ಕಥೆ

ಕೆಂಪಾದವೋ ಎಲ್ಲಾ- ೨

ಕೆಂಪಾದವೋ ಎಲ್ಲಾ- ೧

 

ರೈಲ್ವೆ ಕಂಬಿಗಳ ಪಕ್ಕದ ಪೊದೆಯ ಬಳಿ ಇವರಿಗಾಗಿ ಬಾಡಿಯನ್ನು ಕಾದಿರಿಸಿದ್ದ ಲೋಕಲ್ ಪೋಲಿಸರು, ಇನ್ಸ್ಪೆಕ್ಟರ್ ಈಶ್ವರಿ ಮತ್ತು ಪತ್ತೇದಾರ ಅಮರ್ನನ್ನು ಕರೆದೊಯ್ದರು.

ಬಿಳಿ ಪಂಚೆ ಕಪ್ಪು ಕೋಟ್ ಧರಿಸಿ, ಹಣೆಯ ಮೇಲೆ ಮೂರು ನಾಮ ಬಳಿದಿದ್ದ  ಸೆಟ್ಟಿಯವರ ಮುಖವು ನೋವಿನಿಂದ ಕಿವುಚಿ ವಿಕಾರವಾಗಿತ್ತು, ಕತ್ತಿನ ಸುತ್ತಲೂ ಹಗ್ಗ ಬಿಗಿದ ಗಾಯಗಳಾಗಿವೆ. ಐವತ್ತರ ಆಸುಪಾಸಿನಲ್ಲಿದ್ದ ಸೆಟ್ಟಿ ಬಳಿ ಯಾವುದೇ ಲಗೇಜ್ ಇರಲಿಲ್ಲ.

ಇವರಿಗೆ ತಿಳಿದು ಬಂದ ಮಾಹಿತಿಯೆಂದರೆ ವೈದ್ಯರ ಪ್ರಥಮ ಪರೀಕ್ಷೆಯಿಂದ ಸಾವು ಈಗಿಂದ ಐದು ಗಂಟೆಗಳ ಹಿಂದೆ ಸಂಭವಿಸಿದೆ, ಮಿಕ್ಕ ವಿವರಗಳು ಮರಣೋತ್ತರ ಪರೀಕ್ಷೆಯ ನಂತರ ಎಂಬುದು. ಇವರ ಸ್ಥಳ  ಪರೀಕ್ಷೆ ಮುಗಿದ ಕೂಡಲೇ ಪೋಲಿಸ್ ವೈದ್ಯರು ಹೆಣವನ್ನು ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ದರು.

ಮಲ್ನಾಡ್ ರೈಲು ರಾಜಾಪುರ ಸ್ಟೇಷನ್ನನ್ನು ಅಂದು ಬೆಳಿಗಿನ ಜಾವ ಮೂರು ಗಂಟೆಗೆ ಕ್ರಾಸ್ ಮಾಡಿತೆಂದು ಅಲ್ಲಿನ ಸ್ಟೇಷನ್ ಅಧಿಕಾರಿ ವಿವರಿಸಿದರು. ಪ್ರಸಾದ್ ಸೆಟ್ಟಿಯವರ ಜೇಬಿನಲ್ಲಿ ರಿಟರ್ನ್ ಟಿಕೆಟ್ ಮಡಿಚಿಟ್ಟಿದ್ದರಲ್ಲಿ ಮಂಗಳೂರಿನಲ್ಲಿ ಹತ್ತಿದ್ದಾಗ ಟಿಟಿಇ ಟಿಕೆಟ್ ನೋಡಿ ಸೈನ್ ಹಾಕಿದ್ದೂ ಕಾಣಿಸಿ, ಮೃತ ವ್ಯಕ್ತಿ ಅಲ್ಲಿ ರೈಲು ಹತ್ತಿದ್ದಂತೂ ಸಾಬೀತಾಯಿತು. ಆದರೆ ಅವರು ತಂದಿರಲಿಕ್ಕೆ ಸಾಧ್ಯವಾದ ಚಿನ್ನ, ಹಣ ಇದ್ದ ಸೂಟ್ ಕೇಸ್ ಪತ್ತೆಯಿಲ್ಲ.

ಇದೆಲ್ಲಾ ಪರೀಕ್ಷಿಸಿ ಸ್ಟೇಷನ್ ಹೊರಬಂದಾಗ ಈಶ್ವರಿ ತಮ್ಮನ ಮುಖ ನೋಡಿದಳು,” ನೋಡಿದೆಯಾ ಅಮರ್?…ರೈಲು ಮೂರು ಗಂಟೆಗೇ ಇಲ್ಲಿಗೆ ಬಂದು ಹಸಿರೂರಿಗೆ ಹೊರಟು ಹೋಗಿದೆ..ಆದರೆ ಬಾಡಿ ಸ್ಥಿತಿ ನೋಡಿ ಬೆಳಿಗಿನ ಜಾವ ಐದಕ್ಕೆ ಸಾವು ಸಂಭವಿಸಿದೆ ಅನ್ನುತ್ತಾರೆ..ಹಾಗಾದರೆ..?”ಎಂದು ತಡವರಿಸಿದಳು

ಅಮರ್ ನಸುನಕ್ಕ, “ಅದು ನನಗೂ ಹೊಳೆಯಿತು..ಹಾಗಾದರೆಏನರ್ಥ ,ಹೇಳು ನೋಡೋಣಎಂದು ಸವಾಲು ಹಾಕಿದನು ಇನ್ಸ್ಪೆಕ್ಟರಿಗೆ.

