ಕಥೆ

ಮರಳು-೩

ಹಿಂದಿನ ಭಾಗ:

ಮರಳು -೨

ಮುಂಜಾನೆ ಆರರ ಸುಮಾರಿಗೆ ಗೌರಿ ಭರತನನ್ನು ಏಳಿಸುತ್ತಾಳೆ. ಎದ್ದು ರೆಡಿಯಾಗಿ ಬಂದ ಭರತನನ್ನು ಊರ ಗುಡ್ಡದ ಮೇಲೆ ಕರೆದೊಯ್ಯುತ್ತಾಳೆ. ಮುಂಜಾವಿನ ಸೂರ್ಯನಕಿರಣಗಳ ಶಾಖಕ್ಕೆ ಊರಿಗೆ ಆವರಿಸಿದ ದಟ್ಟಮಂಜಿನ ಕವಚ ನಿಧಾನವಾಗಿ ಮರೆಯಾಗುತ್ತಿರುತ್ತದೆ. ಚಿಲಿ-ಪಿಲಿಹಕ್ಕಿಗಳ ಸದ್ದು, ಹಸಿರು ಪರ್ವತಗಳು, ಮುಂಜಾವಿನ ನಿರ್ಮಲ ಆಕಾಶ ಭರತನಿಗೆ ಮಾತೇ ಹೊರಡದಂತೆ ಮಾಡುತ್ತವೆ. ಗೌರಿ ಭರತನನ್ನು ಬೆಟ್ಟದ ಮೇಲಿನ ಆಲದಮರದ ಬುಡದಲ್ಲಿ ಪದ್ಮಾಸನದಲ್ಲಿ ಕೂರಲು ಹೇಳುತ್ತಾಳೆ. ತಾನೂ ಕೂರುತ್ತಾಳೆ. ಇದು ಊರಿನ ಎತ್ತರವಾದ ಶಾಂತವಾದ ಜಾಗವೆಂದೂ, ಕೆಲಸ, ಹಣ, ಕಾರು, ಮೊಬೈಲು, ಸಂಬಂಧ ಎಲ್ಲವನ್ನು ಅರೆಕ್ಷಣ ಮರೆತು ಕಣ್ಣುಮುಚ್ಚಿ ಪ್ರಕೃತಿಯ ಸೊಬಗನ್ನು ಆಸ್ವಾದಿಸಬೇಕೆಂದೂ ಹಾಗು ದೀರ್ಘವಾಗಿ ಉಸಿರನ್ನು ಒಳಗೆಳೆದು ಹೊರಬಿಡಬೇಕೆಂದು ಹೇಳುತ್ತಾಳೆ. ಅಂತೆಯೇ ಭರತ ನಿಧಾನವಾಗಿ ಕಣ್ಣನು ಮುಚ್ಚುತ್ತಾನೆ. ತಲೆಯನ್ನು ಕೊರೆಯುತ್ತಿದ್ದ ಒಂದೊಂದೇ ವಿಷಯವನ್ನು ಮರೆಯುತ್ತ ಹೋಗುತ್ತಾನೆ. ಕೆಲ ಸಮಯದ ನಂತರ ಗಾಳಿಯ ಸದ್ದು ಕೇಳತೊಡಗುತ್ತದೆ. ನಿಧಾನವಾಗಿ ಓಂಕಾರವನ್ನು ಗುನುಗತೊಡಗುತ್ತಾನೆ. ಮನಸ್ಸು ಬೇರೆಲ್ಲೂ ಸುಳಿಯದೆ ನಿಶ್ಚಲವಾಗುತ್ತದೆ. ಹೀಗೆ ಸುಮಾರು ಅರ್ಧ ತಾಸು ಧ್ಯಾನದಲ್ಲಿ ತಲ್ಲೀನನಾಗಿ ನಿಧಾನವಾಗಿ ಕಣ್ಣು ತೆರೆದಾಗ ಭರತನಿಗೆ ಒಂದು ಹೊಸ ಅನುಭವವಾಗುತ್ತದೆ. ಎಲ್ಲಿಲ್ಲದ ಒಂದು ಹರುಷ ಮನದಲ್ಲಿ ಮೂಡುತ್ತದೆ. ಗೌರಿ ಅಷ್ಟರಲ್ಲಾಗಲೇ ಎದ್ದು ಕೂತು ಭರತನನ್ನೇ ನೋಡುತ್ತಿರುತ್ತಾಳೆ.

‘ಹೌ ವಾಸ್ ಇಟ್..?’ ಎಂದು ಗೌರಿ ಕೇಳಿದಾಗ,

‘ಅಧ್ಭುತ..!! ಇಲ್ಲಿಂದ ಹೊರಡಲು ಮನಸ್ಸೇ ಬರುತ್ತಿಲ್ಲ ಗೌರಿ’ ಎನ್ನುತಾನೆ.

ನಂತರ ಭರತನನ್ನು ಊರ ದೇವಸ್ಥಾನಕ್ಕೆ ಕರೆದೊಯ್ದು, ಆ ದೇವಾಲಯದ ಮಹಿಮೆ, ಅದರ ಕೆತ್ತನೆ, ಆ ಕೆತ್ತನೆಯ ಹಿಂದಿನ ಕುಶಲತೆ, ಎಲ್ಲವನ್ನೂ ತಿಳಿಸುತ್ತಾಳೆ. ದೇವಸ್ಥಾನದ ದೇವರ ಮೂರ್ತಿಗೆ ನಮಸ್ಕರಿಸಿ, ಹಣ್ಣು ಕಾಯಿಯನ್ನು ಮಾಡಿಸಿ ಪಕ್ಕದ ನದಿಯ ಬಳಿಬಂದು ಕೂರುತ್ತಾರೆ.

