ಕಥೆ

ಕೆಂಪಾದವೋ ಎಲ್ಲಾ- ೧

ಹಸಿರೂರಿನ ಮುಖ್ಯ ರಸ್ತೆಯ ತಿರುವಿನ ಸಿಗ್ನಲ್ನಲ್ಲಿ ತನ್ನ ಹೊಂಡಾ ಸಿಟಿ ಕಾರ್ ನಿಲ್ಲಿಸಿ ಆಕಳಿಸಿದ ಪತ್ತೇದಾರ ಅಮರ್ ಪಾಟೀಲ್.

ಅಕ್ಕನ ಮನೆಗೆ ವೆಕೇಶನ್ ಎಂದು ಆಫೀಸ್ ಶಾಖೆ ಮುಚ್ಚಿ ಮಂಗಳೂರಿಂದ  ತಡರಾತ್ರಿ ಹೊರಟಿದ್ದರಿಂದ ಆಯಾಸವಾದಂತಿತ್ತು.  ಒಂದು ವರ್ಷದ ಕೆಳಗೆ ಊರಿಗೆ ಅಕ್ಕ ಈಶ್ವರಿ ಪೋಲೀಸ್ ಇನ್ಸ್ಪೆಕ್ಟರ್ ಆಗಿ ವರ್ಗಾವಣೆಯಾದಾಗಿನಿಂದ ಇದ್ದ ಆಕೆಯ ಆಹ್ವಾನಕ್ಕೆ ಈಗ ಸಮಯ ಸಂಧರ್ಭ ಕೂಡಿ ಬಂದಂಗಿತ್ತು. ಮಂಗಳೂರಿಂದ ಹಸಿರೂರಿಗೆ ರೈಲು ಸಂಪರ್ಕವಿದ್ದರೂ  ಅದೇಕೋ ರೈಲು ನಿಲ್ದಾಣದಲ್ಲಿ ಮೊದಲಂದುಕೊಂಡಂತೆ ಟ್ರೈನ್ ಹತ್ತದೆಯೇ, ಕಾರು ನಿಲ್ಲಿಸಲೂ ಮನಸ್ಸಾಗದೇ, ಜಿಲ್ಲೆಯ ನಿಸರ್ಗದ ವಿಹಂಗಮ ನೋಟವನ್ನು ಮುಂಜಾವಿನಲ್ಲಿ ರಸೆಯುದ್ಧ ಅನುಭವಿಸುತ್ತಾ ಕಾರಿನಲ್ಲೇ ಡ್ರೈವ್ ಮಾಡುತ್ತಾ ತಲುಪಿಬಿಟ್ಟಿದ್ದನು. ಈಗ ಬೆಳಿಗ್ಗೆ ಏಳೂವರೆ ಗಂಟೆ.

ಕರಾವಳಿ ಮಲೆನಾಡಿನ ಮಡಿಲಿನಲ್ಲಿದ್ದ ಊರಿನಲ್ಲಿ ಅಕ್ಕನ ಮನೆಯಲ್ಲಿ ಸ್ವಲ್ಪ ಆರಾಮ ವಿರಾಮ ಎರಡೂ ಸಿಗಬಹುದೆಂಬ ಆಶಾವಾದ ಹೊತ್ತು ಬಂದಿದ್ದ.

ಅದೋ, ನೋಡುತ್ತಿದ್ದಂತೆಯೇ ಅಕ್ಕನ ಪೋಲೀಸ್ ಜೀಪ್ ತಿರುವಿಗೆ ಬಂದು ಪಕ್ಕದಲ್ಲೇ ಜರ್ರೆಂದು ಬ್ರೇಕ್ ಹಾಕಿ ನಿಂತಿತು. ಅಮರ್ ಕಾರ್ ಇಳಿದು ಬಂದ.

ಹಲೋ, ಕೊನೆಗೂ ಬಂದೆಯಲ್ಲೋ ಅಮರ್!. ಸದ್ಯ ಎಲ್ಲಿ ರೈಲಿನಲ್ಲಿ ಹೊರಟು ಬಿಟ್ಟಿದ್ದೀಯೋ ಅಂತಾ ಗಾಬರಿಯಾಗಿದ್ದೆ…” ಎಂದು ಅಕ್ಕ ಜೀಪಿಳಿದು ಹಿತವಾಗಿ ಅಪ್ಪಿ ಸ್ವಾಗತಿಸಿದಾಗ. ಅಲ್ಲಿದ್ದ ದಾರಿಹೋಕರೂ ಇನ್ಸ್ಪೆಕ್ಟರ್ ಈಶ್ವರಿಯ ಖಾಸಗಿ ಜೀವನದ ತುಣುಕು ನೋಡಿದವರಂತೆ ನಸುನಕ್ಕರು.

ರೈಲಿನಲ್ಲಿ ಬಂದರೆ ಗಾಬರಿಯೇಕಕ್ಕಾ?” ಎಂದು ಹುಬ್ಬೇರಿಸಿದ ಅಮರ್.

ಹೇಳ್ತೀನಿ, ಹೇಳ್ತೀನಿ..ಮೊದಲು ನಮ್ಮ ಸ್ಟೇಷನ್ನಿಗೆ ಫ಼ಾಲೋ ಮಾಡಿಕೊಂಡು ಬಾ..ಕಾಫಿ ತಿಂಡಿ ತರಿಸ್ತೀನಿ..” ಇನ್ಸ್ಪೆಕ್ಟರ್ ಈಶ್ವರಿ ಮತ್ತೆ ಜೀಪ್ ಏರಿ ಡ್ರೈವರಿಗೆ ಸೂಚಿಸಿದಳು.

