ಸಿನಿಮಾ - ಕ್ರೀಡೆ

ಸ್ಟೋಕರ್ (೨೦೧೩) – ಒಂದು ವಿಚಿತ್ರ ಕುಟುಂಬದ ವಿಲಕ್ಷಣ ಕಥೆ

೨೦೧೩ ರಲ್ಲಿ ತೆರೆ ಕಂಡಂತಹ ಈ ಬ್ರಿಟಿಶ್ ಅಮೆರಿಕನ್ ಚಿತ್ರವನ್ನು ಹಾಲಿವುಡ್ಡಿನ ಖ್ಯಾತ ನಿರ್ದೇಶಕರಾದ  ಸ್ಕಾಟ್ ಸಹೋದರರು(ರಿಡ್ಲಿ ಮತ್ತು ಟೋನಿ) ನಿರ್ಮಿಸಿದ್ದಾರೆ. ಈ ಚಿತ್ರದೊಂದಿಗೆ ಈಗಾಗಲೇ ಸೌತ್ ಕೊರಿಯನ್ ಚಿತ್ರರಂಗದಲ್ಲಿ ತನ್ನ ಛಾಪು ಮೂಡಿಸಿದ್ದ ಪಾರ್ಕ್ ಚಾನ್ ವೂಕ್ ತನ್ನ ಹಾಲಿವುಡ್ ಪ್ರವೇಶ ಮಾಡಿದರು.ಕೆಲವೊಂದು ಹಾಲಿವುಡ್ ಚಿತ್ರಗಳಲ್ಲಿ ಹಾಗೂ ಪ್ರಿಸನ್ ಬ್ರೇಕ್ ಎಂಬ ಟಿವಿ ಸರಣಿಯಲ್ಲಿ ನಟಿಸಿ  ಹೆಸರುವಾಸಿ ಆಗಿದ್ದ ವೆಂತ್ವರ್ಥ್ ಮಿಲ್ಲರ್ ಅವರ ಸ್ಕ್ರೀನ್ ಪ್ಲೇ ಕೂಡ ಈ ಚಿತ್ರಕ್ಕಿದೆ.

ಶುರುವಿನಲ್ಲಿ ಬರುವ ಟೈಟಲ್ ಕಾರ್ಡೆ ಹೊಸತನದಿಂದ ಕೂಡಿದ್ದು ನಮ್ಮ ಗಮನ ಸೆಳೆದು ಬಿಡುತ್ತದೆ.ಸೋಜಿಗದ ವಿಷಯವೇನೆಂದರೆ ಇದೊಂದು ಕೌಟುಂಬಿಕ ಚಿತ್ರವಾದರೂ ಕೂಡ ಇದನ್ನು ಕುಟುಂಬದೊಂದಿಗೆ ಕುಳಿತು ವೀಕ್ಷಿಸಲು ಕಷ್ಟವೇ.ಇದರಲ್ಲಿ ತ್ರಿಕೋನ ಪ್ರೇಮಕಥೆ ಇದೆ ಆದರೂ ಅದೇನು ನವಿರಾದ ಪ್ರೇಮ ಕಥೆಯೂ ಅಲ್ಲ. ಮನುಷ್ಯ ಮನಸ್ಸುಗಳ ತೋರ್ಪಡಿಸುವಿಕೆಯ ಒಳ್ಳೆಯತನದ ಹಿಂದೆ ಅಡಗಿರುವ ಕರಾಳಮುಖಗಳನ್ನು ಹೊರಸೆಳೆದು ಹಂತ ಹಂತವಾಗಿ ನಮ್ಮ ಮುಂದೆ ಬಿಚ್ಚಿಡುವುದು ನಿರ್ದೇಶಕನಾದ ಪಾರ್ಕ್ ಚಾನ್ ವೂಕ್ ಶೈಲಿ.

ರಿಚರ್ಡ್ಸ್ಟೋಕರ್ ಎಂಬವನ ಮರಣದಿಂದ ಶುರುವಾಗುವ ಕಥೆ, ರಿಚರ್ಡ್’ನ ತಮ್ಮ ಚಾರ್ಲಿಯ ಆಗಮನದೊಂದಿಗೆ ತಿರುವು ಪಡೆದು ಕೊಳ್ಳುತ್ತದೆ. ಈಚಾರ್ಲಿಯ ಬಗ್ಗೆ ಅವನ ಮನೆಯವರಿಗೆ ಹೆಚ್ಚೇನು ತಿಳಿದಿಲ್ಲ ಎಂಬುದು ಅವನ ಬಗ್ಗೆ ಅನುಮಾನ ಹಾಗೂ ನಿಗೂಢತೆ ಉಂಟು ಮಾಡುತ್ತದೆ. ಚಾರ್ಲಿ ಹಾಗು ರಿಚರ್ಡ್ನ ಪತ್ನಿ ಎವ್ಲಿನ್ಮತ್ತು ಮಗಳು ಇಂಡಿಯಾ ಈ ಮೂವರ ವರ್ತನೆಗಳು ಮುಂದಿನ ದೃಶ್ಯಗಳಲ್ಲಿ  ಹಲವಾರು ಸಂಶಯಗಳಿಗೆ ಎಡೆ  ಮಾಡಿ ಕೊಡುತ್ತಾ ಕುತೂಹಲ ಮೂಡಿಸುತ್ತದೆ.