‘ಇಂದೆಲ್ಲ ಮನುಷ್ಯ ಮಷೀನ್ಗಳ ಸಹಾಯದಿಂದ ಕೆತ್ತಿಮಾಡೋ ದೇವಸ್ಥಾನಕ್ಕೂ, ಕೈಯಲ್ಲೇ ಕೆತ್ತಿ ಮಾಡಿರೋ ದೇವಸ್ಥಾನಕ್ಕೂ ಎಷ್ಟ್ ವ್ಯತ್ಯಾಸ ಇದೆ ನೋಡು ಭರತ್. ನಮ್ಮ್ ಹಿರೀಕರನ್ನ ನಾವು ಅಜ್ಞಾನಿಗಳೆಂದರೆ ಅದು ನಮ್ಮ ಮೂರ್ಖತನ. ಇಂದಿನ ಅದೆಷ್ಟೋ ಸೈಂಟಿಫಿಕ್ ರೀಸರ್ಚ್ಗಳನ್ನ ನಮ್ಮ ಹಿರಿಕರು ಅದೆಷ್ಟೋ ವರ್ಷಗಳ ಹಿಂದೇನೆ ಕಂಡುಹಿಡಿದಿದ್ರು…’ ಎಂದು ಸುಮ್ಮನಾಗುತ್ತಾಳೆ. ನಂತರ ಮುಂದುವರೆಸಿ ‘..ಜಗತ್..’ ಎಂಬ ಪದದ ಅರ್ಥನೋಡು. ಈ ಪದವನ್ನು ಅದೆಷ್ಟೋ ಸಾವಿರ ವರ್ಷಗಳ ಹಿಂದೆ ನಮ್ಮಪುರಾಣಗಳಲ್ಲಿ ಸಂಸ್ಕೃತಭಾಷೆಯಲ್ಲಿ ಬಳಸಿದ್ದಾರೆ. ಜಗತ್ತ್ ಅಂದರೆ ‘ಜಿಸ್ಕ ಗತಿ ಹೊ’.. ಅಂದ್ರೆ ಚಲಿಸುತ್ತಿರುವ ವಸ್ತು. ಅಲ್ಲದೆ ಗರುಡ ಪುರಾಣದಲ್ಲಿ ವಿಷ್ಣುವಿನ ಅವತಾರವನ್ನು ಅದರ ಮುಖಪುಟದ ಮೇಲೆ ಚಿತ್ರಿಸಿದ್ದಾರೆ. ಅದರಲ್ಲಿ ವಿಷ್ಣು ತನ್ನ ವರಹ ಅವತಾರದಲ್ಲಿ ಕೋರೆಗಳಿಂದ ಗೋಲಾಕಾರದ ಭೂಮಿಯನ್ನು ಮೇಲೆತ್ತಿ ನಿಂತಿರುವ ಚಿತ್ರವಿದೆ’ ಎನ್ನುತ್ತಾಳೆ.

‘ನೌ ಥಿಂಕ್..ಅದೆಷ್ಟೋ ಸಾವಿರ ವರ್ಷಗಳ ಹಿಂದೆಯೇ ನಮ್ಮ ಪೂರ್ವಿಕರಿಗೆ ಭೂಮಿ ಗೋಲವಾಗಿದೆ ಎಂದೂ ಅಲ್ಲದೆ ಅದು ಚಲಿಸುತ್ತಿದೆ ಎಂದು ತಿಳಿದ್ದಿತ್ತು ಅಂದ್ರೆ ಅವ್ರು ವೈಜ್ಞಾನಿಕವಾಗಿ ಅದೆಷ್ಟು ಮುಂದುವರ್ದಿದ್ರು ಅನ್ಸಲ್ವಾ? ಆಧುನಿಕ ವಿಜ್ಞಾನ ಇತ್ತೀಚೆಗಷ್ಟೇ ಅದನ್ನು ಸಾಬೀತುಪಡಿಸಿದೆ ಅಷ್ಟೇ’ ಎನ್ನುತ್ತಾಳೆ. ಭರತನಿಗೂ ಹೌದೆನಿಸುತ್ತದೆ. ಗೌರಿಯ ಅವಲೋಕನಕ್ಕೆ ಖುಷಿಪಡುತ್ತಾನೆ.

ಅಷ್ಟರಲ್ಲಾಗಲೇ ಅಜ್ಜ ಎದ್ದು, ರೊಟ್ಟಿಯನ್ನು ಮಾಡಿಕಾಯುತ್ತಿರುತ್ತಾರೆ.

‘ಅರ್ರೆ ನೀವ್ಯಾಕೆ ಮಾಡೋಕೆ ಹೋದ್ರಿ..ನಾನ್ಬಂದ್ ಮಾಡ್ತಿದ್ದನಲ್ಲ..’ ಎಂದು ಗೌರಿ ಹೇಳಿದಾಗ

‘ಭರತ ಸಣ್ಣವನಿದ್ದಾಗ ಅವರಜ್ಜಿ ಮಾಡೋ ರೊಟ್ಟಿ ಚಟ್ನಿ ಅಂದ್ರೆ ಅವ್ನಿಗೆ ಬಾಳ ಇಸ್ಟ’ ಎಂದು ರೊಟ್ಟಿನ ಮುರಿದು ಭರತನ ಬಾಯಿಗೆ ಇಡುತ್ತಾರೆ.

ತಿಂಡಿ ಮುಗಿಸಿದ ನಂತರ ಗೌರಿ ಭರತನನ್ನು ಗದ್ದೆಗೆ ಕರೆದುಕೊಂಡು ಹೋಗುತ್ತಾಳೆ. ಕೆಲಸ ಮಾಡುತ್ತಿದ್ದ ಮಂಜನನ್ನು ನೋಡಿ ‘ಮಂಜ ಇವನ್ಯಾರು ಗುರ್ತ್ಸಿಕ್ತ?’ ಎಂದು ಕೇಳಿದಾಗ ಮಂಜ, ಭರತ ನಿನ್ನೆ ಹಾಡುತ್ತಾ ಗದ್ದೆಯಬದುವಿನ ಮೇಲೆ ಹೋದದ್ದು, ಇವನು ಅವನನ್ನು ಕರೆದಿದ್ದೂ, ಅವನಿಗದು ಕೇಳದೆ ಹೋದದ್ದು,ಎಲ್ಲವನ್ನೂ ಹೇಳುತ್ತಾನೆ.