ಅಮರ್ ಕಾರ್ ಏರುತ್ತಾ ನಕ್ಕ..”ಬಂದ ತಕ್ಷಣ ಪೋಲೀಸ್ ಸ್ಟೇಷನ್ ಆತಿಥ್ಯನನ್ನಂತ ಪತ್ತೇದಾರರಿಗೆ ಇನ್ನೇನು ಸಿಕ್ಕತ್ತೆ?”

ಐದು ನಿಮಿಷಗಳಲ್ಲಿ ಚಿಕ್ಕ ಚೊಕ್ಕ ಹಸಿರೂರಿನ ಡೊಂಕು ಉಬ್ಬು ತಗ್ಗಿನ ರಸ್ತೆಗಳಲ್ಲಿ ಚಲಿಸುತ್ತಾ ಒಂದು ಹೆಂಚಿನ ಕಟ್ಟಡವನ್ನು ತಲುಪಿದರು. ಬೋರ್ಡ್ ಮಾತ್ರ ಹೊಸದಾಗಿ ಕಂಡಿತು. ಸ್ಟೇಷನ್ ಆವರಣ ಕಚೇರಿಯೆಲ್ಲಾ ಸ್ವಚ್ಚವಾಗಿಯೇ ಇದೆ..ಇದೆಲ್ಲಾ ಅಕ್ಕನ ಸಹಜ ದರ್ಬಾರು..ತನಗೆ ಕಿವಿ ಹಿಂಡಿ ಮನೆ ರೂಂ ಚೊಕ್ಕವಾಗಿಡಲು ಕಲಿಸಿ ಕೊಟ್ಟವಳಲ್ಲವೆ?

ಅಲ್ಲಿನ ಬಾತ್ ರೂಮಿನಲ್ಲೇ ಬೇಗ ಕೈ ಕಾಲು ಮುಖ ತೊಳೆದು ಹೊರಬಂದು ಅಕ್ಕನ ದೊಡ್ಡ ಮರದ ಟೇಬಲ್ಲಿನ ಮುಂದೆ ಆಸೀನನಾದ.

ಐದು ನಿಮಿಷ ಪರಸ್ಪರ ಕುಶಲೋಪರಿ ಮಾಡಿಕೊಂಡರು. ಅಕ್ಕನಿಗೆ ಮದುವೆಯಾಗಿ ಭಾವ ಗಲ್ಪ್ ದೇಶಲ್ಲಿದ್ದಾರೆ. ಬರುವುದು ಮುಂದಿನ ತಿಂಗಳಂತೆ..ಮಗಳು ಬೋರ್ಡಿಂಗ್ ಸ್ಕೂಲಿನಲ್ಲಿ ಓದುತ್ತಿದ್ದಾಳೆ. ಇಬ್ಬರೂ ನಿನ್ನನ್ನು ತುಂಬಾ ವಿಚಾರಿಸಿದರುಮುಂತಾದ ಚರ್ಚೆಯೆಲ್ಲಾ ಮುಗಿಯುವ ವೇಳೆಗೆ ಅಲ್ಲಿದ್ದ ದಫೇದಾರ ಆಕೆಗೆ ಏನೋ ಹೇಳಲು ಒದ್ದಾಡುತ್ತಾ ಧೈರ್ಯ ಸಾಲದೇ ನಿಂತಿದ್ದನ್ನು ಕಂಡು ಕೊನೆಗೆ ಇನ್ಸ್ಪೆಕ್ಟರ್ ಅವನನ್ನು ಬಳಿಗೆ ಕರೆದಳು.

ಅವನಿತ್ತ ರಿಪೋರ್ಟ್ ಫೈಲ್ ಓದುತ್ತಾ, ” ಇದೇ ನೋಡು ಅಮರ್..ನಿನ್ನೆ ರಾತ್ರಿ ಮಂಗಳೂರಿಂದ ಹೊರಟ ನ್ಯೂ ಮಲ್ನಾಡ್ ಮೈಲ್ ಟ್ರೈನಿನಲ್ಲಿ ಒಂದು ಕೊಲೆ ನೆಡೆದು ಹೋಗಿದೆ.. ಆತನ ಹೆಣ ರೈಲ್ವೇ ಹಳಿಗಳ ಪಕ್ಕದ ಪೊದೆಯಲ್ಲಿ ಇಲ್ಲಿಂದ ಒಂದು ಗಂಟೆ ದೂರವಿರುವ ಹಿಂದಿನ ಸ್ಟೇಷನ್ ರಾಜಾಪುರದಲ್ಲಿ ಪತ್ತೆಯಾಗಿದೆ. ಅವನು ಊರಿನ ನಮಗೆಲ್ಲಾ ಚಿರಪರಿಚಿತ ಚಿನ್ನದ ವ್ಯಾಪಾರಿ ಪ್ರಸಾದ್ ಸೆಟ್ಟಿಅದೂ..”ಎಂದಾಕೆ ಗಡಿಬಿಡಿಯಿಂದ ವಿವರಿಸುತ್ತಲೇ ಇದ್ದಂತೆ, ಅಮರ್ ತಡೆದ,

ಅವನು ರೈಲಿನಲ್ಲೇ ಬಂದು ಕೊಲೆಯಾಗಿ ಹೆಣ ಹೊರಗೆ ಬಿದ್ದಿದೆ ಎಂದು ಹೇಗೆ ಹೇಳುತ್ತೀರಿ?”

ಇನ್ಸ್ಪೆಕ್ಟರ್ ಈಶ್ವರಿ ನಸುನಕ್ಕಳು, ಇದು ಬಹಳ ಸರಳ ಎಂಬಂತೆ, “ ಪ್ರಸಾದ್ ಸೆಟ್ಟಿ ಪ್ರತಿವಾರ ಗುರುವಾರ ಮಂಗಳೂರಿಗೆ ಹೋಗಿ ಚಿನ್ನ ಖರೀದಿ ಮಾಡಿ ಇಲ್ಲಿನ ಅಂಗಡಿಗಾಗಿ ತರೋನು, ಅದನ್ನಿಟ್ಟುಕೊಂಡು ಕೆಲಸ ಮಾಡಿಸೋನುಅಲ್ಲದೇ ಬ್ಯಾಂಕಿನಿಂದ ಇಲ್ಲಿ ಬಡ್ಡಿ ವ್ಯವಹಾರಕ್ಕೆ ಅಂತಾ ಕ್ಯಾಶ್ ತರೋನು..ಯಾರೆಷ್ಟು ಹೇಳಿದರೂ ಎಚ್ಚರಿಕೆ ವಹಿಸದೇ ರೈಲಿನಲ್ಲಿ ಒಬ್ಬನೇ ಹೋಗಿ ಬರುತ್ತಿದ್ದ..ಹೆಂಡತಿ, ತಾಯಿ ಮಾತ್ರ ಇಲ್ಲಿ ಮನೆಯಲ್ಲಿರುತ್ತಿದ್ರುಅಲ್ಲಿಂದ ಶುಕ್ರವಾರ ರಾತ್ರಿ (ಅಂದರೆ ನಿನ್ನೆ ರಾತ್ರಿಯ) ಮೈಲಿನಲ್ಲಿ ಹೊರಟು ಬೆಳಗಿನ ಜಾವ ಹಸಿರೂರಿಗೆ ವಾಪಸ್ ಬಂದುಬಿಡುತ್ತಿದ್ದ. ರಿಟರ್ನ್ ಟಿಕೆಟ್ ಕೊಡುತ್ತಿದ್ದ ನಮ್ಮ ಸ್ಟೇಷನ್ ಮಾಸ್ಟರ್ ಚಿದಂಬರಾನೇ ಇದಕ್ಕೆ ನಿತ್ಯ ಸಾಕ್ಷಿ. ಅದೇ ರಿಟರ್ನ್ ಟಿಕೆಟ್ ಅವನ ಜೇಬಿನಲ್ಲಿ ಈಗಲೂ ಪತ್ತೆಯಾಗಿದೆ. ರೈಲು ಹತ್ತಿದ್ದಕ್ಕೆ ಟಿ ಟಿ ರಾತ್ರಿ ಚೆಕ್ ಮಾಡಿದ್ದರ ಗುರುತಿದೆ..ಹತ್ತಿದ್ದು ಮಂಗಳೂರಲ್ಲೇ  ರಾತ್ರಿ ೧೧ ಕ್ಕೆ, ಅದು ಗ್ಯಾರೆಂಟಿ. ಆದರೆ ವಾಪಸ್ ಹಸಿರೂರಿಗೆ ತಲುಪಲೇ ಇಲ್ಲ..ರಾಜಾಪುರದ ಹತ್ತಿರ ಕೊಲೆಯಾಗಿಬಿಟ್ಟಿದ್ದಾನೆ ಅನಿಸತ್ತೆ..ಅಲ್ಲದೇ ಅವನ ಬಳಿ ಇರುತ್ತಿದ್ದ ಸೂಟ್ಕೇಸ್ ಮಾಯವಾಗಿದೆ, ಅದರಲ್ಲೆ ಅವನು ಚಿನ್ನ, ಕ್ಯಾಶ್ ಎಲ್ಲಾ ಇಟ್ಟುಕೊಂಡಿರುತ್ತಿದ್ದ.. ನಾನು ಬಂದ ಮೇಲೆ ಇಲ್ಲಿನ ಮೊದಲ ಮರ್ಡರ್ ಕೇಸ್ ಇದು..”

ಅನುಮಾನ ಬಂದಿದ್ದು ಯಾರಿಗೆ, ಯಾಕೆ?” ಅಮರ್ ಯೋಚಿಸುತ್ತಾ ಕೇಳಿದ.

ತಿಂಡಿ ಮುಗಿಸಿ ಕಾಫಿ ಕುಡಿಯುತ್ತಾ ಇಬ್ಬರೂ ಮಾತು ಮುಂದುವರೆಸಿದರು.

ಇನ್ಸ್ಪೆಕ್ಟರ್ ಈಶ್ವರಿ ವಿವರಿಸಿದಳು: “ಬೆಳಿಗಿನ ಜಾವ ನಾಲ್ಕೂವರೆಗೆಲ್ಲಾ ಇಲ್ಲಿಗೆ ತಲುಪುವ ಟ್ರೈನ್..ಇಳಿದ ಕೂಡಲೆ ಗೆಳೆಯ ಸ್ಟೇಷನ್ ಮಾಸ್ಟರ್ ಚಿದಂಬರನನ್ನು ಮಾತಾಡಿಸದೇ ಹೋಗುತ್ತಿರಲಿಲ್ಲ..ಎಂದಿನಂತೆ ಇವತ್ತು ಚಿದಂಬರನಿಗೆ ಇವನು ಟ್ರೈನ್ ಇಳಿಯಲಿಲ್ಲ ಎಂದು ಖಚಿತವಾದಾಗ ನಮಗೂ , ಹಿಂದಿನ ಸ್ಟೇಷನ್ ಅಧಿಕಾರಿಗಳಿಗೂ ಸುದ್ದಿ ಮುಟ್ಟಿಸಿದಚಿನ್ನದ ವ್ಯಾಪಾರಿ ಗೆಳೆಯ ಎಂದ ಮೇಲೆ ಗಾಬರಿ ಸಹಜ ತಾನೇ…?..ಅದಾದ ಮೇಲೆ ರೂಟಿನಲ್ಲಿ ಮಂಗಳೂರಿಂದ ಇನ್ನೂ ಟ್ರೈನ್ ಬಿಟ್ಟಿಲ್ಲ ಇವತ್ತು..ಸದ್ಯ, ನೀನು ಟ್ರೈನ್ನಲ್ಲಿ ಅಂತಾ ಹೊರಡಲಿಲ್ಲವಲ್ಲ ಎಂದಿದ್ದು ಇದಕ್ಕೇ…”

