ಸಿನಿಮಾ - ಕ್ರೀಡೆ

ನಾಟಕೀಯತೆಯೇ ಮಳೆಯಾದಾಗ

ಚಿತ್ರ : ಬರ್ಸ (ತುಳು)

ತಾರಾಗಣ : ಅರ್ಜುನ್ ಕಾಪಿಕಾಡ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ದೇವದಾಸ್ ಕಾಪಿಕಾಡ್
ನಿರ್ದೇಶನ : ದೇವದಾಸ್ ಕಾಪಿಕಾಡ್
ನಿರ್ಮಾಣ : ಬೊಳ್ಳಿ ಮೂವೀಸ್

******

ಕೆಲ ವರುಷಗಳ ಹಿಂದೆ ತುಳು ಚಿತ್ರಗಳೆಂದರೆ ನಾಟಕೀಯ ಚಿತ್ರಗಳು ಎಂಬ ಮಾತಿತ್ತು.. ಅಲ್ಲಲ್ಲಿ ನಾಟಕೀಯ ಛಾಯೆ ಎದ್ದು ಕಾಣುತ್ತಿತ್ತು. ಕ್ರಮೇಣ ಅಂತಹ ಅಪವಾದವನ್ನು ತೊಡೆದು ಹಾಕುವಂತಹ ಪ್ರಯತ್ನಗಳಾದವು. ಇತ್ತೀಚಿಗೆ ಬಿಡುಗಡೆಯಾದ ಹೆಚ್ಚಿನ ಚಿತ್ರಗಳು ನಾಟಕೀಯ ಛಾಯೆಯಿಂದ ಹೊರ ಬಂದು ಹೊಸ ಮನ್ವಂತರಕ್ಕೆ ನಾಂದಿ ಹಾಡಿದ್ದವು. ಆದರೆ ‘ಹೋದೆಯಾ ಮಾರಿ…’ ಎಂದು ನಿಟ್ಟುಸಿರು ಬಿಡುವಾಗಲೇ ‘ಇಗೋ ಬಂದೆ…’ ಎಂದು ‘ಬರ್ಸ’ ಚಿತ್ರದ ಮೂಲಕ ತುಳು ಚಿತ್ರರಂಗ ‘ನಾಟಕೀಯತೆ’ಯನ್ನು ಮತ್ತೆ ಗಟ್ಟಿಯಾಗಿ ಅಪ್ಪಿಕೊಂಡು ಬಿಟ್ಟಿದೆ. ಮೊದಲೆಲ್ಲ ಒಂದೆರಡು ಪಾತ್ರಗಳಿಗೆ ಸೀಮಿತವಾಗಿದ್ದ ‘ನಾಟಕೀಯ’ ಅಭಿನಯವನ್ನು ಇಲ್ಲಿ ಬಹುತೇಕ ಎಲ್ಲಾ ಪಾತ್ರಗಳಿಂದ ತೆಗೆಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಖಳನಾಯಕರನ್ನೂ ಬಿಟ್ಟಿಲ್ಲ..

ಹಿಂದಿನ ‘ಚಂಡಿಕೋರಿ’ಯ ಛಾಯೆಯಲ್ಲಿಯೇ ಬಂದಿರುವ ಬರ್ಸದಲ್ಲಿ ಹೊಸತನವೇನೂ ಕಂಡು ಬರುವುದಿಲ್ಲ. ಹಳೆಯ ಸಿನೆಮಾಗಳಲ್ಲಿ ಬರುವಂತಹ ತೀರಾ ಸಾಮಾನ್ಯವಾದ ಕತೆಯನ್ನೇ ಇಲ್ಲಿ ಹೆಣೆಯಲಾಗಿದೆ.  ಕೆಲ ಮಂದಿ ಬಡ ವ್ಯಾಪಾರಿಗಳು ದುಡಿಯುತ್ತಿರುವ ಮಾರುಕಟ್ಟೆಯನ್ನು ಕೈವಶ ಮಾಡಿಕೊಳ್ಳಲು ಸಮಾಜದ ಪ್ರತಿಷ್ಠಿತ ವ್ಯಕ್ತಿಯೊಬ್ಬ ಯತ್ನಿಸುವುದು ಹಾಗು ಆ ಬಡ ವ್ಯಾಪಾರಿಗಳ ರಕ್ಷಣೆಗೆ ನಾಯಕ ತೊಡೆತಟ್ಟಿ ಕಾಳಗಕ್ಕೆ ಇಳಿಯುವುದೇ ಒಟ್ಟು ಚಿತ್ರದ ಕಥಾ ಹಂದರ.

