ಕಥೆ

ಎರಡು ಮುಖ

“ಯುವರ್ ಆನರ್, ಈತ ಸುಳ್ಳು ಹೇಳ್ತಿದಾನೆ. ಇವನ ಪ್ರಕಾರ ಲೂಸಿ ಅಕ್ರಮ ಸಂಬಂಧ ಇಟ್ಕೊಂಡಿದಾಳೆ. ಆದರೆ ಲೂಸಿ ಚಿನ್ನದಷ್ಟು ಪರಿಶುದ್ಧವಾದ ಹುಡುಗಿ. ಇನ್ನೊಬ್ಬರನ್ನು ಕನಸುಮನಸಲ್ಲೂ ನೆನೆಸಿಕೊಳ್ಳದ ಹುಡುಗಿ. ಇಷ್ಟಕ್ಕೂ ತಾಯಿಗೂ ಮಗುವಿಗೂ ಯಾವುದೇ ಹೋಲಿಕೆ ಇಲ್ಲದ ಸಾವಿರ ಉದಾಹರಣೆಗಳು ಇದ್ದಾವೆ ನಮ್ಮ ಸುತ್ತಮುತ್ತ.

ದೇವಕಿಯ ಮಗ ಕೃಷ್ಣ ಕಾಫಿ ಡಿಕಾಕ್ಷನ್ ಥರ ಕಪ್ಪಗಿದ್ದ. ಅದರರ್ಥ ಅವಳೂ ಅದೇ ಬಣ್ಣದವಳು ಅಂತಾನಾ? ಅಂಬಿಕೆ ಅಂಬಾಲಿಕೆಯರು ರೂಪದಲ್ಲಿ ಚೆನ್ನಾಗಿದ್ದರೂ ಒಂದೇ ಒಂದು ಕ್ಷಣ ಬಿಳಿಚಿಕೊಂಡ್ರು, ಕಣ್ಣುಮುಚ್ಕೊಂಡ್ರು ಅನ್ನೋ ಕಾರಣಕ್ಕೆ ವಿಕೃತ ಮಕ್ಕಳನ್ನು ಹೆತ್ರು”

“ಸಾಕು ನಿಲ್ಸಿ!”, ಜಡ್ಜ್ ಗುಡುಗಿದರು. “ಏನ್ರೀ ಹನುಮಂತರಾವ್? ಯಾವ್ದಾವ್ದೋ ಅಡಗೂಲಜ್ಜಿ ಕತೆಯಿಂದ ಉದಾಹರಣೆ ಎತ್ತಿ ಕೊಡ್ತಿದೀರಲ್ರೀ? ಮಹಾಭಾರತದ ಉದಾಹರಣೆ ಇಟ್ಟುಕೊಂಡು ಈ ಕೇಸು ಹ್ಯಾಂಡಲ್ ಮಾಡ್ತಿದೀರಲ್ಲ!” ಅಂತ ಉಗಿದರು.

“ಹಾಗಾದರೆ ನಾವು ಪ್ರತೀ ಕಕ್ಷಿದಾರನನ್ನು ಕಟಕಟೇಲಿ ನಿಲ್ಲಿಸಿ ಭಗವದ್ಗೀತೆ ಮುಟ್ಟಿಸಿ ಸತ್ಯಾನೇ ಹೇಳ್ತೀನಿ ಅಂತ ಪ್ರಮಾಣ ಮಾಡಿಸೋದನ್ನೂ ನಿಲ್ಲಿಸಬೇಕಾಗುತ್ತೆ. ಮಹಾಭಾರತದ ಉದಾಹರಣೆ ಬೇಡ ಅಂದರೆ ಭಗವದ್ಗೀತೆ ಯಾಕೆ ಬೇಕು ಕೋರ್ಟಲ್ಲಿ?”

“ಅದಿರೋದು ಬೇರೆ ಉದ್ಧೇಶಕ್ಕೆ ಅಂತ ನಿಮಗೂ ಗೊತ್ತಿದೆ. ಸುಮ್ನೆ ನಂಗೇ ಪಾಟೀಸವಾಲು ಹಾಕಬೇಡಿ. ಓವರ್ ಟು ಸುಜಾತ. ನಿಮಗೇನಾದ್ರೂ ಪ್ರಶ್ನೆಗಳಿದ್ದರೆ ಕೇಳಬಹುದು” ಅಂದರು ಜಡ್ಜ್.

ಹೊಸಹುರುಪಿನಿಂದ ಸುಜಾತ ಎದ್ದಳು.

“ಯುವರ್ ಆನರ್, ಮಹಾಭಾರತದ ಉದಾಹರಣೆ ತಗೊಳ್ಳೋ ಪ್ರತಿವಾದಿಗಳು ಅಲ್ಲೇ ಉಲ್ಲೇಖವಾಗಿರೋ ಬೇರೆ ಅಂಶಗಳನ್ನು ಮರೆತಿದ್ದಾರೆ. ಇಂದ್ರನಿಂದ ಹುಟ್ಟಿದ ಅರ್ಜುನ ರೂಪದಲ್ಲೂ ಇಂದ್ರನ ಹಾಗೇ ಇದ್ದ. ವಾಯುವಿನಿಂದ ಹುಟ್ಟಿದ ಭೀಮ ಶಕ್ತಿಶಾಲಿಯಾಗಿದ್ದ. ತಂದೆತಾಯಿಗಳ ರೂಪ ಮಕ್ಕಳಿಗೆ ಹರಿದುಬರುತ್ತೆ ಅಂತ ಘಂಟಾಘೋಷವಾಗಿ ಹೇಳಿದಾರೆ ಅದರಲ್ಲಿ.

ಇರಲಿ, ಈಗ ವಿಷಯಕ್ಕೆ ಬರೋಣ. ನನಗೆ ಲೂಸಿಯಿಂದ ಕೆಲವು ಪ್ರಶ್ನೆಗಳಿಗೆ ಉತ್ತರ ಬೇಕು. ಲೂಸಿ ಅವರೇ, ನಿಮ್ಮ ಮದುವೆಯಾಗಿ ಎಷ್ಟು ವರ್ಷವಾಯ್ತು?” ಅಂತ ಕೇಳಿದಳು.

“ನಾಲ್ಕು ವರ್ಷ”

“ನಿಮ್ಮನ್ನ ಸ್ವಲ್ಪ ಪರ್ಸನಲ್ ಆದ ಪ್ರಶ್ನೆಗಳನ್ನೂ ಕೇಳಬೇಕಾಗುತ್ತೆ. ಇದು ಕೌಟುಂಬಿಕ ನ್ಯಾಯಾಲಯ ಆಗಿರೋದರಿಂದ ನೀವು ಮುಜುಗರ ಪಡದೆ ಎಲ್ಲವನ್ನೂ ಹೇಳ್ಕೋಬಹುದು. ಯಾವ ಪ್ರಶ್ನೆಗೂ ನೇರವಾದ ಉತ್ತರ ಕೊಡಬಹುದು. ಹೊರಗಡೆ ವರದಿಯಾಗೋದಿಲ್ಲ.

ಹೇಳಿ, ನಿಮಗೆ ಮದುವೆಗೆ ಮುಂಚೆ ಬಾಯ್‍ಫ್ರೆಂಡ್ಸ್ ಇದ್ದರ?”

“ಇಲ್ಲ”

“ಹೇಗೆ ಹೇಳ್ತೀರಿ? ಮದುವೆಗೆ ಮುಂಚೆ ಬೇರೆ ಹೆಸರಲ್ಲಿ – ಅಂದರೆ “ಪ್ರೇಮಾಂಗನೆ” ಅನ್ನೋ ಹೆಸರಲ್ಲಿ ನೀವೊಂದು ಬ್ಲಾಗ್ ಬರೀತಾ ಇದ್ರಿ. ಅಲ್ಲಿರೋದೆಲ್ಲ ಬರೀ ಪ್ರೇಮಗೀತೆಗಳೇ. ಇತ್ತೀಚೆಗೆ ನೀವು ಗರ್ಭಿಣಿಯಾಗಿದ್ದಾಗ ಮಗು ಮೇಲೇನೂ ಕೆಲವು ಕವಿತೆ ಬರೆದು ಅಲ್ಲಿ ಹಾಕಿದ್ದೀರಿ. ಅಂದರೆ, ನಿಮ್ಮ ಜೀವನದಲ್ಲಿ ನಡೀತಾ ಇರೋ ಘಟನೆಗಳ ಮೇಲೆ ನೀವು ಪದ್ಯ ಬರೀತೀರ ಅಂತಾಯ್ತು.”

“ಹೌದು, ಪದ್ಯ ಬರೆದದ್ದು ನಿಜ. ಅದು ಕಾಲೇಜು ದಿವಸಗಳಿಂದಾನೂ ಇದೆ. ಆದ್ರೆ ನಂಗೆ ಯಾರೂ ಪ್ರೇಮಿಗಳು ಇರಲಿಲ್ಲ.”

“ಅದನ್ನು ಹೇಗೆ ಹೇಳ್ತೀರ? ಪುರಾವೆಗಳು – “ಇದ್ದ” ಅಂತ ಹೇಳ್ತಿವೆಯಲ್ಲ!”

