ಕಥೆ

ಹನುಮ ರಚಿತ ರಾಮ‌ ಚರಿತ

ಹನುಮಂತ ಕಿಷ್ಕಿಂಧೆಯಲ್ಲಿ ರಾಮನನ್ನು ಮೊದಲಬಾರಿ ಭೇಟಿಯಾಗುತ್ತಾನೆ. ಅವನು ಮರ್ಯಾದಾ ಪುರುಷೋತ್ತಮ ರಾಮನ ಬಗ್ಗೆ ಕೇಳಿರುತ್ತಾನೆ ಹೊರತು ಸ್ವತಃ ಭೇಟಿಯಾಗಿರುವುದಿಲ್ಲ. ಗುಣ, ನಡತೆಗಳಲ್ಲಿ ನರಶ್ರೇಷ್ಠನಾದ, ತಾನು ಜಪಿಸುತ್ತಿದ್ದ ಶ್ರೀಮನ್ನಾರಾಯಣನ ಅವತಾರನಾದ ರಾಮ‌ನೇ ಸ್ವತಃ ಅವನ ಬಳಿ ಬಂದು ದರ್ಶನ ನೀಡಿದ್ದು ಎಲ್ಲಿಲ್ಲದ ಸಂತಸ ಅವನಿಗೆ. ಆದರೆ ಆ ನಂತರ ರಾಮನ ದಾರುಣ ಪರಿಸ್ಥಿತಿ ತಿಳಿದು ಮರುಕ ಹುಟ್ಟಿ, ಸೀತಾರಾಮರನ್ನು ಒಂದಾಗಿಸಲು ತನ್ನ ಕಪಿಸೈನ್ಯದೊಡನೆ ರಾಮನ ಭಂಟನಾಗಿ ರಾಮನೊಂದಿಗೆ ಜೊತೆಯಾಗಿದ್ದಲ್ಲದೇ ರಾಮಾವತಾರದ ಮುಕ್ತಾಯದವರೆಗೂ ಜೊತೆಯಲ್ಲಯೇ ಇರುತ್ತಾನೆ.

ಮೊದಲು ತಾನು ಕೇಳಿದ್ದ, ನಂತರ ತಾನೇ ಸ್ವತಃ ಜೊತೆಗಿದ್ದು ಕಂಡಿದ್ದ ಅಗಣಿತ ಗುಣಗಳ‌ ಶ್ರೀರಾಮನ ಚರಿತ್ರೆಯ, ಅವನ ಜೀವನ‌ ಪಥದ ಕುರಿತಾಗಿ ಯುಗಯುಗಗಳಲ್ಲೂ ಜನ ತಿಳಿಯುವಂತಾಗಬೇಕು, ಅವನ ಆದರ್ಶವನ್ನು ಅನುಸರಿಸುವಂತಾಗಬೇಕೆಂದು ವರ್ಷಗಳ ಕಾಲ ಸಂಜೀವಿನಿ ಪರ್ವತದ ಅಮೃತವಾದ ಮರದ ಎಲೆಗಳಲ್ಲಿ ರಾಮ ಚರಿತ್ರೆಯನ್ನು ಬರೆದು ಶೇಖರಿಸಿಡುತ್ತಾನೆ. ಪ್ರಪಂಚಕ್ಕೆ ಜ್ಞಾನವನ್ನು ಪ್ರಸಾರ ಮಾಡುವ, ವಿದ್ಯೆಯನ್ನು ಕಲಿಸುವ ಋಷ್ಯಾಶ್ರಮಗಳಿಗೆ ಹೋಗಿ ತಾನು ರಚಿಸಿದ ರಾಮಚರಿತ್ರೆಯನ್ನು ಹಸ್ತಾಂತರಿಸಲು ನಿರ್ಧರಿಸುತ್ತಾನೆ.

ಅದೇ ಸಮಯಕ್ಕೆ ವಾಲ್ಮೀಕಿ‌ ಮಹರ್ಷಿಗಳು ಸಹ ರಾಮ ಚರಿತ್ರೆಯ ದಾಖಲಿಸಿಟ್ಟಿದ್ದಾರೆಂಬ ವಿಷಯ ಅವನಿಗೆ ತಿಳಿಯುತ್ತದೆ. ತಕ್ಷಣವೇ ವಾಲ್ಮೀಕಾಶ್ರಮದೆಡೆಗೆ ತೆರಳುತ್ತಾನೆ. ಅವರು ಬರೆದ ರಾಮ ಚರಿತ್ರೆಯ ಬಗ್ಗೆ ಪ್ರಸ್ತಾಪಿಸಿ ದಯಮಾಡಿ ತನಗೇ ಮಾದಲು ಅದನ್ನು ಓದುವ ಅವಕಾಶ ನೀಡಬೇಕು ಎಂದು ಪ್ರಾರ್ಥಿಸುತ್ತಾನೆ ಜೊತೆಗೆ ತಾನೂ ಸಹ ದಾಖಲಿಸಿದ ರಾಮಚರಿತ್ರೆಯ ಕುರಿತೂ ಪ್ರಸ್ತಾಪಿಸುತ್ತಾನೆ.