ಅಂದರೆ ಪ್ರಸಾದ್ ಸೆಟ್ಟಿ ರಾಜಾಪುರ ಸ್ಟೇಷನಿನಲ್ಲಿ ಆಗಲೇ ಯಾಕೋ ಇಳಿದಿದ್ದಾರೆ.. ಕಗ್ಗತ್ತಲಿನ ಸ್ಟೇಷನ್ನಿನಲ್ಲಿ ಅವರಿಳಿದಿದ್ದು ಯಾರಿಗೂ ಕಾಣಿಸಿಲ್ಲ..ಟ್ರೈನ್ ಹೋದರೂ ಅವರು ಇಲ್ಲೇ ಕಾದಿದ್ದಾರೆ..ಆಮೇಲೆ ಐದು ಗಂಟೆಗೆ ಇಲ್ಲೇ ಯಾರೋ ಕೊಂದು ದುಡ್ಡು ಚಿನ್ನ ಎಗರಿಸಿಕೊಂಡು ಹೋಗಿದ್ದಾರೆಅಲ್ಲವೇನೋ?” ಎಂದಳು ಅಕ್ಕ ತನ್ನ ಮನದಲ್ಲಿ ಹೊಳೆದದನ್ನು ವಿವರಿಸುತ್ತಾ.

ಪತ್ತೇದಾರ ಅರ್ಥಗರ್ಭಿತವಾಗಿ ನಕ್ಕ, “ಮೇಲ್ನೋಟಕ್ಕೆ ಹಾಗೇ ಕಾಣುತ್ತದೆ, ಅಕ್ಕಮೇಲ್ನೋಟಕ್ಕೆ!”

ಅವರಿಬ್ಬರೂ ಅಲ್ಲಿಂದ ಸುತ್ತ ಮುತ್ತಲಿನ ಸ್ಥಳಾನ್ವೇಷಣೆ ನೆಡೆಸಲಾರಂಭಿಸಿದರು.

ಮೃತದೇಹ ಸಿಕ್ಕಿದ ಅನತಿ ದೂರದಲ್ಲಿದ್ದ ಸ್ಟೇಷನ್ ಬದಿಯ ಅಬ್ದುಲ್ ಹಣ್ಣಂಗಡಿ ಬಳಿಗೆ ಬಂದರು.

ಸ್ವಲ್ಪ ಚಿಂತಾಕ್ರಾಂತನಾಗಿ ಕುಳಿತಿದ್ದ ಸುಮಾರು ಐವತ್ತು ವರ್ಷ ಇರಬಹುದಾದ ಸಣಕಲು ದೇಹದ ಅಬ್ದುಲ್ ಟೋಪಿ ಸರಿ ಪಡಿಸಿಕೊಂಡು ಎದ್ದ..”ಬನ್ನಿ ಇನ್ಸ್ಪೆಕ್ಟರ್ ಅಮ್ಮಾವ್ರೆ..ಏನು ಕೊಡಲಿ?”

ಇವನು ನನ್ನ ತಮ್ಮ, ನನಗೆ ಸಹಾಯ ಮಾಡ್ತಿದಾನೆ ಪ್ರಸಾದ್ ಸೆಟ್ಟಿ ಕೊಲೆ ಕೇಸಿನಲ್ಲಿಸದ್ಯಕ್ಕೆ ನಮ್ಮ ಪ್ರಶ್ನೆಗೆ ಉತ್ತರ ಕೊಡು ಸಾಕು!” ಎಂದಳು ಈಶ್ವರಿ.

ನಿನಗೆಲ್ಲಾ ತರಕಾರಿಹಣ್ಣುಗಳೂ ರಾತ್ರಿ ಗೂಡ್ಸ್ ರೈಲಿನಲ್ಲಿ ಬರುತ್ತಲ್ಲವೆ?”ಎಂದು ಮೊದಲಿಗೆ ಕೇಳಿದ ಅಮರ್.

