದಲ ಬಾರಿಗೆ ಹೋಗಿದ್ದ ದಿನವದು. ೧೯೯೬ರ ಬೇಸಿಗೆ. ಏಳು ಜನ ಅಣ್ಣತಮ್ಮಂದಿರ ಸಂಸಾರ ಒಟ್ಟಿಗೇ ಇರುವ ಮನೆಗೆ ನಾನು ಅಲ್ಲಿಯವರೆಗೂ ಹೋಗಿಯೇ ಇರಲಿಲ್ಲ. ಅವರ ಮನೆಯಲ್ಲಿ ಅಷ್ಟೊಂದು ಮಕ್ಕಳನ್ನು ಕಂಡು ಒಂದು ಶಾಲೆಯ ತರಗತಿಯನ್ನೇ ಕಂಡಂತಾಗಿತ್ತು. ಅದರಲ್ಲೂ ಎಲ್ಲರೂ ಹೆಣ್ಣುಮಕ್ಕಳೇ ಇದ್ದದ್ದು ಇನ್ನೂ ವಿಶೇಷವಾಗಿತ್ತು.

ದಿನ ಮಧ್ಯಾಹ್ನ ದೊಡ್ಡವರೆಲ್ಲರೂ ಮಲಗಿ, ಒಂದೆರಡು ಗೊರಕೆಯ ಸದ್ದುಗಳು ಕೇಳಿಸಲು ಶುರುವಾದಮೇಲೆ, ಎಲ್ಲರೂ ನಿಧಾನವಾಗಿ ಮಹಡಿಯನ್ನು ಇಳಿದು ಹಿತ್ತಲ ಕಡೆಯ ಬಾಗಿಲಿನಿಂದ ಹೊರಬಿದ್ದೆವು. ಶಾರಿತಾಯಿಯ ನೇತೃತ್ವದಲ್ಲಿ ಹೊಳೆಯ ಕಡೆಗೆ ಹರಿಯತೊಡಗಿದ್ದೆವು. ಎರಡು ಅಡಿಗಿಂತ ಹೆಚ್ಚು ಆಳವಿಲ್ಲದ ಹೊಳೆಯ ಮೇಲ್ಭಾಗದಲ್ಲಿ ಕಟ್ಟೊಂದನ್ನು ಕಟ್ಟಿದ್ದರು. ಶಾರಿತಾಯಿ ಕಟ್ಟಿನ ಮೇಲೆ ಕುಳಿತು ನಮ್ಮನ್ನೆಲ್ಲ ಗಮನಿಸುತ್ತಿದ್ದಳು. ಹೊಳೆಯಲ್ಲಿ ಬೀಳುತ್ತ ಏಳುತ್ತ ನೀರೆರೆಚಿಕೊಳ್ಳುತ್ತ ಮೀನುಗಳನ್ನು ಓಡಿಸುತ್ತ ಕಲ್ಲೆಸೆಯುತ್ತ ಆಟವಾಡುವುದೇ ಮುಖ್ಯವಾಗಿರುವಾಗ, ನಾವು ಹಾಕಿರುವ ಬಟ್ಟೆ ಒದ್ದೆಯಾಗುವ ವಿಚಾರ ಗಮನದಲ್ಲೇ ಇರಲಿಲ್ಲ. ಅದು ಬೇಸಿಗೆಯ ದಿನವಾಗಿದ್ದರಿಂದ ಮನೆಗೆ ಹೋಗುವಷ್ಟರಲ್ಲಿ ಒಣಗಿಹೋಗುತ್ತದೆಂದು ಯಾರೂ ತಲೆಕೆಡಿಸಿಕೊಂಡಿರಲಿಲ್ಲ.

