ಸಿನಿಮಾ - ಕ್ರೀಡೆ

ಲವ್, ಲೈಫ್ ಮತ್ತು ರಾಜಕುಮಾರ

ಚಿತ್ರ : ದಬಕ್ ದಬಾ ಐಸಾ (ತುಳು)
ತಾರಾಗಣ : ನವೀನ್ ಪಡೀಲ್, ದೇವದಾಸ್ ಕಾಪಿಕಾಡ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ಶೀತಲ್ ನಾಯಕ್
ನಿರ್ದೇಶನ : ಪ್ರಕಾಶ್ ಪಾಂಡೇಶ್ವರ್
ನಿರ್ಮಾಣ : ಜಯಕಿರಣ ಫಿಲಂಸ್

ಚಿತ್ರ ಆರಂಭವಾದ ಕೆಲ ನಿಮಿಷಗಳಲ್ಲಿ ಬರುವ ಒಂದು ದೃಶ್ಯದಲ್ಲಿ ನಾಯಕ ಪಾತ್ರಧಾರಿ ಪ್ರಯಾಣಿಕರೊಬ್ಬರ ಪರ್ಸ್ ಕದ್ದ ಕಳ್ಳನೊಬ್ಬನನ್ನು ಹಿಡಿದು ಬುದ್ದಿವಾದ ಹೇಳುತ್ತಾನೆ. “ಕಂಡುದ್ ತಿಂದುಂಡ ಬರ್ಕತ್ ಆಪುಂಡಯಾ..” (ಕದ್ದು ತಿಂದರೆ ಶ್ರೇಯ ಬರುವುದೇ?) ಎಂದು. ಬಹುಶಃ ಚಿತ್ರ ಮುಂದುವರೆದಂತೆ ಆ ಮಾತು ಸ್ವತಃ ಚಿತ್ರಕ್ಕೇ ಅನ್ವಯಿಸುವುದೇ ಎಂಬ ಪ್ರಶ್ನೆ ಬರುವುದು ಸಹಜ.

ನೀವು ಮಲಯಾಳಂ ಚಿತ್ರಗಳನ್ನು ನೋಡುವುದಿದ್ದರೆ, ಅದರಲ್ಲೂ 1990ರಲ್ಲಿ ಮಲಯಾಳಂನಲ್ಲಿ ತೆರೆ ಕಂಡ ‘ಪಾವಂ ಪಾವಂ ರಾಜಕುಮಾರನ್’ ಚಿತ್ರ ನೋಡಿದ್ದರೆ ಇದು ನಿಮ್ಮ ಮನದಲ್ಲಿ ಸುಳಿಯದೆ ಇರದು. ಶ್ರೀನಿವಾಸನ್ ಅಭಿನಯದ ಆ ಚಿತ್ರದ ಫ್ರೇಮ್ ಟು ಫ್ರೇಮ್ ಭಟ್ಟಿ ಇಳಿಸಿದ್ದರೂ ನಿರ್ದೇಶಕರು ಎಲ್ಲೂ ಇದು ರಿಮೇಕ್ ಚಿತ್ರ ಎಂದು ಹೇಳಿಕೊಂಡಿಲ್ಲ. ಟೈಟಲ್ ಕಾರ್ಡಿನಲ್ಲಿ ‘ಕತೆ’ಯನ್ನು ಕೂಡ ನಿರ್ದೇಶಕರು ತನ್ನ ಹೆಸರಿನಡಿ ಸೇರಿಸಿರುವುದು ವಿಪರ್ಯಾಸ. ಚಿತ್ರದ ನಾಲ್ವರು ಪ್ರಮುಖ ಪಾತ್ರಧಾರಿಗಳ ವೃತ್ತಿಯನ್ನು ಬದಲಾಯಿಸಿದ್ದು ಹಾಗು ಕ್ಲೈಮ್ಯಾಕ್ಸ್’ನಲ್ಲಿ ಪೊಲೀಸ್ ಸ್ಟೇಷನ್ ದೃಶ್ಯವನ್ನು ಸೇರಿಸಿದ್ದು ಮಾತ್ರ ಇಲ್ಲಿ ಹೊಸದು. ಉಳಿದಂತೆ ಅದೇ ರಾಜಕುಮಾರ… ಅದೇನೇ ಇರಲಿ, ಈ ‘ಕದ್ದ ಮಾಲು’ ಎಂಬ ಅಂಶವನ್ನು ಬದಿಗಿಟ್ಟು ನೋಡಿದಾಗ ಚಿತ್ರ ಖಂಡಿತ ಒಮ್ಮೆ ಇಷ್ಟವೆನಿಸುತ್ತದೆ. ಅದರ ಎಲ್ಲಾ ಕ್ರೆಡಿಟ್ ಸಲ್ಲುವುದು ಮೂಲ ಕತೆ ಹಾಗು ಚಿತ್ರಕಥೆಗೆ. ಕತೆ ಹಳೆಯದಾದರೂ ಸರ್ವ ಕಾಲಕ್ಕೂ ಸಲ್ಲುವುದು ಅದರ ವಿಶೇಷತೆಗೆ ಸಾಕ್ಷಿ.