ಹೌದು ಸರ್..ದಿನಾ ರಾತ್ರಿ ರೈಲಿಂದ ಇಲ್ಲೇ ಎಸೆದು ಹೋಗ್ತಾನೆ ಡ್ರೈವರ್ ಫಾಲಾಕ್ಷಹಾಗೆ ನೋಡಿದರೆ ಅದನ್ನ ಸ್ಟೇಷನ್ನಿನಲ್ಲೇ ಇಳಿಸಬೇಕು, ನಾನು ಹೋಗಿ ತರ್ಬೇಕುಪರ್ವಾಗಿಲ್ಲ, ಇಲ್ಲೇ ಹಾಕ್ಬಿಡ್ತಾನೆನಾನು ಬೆಳಿಗ್ಗೆ ಹೋಗಿ ಸ್ಟೇಷನ್ನಿನಲ್ಲಿ ದುಡ್ಡು ಕಟ್ತಿರ್ತೀನಿ ಇದರ ಸಾಗಾಣಿಕೆಗೆ ಅಷ್ಟೇ.. ನಮ್ಮ್ ನಮ್ಮಲ್ಲೆ ಅಡ್ಜಸ್ಟೂ..” ಎಂದು ಹಲ್ಕಿರಿದ ತನ್ನ ಪ್ರಭಾವ ರೈಲ್ವೆಯವರ ಮೇಲೆ ಎಷ್ಟಿದೆಯೆನ್ನುವಂತೆ.

ಅಲ್ಲಿದ್ದ ಕೆಂಪನೆಯ ಟೊಮ್ಯಾಟೋ ಮತ್ತು ಸೇಬಿನ ಹಣ್ಣುಗಳ ರಾಶಿ ನೋಡಿಇದೆಲ್ಲಾ ನಿನ್ನೆ ಸ್ಟಾಕ್ ಅಲ್ಲವೆ?…ಇವತ್ತಿನದು ಫ್ರೆಶ್ ಅಲ್ಲ!…”ಎಂದನು ಅಮರ್.

ಅಬ್ದುಲ್ ಏಯ್ ಎನ್ನುವಂತೆ ದುರುಗುಟ್ಟಿದನು, “ಇವತ್ತು ಬೆಳಗಿನ ಜಾವ ಹಾಕಿ ಹೋಗಿದ್ದೇ ಸಾರ್ ಇವುಅದೇ ರೈಲಿಂದ..ಫ್ರೆಶ್ಶು ಸಾರ್..ನಿನ್ನೆಯದಲ್ಲಾ..”ಎಂದು ಹಣ್ಣುಗಳ ಮೇಲೆ ಜಂಬದಿಂದ ಕೈಯಾಡಿಸಿದನು. ಇನ್ಸ್ಪೆಕ್ಟರ್ ಈಶ್ವರಿ ಮಧ್ಯೆ ಬಾಯಿ ಹಾಕುವಂತೆ ಮುಂದೆ ಬಂದಳು

ಅಮರ್ ತಕ್ಷಣ ಅಕ್ಕನತ್ತ ತಿರುಗಿ ಬಾಯಿ ಮೇಲೆ ಬೆರಳೊತ್ತಿದನು ಸುಮ್ಮನಿರು ಎನ್ನುವಂತೆ.

ಸರಿ ನಾವು ಬರುತ್ತೇವೆ…” ಎಂದಷ್ಟೇ ಸಂಕ್ಷಿಪ್ತವಾಗಿ ಹೇಳಿ ಅಕ್ಕನ ಮೊಳಕೈ ಹಿಡಿದು ಹೊರಟನು.

ಈಶ್ವರಿ ಕುತೂಹಲ ತಡೆಯಲಾರದೇ, “ಇದೇನೋ ಅಮರ್?..ಅಬ್ದುಲ್ ಯಾಕೆ ಹಣ್ಣು ತರಕಾರಿ ಇವತ್ತು ಬೆಳಗಿನ ಜಾವದ್ದು ಅಂತಾ ಸುಳ್ಳು ಹೇಳ್ತಿದಾನೆ?..ನಿನ್ನೆ ರಾತ್ರಿಯ ಟ್ರೈನ್ ನಮ್ಮ ಹಸಿರೂರಿನಲ್ಲೇ ರೆಡ್ ಸಿಗ್ನಲ್ ಹಾಕೊಂಡು ನಿಂತಿದೆ, ಅಲ್ಲಿಂದ ಹೊರಟೇ ಇಲ್ಲಅಬ್ದುಲ್ ಗೆ ಸುಳ್ಳು ಹೇಳಿ ಏನು ಲಾಭ?..ನಾನು ಅಲ್ಲೇ ತದುಕಿ ಬಾಯಿಬಿಡಿಸೋಣ ಅಂತಿದ್ರೆ..ನೀನು!! “ಎಂದು ಕೈ ಕೊಸರಿಸಿ ಬಿಡಿಸಿಕೊಂಡಳು ಸಿಡಿಮಿಡಿಗೊಂಡಳು ಈಶ್ವರಿ

ಅಕ್ಕನ ಅಸಹನೆಗೆ ಮತ್ತೆ ನಸುನಗೆಯ ಉತ್ತರ ಅಮರನದು. “ಪೋಲೀಸ್ ಬುದ್ದಿ!..ಎಲ್ಲಾ ತದುಕಿ ಬಾಯಿ ಬಿಡಿಸಿ ಗೆಲ್ಲೋಕಾಗಲ್ಲಕ್ಕ..”

ವಾಟ್..ಅವನು ಹೇಳ್ತಿರೋದು ಸುಳ್ಳು ತಾನೆ?…”ಅಕ್ಕ ಜಬರಿಸಿದಳು.