ಕಥಾ ನಾಯಕ ‘ಪೃಥ್ವಿ’ ಇಲ್ಲಿ ದೈವ ಕೊರಗಜ್ಜನ ಭಕ್ತ. ಶಾಲೆಗೆ ಹೋಗುವ ಸಣ್ಣ ಪ್ರಾಯದಲ್ಲಿ ಮತ್ತೊಬ್ಬ ಶಾಲಾ ಹುಡುಗಿಗೆ ಪ್ರಪೋಸ್ ಮಾಡಿದ ಕಾರಣಕ್ಕೆ ರಾದ್ಧಾಂತವಾಗಿ ಕೊನೆಗೆ ಪೃಥ್ವಿಯ ಮನೆಯವರು ಆತನನ್ನು ದೂರದ ಮುಂಬೈಯಲ್ಲಿರುವ ಮಾವನ ಮನೆಗೆ ಕಳುಹಿಸುತ್ತಾರೆ. ಅಲ್ಲೇ ಬೆಳೆದು ದೊಡ್ಡವನಾಗುವ ಪೃಥ್ವಿ ಅಲ್ಲೇ ಉದ್ಯೋಗಕ್ಕೆ ಸೇರಿಕೊಳ್ಳುತ್ತಾನೆ. ಮುಂದೆ ಊರಿನಲ್ಲಿ ನಡೆಯುವ ತನ್ನ ಆರಾಧ್ಯ ದೈವ ಕೊರಗಜ್ಜನ ಕೋಲದಲ್ಲಿ ಭಾಗಿಯಾಗುವ ಸಲುವಾಗಿ ಎರಡು ತಿಂಗಳ ರಜೆ ಪಡೆದು ಊರಿಗೆ ಬರುತ್ತಾನೆ. ಖಳನಾಯಕ ಗೋಪಿನಾಥ್ ಭಟ್ ಮಾರ್ಕೆಟ್ ಒಂದರಲ್ಲಿ ತನ್ನ ದರ್ಪ ತೋರಿಸುತ್ತಿರುವಾಗ ನಾಯಕನ ಎಂಟ್ರಿಯಾಗುತ್ತದೆ. ಅಲ್ಲಿಂದ ಮುಂದೆ ಖಳನಾಯಕ ಹಾಗು ನಾಯಕನ ನಡುವಿನ ಗುದ್ದಾಟ ಮುಂದುವರೆಯುತ್ತದೆ..

ಚಿತ್ರ ಆರಂಭದಿಂದ ಕೊನೆಯವರೆಗೂ ಎಲ್ಲಿಯೂ ಆಸಕ್ತಿಯನ್ನು ಮೂಡಿಸುವುದಿಲ್ಲ. ಯಾವುದೇ ರೋಚಕತೆ ಸೃಷ್ಟಿಸುವ ಸನ್ನಿವೇಶಗಳಿಲ್ಲ. ಮುಂದೇನಾಗಬಹುದು ಅನ್ನುವ ಕುತೂಹಲವಿಲ್ಲ. ಹಾಸ್ಯ ದಿಗ್ಗಜರ ಹಾಸ್ಯ ಜುಗಲ್ಬಂದಿಗಳಂತೂ ಥೇಟ್ ನಾಟಕ ನೋಡಿದಂತೆ ಅನಿಸುತ್ತದೆ. ಒಟ್ಟಿನಲ್ಲಿ ಹೇಳಬೇಕೆಂದರೆ ಯಾವುದೇ ಅಂಕು ಡೊಂಕು ತಿರುವುಗಳಿಲ್ಲದೆ ನೇರವಾಗಿ ಸಾಗುವ ಚಿತ್ರ ಬರ್ಸ.