ಅದೂ ಅಲ್ಲದೆ, ಅಲ್ಲಿದ್ದವರೆಲ್ಲ ಹೆಣ್ಣು ಮಕ್ಕಳೇ ಆಗಿದ್ದು, ನಮ್ಮ ದೇಹವೇ ನಮ್ಮನ್ನು ಹೆಣ್ಣೆಂದು ತೋರಿಸದ ಎಳೆಯ ವಯಸಿನಲ್ಲಿ ಇದ್ದದ್ದೂ ಒಂದು ಕಾರಣವಾಗಿತ್ತು. ಶಾರಿತಾಯಿ ಏಕೆ ನೀರಾಡಲು ಬರದೇ ಹೊಳೆಕಟ್ಟಿನ ಮೇಲೆ ಕುಳಿತಿದ್ದಾಳೆ ಎನ್ನುವ ಪ್ರಶ್ನೆಯೂ ನಮ್ಮ ಮನಸ್ಸಿನಲ್ಲಿ ಬಂದಿರಲಿಲ್ಲ.

ಇನ್ನು ಕೆಲವೇ ವರ್ಷಗಳ ಸ್ವಾತಂತ್ರ್ಯ ನಿಮಗಿರುವುದು. ಇಷ್ಟ ಬಂದಂತೆ ಇರಿ. ಆಮೇಲೆ ನಿಮ್ಮ ದೇಹದ ಆಕಾರವೇ ನಿಮ್ಮನ್ನು ಕಟ್ಟಿಹಾಕುತ್ತದೆಎನ್ನುತ್ತಿದ್ದಳು ಶಾರಿತಾಯಿ. “ನಾವೆಲ್ಲ ಗಂಡಾಗಿ ಹುಟ್ಟಬೇಕಿತ್ತು, ಯಾವಾಗಲೂ ಸುಖವಾಗಿರುತ್ತಿದ್ದೆವುಎಂದು ಕೂಡ ಹಲುಬಿದ್ದು ನೆನಪಿದೆ.

ಹೊಳೆಯಲ್ಲಿ ಆಡಿ ಆದಮೇಲೆ ನೇರಳೆ ಮರಕ್ಕೆ ಮುಗಿಬಿದ್ದೆವು. ಅವಳೇ ಮರ ಹತ್ತಿ ಗೊಂಚಲುಗಳನ್ನು ಕುಯ್ದು ಕೆಳಗೆ ನಮ್ಮತ್ತ ಎಸೆಯುತ್ತಿದ್ದಳು. ಬ್ರಾಹ್ಮಣರ ಮನೆಯ ಹೆಣ್ಣುಮಕ್ಕಳು ಲಂಗ ದಾವಣಿ, ಸೀರೆಗಳನ್ನು ಬದಿಗಿಟ್ಟು  ಚೂಡಿದಾರದೊಳಗೆ ಸೇರಿಕೊಳ್ಳಲು ಪ್ರಾರಂಭಿಸಿ ಆಗಲೇ ನಾಲ್ಕಾರು ವರ್ಷಗಳಾಗಿದ್ದವು. ಚೂಡಿದಾರ ಹಾಕಿಕೊಂಡು ಮರ ಹತ್ತುವುದು ಸುಲಭ ಎಂದು ಫ್ರಾಕಿನಲ್ಲಿದ್ದ ನಮಗೆಲ್ಲ ಹೇಳಿದಳು. ಅಷ್ಟಾದ ಮೇಲೆ ಮುಂದೆ ಹೋಗಿ ಬಿದ್ದ ಮಾವಿನ ಹಣ್ಣುಗಳನ್ನು ಆರಿಸಿಕೊಂಡು ತಿಂದು, ನಾಲ್ಕು ಗಂಟೆಯ ಹೊತ್ತಿಗೆ ಮನೆ ತಲುಪಿದ್ದೆವು. ಮನೆಯ ಎಲ್ಲರಿಗೂ ಚಹವನ್ನು ಕೊಟ್ಟು, ನಂತರ ಲೋಟಗಳನ್ನು ತೊಳೆದು ಬಂದವಳೂ ಶಾರಿತಾಯಿಯೇ ಆಗಿದ್ದಳು. ಇಷ್ಟೆಲ್ಲ ನೋಡಿದಾಗ, ಅವಳು ಹುಡುಗಿಯೋ ಅಥವಾ ಹೆಂಗಸೋ ಎನ್ನುವುದು ಗೊತ್ತಾಗದೇ ಗೊಂದಲವಾಗಿತ್ತು. ಹೆಣ್ಣು ಮಕ್ಕಳು ಶಾಲೆ ಕಾಲೇಜಿಗೆ ಹೋಗುವುದನ್ನಷ್ಟೇ ನೋಡಿದ್ದ ನನಗೆ, ಹೆಂಗಸರಂತೆ ಮನೆಕೆಲಸ ಮಾಡುವವಳು ಹುಡುಗಿಯಲ್ಲವೆನ್ನಿಸಿತ್ತು.