‘ಭರತ್..ನೀನು ಸಣ್ಣವನಿದ್ದಾಗ ನನ್ನೊಟ್ಟಿಗೆ ಕುಂಟೆ ಪಿಲ್ಲೆ ಆಡುವಾಗ ನಿನ್ನ ಹುಡ್ಗಿ ಅಂತ ರೇಗುಸ್ತಿದ್ದಿದ್ದು, ಮರಕೋತಿ ಆಡ್ವಾಗ ನಿನ್ನನ್ನ ಬೇಕು ಅಂತಾನೆ ಮರದ್ಮೇಲೆ ಬಿಟ್ಟು ಕೆಳಗಿಳಿತಾ ಇದ್ನಲ್ಲಾ ಮಂಜ, ಇವ್ನೆ ಅವ್ನು’ ಎನ್ನುತ್ತಾಳೆ. ಭರತ ನಗುತ್ತಾ ಅವನ ಬಳಿಹೋಗಿ, ಯೋಗಕ್ಷೇಮವನ್ನು ವಿಚಾರಿಸುತ್ತಾನೆ. ಹೆಗಲಮೇಲೆ ಭರತನ ಕೈ ಇರುವುದು ಕೊಂಚ ಮುಜುಗರವೆನಿಸಿದರೂ ಮಂಜ ಸುಮ್ಮನಾಗುತ್ತಾನೆ.

‘ಭರತ್ ನೀನು ಗದ್ದೆ ಕೆಲ್ಸ ಮೊದ್ಲು ಎಂದೂ ಮಾಡಿಲ್ಲ ಅಲ್ಲ? ಮಂಜನೊಟ್ಟಿಗೆ ಕೆಸ್ರುಗದ್ದೇಲಿ ಗುದ್ದಲಿ ತಗೊಂಡು ಕೆಲ್ಸಮಾಡಿನೋಡು’ ಎನ್ನುತ್ತಾಳೆ. ದಿನವೆಲ್ಲ ಅವಳಿಗಾಗೇ ಮುಡಿಪಾಗಿಟ್ಟಿರುವ ಭರತ ಎದುರು ಹೇಳದೆ ಗದ್ದೆಗೆ ಇಳಿದೇ ಬಿಡುತ್ತಾನೆ. ಕೆಸರಿನ ತಂಪಿಗೆ ಕೊಂಚ ನಡುಗಿದ ಭರತನ ಕಾಲುಗಳು ನಿಧಾನವಾಗಿ ಅವಕ್ಕೆ ಒಗ್ಗಿಕೊಳ್ಳುತ್ತವೆ.’ಬೇಡ ಬುದ್ದಿ..ಇದ್ಯಾಕೆ ನಿಮ್ಗೆಲ್ಲಾ’ ಎಂದು ಹೇಳುತ್ತಿದ್ದ ಮಂಜನನ್ನು,ತನಗೆ ಭರತನೆಂದು ಕರೆಯಬೇಕೆಂದೂ, ಅಲ್ಲದೆ ಸದ್ಯಕ್ಕೆ ಒಂದು ಗುದ್ದಲಿಯನ್ನೂ ಕೊಡಬೇಕೆಂದು ಹೇಳುತ್ತಾನೆ. ಬದುವಿಗೆ ಮಣ್ಣು ಕೊಡುವುದು, ನೀರು ಹರಿಯಲು ಚರಂಡಿ ಮಾಡುವುದು, ಕಳೆ ಕೀಳುವುದು ಎಲ್ಲವನ್ನು ಮಂಜನಿಂದ ಕೇಳಿ ಮಾಡುವಷ್ಟರಲ್ಲಿ ಸೂರ್ಯನೆತ್ತಿಗೆ ಬಂದಿರುತ್ತಾನೆ. ಅಷ್ಟರಲ್ಲಿ ಗೌರಿ ಬುತ್ತಿಯಲ್ಲಿ ಊಟವನ್ನು ತರುತ್ತಾಳೆ. ಜೊತೆಗೆ ದೊಡ್ಡೇಗೌಡರೂ ಬಂದಿರುತ್ತಾರೆ. ಭರತ ಮಂಜನೊಟ್ಟಿಗೆ ಮಾಡುತ್ತಿದ್ದ ಗದ್ದೆ ಕೆಲಸವನ್ನು ಅವರು ಪ್ರಶಂಸಿಸುತ್ತಾರೆ.

‘ನಮ್ಮ್ ಅನ್ನನ ನಾವೇ ಬೆಳ್ಕಬೇಕು,ನಾವೇಮಾಡ್ಕಬೇಕು, ನಾವೇ ತಿನ್ಬೇಕು ಮಗ..ಈ ಕೈಕಾಲು ಇರೋದು ಅದಕ್ಕಾಗೇ’ ಎನ್ನುತ್ತಾರೆ. ಎಲ್ಲರೂ ಮರದ ಕೆಳಗೆ ಕೂತು ಊಟ ಮಾಡುತ್ತಾರೆ. ದೇಹ ದಣಿದಾಗ ಊಟದ ರುಚಿ ಎಷ್ಟು ಸೊಗಸಾಗಿರುತ್ತದೆ ಎಂದು ಭರತನಿಗನಿಸುತ್ತದೆ. ಊಟವಾದ ನಂತರ ದೊಡ್ಡೇಗೌಡರು,

