ಕಥೆ

ಪಾರಿ ಭಾಗ-೧೧

ಹಿಂದಿನ ಭಾಗ: ಪಾರಿ ಭಾಗ-೧0

  ಮಹದೇವಸ್ವಾಮಿ ಮದುವೆಯಾದ ಹುಡುಗಿಗೆ ಮೂರ್ಛೆ ರೋಗ ಇರುವ ವಿಚಾರ ಮದುವೆಯಾದಾಗಲೇ ಗೊತ್ತಾಗಿತ್ತು. ಜೊತೆಗೆ ಮೈಮೇಲೆ ಅಲ್ಲಲ್ಲಿ ಚಿಕ್ಕದಾಗಿ ಹರಡಿಕೊಂಡಿರುವ  ಸೋರಿಯಾಸಿಸ್ ಅನ್ನುವ ಚರ್ಮದ ಕಾಯಿಲೆ ಬೇರೆ ಇತ್ತು..ಇತ್ತಿಚೆಗೆ ಮಹದೇವಸ್ವಾಮಿಗೆ ಸಾಂಸಾರಿಕ ಜೀವನವೇ ಸಾಕಾಗಿ ಹೋಗಿತ್ತು.ಎರಡು ಗಂಡು ಮಕ್ಕಳು ಹುಟ್ಟಿದ್ದರೂ ಒಂದು ಮಗುವಿಗೆ ಮೂರ್ಛೆ ರೋಗ ಬಳುವಳಿಯಾಗಿ ಬಂದಿತ್ತು‌..ತಾನು ಪಾರಿಗೆ ಮಾಡಿದ ಅನ್ಯಾಯಕ್ಕೆ ಹೀಗಾಗಿದ್ದೇನೋ ಎಂದು ಒಂದೊಂದು ಬಾರಿ ಯೋಚಿಸುತ್ತಿದ್ದನಾದರೂ ತಪ್ಪು ಒಪ್ಪಿಕೊಳ್ಳುವ ಮನಸ್ಸು ಅವನಿಗಿರಲಿಲ್ಲ..