ನವೀನ್ , ದೇವು, ಭೋಜ, ಅರವಿಂದ್ ನಾಲ್ವರು ಒಂದೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಪ್ರಾಣ ಸ್ನೇಹಿತರು. ವೃತ್ತಿಯಲ್ಲಿ ನಾಲ್ವರೂ ಬಸ್ ನೌಕರರು. ಹಾಗಿರುವಾಗ ನವೀನನ (ಪಡೀಲ್) ಅತಿಯಾದ ಜಿಪುಣತನ ಇತರ ಮೂವರಿಗೆ ಕಸಿವಿಸಿ ಉಂಟು ಮಾಡುತ್ತದೆ. ಎಲ್ಲಿಯವರೆಗೆ ಎಂದರೆ ನವೀನನನ್ನು ಮನೆಯಿಂದ ಹೊರ ಹೋಗುವಂತೆ ಹೇಳುವವರೆಗೆ.. ಹಾಗಿರುವಾಗ ನವೀನನಿಗೆ ಜಯಕಿರಣ ಪತ್ರಿಕಾ ಕಚೇರಿಯಲ್ಲಿ ಕೆಲಸ ಮಾಡುವ ಸುಂದರ ಹುಡುಗಿಯೊಬ್ಬಳಿಂದ ಸರಣಿ ಪ್ರೇಮ ಪತ್ರ ಬರಲು ಆರಂಭವಾಗುತ್ತದೆ. ವಯಸ್ಸು 40 ಆದರೂ ಮದುವೆ ಆಗದ ಚಿಂತೆಯಲ್ಲಿ ಮುಳುಗಿದ್ದವನಿಗೆ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಷ್ಟು ಖುಷಿಯಾಗುತ್ತದೆ.. ಮುಂದೇನಾಗುತ್ತದೆ ? ನಿಜವಾಗಿಯೂ ಆಕೆ ಪತ್ರ ಬರೆದಿರುತ್ತಾಳಾ? ಇಲ್ಲವೆಂದಾದಲ್ಲಿ ಯಾರು ಬರೆದಿದ್ದು ? ಇವಕ್ಕೆಲ್ಲ ಚಿತ್ರ ನೋಡಿಯೇ ಉತ್ತರ ಕಾಣಬೇಕು.

ನಿರ್ದೇಶಕ ಪ್ರಕಾಶ್ ಪಾಂಡೇಶ್ವರ್ ಮೊದಲ ಬಾರಿ ನಿರ್ದೇಶಿಸಿದ ಚಿತ್ರವಾದರೂ ತಂಡ ಪ್ರಯತ್ನದ ಫಲವಾಗಿ ಹೆಚ್ಚು ತಪ್ಪುಗಳೇನು ಕಂಡು ಬರುವುದಿಲ್ಲ. ನಕಲು ಮಾಡಿದ ಕಾರಣ ಅವರು ಇಲ್ಲಿ ಸೇಫ್ !! ಆದರೂ ನೋಡುವವರಿಗೆ ಇನ್ನಷ್ಟು ಪಕ್ವವಾಗಿ ‘ನಕಲು’ ಮಾಡಬಹುದಿತ್ತು ಅನ್ನಿಸಿದರೂ ಅನಿಸಬಹುದು. ಅಲ್ಲಲ್ಲಿ ಕಂಟಿನ್ಯೂಟಿ ಮಿಸ್ ಆಗಿರುವುದು ನಿರ್ದೇಶಕರ ಗಮನಕ್ಕೆ ಬಂದಂತಿಲ್ಲ.. ನೀರಸ ಕ್ಲೈಮ್ಯಾಕ್ಸ್ ನಿರ್ದೇಶನದ ಮತ್ತೊಂದು ಡ್ರಾ ಬ್ಯಾಕ್’ಗಳಲ್ಲಿ ಒಂದು. ಅಂತೆಯೇ ಪ್ರಮುಖ ನಟರುಗಳನ್ನು ಬಿಟ್ಟು ಇನ್ನುಳಿದವರ ಬಳಿ ಅಭಿನಯ ತೆಗೆಸುವಲ್ಲಿ ಎಡವಿರುವುದು ಎದ್ದು ಕಾಣುತ್ತದೆ.

ಇನ್ನು ತಾಂತ್ರಿಕವಾಗಿ ‘ದಬಕ್ ದಬ..’ ಈ ಹಿಂದಿನ ಚಾಲಿಪೋಲಿಲುವಿಗಿಂತ ಒಂದು ಕೈ ಮೇಲೆ ಎಂದು ಹೇಳಬಹುದು. ಪಿ.ಸಿ ಮೋಹನನ್ ಸಂಕಲನ ಅದ್ಭುತವಾಗಿ ಮೂಡಿ ಬಂದಿದ್ದರೆ, ರೀ ರೆಕಾರ್ಡಿಂಗ್ ಹಾಗು ಹಿನ್ನಲೆ ಸಂಗೀತ ಚಿತ್ರಕ್ಕೆ ಮತ್ತಷ್ಟು ಶಕ್ತಿ ತುಂಬಿದೆ. ಆದರೆ ಉತ್ಪಲ್ ನಾಯನಾರ್ ಛಾಯಾಗ್ರಹಣ ಹೇಳಿಕೊಳ್ಳುವ ಮಟ್ಟದಲ್ಲಿಲ್ಲ.. ಬಹುಶಃ ಎರಡು ಕ್ಯಾಮೆರಾ ಬಳಸಿ ಚಿತ್ರಿಸಿರುವಂತಿದೆ… ಛಾಯಾಗ್ರಹಣ ಬರೀ ಕ್ಲೋಸ್ ಅಪ್ ಹಾಗು ಲಾಂಗ್ ಶಾಟ್’ಗಳಿಗಷ್ಟೇ ಸೀಮಿತಗೊಂಡಿದೆ. ಶಶಿರಾಜ್ ಕಾವೂರು ಅವರ ಸಂಭಾಷಣೆ ನಿರೀಕ್ಷಿಸಿದ ಮಟ್ಟದಲ್ಲಿ ದಾಖಲಾಗದೆ ಇದ್ದರೂ ‘ಪರವಾಗಿಲ್ಲ’ ಎನ್ನಬಹುದು. ಚಿತ್ರ ನೋಡಿದ ಬಳಿಕ ಯಾವುದೇ ಡೈಲಾಗ್ ನೆನಪಲ್ಲಿ ಉಳಿಯದೆ ಇರುವುದು ಇದಕ್ಕೆ ಸಾಕ್ಷಿ. ಚಿತ್ರದ ಒಟ್ಟು ಹಾಡುಗಳಲ್ಲಿ ‘ಕ್ಷಣ ಕ್ಷಣ ನಿನ್ನ’ ಮತ್ತು ‘ಹಾರ್ಟ್’ದ ಬಸ್’ ಹಾಡುಗಳು ಕೇಳುವುದಕ್ಕೂ ನೋಡುವುದಕ್ಕೂ ಹಿತವೆನಿಸುತ್ತದೆ. ಇನ್ನುಳಿದಂತೆ ವಸ್ತ್ರ ವಿನ್ಯಾಸ ಹಾಗು ತಮ್ಮ ಲಕ್ಷ್ಮಣರ ಕಲೆಗೆ ಇಲ್ಲಿ ಫುಲ್ ಮಾರ್ಕ್ಸ್.