‘ಇನ್ನು ಈ ಬಿಸಿಲಲ್ಲಿ ಕೆಲ್ಸ ಮಾಡ್ಬೇಡ.. ಬೇಕಾದ್ರೆ ಇಲ್ಲೇ ವಂಗೆಮರದ ನೆರಳಲ್ಲಿ ವಿಶ್ರಾಂತಿ ಮಾಡ್ಕೋ.. ಆದ್ರೆ ಈ ಪುಸ್ತಕಾನು ಓದು’ ಎನ್ನುತ ಶಿವರಾಮ ಕಾರಂತರ ‘ಮರಳಿ ಮಣ್ಣಿಗೆ’ ಕಾದಂಬರಿಯನ್ನು ನೀಡುತ್ತಾರೆ. ಅವರೆಲ್ಲ ಹೋದ ನಂತರ ಭರತ ಮರದ ಬುಡಕ್ಕೆ ಬೆನ್ನು ಕೊಟ್ಟು ಪುಸ್ತಕವನ್ನು ಓದಲಾರಂಭಿಸುತ್ತಾನೆ.ದೇಹ ದಣಿದಿದ್ದರಿಂದ ಬೇಗನೆ ನಿದ್ರೆಯ ಜೋಂಪು ಹತ್ತುತ್ತದೆ. ತುಸು ಹೊತ್ತು ಮಲಗಿ ಎದ್ದಾಗ ಬಿಸಿಲಿನ ಧಗೆ ಕೊಂಚ ಕಡಿಮೆಯಾಗಿರುತ್ತದೆ. ಮಂಜ ಅಷ್ಟರಲ್ಲಾಗಲೇ ಕೆಲಸಮುಗಿಸಿ ಹೊರಟು ಹೋಗಿರುತ್ತಾನೆ.

ಮನೆಗೆ ಬಂದು, ಸ್ನಾನ ಮುಗಿಸಿ ಹೊರಬಂದಾಗ ಗೌರಿ ಅವನಿಗಾಗಿ ಕಾಯುತ್ತಿರುತ್ತಾಳೆ. ‘ಮುಂದಿನಪಯಣ..?’ ಎಂದು ನಗುತ್ತಾ ಕೇಳಿದ ಭರತನ ಪ್ರಶ್ನೆಗೆ ‘ಹಕ್ಕಿಮ್ ಸಾಹೇಬ್ರ ಚಹಾದ ಅಂಗಡಿ’ ಎನ್ನುತ್ತಾಳೆ. ಊರ ಶಾಲೆಯ ಬಳಿಯಿದ್ದ ಚಹಾದ ಅಂಗಡಿ ಸಣ್ಣ ಮಡಿಕೆಯ ಲೋಟಗಳಲ್ಲಿ ಮಾರುವ ಸ್ಪೆಷಲ್ ಚಹಾಕ್ಕೆ ಹೆಸರುವಾಸಿ. ‘ಗೌರಿ ಬೇಟಿ ಹೇಗಿದ್ದೀಯ.?’ ಎಂದು ಕೇಳಿದ ಹಕ್ಕಿಮ್ ಸಾಹೇಬರಿಗೆ ಭರತನನ್ನು ಪರಿಚಯ ಮಾಡಿಕೊಡುತ್ತಾಳೆ. ನಂತರ ಬಂದ ಚಹಾದ ಘಮಕ್ಕೆ ಭರತ ತಲೆ ದೂಗುತ್ತಾನೆ. ನಿಧಾನವಾಗಿ ಒಂದೊಂದೇ ಗುಟುಕನ್ನು ಹೀರುತ್ತಾ,

‘ಬೆಸ್ಟ್ ಮೆಡಿಸಿನ್ ಫಾರ್ ಹೆಡೆಕ್ .. ‘ ಎನ್ನುತ್ತಾನೆ.

‘ಟೂರಿಸ್ಟ್ ನಮ್ಮೂರಿಗೆ ಬಂದ್ರೆ, ಚಹಾ ಕುಡಿಲಿಕ್ಕೆ ಇದೆ ಅಂಗಡಿಗೆ ಬರುವುದು’. ಎನ್ನುತ್ತಾಳೆ ಗೌರಿ.

ಚಹ ಕುಡಿದು ಊರ ಹೊರವಲದಲ್ಲಿದ್ದ ಹಕ್ಕಿಗಳನ್ನು ಮಾರುವ ಅಂಗಡಿಗೆ ಹೋಗುತ್ತಾರೆ. ಅಲ್ಲಿ ಬಣ್ಣ ಬಣ್ಣದ ವಿವಿಧ ಬಗೆಯ ಹಕ್ಕಿಗಳನ್ನು ಪಂಜರದೊಳಗೆ ಇಟ್ಟು ಮಾರುತ್ತಿರುತ್ತಾರೆ. ‘ಭರತ್ ನಿಂಗೆ ಇಷ್ಟ ಆದ ಯಾವದಾದ್ರು ಒಂದು ಪಂಜರನ ತಗೋ’ ಎಂದು ಗೌರಿ ಹೇಳಿದಾಗ ಭರತ ಏತಕ್ಕೆ ಎಂದು ಕೇಳುತ್ತಾನೆ. ‘ತಗೋಳಪ್ಪಾ ಹೇಳ್ತೀನಿ’ ಎನ್ನುತ್ತಾಳೆ. ನಂತರ ಇಬ್ಬರು ಬೆಳಗ್ಗೆ ಬಂದಿದ್ದ ಬೆಟ್ಟದ ತಪ್ಪಲಿಗೆ ಬರುತ್ತಾರೆ. ಬೆಳಗ್ಗೆ ಪೂರ್ವದಲ್ಲಿ ಕಂಡ ಸ್ವರ್ಗ ಈಗ ಪಶ್ಚಿಮದಲ್ಲಿ ಕೆಂಪಾಗಿ ಮೂಡಿದೆ ಎಂದನಿಸುತ್ತದೆ ಭರತನಿಗೆ.