ತಾನು ಗಂಡಾಗಿ ಹುಟ್ಟಬೇಕಿತ್ತು ಎನ್ನುತ್ತಿದ್ದ ಅವಳ ಬಗ್ಗೆ ನನಗೊಂದಿಷ್ಟು ಕುತೂಹಲ ಹುಟ್ಟಿ, ಗೆಳತಿ ಲಕ್ಷ್ಮಿಯಿಂದ ಅವಳ ವಿಚಾರವನ್ನು ಆಗಾಗ ತಿಳಿಯುತ್ತಿದ್ದೆ. ಶಾರಿತಾಯಿ ಲಕ್ಷ್ಮಿಯ ಅತ್ತೆಯಂತೆಅಪ್ಪನ ತಂಗಿ. ಅವಳಿಗಿಂತ ಚಿಕ್ಕವರೆಲ್ಲರೂ ಅವಳನ್ನು ಶಾರಿತಾಯಿ ಎಂದು ಕರೆಯುತ್ತಿದ್ದರೂ, ಅವಳಿಗೆ ಮರಾಠಿಯ ಯಾವ ನಂಟೂ ಇರಲಿಲ್ಲ. ಯಾರೋ ಮರಾಠಿ ಸಂಬಂಧಿಕರು ಶಾರಿತಾಯಿ(ಶಾರಿಯಕ್ಕ) ಎಂದಿದ್ದನ್ನೇ ಎಲ್ಲರೂ ಪಠಿಸಿ, ಹೆಸರನ್ನೇ ಪಕ್ಕಾಗೊಳಿಸಿದ್ದರು. ಅವಳು ಲಕ್ಷ್ಮಿಗಿಂತ ಹನ್ನೊಂದು ವರ್ಷ ದೊಡ್ದವಳು. ಅವಳನ್ನು ನೋಡಲು ಆಗಾಗ ಗಂಡುಗಳು ಬರುತ್ತಿದ್ದರು. ಅವಳ ಕಪ್ಪು ತುಟಿಯ ಕಾರಣದಿಂದಾಗಿ ಅವಳ ಮದುವೆ ತಡವಾಗುತ್ತಿತ್ತು. ಆದರೆ ಗಂಡಿನವರಿಗೆ ಅದೊಂದು ಕುಂಟು ನೆಪವಾಗಿತ್ತು. ಬ್ರಾಹ್ಮಣರಲ್ಲಿ ವರದಕ್ಷಿಣೆ ಎಂಬ ಪದವೇ ಕ್ಷೀಣಿಸಿ ಹೋಗಿದ್ದ ಕಾಲವದು. ವರದಕ್ಷಿಣೆ ಕೇಳುವ ಗಂಡಿನ ಮದುವೆ ಆಗುತ್ತಿರಲಿಲ್ಲ; ವರದಕ್ಷಿಣೆ ಕೊಡುತ್ತೇನೆನ್ನುವ ಮಾವನ ಮಗಳ ಮದುವೆಯಾಗಲು ಯಾರೂ ಮುಂದೆ ಬರುತ್ತಿರಲಿಲ್ಲ. ಹೀಗಿರುವಾಗ, ದೊಡ್ಡ ಒಟ್ಟು ಕುಟುಂಬದ ಅಳಿಯನಾದರೆ, ಮುಂದೆ ಅವಶ್ಯಕತೆಯಿದ್ದಾಗ ಯಾವ ರೀತಿಯ ಅರ್ಥಿಕ ಸಹಾಯವೂ ಸಿಗದೇ ಹೋಗಬಹುದು ಎಂಬುದೇ ಅವಳ ಮದುವೆ ತಡವಾಗುತ್ತಿರುವುದಕ್ಕೆ ಕಾರಣವಿರಬಹುದು ಎಂದು ಮನೆಯಲ್ಲಿ ಮಾತನಾಡಿಕೊಳ್ಳುತ್ತಿದ್ದರು ಎಂದು ಲಕ್ಷ್ಮಿ ಹೇಳಿದ್ದಳು. ಮನೆಯಲ್ಲಿ ಅಂತಹ ವಿಚಾರಗಳ ಚರ್ಚೆ ಬಂದಾಗಏನಿದ್ದರೂ ಗಂಡಾಗಿ ಹುಟ್ಟಬೇಕು ನೋಡು. ವರದಕ್ಷಿಣೆ ಇಲ್ಲದಿದ್ದರೂ ಗಂಡಿನವರ ಗತ್ತು ಮಾತ್ರ ಕಡಿಮೆಯಾಗಿಲ್ಲಎಂದು ಶಾರಿತಾಯಿ ಹೇಳುತ್ತಿದ್ದಳಂತೆ.

