ಸಿನಿಮಾ - ಕ್ರೀಡೆ

`ರುಸ್ತುಂ’ ಎಂಬ Judicial thriller

ವ್ಯಕ್ತಿಯೊಬ್ಬರ ಜೀವನದಲ್ಲಿ ನಡೆದ ಘಟನೆಯನ್ನು ಆಧರಿಸಿ ಚಲನಚಿತ್ರ ನಿರ್ಮಿಸುವುದು ಅಷ್ಟೊಂದು ಸುಲಭವಲ್ಲ.ಸ್ವಲ್ಪ ಏರುಪೇರಾದರೂ ತನಗೆ ನೋವಾಗುವಂತೆ,ಅವಮಾನವಾಗುವಂತೆ ತೋರಿಸಿದ್ದಾರೆ ಎಂದು  ನಿರ್ದೇಶಕರನ್ನು ಆ ವ್ಯಕ್ತಿ ಬಯ್ಯಬಹುದು.ಹಾಗಂತ ನೇರಾನೇರ ಆ ಘಟನೆಯನ್ನೇ ತೆರೆಯ ಮೇಲೆ ತಂದರೆ ಅದು ವೀಕ್ಷಕರಿಗೆ ರುಚಿಸದೇ ಇರಬಹುದು.ಭಾರತೀಯ ನೌಕಾಪಡೆಯ ನಿವೃತ ಅಧಿಕಾರಿ ಕೆ.ಎಮ್.ನಾನಾವತಿಯವರ ಜೀವನದಲ್ಲಿ ನಡೆದ ಘಟನೆಯನ್ನು ಆಧರಿಸಿದ ಹಿಂದಿ ಸಿನಿಮಾ ‘ರುಸ್ತುಂ’ ತೆರೆಗೆ ತರುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.ದೇಶಪ್ರೇಮದ ಸಿನಿಮಾಗಳಲ್ಲೇ ನಟಿಸುವುದನ್ನು ಕಾಯಕ ಮಾಡಿಕೊಂಡಿರುವ ಅಕ್ಷಯ್ ಕುಮಾರ್ ರುಸ್ತುಂ ಆಗಿದ್ದಾರೆ.

ಕಥೆ ನಡೆಯುವುದು ಆಗಿನ ಹಳೇ ಬಾಂಬೆ ಪ್ರಾಂತ್ಯದಲ್ಲಿ.ರುಸ್ತುಂ ಭಾರತೀಯ ನೌಕಾಪಡೆಯ ಒಬ್ಬ ನಿಷ್ಠಾವಂತ  ಕಮಾಂಡರ್.ನೌಕಾಪಡೆ ಎಂದಮೇಲೆ ತಿಂಗಳುಗಟ್ಟಲೆ ಮನೆ,ಹೆಂಡತಿಯನ್ನು ಬಿಟ್ಟು ದೂರ ಇರಬೇಕಾದ್ದು ಸಾಮಾನ್ಯ ತಾನೆ.ತಾನಿಲ್ಲದಿರುವಾಗ ತನ್ನ ಪತ್ನಿ ಇನ್ನೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದುತ್ತಾಳೆ ಎಂಬುದು ರುಸ್ತುಂ ನನ್ನು ಕೆರಳಿಸುತ್ತದೆ.ಸೀದಾ ಹೋಗಿ ಒಂದು ನೌಕೆಯಿಂದ ರಿವಾಲ್ವರ್ ಎತ್ತಿಕೊಂಡು ಬಂದು ತನ್ನ ಪತ್ನಿ ಸಿಂಥಿಯಾ(ಇಲಿಯಾನ ಡಿ ಕ್ರುಝ್) ಜೊತೆ ಸಂಬಂಧ ಹೊಂದಿದ್ದ ತನ್ನ ಗೆಳೆಯ ವಿಕ್ರಮ್ ಮಖೀಜಾ(ಅರ್ಜಾನ್ ಬಾವ್ಜಾ)ನನ್ನು ರುಸ್ತುಂ ಶೂಟ್ ಮಾಡಿ ಸಾಯಿಸುತ್ತಾನೆ.ಸೀದಾ ಹೋಗಿ ಪೊಲೀಸರ ಮುಂದೆ ಶರಣಾಗಿ ಕೋರ್ಟ್ ನಲ್ಲಿ ತನ್ನ ಪರವಾಗಿ ಯಾವ ಲಾಯರ್ ನನ್ನೂ ನೇಮಿಸಿಕೊಳ್ಳದೇ ತಾನೇ ವಾದ ಮಾಡುತ್ತಾನೆ.ಅಲ್ಲಿಂದ ಕೊಲೆಯ ಹಿಂದಿನ ಎಲ್ಲಾ ಸತ್ಯಗಳೂ ಅನಾವರಣಗೊಳ್ಳುತ್ತವೆ.