ಅಕ್ಕಾ, ನಾವು ಹೊರಡುವ ಮುಂಚೆ ಹಸಿರೂರಿನಲ್ಲಿ ಗೂಡ್ಸ್ ಟ್ರೈನ್ ಪರೀಕ್ಷೆ ಮಾಡಿದೆವಲ್ಲಾ. ಅಲ್ಲಿ ಟೊಮ್ಯಾಟೋ, ಸೇಬಿನ ಪಾರ್ಸೆಲ್ಸ್ ನೋಡಿದೆಯಾ?..ಇವತ್ತು ಹೊರಟಿಲ್ಲ ಅಂದರೆ ಅಲ್ಲೇ ಇರಬೇಕಿತ್ತಲ್ಲವೆ?” ಅಮರ್ ಹುಬ್ಬೇರಿಸಿ ಅಕ್ಕನ ಬುದ್ದಿಯನ್ನು ಪ್ರಚೋದಿಸಿದ.

ಹಾಗಂದರೆ!” ಈಶ್ವರಿಗೆ ಮುಂದೆ ಯೋಚಿಸಲು ಸಾಧ್ಯವಾಗುತ್ತಿಲ್ಲ.

ಅಂದರೆ ಅಬ್ದುಲ್ ಸುಳ್ಳು ಹೇಳುತ್ತಿಲ್ಲ..ಇವತ್ತು ಗೂಡ್ಸ್ ರೈಲು ಬಂದು ಲೋಡ್ ಇಳಿಸಿದೆ ಎಂದಾಯಿತಲ್ಲವೇ?” ಅಮರ್ ಅರ್ಥೈಸಿದ.

ಅಂದರೆ ಗೂಡ್ಸ್ ರೈಲಿಗೆ ಹಸಿರೂರಿನಲ್ಲಿ ರಾತ್ರಿಯೇ ಕೆಂಪು ಸಿಗ್ನಲ್ ತೆಗೆದು ಹಸಿರು ನಿಶಾನೆ ತೋರಿಸಿ ಇಲ್ಲಿಗೆ ಕಳಿಸಿ, ಅಲ್ಲಿಗೇ ಮರಳಿಸಿ ಮತ್ತೆ ರೆಡ್ ಸಿಗ್ನಲ್ ಹಾಕಿ ನಿಲ್ಲಿಸಿದ್ದಾರೆಅದು ಎಲ್ಲಿಗೂ ಹೋಗೇ ಇಲ್ಲ ಎನ್ನುವಂತೆ ನಂಬಿಸಲು.. ಅದೂ ಬರೀ ತರಕಾರಿ ಹಣ್ಣು ಇಳಿಸಲು ಚಿದಂಬರ ಮತ್ತು ಫಾಲಾಕ್ಷ ಹೀಗೆ ಮಾಡಿರುತ್ತಾರೆಯೆ..ಯಾಕೆ?..” ಈಶ್ವರಿಗೆ ಸೋಜಿಗವಾಗುತ್ತಿದೆ, ಕಾರಣ ಸ್ಪಷ್ಟವಾಗುತ್ತಿಲ್ಲ.

ಅಮರ್ ಕೈಯೆತ್ತಿ ಆಕೆಯ ವಾದವನ್ನು ತಡೆದ. ” ನಾವು ತಕ್ಷಣ ನಿಮ್ಮೂರಿಗೆ ವಾಪಸ್ ಹೋಗೋಣಅಲ್ಲಿ ನಾನು ಹೇಳಿದ ತಕ್ಷಣ ನೀನು ಅಪರಾಧಿಯನ್ನು ಅರೆಸ್ಟ್ ಮಾಡು..ಎಲ್ಲಾ ಸ್ಪಷ್ಟವಾಗುತ್ತೆ..”

                                                                                                    

ಅಮರ್ ಕ್ಷಿಪ್ರಗತಿಯಲ್ಲಿ ಕಾರ್ ಡ್ರೈವ್ ಮಾಡುತ್ತಾ ಮರಳಿ ಹಸಿರೂರು ರೈಲು ನಿಲ್ದಾಣವನ್ನು ತಲುಪಿದನು.  ರಸ್ತೆಯಲ್ಲಿ ಇನ್ಸ್ಪೆಕ್ಟರ್ ಈಶ್ವರಿಗೆ ಕುತೂಹಲ ಹೆಚ್ಚಿದ್ದರೂ ತಮ್ಮನನ್ನು ಏನೆಂದು ಕೇಳುತ್ತಿಲ್ಲ. ಅವನ ವೇಗದಲ್ಲೇ ಎಲ್ಲ ತನಿಖೆ ಮುಗಿಯಲಿ ಎಂದು ತಾರ್ಕಿಕ ಅಂತ್ಯಕ್ಕಾಗಿ ಕಾಯುವ ತಾಳ್ಮೆ ಆಕೆಗಿದೆ.

