ಸಿನಿಮಾ - ಕ್ರೀಡೆ

ಚಾರಿತ್ರ್ಯ,ನೈತಿಕತೆಗಳ ಅರ್ಥವನ್ನು ವಿಶ್ಲೇಷಿಸುವ ‘ಪಿಂಕ್’


“The word `NO’ is not just a word. It itself is a sentence.NO means NO.it has a wide meaning.” ಈ ವಾಕ್ಯವನ್ನು ಹೇಳುವುದು ‘ಪಿಂಕ್’ ಸಿನಿಮಾದಲ್ಲಿ ಹಿರಿಯ ವಕೀಲ ದೀಪಕ್ ಸೆಹಗಲ್ ಪಾತ್ರ ಮಾಡಿರುವ ಅಮಿತಾಭ್ ಬಚ್ಚನ್. ಈ ಮಾತನ್ನು ಯಾವ ಸಂದರ್ಭದಲ್ಲಿ ಯಾಕಾಗಿ ಹೇಳಿದರು ಎಂಬುದಕ್ಕೆ ಉತ್ತರ ಶೂಜಿತ್ ಸಿರ್ಕಾರ್’ರ ‘ಪಿಂಕ್’ ಸಿನಿಮಾದಲ್ಲಿದೆ.ವಿಕ್ಕಿ ಡೋನರ್,ಮದ್ರಾಸ್ ಕೆಫೆ,ಪೀಕು ಥರದ ಸೃಜನಶೀಲ ಚಿತ್ರಗಳನ್ನು ನಿರ್ದೇಶಿಸಿದ್ದ ಶೂಜಿತ್ ಈ ಬಾರಿ ಪಿಂಕ್ ಚಿತ್ರಕ್ಕೆ ಉತ್ತಮ ಕಥೆ ಬರೆದು ಕೊಟ್ಟಿದ್ದಾರೆ. ಅವರ ಕಥೆಯನ್ನು ಅನಿರುದ್ಧ್ ರಾಯ್ ಚೌಧರಿ ಅತ್ಯುತ್ತಮವಾಗಿ ನಿರ್ದೇಶಿಸಿದ್ದಾರೆ.

ಮಹಾನಗರಗಳಲ್ಲಿ ಕೆಲಸದಲ್ಲಿರುವ ಹೆಣ್ಣು ಮಕ್ಕಳು ತಾವೊಬ್ಬರೇ,ಅಥವಾ ತಮ್ಮ ಕೆಲವು ಸ್ನೇಹಿತೆಯರೊಂದಿಗೆ ಸೇರಿ ಅಪಾರ್ಟ್ ಮೆಂಟ್’ಗಳಲ್ಲಿ ವಾಸಿಸುವುದು ಈಗ ಸಾಮಾನ್ಯ.ಅವರು ನಗರ ಜೀವನಕ್ಕೆ ಹೊಂದಿಕೊಂಡಿರುತ್ತಾರೆ. ‘ಕರಾಗ್ರೇ ವಸತೇ ಲಕ್ಷ್ಮಿ’ ಎಂದು ದೇವರನ್ನು ನೆನೆದು ದಿನ ಆರಂಭಿಸುತ್ತಲೇ ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ಪಾಪ್ ಮ್ಯೂಸಿಕ್ ಕೇಳುತ್ತ ಜಾಗಿಂಗ್ ಹೋಗುತ್ತಾರೆ.ತಮ್ಮ ತಾಯಿ ಮಾಡಲು ಕಲಿಸಿದ ಚಿತ್ರಾನ್ನವನ್ನು ತಿನ್ನುತ್ತಲೇ ಪಿಜ್ಜಾ,ಬರ್ಗರ್ ಆರ್ಡರ್ ಮಾಡುತ್ತಾರೆ.ವಾರಕ್ಕೊಮ್ಮೆ ದೇವಸ್ಥಾನದ ಜೊತೆಗೇ ಪಬ್,ಮಾಲ್’ಗಳಲ್ಲಿ ಸುತ್ತಾಡುತ್ತಾರೆ.ಬರುವ ಸಂಬಳದಲ್ಲಿ ಸ್ವಲ್ಪವನ್ನು ಮನೆಗೆ ಕಳುಹಿಸುತ್ತಲೇ ಉಳಿದ ಹಣವನ್ನು ತಮಗೆ ಬೇಕಾದ ಹಾಗೆ ಖರ್ಚು ಮಾಡುತ್ತಾರೆ.ತಮಗಿಷ್ಟವಾದ ಬಟ್ಟೆ ಧರಿಸುತ್ತಾರೆ.ಕೆಲವರು ಆಗಾಗ ಒಂದಷ್ಟು ಡ್ರಿಂಕ್ಸ್ ಕೂಡಾ ಮಾಡುತ್ತಾರೆ.ಭಾರತೀಯ ಸಂಸ್ಕೃತಿಯನ್ನು ಪಾಲಿಸುತ್ತಲೇ ಪಾಶ್ಚಾತ್ಯರನ್ನೂ ಅನುಕರಿಸುತ್ತಾರೆ.ಆದರೆ ಬಹುತೇಕ ಜನರಿಗೆ ಅವರು ಮಾಡುವ ಮೋಜು ಮಸ್ತಿ,ಅವರು ಧರಿಸುವ ಬಟ್ಟೆ ಕಣ್ಣಿಗೆ ಕಾಣುತ್ತದೇ ವಿನ: ಅವರ ಸಂಸ್ಕೃತಿಯನ್ನು ಮರೆಯದೇ ಅವರು ಪಾಲಿಸುತ್ತಿರುವುದು ಕಾಣುವುದಿಲ್ಲ.