ಅದೊಂದು ದಿನ ಪಾರಿ ಮಗಳ ಹುಟ್ಟುಹಬ್ಬಕ್ಕೆಂದು ಬಟ್ಟೆ ತರಲು ಹೋದಾಗ ಅಂಗಡಿಯ ಹತ್ತಿರ  “ಪಾರೀ..” ಎಂಬ ಧ್ವನಿ ಕೇಳಿ ಬೆಚ್ಚಿ ಹಾಗೆಯೇ ನಿಂತುಬಿಟ್ಟಳು..ಯಲ್ಲಪ್ಪ ತೀರಿಕೊಂಡ ಮೇಲೆ ಹಾಗೆ ಕರೆಯುವವರು ಬೆಂಗಳೂರಿನಲ್ಲಿ ಯಾರೂ  ಇರಲಿಲ್ಲ.ಕರೆದವರು ಯಾರು ಎಂದು ತಿರುಗಿ ನೋಡಿದರೆ ಅದು ಪರಿಚಿತ ಮುಖ..!!! ಪಾರಿ ಹೌಹಾರಿದಳು..ಮಲ್ಲಪ್ಪಗೌಡರ ಮನೆ ಆಳು ನಿಂಗ..! ಅವನೂ ಒಂಥರ ಆಘಾತದಲ್ಲಿಯೇ ಇದ್ದ. ಪಾರಿ ಸತ್ತಿದ್ದಾಳೆ ಎಂದು ಅವನೂ ತಿಳಿದಿದ್ದ ಅವನಿಗೆ ಇದ್ದಕ್ಕಿದ್ದಂತೆ ಪಾರಿಯನ್ನು ನೋಡಿ ಅವನಿಗೆ ಆಶ್ಚರ್ಯವಾಗಿತ್ತು.ತುಸು ಚಡಪಡಿಸಿದಳು ಪಾರಿ..ನಿಂಗ ವಯಸ್ಸಿನಲ್ಲಿ ಅವಳಿಗಿಂತ ಎಷ್ಟೋ ದೊಡ್ಡವನಾದರೂ ಯಾಕೋ ಆ ಪಾರಿ ಎನ್ನುವ ಹೆಸರು ಅವನ ಬಾಯಿಯಿಂದ ಬಂದದ್ದು ಸರಿ ಎನಿಸಲಿಲ್ಲ ಪಾರಿಗೆ..ಚಂದನಾ ಅಲ್ಲಿಯೇ ಇದ್ದಿದ್ದರಿಂದ ಪಾರಿಗೆ ಮಾತೇ ಹೊರಡಲಿಲ್ಲ..ಸುಧಾರಿಸಿಕೊಂಡು ಅವನಿಗುತ್ತರಿಸದೇ ಮುನ್ನಡೆದಳು.. “ಪಾರೀ..ನಿಲ್ಲವ್ವಾ..ಯಾಕ ಹಂಗ ಓಡಾಕತ್ತಿ…?ನಾ ಏನ ಗೌಡನಷ್ಟ ಕೆಟ್ಟವನಲ್ಲವ್ವಾ..” ಅಂದ ಮಾತುಗಳು ಅವಳನ್ನು ತಡೆದು ನಿಲ್ಲಿಸಿದವು..ಅವಳು ಮಾತನಾಡದಿದ್ದರೂ ನಿಂಗನೇ ಮಾತು ಮುಂದುವರಿಸಿದ.”ಒಂದ್ ನಮೂನಿ ಎದ್ಯಾಗ ನೋವು ಬರ್ತತಿ ಈಗೀಗ..ಅದ್ಕ ಮಗಾ ದವಾಖಾನಿಗಂತ ಕರ್ಕಂಡು ಬಂದಿದ್ದ‌.ಅವಾ ಬೆಂಗ್ಳೂರ್ ಸೇರಿ ಯೋಳು ವರ್ಷ ಆತು..ಗುಳಿಗಿ ತಗೋಳನಂತ ಅಕಾ…ಅಲ್ಲೆ ಅಂಗಡಿ ಮುಂದ ನಿಂತಾನ್ ನೋಡು..ಅದರ್ಲಿ ಬಿಡವ್ವಾ..ನೀ ಸತ್ತು ಹೋಗಿ ಅಂತ ಎಲ್ಲಾರೂ ಊರಾಗ ಮಾತಾಡಿದ್ರು..ನಂಗ ಈಗ ನಿನ್ ನೋಡಿ ತೆಲಿ ಧಿಮ್ ಅಂದಂಗಾತು..ಆದ್ರ ಪಾರಿ ಅಂದಾಗ ಗಕ್ಕನ ನಿಂತೆಲ್ಲ ಅದಕ ನಿನ್ನ ಮಾತಾಡಾಸಾಕ ಧೈರ್ಯ ಬಂತು..ನಿಮ್ಮವ್ವಂತೂ ಭಾಳ ಸಣ್ಣ ಆಗ್ಯಾಳ..ನಿಮ್ಮಪ್ಪಗೂ ದುಡಿಯಾಕ ಕಸುವು ಉಳ್ದಿಲ್ಲ..ಹಾಸಿಗಿ ಹಿಡದಾನ..ಇದ್ದಾಕಿ ಒಬ್ಬಾಕಿ ಮಗ್ಳು..ನಿನ್ ಬಾಳೆನೂ ಹಂಗ ಆತು..” ಅಂದಾಗ ತಡೆಹಿಡಿದಿದ್ದ ಅವಳ ಕಣ್ಣೀರು ಕೆನ್ನೆಯವರೆಗೂ ಹರಿಯಿತು.”ಅಳಬ್ಯಾಡವ್ವಾ ಪಾರೀ..ಹೆಂಗ ಒಟ್ಟ ದೇವ್ರು ಬದುಕ್ಸ್ಯಾನ..ಈಕೀ ನಿನ್ ಮಗಳೇನು?” ಎಂದು ಚಂದನಾಳ ತಲೆ ಸವರಿದ.ಪಾರಿ ಹೂಂ ಗುಟ್ಟಿದಳು.”ಹೆಂಗ ಒಟ್ನಾಗ ಚಂದಂಗ ಇರವ್ವಾ..ಮಾದೇವಸ್ವಾಮಿ‌ ಮಾಡಿರ ಕರ್ಮ ಉಣ್ಣಾಕತ್ತಾನ..”ಎಂದು ಇನ್ನೂ ಮಾತಾಡುತ್ತಿರುವಾಗಲೇ ಮಹೇಶನ ಕಾರು ಎದುರಿಗೆ ಬಂದು ನಿಂತಿತು. ಪಾರಿ ಮಹೇಶನಿಗೆ ಕರೆ ಮಾಡಿ ಮಗಳಿಗೆ ಬಟ್ಟೆ ಆಯ್ಕೆ ಮಾಡಲು ಬರಲು ಹೇಳಿದ್ದರಿಂದ ಕೆಲಸದಲ್ಲಿ ಒಂದರ್ಧ ಗಂಟೆ ಬಿಡುವು ಮಾಡಿಕೊಂಡು ಬಂದಿದ್ದ..ಪಾರಿಗೂ ನಿಂಗನ ಜೊತೆ ಮಾತನಾಡುವುದು ಇಷ್ಟವಿರಲಿಲ್ಲ. ಕಾರು ಬಂದ ತಕ್ಷಣ “ಬರ್ತಿನಿ ನಿಂಗಣ್ಣ..ಅವ್ರು ಬಂದ್ರು” ಅನ್ನುತ್ತ ಮಗಳನ್ನು ಕಾರು ಹತ್ತಿಸಿ ತಾನೂ ಕಾರು ಹತ್ತಿ ಕುಳಿತಳು.ಮಹೇಶನಿಗೆ ಅದ್ಯಾರು ಎಂದು ತಿಳಿಯಲಿಲ್ಲ. ಆಮೇಲೆ ಕೇಳಿದರಾಯಿತೆಂದು ಕಾರು ಓಡಿಸಿದ‌. ನಿಂಗ ಕಾರಿನಲ್ಲಿ ಹೋದ ಪಾರಿಯನ್ನು ಹಳೆಯ ಪಾರಿಗೆ ಹೋಲಿಸಿ ಮೂಗಿನ ಮೇಲೆ ಬೆರಳಿಟ್ಟುಕೊಂಡ..