‘ಭರತ್, ನೋಡು ಎಲ್ಲ ಹಕ್ಕಿಗಳು ತಮ್ಮ-ತಮ್ಮ ಗೂಡುಗಳನ್ನು ಸೇರ್ತಿವೆ. ತಗೋ, ಈ ಪಂಜರದಲ್ಲಿರೋ ಹಕ್ಕಿಗಳನ್ನ ಹಾರಿಬಿಡು.. ಇವೂ ಗೂಡು ಸೇರಲಿ’ ಎಂದು ಹೇಳಿದಾಗ,ಚಿಯ್ಗುಡುತ್ತಿದ್ದ ಪುಟ್ಟ ಹಕ್ಕಿಗಳನ್ನು ಒಂದೊಂದೇ ಹೊರತೆಗೆದು ಹಾರಬಿಡುತ್ತಾನೆ. ಹಕ್ಕಿಗಳು ಹಾರುತ್ತಾ ದೂರ ಸಾಗಿ ಕಣ್ಮರೆಯಾದ ಮೇಲೆ,’ಭರತ್ ನೀನೂ ಹೀಗೆ ನಿನ್ನ ಪಂಜರದ ಜೀವನವನ್ನು ಬಿಟ್ಟು ಮುಕ್ತವಾಗಿ ಹಾರಾಡು’ ಎನ್ನುತ್ತಾಳೆ. ಇಬ್ಬರೂ ಹಾರಿಹೋಗುತ್ತಿದ್ದ ಹಕ್ಕಿಗಳನ್ನೇ ನೋಡುತ್ತಾರೆ.

ಆ ದಿನ ಭರತನಿಗೆ ಜೀವನದ ಅತಿಮುಖ್ಯವಾದ ದಿನವಾಗುತ್ತದೆ. ನಂತರದ ಎರಡುವಾರ ಅದೇ ದಿನಚರಿಯನ್ನು ಮುಂದುವರೆಸುತ್ತಾನೆ. ಬೆಳಗ್ಗೆ ಬೇಗ ಏಳುವುದು, ಬೆಟ್ಟದ ತಪ್ಪಲಿನಲ್ಲಿ ಧ್ಯಾನ, ಮಂಜನೊಟ್ಟಿಗೆ ಗದ್ದೆಯ ಕೆಲಸ, ಮರಳಿಮಣ್ಣಿಗೆಪುಸ್ತಕ, ಸಂಜೆ ಗೌರಿಯೊಟ್ಟಿಗೆ ಊರ ಸುತ್ತಾಟ, ಭಜನೆ,ಅಡಿಗೆ,ಅಲ್ಲದೆ ದಿನಕ್ಕೊಂದರಂತೆ ಪಂಜರವನ್ನು ಕೊಂಡು ಅದರಲ್ಲಿನ ಹಕ್ಕಿಯನ್ನು ಗುಡ್ಡದ ತಪ್ಪಲಿನಿಂದ ಹಾರಬಿಡುವುದು, ಅದು ಹಾರಿ ಕಣ್ಮರೆಯಾಗುವವರೆಗೂ ನೋಡುವುದು. ಭರತನ ಜೀವನ ಒಂದು ಹೊಸದಿಕ್ಕನ್ನು ಪಡೆಯುತ್ತಿತ್ತು. ಅರ್ಥಪೂರ್ಣವಾಗಿದೆ ಎಂದೆನಿಸುತ್ತಿತ್ತು. ‘ನಾಳೆ’ ಎಂಬುವ ಹುಸಿಭಯ ಮನಸ್ಸಿಂದ ಮರೆಯಾಗಿಹೋಗಿತ್ತು.

ದಿನಗಳು ಕಳೆದವು. ಅಷ್ಟರಲ್ಲಾಗಲೇ ಭರತನಿಗೆ ಆಫೀಸ್ಸಿನಿಂದ ಫೋನುಗಳು ಬರತೊಡಗಿದ್ದವು. ಅವುಗಳಲ್ಲಿ ಕೆಲವನ್ನು ಉತ್ತರಿಸಿದರೆ ಕೆಲವನ್ನು ಹಾಗೆಯೇ ಬಿಡುತ್ತಿದ್ದ. ಕೊನೆಯದಿನ ಸಂಜೆ ಭರತ ಹಾಗು ಗೌರಿ ಬೆಟ್ಟದಮೇಲೆ ಬಂದಿರುತ್ತಾರೆ. ಹಕ್ಕಿಯ ಅಂಗಡಿಯ ಕೊನೆಯ ಪಂಜರದ ಹಕ್ಕಿಯನ್ನೂ ಹಾರಿಬಿಡುತ್ತಾರೆ. ‘ಹಕ್ಕಿ ಅಂಗಡಿಯವನಿಗೆ ಇಡೀ ವರ್ಷದ್ ಬಿಸಿನೆಸ್ ಕೊಟ್ಟೆ ನೋಡು ನೀನು’ ಎನ್ನುತ ಭರತನನ್ನು ನೋಡಿ ಗೌರಿ ನಗುತ್ತಾಳೆ. ಸ್ವಲ್ಪ ಹೊತ್ತು ಸುಮ್ಮನಿದ್ದ ಭರತ ‘ನಾಳೆ ನಾನು ಹೊರಡ್ಬೇಕು ಗೌರಿ’ ಎನ್ನುತ್ತಾನೆ. ನಗುತ್ತಿದ್ದ ಗೌರಿ ಒಮ್ಮೆಲೇ ಮೌನವಾಗುತ್ತಾಳೆ. ಭರತನೂ ಸುಮ್ಮನಾಗುತ್ತಾನೆ. ‘ಅಲ್ಲಿ ಹೋಗಿ ಏನ್ಮಾಡ್ತಿಯಾ’ ಎಂದು ತುಸು ಕೋಪದಿಂದ ಕೇಳಿದಾಗ ಭರತನಿಗೆ ಏನೆನ್ನಬೇಕೆಂದು ತಿಳಿಯುವುದಿಲ್ಲ. ‘ಊರು, ಈ ಜಾಗ, ಅಜ್ಜ, ದೊಡ್ಡೆಗೌಡ್ರು, ಹಕ್ಕಿಮ್ ಸಾಹೇಬ್ರ ಚಹಾ, ಗದ್ದೆ, ಮಂಜ,ಈ ಹಕ್ಕಿಗಳು, ನೀನು ಎಲ್ಲರನ್ನು ಮಿಸ್ಮಾಡ್ಕೊಂತೀನಿ’ ಎನ್ನುತಾನೆ. ಗೌರಿ ಏನನ್ನೂ ಉತ್ತರಿಸದೆ ಗುಡ್ಡದಿಂದಿಳಿದು ಹೋಗುತ್ತಾಳೆ. ಅವಳ ಕೋಪದ ಹಿಂದಿದ್ದ ಅರ್ಥವನ್ನು ಅರಿತರೂ ಅರಿಯದಾಗುತ್ತಾನೆ.