ಕೋರ್ಟ್ ನಲ್ಲಿ ನಡೆಯುವ ಘಟನಾವಳಿಗಳು ಪ್ರೇಕ್ಷಕರನ್ನು ಕ್ಷಣಕ್ಷಣಕ್ಕೂ ಚಕಿತಗೊಳಿಸುತ್ತವೆ.ನಾವು ಏನೋ ಅಂದುಕೊಂಡಿದ್ದರೆ ಅಲ್ಲಿ ನಮ್ಮ ಊಹೆಯನ್ನೂ ಮೀರಿ ಇನ್ನೇನೋ ಆಗುತ್ತದೆ.ರುಸ್ತುಂ “I am not guilty for this murder” ಎಂದು ಪದೇ ಪದೇ ವಾದ ಮಾಡುತ್ತಾನೆ.ತಾನೇ ಬಂದು ಶರಣಾದವನು ಈಗ ಉಲ್ಟಾ ಹೊಡೆಯುತ್ತಿದ್ದಾನಲ್ಲ ಎಂದು ವೀಕ್ಷಕರು ತಲೆ ಕೆರೆದುಕೊಳ್ಳುತ್ತಾರೆ.ಆ ಕೊಲೆಗೆ ಎಲ್ಲಿಂದ ಎಲ್ಲೆಲ್ಲಿಗೋ ಲಿಂಕ್ ಇರುವ ಏನೇನೋ ಕಾರಣಗಳು ಇರುತ್ತವೆ.ಅದೆಲ್ಲ ಏನು ಮತ್ತು ರುಸ್ತುಂಗೆ ಏನಾಗುತ್ತದೆ ಎಂಬುದನ್ನು ನಾವು ತೆರೆಯ ಮೇಲೆ ನೋಡಬೇಕು.

ಇಡೀ ಸಿನಿಮಾದಲ್ಲಿ ಅಕ್ಷಯ್ ಆವರಿಸಿಕೊಳ್ಳುತ್ತಾರೆ.ಬಹಳಷ್ಟು ಹಾಸ್ಯ ಚಿತ್ರಗಳಲ್ಲಿ ನಟಿಸಿರುವ ಅಕ್ಕಿಗೆ ಇಲ್ಲಿ ಚಿತ್ರದುದ್ದಕ್ಕೂ ಗಂಭೀರ ಪಾತ್ರ.ಕೋರ್ಟ್ ನಲ್ಲಿ ತಾನೇ ಸ್ವತಃ ವಾದ ಮಾಡುವ ದೃಶ್ಯಗಳಂತೂ ಅದ್ಭುತವಾಗಿವೆ.ರುಸ್ತುಂ ಪತ್ನಿಯಾಗಿ ಇಲಿಯಾನಾಳದ್ದು ಅಷ್ಟೇನೂ ಪರಿಣಾಮಕಾರಿಯಲ್ಲದ ಅಭಿನಯ.ತನ್ನ ಅಣ್ಣ ವಿಕ್ರಮ್ ನನ್ನು ಕೊಂದ ರುಸ್ತುಂಗೆ ಗಲ್ಲು ಶಿಕ್ಷೆ ಕೊಡಿಸಬೇಕೆಂದು ಶತಾಯಗತಾಯ ಪ್ರಯತ್ನಿಸುವ ಹತಾಶ ತಂಗಿಯ ಪಾತ್ರದಲ್ಲಿ ಸದಾ ಸಿಗರೇಟ್ ಹೊಗೆ ಬಿಡುವ ಇಶಾ ಗುಪ್ತ ಗಮನ ಸೆಳೆಯುತ್ತಾರೆ.ಒಂದೆರಡು ಹಾಡುಗಳು ಚೆನ್ನಾಗಿವೆ.ಅವಶ್ಯಕತೆ ಇಲ್ಲದ ಹಿನ್ನಲೆ ಸಂಗೀತವನ್ನು ಅಷ್ಟಾಗಿ ಕೇಳಿಸದಿದ್ದದ್ದು ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್.

