ಕರೆ ಬಂದಿದ್ದು ಆಸ್ಪತ್ರೆಯಿಂದ. ಅಕ್ಕನಿಗೆ ಅಪಘಾತವಾಗಿತ್ತು. ಬಸ್ ಹತ್ತುತ್ತಿರುವಾಗ ಬಸ್ ಚಲಿಸಿದ್ದರಿಂದ ಕಾಲು ಜಾರಿ ಕೆಳಗೆ ಬಿದ್ದು ಆಸ್ಪತ್ರೆಗೆ ಸೇರಿಸಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಮೈಯೆಲ್ಲ ನಡುಕ ಬಂದಂತಾಗಿ ಮೊಬೈಲ್ ಹಿಡಿಯಲು ಸಹ ಅಶಕ್ಯನಾದಂತೆ ಅನಿಸಿತು. ಆದರೂ ಸುಧಾರಿಸಿಕೊಂಡು ಆಸ್ಪತ್ರೆಯ ಕಡೆ ದೌಡಾಯಿಸಿದೆ. ಅಲ್ಲಿ ತಲುಪಿದಾಗ ಅಕ್ಕನಿಗೆ ಚಿಕಿತ್ಸೆ ನಡೆಯುತ್ತಿತ್ತು. ಸ್ವಲ್ಪ ಸಮಯದ ನಂತರ ವೈದ್ಯರು ಚಿಕಿತ್ಸಾ ವಿಭಾಗದಿಂದ ಹೊರಬಂದರು. “ಹೇಗಿದ್ದಾಳೆ ಅಕ್ಕ?” ಅಂದೆ. “ಬಸ್’ನಿಂದ ಜಾರಿ ಬಿದ್ದಾಗ ಫುಟ್’ಪಾತ್’ ತಲೆಗೆ ಬಡಿದಿದ್ದರಿಂದ ಬಲವಾದ ಏಟು ಬಿದ್ದಿದೆ. ಇನ್ನೂ ಏನೂ ಹೇಳುವ ಪರಿಸ್ಥಿತಿಯಲ್ಲಿ ನಾವಿಲ್ಲ” ಎಂದರು. ಮತ್ತೆ ನಿಂತ ನೆಲ ಕುಸಿದ ಅನುಭವ. ಹೀಗೆ ಎರಡು ದಿನ ಕಳೆಯಿತು. ಕಡೆಗೂ ಮೂರನೇ ದಿನ ಅಕ್ಕನಿಗೆ ಪ್ರಜ್ಞೆ ಬಂತು.
ಡಾಕ್ಟರ್ ನನ್ನನ್ನು ಒಳಗೆ ಕರೆದರು. ನನಗೋ ಎಲ್ಲಿ ಸಿನಿಮಾಗಳಲ್ಲಿ, ಧಾರಾವಾಹಿಗಳಲ್ಲಿ ತೋರಿಸುವಂತೆ ಅಕ್ಕನಿಗೆ ಹಿಂದಿನದೆಲ್ಲ ಮರೆತು ಹೋಗಿಬಿಡುವುದೋ ಎಂಬ ತಳಮಳ, ಭಯ. ಮೆಲ್ಲಗೆ ಅವಳ ಬಳಿ ಹೋಗಿ ಕೈಯಲ್ಲಿ ಕೈಯಿಟ್ಟು ಕುಳಿತೆ. ಸಣ್ಣದೊಂದು ಮುಗುಳನಗು ನನ್ನ ದೇವತೆಯ ತುಟಿಯಂಚಲ್ಲಿ ಮಿಂಚಿ ಹೋಯಿತು. ಆ ಒಂದು ನಗುವಿಂದ ನನಗೇ ಹೊಸ ಜನ್ಮವೊಂದು ಸಿಕ್ಕಿತೇನೋ ಎಂಬಷ್ಟು ಖುಷಿಯಾಯಿತು. ಕಣ್ಣಂಚಿಂದ ಮಡುಗಟ್ಟಿದ ಭಯವು ಕರಗಿ ಹನಿಗಳ ಸಾಲಾಗಿ ಒಂದರ ಹಿಂದೊಂದರಂತೆ ಕೆನ್ನೆಯ ಮೇಲೆ ಮೆರವಣಿಗೆ ಮಾಡಿದವು. ಅವಳ ಈ ಸ್ಥಿತಿ ಇನ್ನೂ ಒಂದು ವಾರ ನಡೆಯಿತು. ನಂತರ ನಿಧಾನವಾಗಿ ಚೇತರಿಸಿಕೊಳ್ಳತೊಡಗಿಳು. ಇನ್ನೊಂದು ವಾರ ಕಳೆದ ನಂತರ ಮನೆಗೆ ಕಳಿಸಿದರು. ಆಗಾಗ ಅಕ್ಕನ ಸಹೋದ್ಯೋಗಿ ಆಶ್ರಿತಾ ಬಂದು ಹೋಗಿ ಅಕ್ಕನ ಆರೋಗ್ಯ ನೋಡಿಕೊಳ್ಳುವಲ್ಲಿ ನನಗೆ ಸಹಕರಿಸುತ್ತಿದ್ದಳು.