ಲೂಸಿ ಮೌನವಾದಳು. ಸುಜಾತಳಿಗೆ ಹುರುಪು ಬಂತು. ಜಡ್ಜ್ ಸಾಹೇಬರು, ಈ ಮೌನದ ಅರ್ಥವೇನಿರಬಹುದು ಅಂತ ತಲೆಕೆರೆದುಕೊಂಡು ನಾಲ್ಕು ಸಾಲು ಗೀಚಿಕೊಂಡರು.

“ನಿಮಗೆ ಒಬ್ಬ ಸೀಕ್ರೇಟ್ ಪ್ರೇಮಿ ಇದ್ದ. ಮದುವೆ ಆದ ಮೇಲೂ ಅವನು ನಿಮ್ಮ ಜೊತೆ ಸಂಪರ್ಕ ಇರಿಸಿಕೊಂಡಿದ್ದ. ಈ ಮಗು ಅವನಿಗೆ ಹುಟ್ಟಿರೋದು ಅಂತ ನಾನು ಹೇಳ್ತೇನೆ.” ಅಂತ ಸುಜಾತ ನೇರವಾಗಿ ಬಾಂಬು ಹಾಕಿದಳು.

ಲೂಸಿಗೆ ಭೂಮಿ ಬಾಯ್ಬಿಡಬಾರದೆ ಅನ್ನಿಸಿತು. “ನೋ!” ಎಂದು ಕಿರುಚಿದಳು.

“ಆಬ್ಜೆಕ್ಷನ್ ಯುವರ್ ಆನರ್. ಇದು ಕೌಟುಂಬಿಕ ಕೋರ್ಟು ಆಗಿರಬಹುದು. ಆದರೆ ಈ ರೀತಿ ಒಂದು ಹೆಣ್ಣಿನ ಶೀಲದ ಮೇಲೆ ನೇರವಾದ ಆರೋಪ ಮಾಡೋದು ಸರ್ವಥಾ ತಪ್ಪಾಗುತ್ತೆ. ಇಲ್ಲದ ಪ್ರೇಮಿಯನ್ನು ಸೃಷ್ಟಿಸಿ ಅವನೇ ಈ ಮಗುವಿನ ತಂದೆ ಅಂತ ಹೇಳೋದಕ್ಕೆ ಏನು ಸಾಕ್ಷಿ? ಡಿಎನ್‍ಎ ಟೆಸ್ಟ್ ಆಗಲಿ. ವರದಿ ಬರಲಿ. ಅಲ್ಲಿ ಅದು ಪ್ರೂವ್ ಆದರೆ ಒಪ್ಪಿಕೊಳ್ಳಬಹುದು.” ಅಂತ ಎದ್ದು ಬಡಬಡಿಸಿದರು ಹನುಮಂತರಾಯರು.

ಮಹಾಭಾರತದ ಉದಾಹರಣೆ ತಗೊಂಡು ವಾದ ಮಾಡಿದ ಮನುಷ್ಯ ಈಗ ಡಿಎನ್‍ಎ ಟೆಸ್ಟ್ ಬಗ್ಗೆ ಮಾತಾಡ್ತಿದಾರಲ್ಲ ಅಂತ ಒಳಗೊಳಗೆ ಅಚ್ಚರಿ ಪಡುತ್ತ, ಜಡ್ಜ್ ಅವರನ್ನು ಕೂರಲು ಹೇಳಿ ಸುಜಾತಳಿಗೆ ಮುಂದುವರೆಸುವಂತೆ ಸನ್ನೆ ಮಾಡಿದರು.

“ಯುವರ್ ಆನರ್, ಡಿಎನ್‍ಎ ಟೆಸ್ಟೇ ಅಂತಿಮ ಅಲ್ಲ. ಒಂದು ವೇಳೆ ಅದನ್ನು ಮಾಡಿಸಿ ರಿಪೋರ್ಟ್ ತರಿಸಿದರೆ ನಮ್ಮ ಪ್ರತಿವಾದಿಗಳು ತಕ್ಷಣ ಕೇಸನ್ನ ಕಳಕೊಳ್ಳಬೇಕಾಗುತ್ತೆ ಅಂತ ಅವರಿಗೂ ಗೊತ್ತಿದೆ” ಅಂದಳು ಸುಜಾತ.

ಜಡ್ಜಿಗೆ ರೇಗಿ ಹೋಯಿತು. ಈ ಗಂಡಹೆಂಡತಿಯರನ್ನು ವಾದಿ-ಪ್ರತಿವಾದಿ ಅಂತ ಹಾಕ್ಕೊಂಡಿರೋ ಕೇಸುಗಳ ಗತಿಯೆಲ್ಲ ಹೀಗೆಯೇ. ಅವರವರ ಮನೆಜಗಳವನ್ನು ಕೇಸ್  ಮೂಲಕ ತಂದು ನ್ಯಾಯಾಲಯದಲ್ಲೂ ಮುಂದುವರೆಸುತ್ತಾರೆ. “ನೋಡಿ ಸುಜಾತ ಅವರೇ, ಯಾರು ಕೇಸು ಗೆಲ್ತಾರೆ, ಯಾರು ಕಳಕೊಳ್ತಾರೆ ಅನ್ನೋದನ್ನ ನಿರ್ಧರಿಸೋದು ನ್ಯಾಯಾಲಯ. ನೀವಲ್ಲ. ನಿಮ್ಮ ಪಾಟೀಸವಾಲು ಮುಂದುವರೆಸಿ” ಅಂತ ಚಾಟಿ ಬೀಸಿದರು.

“ಡಿಎನ್‍ಎ ಟೆಸ್ಟ್ ಆಗಲಿ. ನನಗೆ ನ್ಯಾಯ ಬೇಕು” ಅಂತ ಲೂಸಿ ದೈನ್ಯವಾಗಿ ಬೇಡಿಕೊಂಡಳು.

“ಯೆಸ್! ಆಗಲಿ. ನೋಡೇಬಿಡ್ತೀನಿ. ಇವಳ ಬಂಡವಾಳ ಬಯಲಿಗೆಳೀತೀನಿ” ಅಂತ ಪೀಟರ್ ಕೂಡ ಕಟಕಟೆ ಗುದ್ದಿ ಘೋಷಿಸಿದ.

ಕೇಸು ಮುಂದಕ್ಕೆ ಹೋಯಿತು. ಡಿಎನ್‍ಎ ಟೆಸ್ಟ್ ಮಾಡುವಂತೆ ವೈದ್ಯರಿಗೆ ಮತ್ತು ಸಹಕರಿಸುವಂತೆ ಇಬ್ಬರು ಕಕ್ಷಿದಾರರಿಗೂ ನ್ಯಾಯಾಲಯ ಸೂಚಿಸಿತು.

# * # * #

“ಅಲ್ಲ ಪೀಟರ್, ಇಷ್ಟು ದಿನ ಆ ಮಗು ಕೆಲವು ಆಂಗಲ್‍ನಲ್ಲಿ ನಿಮ್ ಥರಾನೂ ಇದೆ ಅಂತ ಹೇಳ್ತಾ ಇದ್ರಿ. ನಿಮಗಿರೋ ಹಾಗೆ ಎಡಭುಜದಲ್ಲಿ ಮಚ್ಚೆ ಇದೆ. ಕಣ್ಣುತುಟಿಗಳೆಲ್ಲ ನಿಮ್ಮ ಹಾಗೇ ಇದೆ ಅಂತ ಹೇಳಿದ್ರಿ. ಆದರೆ, ಈಗ ನೀವೇ ಕೋರ್ಟಿನಲ್ಲಿ ನನಗೆ ಒಂದು ಮಾತೂ ಹೇಳದೆ, ಡಿಎನ್‍ಎ ಟೆಸ್ಟ್ ಆಗಲಿ ಅಂತ ಮೇಜು ಗುದ್ದಿ ಹೇಳಿದೀರಲ್ಲ? ಕೇಸ್ ಗತಿ ಏನಾಗಬೇಕು?” ಅಂತ ಚಿಂತೆಯಿಂದ ಕೇಳಿದಳು ಸುಜಾತ.

“ಹೌದು ಮೇಡಮ್ ಹೇಳಿದ್ದೆ. ಆದರೆ, ಅಲ್ಯಾಕೋ ಆವೇಶ ಬಂತು. ಅಕ್ರಮ ಸಂಬಂಧ ಇಟ್ಟುಕೊಂಡಿರೋ ಅವಳೇ ಅಷ್ಟು ಧೈರ್ಯದಿಂದ ಟೆಸ್ಟ್ ಆಗಲಿ ಅಂತ ಘಂಟಾಘೋಷವಾಗಿ ಸಾರುವಾಗ ನಾನು ಬೇಡ ಅಂದರೆ ತಪ್ಪಾಗುತ್ತೆ ಅನ್ನಿಸಿತು. ಕೋಪದ ಭರದಲ್ಲಿ “ಆಗಲಿ” ಅಂದೆ. ಈಗೇನು ಮಾಡೋದು?”