ಹೆಣ ಕಂಡು ಹಿಡಿದಿದ್ದು ಹೇಗೆ? ಯಾರು?” ಎಂದ ಅಮರ್ಗೆ ತಾನು ಪತ್ತೆ ಕಾರ್ಯದಲ್ಲಿ ಮತ್ತೆ ಇಳಿಯುತ್ತಿದ್ದೇನೆಂದೂ, ತಾನಂದುಕೊಂಡಿದ್ದವೆಕೇಶನ್ಗಾಳಿಯಲ್ಲಿ ಹಾರಿಹೋಯಿತೆಂದೂ ಅರಿವಾಗುತ್ತಿದೆ..ಆದರೆ ವಿಧಿಯಿಲ್ಲ, ಅಕ್ಕನ ಕೇಸ್ ಎದುರಾದಮೇಲೆ ಮೇಲೆ ಮನೆಯಲ್ಲಿ ಮಲಗಲಾದೀತೆ?

ನಾವು ಸುದ್ದಿ ಮುಟ್ಟಿಸಿದ ಕೂಡಲೇ ರೈಲ್ವೇ ಪೋಲಿಸ್ ಹಿಂದಿನ ಸ್ಟೇಷನ್ ಆಸುಪಾಸಿನಲ್ಲೆಲ್ಲಾ ಹುಡುಕಾಡಿದ್ದಾರೆ.. ರಾಜಾಪುರದ ಸ್ಟೇಷನ್ ಬಳಿ ತರಕಾರಿಹಣ್ಣಿನ ಅಂಗಡಿ ಇಟ್ಟಿರುವ ಅಬ್ದುಲ್ ಮನೆಯಿಂದ ಅಂಗಡಿಗೆ ಶಾರ್ಟ್ ಕಟ್ಟಿನಲ್ಲಿ ನೆಡೆದು ಬರುವಾಗ ಬೆಳಿಗ್ಗೆ ೭ಕ್ಕೆ ಹೆಣವನ್ನು ಎಡವಿದ್ದಾನೆ..ಗಾಬರಿಯಿಂದ ಪೋಲೀಸರಿಗೆ ರಿಪೋರ್ಟ್ ಮಾಡಿದ್ದಾನೆ…”

ಹೇಗೆ ಸತ್ತಿದ್ದಾನೆ?” ಎರಡನೆ ಸುತ್ತಿನ ಕಾಫಿ ಹೀರುತ್ತಾ ಕೇಳಿದ ಅಮರ್.

ಇದೇ ಅಲ್ಲಿಂದ ಬಂದ ಮೊದಲ ರಿಫೋರ್ಟ್, ನೋಡು…” ಎಂದು ದಫೇದಾರ ನೀಡಿದ್ದ ಫೈಲ್ ಅತ್ತ ತಳ್ಳಿದಳು. “…ಕತ್ತಿಗೆ ಹಗ್ಗ ಬಿಗಿದು ಉಸಿರುಗಟ್ಟಿಸಿ ಕೊಂದಿರುವುದನ್ನು ವೈದ್ಯರು ಪ್ರಾಥಮಿಕ ಪರೀಕ್ಷೆಯಲ್ಲೇ ಸಿದ್ಧಪಡಿಸಿದ್ದಾರೆ, ಕತ್ತಿನಲ್ಲಿ ಹಗ್ಗದ ಗಾಯ, ರಕ್ತ ಹೆಪ್ಪುಗಟ್ಟಿದ್ದು ಕಂಡಿದೆಯಂತೆ.. ಕೇಸು, ಪೋಸ್ಟ್ಮಾರ್ಟೆಮ್ ಪ್ರೊಸೀಜರ್ ಎಲ್ಲಾ ಇನ್ನು ಮೇಲೆ..”

ಇನ್ನು ಸ್ವಲ್ಪ ಹೊತ್ತು ಅಕ್ಕ ಈಶ್ವರಿ ತನ್ನ ಕೆಲಸದಲ್ಲಿ ಮಗ್ನಳಾಗಿದ್ದಾಗ ಅಮರ್ ಅಲ್ಲೇ ಸುತ್ತಲೂ ಹೊರಗೆ ಸ್ವಲ್ಪ ಅಡ್ಡಾಡಿದನು. ಮನಸ್ಸಿನಲ್ಲಿ ಹೊಸ ಕೇಸ್ ಕೊರೆಯಲಾರಂಭಿಸಿತು.

ಅಷ್ಟರಲ್ಲಿಸ್ವಲ್ಪ ಮನೇಗೆ ಹೋಗಿ ರೆಸ್ಟ್ ತಗೋತೀಯ? ಕೀ ತಗೋಎನ್ನುತ್ತಾ ಅವನತ್ತ ಬಂದಳು ಅಕ್ಕ ಈಶ್ವರಿ. ಆಕೆಯ ಮನೆ ಸ್ಟೇಷನ್ ಹಿಂಭಾಗದಲ್ಲೇ ಇದೆ.