 ಮಗಳ ಹುಟ್ಟುಹಬ್ಬ ಇನ್ನೂ ನಾಲ್ಕು ದಿನ ಮುಂದಿದ್ದಿದ್ದರಿಂದ “ರೀ..ಬಟ್ಟೆ ನಾಳೆ ತಗೋಂಡ್ರಾಯ್ತು..ಮನಿಗೆ ಹೋಗುನು ನಡೀರೀ..” ಅಂದ ಪಾರಿಯ ಧ್ವನಿ ನಡುಗುತ್ತಿತ್ತು. ಮಹೇಶನಿಗೆ ತಳಬುಡ ಅರ್ಥ ಆಗಲಿಲ್ಲ. ಪಾರಿಯ ಕಣ್ಣು ಒದ್ದೆಯಾಗಿರುವುದು ಯಾಕೆಂದು ತಿಳಿಯದೇ ಮನೆಗೆ ಹೋಗಿ ವಿಚಾರಿಸಿದರಾಯಿತೆಂದುಕೊಂಡ..ಚಂದನಾ ಈಗ ಮಾತಿಗೆ ಶುರು ಮಾಡಿಕೊಂಡಳು. ಅವಳಿಗೆ ತನ್ನ ತಾತ-ಅಜ್ಜಿ ಬದುಕಿರುವ ಸತ್ಯ ಗೊತ್ತಾಗಿತ್ತು.”ನೀವಿಬ್ರು ನನ್ ಹತ್ರ ಸುಳ್ಳು ಹೇಳಿದ್ರಿ…ಅಜ್ಜಿ-ತಾತಾ ಸತ್ತೋಗಿದಾರೆ ಅಂತ…ಎಂದು ಸಿಟ್ಟಿನಿಂದಲೇ ಮಹೇಶನ ಕಡೆ ತಿರುಗಿ “ಅಮ್ಮನ ಊರಿನವ್ರು ಯಾರೋ ಸಿಕ್ಕಿದ್ರು ಅಪ್ಪಾ..ಅವ್ರು ಅದೇನೇನೋ ಮಾತಾಡಿದ್ರು..ಅದೆಲ್ಲಾ ಬಿಡು ಅಜ್ಜಿ-ತಾತಾನಿಗೆ ಹುಷಾರಿಲ್ಲ ಅಂತಿದ್ರು..ಅದಿಕ್ಕೆ ಅಮ್ಮ ಅಳ್ತಿರೋದು..” ಎಂದು ಇನ್ನೂ ಮಾತು ಮುಂದುವರೆಸುತ್ತಿದ್ದ ಚಂದನಾಳಿಗೆ ಮಹೇಶ ಸುಮ್ಮನಿರುವಂತೆ ಸನ್ನೆ ಮಾಡಿದ..