ಸ್ವಲ್ಪ ಸಮಯ ಗುಡ್ಡದ ಮೇಲೆ ಕೂತು ದೊಡ್ಡೇಗೌಡರ ಮನೆಗೆ ಬಂದ ಭರತ ‘ಮರಳಿಮಣ್ಣಿಗೆ’ ಪುಸ್ತಕವನ್ನು ಹಿಂದಿರುಗಿಸಲು ಅವರ ಕೋಣೆಯೊಳಗೆ ಹೋಗುತ್ತಾನೆ. ದೊಡ್ಡದ್ದಾದ ಎರಡು ಗಾಜಿನ ಕಪಾಟಿನಲ್ಲಿ ಜೋಡಿಸಿದ್ದ ನೂರಾರು ಪುಸ್ತಕಗಳನ್ನು ಕಂಡು ಭರತನಿಗೆ ಆಶ್ಚರ್ಯವಾಗುತ್ತದೆ. ದೊಡ್ಡೇಗೌಡರ ಅನುಭವದ ಮಾತುಗಳ ಹಿಂದಿನ ರಹಸ್ಯ ಅರಿಯುತ್ತದೆ. ‘ಬಾರಪ್ಪ ಬಾ…ಓದಿದ ಪುಸ್ತಕ?ಹೇಗಿದೆ? ಎಂದು ಪುಸ್ತಕವನ್ನು ಓದುತ್ತಾ ಕುರ್ಚಿಯ ಮೇಲೆ ಒರಗಿದ್ದ ಗೌಡರು ಕೇಳುತ್ತಾರೆ.

‘ಈ ಪುಸ್ತಕ ನನ್ನ ಜೀವನದ ದಿಕ್ಕನೇ ಬದಲಿಸುತ್ತದೆ ಅನ್ಸುತ್ತೆ’ ಎಂದ ಭರತನನ್ನು ಉದ್ದೇಶಿಸಿ,

‘ನೀನೊಬ್ಬನೇ ಅಲ್ಲ ಮಗ..ಅದೆಷ್ಟೋ ಜನರ ಜೀವನದ ಹಾದಿನೇ ಬದಲಿಸಿದೆ ಈ ಪುಸ್ತಕ’ ಎನ್ನುತ್ತಾರೆ. ‘ಇಂತಹ ಪುಸ್ತಕಗಳೇ ನನ್ನ ಆಸ್ತಿ’ ಎಂದ ಅವರು ಕಪಾಟಿನಿಂದ ಸುಧಾಮೂರ್ತಿಯವರ ‘How I Taught My Grandmother to Read’ ಎಂಬ ಇಂಗ್ಲಿಷ್ ಪುಸ್ತಕವನ್ನೂ ಕೊಡುತ್ತಾರೆ.

ಅಷ್ಟರಲ್ಲಿ ಕೋಣೆಯ ಹೊರಗಿಂದ ತಂಬೂರಿಯ ನಾದವೊಂದು ಮೂಡುತ್ತದೆ. ಪೂರವಿ ಕಲ್ಯಾಣಿ ರಾಗ ನೋವಿನ ಭಾವವನ್ನು ಸ್ಪುರಿಸುತ್ತಿರುತ್ತದೆ.ಇದು ಗೌರಿಯ ಧ್ವನಿಯೆಂದೇ ಕ್ಷಣ ಮಾತ್ರದಲ್ಲಿ ಅರಿತ ಭರತ ‘ಗೌರಿ ಹಾಡುತ್ತಾಳೆಯೇ.?’ ಎಂದು ದೊಡ್ಡೇಗೌಡರನ್ನು ಆಶ್ಚರ್ಯದಿಂದ ಕೇಳುತ್ತಾನೆ. ದೊಡ್ಡೇಗೌಡರು ಹೌದೆಂದೂ, ಗೌರಿ ಹಲವು ಸಂಗೀತಕಛೇರಿಗಳನ್ನೂ ನಡೆಸಿಕೊಡುವಳೆಂದೂ ಹೇಳುತ್ತಾರೆ.  ಗೌಡರ ಮಾತನ್ನು ಕೇಳುತ್ತಲೇ ತಕ್ಷಣ ಹೊರಬಂದ ಭರತ, ತಂಬೂರಿಯನ್ನು ಎದೆಗವುಚಿಕೊಂಡು ಹಾಡುತ್ತಿದ್ದ ಗೌರಿಯನ್ನು ನೋಡುತ್ತಾನೆ. ಕಣ್ಣುಮುಚ್ಚಿ ರಾಗದ ಆರೋಹಣವನ್ನು ಮಾಡುತ್ತಿದ್ದ ಗೌರಿ ಅಕ್ಷರಶಃ ದೇವತೆಯಂತೆ ಭರತನಿಗೆ ಕಾಣುತ್ತಾಳೆ. ಅಷ್ಟೊಂದು ಆಳವಾದ ಸ್ವರವಿಸ್ತಾರವನ್ನು ಭರತ ಎಂದಿಗೂ ಪ್ರತ್ಯಕ್ಷವಾಗಿ ಕೇಳಿರಲಿಲ್ಲ. ಗೌರಿ ಹಾಡುತ್ತಾ ಮೈಮರೆತಿರುತ್ತಾಳೆ. ದುಃಖದ ಭಾವಗಳೆಲ್ಲ ಅವಳ ಕಣ್ಣಹುಬ್ಬುಗಳ ಮೇಲೆ ಮೂಡುತ್ತಿರುತ್ತವೆ. ನೋಡುತ್ತಲೇ ಕಣ್ಣೀರಧಾರೆ ಅವಳ ಕಣ್ಣುಗಳಿಂದ ಹರಿಯತೊಡಗುತ್ತದೆ. ಆದರೆ ರಾಗ ಒಂದಿಂಚೂ ತಪ್ಪುವುದಿಲ್ಲ. ಕೆಲ ಸಮಯದ ನಂತರ ರಾಗವನ್ನು ಮಂದ್ರದಲ್ಲಿ ತಂದು ನಿಲ್ಲಿಸುತ್ತಾಳೆ. ಶಾಂತವಾಗುತ್ತಾಳೆ. ಆಕೆಯ ಕಣ್ಣೀರಿನ ಅರ್ಥವನ್ನು ಅರಿತ ಭರತ, ಆಕೆ ಕಣ್ಣುಬಿಡುವ ಮೊದಲೇ ‘ಬರ್ತೀನಿ’ ಎಂದೇಳಿ ಹೊರನಡೆಯುತ್ತಾನೆ.

