ಭಾರವಾದ ಹೃದಯದಿಂದ ಮನೆಗೆ ಮರಳಿದ್ದ ಸುಶಾಂತ್.ಜನಾರ್ಧನ ಅವನಿಗೆ ಕರೆ ಮಾಡಿದರೆ ಫೋನ್ ಮನೆಯಲ್ಲಿಯೇ ಬಿಟ್ಟು ಹೋಗಿದ್ದ. ಅವನು ರಿಸೀವ್ ಮಾಡದಿದ್ದಕ್ಕೆ ಗಾಬರಿಯಾಗಿ ಸುಸಾಂತ್ ನ ರೂಮಿಗೆ ಬಂದ…ಅವನಿಗೆ ಆಶ್ಚರ್ಯ..ಸುಶಾಂತ್ ಅಳುತ್ತಿದ್ದಾನೆ…ತಲೆ ಎಲ್ಲಾ ಕೆದರಿದೆ…ಬಟ್ಟೆ ಯಲ್ಲಿ ಮಣ್ಣಾಗಿದೆ. “ಏನಾಯಿತೋ ಸುಶಿ..ಯಾಕೋ ಹೀಗೆಲ್ಲಾ ಮಾಡಿ ನನಗೂ ನೋವು ಮಾಡ್ತೀಯಾ..ಹದಿನೆಂಟು ವರ್ಷ ಆಯ್ತು ಕಣೋ….ನೀನು ಅವಳ ಸಲುವಾಗಿ ಕೊರಗೋದನ್ನ ನೋಡಲಾರೆ…ಅವಳು, ಅವಳ ಗಂಡ ಮಕ್ಕಳೊಂದಿಗೆ ಚೆನ್ನಾಗಿರ್ತಾಳೆ ಕಣೋ…ಸಾಕು ಮರೆತುಬಿಡೋ..ಅದೇಂತಾ ಪ್ರೀತಿನೋ ನಿಂದು..ನಿನಗೆ ಹೇಳಿ ಹೇಳಿ ಸಾಕಾಗಿ ಹೋಗಿದೆ..”ಎಂದ ಬೇಸರದಿಂದ.ಸುಶಾಂತ್ ಗದ್ಗದ ಧ್ವನಿಯಲ್ಲಿ “ಅವಳು ಸಿಕ್ಕಿದ್ದಳು ಕಣೋ..ಅವಳನ್ನು ಮಾತನಾಡಿಸಬೇಕೆಂದು ಹೋಗುವುದರೊಳಗೆ ಅವಳ ಕಾರು ಮುಂದೆ ಹೋಗಿತ್ತು..ಅವಳಿಗೆ ನಾನು ಮೋಸಗಾರನಲ್ಲ ಅಂತ ಹೇಳಬೇಕು ಅಷ್ಟೇ ನನ್ನ ಕೊನೆ ಆಸೆ…ಆಮೇಲೆ ನಾನು ಕಣ್ಮುಚ್ಚಿದರೂ ಪರವಾಗಿಲ್ಲ ..ಅವಳು ನನ್ನನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದಳು.ವಿಧಿ ನಮ್ಮ ಬಾಳಲ್ಲಿ ಆಟವಾಡಿಬಿಟ್ಟಿತು “ಎನ್ನುತ್ತ ಅವನನ್ನು ತಬ್ಬಿಕೊಂಡು ಅತ್ತ. ಅದೇ ಕೊನೆ ಅವನು ಮಾತಾಡಿದ್ದು ..ಮತ್ತೆಂದೂ ಮಾತನಾಡಲಿಲ್ಲ ..ಇತ್ತೀಚೆಗೆ ಹುಚ್ಚು ನಂತಾಗಿದ್ದ..