 ಮನೆಗೆ ಬಂದಾದ ಮೇಲೆ ಸಮಾಧಾನವಾಗಿ ವಿಚಾರಿಸಿದಾಗ ವಿಷಯ ಗೊತ್ತಾಗಿತ್ತು..”ರೀ..ಇನ್ನ ನನ್ಕಡಿಂದ ಅಪ್ಪಯ್ಯ,ಅವ್ಚನ್ನ ನೋಡದಂಗ ಇರಾಕಾಗುದಿಲ್ಲ..ಯಾರೇನರ ಅನ್ಲಿ..ನಾ ಹೋಗ್ಬರ್ತನಿ..ಇಷ್ಟು ವರ್ಷ ನಾ ಒಳಗ ಎಷ್ಟ ನೋವು ತಿಂದನಿ ಅಂತ ನಿಮಗೂ ಗೊತ್ತದ..ನಾಳೆನ ಹೋಗುನು..ಈ ಜಂಜಾಟ ಮುಗುದ ಹೋಗ್ಲಿ..ನಂಗೂ ಸಾಕಾಗೇತಿ..ನಾ ಸತ್ತಿಲ್ಲ ಅಂತ ಗೊತ್ತಾಗ್ಲಿ..ನೀವು ಬರ್ತಿರಲ್ಲಾ..?” ಅಳುತ್ತಲೇ ಕೇಳಿದ ಪಾರಿಗೆ ಹೂಂ ಎಂದು ತಲೆ ಅಲ್ಲಾಡಿಸಿದ ಮಹೇಶ..

 ಚಂದನಾ ಅಂತೂ ನೆಲದ ಮೇಲೆ ನಿಲ್ಲದವಳಾಗಿದ್ದಳು.ಅಜ್ಜಿ-ತಾತನ ಮನೆಗೆ ಹೋಗುವ ಆ ಪುಟ್ಟ ಹುಡುಗಿಯಲ್ಲಿನ ಖುಷಿ ಯಾಕೋ ಪಾರಿಯ ಮುಖದಲ್ಲಿರಲಿಲ್ಲ.ಅವಳಿಗೆ ನೂರು ಗೊಂದಲಗಳಿರುವುದು ಮಹೇಶನಿಗೆ ತಿಳಿದಿತ್ತು.ಬೆಳಿಗ್ಗೆ ನಾಲ್ಕು ಗಂಟೆಗೆ ಕಾರು ಪಾರಿಯ ಊರಿನತ್ತ ಮುಖ ಮಾಡಿ ಚಲಿಸತೊಡಗಿತು..ಚಂದನಾ ನಿದ್ರಾ ದೇವಿಯ ಮಡಿಲಲ್ಲಿ ಮುಳುಗಿ ಹೋಗಿದ್ದರೆ ಪಾರಿ ಹಳೆಯ ನೆನಪುಗಳಲ್ಲಿ ಮುಳುಗಿ ಹೋಗಿದ್ದಳು..ಮಹೇಶ ಎಫ್.ಎಂ ನಲ್ಲಿ ತೇಲಿ ಬರುತ್ತಿದ್ದ ಸಿನಿಮಾ ಗೀತೆಯನ್ನು ಗುನುಗುತ್ತಿದ್ದರೂ ಅವನೊಳಗೂ ಅತ್ತೆ ಮಾವನನ್ನು ಹೇಗೆ ಎದುರುಗೊಳ್ಳುವುದು? ಎನ್ನುವ ಪ್ರಶ್ನೆಯಿತ್ತು..