“ಏನ್ ಸಾರ್ ನಿಮ್ಮ ಮಗಳು ಬೆಂಗಳೂರಿನಲ್ಲಿ ಒಬ್ಬಳೇ ಅಪಾರ್ಟ್ ಮೆಂಟ್’ನಲ್ಲಿ ವಾಸವಾಗಿದ್ದಾಳಂತೆ.ಪಬ್,ಡಿಸ್ಕೋತೆಕ್ ಅಂತೆಲ್ಲ ಹೋಗುತ್ತಾಳಂತೆ.ರಾತ್ರಿ ತಡವಾಗಿ ಮನೆಗೆ ಬರುತ್ತಾಳಂತೆ.ಫೇಸ್ಬುಕ್’ನಲ್ಲಿ ಯಾರ್ಯಾರೋ ಹುಡುಗರ ಜೊತೆ ಸ್ಕರ್ಟ್,ಜೀನ್ಸ್ ಪ್ಯಾಂಟ್ ಹಾಕಿಕೊಂಡು ನಿಂತಿರುವ ಫೋಟೋಗಳನ್ನು ಅಪ್ಲೋಡ್ ಮಾಡ್ತಾಳಂತೆ.ಹೀಗಾದರೆ ಹೇಗೆ?ಸ್ವಲ್ಪ ಹೆಣ್ಣು ಮಕ್ಕಳ ಥರ ಇರು ಅಂತ ಬೈದು ಬುದ್ಧಿ ಹೇಳಿ ಸಾರ್” ಅಂತ ಸಲಹೆ ಕೊಡುವ ಮಂದಿ ನಮ್ಮಲ್ಲಿ ಬಹಳಷ್ಟು ಜನರಿದ್ದಾರೆ. ಆ ಹೆಣ್ಣು ಮಗಳು ಮಹಾನಗರದಲ್ಲಿ ಕಷ್ಟ ಪಟ್ಟು ದುಡಿದು ಮನೆಗೆ ಆಧಾರವಾಗಿರುವುದು ಮಾತ್ರ ಇವರ ಕಿವಿಗೆ ಬೀಳುವುದೇಇಲ್ಲ.ನಮ್ಮಲ್ಲಿ ಇನ್ನೂ ಹೆಣ್ಣಿನ ಮಾನ,ಶೀಲವನ್ನು ಅವಳು ಧರಿಸುವ ಬಟ್ಟೆಯಿಂದ ಅಳೆಯಲಾಗುತ್ತದೆ.ಅವಳು ಪಬ್,ಮಾಲ್’ಗಳಲ್ಲಿ ಸ್ಕರ್ಟ್,ಶಾರ್ಟ್ಸ್ ಹಾಕಿಕೊಂಡು ಓಡಾಡಬಾರದು,ಹುಡುಗರ ಜೊತೆ ಜಾಸ್ತಿ ಬೆರೆಯಬಾರದು ಎಂದು ಆಗ್ರಹಿಸುವವರು ಬಹುತೇಕ ಸುಶಿಕ್ಷಿತ ವರ್ಗದ ಜನರೇ ಆಗಿರುತ್ತಾರೆ.ಸ್ಲೀವ್ ಲೆಸ್ ಟಾಪ್,ಸ್ಕರ್ಟ್ ಧರಿಸಿರುವ ಹೆಣ್ಣು,ಡ್ರಿಂಕ್ಸ್ ಮಾಡುತ್ತಿರುವ ಹೆಣ್ಣನ್ನು ನೋಡಿದ ತಕ್ಷಣ ಬಹಳಷ್ಟು ಜನರು ಇವಳು ‘ಆ ಥರ’ದವಳು ಎಂಬ ನಿರ್ಧಾರಕ್ಕೆ ಬಂದು ಬಿಡುತ್ತಾರೆ.ಅವಳ ಶೀಲದ ಬಗ್ಗೆ ಸಂದೇಹ ಪಡುತ್ತಾರೆ.ಇವಳು ವರ್ಜಿನ್ ಹೌದೋ ಅಲ್ಲವೋ ಅಂತ ಆಲೋಚಿಸುವ ಜನರೂ ಇದ್ದಾರೆ.