“ಮಾಡೋದೇನು. ನೀವು ಟೆಸ್ಟ್’ಗೆ ಸಹಕರಿಸಬೇಕು ಅಂತ ಕೋರ್ಟಿಂದ ಆರ್ಡರ್ ಆಗಿದೆ. ಅದನ್ನು ಧಿಕ್ಕರಿಸೋ ಹಾಗಿಲ್ಲ. ಸೋ, ಅದು ಆಗಲಿ. ನೀವೇನೂ ಚಿಂತೆ ಮಾಡಬೇಡಿ. ಇಷ್ಟಕ್ಕೂ ನೀವು ಇದರಿಂದ ಕಳಕೊಳ್ಳೋದು ಏನೂ ಇಲ್ಲ. ಮಗು ಬೇರೆಯವರದ್ದು ಅಂತ ಪ್ರೂವ್ ಆದರೆ ಕೇಸು ಗೆಲ್ತೀರಿ. ಮಗು ನಿಮ್ಮದೇ ಅಂತ ಪ್ರೂವ್ ಆದರೆ ನಿಮ್ಮ ಹೆಂಡತಿ ಮೇಲಿನ ಅನುಮಾನಗಳೆಲ್ಲ ಪರಿಹಾರವಾಗುತ್ತೆ. ಒಂದರ್ಥದಲ್ಲಿ ಅದು ನಿಮ್ಮ ನಿಜವಾದ ಗೆಲುವು ತಾನೆ?” ಅಂತ ಭಾವುಕಳಾಗಿ ಹೇಳಿದಳು ಸುಜಾತ.

“ಹೇಗಾಗುತ್ತೆ ಮೇಡಮ್. ನನ್ನ ಹೆಂಡತಿ ರೂಪಸಿ ನಿಜ. ಶಿಲಾಬಾಲಿಕೆ ಥರ ಇದಾಳೆ. ದಂತದ ಗೊಂಬೆ ಥರ ಇದಾಳೆ. ಎಲ್ಲ ಸರಿ. ಆದರೆ ಆ ಮಗು ನನ್ನ ಹೆಂಡತಿ ಮುಖದ ಒಂದಂಶಾನೂ ಹೊತ್ತಿಲ್ಲವಲ್ಲ! ಫ್ರಾಂಕೆನ್‍ಸ್ಟೈನಿಗೆ ತನ್ನ ಸೃಷ್ಟಿ ನೋಡಿ ಗಾಬರಿ ಆದ ಹಾಗೆ ಆಯ್ತು ನನಗೆ ನನ್ನ ಮಗು ನೋಡಿದ ಮೇಲೆ. ಈ ವಿಕಾರಮಗೂನ ನನ್ನ ಮಗು ಅಂತ ಒಪ್ಪಿಕೊಳ್ಳೋದಕ್ಕೆ ಕಷ್ಟ ಆಗುತ್ತೆ ಮೇಡಮ್.”

“ಹೋಗ್ರಿ. ಹಾಗೆಲ್ಲ ಆಕ್ಟೋಪಸ್ ಥರಾನೋ ಚಿಂಪಾಂಜಿ ಥರಾನೋ ಇಲ್ಲ ಮಗು. ನಾನೂ ನೋಡಿದೀನಿ. ನಿಮ್ಮಿಬ್ಬರ ರೂಪ ಅದಕ್ಕೆ ಬಂದಿಲ್ಲ ಅನ್ನೋದು ಬಿಟ್ಟರೆ ಕಸದಬುಟ್ಟಿಗೆ ಎಸೆಯುವಷ್ಟು ದರಿದ್ರವಾಗಿಲ್ಲ ಅದು” ಅಂತ ಹೇಳಿದಳು ಸುಜಾತ. ಪೀಟರ್‍ನ ಮನಸ್ಥಿತಿ ಮತ್ತು ಮಾತು ಅವಳ ಅಂತರಂಗವನ್ನು ಕಲಕಿತ್ತು.

ಪೀಟರಿಗೆ ಸಂಕಟಕ್ಕಿಟ್ಟುಕೊಂಡಿತು. ಈ ಹೆಂಗಸು ಮಗುವಿನ ವಿಚಾರದಲ್ಲಿ ಮೆತ್ತಗಾಗುತ್ತಿದ್ದಾರೆ ಅನ್ನಿಸಿತು ಅವನಿಗೆ. ತನ್ನದಲ್ಲದ ಮಗು ಅಂತ ಗೊತ್ತಾದರೆ ಗಂಡುಜಾತಿಯ ಹುಲಿ-ಸಿಂಹಗಳು, ಬೆಕ್ಕುಗಳು – ಮರಿಗಳನ್ನು ಕೊಂದೇ ಬಿಡುತ್ತವಂತೆ. ನಾನು ಆ ಮಟ್ಟಕ್ಕೆ ಹೋಗದೇ ಇದ್ದರೂ “ನನಗೆ ಇಂಥ ಮಗು ಬೇಡ” ಅಂತ ಕೇಸು ಹಾಕಿದೀನಿ. ನನ್ನ ಫೀಲಿಂಗ್ ಈ ಹೆಣ್ಣುಜಾತಿಯ ಲಾಯರಮ್ಮನಿಗೆ ಹೇಗೆ ಅರ್ಥವಾಗಬೇಕು! ಅಂತ ಯೋಚಿಸುತ್ತ ಫೈಲುಗಳನ್ನು ತೆಗೆದುಕೊಂಡು “ಬರ್ತೀನಿ” ಅಂತ ಹೇಳಿ ಹೊರನಡೆದ.

# * # * #

ಹನುಮಂತರಾತರಿಗೆ ಕೋರ್ಟಿನಲ್ಲಿ ಕಣ್ಣೆದುರು ಕೇಸು ನಡೆಯುತ್ತಿದ್ದರೂ, ಮನಸ್ಸಿನಲ್ಲಿ ಮತ್ತೊಂದು ಕೇಸು ಅವ್ಯಾಹತವಾಗಿ ನಡೆಯುತ್ತಿತ್ತು. ಇಪ್ಪತ್ತೈದು ವರ್ಷದ ಹಿಂದೆ ತಾನು ಮದುವೆಯಾಗಿ ಏಳು ವರ್ಷಗಳ ಕಾಲ ಮಗುವೇ ಆಗದಿದ್ದದ್ದು, ಅಪ್ಪ-ಅಮ್ಮ “ನಮ್ಮ ಮಗನಿಗೊಂದು ವಂಶದ ಕುಡಿ ಕರುಣ ಸು ದೇವರೇ” ಅಂತ ಹೇಳುತ್ತ ಸುಬ್ರಹ್ಮಣ್ಯ, ಧರ್ಮಸ್ಥಳ, ತಿರುಪತಿ ಅಂತ ಪುಣ್ಯಕ್ಷೇತ್ರಗಳ ಲಿಸ್ಟು ಬರೆದು ಹರಕೆ ಹೊತ್ತುಕೊಂಡದ್ದು, ಅವರ ಮೊರೆ ಕೇಳಿತೋ ಅನ್ನುವ ಹಾಗೆ ಮದುವೆಯಾಗಿ ಎಂಟು ವರ್ಷಗಳಾದ ಮೇಲೆ ಚೈತನ್ಯ ಹುಟ್ಟಿದ್ದು, ಇಡೀ ಮನೆಯನ್ನು ಸಂತೋಷದಲ್ಲಿ ತೇಲಿಸಿದ್ದು – ಎಲ್ಲ ಸೀನಿಂದ ಸೀನಿಗೆ ಹಾರುವ ಸಿನೆಮದ ಹಾಗೆ ರಾಯರ ಕಣ್ಣಮುಂದೆ ಬಂದು ಹೋಯಿತು.

ಆಗಲೂ ಸುಜಾತ ಈಗಿರುವ ಹಾಗೆಯೇ – ಉರಿಕೆಂಡ. ಅತ್ತೇಮ್ಮ ತನಗೆ “ನೋಡು ಸುಜಾತ, ಮದುವೆಯಾಗಿ ಇಷ್ಟು ವರ್ಷ ಆದರೂ ಸಿಹಿಸುದ್ದಿ ಕೊಡದಿದ್ದರೆ ಹೇಗಮ್ಮ? ನಾವಂತೂ ಪುಣ್ಯಕ್ಷೇತ್ರಗಳಿಗೆ ಹರಕೆ ಹೊತ್ತುಕೊಂಡಾಯ್ತು. ಆದರೂ ಮನುಷ್ಯ ಪ್ರಯತ್ನ ಅಂತ ಒಂದು ಉಂಟಲ್ಲ! ನೀನೂ ಒಂದು ಸಲ ಡಾಕ್ಟರ್ ಹತ್ತಿರ ಹೋಗಿ ಟೆಸ್ಟ್ ಮಾಡಿಸಿಕೊಂಡು ಬರಬಾರದೆ? ಋಷಿಪಂಚಮಿ ಮಾಡಿಕೊಂಡ ಮೇಲೆ ಮಗು ಹಡೆಯೋದಕ್ಕೆ ಯೋಚನೆ ಮಾಡಿದೀಯೋ ಹೇಗೆ?” ಅಂತ ಮೂದಲಿಸಿದ್ದನ್ನು ಸಹಿಸಿಕೊಳ್ಳಲಾಗದೆ ಮೈಯಿಡೀ ಉರಿಯುತ್ತ ಯಾರಿಗೂ ಹೇಳದೆ ಗೈನಕಾಲಜಿಸ್ಟ್ ಬಳಿ ಹೋಗಿ ಟೆಸ್ಟ್ ಮಾಡಿಸಿದ್ದಳು.