 ರಾತ್ರಿ ಎಂಟುಗಂಟೆಯ ಹೊತ್ತಿಗೆ ಧೂಳೆಬ್ಬಿಸುತ್ತಾ ಕಲ್ಲಳ್ಳಿಯ ದಾರಿಯಲ್ಲಿ ಸಾಗಿದ ಕಾರು ಯಾರದಿರಬಹುದು ಎನ್ನುವ ಪ್ರಶ್ನೆ ಎಲ್ಲರಿಗೂ..ಮಲ್ಲಪ್ಪಗೌಡರ ಮನೆಗೆ ಮಾತ್ರ ಆವಾಗೊಂದು ಇವಾಗೊಂದು ಕಾರುಗಳು ಬರುತ್ತಿದ್ದವು‌.ಕಾರು ದುರುಗಪ್ಪನ ಮನೆ ಕಡೆ ಚಲಿಸುವುದನ್ನು ಕಂಡ ಒಂದೆರಡು ಜನ ಹಿಂದೆಯೇ ಬಂದುಬಿಟ್ಟರು‌.ಪಾರಿಯ ಕಾಲುಗಳು ನಡುಗತೊಡಗಿದವು.ಕೆಮ್ಮುತ್ತಲೇ ಅಡುಗೆ ಮಾಡುತ್ತಿದ್ದ ಮಲ್ಲವ್ವ ಕಾರಿನ ಶಬ್ದಕ್ಕೆ ಚಮಚ ಹಿಡಿದುಕೊಂಡೇ ಹೊರಬಂದಳು.ಮಂದ ಬೆಳಕಿನಲ್ಲಿ ಕಾರಿನಿಂದ ಇಳಿದ ಆ ಮೂವರ ಮುಖ ಅಷ್ಟಾಗಿ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ.ಪಾರಿ ಮನೆಯೊಳಗೆ ಅಡಿಯಿಟ್ಟ ಕ್ಷಣ ಮಲ್ಲವ್ವ ಒಂದು ಕ್ಷಣ ಸ್ತಬ್ಧಳಾದಳು..!! ಪಾ..ಪಾ..ಪಾರಿ…!!!! ಅಂದವಳಿಗೆ ಮುಂದೆ ಮಾತೇ ಹೊರಡಲಿಲ್ಲ..ಕಲ್ಲಿನಂತೆ ನಿಂತುಬಿಟ್ಟಳು.”ಏಯ್..ಎಲ್ಲಿ ಹೋದಿ..ಅನ್ನ ತಳ ಹಿಡ್ದು ವಾಸನಿ ಬರಾಕತೈತಿ..”ಎನ್ನುತ್ತ ಹೊರಬಂದ ದುರುಗಪ್ಪನಿಗೂ ಮಾತುಗಳೇ ನಿಂತು ಹೋದವು..

ಒಲೆಯ ಮೇಲಿನ ಅನ್ನ ಹೊತ್ತಿ ಕರಕಲಾಗಿತ್ತು. ಹಾರ ಹಾಕಿದ್ದ ಪಾರಿಯ ಫೋಟೋದಲ್ಲಿ ದೀಪದ ಬೆಳಕಿನಲ್ಲಿ ಪಾರಿಯ ಕಣ್ಣೀರಿನ ಪ್ರತಿಬಿಂಬ ಕಂಡಿತ್ತು…ಸತ್ತೇ ಹೋದಳೆಂದು ತಿಳಿದಿದ್ದ ಪಾರಿಯನ್ನು ನೋಡಲು ಇಡೀ ಊರ ಜನರೇ ದುರುಗಪ್ಪನ ಮನೆ ಮುಂದೆ ಸೇರಿದ್ದರು.ಸುದ್ದಿ ಮಲ್ಲಪ್ಪಗೌಡರ ಕಿವಿಗೂ ಅದಾಗಲೇ ಮುಟ್ಟಿಬಿಟ್ಟಿತ್ತು‌.ಸುಬ್ಬಣ್ಣನವರಿಗೆ ಪಾರಿಯನ್ನು ತಾನೇ ಕಾಪಾಡಿದ್ದೆಂದು ಗೌಡರೆದುರಿಗೆ ಪಾರಿ ಎಲ್ಲಿ ಬಾಯಿಬಿಡುತ್ತಾಳೋ ಎಂದು ದುಗುಡ ಶುರುವಾಗಿತ್ತು‌..ಮಲ್ಲಪ್ಪಗೌಡರನ್ನು ಎದುರು ಹಾಕಿಕೊಂಡರೆ ಕಷ್ಟ ಎಂದು ಅವರಿಗೆ ತಿಳಿದಿತ್ತು..ಅದಕ್ಕೆಂದೇ ಪಾರಿ ಬದುಕಿರುವ ಸತ್ಯ ಅವರಿಗೆ ಗೊತ್ತಿದ್ದರೂ ಈವರೆಗೂ ಬಾಯಿಬಿಟ್ಟಿರಲಿಲ್ಲ..