ಚಿತ್ರದ ತುಂಬಾ ಆವರಿಸಿರುವ ನವೀನ್ ಪಡೀಲ್’ಗೆ ಇಲ್ಲಿ ಒಬ್ಬ ಮುಗ್ಧ ಪ್ರೇಮಿಯ ಪಾತ್ರ. ಹಾಸ್ಯದ ಟ್ರೆಂಡ್ ನಿಂದ ಸಂಪೂರ್ಣ ಹೊರ ಬಂದ ಭಾವನಾತ್ಮಕ ಪಡೀಲ್’ರನ್ನು ಇಲ್ಲಿ ಕಾಣಬಹುದು. ಇನ್ನುಳಿದಂತೆ ಚಿತ್ರದ ಮುಖ್ಯ ಭೂಮಿಕೆಯಲ್ಲಿರುವ ದೇವದಾಸ್ ಕಾಪಿಕಾಡ್, ಭೋಜರಾಜ್ ವಾಮಂಜೂರು, ಅರವಿಂದ್ ಬೋಳಾರ್, ಸುಂದರ್ ರೈ ಮಂದಾರ ಎಂದಿನಂತೆ ಲವಲವಿಕೆಯಿಂದ ನಟಿಸಿದ್ದಾರೆ. ಅದರಲ್ಲೂ ದೇವದಾಸ್ ಕಾಪಿಕಾಡ್ ತನ್ನ ‘ಕವನೀಯ’ ಸಂಭಾಷಣೆ ಮೂಲಕ ಮುದ ನೀಡುತ್ತಾರೆ. ಚಿತ್ರದ ನಾಯಕಿ ಶೀತಲ್ ನಾಯಕ್’ಗೆ ಇಲ್ಲಿ ನಟನೆಗಿಂತ ಹಾಡುಗಳಲ್ಲಿ ಮೈ ಬಳುಕಿಸೋ ಅವಕಾಶ ಜಾಸ್ತಿ. ಇನ್ನುಳಿದವರದ್ದೆಲ್ಲ ಹಾಗೆ ಬಂದು ಹೀಗೆ ಹೋಗುವ ಪಾತ್ರಗಳು. ನೆನಪಲ್ಲಿ ಉಳಿಯುವುದಿಲ್ಲ.

ಚಿತ್ರದ ಆರಂಭ ಹಾಸ್ಯದ ಲೇಪನದೊಂದಿಗೆ ಸಾಗಿ ಮುಂದೆ ಹೋದಂತೆ ಭಾವನಾತ್ಮಕವಾಗುತ್ತದೆ. ಹಾಗಾಗಿ ಇದನ್ನು ಭಾವನಾತ್ಮಕ ಹಾಸ್ಯ ಚಿತ್ರ ಎನ್ನಬಹುದು. ಚಿತ್ರದಲ್ಲಿ ಬಳಸಿರುವ ಲೊಕೇಶನ್ ಮನಸೂರೆಗೊಳ್ಳುವಂತಿದ್ದರೆ, ಇಲ್ಲಿನ ಸಿಟಿ ಬಸ್ ನೌಕರರ ನಿತ್ಯ ಜೀವನದ ಚಿತ್ರಣ ಅತೀ ಸಹಜವೆಂಬಂತೆ ಮೂಡಿ ಬಂದಿದೆ. ಮೂಲ ಚಿತ್ರವನ್ನು ನೋಡದೆ ಇದ್ದರೆ ಖಂಡಿತ ನೀವೊಮ್ಮೆ ದಬಕ್ ದಬ ಐಸಾವನ್ನು ನೋಡಬೇಕು. ಅಷ್ಟರ ಮಟ್ಟಿಗೆ ಮೋಸವಿಲ್ಲ.

ಅಂದ ಹಾಗೆ ಬೇರೆ ಭಾಷೆಯ ಚಿತ್ರವನ್ನು ರಿಮೇಕ್ ಮಾಡುವಾಗ ಮೂಲ ಕತೆಗಾರರ ಹೆಸರನ್ನು ಟೈಟಲ್ ಕಾರ್ಡಿನಲ್ಲಿ ಹಾಕುವುದು ಸಂಪ್ರದಾಯ. ಆದರೆ ಇದು ಕದ್ದ ಕತೆಗಳಿಗೆ ಅನ್ವಯಿಸುವುದಿಲ್ಲ. !!

Facebook ಕಾಮೆಂಟ್ಸ್

ಲೇಖಕರ ಕುರಿತು

Ashwin Amin Bantwal

Self Employed & Journalist

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!