“ಯೂ ಆರ್ ಅ ಪರ್ಫೆಕ್ಟ್ ಲೇಡಿ. ಏನೂ ತೊಂದರೆಯಿಲ್ಲ. ತಾಯ್ತನ ತುಂಬಿಕೊಳ್ಳಲು ನಿಮ್ಮ ದೇಹ ರೆಡಿಯಾಗಿದೆ. ನಿಮ್ಮ ಹಸ್ಬೆಂಡನ್ನೂ ಕರ್ಕೊಂಡುಬನ್ನಿ. ಟೆಸ್ಟ್ ಮಾಡೋಣ” ಅಂದರಂತೆ ಡಾಕ್ಟರು. ಖುಷಿಯಿಂದ ಹಾರಾಡುತ್ತ ಬಂದವಳು ನನ್ನನ್ನು ಮಾತಿನಿಂದ ಚುಚ್ಚಿಚುಚ್ಚಿ ಸಾಯಿಸಿದ್ದಳು. “ಬನ್ನಿ ಹೋಗೋಣ” ಅಂದರೆ, ರಚ್ಚೆ ಹಿಡಿದ ಮಗುವಿನಂತೆ “ಇಲ್ಲ” ಎಂದು ಕೂತಿದ್ದೆ. ಗಂಡುಪ್ರಾಣಿ, ಕ್ಯಾನ್ಸರ್ ಬಂದರೂ ತಾಳಿಕೊಂಡಾನು; ಷಂಡ ಎಂಬ ಪದವಿ ಮಾತ್ರ ಏರುವವನಲ್ಲ ಅಂತ ಗೊತ್ತಾಗಿದ್ದು ಆಗಲೇ. “ಈ ಒಂದು ವರ್ಷ ನೋಡೋಣ. ರಿಸಲ್ಟ್ ಬಂದಿಲ್ಲ ಅಂದರೆ ಮುಂದಿನ ವರ್ಷ ಹೋಗೋಣ” ಅಂದಿದ್ದೆ. ಅವಳು ತುಟಿಯಂಚಿನಲ್ಲಿ ಎಸೆದ ನಗುವಿನ ನಂಜನ್ನು ತಾಳಿಕೊಳ್ಳಲು ಕಷ್ಟವಾಗಿ ಮುಖ ತಿರುಗಿಸಿದ್ದೆ.

“ಸರ್, ಈ ಡಿಎನ್‍ಎ ಟೆಸ್ಟಿನಲ್ಲಿ ಎಲ್ಲವೂ ಗೊತ್ತಾಗುತ್ತ? ಹೇಗೆ ಮಾಡ್ತಾರೆ?” ಅಂತ ಲೂಸಿ ಭಯ ಮತ್ತು ಕುತೂಹಲಗಳಿಂದ ಕೇಳಿದಳು. ಕುತೂಹಲಕ್ಕಿಂತ ಹೆಚ್ಚಾಗಿ ಭಯವೇ ಇತ್ತು ಮುಖದಲ್ಲಿ.

“ಯಾಕೆ ಲೂಸಿ? ನೀನೇ ಹೇಳಿದಿಯಲ್ಲ, ಈ ಟೆಸ್ಟ್ ಆದರೆ ಎಲ್ಲಾನೂ ಪ್ರೂವ್ ಆಗಿಬಿಡುತ್ತೆ ಅಂತ”

“ಹೌದು. ಸರ್, ನಿಜ ಹೇಳಿಬಿಡ್ತೀನಿ. ನಿಮ್ಮ ಹೆಂಡತಿ ನನಗೆ ಅಕ್ರಮ ಸಂಬಂಧ ಇದೆ ಅಂತ ಹೇಳಿದಾಗ ಅವರಿಗೆ ಹೊಡೆಯುವಷ್ಟು ಕೋಪ ಬಂತು. ಅದಕ್ಕೇ ನಾನೇ ಮುಂದಾಗಿ ಡಿಎನ್‍ಎ ಟೆಸ್ಟ್ ಆಗಲಿ ಅಂತ ಹೇಳಿದೆ. ನ್ಯೂಸ್‍ಪೇಪರ್‍ಗಳಲ್ಲಿ ಓದಿದ್ದೆ. ಇಂತಹ ಕೇಸುಗಳಲ್ಲಿ ಆ ಟೆಸ್ಟ್ ಮಾಡ್ತಾರೆ ಅಂತ. ಆದರೆ, ಅದರ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ” ಅಂದಳು ಲೂಸಿ ಮಂಕಾಗಿ.

ಅವಳು “ನಿಮ್ಮ ಹೆಂಡತಿ” ಅಂತ ಹೇಳಿದ ಮಾತು ರಾಯರ ಹೃದಯವನ್ನು ಕೊಕ್ಕೆಯಂತೆ ಸಿಕ್ಕಿಕೊಂಡಿತು. ಎಷ್ಟು ಸಲ ಹೇಳಿದ್ದೇನೆ ನನ್ನ ಕೇಸುಗಳಿಗೆ ಪ್ರತಿವಾದಿಯಾಗಿ ಬರಬೇಡ ಅಂತ! ಆದರೂ ಮತ್ತೆಮತ್ತೆ ನೋಯುವ ಹಲ್ಲನ್ನೇ ಸವರುವ ನಾಲಗೆಯ ಹಾಗೆ – ನನ್ನ ಬೆನ್ನಿಗಂಟಿಕೊಂಡೇ ನನಗೆ ಬರುವ ಕೇಸುಗಳನ್ನೇ ಎತ್ತಿಕೊಂಡು ನನಗೆದುರಾಗಿ ನಿಲ್ಲುತ್ತಾಳಲ್ಲ! ಈ ಹೆಂಗಸಿನ ಛಲಕ್ಕೆ “ಭೇಷ್” ಅನ್ನಲೇ ಅಥವಾ ಈ ಹಟಮಾರಿತನಕ್ಕೆ “ಛೀ” ಅನ್ನಲೇ? ಲೂಸಿ ಹೇಳಿದ ಮಾತು ನನಗೆ ಸಮಾಧಾನವೋ ಅವಮಾನವೋ? – ಎಲ್ಲವೂ ಗೊಂದಲ ರಾಯರಿಗೆ.

“ಸರ್, ನೀವು ತಿಳಿದವರು. ಇಂತಹ ಅದೆಷ್ಟೋ ಕೇಸುಗಳಲ್ಲಿ ಡಿಎನ್‍ಎ ಟೆಸ್ಟಿನ ರಿಪೋರ್ಟಿನ ಆಧಾರದಲ್ಲಿ ವಾದ ಮಾಡಿದವರು. ನೀವೇ ಹೇಳಬೇಕು” ಅಂತ ಹೇಳಿದಳು ಲೂಸಿ. ಮುಖದಲ್ಲಿ ಮತ್ತೆ ಅದೇ ಭಯ, ದೈನ್ಯ.

“ಏನು ಹೇಳಬೇಕು?”, ಗೊತ್ತಾಗದೆ ಕೇಳಿದರು.

“ಈ ಟೆಸ್ಟ್ ಹೇಗೆ ಮಾಡ್ತಾರೆ? ನನ್ನನ್ನೂ ಪರೀಕ್ಷೆ ಮಾಡ್ತಾರಾ?”

“ಹೌದು. ನಿನ್ನನ್ನೂ ಪರೀಕ್ಷೆ ಮಾಡಬಹುದು”

“ಅಂದರೆ, ನನ್ನ ಬಗ್ಗೆ ಎಲ್ಲವೂ ಗೊತ್ತಾಗುತ್ತ?”, ಲೂಸಿಯ ಪ್ರಶ್ನೆ.

ರಾಯರಿಗೆ ಲೂಸಿಯ ಒಳತೋಟಿ ಅರ್ಥವಾಯಿತು. ಯಾವುದೋ ಗಳಿಗೆಯಲ್ಲಿ ಏನೋ ತಪ್ಪು ಮಾಡಿದೆ ಹುಡುಗಿ.

“ಹಾಗೆಲ್ಲ ಎಲ್ಲವನ್ನೂ ಹೇಳೋದಕ್ಕೆ ಅವರೇನೂ ದೇವರಲ್ಲ. ಲೂಸಿ, ನನ್ನ ಹೆಂಡತಿ ಹೇಳಿದ ಮಾತು ಮರೆತುಬಿಡು. ಜೀವನದಲ್ಲಿ ಎಲ್ಲರೂ ಒಂದಲ್ಲ ಒಂದು ಗಳಿಗೆಯಲ್ಲಿ ತಪ್ಪು ಮಾಡ್ತಾರೆ. ನಾಚಿಕೆ ಬಿಟ್ಟು ಹೇಳ್ತೇನೆ ಕೇಳು – ನೀನು ಚೆಲುವೆ. ಅನುಪಮ ಸುಂದರಿ. ವಿಶ್ವಸುಂದರಿ ಸ್ಪರ್ಧೆಗೆ ನಿಂತಿದ್ದರೆ ಟಾಪ್‍ಟೆನ್‍ನಲ್ಲಿ ಬರ್ತಿದ್ದಿಯೋ ಏನೋ. ಅಂಥವಳು ಯಾವುದೋ ಗಳಿಗೆಯಲ್ಲಿ ಸ್ವಲ್ಪ ಕಾಲು ಜಾರೋದು ಅಂಥಾ ಪ್ರಮಾದವೇನಲ್ಲ.”