ಜನಾರ್ಧನ ಅವನನ್ನು ಸೈಕಿಯಾಟ್ರಿಸ್ಟ್ ಹತ್ತಿರ ಕರೆದುಕೊಂಡು ಹೋಗಿದ್ದ.ಅವರು ಇವನ ಸ್ಥಿತಿ ನೋಡಿ ಅಡ್ಮಿಟ್ ಮಾಡಲು ಹೇಳಿದ್ದರು.ಅವನನ್ನು ಅಡ್ಮಿಟ್ ಮಾಡಿ ಮನೆಗೆ ಬಂದು ಮನೆಗೆ ಬಂದು ಅವನ ಕೆಲವು ದಿನಬಳಕೆಯ ವಸ್ತುಗಳನ್ನು ತೆಗೆದುಕೊಂಡು ಹೋಗುವಾಗ ಏನಾದರೂ ಅವಳ ಚಿತ್ರ ಅಥವಾ ಫೋಟೋ ಸಿಗಬಹುದೆಂದು ಹುಡುಕಿದ.ಜನಾರ್ಧನ ನೋಡಿದರೆ ಅಲ್ಲಿ ಅವಳದೊಂದು ಗುರುತೂ ಕೂಡಾ ಇಲ್ಲ
> “ಜನಾರ್ಧನನಿಗೆ ಅವಳು ಜಾನೂ ಎಂದು ಗೊತ್ತಾಗುತ್ತದೆ ….ಆಗ ಅವನು ಬೇಸರ ಮಾಡಿಕೊಳ್ಳಬಹುದು ನನ್ನ ಮೇಲೆ…”ಎಂದು ಅವಳ ಚಿತ್ರ ಬಿಡಿಸಿ ಬಿಡಿಸಿ ಹರಿದು ಹಾಕುತ್ತಿದ್ದ ಸುಶಾಂತ್ ..ಜನಾರ್ಧನನಿಗೆ ಸಿಕ್ಕಿದ್ದು ಹಾಳೆಯ ಚೂರುಗಳು ಮಾತ್ರ ..ಆಸ್ಪತ್ರೆಯಲ್ಲಿ ದಾದಿಯರು ಪೇಷೆಂಟ್ ಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರಿಂದ ಜನಾರ್ಧನ ನಿಗೆ ನೆಮ್ಮದಿ ಯಾಗಿತ್ತು.
ಅದೇ ಆಸ್ಪತ್ರೆಗೆ ಒಂದು ಕಾಲದಲ್ಲಿ ಜಾಹ್ನವಿಯಾಗದ್ದ ಈಗಿನ ಭಾರತಿಯ ಮೈದುನ ಸೂರ್ಯ ಅಡ್ಮಿಟ್ ಆಗಿದ್ದು …ಆ ನಂತರದ ಘಟನೆಗಳು ವಿಭಾ ಶುಭಾ ಗೆ ಸುಶಾಂತ್ ಯಾರೆಂಬುದು ಅನುಮಾನ ಹುಟ್ಟಿಸಿದ್ದವು.
ರವಿಯನ್ನು ಮದುವೆಯಾಗುವವರೆಗಿನ ಎಲ್ಲ ಘಟನೆಗಳನ್ನು ನೆನೆದು ನಿಟ್ಟುಸಿರು ಬಿಟ್ಟಳು ಭಾರತಿ.ಆದರೆ ಸುಶಾಂತ್ ಅಪಘಾತಕ್ಕೀಡಾಗಿದ್ದು ಅವಳಿಗೆ ಗೊತ್ತೇ ಆಗಲಿಲ್ಲ.ಅವಳು ರವಿಯನ್ನು ಮದುವೆಯಾಗಿ ಹೋದ ಮೇಲೆ ಸುಶಾಂತ್ ಏನಾಗಿ ಹೋದ ಎನ್ನುವುದರ ಕಲ್ಪನೆ ಭಾರತಿಗಿರಲಿಲ್ಲ..ಅವನು ಅವಳ ಮನದಲ್ಲಿ ಮೋಸಗಾರನಾಗಿಯೇ ಉಳಿದು ಹೋಗಿದ್ದ.
ವಿಭಾ ಶುಭಾ ಅಂದ ಮಾತಿನಿಂದ ದುಃಖಿತಳಾಗಿ ಬಾಗಿಲು ಹಾಕಿಕೊಂಡಿದ್ದ ಭಾರತಿ ಅರ್ಧ ಗಂಟೆಯ ನಂತರ ಹೊರಬಂದಳು..ಭಾರತಿಯ ಕಾಲು ಹಿಡಿದು ಕ್ಷಮೆ ಕೇಳಿದರು ವಿಭಾ ಶುಭಾ. ರವಿ, ಸೂರ್ಯ ಇಬ್ಬರೂ ಬಂದು ಅಳುತ್ತಿದ್ದ ಮೂವರನ್ನೂ ಸಂತೈಸಿದ್ದರು…”ಇನ್ನೊಮ್ಮೆ ಅಮ್ಮನಿಗೆ ನೋವು ಮಾಡುವುದಿಲ್ಲವೆಂದು .ತಮ್ಮ ಜನ್ಮಕ್ಕೆ ಕಾರಣನಾದ ಆ ಮೋಸಗಾರ ನ ಮುಖ ಮತ್ತೆ ನೋಡುವುದಿಲ್ಲವೆಂದು ಆಣೆ ಮಾಡಿದ್ದರು ವಿಭಾ ಶುಭಾ..”