ಇಬ್ಬರೂ ಸ್ಟೇಷನ್ ಮಾಸ್ಟರ್ ಚಿದಂಬರನ ಕೋಣೆಗೆ ಧಾವಿಸಿದರು. ತನ್ನ ತೆರೆದಿದ್ದ ಕಬೋರ್ಡನ್ನು ಪಟಕ್ಕನೆ ಮುಚ್ಚಿ ಇವರತ್ತ ನೋಡಿದನು ಚಿದಂಬರ.

ಮಿ.ಚಿದಂಬರ, ಒಂದು ಚಿಕ್ಕ ಪ್ರಾಬ್ಲೆಮ್ ಆಗಿಬಿಟ್ಟಿತು..”ಎಂದು ಅವನೆದುರಿನ ಕುರ್ಚಿಯಲ್ಲಿ ಕುಳಿತ ಅಮರ್. ಪಕ್ಕದಲ್ಲಿ ನಿಂತಳು ಈಶ್ವರಿ.

ಒಂದು ಕ್ಷಣ ಆತನ ಮುಖವನ್ನೇ ಗಮನಿಸುತ್ತಾ ಅಮರ್ ನುಡಿದ, “ಫಾಲಾಕ್ಷ ತಪ್ಪು ಮಾಡಿಬಿಟ್ಟಇವತ್ತೂ ಸಹಾ ತರಕಾರಿಹಣ್ಣಿನ ಪಾರ್ಸೆಲ್ ಅಭ್ಯಾಸಬಲದಿಂದ ಅಬ್ದುಲ್ ಅಂಗಡಿಯ ಮುಂದೆ ಇಳಿಸಿಯೇ ಬಿಟ್ಟ.. ತಪ್ಪನ್ನು ನೀವು ನಿರೀಕ್ಷಿಸಿರಲಿಲ್ಲ ಅಲ್ಲವೆ?”

ಭೂಕಂಪಕ್ಕೆ ಸಿಕ್ಕ ಗೋಡೆಯಂತೆ ಚಿದಂಬರನ ಮುಖ ಬಿರುಕುಬಿಟ್ಟು ಬಿಳಿಚಿಕೊಂಡಿತು..

ಓಹ್.. ಶತ ಮೂರ್ಖ!…”ಎಂದು ಅಪ್ರಯತ್ನವಾಗಿ ಹೇಳಿದವನು ತಕ್ಷಣ ಗಾಬರಿಯಿಂದಹೇಗೆ..ಏನು?” ಎಂದು ನಟಿಸುತ್ತಾ ತೊದಲಿದನು.

ನಾವು ಮೂವರೂ ಇಲ್ಲಿ ಗೂಡ್ಸ್ ರೈಲಿನಲ್ಲಿ ಸಾಮಾನು ಚೆಕ್ ಮಾಡುವಾಗ ಅಲ್ಲಿ ಟೊಮ್ಯಾಟೊ ಮತ್ತು ಸೇಬಿನ ಹಣ್ಣಿನ ಪಾರ್ಸೆಲ್ ಇರಲಿಲ್ಲ ಎಂದು ನೀವು ಗಮನಿಸಲೇ ಇಲ್ಲ..ಅಬ್ದುಲ್ ಅಂಗಡಿಯಲ್ಲಿ ಅವನ್ನು ಕಂಡಾಗ ಅವನು ನಿಜ ಹೇಳಿಬಿಟ್ಟ…”ಎಂದ ಸೂಚ್ಯವಾಗಿ.. ಮಾತಿಗೆ ತರತರನೆ ನಡುಗಿದ ಚಿದಂಬರ.

ಕೈಗಳಿಂದ ಕಬೋರ್ಡಿನ ಕೈಪಿಡಿಯನ್ನು ಗಟ್ಟಿಯಾಗಿ ಹಿಡಿದು ಭಯವಿಹ್ವಲನಾಗಿ ಆತ ಬಡಬಡಿಸಿದನುಮೇಡಮ್..ಸಾರಿ, ಇನ್ಸ್ಪೆಕ್ಟರ್..ಇವರು ಏನೇನೋ ಹೇಳಿ ..ಸುಮ್ಮಸುಮ್ಮನೆ…” ಎಂದು ದೂರಲು ಆರಂಭಿಸಲು ಅವನನ್ನೇ ತದೇಕಚಿತ್ತದಿಂದ ಗಮನಿಸುತ್ತಿದ್ದ ಇನ್ಸ್ಪೆಕ್ಟರ್ ಈಶ್ವರಿ

ಚಿದಂಬರ!..ಸ್ವಲ್ಪ ಪಕ್ಕಕ್ಕೆ ಬನ್ನಿ.. ಕಬೋರ್ಡ್ ನಲ್ಲಿ ಏನು ಅಡಗಿಸಿದ್ದೀರಿ?..”ಎಂದು ಗದರಿಸಿ ಮುನ್ನೆಡೆದಳು

ಅಮರ್ ಶಾಂತ ದನಿಯಿಂದ, “ಇವರನ್ನು ಪ್ರಸಾದ್ ಸೆಟ್ಟಿಯವರ ಕೊಲೆಯ ಆಪಾದನೆ ಮೇಲೆ ಅರೆಸ್ಟ್ ಮಾಡು, ಅಕ್ಕಾನನ್ನ ಪ್ರಕಾರ ಸೆಟ್ಟಿಯವರ ಚಿನ್ನವನ್ನು ಈತನೇ ಅದರಲ್ಲಿ ಇನ್ನೂ ಅಡಗಿಸಿಟ್ಟಿದ್ದಾನೆ…”ಎಂದನು.