“ಅಂದ್ರೆ? ಏನು ಹೇಳ್ತಾ ಇದೀರಿ?” ಲೂಸಿ ಸೆಟೆದುಕೊಂಡಳು. ಹಾವಿನಂತೆ ಬುಸುಗುಟ್ಟತೊಡಗಿದಳು. ರಾಯರಿಗೂ ತಾನು ಮೇರೆ ದಾಟಿ ಮಾತಾಡಿಬಿಟ್ಟೆನೆಂಬ ಪ್ರಜ್ಞೆ ಬಂತು. ಕೂಡಲೇ ತಪ್ಪನ್ನು ತಿದ್ದಿಕೊಳ್ಳುತ್ತ “ಅಲ್ಲ ಲೂಸಿ, ನಾನು ಯಾವ ತಪ್ಪು ಅರ್ಥದಲ್ಲೂ ಹೇಳಲಿಲ್ಲ. ಪೀಟರ್ ಈ ಮಗುವಿನ ತಂದೆ ಹೌದೋ ಅಲ್ಲವೋ ಅನ್ನುವುದು ಬಿಟ್ಟರೆ ಬೇರೆ ಯಾವ ಪರೀಕ್ಷೆಯನ್ನೂ ಅವರು ಮಾಡೋದಿಲ್ಲ ಅಂತ ಹೇಳಿದೆ ಅಷ್ಟೆ” ಅಂದರು.

“ಅದನ್ನೇ ನಾನೂ ಕೇಳ್ತಿರೋದು. ಅದರಲ್ಲಿ ನನ್ನ ಗುಣಲಕ್ಷಣಗಳ ಬಗ್ಗೇನೂ ಗೊತ್ತಾಗುತ್ತೆ ಅಂತ ಹೇಳಿದಿರಲ್ಲ. ನನ್ನ ಯಾವ ಗುಣಲಕ್ಷಣಗಳ ಬಗ್ಗೆ ಗೊತ್ತಾಗುತ್ತೆ?”

ಅವಳ ಪ್ರಶ್ನೆಯ ತಲೆಬುಡ ಅರ್ಥವಾಗಲಿಲ್ಲ ರಾಯರಿಗೆ. ಈ ಹುಡುಗಿಗೆ ನಿಜವಾಗಿಯೂ ಏನು ಬೇಕು? ತನಗೆ ಯಾವ ಅಕ್ರಮ ಸಂಬಂಧವೂ ಇಲ್ಲ ಅಂತಿದ್ದಾಳೆ. ಆದರೆ ಪರೀಕ್ಷೆ ಮಾಡಿಸಿಕೊಳ್ಳಲು ಹೆದರುತ್ತಾಳೆ! ತನಗೂ ಹಾಗೆ ಅನಿಸಿರಲಿಲ್ಲವೇ ಇಪ್ಪತ್ತು ವರ್ಷದ ಕೆಳಗೆ!

“ಲೂಸಿ, ಇದು ಕೋರ್ಟಲ್ಲ. ನನ್ನ ಆಫೀಸು. ಇಲ್ಲಿರುವವರು ಸಧ್ಯಕ್ಕೆ ನಾನು ಮತ್ತು ನೀನು ಮಾತ್ರ. ವಿಷಯವನ್ನು ಸರಳವಾಗಿ ನೇರವಾಗಿ ಹೇಳು. ಕೊಂಕಣ ಸುತ್ತಿ ಮೈಲಾರಕ್ಕೆ ಬರದೆ, ನಿನ್ನ ಪ್ರಶ್ನೆ ಏನು ಅಂತ ನೇರವಾಗಿ ಯಾವ ಮುಚ್ಚುಮರೆ ಇಲ್ಲದೆ ಕೇಳು” ಅಂದರು.

ಲೂಸಿ ತಾನು ತಂದಿದ್ದ ಫೈಲನ್ನು ಹಿಂಜರಿಯುತ್ತ ರಾಯರ ಕೈಗಳಲ್ಲಿಟ್ಟಳು. ರಾಯರು ಅದನ್ನು ತೆರೆದು ಹಾಳೆಹಾಳೆಗಳನ್ನು ತಿರುವ ಹತ್ತಿದರು. ಫೈಲಲ್ಲಿ ಮುಚ್ಚಿಹೋದ ಮುಖದ ಏರಿದ ಹುಬ್ಬುಗಳನ್ನು ಮತ್ತು ಹಣೆಯಲ್ಲಿ ಕೆನೆಗಟ್ಟಿದ ಬೆವರಹನಿಗಳನ್ನು ಮಾತ್ರ ನೋಡಲು ಸಾಧ್ಯವಾಯಿತು ಅವಳಿಗೆ.

ಫೈಲನ್ನು ಮುಚ್ಚುತ್ತ “ಇದು ನಿಜವೇ?” ಎಂದು ಕಟ್ಟಿದ ಗಂಟಲಿನಿಂದ ಕಷ್ಟಪಟ್ಟು ಕೇಳಿ ಮೇಜಿನ ಮೇಲಿನ ಗ್ಲಾಸಿನ ನೀರನ್ನು ಗಟಗಟ ಕುಡಿದರು.

ಲೂಸಿ ತಲೆಯಲ್ಲಾಡಿಸಿದಳು.

“ಇಷ್ಟು ದಿನ ಯಾಕಮ್ಮ ಮುಚ್ಚಿಟ್ಟೆ ಈ ವಿಷಯ? ಈಗ ಕೇಸು ಬೇರೆಯೇ ತಿರುವು ತೆಗೆದುಕೊಳ್ಳುತ್ತದಲ್ಲ?” ಅಂದರು. ಮನಸಲ್ಲಿ ಸಾವಿರ ತೆರೆಗಳ ಭೋರ್ಗರೆತ. ಇಷ್ಟು ವರ್ಷದ ವಕೀಲಿವೃತ್ತಿಯಲ್ಲಿ ಮೊದಲ ಬಾರಿಗೆ ಅಂತರಾಳದಲ್ಲಿ ತಲ್ಲಣ, ಗೊಂದಲ, ಹೇಳಲಾರದ ಚಡಪಡಿಕೆ.

“ಹೋಗಿ ಬರ್ತೇನೆ” ಅಂತ ಹೇಳಿ ಲೂಸಿ ಹೊರನಡೆದಳು. ತಾನು ಕೇಳಿಕೊಂಡು ಬಂದ ಪ್ರಶ್ನೆಗೆ ಈಗ ಉತ್ತರ ಅಮುಖ್ಯವೆಂದು ಆಕೆಗೆ ಅನಿಸಿರಬೇಕು!

# * # * #

ಕೋರ್ಟಿನಲ್ಲಿ ಕೋಲಾಹಲವಾಯಿತು. ಫೈಲು ನೋಡಿದ ಜಡ್ಜಿಗೂ ಇದನ್ನು ನಂಬಲು ತುಸು ಕಷ್ಟವೇ ಆಯಿತು. ಲೂಸಿಯ ಹರೆಯದ ಚಿತ್ರಗಳನ್ನೂ ಸರ್ಜರಿಗೆ ಮೊದಲು ತೆಗೆದ ಚಿತ್ರಗಳನ್ನೂ ಸರ್ಜರಿಯ ಹಲವು ಹಂತಗಳನ್ನು ತೋರಿಸುವ ಚಿತ್ರಗಳನ್ನೂ ಎಲ್ಲಾ ಸರ್ಜರಿ ಮುಗಿದ ಮೇಲೆ ತೆಗೆದ ಚಿತ್ರಗಳನ್ನೂ ಫೈಲಿನಲ್ಲಿ ಅಳವಡಿಸಿದ್ದರು. ಇಡೀ ಫೈಲನ್ನು ಓದಿದವರಿಗೆ ಒಂದು ಒಳ್ಳೆಯ ಕೇಸ್‍ಸ್ಟಡಿ ಮಾಡಿದ ಅನುಭವ ಸಿಗುವಂತಿತ್ತು.

“ಲೂಸಿ ಮೊದಲು ಹೇಗಿದ್ದಳು ಅಂತ ನಾನು ಯಾವ ವಿಶೇಷಣವನ್ನೂ ಹಾಕಿ ವರ್ಣಿಸುವುದಿಲ್ಲ. ಚಿತ್ರ ನಿಮ್ಮೆದುರೇ ಇದೆ. ಆದರೆ ಆ ಬಳಿಕ ಆಕೆ ಸರ್ಜರಿಯ ಆರು ಹಂತಗಳನ್ನು ಪೂರೈಸಿದ ಮೇಲೆ ಯಾವ ರೂಪ ಪಡೆದಿದ್ದಾಳೆ ಅನ್ನುವುದಕ್ಕೆ ಚಿತ್ರ ಯಾಕೆ, ಸಾಕ್ಷಾತ್ ಲೂಸಿಯೇ ಕಣ್ಣ ಮುಂದೆ ಇದ್ದಾಳೆ.