ಹಿಂದಿನ ಚಂಡಿಕೋರಿಯಲ್ಲಿ ತನ್ನ ಅಭಿನಯ ಪ್ರತಿಭೆಯನ್ನು ಸಂಪೂರ್ಣ ಹೊರ ತೆಗೆದಿದ್ದ ನಾಯಕ ಅರ್ಜುನ್ ಕಾಪಿಕಾಡ್ ಇಲ್ಲಿ ಮಾತ್ರ ತೀರಾ ಸಾಮಾನ್ಯ ಅನಿಸಿಬಿಡುತ್ತಾರೆ. ‘ತುಳುನಾಡ ಚಕ್ರವರ್ತಿ’ ಎಂಬ ಬಿರುದನ್ನು ಹೊತ್ತ ಕಾರಣಕ್ಕೋ ಏನೋ ಚಿತ್ರದಲ್ಲಿ ನಾಯಕನನ್ನು ಸ್ವಲ್ಪ ಹೆಚ್ಚೇ ಎಂಬಂತೆ ವೈಭವೀಕರಿಸಲಾಗಿದೆ.  ಮೊದಲ ಬಾರಿಗೆ ಬೆಳ್ಳಿತೆರೆ ಪ್ರವೇಶಿಸಿರುವ ನಾಯಕಿ ಕ್ಷಮಾ ಶೆಟ್ಟಿ ಯಾವುದೇ ಭರವಸೆ ಮೂಡಿಸುವುದಿಲ್ಲ. ದೇವದಾಸ್ ಕಾಪಿಕಾಡ್, ಭೋಜರಾಜ ವಾಮಂಜೂರು, ಸುಂದರ್ ರೈ ಮಂದಾರ ಹಾಸ್ಯ ನಾಟಕೀಯ ರಂಗಿನಿಂದಾಗಿ ಹಿತವೆನಿಸುವುದಿಲ್ಲ. ಖಳನಾಯಕರಲ್ಲಿ ಒಬ್ಬರಾದ ಅನುರಾಗ್ ಪಾತ್ರದಲ್ಲಿನ ಆವೇಶ ತೀರಾ ಅತಿಯಾಯಿತು ಅನಿಸುತ್ತದೆ. ಇದ್ದುದರಲ್ಲಿ ಅರವಿಂದ್ ಬೋಳಾರ್, ಸತೀಶ್ ಬಂದಲೆ ಹಾಗು ಉಮೇಶ್ ಮಿಜಾರ್ ಇಷ್ಟವಾಗುತ್ತಾರೆ. ಉಳಿದಂತೆ ಸಂತೋಷ್ ಶೆಟ್ಟಿ, ಲಕ್ಷ್ಮಣ್ ಮಲ್ಲೂರ್, ಮನಿಷಾ, ಚೇತನ್ ರೈ ಮಾಣಿ ನೈಜ್ಯ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ. ಮುಖ್ಯ ಖಳನಾಯಕ ಗೋಪಿನಾಥ್ ಭಟ್ ವಿಚಿತ್ರ ಮ್ಯಾನರಿಸಂ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡಿದರೂ ಅಲ್ಲೂ ನಾಟಕೀಯ ಛಾಯೆ ಆವರಿಸಿದಂತಾಗಿ ಬೇಸರ ಮೂಡಿಸುತ್ತಾರೆ.

ಚಿತ್ರಕತೆ ಸಂಭಾಷಣೆಯಲ್ಲಿ ಹಿಡಿತವಿಲ್ಲದಿದ್ದರೂ ತಾಂತ್ರಿಕವಾಗಿ ಮಾತ್ರ ಚಿತ್ರ ಶ್ರೀಮಂತಿಕೆಯಿಂದ ಕೂಡಿದೆ. ಪಿ ಎಲ್ ರವಿ ಛಾಯಾಗ್ರಹಣ, ಸುಜಿತ್ ನಾಯಕ್ ಸಂಕಲನ, ಮಣಿಕಾಂತ್ ಕದ್ರಿ ಹಿನ್ನಲೆ ಸಂಗೀತ ಚಿತ್ರದ ಪ್ಲಸ್ ಅಂಶಗಳು. ದೇವದಾಸ್ ಕಾಪಿಕಾಡ್ ಸಂಗೀತದಲ್ಲಿ ಎರಡು ಹಾಡುಗಳು ಕೇಳಲು ಇಷ್ಟವಾಗುತ್ತವೆ. ಇನ್ನು ಚಿತ್ರದ ಸಾಹಸಕ್ಕೆ ವಾವ್ ಅನ್ನಲೇಬೇಕು. ಮಾಸ್ ಮಾದ ನಿರ್ದೇಶನದಲ್ಲಿ ಸಾಹಸ ದೃಶ್ಯಗಳು ಕಣ್ಣು ಮಿಟುಕಿಸದೆ ನೋಡುವಂತೆ ಮಾಡುತ್ತವೆ. ತಾಂತ್ರಿಕವಾಗಿ ಬರ್ಸ ಅದ್ಧೂರಿಯಾಗಿ ಮೂಡಿ ಬಂದಿದ್ದು ಚಿತ್ರದ ತಿರುಳನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿದ್ದರೆ ಖಂಡಿತಾ ಒಂದು ಒಳ್ಳೆಯ ಚಿತ್ರವಾಗುತ್ತಿತ್ತು.  

ಒಟ್ಟಿನಲ್ಲಿ ತೀರಾ ನಿರೀಕ್ಷೆ ಹುಟ್ಟಿಸಿ ತೆರೆಗೆ ಬಂದ ‘ಬರ್ಸ’ ಮನೋರಂಜನೆಯ ಮಳೆಯನ್ನೇನು ಹೊತ್ತು ತಂದಿಲ್ಲವಾದರೂ ಹೈ ವೋಲ್ಟೇಜ್ ಆಕ್ಷನ್ ದೃಶ್ಯಗಳಿಂದಾಗಿ ‘ತುಳುನಾಡ ಚಕ್ರವರ್ತಿ’ಯ ಅಭಿಮಾನಿಗಳಿಗೆ ಒಂದಷ್ಟು ಖುಷಿ ಕೊಡಬಹುದು.

Facebook ಕಾಮೆಂಟ್ಸ್

ಲೇಖಕರ ಕುರಿತು

Ashwin Amin Bantwal

Self Employed & Journalist

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!