ಗೌರಿಯನ್ನು ನೋಡಿದರೆ ಹೊರಡಲು ಮನಸ್ಸು ಬರುವುದಿಲ್ಲ. ಆದರೆ ಏನು ಮಾಡಬೇಕೆಂದೂ ತೋರುತ್ತಿಲ್ಲ.ರಾತ್ರಿಯೆಲ್ಲ ಭರತನಿಗೆ ನಿದ್ರೆಯೇ ಬರುವುದಿಲ್ಲ. ಇಂದು ಮತ್ತೊಮ್ಮೆ ಮನಸ್ಸು ತಳಮಳಗೊಂಡಿರುತ್ತದೆ.

ಮುಂಜಾವಿನ ರೈಲನ್ನು ಹಿಡಿಯಲು ಭರತ ಬೇಗನೆ ಏಳುತ್ತಾನೆ. ಹೊರಡುವ ಮೊದಲು ಗೌರಿಯನೊಮ್ಮೆ ನೋಡಬೇಕೆನಿಸಿದರೂ, ಬೇಡವೆಂದು ಅಲ್ಲಿಂದ ಹೊರಡುತ್ತಾನೆ. ಹೊರಡುವ ಮೊದಲು ಅಜ್ಜನ ಕಾಲಿಗೆ ಬಿದ್ದು, ಆಶೀರ್ವಾದವನ್ನುಪಡೆದು, ದೊಡ್ಡೇಗೌಡರಿಗೆ ಹೇಳಿ ಹೊರಡುತ್ತಾನೆ.’ಗೌರಿ ಮಲಗಿದ್ದಾಳೆ,ಅವಳನ್ನೂ ಏಳಸ್ತಿನಿ’ ಎಂದ ದೊಡ್ಡೇಗೌಡರಿಗೆ ‘ಅವಳು ಮಲಗಲಿ ಬಿಡಿ, ನೆನ್ನೆ ರಾತ್ರಿಯೇ ಅವಳಿಗೆ ಹೇಳಿದ್ದೀನಿ’ ಎನ್ನುತ್ತಾನೆ. ಆದರೂ ಗೌರಿ ನನ್ನ ಕಳಿಸಿಕೊಡಲು ಬರಲಿಲ್ಲವೇಕೆಂದು ಕಳವಳಗೊಳ್ಳುತ್ತಾನೆ.

ನನ್ನ ನೆನಪಿಗಾಗಿ ಏನಾದರೊಂದು ಭರತನಿಗೆ ಕೊಡಲೆಂದು ತಡರಾತ್ರಿಯವರೆಗೂ ಉಣ್ಣೆಯ ಶಾಲೊಂದನ್ನು ಗೌರಿ ಹಣೆಯುತ್ತಾಳೆ. ಬೆಳಗ್ಗೆ ತುಸು ನಿಧಾನವಾಗಿ ಎದ್ದು ನೋಡಿದಾಗ ಘಂಟೆ ಏಳಾಗಿರುತ್ತದೆ. ಎದ್ದು ರೆಡಿಯಾಗಿ ಹೊರಬಂದು ‘ಭರತ್ ಬಂದಿದ್ನ?’ ಎಂದು ದೊಡ್ಡೇಗೌಡರಲ್ಲಿ ಕೇಳುತ್ತಾಳೆ. ಅವರು ಹೌದೆಂದೂ, ನಿನ್ನ ಏಳಿಸಲು ಬೇಡವೆಂದು ಅವನು ಹೇಳಿದನೆಂದೂ, ಬೆಳಗ್ಗಿನ ರೈಲಿಗೆ ಅವನು ಹೊರಟನೆಂದು ಹೇಳುತ್ತಾರೆ. ನಂಬಲಾಗದ ಗೌರಿ ಭರತನಿಗಾಗಿ ಮಾಡಿದ್ದ ಶಾಲನ್ನು ಹಿಡಿದು ಪಟೇಲರ ಮನೆಯಡೆ ಬೇಗನೆ ಹೋಗುತ್ತಾಳೆ. ಬಾಗಿಲು ತೆರೆದಿದ್ದ ಮನೆಯೊಳಗೇ ಯಾರೂ ಇರುವುದಿಲ್ಲ. ‘ಭರತ್..ತಾತ’ ಎನ್ನುತ್ತಾ ಗದ್ಗದಿತ ಸ್ವರದಲ್ಲಿ ಕೂಗುತ್ತಾಳೆ.

‘ಅಯ್ಯರು ರೈಲ್ವೆ ಸ್ಟೇಷನ್ ಕಡೆ ಹೋದ್ರು’ ಎಂದು ಯಾರೋ ಹೊರಗಿನಿಂದ ಹೇಳಿದಾಗ ಗೌರಿ ನಿಂತಲ್ಲೇ ಕುಸಿಯುತ್ತಾಳೆ. ಅಲ್ಲಿಯವರೆಗೂ ‘ಭರತ ಹೊರಡುವುದಿಲ್ಲ’ ಎಂದು ಮನದ ಎಲ್ಲೋ ಒಂದೆಡೆ ಮೂಡುತ್ತಿದ್ದ ಸಂದೇಶ ಒಮ್ಮೆಲೇ ನಿಂತುಬಿಡುತ್ತದೆ. ಭರತ ಇಷ್ಟೊಂದು ಕಟು ಹೃದಯಿಯೇ ಎಂದು ಕೊಳ್ಳುತ್ತಾಳೆ. ಶಾಲನ್ನು ಎದೆಗವುಚಿಕೊಂಡು ಬಿಕ್ಕಿ ಅಳುತ್ತಾಳೆ. ಸ್ವಲ್ಪ ಸಮಯದ ನಂತರ ಹೊರ ಬಂದು ರೈಲು ಬರುವ ಸಮಯವನ್ನು ಕೇಳಿ, ಗದ್ದೆಯ ಮಾರ್ಗದಲ್ಲಿ ಹೋದರೆ ಹತ್ತಿರವಾಗಬಹುದೆಂದು ಬದುಗಳನ್ನು ಇಳಿದು ಬೇಗ-ಬೇಗನೆ ಹೋಗುತ್ತಾಳೆ.