ಹೀಗೆ ಸುಮಾರು ಎರಡು ತಿಂಗಳು ಕಳೆಯಿತು. ಅಕ್ಕ ಈಗ ಮತ್ತೆ ಮೊದಲಿನಂತಾಗಿದ್ದಳು. ನನಗೆ ಹೊಸ ಬದುಕು ಕೊಟ್ಟ ಅಕ್ಕನ ಈ ಮರುಹುಟ್ಟಿಗೆ, ಅಂದು ನಾ ತಂದಿದ್ದ ಸೀರೆಯನ್ನು ಉಡುಗೊರೆಯಾಗಿ ಕೊಟ್ಟೆ. ಅಕ್ಕನ ಮುಖ ಈಗಷ್ಟೆ ಅರಳಿದ ಹೂವಂತೆ ಅರಳಿತು. ಅವಳ ಸಂತಸವನ್ನು ಹೇಳಿಕೊಳ್ಳಲು ಪದಗಳಿರಲಿಲ್ಲ. ಸುಮ್ಮನೆ ನನ್ನ ಅಪ್ಪಿಕೊಂಡಳು. ಆ ಅಪ್ಪುಗೆ ಎಲ್ಲ ಭಾವಗಳನ್ನು ತಾನಾಗೇ ಹೃದಯಕ್ಕೆ ಮುಟ್ಟಿಸಿತ್ತು. “ಥ್ಯಾಂಕ್ ಯೂ ಪುಟ್ಟಾ” ಎಂದು ಹಣೆಗೊಂದು ಮುತ್ತಿಟ್ಟಳು. ಹಾಗೇ ನನ್ನನ್ನು ಪಕ್ಕ ಕೂರಿಸಿಕೊಂಡಳು.
“ನನಗೂ ಒಬ್ಬ ಪುಟ್ಟ ತಮ್ಮ ಹುಟ್ಟಿದ್ದ. ಆ ಪುಟ್ಟ ಪುಟ್ಟ ಕಾಲ್ಗಳನ್ನು ಕೈಯಲ್ಲಿ ಹಿಡಿದು ಮುದ್ದಿಸಬೇಕಾದ್ರೆ ಆಗೋ ಖುಷಿಗೆ ಬಹುಷಃ ಸರಿಸಾಟಿ ಯಾವುದೂ ಇಲ್ಲ. ಹಲ್ಲಿಲ್ಲದ ಬಾಯಿ ಅಗಲಿಸಿ ಆ ಪುಟ್ಟ ಜೀವ ನಗುತ್ತಿದ್ದರೆ ಜಗತ್ತೇ ಅದರ ಜೊತೆಸೇರಿ ನಗುತ್ತಿದೆಯೋ ಅನ್ನಿಸ್ತಿತ್ತು. ಆ ಪುಟಾಣಿ ಕೈಗಳು ನನ್ನ ಬೆರಳನ್ನು ಗಟ್ಟಿಯಾಗಿ ಹಿಡಿದರಂತೂ… ಅಬ್ಬಾ! ಮೈ ಜುಂ ಅನ್ನಿಸುಂತಹ ಆನಂದ. ಅವನನ್ನು ಮುದ್ದಿಸಿದಷ್ಟೂ ಇನ್ನಷ್ಟು ಮತ್ತಷ್ಟು ಮುದ್ದಿಸುವ ಆಸೆ. ಅವನು ಅತ್ತರೂ ಚಂದವೇ. ಸ್ನಾನ ಮಾಡಿಸಿ ಕರಕೊಂಡು ಬಂದಾಗ ಕೆಂಪು ಕೆಂಪಾಗೋ ಅವನ ಕೆನ್ನೆ ನೋಡುವುದೇ ಒಂದು ಸೊಬಗು. ಅವನ ಪುಟ್ಟ ಕೈಗಳು ನನ್ನ ಕೂದಲು ಹಿಡಿದು ಎಳೆದಾಗ ಯಾಕೆ ನಾನು ಅಷ್ಟು ನಗ್ತಿದ್ದೆನೋ ಇಂದಿಗೂ ಗೊತ್ತಿಲ್ಲ. ಆದರೆ…” ಎಂದು ಒಮ್ಮೆ ತನ್ನ ಮಾತು ನಿಲ್ಲಿಸಿದಳು. ನಾನು ಕುತೂಹಲದಿಂದ ಅವಳ ಭುಜದ ಮೇಲೆ ಕೈಯಿಟ್ಟು ಪ್ರಶ್ನಾರ್ಥಕವಾಗಿ ನೋಡಿದೆ.