ಈಶ್ವರಿ ಮತ್ತು ಮಿಕ್ಕ ಕೆಲವರು ಫೋಲಿಸರು ಸುತ್ತುವರಿದು ಚಿದಂಬರನನ್ನು ಬಂಧಿಸಿ ಕಬೋರ್ಡ್ ತೆರೆದಾಗ, ರಟ್ಟಿನ ಬಾಕ್ಸಿನಲ್ಲಿ ಲಕ್ಷಾಂತರ ಮೌಲ್ಯದ ಚಿನ್ನದ ಬಿಸ್ಕಟ್ಸ್ ಇರುವುದು ಹೊರಗೆ ಬಂತು.

ಈಶ್ವರಿ ಅಮರ್ನತ್ತ ಗೆಲುವಿನ ನಗೆ ಬೀರಿದಾಗ, ಅಮರ್ ಚಿಟಿಕೆ ಹೊಡೆದು ಹೇಳಿದನು, “ಇನ್ನು ಫಾಲಾಕ್ಷನನ್ನು ಅರೆಸ್ಟ್ ಮಾಡಿಸು!..ಅವನ ಮನೆಯಲ್ಲಿ ಕ್ಯಾಶ್ ಇರುತ್ತದೆ, ಇವರು ಪ್ರಸಾದ್ ಸೆಟ್ಟಿ ಬ್ಯಾಂಕಿನಿಂದ ತಂದಿದ್ದನ್ನು ಕದ್ದಿದ್ದು..”

ನಾಲ್ವರು ಪೋಲಿಸರು ಅದಕ್ಕಾಗಿ ಹೊರಗೋಡಿದರು.

ಅಮರ್ ಈಗ ತಲೆ ಮೇಲೆ ಕೈಹೊತ್ತು ಮಲೆನಾಡಿನ ಚಳಿಯಲ್ಲೂ ಬೆವೆತು ನೀರಾಗಿದ್ದ ಚಿದಂಬರನನ್ನು ಕೇಳಿದನು, “ಇನ್ನು ಮಿಕ್ಕ ಕತೆಯನ್ನೂ ನೀನೆ ಹೇಳುತ್ತೀಯೋ, ಇಲ್ಲವೇ ಪೋಲೀಸರ ಉಪಚಾರವನ್ನು ಸ್ವೀಕರಿಸಲು ರೆಡಿಯಿದ್ದೀಯೋ?”

ತಲೆ ತಗ್ಗಿಸಿ ಚಿದಂಬರ ತಪ್ಪೊಪ್ಪಿಗೆ ಕೊಟ್ಟಿದ್ದು ಹೀಗೆ :

ಮೊದಲಿನಿಂದಲೂ ಮಹಾ ಜುಗ್ಗ ಮತ್ತು ಬಡ್ಡಿ ಪಿಶಾಚಿ ಪ್ರಸಾದ್ ಸೆಟ್ಟಿ ಗೆಳೆಯ ಚಿದಂಬರನಿಗೂ, ಫಾಲಾಕ್ಷನಿಗೂ ಸಾಲ ಕೊಟ್ಟು ತಿಂಗಳುಪ್ರತಿ ಹಣ ಪೀಕಿಸುತ್ತಿದ್ದನು.

ಗೆಳೆತನ ಬೇರೆ, ವ್ಯವಹಾರ ಬೇರೆಎನ್ನುವ ನಿಷ್ಠುರ ಪ್ರವೃತ್ತಿಯ ಸೆಟ್ಟಿಗೆ ಬುದ್ದಿ ಕಲಿಸಲು ಇಬ್ಬರೂ ಕಾಯುತ್ತಲೆ ಇದ್ದರು. ಇತ್ತೀಚೆಗಂತೂ ಚಿದಂಬರನ ಕೊನೆಯ ಮಗಳ ಮದುವೆಗೆ ಚಿನ್ನಾಭರಣ ಮಾಡಿಸಲು ಅವನು ಪ್ರಸಾದ್ ಸೆಟ್ಟಿಯ ಹಿಂದೆಯೇ ಬಿದ್ದಿದ್ದನಂತೆ..ಇದ್ದಬದ್ದ ದುಡ್ಡೆಲ್ಲಾ ಕೊಟ್ಟರೂ ಸೆಟ್ಟಿ ಹಿಂದಿನ ಲೆಕ್ಕ ತೀರಿಲ್ಲವೆಂದು ಹಠ ಹಿಡಿಯುತ್ತಿದ್ದನಂತೆ..ಮಗಳ ಮದುವೆಗೆ ಚಿನ್ನ ಆಭರಣ, ದುಡ್ಡು ಯಾವುದೂ ಇಲ್ಲದೇ  ಚಿದಂಬರನ ಪರಿಸ್ಥಿತಿ ಮನೆಯವರ ಮುಂದೆ ಶೋಚನೀಯವಾಗುತ್ತಾ ಹೋಗುತ್ತಿತ್ತಂತೆ..ಮದುವೆ ದಿನ ಹತ್ತಿರ ಬಂದರೂ ಸೆಟ್ಟಿ ಮತ್ತೆ ಸಾಲ ಕೊಡಲೂ ಇಲ್ಲ, ಆಭರಣ ಮಾಡಿಕೊಡಲೂ ಇಲ್ಲ..ಇತ್ತ ಫಾಲಾಕ್ಷನೂ ದುಡ್ಡಿಲ್ಲದೇ ಲಾಟರಿ ಹೊಡೆಯುತಿದ್ದವನು, ಮನೆಯಲ್ಲಿ ಒಬ್ಬ ಅಂಗವಿಕಲ ಮಗ ಸೇರಿ ಐದು ಜೀವಗಳು ಅವನ ಜವಾಬ್ದಾರಿಯಲ್ಲಿದ್ದರಂತೆ..ಸಾಲದ ಪಾಶಕ್ಕೆ ಸಿಕ್ಕಿ ಹೆಣಗುತ್ತಿದ್ದ ಬಡ ಫಾಲಾಕ್ಷ.