‘ಒಂದು ಮಾತು ಹೇಳಿಯೂ ಹೋಗಲಿಲ್ಲವಲ್ಲ’ ಎಂದು ಅವಳಿಗೆ ಭರತನ ಮೇಲೆ ಕೊಂಚ ಸಿಟ್ಟೂ ಬಂದರೂ ಕೆಲಕ್ಷಣಗಳ ನಂತರ ದುಃಖ ಉಕ್ಕಿ ಬರುತ್ತಿತ್ತು. ದುಃಖವನ್ನು ತಡೆಯಲಾಗದೆ ಶಾಲಿನಿಂದ ಕಣ್ಣುಗಳನ್ನು ಅದ್ದುತ್ತಾ ನಡೆಯುತ್ತಾಳೆ. ಅಷ್ಟರಲ್ಲಿ ರೈಲು ಹೊರಡುವ ಸದ್ದೊಂದು ಮೂಡುತ್ತದೆ. ಬದುಗಳ ಮೇಲೆ ಸಂಬಾಲಿಸಿಕೊಂಡು ಓಡುತ್ತಿದ್ದ ಆಕೆ ರೈಲು ಹೊರಟಸದ್ದಿಗೆ ಒಮ್ಮೆಲೇ ನಿಲ್ಲುತ್ತಾಳೆ. ಕಳ್ಳಿಯ ಹಾಲಿನಂತೆ ಕಣ್ಣೀರಹನಿಗಳು ಒಮ್ಮೆಲೇ ಪಟಪಟನೆ ಉದುರುತ್ತವೆ. ರೈಲು ಸದ್ದು ಮಾಡುತ್ತಾ ದೂರದಲ್ಲಿ ಮರೆಯಾಗುತ್ತದೆ.

ಎಲ್ಲಿಗೋಗಬೇಕೆಂದು ಗೌರಿಗೆ ಅರಿಯುವುದಿಲ್ಲ. ಓಡಿಹೋಗಿ ರೈಲನ್ನು ಹಿಡಿಯಬೇಕನಿಸುತ್ತದೆ.ಭರತನನ್ನು ಕೆಳಗಿಳಿಸಿ ಕೇಳಬೇಕೆನಿಸುತ್ತದೆ. ಕೆಲಹೊತ್ತು ರೈಲಿನ ಹಾದಿಯನ್ನೇ ನೋಡುತ್ತಾ ನಿಂತ ಗೌರಿಗೆ ದೂರದಿಂದ ಯಾರೊ ಆಕೆಯನ್ನು ಕರೆದ ಹಾಗನಿಸುತ್ತದೆ. ಹಿಂದಿರುಗಿ ನೋಡಿದರೆ ಗದ್ದೆಯ ಮದ್ಯದಲ್ಲಿ ಇಬ್ಬರು ಕೆಲಸ ಮಾಡುತ್ತಿರುವುದು ಕಾಣುತ್ತದೆ. ತಡಮಾಡದೆ ಗೌರಿ ಅವರಲ್ಲಿಗೆ ಹೋಗುತ್ತಾಳೆ.ಅತ್ತ ಕಣ್ಣುಗಳನ್ನು ಶಾಲಿನಿಂದ ಒರೆಸಿಕೊಳ್ಳುತ್ತಾಳೆ.’ಲೇ ಮಂಜ..ಈ ಬದಿನ ನೀರಾ ಇನ್ನೂ ಯಾಕ್ಬಿಟ್ಟಿಲ್ಲ.. ಗುದ್ದಲಿ ತಾ.. ನೀರ್ ಜಾಸ್ತಿ ಆಯಿತು ಗದ್ದೆಗೆ’ ಎನ್ನುತ ಭರತ ಕೂಗುತ್ತಿರುತ್ತಾನೆ. ಭರತನನ್ನು ನೋಡಿದ ಗೌರಿಗೆ ತನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ.’ಏನ್ ಗೌರಿ, ಯಾವ್ಕಡೆ ಹೊರಟೆ’ ಎಂದು ಚೇಷ್ಟೆಯಿಂದ ಮುಗುಳ್ನಗುತ್ತಾ ಕೇಳುತ್ತಾನೆ. ಫ್ರೆಂಚ್ ಕಟ್’ನ ಮೇಲೆ ಗದ್ದೆಯ ಕೆಸರು ಮೆತ್ತಿಕೊಂಡು ಭಿನ್ನವಾಗಿ ಕಾಣುತ್ತಿದ್ದ ಭರತನನ್ನು ನೋಡಿ ನಗುತ್ತಾ, ತಾನು ತಂದಿದ್ದ ಕೆಂಪು ಶಾಲನ್ನು ಗೌರಿ ಅವನಿಗೆ ಎಸೆಯುತ್ತಾಳೆ.ರೈಲು ಹೋದ ದಿಕ್ಕಿನಿಂದ ಕೋಗಿಲೆಯೊಂದು ಕೂಗುತ್ತಿರುತ್ತದೆ.

ಮುಗಿಯಿತು…

Facebook ಕಾಮೆಂಟ್ಸ್

ಲೇಖಕರ ಕುರಿತು

Sujith Kumar

ಹವ್ಯಾಸಿ ಬರಹಗಾರ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!