ಈ ಬದಲಾವಣೆಗಳನ್ನು ಹಾದುಬರುವುದಕ್ಕೆ ಅವಳು ವಹಿಸಿದ ತಾಳ್ಮೆ, ಪಟ್ಟ ಶ್ರಮ, ತಿಂದ ನೋವುಗಳನ್ನು ನಾವು ಯಾರೂ ಶಬ್ದಗಳಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ. ಇದಕ್ಕಾಗಿ ಲೂಸಿ ತನ್ನ ಜೀವಮಾನಪೂರ್ತಿ ಗಳಿಸಿ ತೀರಿಸಬೇಕಾದ ಸಾಲದ ಹೊರೆ ಹೊತ್ತಿದ್ದಾಳೆ. ಅರ್ಥಾತ್ ಅಮೆರಿಕೆಗೆ ಹೋಗಿ ಬರಲು, ಅಲ್ಲಿ ಉಳಿದುಕೊಂಡು ಈ ಸರ್ಜರಿಯನ್ನು ಯಶಸ್ವಿಯಾಗಿ ಮುಗಿಸಿಕೊಳ್ಳಲು ಸಾವಿರಾರು ಡಾಲರುಗಳನ್ನು – ನಮ್ಮ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ – ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿದ್ದಾಳೆ. ಇದು ಮೋಸದ ಪ್ರಶ್ನೆಯಲ್ಲ. ಕುರೂಪಿ ಅಂತ ಸಮಾಜದಿಂದ ತಿರಸ್ಕೃತಳಾದ ಒಬ್ಬಳು ಹೆಣ್ಣುಮಗಳು ಮತ್ತೆ ತಲೆಎತ್ತಿ ನಿಲ್ಲಲು, ಸಮಾಜದಲ್ಲಿ ಎಲ್ಲರ ಹಾಗೆ ಬದುಕಲು ನಡೆಸಿದ ಹೋರಾಟದ ಪ್ರಶ್ನೆ” ಅಂತ ರಾಯರು ಭಾವಾವೇಶದಿಂದ ಮಾತಾಡಿದರು.

ಲೂಸಿಯ ಕಣ್ಣು ಹನಿಗೂಡಿತು.

“ಸಾಧ್ಯವಿಲ್ಲ, ಯುವರ್ ಆನರ್. ಈ ಮಾತನ್ನು ಒಪ್ಪೋದಿಕ್ಕೆ ಸಾಧ್ಯವೇ ಇಲ್ಲ. ಲೂಸಿ ತಪ್ಪಿತಸ್ಥಳು ಅನ್ನೋದನ್ನು ಮಾತಿನ ಆವೇಶದಲ್ಲಿ ನಮ್ಮ ಪ್ರತಿವಾದಿಗಳೇ ಒಪ್ಪಿಕೊಂಡುಬಿಟ್ಟಿದಾರೆ. ಲೂಸಿ ಇಷ್ಟು ವರ್ಷ ನಂಬಿದ ಗಂಡನಿಗೆ ಮೋಸ ಮಾಡಿದ್ದಾಳೆ. ಪ್ಲಾಸ್ಟಿಕ್‍ಸರ್ಜರಿಯಾದ ವಿಷಯವನ್ನು ಅವಳಾಗಲೀ ಅವಳ ಮನೆಯವರಾಗಲೀ ಪೀಟರ್‍ಗೆ ತಿಳಿಸಿಲ್ಲ. ಅಂದರೆ ಇದು ಮೋಸ ಮಾಡಿ ಮಾಡಿದ ಮದುವೆ. ಮದುವೆ ಆದ ಮೇಲೂ – ಈ ನಾಲ್ಕು ವರ್ಷಗಳಲ್ಲಿ ಲೂಸಿ ಈ ಗೌಪ್ಯವನ್ನು ಕಾಪಾಡಿಕೊಂಡು ಬಂದಿದ್ದಾಳೆ. ಅಟ್‍ಲೀಸ್ಟ್ ಮಗು ಹುಟ್ಟಿದ ಮೇಲಾದರೂ ಅವಳು ಸತ್ಯ ಹೇಳಿ ವಿಷಯವನ್ನು ತಿಳಿಗೊಳಿಸಬಹುದಾಗಿತ್ತು. ಆ ಕೆಲಸಾನೂ ಮಾಡಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ತನ್ನ ಪರವಾಗಿ ವಾದಿಸುವ ವಕೀಲರಿಗೇ ಇಷ್ಟುದಿನ ಈ ವಿಷಯವನ್ನು ಮರೆಮಾಚಿ ನ್ಯಾಯಾಲಯಕ್ಕೂ ಮೋಸ ಮಾಡಿದ್ದಾಳೆ”, ಸುಜಾತ ವಾದಿಸಿದಳು.

ವಾದ-ಪ್ರತಿವಾದಗಳು ದಿನ ಇಡೀ ನಡೆದರೂ ಯಾವೊಂದೂ ತೀರ್ಮಾನಕ್ಕೆ ಬರಲಾಗದೆ ಜಡ್ಜು ಸಾಹೇಬರು ಕೇಸನ್ನು ಮತ್ತೆ ಮುಂದೆ ಹಾಕಿದರು.

ಮಾಡಿದ ಮೋಸಕ್ಕೆ ಪ್ರತಿಯಾಗಿ ತನಗೆ ಹತ್ತುಲಕ್ಷ ಪರಿಹಾರ ನೀಡಬೇಕು ಅಂತ ಪೀಟರ್ ಹೊಸವರಸೆ ಶುರುಮಾಡಿದ್ದ. ಇಷ್ಟು ದಿನ ಯಾವ ಪುರಾವೆಯ ಬಲವಿಲ್ಲದೆ ಸಿಕ್ಕಸಿಕ್ಕ ಪುರಾಣಗಳಿಂದ ಉದಾಹರಣೆಗಳನ್ನು ಎಳೆದುತಂದು ವಾದ ಮಾಡುತ್ತಿದ್ದ ಸುಜಾತಳಿಗೆ ಈಗ ಹಬ್ಬದಡುಗೆ ಮಾಡಿ ಬಡಿಸಿದಂತಾಗಿತ್ತು. ಪ್ಲಾಸ್ಟಿಕ್ ಸರ್ಜರಿಯ ಫೈಲೇ ಅವಳ ಪಾಲಿಗೆ ಭಗವದ್ಗೀತೆಯಾಗಿತ್ತು. ಅದನ್ನು ವಾಕ್ಯವಾಕ್ಯಗಳಲ್ಲೂ ಬಳಸಿ ಕೇಸು ಕಳೆದುಕೊಳ್ಳಲು ಯಾವ ಕಾರಣವೂ ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದಳು.

“ಸರ್ಜರಿಯಾದ ವಿಷಯ ಗಂಡನಿಂದ ಯಾಕೆ ಬಚ್ಚಿಟ್ಟೆ ಹುಡುಗಿ?” ಅಂತ ರಾಯರು ಕೇಳಿದಾಗ, ಲೂಸಿ, “ಸರ್, ನಿಜ ಹೇಳಬೇಕೆಂದರೆ ಆ ಹಳೆಯ ಜೀವನವನ್ನು ಹುಗಿದುಹಾಕಿ ಮದುವೆಯಾಗಿ ಹೊಸ ಜೀವನ ನಡೆಸಬೇಕೂಂತಿದ್ದೆ. ಆದರೆ ನನ್ನ ಭೂತ ಮಗುವಿನ ರೂಪದಲ್ಲಿ ಮರುಕಳಿಸುತ್ತೆ ಅಂತ ಕನಸಲ್ಲೂ ಅಂದುಕೊಂಡಿರಲಿಲ್ಲ” ಅಂತ ಹೇಳಿ ತಪ್ಪು ಮಾಡದೆ ಪೆಟ್ಟು ತಿಂದ ಮಗುವಿನಂತೆ ಗಳಗಳ ಅತ್ತಳು. ರಾಯರಿಗೆ ಕರುಳು ಕಿವುಚಿತು.

# * # * #

ಪೀಟರ್ ಗುಮ್ಮನಗಸುಕನಂತೆ ಕೂತಿದ್ದ. ಎಲ್ಲಿಂದ ಶುರು ಮಾಡುವುದು ಅಂತ ತಿಳಿಯದೆ, ರಾಯರು, “ಕಾಫಿ ತಗೋ” ಅಂದರು. ಈ ಮನುಷ್ಯ, ತನ್ನನ್ನು ಕರೆದ, ಅದೂ ಗೌಪ್ಯವಾಗಿ – ಸುಜಾತ ಮೇಡಮ್‍ಗೆ ಕೂಡ ತಿಳಿಸದೆ ಇಲ್ಲಿ ಬಾ ಅಂತ ಹೇಳಿ ಕರೆಸಿದ ಕಾರಣವೇನು ಅಂತ, ಕಾಫಿಡೇಯ ಕೊಡೆಯಡಿಯಲ್ಲಿ ತಣ್ಣನೆ ಕೂತು ಯೋಚಿಸುತ್ತಿದ್ದ ಪೀಟರ್, ಕ್ಯಾಪುಚೀನೋ ಕೈಗೆತ್ತಿಕೊಂಡ.