ಇದೆಲ್ಲ ಪೀಠಿಕೆ ಏಕೆ ಹೇಳಬೇಕಾಯಿತೆಂದರೆ ‘ಪಿಂಕ್’ ಎಂಬ ಹಿಂದಿ ಸಿನಿಮಾ ಸ್ತ್ರೀ ಚಾರಿತ್ರ್ಯ,ನಡತೆಯ ಬಗ್ಗೆ ನಾವು ಎಷ್ಟು ಕೀಳಾಗಿ ವರ್ತಿಸುತ್ತೇವೆ,ಎಷ್ಟು ಸುಲಭದಲ್ಲಿ ಒಂದು ಹೆಣ್ಣಿನ ಚಾರಿತ್ರ್ಯದ ಸರ್ಟಿಫಿಕೇಟ್ ಕೊಟ್ಟು ಬಿಡುತ್ತೇವೆ ಆ ಮೂಲಕ ನಾವಿನ್ನೂ ನೈತಿಕವಾಗಿ ಎಷ್ಟು ಮೂಢರಾಗಿದ್ದೇವೆ ಎಂಬುದನ್ನು ವಿಶ್ಲೇಷಿಸುತ್ತದೆ.ಒಬ್ಬ ಮಹಿಳೆ ಧರಿಸುವ ಬಟ್ಟೆಯನ್ನು ನೋಡಿ ಅವಳ ಬಗ್ಗೆ ಕೀಳಾಗಿ ಮಾತಾಡಬೇಡಿ,ಅವಳನ್ನು ನೋಡುವ ನಿಮ್ಮ ನೋಟವನ್ನೇ ಬದಲಿಸಿಕೊಳ್ಳಿ,ನಿಮ್ಮ ಲೋಲುಪತೆಗೆ ಸ್ತ್ರೀಯನ್ನು ದೂಷಿಸಬೇಡಿ ಎನ್ನುತ್ತದೆ ‘ಪಿಂಕ್’.