ಮತ್ತೊಂದು ವರ್ಷದಲ್ಲಿ ಅವಳ ಮದುವೆಯಾಗಿ, ಅದರ ಮರುವರ್ಷ ಅವಳಿಗೊಂದು ಗಂಡು ಮಗುವೂ ಆಯಿತು. ತನಗೆ ಮಗ ಹುಟ್ಟಿದನೆಂದು ಬೀಗಿದಳು. ತನ್ನ ಸಂಬಂಧಿಕರಲ್ಲಿ, ಮದುವೆ ಮನೆಗಳಲ್ಲಿ ಸಿಕ್ಕ ಪರಿಚಯದವರಲ್ಲಿ, ಊರ ಮಂದಿಯ ಮುಂದೆಲ್ಲ ತಾನು ಗಂಡು ಹೆತ್ತವಳೆಂದು ಡೌಲು ಹಾರಿಸುತ್ತ ಓಡಾಡಿದಳು. ತವರಿಗೆ ಬಂದಾಗ ತನ್ನ ಅತ್ತಿಗೆಯರಿಗೆಲ್ಲಒಂದೂ ಗಂಡು ಹೆರಲು ಆಗಲಿಲ್ಲವಲ್ಲಾ ನಿಮ್ಮ ಕೈಲಿಎಂದು  ಹೀಯಾಳಿಸಿದ್ದೂ ಆಗಿತ್ತು.

ಎರಡನೇ ಮಗುವೂ ಗಂಡಾದ ಮೇಲಂತೂ ಅವಳನ್ನು ಹಿಡಿಯುವವರೇ ಇರಲಿಲ್ಲ. ಅವಳು ಮದುವೆಯಾಗಿ ಹೋದ ಕುಟುಂಬದಲ್ಲೂ ಅವಳ ಗಂಡನ ವಾರಗೆಯಲ್ಲಿ ಅವಳೊಬ್ಬಳೇ ಗಂಡು ಹೆತ್ತವಳಾಗಿದ್ದಳು. ತವರು ಮನೆಯಲ್ಲೂ ಅಷ್ಟೇ. ಅವಳಿಗೆ ಸಿಕ್ಕ ಅನುಕೂಲ ಸ್ಥಿತಿಗಳಿಂದಾಗಿ ತಾನು ಗಂಡು ಮಕ್ಕಳ ತಾಯಿ ಎಂದು ಬೀಗುವುದು ಅವಳ ಗುಣಗಳಲ್ಲೊಂದಾಗಿ ಹೋಯಿತು. ಮುಂದಿನ ದಿನಗಳಲ್ಲಿ ಅವಳ ಗರ್ವ ಮಿತಿಮೀರಿತು.