ಅರೆಕ್ಷಣ ಯೋಚಿಸಿದವನುಓಕೆ. ನಾನು ಸ್ನಾನ ಮಾಡಿಕೊಂಡು ಬರ್ತೇನೆ..ನಾವು ರಾಜಾಪುರಕ್ಕೆ ಹೋಗಬೇಕಾಗುತ್ತದೆಯಲ್ಲವೆಸ್ಪಾಟಿಗೆ?” ಎಂದಾಗ ಈಶ್ವರಿಯೇ ಸ್ವಲ್ಪ ಹಿಂಜರಿದಳು

ಅಲ್ಲಾ ಕಣೋ. ನೀನು ಇಲ್ಲಿಗೆ ರೆಸ್ಟ್ ಅಂತಾ ಬಂದರೆ, ತಕ್ಷಣ ನಿನ್ನ ಕೇಸಿನಲ್ಲಿ ಸಿಕ್ಕಿಹಾಕಿಸಿದೆನಲ್ಲಾ..ಅಂತಾ..”

ಅಮರ್ ಪಾಟೀಲ್ ಗೊಳ್ಳೆಂದು ನಕ್ಕ, “ಸರಿ ಹೋಯ್ತು.. ಮೊದಲ ಬಾರಿಗೆ ನಿನ್ನ ಸ್ಟೇಷನ್ನಲ್ಲಿ ಮರ್ಡರ್ ಕೇಸ್..ಈಗ ನಾನು ಮನೆಯಲ್ಲಿ ಸುಮ್ನೆ ನಿದ್ದೆ ಮಾಡಲು ಸಾಧ್ಯವೆ|?..ನಾನು ಪ್ರೊಫೆಶನಲ್ ಡಿಟೆಕ್ಟಿವ್ ಅಲ್ಲವೆ ಅಕ್ಕಾ?..”ಎಂದು ಅವಳ ತೋಳು ತಟ್ಟಿಇದೋ, ಬೇಗ ಬರ್ತೀನಿ”  ಎಂದು ರೆಡಿಯಾಗಲು ಆಕೆಯ ಮನೆಗೆ ಹೊರಟ.

ಮೊದಲು ನಾವು ಸ್ಟೇಷನ್ ಮಾಸ್ಟರ್ ಚಿದಂಬರನ್ನ ಮೀಟ್ ಮಾಡೋಣ…”ಎಂದ ವಾಪಸ್ ಬಂದ ಕೂಡಲೇ ಕೇಸ್ ಓಟವನ್ನು ತಾನೇ ನಿರ್ಧರಿಸುತ್ತಿರುವಂತೆ ಅಕ್ಕ ಈಶ್ವರಿಗೆ ಹೇಳಿದ ಅಮರ್.

ಚಿಕ್ಕ ಹಸಿರೂರಿಗೆ ತಕ್ಕ ಸಣ್ಣ ಸ್ಟೇಷನ್ನಿನ ಆವರಣ ಇಂದು ನಿರ್ಜನವಾಗಿತ್ತು. ಟ್ರೈನ್ ಯಾವುದೂ ಹೊತ್ತಿನಲ್ಲಿ ಇಲ್ಲದ್ದರಿಂದಲೋ, ಇಂದು ಪೋಲೀಸರೆಲ್ಲಾ ಇದ್ದರೆಂದೋ ಜನ ದೂರವೇ ಉಳಿದಿದ್ದರೋ, ಬೆಳಿಗ್ಗೆ ೯ಕ್ಕೆ ಇವರು ಅಲ್ಲಿಗೆ ಕಾಲಿಟ್ಟಾಗ.

ಮಂಗಳೂರು ಹೆಂಚಿನ ಸ್ಟೇಷನ್ ಕಟ್ಟಡದಲ್ಲಿ ಒಬ್ಬರೇ ಕುಳಿತಿದ್ದ ಮಧ್ಯವಯಸ್ಕ ಬಕ್ಕ ತಲೆಯ ಸಮವಸ್ತ್ರಧರಿಸಿದ ವ್ಯಕ್ತಿಯೊಬ್ಬಹಲೋ…” ಎಂದು ಪೆಚ್ಚುನಗೆ ಬೀರುತ್ತಾ ಇವರಿಬ್ಬರನ್ನೂ ಎದುರುಗೊಂಡ.

ಮಿ. ಚಿದಂಬರ, ಇವರು ನನ್ನ ತಮ್ಮ ಡಿಟೆಕ್ಟಿವ್ ಅಮರ್ ಪಾಟೀಲ್..ನಮಗೆ ಹೆಲ್ಪ್ ಮಾಡಲು ಒಪ್ಪಿದ್ದಾರೆ ಕೇಸಿನಲ್ಲಿ…”ಎಂದು ಪರಸ್ಪರ ಪರಿಚಯ ಮಾಡಿಕೊಟ್ಟಳು ಇನ್ಸ್ಪೆಕ್ಟರ್ ಈಶ್ವರಿ

ವಿ ನೀಡ್ ಆಲ್ ಹೆಲ್ಪ್..ಬನ್ನಿ..” ಎಂದು ಅಮರ್ಗೆ ಬೆವೆತ ಕೈಯಿಂದ ಹಸ್ತಲಾಘವ ಕೊಟ್ಟು ಕುಳ್ಳಿರಿಸಿದ ಚಿದಂಬರ.