ತಾನು ದಾಖಲಿಸಿದ ಶ್ರೀ ರಾಮನ ಚರಿತ್ರೆಯನ್ನು ಮೊದಲು ಓದಲು ಸ್ವತಃ ರಾಮಭಂಟನೇ ಕೋರುತ್ತಿದ್ದಾನೆಂದರೆ ವಾಲ್ಮೀಕಿಗಳಿಗೆ ಇದಕ್ಕಿಂತ ಸಂತೋಷದ ವಿಷಯ ಬೇಕೇ? ತಾನು ಬರೆದ ರಾಮಾಯಣವನ್ನು ಆನಂದದಿಂದ ಹನುಮನಿಗೆ ನೀಡುತ್ತಾರೆ. ಎಲ್ಲಿಯೂ ಲೋಪದೋಷಗಳಿಲ್ಲದ, ಎಲ್ಲಿಯೂ ಕುಂದುಕೊರತೆಗಳಿಲ್ಲದ, ಅತ್ಯಂತ ಸಲಿಲವಾದ ಚರಿತ್ರೆಯ ಓದಿ ಹನುಮಂತ ಸಂತೃಪ್ತನಾಗುತ್ತಾನೆ.
“ವಾಲ್ಮೀಕಿ ಮಹರ್ಷಿಗಳೇ, ಇದಕ್ಕಿಂತ ಶ್ರೇಷ್ಠವಾದ ಮೇರಿಕೃತಿ ಜಗದಲ್ಲಿ ಇನ್ನೊಂದಿಲ್ಲ. ಜರುಗಿದ ಘಟನಾವಳಿಗಳನ್ನು, ಅದರಲ್ಲಡಗಿರುವ ತತ್ವಾದರ್ಶಗಳನ್ನು ಓದಿದ ಕೂಡಲೇ ಅರ್ಥೈಸಿಕೊಳ್ಳುವಂತೆ ಯಥಾವತ್ತಾಗಿ ದಾಖಲಿಸಿರುವಿರಿ. ಇದಕ್ಕಿಂತ ಪುಣ್ಯಪ್ರದವಾದ ಕಾರ್ಯ ಮತ್ತೊಂದು ಯಾವುದಿದೆ. ಎಲ್ಲಾ ರೀತಿಯಿಂದಲೂ ತಾವು ದಾಖಲಿಸಿದ ರಾಮಾಯಣ ಪೂರ್ಣವಾದುದು” ಎಂದು ತಾನು ಬರೆದು ತಂದಿದ್ದ ರಾಮಚರಿತ್ರೆಯ ಎಲೆಗಳನ್ನು ಆಶ್ರಮದ ಗೋವುಗಳಿಗೆ ಆಹಾರವಾಗಿ ನೀಡುತ್ತಾನೆ.

ಇದರಿಂದ ಚಕಿತರಾದ ವಾಲ್ಮೀಕಿ “ಅಯ್ಯೋ.. !ಇದೇನು ಮಾಡಿದೆ ಹನುಮ. ನೀನು ಕಷ್ಟಪಟ್ಟು ದಾಖಲಿಸಿದ ರಾಮಚರಿತ್ರೆಯ ಎಲೆಗಳನ್ನು ಕ್ಷಣಮಾತ್ರದಲ್ಲಿ ಗೋವುಗಳಿಗೆ ನೀಡಿದೆಯಲ್ಲಾ.. ನಾನೂ ಸಹ ಅದನ್ನು ಒಮ್ಮೆಯೂ ಓದಲಿಲ್ಲ.. ನಾನಾದರೂ ರಾಮನ ಬಗ್ಗೆ ಕೇಳಿ ಬರೆದಿದ್ದು. ನೀನು ಸ್ವತಃ ಶ್ರೀ ರಾಮನೊಡನೆ ಇರುವವನು. ನೀನು ದಾಖಲಿಸಿದ ರಾಮಾಯಣವು ನಾ ರಚಿಸಿದ ರಾಮಾಯಣಕ್ಕಿಂತಲೂ ಉತ್ಕೃಷ್ಟವಾಗಿದ್ದಿರಬಹುದು. ಓದುವ ಮೊದಲೇ ಗೋಗ್ರಾಸವಾಗಿ ನೀಡಿಬಿಟ್ಟಯಲ್ಲಾ, ಎಂತಹ ಅಚಾತುರ್ಯವಾಗಿಬಿಟ್ಟಿತು” ಎಂದು ಮರುಗಿದರು.
“ಮಹರ್ಷಿಗಳೇ ನಾನು ರಾಮಚಂದ್ರನ ಜೊತೆ ಇರಬಹುದು, ಆದರೆ ತಾವು ಅವನ ಚರಿತ್ರೆಯನ್ನು ಯಾವುದೇ ಲೋಪದೋಷಗಳಿಲ್ಲದೇ, ಉತ್ಪ್ರೇಕ್ಷೆಗಳಿಲ್ಲದೇ ರಚಿಸಿದ್ದೀರ. ಶ್ರೀರಾಮನ ಕುರಿತಾದ ತತ್ವಾದರ್ಶಗಳನ್ನು ಅವನ ಚರಿತ್ರೆಯ ಮೂಲಕ ಅತ್ಯಂತ ಸರಳವಾಗಿ ವಿವರಿಸಿದ್ದೀರ. ಹಾಗಾಗಿ ನಾ ಬರೆದ ರಾಮಾಯಣದ ಅವಶ್ಯಕತೆ ಕಂಡುಬರುವುದಿಲ್ಲ. ಇದನ್ನೇ ಲೋಕದಲ್ಲಿ ಪಸರಿಸಿ. ಅದರ ಮೂಲಕ ರಾಮನ ಆದರ್ಶಗಳನ್ನು ಲೋಕವು ಹೊಂದಲಿ” ಎಂದನು ಹನುಮಂತ.