ಮತ್ತೆ ಮುಂದುವರಿಸಿದಳು. “ನನ್ನ ತಮ್ಮ ಹುಟ್ಟಿ ಸುಮಾರು ಒಂದು ವರ್ಷ ಆಗಿತ್ತು ಅನಿಸುತ್ತದೆ. ಅಪ್ಪ, ಅಮ್ಮ ಯಾವುದೋ ಮದುವೆ ಮುಗಿಸಿ ಬರುವಾಗ ರಸ್ತೆ ಅಪಘಾತದಲ್ಲಿ ತೀರ್ಕೊಂಡ್ಬಿಟ್ರು. ಮನೆಗೆ ಸಮೀಪದಲ್ಲೇ ಇತ್ತು ಕಲ್ಯಾಣಮಂಟಪ. ಹಾಗಾಗಿ ಪುಟ್ಟನನ್ನು ಮಲಗಿಸಿ,ಬೇಗ ಹೋಗಿ ಬರ್ತೆನೆ ಅಂತ ಹೇಳಿ ಹೋದರು. ಸಮೀಪವೇ ಆಗಿದ್ದರಿಂದ ಹೋಗುವಾಗ ನಡೆದೇ ಹೋಗಿದ್ದರು. ಆದರೆ ಬರುವಾಗ ಆ ವಿಧಿಯ ಆಟವೇನೋ ಅನ್ನೋವಂತೆ ಯಾರೋ ಒಬ್ಬ ಫ್ರೆಂಡ್ ಕಾರಲ್ಲಿ ಬಂದ್ರು. ಆ ಕಾರ್ ಆ್ಯಕ್ಸಿಡೆಂಟ್ ಆಯ್ತು. ಇಬ್ಬರೂ ನಮ್ಮನ್ನ ಬಿಟ್ಟು ದೂರ ಹೋದರು…” ಮತ್ತೆ ಮಾತುಗಳಿಗೊಂದು ಅಲ್ಪವಿರಾಮ ಬಿತ್ತು. ಕಣ್ಣೀರು ಅಕ್ಕನ ಮಾಸಿದ ಗಾಯಗಳನ್ನು ಹಸಿಯಾಗಿಸಿತ್ತು. ಅವಳ ಕೈಯಲ್ಲಿ ಕೈಯಿಟ್ಟು ಸಂತೈಸಿದೆ.