ಮೀನಲ್ ಅರೋರ(ತಾಪ್ಸಿ ಪನ್ನು),ಫಲಾಕ್ ಅಲಿ(ಕೀರ್ತಿ ಕುಲ್ಹಾರಿ) ಮತ್ತು ಆಂಡ್ರಿಯಾ ಟ್ರಿಯಾಂಗ್(ಆಂಡ್ರಿಯಾ) ದಿಲ್ಲಿಯ ಅಪಾರ್ಟ್’ಮೆಂಟ್ ಒಂದರಲ್ಲಿ ವಾಸಿಸುತ್ತಿರುತ್ತಾರೆ.ಮೂವರೂ ಬೇರೆ ಬೇರೆ ಕಡೆ ಕೆಲಸದಲ್ಲಿರುತ್ತಾರೆ.ಮೋಜು ಮಸ್ತಿ ಮಾಡುತ್ತ ಕಾಲ ಕಳೆಯುತ್ತಿರುತ್ತಾರೆ.ರೆಸಾರ್ಟ್ ಒಂದಕ್ಕೆ ತಮ್ಮ ಸ್ನೇಹಿತರ ಜೊತೆ ಈ ಮೂವರೂ ತೆರಳಿದಾಗ ಅಲ್ಲಿ ಸ್ವಲ್ಪ ಗಲಾಟೆಯಾಗಿ ಮೀನಲ್ ಅವಳ ಗೆಳೆಯ ರಾಜ್ ವೀರ್(ಅಂಗದ್ ಬೇಡಿ) ಮೇಲೆ ಗ್ಲಾಸ್’ನಿಂದ ಹಲ್ಲೆ ಮಾಡುತ್ತಾಳೆ.ಈ ಹುಡುಗಿಯರು ಸೆಕ್ಸ್’ಗಾಗಿ ನಮ್ಮ ಜೊತೆ ರೇಟ್ ಕುದುರಿಸಿದ್ದರು.ಹಣದ ವಿಷಯದಲ್ಲಿ ಹೊಂದಾಣಿಕೆಯಾಗದೇ ಇದ್ದಾಗ ನನ್ನ ಮೇಲೆ ಹಲ್ಲೆ ಮಾಡಿದರು ಎಂದು ರಾಜ್ ವೀರ್ ಆರೋಪಿಸಿದರೆ, ರಾಜ್ ವೀರ್ ಮತ್ತವನ ಇಬ್ಬರು ಸಂಗಡಿಗರು ನಮ್ಮ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದರು ಎಂದು ಮೀನಲ್ ಮತ್ತವಳ ಗೆಳತಿಯರು ಆರೋಪಿಸುತ್ತಾರೆ.ಇಬ್ಬರೂ ದೂರು ದಾಖಲಿಸುತ್ತಾರೆ.ಆದರೆ ರಾಜಕೀಯ ಪ್ರಭಾವದಿಂದಾಗಿ ಮೀನಲ್ ಮಾತ್ರ ಜೈಲಿಗೆ ಹೋಗುತ್ತಾಳೆ.

ತನಗಿರುವ ಬೈಪೋಲಾರ್ ಡಿಸಾರ್ಡರ್ ಖಾಯಿಲೆ ಮತ್ತು  ಹಲವು ವರ್ಷಗಳಿಂದ ಆಸ್ಪತ್ರೆಯಲ್ಲಿರುವ ಪತ್ನಿಯ ಆರೈಕೆಗಾಗಿ ಹಿರಿಯ ವಕೀಲ ದೀಪಕ್ ಸೆಹಗಲ್(ಅಮಿತಾಭ್ ಬಚ್ಚನ್) ಸ್ವಯಂ ನಿವೃತಿ ಪಡೆದಿರುತ್ತಾನೆ.ತಾನು ವಾಸವಾಗಿರುವ ಅಪಾರ್ಟ್’ಮೆಂಟ್’ನಲ್ಲೇ ಇರುವ ಮೀನಲ್ ಮತ್ತವಳ ಸ್ನೇಹಿತೆಯರು ತೊಂದರೆಗೀಡಾಗಿದ್ದನ್ನು ನೋಡಿ ಈ ಕೇಸನ್ನು ನಡೆಸಲು ಸ್ವಯಂಪ್ರೇರಿತನಾಗಿ ಮುಂದೆ ಬರುತ್ತಾನೆ.ಎದುರಾಳಿ ವಕೀಲ ಪ್ರಶಾಂತ್(ಪೀಯುಷ್ ಮಿಶ್ರಾ) ಹುಡುಗಿಯರ ಚಾರಿತ್ರ್ಯದ ಬಗ್ಗೆಯೇ ಪ್ರತಿಕ್ಷಣವೂ ಪ್ರಶ್ನೆಗಳನ್ನೆತ್ತುತ್ತ ಅವರ ತೇಜೋವಧೆ ಮಾಡುತ್ತಾನೆ.ಕೊನೆಗೆ ವಾದದಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದನ್ನು ನಾವು ತೆರೆಯ ಮೇಲೆ ನೋಡಬೇಕು.