“ಹನುಮ, ನಾನು ಬರೆದ ರಾಮಾಯಣದ ಜೊತೆಗೆ ನೀನೂ ಬರೆದ ರಾಮಾಯಣವನ್ನೂ ತುಲನೆ ಮಾಡಿ ಯೋಗ್ಯವಾದುದನ್ನು ಆಯ್ದುಕೊಳ್ಳಲು ಓದುಗರಿಗೇ ಬಿಡಬಹುದಿತ್ತು. ಅಥವಾ ಎರಡೂ ರಾಮಾಯಣವನ್ನೂ ಲೋಕದೆಲ್ಲೆಡೆ ಪಸರಿಸಬಹುದಿತ್ತು. ಬಂಟನಾಗಿ ಜೊತೆಗಿದ್ದ ಹನುಮಂತನೇ ಬರೆದ ರಾಮಾಯಣವೆಂದರೆ ಅದಕ್ಕೆ ಇನ್ನೂ ಮಹತ್ವ ಬರುತ್ತಿತ್ತು. ಜೊತೆಗೆ ನಾ ಬರೆದ ರಾಮಾಯಣವನ್ನು ಶ್ರದ್ಧಾಳುಗಳು ಓದಿ ಅದರಿಂದ ಪ್ರೇರೇಪಿತರಾಗಿ, ಶ್ರೀ ರಾಮನ ಆದರ್ಶಗಳನ್ನು ಅಳವಡಿಸಿಕೊಂಡಿದ್ದಾರೆಂಬ ಸಮಾಧಾನ ನಿನಗೂ ಇರುತ್ತಿತ್ತು‌‌, ರಾಮಾಯಣದ ಕರ್ತೃವೆಂಬ ಪ್ರಸಿದ್ಧಿಯೂ ನಿನಗೆ ಬರುತ್ತಿತ್ತು” ಎಂದರು ವಾಲ್ಮೀಕಿ ಮಹರ್ಷಿಗಳು.

“ಮಹರ್ಷಿಗಳೇ, ರಾಮನನ್ನು ಅರ್ಥೈಸಿಕೊಂಡವರು ಯಾರು ಬರೆದರೂ ಇದಕ್ಕಿಂತ ಬೇರೆಯಾಗಿ ಬರೆಯಲು ಸಾಧ್ಯವೇ? ಇದನ್ನು ಹೊರೆತುಪಡಿಸಿ ಶ್ರೀರಾಮನ ಕುರಿತು ಬರೆಯಬಹುದಾದರೂ ಏನುಂಟು? ನೀವು ಹೇಳಿದ ಹಾಗೆ ನಾ ಬರೆದ ರಾಮಾಯಣವನ್ನೂ ಎಲ್ಲರೂ ಓದಬೇಕೆಂಬ ಅಭಿಲಾಷೆಯೂ ನನಗಿಲ್ಲ”ವೆಂದು ಹೇಳುತ್ತಾ ಮಾತೊಂದನ್ನು ಸೇರಿಸಿದನು.

“ರಾಮಾಯಣದ ಕರ್ತೃವೆಂಬ ಗಿರಿಮೆ ಬೇಕೇನು ನನಗೆ..
ರಾಮಮಂತ್ರ ಜಪವೊಂದೇ ಸಾಕು ಯನಗೆ…”

*==========================*

ಆ ಮಂತ್ರ ಈ ಮಂತ್ರ ಜಪಿಸಿ ಕೆಡಲು ಬೇಡ..
ರಾಮ ಮಂತ್ರವ ಜಪಿಸೋ ಹೇ ಮನುಜ….

ಶ್ರೀ ರಾಮ, ಜಯರಾಮ, ಜಯಜಯ ರಾಮ…

Facebook ಕಾಮೆಂಟ್ಸ್

ಲೇಖಕರ ಕುರಿತು

Vikram Jois

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!