ಹಾಗಾಗಿಯೇ ಶುಕ್ರವಾರ ಬೆಳಿಗ್ಗೆ ಸೆಟ್ಟಿ ಮಂಗಳೂರಿನ ರೈಲಿಳಿದು ಬಂದಾಗ ಚಿದಂಬರ ಮತ್ತು ಫಾಲಾಕ್ಷ ಕಾಯುತ್ತಿದ್ದವರು ಕೊನೆಯ ಬಾರಿ ಅವನಿಗೆ ಅವಕಾಶ ಕೊಟ್ಟರು..ಸೆಟ್ಟಿ ತಾತ್ಸಾರದಿಂದ ನಕ್ಕುಬಿಟ್ಟ..ಅಲ್ಲಿಗೆ ಇವರಿಬ್ಬರ ಸಹನೆಯ ಕಟ್ಟೆಯೊಡೆಯಿತು. ಅವನ ಸೂಟ್ ಕೇಸಿನ ತುಂಬಾ ಚಿನ್ನ, ದುಡ್ಡು ತುಂಬಿರುವುದು ಕಂಡು ದುರಾಸೆಗೆ ಬಲಿಯಾದರು. ಇಬ್ಬರು ಸೇರಿ ಹಗ್ಗ ಕುತ್ತಿಗೆಗೆ ಬಿಗಿದು ಅವನನ್ನು ರೈಲ್ವೇ ಕೋಣೆಯಲ್ಲೇ ಕೊಂದು ಅವನ ಸೂಟ್ ಕೇಸಿನಲ್ಲಿದ್ದದ್ದನ್ನು ಹಂಚಿಕೊಂಡರಂತೆ..ಚಿದಂಬರನಿಗೆ ಚಿನ್ನದ ಗಟ್ಟಿಗಳು, ಫಾಲಾಕ್ಷನಿಗೆ ಲಕ್ಷ ರೂ ಕ್ಯಾಶ್ ಹೀಗೆ ಬಟವಾಡೆ

ಮೊದಲೇ ಯೋಜಿಸಿದ್ದಂತೆ ಚಿದಂಬರ ರೆಡ್ ಸಿಗ್ನಲ್ ಬದಲಿಸಿ ಗ್ರೀನ್ ಮಾಡಿ, ಅಲ್ಲಿಂದ ಹೆಣವನ್ನು ಗೂಡ್ಸ್ ರೈಲಿನಲ್ಲಿ ಫಾಲಾಕ್ಷನೊಂದಿಗೆ ರವಾನಿಸಿದ್ದಾನೆ. ಆದರೆ ಇಬ್ಬರೂ ನುರಿತ ಕೊಲೆಗಾರರೇನಲ್ಲ..ಯೋಜನೆ ಮಾಡುವುದರಲ್ಲಿ ಕೊಂಚ ಎಡವಿದ್ದರು..ಎಂದಿನಂತೆ ಕಮೀಶನ್ ಆಸೆಗೆ ಕೆಂಪು ಟೊಮ್ಯಾಟೋ ಮತ್ತು ಸೇಬಿನ ಹಣ್ಣಿನ ಪಾರ್ಸೆಲ್ ಇಳಿಸುತ್ತಿದ್ದ ಡ್ರೈವರ್ ಇಂದೂ ಸಹಾ ಹಿಂದೆ ಮುಂದೆ ಯೋಚಿಸದೇ ಯಥಾಪ್ರಕಾರ ಅಭ್ಯಾಸಬಲದಿಂದ ಅದನ್ನು ಅಬ್ದುಲ್ ಅಂಗಡಿಯ ಮುಂದೆ ಎಸೆದು ನಂತರ ಹೆಣವನ್ನು ಪೊದೆಯಲ್ಲಿ ಎಸೆದು ಯಾರಿಗೂ ತಿಳಿಯದಂತೆ ಸೂರ್ಯೋದಯಕ್ಕೂ ಮುನ್ನ ಆರು ಗಂಟೆಗೆಲ್ಲಾ ಹಸಿರೂರಿಗೆ ವಾಪಸ್ ಬಂದಿದ್ದಾನೆ, ಅವರ ಅದೃಷ್ಟ, ಆನೆ ಯಾವುದೂ ಅಡ್ಡ ಬರಲಿಲ್ಲಮತ್ತೆ ರೆಡ್ ಸಿಗ್ನಲ್ ಹಾಕಿ ಗೂಡ್ಸ್ ಬಂಡಿ ನಿಲ್ಲಿಸಿಕೊಂಡಿದ್ದಾರೆ..ಆಗ ಚಿದಂಬರ ತಾನೇ ಸೆಟ್ಟಿ ಇವತ್ತು ಬರಲಿಲ್ಲ ಎಂಬ ಸುದ್ದಿ ತಲುಪಿಸಿದ್ದಾನೆ..ತಾವು ಸುರಕ್ಷಿತ, ಯಾರಿಗೂ ಗೊತ್ತಾಗದಂತ ಸಮರ್ಥ ಪ್ಲ್ಯಾನ್ ಮಾಡಿದೆವು ಎಂದು ಧೈರ್ಯವಾಗಿದ್ದಾರೆ..