“ಪೀಟರ್, ಒಂದು ಪ್ರಶ್ನೆ ಕೇಳ್ತೇನೆ. ಯಾವ ಪೂರ್ವಾಗ್ರಹಗಳನ್ನು ಇಟ್ಟುಕೊಳ್ಳದೆ ಹೇಳು. ಒಂದು ವೇಳೆ ಲೂಸಿ ಅವಳ ಸರ್ಜರಿ ರಹಸ್ಯವನ್ನು ಹೇಳಿಕೊಳ್ಳದೇ ಹೋಗಿದ್ದರೆ ನನಗೂ ನಿನಗೂ ಆ ವಿಷಯವೇ ಗೊತ್ತಾಗ್ತ ಇರಲಿಲ್ಲ. ಡಿಎನ್‍ಎ ಟೆಸ್ಟಿನಲ್ಲಿ ಮಗು ನಿನ್ನದೇ ಅಂತ ಪ್ರೂವ್ ಆಗ್ತಾ ಇತ್ತು. ನಾನು ಕೇಸ್ ಗೆಲ್ತಿದ್ದೆ. ಆಗೇನು ಮಾಡ್ತಿದ್ದೆ?” ಅಂತ ಪ್ರಶ್ನೆ ಎಸೆದರು ರಾಯರು.

“ಅವಳನ್ನೂ ಅವಳ ಮಗುವನ್ನೂ ದೂರ ಇಟ್ಟು ಬದುಕ್ತಿದ್ದೆ”, ಕಡ್ಡಿಮುರಿದಂತೆ ಹೇಳಿದ ಪೀಟರ್.

“ಅದು ಸಾಧ್ಯವಿಲ್ಲ. ತಾನು ಕೇಸು ಗೆದ್ದರೂ ಗಂಡ ತನ್ನನ್ನು ಹತ್ತಿರ ಸೇರಿಸ್ತಾ ಇಲ್ಲ. ತನ್ನನ್ನೂ ಮಗುವನ್ನೂ ಕಡೆಗಣಿಸಿದಾನೆ – ಅಂತ ಹೇಳಿ ಅವಳು ಕೋರ್ಟಿಗೆ ಹೇಳಿದ್ದರೆ, ಕೋರ್ಟು ನಿನಗೆ ಛೀಮಾರಿ ಹಾಕ್ತಾ ಇತ್ತು. ಅವಳ ಜೊತೆ ಬಾಳೋದಕ್ಕೆ ಆದೇಶಿಸ್ತಾ ಇತ್ತು”

“ಅದು ಹೇಗೆ ಆಗುತ್ತೆ? ಯಾರ ಜೊತೆ ಬಾಳಬೇಕು, ಯಾರನ್ನ ಬಿಡಬೇಕು ಅನ್ನೋದು ನನ್ನ ವೈಯಕ್ತಿಕ ಜೀವನದ ಇಷ್ಟಾನಿಷ್ಟಗಳ ಪ್ರಶ್ನೆ. ನಾನು ಇಂಥವರ ಜೊತೆಯೇ ಬದುಕಬೇಕು ಅಂತ ಹೇಳೋದಕ್ಕೆ ಕೋರ್ಟು ಯಾರು?” ಅಂತ ಉದ್ರಿಕ್ತನಾಗಿ ಕೇಳಿದ ಪೀಟರ್.

“ಎಕ್ಸಾಟ್ಲಿ! ಕೋರ್ಟು ಯಾರು ಈ ಸೂಕ್ಷ್ಮ ವಿಷಯಗಳನ್ನು ಡೀಲ್ ಮಾಡುವುದಕ್ಕೆ. ಇಷ್ಟಕ್ಕೂ ಕೋರ್ಟಿಗೆ ಏನು ಗೊತ್ತಾಗುತ್ತೆ? ಅದಕ್ಕೆ ಗೊತ್ತಿರೋದು ನ್ಯಾಯ ಅನ್ಯಾಯ ಆದೇಶ ವಿಚಾರಣೆ – ಇಷ್ಟೇ. ಆದರೆ, ಮನುಷ್ಯರ ನೆಲೆಯಿಂದ ಯೋಚಿಸು ಪೀಟರ್. ನಿನ್ನ ಹೆಂಡತಿ ಲೂಸಿಯ ನೆಲೆಯಲ್ಲಿ ನಿಂತು ಯೋಚಿಸು.

ಆಕೆ ಪಟ್ಟ ಕಷ್ಟಗಳು, ನುಂಗಿಕೊಂಡ ಅವಮಾನಗಳು, ಹಿಂಸೆಗಳು – ಇವುಗಳ ಬಗ್ಗೆ ಯೋಚಿಸು. ಅದನ್ನು ಮರೆಯಲು, ಮರೆಮಾಚಲು ಅವಳು ಪಟ್ಟ ನೋವುಗಳು ಮತ್ತು ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಯೋಚಿಸು. ಇವನ್ನೆಲ್ಲ ಫೈಲ್ ಮಾಡಿ ಕೋರ್ಟಿಗೆ ಕೊಡೋದಕ್ಕೆ ಸಾಧ್ಯಾನ? ಓದಿಕೊಂಡಿರುವ ನಿನಗೆ ನಾನು ಹೆಚ್ಚಿಗೆ ವಿವರಿಸಬೇಕಾದ್ದಿಲ್ಲ.”

ಪೀಟರ್ ಮೌನವಾದ. ಕಾಫಿಯ ಕಪ್ಪು ಕೈಯಲ್ಲೇ ಉಳಿದಿತ್ತು. ಕಣ್ಣುಗಳು ಏನನ್ನೋ ಯೋಚಿಸತೊಡಗಿದವು.

“ವರ್ಷಾನುಗಟ್ಟಲೆ ಜೊತೆಗಿದ್ದುಕೊಂಡೇ ಹಾದರ ಮಾಡೋರು ಇದ್ದಾರೆ. ಬೇರೆಯವರ ಜೊತೆ ಹಾಸಿಗೆ ಹಂಚಿಕೊಳ್ಳುವುದರ ಬಗ್ಗೆ ಮಾತ್ರ ಹೇಳ್ತಿಲ್ಲ ನಾನು. ಮನಸ್ಸಿನ ವ್ಯಭಿಚಾರದ ಬಗ್ಗೇನೂ ಸೇರಿಸಿ ಹೇಳ್ತಿದ್ದೇನೆ. ಒಬ್ಬನನ್ನು ಕಟ್ಟಿಕೊಂಡು ಇನ್ನೊಬ್ಬನನ್ನ ಮನಸಲ್ಲಿ ಪ್ರತಿಷ್ಠಾಪಿಸಿಕೊಂಡು ಸುಖದಾಂಪತ್ಯ ನಡೆಸುವವರು ಇದ್ದಾರೆ. ಅಂಥ ಜನರ ಮಧ್ಯದಲ್ಲಿ ನಿನಗೆ ಲೂಸಿ ಸಿಕ್ಕಿದ್ದಾಳೆ. ಅವಳನ್ನು ನೀನು ಮನಸಾರೆ ಪ್ರೀತಿಸಿದೆ. ಅವಳೂ ಅಷ್ಟೇ, ತಾನು ಸರ್ಜರಿ ಮಾಡಿಸಿಕೊಂಡು ರೂಪಸಿಯಾದ ಮೇಲೆ ಬೇಕಾದ್ದನ್ನು ಮಾಡಬಹುದಾದ ಎಲ್ಲಾ ಆಯ್ಕೆಗಳಿದ್ದರೂ ಅವನ್ನು ಬಿಟ್ಟು ನಿನ್ನನ್ನು ಪ್ರೀತಿಸಿದಳು. ಡಿಎನ್‍ಎ ಟೆಸ್ಟ್ ಬೇಕಾದರೂ ಆಗಲಿ, ಈ ಮಗು ನನ್ನ ಗಂಡನದ್ದೇ ಅಂತ ಕೋರ್ಟಿನಲ್ಲಿ ಎಲ್ಲರೆದುರು ನಿರ್ಭಯವಾಗಿ ಹೇಳಿದಳು. ಪೀಟರ್, ಇಂತಹ ಹೆಂಡತಿಯನ್ನು, ಕೆಟ್ಟರೂಪದ ಮಗು ಹೆತ್ತಳು ಅಂತ ದೂರ ಮಾಡೋದು, ಮಗುವನ್ನು ಒಪ್ಪಿಕೊಳ್ಳದೇ ಹೋಗೋದು ಅನ್ಯಾಯ ಅಲ್ಲವೇ? ಆ ಮಗು, ಪಾಪ, ಏನು ತಪ್ಪು ಮಾಡಿದೆ ಅಂತ ಅದನ್ನು ಎಸೀತೀಯ ಪೀಟರ್? ಅದು ದೇವರ ಸೃಷ್ಟಿ. ನಿನ್ನ ಪ್ರೀತಿಯನ್ನು ಬಸಿದು ಅದನ್ನು ಹೆತ್ತಿದೀಯ, ಅಲ್ಲವೆ?”

ಪೀಟರ್ ಏಳುವುದರಲ್ಲಿದ್ದ. ಆದರೆ ಕೈಕಾಲುಗಳು ಮರಗಟ್ಟಿ ಹೋದಂತೆ ಕೂತಲ್ಲೇ ಕಲ್ಲಾಗಿದ್ದ. ಏಳಬೇಕೆಂದು ತನ್ನನ್ನು ತಾನೇ ಕುರ್ಚಿಯಿಂದ ನೂಕಿಕೊಂಡರೂ ಯಾವುದೋ ಶಕ್ತಿ ಒತ್ತಿ ಕೂರಿಸಿದಂತೆ ಕೂತಿದ್ದ.