ಮಹದೇವಸ್ವಾಮಿಗೂ ವಿಷಯ ಮುಟ್ಟಿದ್ದರೂ ಏನೂ ಗೊತ್ತಿಲ್ಲದವನ ಹಾಗೆ ಉಳಿದುಕೊಂಡ.ಒಳಗೊಳಗೆ ನಾನವಳಿಗೆ ಮೋಸ ಮಾಡಬಾರದಿತ್ತು ಅನ್ನಿಸತೊಡಗಿತ್ತು…ಸಾವಿತ್ರಮ್ಮನವರಿಗೆ ಪಕ್ಕದ ಮನೆಯ ತುಂಗಮ್ಮ ಆಗಲೇ ವರದಿ ಒಪ್ಪಿಸಿದ್ದಳು. ಸಾವಿತ್ರಮ್ಮನವರಿಗೆ ಯಾಕೋ ಕಣ್ಣುಗಳು ಒದ್ದೆಯಾದವು. ಮಗನ ಕಡೆಗೊಮ್ಮೆ ನೋಡಿದಾಗ ತೀರಾ ಸೊರಗಿದ ಮಗನ ಈ ಸ್ಥಿತಿಗೆ ತಾನು ಕಾರಣಳಾದೆನಲ್ಲ ಎಂದು ಸಂಕಟವಾಗುತ್ತಿತ್ತು. ಶಾಂತಸ್ವಾಮಿಯವರ ವಿಪರೀತ ಕೆಮ್ಮಿಗೋ ,ಅಥವಾ ಪಾರಿ ಬದುಕಿದ್ದ ಸುದ್ದಿ ತಿಳಿದೋ ರಾತ್ರಿಯಲ್ಲ ಹೊರಳಾಡಿದ ಮಹದೇವಸ್ವಾಮಿಯ ಕಣ್ಣಿಗಳಿಗೆ ನಿದ್ದೆ ದೂರವೇ ಉಳಿದುಬಿಟ್ಟಿತು. ಹೆಂಡತಿ ಮತ್ತು ಮಕ್ಕಳು ಮಾತ್ರ ಗಾಢ ನಿದ್ದೆಯಲ್ಲಿದ್ದರು..