ಎಲ್ಲರೂ ಕುಳಿತ ಮೇಲೆ ಒಮ್ಮೆ ಆತನನ್ನು ಗಮನವಿಟ್ಟು ನೋಡುತ್ತಾ ಅಮರ್ ಪ್ರಶ್ನಿಸಿದನು, “ನೀವೇ ಅಲ್ಲವೇ , ಪ್ರಸಾದ್ ಸೆಟ್ಟಿ ಬರಲಿಲ್ಲವೆಂದು ಅಲರ್ಟ್ ಮಾಡಿದ್ದು, ಏಕೆ ಅನುಮಾನ ಬಂತು?”

ಆತ ಇದಕುತ್ತರ ಬಹಳ ಸರಳವೆನ್ನುವಂತೆ ಸಪ್ಪಗೆ ನಕ್ಕ, “ಅರೆ, ಪ್ರತಿಸಲ ನನ್ನನ್ನು ಭೆಟ್ಟಿ ಮಾಡದೇ ಹೋಗುತ್ತಿದ್ದನೆ ನನ್ನ ಮಿತ್ರ? ..ಪಾಪ, ಇದೇ ಮೊದಲಸಲ…”

ಸ್ವಲ್ಪ ವಿವರಿಸಿ…” ಒತ್ತಾಯಿಸಿದ ಪತ್ತೇದಾರ.

ತನ್ನ ಕೂದಲಿಲ್ಲದ ತಲೆಯನ್ನು ನೇವರಿಸಿಕೊಳ್ಳುತ್ತಾ ಹೇಳಿದ ಚಿದಂಬರ: “ಇಲ್ಲಿಂದ ಮಂಗಳೂರಿಗೆ ಗುರುವಾರ ಬೆಳಿಗ್ಗೆ ಟ್ರೈನಿನಲ್ಲಿ ಹೋದನೆಂದರೆ ಮತ್ತೆ ಮುಂದಿನ ಜಾವ ಬೆಳಿಗ್ಗೆ :೩೦ಕ್ಕೆ ತಲಪುವ ರಾತ್ರಿ ಮೈಲಿನಲ್ಲಿ ಬರೋನು..ನನಗೂ ಅವನಿಗೂ ಸ್ಕೂಲ್ ಕಾಲದಿಂದ ಗೆಳೆತನಡ್ಯೂಟಿಯಲ್ಲಿರುತಿದ್ದ ನನ್ನ ರೂಮ್ಗೆ ಬಂದೇ ರಿಟರ್ನ್ ಟಿಕೆಟ್ ತಗೊಂಡು ಹೋಗೋನು..ವಾಪಸ್ ಬಂದಾಗ ಇಲ್ಲಿ ಕುಳಿತು ಕಾಫಿ ಕುಡಿದು ಮನೆಗೆ ಹೋಗುತ್ತಿದ್ದರಿಟರ್ನ್ ಟಿಕೆಟ್ ತಗೊಂಡೋನು ಇವತ್ತು ಬರಲೇ ಇಲ್ಲಅದಕ್ಕೇ!…”

ಅದೇಕೆ ಅದೇ ಟ್ರೇನಿನಲ್ಲಿ?.ಬೇರ್ಯಾವುದೂ ಇರಲಿಲ್ಲವೆ?” ಎಂದ ಆತನ ದಿನಚರಿಯ ಬಗ್ಗೆ ಯಾರಿಗಾದರೂ ತಿಳಿದಿತ್ತೋ ಎಂಬಂತೆ.

ಚಿದಂಬರ ಅರ್ಥವಾಯಿತೆಂಬಂತೆ ತಲೆಯಾಡಿಸಿದ, “ಇಲ್ಲಿಗೆ ರಾತ್ರಿ ಬರುವುದು ಅದೊಂದೇ ಟ್ರೈನ್..ಎರಡೂ ದಿಕ್ಕಿನಲ್ಲಿ ರಾತ್ರಿ ನಂತರ ಬೇರ್ಯಾವ ಟ್ರೈನೂ ಇಲ್ಲಹಾಗೆ ನೋಡಿದರೆ, ಇಲ್ಲಿಂದ ಹೋಗುವ ಒಂದು ಗೂಡ್ಸ್ ಟ್ರೈನನ್ನೂ ರಾತ್ರಿಯೆಲ್ಲ ಇಲ್ಲಿ ಕೆಂಪು ಸಿಗ್ನಲ್ ಹಾಕಿ ನಿಲ್ಲಿಸಿರುತ್ತೇವೆಬೆಳಿಗ್ಗಿನ ಜಾವಕ್ಕೇ ಬಿಡೋದು,,”ಎಂದು ವಿವರಿಸಿ ಕಿಟಕಿಯ ಹೊರಗೆ ಕೈ ತೋರಿಸಿದನು.

ಈಶ್ವರಿ ಮತ್ತು ಅಮರ್ ಇಬ್ಬರೂ ಅತ್ತ ತಿರುಗಿ ನೋಡಲು ಎರಡನೇ ಪ್ಲಾಟ್ಫ಼ಾರಮ್ಮಿನಲ್ಲಿ  ಒಂದು ಸಾಮಾನ್ಯ ಉದ್ದದ  ನಾಲ್ಕೇ ಬೋಗಿಗಳಿರುವ ಗೂಡ್ಸ್ ರೈಲು ನಿಂತಿದೆ..

ಯಾಕೆ ಹಾಗೆ..ರಾತ್ರಿಯೆಲ್ಲಾ ಯಾವ ಟ್ರೈನೂ ಹೋಗಲ್ಲ?,..” ಅಮರ್ ಪ್ರಶ್ನಿಸಿದ.