ಕೊನೆಗೀಗ ಇಬ್ಬರೂ ಪೋಲಿಸರ ಬಂಧನಕ್ಕೊಳಗಾದರು.

ನಿನಗೆ ಇದು ಹೇಗೆ ಅನುಮಾನ ಬಂತು, ಅಮರ್?” ಎಂದು ತಮ್ಮನ ಬೆನ್ನು ತಟ್ಟಿ ಅಲ್ಲಿಂದ ಹೊರಟಾಗ ಅಕ್ಕ ಈಶ್ವರಿ ಪ್ರಶ್ನಿಸಿದಳು.

ನಿಮ್ಮ ಊರಿನ ಹೆಸರು ಮಾತ್ರ ಹಸಿರು, ಅಕ್ಕಾ!.. ಕೇಸಿನಲ್ಲಿ ಮಿಕ್ಕಿದ್ದೆಲ್ಲಾ ನನಗೆ ಇಲ್ಲಿ ಕೆಂಪಾಗಿಯೇ ಕಂಡು ಬಂದವು..ಕೆಂಪು ಅಪರಾಧದಲ್ಲಿ ಪ್ರಮುಖ ಬಣ್ಣ.. ಬಣ್ಣ ನನ್ನನ್ನು ಇಲ್ಲಿನ ಸಿಗ್ನಲ್ ಕಂಡಾಗಿನಿಂದ ಕೊರೆಯುತ್ತಿತ್ತು..ಅಲ್ಲಿ ಕೆಂಪು ಬಣ್ಣದ ಟೊಮ್ಯಾಟೋ ಮತ್ತು ಆ್ಯಪಲ್ ಹಣ್ಣುಗಳ ರಾಶಿ ಕಂಡಾಗ ಅಚಾನಕ್ಕಾಗಿ ಎಲ್ಲಾ ಹೊಳೆದುಬಿಟ್ಟಿತು..ಪ್ರತಿ ಕೇಸ್ ಪರಿಹರಿಸಲು ಒಂದು ಜ್ಞಾನೋದಯದ ಕ್ಷಣ ಮುಖ್ಯವಷ್ಟೆ..”ಎಂದು ವಿವರಿಸಿದ ಅಮರ್.

ಇನ್ನಾದರೂ ಇಲ್ಲಿ ನಿನ್ನ ವೆಕೇಶನ್ ಮುಂದುವರೆಸುತ್ತೀಯೋ?” ಎಂದು ಅಕ್ಕ ಆಸ್ಥೆಯಿಂದ ಕೇಳಿದಾಗ, ಅಮರ್ ನಕ್ಕುನಿಮ್ಮ ಊರು ಹಸಿರು ಹಸಿರಾಗೇ ಉಳಿದರೆ ಇರುತ್ತೇನೆ, ಇಲ್ಲದಿದ್ದರೆ ಮುಂದಿನ ಕೇಸ್!” ಎಂದುತ್ತರಿಸಿದನು.

(ಮುಗಿಯಿತು)

 

Facebook ಕಾಮೆಂಟ್ಸ್

ಲೇಖಕರ ಕುರಿತು

Nagesh kumar

ನಾಗೇಶ್ ಕುಮಾರ್ ಸಿ ಎಸ್ ಹುಟ್ಟಾ ಬೆಂಗಳೂರಿನವನಾಗಿದ್ದು, ಸಿವಿಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರ. ಈಗ ಚೆನ್ನೈ ನಗರದಲ್ಲಿ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ, ಕುಟುಂಬ ಸಮೇತ ತಮಿಳು ನಾಡಿನ ಕನ್ನಡ ಪರ ಸಂಸ್ಥೆಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!