 ದುರುಗಪ್ಪ,ಮಲ್ಲವ್ವ ರಾತ್ರಿಯಲ್ಲ ನಿದ್ದೆ ಮಾಡಲಿಲ್ಲ..ಮಗಳ ಸುಂದರ ಕುಟುಂಬವನ್ನು ನೋಡಿ ಸಂತೋಷದಿಂದ ಕಣ್ತುಂಬಿ ಬಂದಿದ್ದವು‌.ಪಾರಿಯಂತೂ ಪುಟ್ಟ ಮಗುವಿನ ಹಾಗೆ ತಾಯಿಯ ತೊಡೆ ಮೇಲೆ ಮಲಗಿ ಅತ್ತುಬಿಟ್ಟಿದ್ದಳು..ಮರುದಿನ ದುರುಗಪ್ಪನ ಮನೆ ಮುಂದೆ ಸಂಚಾರ ತುಸು ಹೆಚ್ಚೇ ಆಯಿತು..ಪಾರಿಯನ್ನು ಒಂದು ವಿಚಿತ್ರ ಪ್ರಾಣಿಯಂತೆ ನೋಡುವುದು ಅವಳಿಗೆ ಹಿಂಸೆಯಾಗಿತ್ತು.ಆದಷ್ಟು ಬೇಗ ಹೊರಟುಬಿಡಬೇಕೆಂದು ನಿರ್ಧರಿಸಿದ್ದಳು.ಮಹೇಶನ ಸಲಹೆಯಂತೆ ಮಲ್ಲವ್ವ,ದುರುಗಪ್ಪನನ್ನೂ ಬೆಂಗಳೂರಿಗೆ ಕರೆದುಕೊಂಡು ಹೋಗುವುದೆಂದು ತೀರ್ಮಾನಿಸಿದ್ದಳಾದರೂ ಅವರಿಬ್ಬರು ಒಪ್ಪದಿರುವ ಕಾರಣ ಮಹೇಶನೇ ಮಾತನಾಡಿ ಅವರಿಬ್ಬರನ್ನು ಒಪ್ಪಿಸುವುದರಲ್ಲಿ ಸಾಕು ಸಾಕಾಯಿತು. ಆದರೆ ಪಕ್ಕದೂರಿನಲ್ಲಿ ಜಾತ್ರೆ ನಡೆಯುತ್ತಿದ್ದರಿಂದ ದೇವರ ದರ್ಶನ ಮುಗಿಸಿಕೊಂಡು ತೇರು ಸಾಗಿದ ಮೇಲೆ ಹೋಗುವುದೆಂದು ತೀರ್ಮಾನವಾಯಿತು‌‌‌. ತೇರಿಗೆ ಬೆನ್ನು ಹಾಕಿ ಹೋದರೆ ದೇವರು ಮುನಿಸಿಕೊಳ್ಳುತ್ತಾನೆನ್ನುವುದು ಹಳ್ಳಿಯವರ ನಂಬಿಕೆಯಾಗಿತ್ತು.ಪಾರಿ ಮಾತ್ರ ಜಾತ್ರೆಗೆ ಬರಲು ಸುತಾರಾಂ ಒಪ್ಪಲಿಲ್ಲ.ಅದೇ ಜಾತ್ರೆಯಲ್ಲಿ ಮೊದಲ ಬಾರಿಗೆ ತಾನು ಮಹದೇವಸ್ವಾಮಿಗೆ ಮರುಳಾಗಿದ್ದ ನೆನಪು ತೀರಾ ವಿಪರೀತವಾಗಿ ಕಾಡಿತ್ತು..ಮರುದಿನ ಅಳಿಯ-ಮೊಮ್ಮಗಳನ್ನು ಕರೆದುಕೊಂಡು ಜಾತ್ರೆಗೆ ಹೋಗಿದ್ದ ದುರುಗಪ್ಪ..ಇತ್ತ ಮಲ್ಲಪ್ಪಗೌಡರು ಪಾರಿಯನ್ನು ಕರೆದುಕೊಂಡು ಬರಲು ಇನ್ನೊಬ್ಬ ಆಳು ಮರಿಯಪ್ಪನನ್ನು ಕಳಿಸಿದ್ದರು.ನಿಂಗ ಇನ್ನೂ ಬೆಂಗಳೂರಿನಿಂದ ಬಂದಿರಲಿಲ್ಲ…

ಮುಂದುವರಿಯುವುದು..

Facebook ಕಾಮೆಂಟ್ಸ್

ಲೇಖಕರ ಕುರಿತು

Mamatha Channappa

ಬದುಕೆಂಬ ರೈಲಿನಲ್ಲಿ ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು.. ಕಾಕತಾಳೀಯವೆಂಬಂತೆ ರೈಲ್ವೆ ಇಲಾಖೆಯಲ್ಲೆ ಕೆಲಸಮಾಡುತ್ತ ಬದುಕು ಎಸೆದ ಪಂಥಗಳನ್ನು ಎದುರಿಸುತ್ತ ಸಾಗಿದ್ದೇನೆ. ಆ ಹಾದಿಯಲ್ಲಿ ಜೊತೆಗಾರರಾಗಿ ಸಾಥ್ ಕೊಟ್ಟ ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ...

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!