“ಅಲ್ಲಿಂದ ನನ್ನ ಹಾಗೂ ನನ್ನ ತಮ್ಮನ ಪಾಲಿನ ನರಕ ಆರಂಭವಾಯಿತು. ಅಪ್ಪ ಅಮ್ಮನ ಉತ್ತರಕ್ರಿಯೆಗಳೆಲ್ಲ ಮುಗಿದ ನಂತರ ಒಂದಷ್ಟು ದಿನ ಚಿಕ್ಕಪ್ಪ, ಚಿಕ್ಕಮ್ಮ, ಅತ್ತೆ, ಮಾವ ಚೆನ್ನಾಗಿ ಮಾತಾಡಿಸ್ತಿದ್ದರು. ದಿನ ಕಳೆದಂತೆ ಪರಿಸ್ಥಿತಿ ಬಿಗಡಾಯಿಸಿತು. ಅಪ್ಪನ ಆಸ್ತಿಗಳ ಮೇಲೆ ಲಾಲಸೆ ಉಂಟಾಯಿತವರಿಗೆ. ಒಂದಿನ ನನ್ನ ಕರೆದು ‘ ನಿನ್ನನ್ನು ಒಂದು ಅನಾಥಾಶ್ರಮಕ್ಕೆ ಸೇರಿಸ್ತೀವಿ. ನಮ್ ಹತ್ರ ನೋಡ್ಕೊಳ್ಳೋಕ್ ಆಗಲ್ಲ’ ಅಂತ ಜೋರಾದ ಧ್ವನಿಯಲ್ಲಿ ಚಿಕ್ಕಪ್ಪ ಹೇಳಿದ್ರು. ಏನು ಮಾಡಲಿ? ಏನು ಹೇಳಲಿ ಎಂಬುದೇ ತೋಚಲಿಲ್ಲ. ಮೌನಿಯಾಗಿ ನಿಂತೆ. ಮರುದಿನ ಅನಾಥಾಶ್ರಮಕ್ಕೆ ದಾಖಲಾತಿ ಮಾಡಲು ಸಮಯ ನಿಗದಿಯಾಯಿತು. ನನ್ನ ಬಟ್ಟೆ ಬರೆಗಳೊಂದಿಗೆ ಹೊರಟು ನಿಂತೆ. ನನ್ನ ಪುಟ್ಟ ತಮ್ಮ ಎದೆಗೊರಗಿ ಮಲಗಿದ್ದ.
“ಹೊರಟು ನಿಂತ ನನಗೆ ಇನ್ನೊಂದು ಅಚ್ವರಿ ಕಾದಿತ್ತು. ನಿನ್ನ ತಮ್ಮನನ್ನು ಇಲ್ಲೇ ಬಿಟ್ಟು ಹೋಗು ಅಂದರು. ಗಟ್ಟಿಯಾಗಿ ಚೀರಬೇಕೆನಿಸುವಷ್ಟು ಕೋಪ, ದುಃಖ ಎರಡೂ ಆದವು. ಅಸಹಾಯಕಳಾಗಿ ಬಿಕ್ಕಿ ಬಿಕ್ಕಿ ಅಳುತ್ತಾ ನಿಂತೆ. ಯಾರ ಬಳಿ ಹೇಳಿಕೊಳ್ಳಲಿ ನನ್ನ ಅಳಲನ್ನು. ಏಕಾಂಗಿಯಾಗಿದ್ದೆ. ಯಾರ ವಿರುದ್ಧವೂ ಹೋರಾಡುವ ಶಕ್ತಿಯಿರಲಿಲ್ಲ ನನ್ನಲ್ಲಿ. ಆದರೂ ಪರಿಪರಿಯಾಗಿ ಬೇಡಿದೆ. ನನ್ನನ್ನು ನೋಡಿಕೊಳ್ಳಲಾಗದ ಈ ಚಿಕ್ಕಪ್ಪ ಚಿಕ್ಕಮ್ಮನಿಗೆ ನನ್ನ ತಮ್ಮ ಯಾಕೆ ಬೇಕು ಎಂಬುದು ಆ ವಯಸ್ಸಿಗೆ ಅರ್ಥವಾಗದ ವಿಷಯವಾಗಿತ್ತು. ಕೊನೆಗೂ ಅವನನ್ನಾದರೂ ಚೆನ್ನಾಗಿ ನೋಡಿಕೊಳ್ಳಲಿ ಎಂದು ಪ್ರಾರ್ಥಿಸಿ ಅನಾಥಾಯಲದ ಅತಿಥಿಯಾದೆ. ಒಂದು ವಾರ ಕಳೆಯಿತು. ಆ ಪುಟ್ಟ ಕಂದಮ್ಮನ ಮೇಲಿನ ಸೆಳೆತ ಅತಿಯಾಯಿತು ನನಗೆ. ಮತ್ತೆ ಹೋದೆ ಮನೆ ಹತ್ತಿರ. ಮನೆ ಬೀಗ ಹಾಕಿತ್ತು. ಪಕ್ಕದ ಮನೆಯವರ ಬಳಿ ವಿಚಾರಿಸಿದೆ. ನನ್ನ ತಮ್ಮನನ್ನು ಆ ಪಾಪಿಗಳು ಯಾವುದೋ ಬಸ್ ನಿಲ್ದಾಣದಲ್ಲಿ ಬಿಟ್ಟು ಬಂದರು ಎಂಬ ಸುದ್ದಿ ಗೊತ್ತಾಯಿತು. ಅಯ್ಯೋ ಪಾಪಿಗಳಾ ಎಂದು ಮನಸಿನಲ್ಲೇ ಬೈದುಕೊಂಡೆ. ನನ್ನ ಆ ಪುಟ್ಟ ರಾಜಕುಮಾರನ ಸ್ಥಿತಿಯನ್ನು ಎಣಿಸಿ ಇನ್ನಿಲ್ಲದಂತೆ ಅತ್ತೆ. ಸಿಕ್ಕ ಸಿಕ್ಕ ಬಸ್ ನಿಲ್ದಾಣಗಳಲ್ಲಿ ಹುಡುಕಿದೆ. ಹುಚ್ಚಿಯಂತೆ ಅಲೆದೆ. ಎಲ್ಲಿಯೂ ಸಿಗಲಿಲ್ಲ. ಕಣ್ಣೀರು ಸಹ ಬತ್ತಿಹೋಯಿತು. ತನ್ನವರೆನ್ನುವವರೇ ಇಲ್ಲದ ಈ ಬದುಕು ಬೇಡ ಎನ್ನುವ ನಿರ್ಧಾರಕ್ಕೆ ಬಂದೆ. ಆದರೆ ಇಷ್ಟು ಅನಾಹುತಗಳಾಗಿಯೂ ನನ್ನನ್ನು ಆ ದೇವರು ಉಳಿಸಿದ್ದಾನೆ ಎಂದರೆ ಅದಕ್ಕೂ ಒಂದು ಉದ್ದೇಶವಿರಲೇಬೇಕು ಎಂಬ ಯೋಚನೆ ಸುಳಿಯಿತು. ಅದ್ಯಾವ ಶಕ್ತಿಯೋ ಗೊತ್ತಿಲ್ಲ, ನನ್ನ ಆತ್ಮಹತ್ಯೆಗೆ ಮನಸು ಒಪ್ಪದಂತೆ ಮಾಡಿತು. ಹೀಗೆ ವರ್ಷಗಳುರುಳಿದವು. ಅನಾಥಾಯಲಯದ ಆಶ್ರಯದಲ್ಲಿ ಪಿ.ಯು.ಸಿ. ಮುಗಿಸಿ ಒಂದು ಸಣ್ಣ ಆಫಿಸಿನಲ್ಲಿ ಕೆಲಸಕ್ಕೆ ಸೇರಿಕೊಂಡೆ. ಆ ಮೂಲಕ ಆ ಆಶ್ರಯದಿಂದ ಹೊರಬಂದೆ.”
ಅಕ್ಕನ ಮಾತಿಗೆ ಇನ್ನೊಂದು ಅಲ್ಪವಿರಾಮ ಬಿತ್ತು.
ಇತ್ತ ನನ್ನ ಮನಸಿನಲ್ಲಿ ಇನ್ನೊಂದಷ್ಟು ಪ್ರಶ್ನೆಗಳು ಭುಗಿಲೆದ್ದಿದ್ದವು. ಆ ಪಾಪಿಗಳು ಬಸ್ ನಿಲ್ದಾಣದಲ್ಲಿ ಎಸೆದು ಬಂದ ಹಸುಗೂಸು ನಾನೇ? ಹಾಗಾದರೆ ಇವಳು ನನ್ನ ಸ್ವಂತ ಅಕ್ಕನೇ? ಹೀಗೆ ಏನೇನೋ ಗೊಂದಲಗಳು. ಆದರೂ ಆ ಕ್ಷಣ ನಾನು ಏನನ್ನೂ ಅಕ್ಕನ ಬಳಿ ವಿಚಾರಿಸಲಿಲ್ಲ. ಅವಳಾಗೇ ಎಲ್ಲವನ್ನೂ ಹೇಳಲಿ ಎಂದು ಕಾಯುತ್ತ ಕುಳಿತೆ.