“ನಿನ್ನನ್ನು ಇಲ್ಲಿ ಕರೆಸಿರೋದು, ಈ ಉಪಯೋಗಕ್ಕೆ ಬಾರದ ಉಪದೇಶಗಳನ್ನು ಕೊಡ್ತಾ ಇರೋದು – ಇವೆಲ್ಲ ನಾನು ಕೇಸು ಗೆಲ್ಲಬೇಕು ಅಂತ ಖಂಡಿತಾ ಅಲ್ಲ, ಪೀಟರ್. ನಾನು ಕೇಸು ಗೆಲ್ತೀನೋ ನೀನು ಗೆಲ್ತೀಯೋ ಅನ್ನೋದು ಇಲ್ಲಿ ಮುಖ್ಯ ಅಲ್ಲವೇ ಅಲ್ಲ. ಕೇಸು ಯಾರ ಕಡೆ ಹೋದರೂ – ನೀನು ಸೋಲ್ತೀಯ. ಯೋಚನೆ ಮಾಡು.” ಅಂತ ಹೇಳಿ ರಾಯರು, ಪೀಟರನ ಎಡಗೈಯ ಮೇಲೆ ತನ್ನ ಕೈಯಿಟ್ಟು ಅಮುಕಿದರು. “ಕುರೂಪ ಅನ್ನೋದು ಹೊರಗೆ ಕಾಣ ಸೋ ಚರ್ಮದ ಮೇಲಿಲ್ಲ, ಒಳಗೆ ಕೂತಿರೋ ಮನಸ್ಸಿನಲ್ಲಿದೆ” ಅಂತ ಬಾಗಿ ಹತ್ತಿರ ಬಂದು ಹೇಳಿ ಎದ್ದರು. ತಣ್ಣನೆ ಕೊರೆಯುವ ಕಾಫಿಯನ್ನು ಬಿಸಿಕೆಂಡ ಎನ್ನುವ ಹಾಗೆ ಅಮುಕಿ ಹಿಡಿದು ಬೆವರುತ್ತಿದ್ದ ಪೀಟರ್, ಅದರ ಗುಟುಕು ಗಂಟಲಲ್ಲಿ ಇಳಿಯುತ್ತಿಲ್ಲವೆನ್ನುವಂತೆ ಎದ್ದ.

ಇಬ್ಬರೂ ಅವರವರ ದಾರಿ ಹಿಡಿದು ಸಂಜೆಗತ್ತಲಲ್ಲಿ ಕರಗಿ ಹೋದರು.

# * # * #

ಹೊರಗೆ ಸುರಿಯುತ್ತಿದ್ದ ಜಿಟಿಜಿಟಿ ಮಳೆಗೆ ತನ್ನನ್ನು ಪೂರ್ತಿ ಒಡ್ಡಿಕೊಂಡಂತಿದ್ದ ರಾಯರು ರಫಿಯ ಹಾಡುಗಳಿಗೆ ಕಿವಿಹಚ್ಚಿ ಕೂತಿದ್ದರು. ಅದ್ಯಾವುದೋ ಕೇಸಿನಲ್ಲಿ ಸಂಜೆವರೆಗೆ ಗುದ್ದಾಡಿ, ಕೆಲವು ಕಕ್ಷಿದಾರರನ್ನು ಭೇಟಿಯಾಗಿ ನಡೆಸಬೇಕಾದ ಮಾತುಕತೆಗಳನ್ನೆಲ್ಲ ಚುಟುಕಾಗಿ ಮುಗಿಸಿ, ಅರೆಜೀವವಾಗಿ, ಬೀಸುವ ಮಳೆಗೆ ಹಾರುವ ಛತ್ರಿಯನ್ನು ಹಿಡಿದು ಪಟಪಟ ಎಂದು ನೀರು ಹಾರಿಸುತ್ತಾ ನಡೆದುಬಂದಳು ಸುಜಾತ. ಮನೆಯೊಳಗೆ ಬರುತ್ತಲೇ ಗಂಡ, ಲೋಕದ ಎಲ್ಲ ವ್ಯವಹಾರ ಮರೆತು ಹಾಡು ಗುನುಗುತ್ತ ಕೂತಿದ್ದನ್ನು ಕಂಡು ಆಕೆಗೆ ಸಂಕಟವಾಯಿತು.

“ಕೇಳಿದ್ರಾ ಹೊಸ ವಾರ್ತೆ?” ಅಂತ ಬಂದು ರಫಿಯ ಕೊರಳು ಕಿವುಚಿದಳು. ಹಾಡು ನಿಂತಿತು.

ರಾಯರು, “ಏನು?” ಎಂಬಂತೆ ಕತ್ತು ಹಾರಿಸಿ ಹುಬ್ಬು ಏರಿಸಿದರು.

“ನೀನೋ ನಾನೋ ಅಂತ ಖಡ್ಗ ಹಿಡ್ಕೊಂಡು ಯುದ್ಧ ಮಾಡ್ತಿದ್ದೆವಲ್ಲ. . .”

“ಯಾವ ಯುದ್ಧ?”

“ಅದೇರೀ, ಆ ಲೂಸಿ-ಪೀಟರ್ ಕೇಸು. ಕೊನೆಗೂ ಒಂದು ದರಿದ್ರ ಅಂತ್ಯ ಕಂಡಿತು. ಪ್ರೀಮೆಚೂರ್ ಡೆತ್ ಅಂತಾರಲ್ಲ, ಹಾಗೆ!”

“ಸುಜಾತ, ಹೆಣ್ಣಾಗಿ ಇಂತಹ ಉದಾಹರಣೆಗಳನ್ನು ನಿರ್ವಿಕಾರದಿಂದ ಹೇಳ್ತೀಯಲ್ಲ ಮಾರಾಯ್ತಿ, ಏನೂ ಅನಿಸೋದಿಲ್ಲವ?” ಅಂತ ರಾಯರು ರಾಗ ಎಳೆದರು.

“ಸುಬ್ಬುಲಕ್ಷ್ಮಿ ಹಾಡ್ತಾ ಇದಾರೆ ಅಂದ್ರೆ ತಂಬೂರಿಗೆಷ್ಟು ತಂತಿ ಅಂತ ಕೇಳಿದ ಹಾಗಾಯ್ತು! ಅಲ್ರೀ, ನಾನು ಹೇಳೋದು ಕೇಳಿಸ್ತಾ ಇದೆಯಾ? ಲೂಸಿ-ಪೀಟರ್ ಕೇಸು ಎಕ್ಕುಟ್ಟೋಯ್ತು ಅಂದೆ”

“ಅದು ಹೇಗೆ, ನಾನು – ನಿನ್ನ ಪ್ರತಿವಾದಿ, ಇಲ್ಲಿ ಮನೇಲಿ ಕೂತು ಕಳ್ಳೇಕಾಯಿ ತಿಂತಿದ್ದರೆ ಕೇಸು ಮುಗಿದುಹೋಗುತ್ತೆ?” ಅಂತ ಕೇಳಿದರು ರಾಯರು.

“ಈಗಷ್ಟೇ ಫೋನು ಮಾಡಿದ ಪೀಟರ್. ಅವನು ಕೇಸು ವಾಪಸು ತಗೊಳ್ತಿದಾನಂತೆ. ಅದೇನೇನೋ ಅಂದ. ಈ ದರಿದ್ರ ಮಳೆಯಲ್ಲಿ ಬರೀ ಗೊರಗೊರ ಅಂತ ಕೇಳಿಸ್ತು. ಅದೇನು ಮಾಡ್ತಾನೋ ಏನು ಕತೆಯೋ. ಬರೋ ಹತ್ತುಲಕ್ಷಾನ ಕಾಲಲ್ಲಿ ಒದ್ದ ಹಾಗಾಗುತ್ತೆ ಕೇಸು ವಾಪಸು ತಗೊಂಡ್ರೆ. ಬುದ್ಧಿಗೇಡಿಗಳು! ಬುದ್ಧಿಗೇಡಿಗಳು!” ಎಂದು ಬರುತ್ತಿದ್ದ ಕೋಪವನ್ನು ವ್ಯಾನಿಟಿಬ್ಯಾಗಿನ ಮೇಲೆ ತೋರಿಸುತ್ತ ಅದನ್ನು ಸೋಫದ ಮೇಲೆ ರಪ್ಪನೆ ಎಸೆದು ಕೈಕಾಲು ತೊಳೆಯಲು ಒಳಗೆ ಹೋದಳು.

ರಾಯರು, ದನಿಯಿಲ್ಲದೆ ಕಂಗಾಲಾಗಿ ನಿಂತಿದ್ದ ರಫಿಯ ಕೊರಳಿನ ಚಿಲುಮೆಯನ್ನು ಮತ್ತೆ ಮುಟ್ಟಿ ಎಬ್ಬಿಸಿ ಅವನ ಹಾಡಿಗೆ ಕಿವಿಯಾಗಿ ಕೂತರು.

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!