ಕಥೆ ಮೂರು ದೃಷ್ಟಿಕೋನಗಳಲ್ಲಿ ಸಾಗುತ್ತದೆ. ಚಾರ್ಲಿಯ ಆಗಮನದಿಂದ ತನ್ನ ಪತಿಯ ಮರಣದ ದುಃಖವನ್ನು ಕೂಡ ಮರೆತು ಅವನ ಸಾಮಿಪ್ಯ ಬಯಸುತ್ತಿರುವ ಎವ್ಲಿನ್ ಎಂಬ ಬೇಜವಾಬ್ದಾರಿಯುತ ತಾಯಿ ಒಂದೆಡೆಯಾದರೆ, ಬಂದ ದಿನದಿಂದ ಇಂಡಿಯಾಳ ಹಿಂದೆ ಬಿದ್ದಿರುವ ಚಾರ್ಲಿ ಇನ್ನೊಂದೆಡೆ. ಆದರೆ ಇಂಡಿಯಾ ಎಲ್ಲವನ್ನೂ ಹಾಗು ಎಲ್ಲರನ್ನೂ ಸಂಶಯದಿಂದಲೇ ನೋಡುತ್ತಿರುವ ಅಂತರ್ಮುಖಿ ವ್ಯಕ್ತಿ. ಮೊದ ಮೊದಲಿಗೆ ಆತನನ್ನು ದೂರವಿಟ್ಟರೂ ಇಂಡಿಯಾ ನಿಧಾನವಾಗಿ ತನ್ನ ಸ್ನೇಹ ಹಸ್ತ ಆತೆನೆಡೆ ಚಾಚಲಾರಂಭಿಸುತ್ತಾಳೆ. ಆದರೆ ಇಲ್ಲಿ ಅವಳಿಗೆ ಇಷ್ಟವಾದದ್ದು ಚಾರ್ಲಿಯ ಆಕರ್ಷಕ ರೂಪವೋ ವ್ಯಕ್ತಿತ್ವವೋ ಅಲ್ಲ. ಅವಳ ಒಳಗೆ ಅಡಗಿ ಕುಳಿತಿದ್ದ ಅಥವಾ ಇದುವರೆಗೂ ಅವಳು ತನ್ನಲ್ಲೇ ಅದುಮಿ ಹಿಡಿದಿದ್ದ ಕೆಲವು ಭಾವನೆಗಳು ಅವನಲ್ಲಿ ಗೋಚರಿಸಿದ್ದೆ ಕಾರಣವಾಗುತ್ತದೆ.ಅವನೊಳಗಿನ ತಣ್ಣನೆಯ ಕ್ರೌರ್ಯ ಹಾಗೂ ತಾನೆಸಗಿದ ಕೆಲವೊಂದು ಹಿಂಸಾತ್ಮಕ ಕಾರ್ಯಗಳಿಂದ ತಮ್ಮಿಬ್ಬರ ಭಾವನಾ ತರಂಗಗಳು ಹೊಂದುತ್ತವೆಯೆಂದು ತಿಳಿಯುತ್ತಾಳೆ.

ಇಲ್ಲಿ ಚಾರ್ಲಿ ತನ್ನ ಗುರಿಗೆ ಅಡ್ಡ ಬಂದವರನ್ನು ನಿವಾರಿಸುವ ಒಂದು ದೃಶ್ಯವನ್ನು ಉಲ್ಲೇಖಿಸಲೇಬೇಕಾಗುತ್ತದೆ. ಉಪಮೆಗಳೊಂದಿಗೆ ಹೋಲಿಸಿ ಹಿಂಸಾತ್ಮಕ ದೃಶ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ದೃಶ್ಯ ಸಂಯೋಜನೆ ಹಾಗು ಹಿನ್ನಲೆ ಸಂಗೀತ ಅದಕ್ಕೆ ಪೂರಕವಾಗಿ ಬಂದು ರೋಮಾಂಚನಕಾರಿಯಾಗಿ ಮೂಡಿ ಬಂದಿದೆ.

ಚಾರ್ಲಿಯ ಕುರಿತಾದ ಎಲ್ಲ ವಿಷಯಗಳು ಇಂಡಿಯಾಗೆ ಗೊತ್ತಾದರೂ ಏನನ್ನೂ ತನ್ನ ತಾಯಿಗೆ ತಿಳಿಸುವ ಗೋಜಿಗೆ ಹೋಗುವುದಿಲ್ಲ.ಅಷ್ಟರ ಮಟ್ಟಿಗೆ ಅವನಿಂದ ಅವಳು ಪ್ರಭಾವಿತಳಾಗಿದ್ದಾಳೆ. ಅಷ್ಟೇ ಅಲ್ಲದೆ ತಾನು ಅದುಮಿ ಹಿಡಿದದ್ದ ಎಲ್ಲ ಸ್ವೇಚ್ಛಾಚಾರಗಳ ಆಸೆಯನ್ನು ಒಂದೊಂದಾಗಿ ಕಾರ್ಯ ರೂಪಕ್ಕೆ ಇಳಿಸಲು ಆರಂಭಿಸುತ್ತಾಳೆ.ಕೊನೆಗೆ ಚಾರ್ಲಿಯ ಬಗೆಗಿನ ಎಲ್ಲ ರಹಸ್ಯಗಳು ಒಂದೊಂದಾಗಿ ಬಯಲಾಗಿ ಕಥೆಯ ಕ್ಲೈಮಾಕ್ಸ್ ಅನಾವರಣಗೊಳ್ಳುತ್ತದೆ.