ಅಮಿತಾಭ್ ಬಚ್ಚನ್ ವಯಸ್ಸಾದಂತೆ ಮತ್ತೆ ಮತ್ತೆ ಅದ್ಭುತವಾಗಿ ನಟಿಸುತ್ತಿದ್ದಾರೆ. 73ರ ಹರೆಯದಲ್ಲೂ ಅವರ ಅಸ್ಖಲಿತ ಮಾತುಗಳು,ಮುಖದ ಭಾವನೆಗಳು,ಆಂಗಿಕ ಅಭಿನಯದಿಂದ ಪ್ರಶಂಸೆಗೆ ಪಾತ್ರರಾಗುತ್ತಾರೆ.”Prosecution has accused that you are a women of a questionable character” ಎಂದು ಸಿಂಹಘರ್ಜನೆಯ ಧ್ವನಿಯಲ್ಲಿ ಹೇಳುವಾಗ ಇಡೀ ನ್ಯಾಯಾಲಯವೇ ಕಂಪಿಸುತ್ತದೆ.ಹಿಂದೆ ಅವರನ್ನು ಅನೇಕ ಪಾತ್ರಗಳಲ್ಲಿ ನೋಡಿ ಮೆಚ್ಚಿದವರಿಗೆ ಹಿರಿಯ ವಕೀಲನ ಪಾತ್ರದ ಬಿಗ್ ಬಿ ಮತ್ತೊಮ್ಮೆ ಇಷ್ಟವಾಗುತ್ತಾರೆ.ಹೆಣ್ಣಿನ ಬಟ್ಟೆ,ಅವಳ ಚೆಲ್ಲುಚೆಲ್ಲಾದ ನಡವಳಿಕೆ,ಅವಳು ಕುಡಿಯುವ ಡ್ರಿಂಕ್ಸ್ ನೋಡಿ ಅವಳ ಚಾರಿತ್ರ್ಯವನ್ನು ನಿರ್ಧರಿಸಬೇಡಿ ಎನ್ನುವುದಕ್ಕೆ ಅಮಿತಾಭ್ ಕೋರ್ಟ್’ನಲ್ಲಿ ಕೊಡುವ ವಿಷ್ಲೇಷಣೆ ಮನಮುಟ್ಟುತ್ತದೆ.

ಅಮಿತಾಭ್ ಬಚ್ಚನ್ ಒಬ್ಬರೇ ಅಲ್ಲ ಚಿತ್ರದಲ್ಲಿ ಎಲ್ಲರೂ ಅದ್ಭುತವಾಗೇ ನಟಿಸಿದ್ದಾರೆ.ತಾಪ್ಸಿ ಪನ್ನು,ಕೀರ್ತಿ ಕುಲ್ಹಾರಿ,ಆಂಡ್ರಿಯಾ,ಅಂಗದ್ ಬೇಡಿ, ಜಡ್ಜ್ ಪಾತ್ರ ಮಾಡಿರುವ ಧೃತಿಮಾನ್ ಚಟರ್ಜಿ ಇವರೆಲ್ಲರ ನಟನೆಯಲ್ಲಿ ಯಾವ ನೆಗೆಟಿವ್ ಅಂಶವನ್ನೂ ಹುಡುಕಲು ಸಾಧ್ಯವಿಲ್ಲ.ಅದರಲ್ಲೂ ಎದುರಾಳಿ ವಕೀಲನ ಪಾತ್ರದಲ್ಲಿ ಅಮಿತಾಭ್’ಗೆ ಸಮನಾಗಿ ನಟಿಸಿರುವ ಪೀಯುಷ್ ಮಿಶ್ರಾ ಅಭಿನಯವನ್ನೂ ಮೆಚ್ಚಿಕೊಳ್ಳದೇ ಇರುವಂತಿಲ್ಲ.ಶೂಜಿತ್ ಸಿರ್ಕಾರ್ ಜೊತೆ ಸೇರಿಕೊಂಡು ತಾವು ಬರೆದ ಕಥೆಗೆ ಉತ್ತಮ ಚಿತ್ರಕಥೆಯನ್ನು ರಿತೇಶ್ ಶಾ ಹೆಣೆದಿದ್ದಾರೆ.ಕೋರ್ಟ್ ದೃಶ್ಯಗಳಂತೂ ಸೊಗಸಾಗಿ ಮೂಡಿ ಬಂದಿವೆ.