ಚಿತ್ರಕಥೆ ಬರೆದ ವಿಪುಲ್ ರಾವಲ್ ಮತ್ತು ಚಿತ್ರ ನಿರ್ದೇಶಿಸಿದ ಟಿನು ಸುರೇಶ್ ದೇಸಾಯಿ ಅಕ್ಷಯ್ ಕುಮಾರ್ ಸಾರಥ್ಯದಲ್ಲಿ ಒಂದು ಒಳ್ಳೆ Judicial thriller ಸಿನಿಮಾ ತರುವಲ್ಲಿ ಯಶಸ್ವಿಯಾಗಿದ್ದಾರೆ.ಜೈಲಿನಲ್ಲಿ,ಕೋರ್ಟ್ ನಲ್ಲಿರುವಾಗಲೂ ನೌಕಾಪಡೆಯ ಟ್ರೈನಿಂಗ್ ನಲ್ಲಿ ಹೇಳಿಕೊಟ್ಟ ಸಿದ್ಧಾಂತಗಳನ್ನು ಪಾಲಿಸುವ,ನೌಕಾಪಡೆಗೆ ಹಾನಿಯಾಗುವುದನ್ನು ತಡೆಯಲು  ಆ ಮೂಲಕ ದೇಶದ ಗೌರವವನ್ನು ಕಾಪಾಡಲು ಎಂಥ ಕೆಲಸಕ್ಕೂ ಮುಂದಾಗುವ ರುಸ್ತುಂ ಮೇಲೆ ಚಿತ್ರ ನೋಡಿದವರಿಗೆ ಒಂಥರಾ ಗೌರವ ಮೂಡುತ್ತದೆ.ಭಾರತೀಯ ಸೇನೆಯನ್ನು ಇಷ್ಟಪಡುವವರೆಲ್ಲರೂ ಒಮ್ಮೆ ನೋಡಬಹುದಾದ ಅತ್ಯುತ್ತಮ ಚಿತ್ರ ರುಸ್ತುಂ.

ರೇಟಿಂಗ್ 4*

Facebook ಕಾಮೆಂಟ್ಸ್

ಲೇಖಕರ ಕುರಿತು

Lakshmisha J Hegade

ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಓದಿರುವ ವೈದ್ಯ.ಹೆಮ್ಮೆಯ ಕನ್ನಡಿಗ.ದೇಶದ ಶ್ರೀಸಾಮಾನ್ಯ ಪ್ರಜೆಗಳಲ್ಲೊಬ್ಬ.ಕನ್ನಡ ಬ್ಲಾಗರ್.ಇವಿಷ್ಟೇ ನನ್ನ ಪ್ರವರ.ಹೆಚ್ಚು ತಿಳಿಸುವ ಅಗತ್ಯವಿಲ್ಲ.ನನ್ನ ನಿಲುವು,ಸಿದ್ಧಾಂತ,ಮನಸ್ಥಿತಿಯನ್ನು ತಿಳಿಯಲು ಇಲ್ಲಿ ಪ್ರಕಟವಾಗಿರುವ ನನ್ನ ಬರಹಗಳನ್ನು ಓದಿ.ಏನಾದರೂ ಗೊತ್ತಾಗಬಹುದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!