ಪಾರ್ಕ್ ಚನ್ ವೂಕ್ ಅವರ ಕಥೆ ಹೇಳುವ ಶೈಲಿ, ಅದಕ್ಕೆ ಪೂರಕವಾಗಿ ಕೊಡುವ ಉಪಮೆಗಳು, ದೃಶ್ಯ ಸಂಯೋಜನೆ ಎಲ್ಲವೂ ಚೆನ್ನಾಗಿ ಒಂದಕ್ಕೊಂದು ಹೊಂದಿಕೊಂಡೇ ಸಿನಿಮಾ ಮುಂದೆ ಸಾಗಿತ್ತದೆ. ಹಿನ್ನಲೆ ಸಂಗೀತ ಬೇಕಾದಲ್ಲಷ್ಟೇ ಹಿತಮಿತವಾಗಿ ಬಳಸಿದ್ದಾರೆ. ಅವರ ಉಳಿದ ಸಿನಿಮಾಗಳಂತೆ ಛಾಯಾಗ್ರಹಣ ಅತ್ಯುತ್ತಮ.ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ ಮ್ಯಾತ್ಯು ಗುಡ್ (ಚಾರ್ಲಿ), ಮಿಯಾ ವಸಿಕೊಸ್ವ( ಇಂಡಿಯಾ) ಪ್ರಾರಂಭದಿಂದ ಅಂತ್ಯದವರೆಗೆ ಸಿನಿಮಾವನ್ನು ತಮ್ಮದೇ ಹೆಗಲಲ್ಲಿ ಸಮರ್ಥವಾಗಿ ಹೊತ್ತೊಯ್ಯಿದಿದ್ದಾರೆ.

ಹೆಚ್ಚಿನ ಎಲ್ಲ ವಿಮರ್ಶಕರಿಂದ ಮೆಚ್ಚುಗೆ ಗಳಿಸಿದ ಈ ಚಿತ್ರ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಮಾತ್ರ ಯಾಕೋ ಹಿಂದೆ ಉಳಿಯಿತಾದರೂ  ಕೆಲವೊಂದು ಪ್ರಶಸ್ತಿಗಳನ್ನು ಪಡೆಯುವಲ್ಲಿ ಸಫಲವಾಗಿತ್ತು. ಕಾಲ ಹೋದಂತೆ ರುಚಿಯನ್ನು ಹೆಚ್ಚಿಸುವ ವೈನಿನಂತೆ ಮುಂದೆ ತನ್ನದೇ ಆದ ಪ್ರೇಕ್ಷಕ ವರ್ಗವನ್ನು ಈ ಚಿತ್ರ ಗಳಿಸುವಲ್ಲಿ ಯಾವುದೇ ಸಂಶಯವಿಲ್ಲ. ಸೈಕೊಲೋಜಿಕಲ್ ಥ್ರಿಲ್ಲರ್ ಗಳನ್ನು ಇಷ್ಟಪಡುವವರು ನೋಡಲೇ ಬೇಕಾದ ಸಿನಿಮಾ“ಸ್ಟೋಕರ್” .

Facebook ಕಾಮೆಂಟ್ಸ್

ಲೇಖಕರ ಕುರಿತು

Harikiran H

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕುಂಬ್ಳೆ ಎಂಬ ಗ್ರಾಮದಲ್ಲಿ ವಾಸವಾಗಿರುವ ಹರಿಕಿರಣ್. ಮಂಗಳೂರಿನಲ್ಲಿ ಫಾರ್ಮಸ್ಯೂಟಿಕಲ್ ಕೆಮಿಸ್ಟ್ರಿ
ಎಂಬ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಇದೀಗ ಕಾಸರಗೋಡಿನಲ್ಲಿ ಅಲೋಪಥಿಕ್ ಔಷಧಿಗಳ ಮಾರಾಟ ಮಳಿಗೆ ನಡೆಸುತ್ತಿದ್ದಾರೆ. ಕನ್ನಡ ಕಥೆ, ಸಿನಿಮಾ, ಸಂಗೀತ ಮತ್ತು ಸಾಹಿತ್ಯದ ಇತರ ಪ್ರಕಾರಗಳಲ್ಲಿ ಅಭಿರುಚಿಯನ್ನು ಹೊಂದಿರುತ್ತಾರೆ. ಕೆಲವೊಂದು ಸಣ್ಣ ಕಥೆಗಳನ್ನು ಕೂಡ ಬರೆದಿದ್ದಾರೆ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!