ನನ್ನ ಗೆಳತಿ ಲಕ್ಷ್ಮಿ ಮತ್ತವಳ ಅಕ್ಕ ತಂಗಿಯರಿಗೆಲ್ಲ ಮದುವೆಯಾಗಿ ಅವರೂ ಕೂಡ ಹೆಣ್ಣು ಹೆತ್ತರು. ಆಗಂತೂ, ತನಗೆ ಮಾತ್ರ ಗಂಡು ಮಕ್ಕಳೆನ್ನುವ ದಿಮಾಕು ಶಾರಿತಾಯಿಯ ನಿತ್ಯ ವರ್ತನೆಯ ಭಾಗವೇ ಆಯಿತು. ತಾನ್ಯಾಕೆ ಹೆಣ್ಣು ಮಕ್ಕಳನ್ನು ಕಂಡರೆ ತಾತ್ಸಾರ ಮಾಡುತ್ತೇನೆ ಎನ್ನುವುದೇ ಮರೆತು ಹೋಗುವಷ್ಟರ ಮಟ್ಟಿಗೆ, ತಾನು ಗಂಡು ಹೆತ್ತವಳೆಂದು ಹೇಳಿ ಹೊಗಳಿಕೊಳ್ಳುವ ಗೀಳು ಅತಿಯೆನ್ನುವಷ್ಟು ಜೋರಾಯಿತು. ತಾನು ಗಂಡಾಗಿ ಹುಟ್ಟಿದ್ದರೆ ತನ್ನ ಮದುವೆಯ ಸಮಯದಲ್ಲಿ ಕಪ್ಪು ತುಟಿಯವಳೆಂದು ಅವಮಾನ ಅನುಭವಿಸುವ ಪ್ರಮೇಯ ಬರುತ್ತಿರಲಿಲ್ಲವೆಂದು ಅಥವಾ ಗಂಡಿಗಿರುವ ಸ್ವಾತಂತ್ರ್ಯವನ್ನು ಅನುಭವಿಸಬಹುದಾಗಿತ್ತು ಎಂಬಲ್ಲಿಂದ ಪ್ರಾರಂಭವಾದ ಅವಳ ಯೋಚನೆಗಳು ಮುಂದೆ ಅದೇ ದಿಕ್ಕಿನಲ್ಲಿ ವಿಪರೀತಕ್ಕೆ ಹೋಗಿ ನಿಂತವು. ಹೆಣ್ಣು ಹೆಣ್ಣೇ, ಗಂಡು ಗಂಡೇ ಎನ್ನುವುದು, ಪಿತೃಕರ್ಮಗಳನ್ನು ಹೆಣ್ಣು ಮಾಡಲಾರಳು ಎನ್ನುವುದು, ಹೆಣ್ಣು ಒಂಟಿಯಾಗಿ ಸುತ್ತಾಡಲಾಗದ ಶಕ್ತಿಹೀನೆ ಎನ್ನುವುದು, ಹೆಣ್ಣಿಗೆ ತನ್ನದೇ ಆದ ಇತಿಮಿತಿಗಳಿವೆ, ಅವಳು ಹೆತ್ತವರಿಗೆ ಯಾವತ್ತಿಗೂ ಹೊರೆಯೇ ಎನ್ನುವುದು, ಇತ್ಯಾದಿ. ಅವರ ಮನೆಯದೇ ಹೆಣ್ಣು ಮಗಳೊಬ್ಬಳು ವಿದೇಶದಲ್ಲಿ ಒಂಟಿಯಾಗಿ ಬದುಕುತ್ತಿರುವುದಕ್ಕೆ ಮತ್ತು ಇನ್ನೊಬ್ಬಳು ಪರ್ವತಾರೋಹಿಯಾಗಿರುವ ವಾಸ್ತವಗಳಿಗೆ ಅವಳು ಕುರುಡಿಯಾಗಿದ್ದಳು.