“ನನಗೆ ಕೆಲಸ ಸಿಕ್ಕಿ ಎರಡು ವರ್ಷಗಳಾಗಿರಬಹುದು. ಅದೊಂದು ದಿನ ಎಲ್ಲಿಗೋ ಹೋಗುವ ಸಲುವಾಗಿ ಬಸ್ ಹತ್ತಿ ಕುಳಿತಿದ್ದೆ. ನಿನಗೆ ನೆನಪಿದೆಯೋ ಇಲ್ಲವೋ ಬಿಸ್ಕೇಟ್ ಪೊಟ್ಟಣಗಳನ್ನು ಮಾರುತ್ತ ನೀನು ನನ್ನ ಬಳಿಯೂ ಬಂದೆ. ನಾನು ಬೇಡ ಎಂದೆ. ನೀನು ಒತ್ತಾಯ ಮಾಡಿದೆ. ‘ಅಕ್ಕ, ತಗೊಳಿ ಅಕ್ಕ, ನಾನು ನಿಮ್ ತಮ್ಮ ಅಂದ್ಕೊಂಡು ಒಂದು ವ್ಯಾಪಾರ ಮಾಡಿ ಅಕ್ಕ. ಬೋಣಿ ಮಾಡಿ ಅಕ್ಕ’ ಎಂದೆ. ಆ ನಿನ್ನ ಮಾತು ನನ್ನ ಕಳೆದ ತಮ್ಮನನ್ನು ನೆನಪಿಸಿತು. ಮತ್ತೆ ಮನಸ್ಸಿಗೆ ಏನೋ ತಳಮಳ. ಆ ತಳಮಳದಲ್ಲಿದ್ದ ಒಂದು ಘಳಿಗೆಯಲ್ಲಿ ನನ್ನ ಮನದಲ್ಲೊಂದು ಆಲೋಚನೆ ಸುಳಿಯಿತು. ಆ ಹುಡುಗ ನಾನು ನಿಮ್ ತಮ್ಮ ಅಂದ್ಕೊಳ್ಳಿ ಅಂದ್ನಲ್ಲ. ನನ್ನ ತಮ್ಮನೂ ಈಗ ಹೀಗೆಯೇ ಯಾರದ್ದೋ ಬಳಿ ಗೋಗರೆಯುತ್ತ ಬದುಕುತ್ತಿರಬಹುದೇ? ಅವನಿಗೂ ಯಾರಾದರೂ ಸಹಾಯ ಮಾಡಬೇಕಲ್ಲವೇ? ಒಂದು ವೇಳೆ ನಾನು ಈ ಪುಟ್ಟ ಹುಡುಗನ ಕಾಳಜಿ ಮಾಡಿದರೆ, ನನ್ನ ತಮ್ಮನಿಗೂ ಯಾರೋ ಒಬ್ಬ ಅಕ್ಕನೋ ಅಣ್ಣನೋ ಸಹಾಯ ಮಾಡಬಹುದಲ್ಲವೇ? ಅನ್ನಿಸಿತು. ಗೆಳತಿಯೊಬ್ಬಳ ಬಳಿ ಹೇಳಿದೆ. ಹುಚ್ಚು ನಿನಗೆ ಅಂದಳು. ನಿಜ ನನ್ನದು ಹುಚ್ಚುತನವೇ ಆಗಿತ್ತು. ಆದರೂ ಅದರಲ್ಲೊಂದು ನೆಮ್ಮದಿ ಕಂಡಿತು ನನಗೆ. ಮತ್ತೆ ನೀನಿರುವ ಬಸ್ ನಿಲ್ದಾಣದ ಕಡೆ ಹೋದೆ. ಒಂದು ವಾರ ಸುಮ್ಮನೆ ನಿನ್ನ ದಿನಚರಿ ನೋಡಿ ವಾಪಸ್ ಬರುತ್ತಿದ್ದೆ. ಕೊನೆಗೊಂದು ದಿನ ನಿರ್ಧರಿಸಿದೆ. ಜೊತೆಯಿದ್ದಿದ್ದರೆ ನನ್ನ ತಮ್ಮನಿಗೂ ನಿನ್ನಷ್ಟೇ ವಯಸ್ಸಾಗಿರುತ್ತಿತ್ತು. ಹಾಗಾಗಿ ನಿನ್ನನ್ನು ನನ್ನ ಪುಟ್ಟ ತಮ್ಮನಂತೆ ಒಪ್ಪಿಕೊಳ್ಳಲು ತುಂಬ ಕಷ್ಟವೇನೂ ಆಗಲಿಲ್ಲ. ನಿನ್ನಲ್ಲಿ ನನ್ನ ಆ ಮುದ್ದು ತಮ್ಮನನ್ನು ಕಂಡೆ. ನೀನು ಕೂಡ ನನ್ನನ್ನು ಅಷ್ಟೇ ಪ್ರೀತಿಯಿಂದ ನೋಡಿಕೊಂಡೆ. ಇಂದು ಅದೆಷ್ಟು ಒದ್ದಾಟ ಮಾಡಿ ನನ್ನನ್ನು ಮತ್ತೆ ಬದುಕಿಸಿಕೊಂಡೆ ನೀನು. ತುಂಬ ಖುಷಿ ಆಯ್ತು. ಅದೇನೋ ಹುಚ್ಚು ಆಲೋಚನೆ ಹಾಗೂ ನಿರ್ಧಾರದಿಂದ ನಿನ್ನ ಜವಾಬ್ದಾರಿ ವಹಿಸಿಕೊಂಡೆ. ಆದರೀಗ ಆ ನಿರ್ಧಾರಕ್ಕೆ ಸಾರ್ಥಕತೆಯನ್ನ ನೀ ಕೊಟ್ಟೆ. ನನ್ನ ಆ ರಾಜಕುಮಾರ ಹೇಗಿದ್ದಾನೋ, ಎಲ್ಲಿದ್ದಾನೋ ಗೊತ್ತಿಲ್ಲ. ಅವನೇ ನೀನಾಗಿದ್ದರೂ ಇರಬಹುದು” ಎಂದು ನಕ್ಕಳು.
ಅಕ್ಕನ ಈ ಮಾತುಗಳನ್ನೆಲ್ಲ ಕೇಳಿ ಭಾವುಕನಾಗಿದ್ದೆ, ಆ ಭಾವುಕತೆ ನನ್ನೆಲ್ಲ ಮಾತುಗಳನ್ನು ವಶೀಕರಣಗೊಳಿಸಿ ಹೊರಬರದಂತೆ ತಡೆದು ಹಿಡಿದಂತಿತ್ತು ನನಗೆ. ಬದುಕು ಎಷ್ಟು ವಿಚಿತ್ರ ಅನಿಸುತ್ತಿತ್ತು. “ಮಾಮರವೆಲ್ಲೋ? ಕೋಗಿಲೆಯೆಲ್ಲೋ? ಏನೀ ಸ್ನೇಹ, ಸಂಬಂಧ? ಎಲ್ಲಿಯದೋ ಈ ಅನುಬಂಧ” ಎಂಬ ಸಾಲುಗಳು ಅಕ್ಷರಶಃ ನನ್ನ ಬದುಕಲ್ಲಿ ನಿಜವಾಗಿದ್ದವು. ಎಲ್ಲಿ ಹುಟ್ಟಿದೆ, ಅಪ್ಪ ಅಮ್ಮ ಯಾರು ಅಂತಲೂ ಗೊತ್ತಿರದ ನನ್ನ ಬದುಕಿನ ಕಥೆಯನ್ನ ಕೂಡ ಇಷ್ಟೊಂದು ಸುಂದರವಾಗಿ ಬರೆದಿದ್ದಾನಲ್ಲ ಆ ಕಥೆಗಾರ ಅನ್ನಿಸಿತು. ಮನಸ್ಸಿನಲ್ಲೇ ಅವನಿಗೊಂದು ಧನ್ಯವಾದ ಹೇಳಿದೆ. ಅಕ್ಕನ ಬಳಿ ಏನೇನೋ ಹೇಳಬೇಕೆಂದುಕೊಂಡೆ. ಮತ್ತೆ ಮಾತುಗಳು ಅಡಗಿ ಕುಳಿತವು. ಅಕ್ಕನ ಭುಜದ ಮೇಲೆ ತಲೆ ಇಟ್ಟು ಕುಳಿತು ಕೇವಲ ಇಷ್ಟನ್ನೇ ಪಿಸುಗುಟ್ಟಿದೆ “ಅಕ್ಕಾ, ಆ ನಿನ್ನ ಕಳೆದುಹೋದ ಪುಟ್ಟ ರಾಜಕುಮಾರ ತುಂಬಾ ಚೆನ್ನಾಗಿರ್ತಾನೆ”.