ಇದಕ್ಕೆ ಈಶ್ವರಿಯೇ ಉತ್ತರಿಸಿದಳು,”ಅದು ನನಗೆ ಗೊತ್ತುಇಲ್ಲಿಂದ ರಾಜಾಪುರದವರೆಗಿನ ದುರ್ಗಮ ಘಾಟ್ ಮತ್ತು ಫ಼ಾರೆಸ್ಟ್ ಏರಿಯಾದಲ್ಲಿ ಆನೆಗಳ ಓಡಾಟ ಇರುತ್ತೆ..ಹಲವು ಬಾರಿ ಆನೆಗಳು ರಾತ್ರಿ ಕತ್ತಲಲ್ಲಿ ಡ್ರೈವರುಗಳಿಗೆ ಕಾಣದೇ ಟ್ರೈನಿಗೆ ಸಿಕ್ಕು ಪ್ರಾಣ ಬಿಟ್ಟಿವೆ..ಅದಕ್ಕೆ ಪ್ರಾಣಿ ದಯಾ ಸಂಘಟನೆಯವರ ದೊಡ್ಡ ಪ್ರತಿಭಟನೆಯೇ ನಡೆದು ರೈಲ್ವೇಯವರು ರಾತ್ರಿ ರೈಲುಗಳ ಓಡಾಟವನ್ನು ರೂಟಿನಲ್ಲಿ ನಿಲ್ಲಿಸಬೇಕಾಯಿತುಅದಲ್ಲವೇ ಕಾರಣ, ಮಿ.ಚಿದಂಬರ?”

ಚಿದಂಬರ ಸಮ್ಮತಿಸಿ ತಲೆಯಾಡಿಸಿದ.

ಗೂಡ್ಸ್ ಟ್ರೈನಿನಲ್ಲಿ ಏನೆಲ್ಲಾ ಸಾಗಿಸುತ್ತಾರೆ..ಎಲ್ಲೆಲ್ಲಿಗೆ?” ಎಂದು ಏನೋ ಸುಳಿವು ಹಿಡಿದವನಂತೆ ಕೇಳಿದ ಅಮರ್.

ಓಹ್, ಇದೊಂದು ಲೋಕಲ್ ಗೂಡ್ಸ್ ಟ್ರೈನ್ ಅಂತಾ ಸಾರ್ವಜನಿಕ ಸೌಕರ್ಯಕ್ಕೆ ಹಾಕಿರೋದು, ಇಲ್ಲಿ ರಸ್ತೆಗಳು ಸರಿಯಿಲ್ಲಬಸ್, ಲಾರಿ ವ್ಯವಸ್ಥೆಗಿಂತಾ ಇದೇ ಜನಪ್ರಿಯ ..ದೊಡ್ಡ ದೊಡ್ಡ ಟ್ರೈನಿನಂತಲ್ಲ.. ಹಸಿರೂರುರಾಜಾಪುರದ ಕಡೆಯ ರೈತರು ತರಕಾರಿ ಹಣ್ಣುಗಳನ್ನು ಇದರಲ್ಲಿ ಬುಕ್ ಮಾಡ್ತಾರೆ. ರಾತ್ರಿ ಕಳಿಸಿದರೆ ರಾಜಾಪುರದಾಚೆಯ ಊರುಗಳವರೆಗೂ ಗೂಡ್ಸ್ ರೈಲಿಂದ ಇಳಿಸಿಕೊಳ್ತಾರೆ..ಮಿಕ್ಕಿದ್ದೆಲ್ಲಾ ದೊಡ್ಡ ಸಾಮಾನುಗಳು ಆಗಾಗ, ಆದರೆ ಬಹಳ ಅಪರೂಪ..”

ಹಾಗಾಗಿ ರಾತ್ರಿ ನಿಲ್ಲಿಸಿದರೂ ಏನೂ ತೊಂದರೆಯಿಲ್ಲ ಎಂದು ನೀವು ಇಲ್ಲೇ ಸಿಗ್ನಲ್ ಕೆಂಪು ಮಾಡಿ ನಿಲ್ಲಿಸಿರ್ತೀರಾ ಅಲ್ಲವೆ?” ಅಮರ್ ಅದನ್ನು ಖಾತ್ರಿ ಪಡಿಸಿಕೊಳ್ಳುವಂತೆ ಕೇಳಿದ.

ಹೌದೌದುಅದರ ಎಂಜಿನ್ ಡ್ರೈವರ್ ಫಾಲಾಕ್ಷ ಅಂತಾ..ಅವನು ಕೂಡಾ ಪಕ್ಕದ ರೂಮಿನಲ್ಲೆ ಮಲಗಿರ್ತಾನೆ..ಈಗ ಇವತ್ತು ರೈಲ್ ಡ್ಯೂಟಿ ಇಲ್ಲ ಅಂತಾ ಮನೇಗೆ ಹೋಗಿದ್ದಾನೆರೈಲ್ವೇಯವರೂ, ಪೋಲಿಸರೂ ಬಂದು ಟ್ರ್ಯಾಕ್ ಎಲ್ಲಾ ತನಿಖೆ ಮಾಡೋವರೆಗೂ ಗೂಡ್ಸ್ ಟ್ರೈನ್ ಬೇಡ ಎಂದು ಮೆಸೇಜ್ ಕಳಿಸಿದರು..ಮಧ್ಯಾಹ್ನದವರೆಗೂ ಇವತ್ತು ಇಲ್ಲಿಂದ ಟ್ರೈನೇ ಓಡಿಸಲ್ಲ ಅಂತಾ ಅನ್ಕೊಂಡಿದೀವಿ…”.ಇವತ್ತಿನ ಘಟನೆಯಿಂದಾಗಿ ಎಲ್ಲಾ ಸರಿಯಾಗಿ ವ್ಯವಸ್ಥೆ ಮಾಡಿರುವವನಂತೆ ಉತ್ತರಿಸಿದ ಚಿದಂಬರ.