ಯಾರಾದರೂಈಗ ಕಾಲ ಬದಲಾಗಿದೆ, ಹೆಣ್ಣೂ ಧೈರ್ಯವಾಗಿ ಬದುಕಬಲ್ಲಳುಎಂದರೆ,ಗಂಡಿನ ಕಿರುಕುಳಕ್ಕೆ ಸತ್ತವರೆಷ್ಟು ಜನ, ಅತ್ಯಾಚಾರಕ್ಕೆ ಬಲಿಯಾದವರೆಷ್ಟು ಜನ, ಲೋಕದ ಕೊಳಕಿಗೆ ನಿತ್ಯಹಿಂಸೆ ಪಡುವವರೆಷ್ಟು ಜನ? ಎಂಬ ಪ್ರಶ್ನೆಯನ್ನು ಹಾಕಿಬಿಡುತ್ತಿದ್ದಳು. ಅವಳನ್ನು ನೋಡಿದರೆ ಒಮ್ಮೊಮ್ಮೆಹೆಣ್ಣಿನ ಹೊರಬರಲಾರದ ಪರಿಧಿಯ ಬಗ್ಗೆ ಅವಳ ಕನಿಕರವೇ ಗಂಡಿನ ಆರಾಮದ ಬದುಕಿನ ಬಗೆಗಿನ ಹೊಗಳಿಕೆಯಾಗಿ ತೋರ್ಪಡುತ್ತಿದೆಯೇನೋ ಎನ್ನಿಸುತ್ತಿತ್ತು.

ಈಗೊಂದು ವರ್ಷದ ಹಿಂದೆ ಅವಳು ಆತ್ಮಹತ್ಯೆಮಾಡಿಕೊಂಡಳು. ಹೆಣ್ಣನ್ನೇ ಅಲ್ಲಗಳೆಯುತ್ತಿದ್ದ ಅವಳ ಅಂತ್ಯ ಸೂಕ್ತವಾದದ್ದೇ ಎಂದು ಹೊರನೋಟಕ್ಕೆ ಭಾಸವಾದರೂ, ನಿಜದಲ್ಲಿ ನಡೆದದ್ದು ಏನು ಎನ್ನುವುದು ಹೊರಬರಲು ಸ್ವಲ್ಪ ಕಾಲವೇ ಹಿಡಿಯಿತು. ಅವಳ ಮೃತ್ಯುಪತ್ರದಲ್ಲಿ ಅವಳ ಸಾವಿನ ಕಾರಣವಿರಲಿಲ್ಲ; ಬದಲಿಗೆ, ತನ್ನ ವಸ್ತ್ರಾಭರಣಗಳನ್ನು ಹೆಣ್ಣುಮಕ್ಕಳಿಗೆ ದಾನಮಾಡಬೇಕಾಗಿಯೂ, ತನಗ್ಯಾವ ಅಂತ್ಯಸಂಸ್ಕಾರದ ಅಗತ್ಯವೂ ಇಲ್ಲವೆಂದು ಕೋರಿಕೊಂಡಿದ್ದಳು.

ಇತ್ತೀಚೆಗೆ ಶಾರಿತಾಯಿಯ ಹಿರಿಯ ಮಗನ ಹಾವಭಾವಗಳಲ್ಲಿ, ನಡೆನುಡಿಗಳಲ್ಲಿ ಹೆಣ್ಣು ಸ್ಪಷ್ಟವಾಗಿ ಕಾಣಿಸತೊಡಗಿದ್ದಾಳಂತೆ; ಆಗಾಗ ಉಡುಪುಗಳಲ್ಲಿಯೂ ಕೂಡ. ಮುಕ್ತವಾಗಿ ಹೇಳಲಾಗದಿದ್ದರೂ ಶಾರಿತಾಯಿಯ ಸಾವಿಗೆ ಅವಳ ಮಗನ ಹೊಸ ಹುಟ್ಟಿನ ಸತ್ಯವೇ ಕಾರಣವಿರಬೇಕು.

Facebook ಕಾಮೆಂಟ್ಸ್

ಲೇಖಕರ ಕುರಿತು

ಶ್ರೀಕಲಾ ಹೆಗಡೆ ಕಂಬ್ಳಿಸರ

ಹುಟ್ಟಿದ್ದು, ಬೆಳೆದದ್ದು ಸಿರಸಿಯ ಪುಟ್ಟ ಹಳ್ಳಿಯೊಂದರಲ್ಲಿ.
ಓದಿದ್ದು ವಾಣಿಜ್ಯಶಾಸ್ತ್ರ. ಐದು ವರ್ಷಗಳು ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡಿದ ಅನುಭವ. ಈಗ ಗೃಹಿಣಿಯಾಗಿದ್ದು, ಬರವಣಿಗೆ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!