ಒಂದು ಗಂಭೀರ ಚಿತ್ರಕ್ಕೆ ಬೇಕಾದ ಹಿನ್ನಲೆ ಸಂಗೀತವೂ ಇಲ್ಲಿ ಹಿತವಾಗಿದೆ.ಅದಕ್ಕಿಂತಲೂ ಆಪ್ತವಾಗುವುದು ಆಗಾಗ ಏನೂ ಸದ್ದೇ ಇರದೇ ಪಾತ್ರಗಳು ಭಾವನೆಯನ್ನು ಮಾತ್ರ ವ್ಯಕ್ತಪಡಿಸುವಾಗಿನ ಮೌನ.ಎದುರಾಳಿ ವಕೀಲನ ವಾದಕ್ಕೆ ತನ್ನ ಬಳಿ ಉತ್ತರವಿಲ್ಲದಿದ್ದಾಗ ಅಮಿತಾಭ್ ನ ಅಸಹಾಯಕ ಮೌನ,ಆಸ್ಪತ್ರೆಯಲ್ಲಿರುವ ತನ್ನ ಹೆಂಡತಿಯೊಂದಿಗಿನ ಮೌನ ಸಂಭಾಷಣೆ,ಕೋರ್ಟ್ ನಲ್ಲಿ ಏನೇನೋ ಬಡಾಯಿಸಿ ಬಂದು ಸೋಲೊಪ್ಪಿಕೊಳ್ಳುವ ಭಾವದಲ್ಲಿರುವಂತೆ ರೂಮ್’ನಲ್ಲಿ ಕೂರುವ ಫಾಲಕ್’ಳ ಮೌನ ಇವುಗಳೇ ಸಿನಿಮಾವನ್ನು ಮತ್ತಷ್ಟು ಹತ್ತಿರಕ್ಕೆ ತರುತ್ತವೆ.ಅದರಲ್ಲಿನ ಒದೊಂದು ಪಾತ್ರಗಳು ಆಡುವ ಮಾತೂ ನಮ್ಮನ್ನು ದೀರ್ಘ ಕಾಲ ಚಿಂತನೆಗೆ ಹಚ್ಚುವಂತಿವೆ.

ಹೆಣ್ಣಿನ ಬಗ್ಗೆ ಅವಳ ನಡತೆ,ಚಾರಿತ್ರ್ಯದ ಬಗ್ಗೆ ನಮ್ಮ ನಂಬಿಕೆಯನ್ನು ಆತ್ಮವಿಮರ್ಶೆ ಮಾಡಿಕೊಳ್ಳುವ ಸ್ಥಿತಿಯನ್ನು ಪಿಂಕ್ ತಂದೊಡ್ಡುತ್ತದೆ.ಚಿತ್ರದಲ್ಲಿ ಒಂದೇ ಒಂದು ಹಾಸ್ಯ,ಡ್ಯುಯೆಟ್ ಸಾಂಗ್ ಇಲ್ಲದಿದ್ದರೂ ಇಡೀ ಸಿನಿಮಾ ನಮ್ಮನ್ನು  ಆವರಿಕೊಳ್ಳುತ್ತದೆ.ಹೆಣ್ಣನ್ನು ‘ಆ ಥರ’ ನೋಡುವುದನ್ನು ಯಾವತ್ತು ಬಿಡುತ್ತೀರಿ ಎಂಬ ಗಂಭೀರ ಪ್ರಶ್ನೆಯನ್ನು ‘ಪಿಂಕ್’ ನಮ್ಮ ಮುಂದಿಡುತ್ತದೆ.ಎಲ್ಲರೂ ಒಮ್ಮೆ ನೋಡಬಹುದಾದ ಚಿತ್ರ.

ರೇಟಿಂಗ್ 4*/5

Facebook ಕಾಮೆಂಟ್ಸ್

ಲೇಖಕರ ಕುರಿತು

Lakshmisha J Hegade

ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಓದಿರುವ ವೈದ್ಯ.ಹೆಮ್ಮೆಯ ಕನ್ನಡಿಗ.ದೇಶದ ಶ್ರೀಸಾಮಾನ್ಯ ಪ್ರಜೆಗಳಲ್ಲೊಬ್ಬ.ಕನ್ನಡ ಬ್ಲಾಗರ್.ಇವಿಷ್ಟೇ ನನ್ನ ಪ್ರವರ.ಹೆಚ್ಚು ತಿಳಿಸುವ ಅಗತ್ಯವಿಲ್ಲ.ನನ್ನ ನಿಲುವು,ಸಿದ್ಧಾಂತ,ಮನಸ್ಥಿತಿಯನ್ನು ತಿಳಿಯಲು ಇಲ್ಲಿ ಪ್ರಕಟವಾಗಿರುವ ನನ್ನ ಬರಹಗಳನ್ನು ಓದಿ.ಏನಾದರೂ ಗೊತ್ತಾಗಬಹುದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!