ನಾನು ಗೂಡ್ಸ್ ಟ್ರೈನಿನ ಬಳಿ ಹೋಗಿ ನೋಡಬೇಕಲ್ಲ?” ಎನ್ನುತ್ತಾ ಪ್ರಶ್ನಾರ್ಥಕವಾಗಿ ನೋಡಿದ ಅಮರ್.

ಅಚ್ಚರಿಚಕಿತರಾಗಿ ಮಿಕ್ಕ ಇಬ್ಬರೂ ಇವನತ್ತ ನೋಡಿದರು. ಕೊಲೆ ನೆಡೆದಿರುವುದು ಕಡೆಯಿಂದ ಬಂದ ಟ್ರೈನಿನಲ್ಲಿ..ಇಲ್ಲೇ ನಿಂತ ಗೂಡ್ಸ್ ಬಂಡಿಯನ್ನು ನೋಡುವುದೇಕೆ ಎಂಬಂತೆ..

ನಾನುಸುಮ್ಮನೆ ಹೀಗೇ..”ಎಂದು ಹೆಚ್ಚು ವಿವರಿಸದೇ ಹೊರನೆಡೆದ ಅಮರ್.

ಪತ್ತೇದಾರನ ಜತೆ ಅಕ್ಕ ಇನ್ಸ್ಪೆಕ್ಟರ್ ಈಶ್ವರಿ ಮತ್ತು ಸ್ಟೇಷನ್ ಮಾಸ್ಟರ್ ಚಿದಂಬರ ಕೂಡಾ ಅತ್ತ ಕಾಲು ಸರಿಸಿದರು.

ಗೂಡ್ಸ್ ರೈಲಿನಲ್ಲಿ ಕೆಲವೇ ತೆರೆದ ಬೋಗಿಗಳು, ಮುಚ್ಚಿದ ಬೋಗಿಗಳೂ ಇದ್ದವು. ಅವನ್ನೆಲ್ಲಾ ಒಮ್ಮೆ ಪರಿಶೀಲಿಸಿ, ಕೆಂಪು ಸಿಗ್ನಲ್ನತ್ತ ಒಮ್ಮೆ ನೋಡಿ ಮಾತಿಲ್ಲದೇ ವಾಪಸಾದನು ಅಮರ್. ಮಿಕ್ಕಿಬ್ಬರೂ ವಿಸ್ಮಯಗೊಂಡರೂ ಏನೂ ಕೇಳಲಿಲ್ಲ.

ಅಕ್ಕ, ರಾಜಾಪುರಕ್ಕೆ ನಾವು ನಮ್ಮ ಕಾರಲ್ಲೇ ಹೋಗೋಣ ಅಲ್ಲವೆ?”..ಎಂದು ಸ್ಟೇಷನ್ ಹೊರನೆಡೆಯುತ್ತಾ ಕೇಳಿದ ಅಮರ್.

ಈಶ್ವರಿ ಕೂಡಾ ವಾಚ್ ನೋಡಿಕೊಳ್ಳುತ್ತಾ, “ಹೌದು ..ಈಗ ಹೊರಡೋಣ, ಅಲ್ಲಿಯವರು ಕಾಯುತ್ತಿರಬಹುದುಒಂದು ಗಂಟೆ ಪ್ರಯಾಣ, ಡೈವ್ ಮಾಡುತ್ತೀಯಾ?..’ಎಂದಳು.

ಹೂಂ!’ ಎಂದು ತಲೆಯಾಡಿಸುತ್ತಾ ಕಾರ್ ಏರಿದ ಅಮರ್.

ಹಸಿರೂರಿನಿಂದ ಮಲೆನಾಡಿನ ಸುತ್ತಿ ಇಳಿಯುವ ಬೆಟ್ಟದ ಹಾದಿಯಲ್ಲಿ ತನ್ನ ವೇಗವಾದ ಕಾರ್ ಚಾಲನೆಯನ್ನು ಇಷ್ಟಪಡುತ್ತಾ ಕಡಿದಾದ ಸ್ಥಳದಲ್ಲಿದ್ದ ರಾಜಾಪುರದ ಚಿಕ್ಕ ಸ್ಟೇಷನ್ ಬಳಿ ಜಗ್ಗನೆ ನಿಲ್ಲಿಸಿದನು ಅಮರ್.

೪೫ ನಿಮಿಷಗಳಾಯ್ತು ಅಷ್ಟೇ!” ಎಂದು ಅವನ ಡ್ರೈವಿಂಗಿನಿಂದ ಸುಸ್ತಾದವಳಂತೆ ಕಂಡ ಅಕ್ಕನನ್ನು ನೋಡಿ ಮುಗುಳ್ನಕ್ಕ. ಆಗ ಸಮಯ ಬೆಳಿಗ್ಗೆ ೧೦:೩೦ ಆಗಿತ್ತು.

ಮುಂದುವರಿಯುವುದು…

Facebook ಕಾಮೆಂಟ್ಸ್

ಲೇಖಕರ ಕುರಿತು

Nagesh kumar

ನಾಗೇಶ್ ಕುಮಾರ್ ಸಿ ಎಸ್ ಹುಟ್ಟಾ ಬೆಂಗಳೂರಿನವನಾಗಿದ್ದು, ಸಿವಿಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರ. ಈಗ ಚೆನ್ನೈ ನಗರದಲ್ಲಿ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ, ಕುಟುಂಬ ಸಮೇತ ತಮಿಳು ನಾಡಿನ ಕನ್ನಡ ಪರ ಸಂಸ್ಥೆಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!