ಸ್ವಲ್ಪ ಬದಲಾವಣೆಗಾಗಿ ಕುಟುಂಬದೊಡನೆ ಊಟಿಗೆ ಎರಡು ದಿನಗಳ ಮಟ್ಟಿಗೆ ಹೋಗಿ ಬರಲು ತೀರ್ಮಾನ ಮಾಡಿದ್ದ ರವಿ
ಇತ್ತ ಸುಶಾಂತ್ ಜನಾರ್ಧನನಿಗೆ ತನ್ನ ಪಕ್ಕದ ಬೆಡ್ ನ ಪೇಷೆಂಟ್ ಅಡ್ರೆಸ್ ಸಂಗ್ರಹಿಸುವಂತೆ ಬೇಡಿಕೊಂಡಿದ್ದ.ಯಾಕೆಂದು ಕೇಳಿದಾಗ “ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗು ನಿನಗೆಲ್ಲಾ ಅರ್ಥವಾಗುತ್ತದೆ..”ಎಂದ.ಜನಾರ್ಧನ ಡಾಕ್ಟರ್ ಗೆ ಈ ವಿಷಯ ಹೇಳಿದಾಗ ಅವರು ಅಡ್ರೆಸ್ ಪತ್ತೆಹಚ್ಚಲು ಸಹಾಯ ಮಾಡಿದ್ದರು. ಸೂರ್ಯನನ್ನು ಮೊದಲು ತಪಾಷಣೆ ಮಾಡಿದ ಡಾಕ್ಟರ್ ರವಿಗೆ ಪರಿಚಯ ಎಂದು ಸುಶಾಂತ್ ಗೆ ಈಗ ಟ್ರೀಟ್‌ಮೆಂಟ್ ಕೊಡುತ್ತಿದ್ದ ಡಾಕ್ಟರ್ ಗೆ ಗೊತ್ತಿತ್ತು. ಅವರ ಮೂಲಕ ಅಡ್ರೆಸ್ ಪಡೆದು ಅಷ್ಟೊಂದು ವಿನಂತಿಸಿಕೊಳ್ಳುತ್ತಿದ್ದ ಜನಾರ್ಧನ ನಿಗೆ ನೀಡಿದ್ದರು.ಸುಶಾಂತ್ ನನ್ನು ಕರೆದುಕೊಂಡು ಹೋಗಿ ಬರುವುದಾಗಿ ಹೇಳಿ ಜನಾರ್ಧನ ಡಾಕ್ಟರ್ ಗೆ ಹೇಳಿ ಆ ಅಡ್ರಸ್ ಇರುವ ಮನೆ ಕಡೆಗೆ ಕಾರು ಓಡಿಸಿದ.ಆ ಭವ್ಯ ಬಂಗಲೆಯ ಗೇಟ್ ಹತ್ತಿರಕ್ಕೆ ಬಂದಾಗ “ಭಾರತಿ ಪ್ಯಾಲೇಸ್”ಎಂಬ ಹೆಸರು ಕಾಣಿಸಿತು.ಮನೆಯವರೆಲ್ಲ ಲಗೇಜ್ ಬ್ಯಾಗ್ ಗಳನ್ನು ಹಿಡಿದು ಬರುತ್ತಿರುವುದು ಕಾಣಿಸುತ್ತಿತ್ತು.ಮೊದಲು ರವಿ ..ಅವನ ಹಿಂದೆ ಸೂರ್ಯ…ಅವನ ಹಿಂದೆ ವಿಭಾ ಶುಭಾ …ನಂತರ ಮನೆ ಕೀ ಹಾಕಿ ಇಳಿದು ಬಂದವಳು ನಗುಮುಖದ ಭಾರತಿ …ನಗುತ್ತ ರವಿಯ ಪಕ್ಕ ಕೂತಳು…ವಿಭಾ ಶುಭಾ ಚಿಕ್ಕಪ್ಪನೊಂದಿಗೆ ಕೀಟಲೆಯಲ್ಲಿ ತೊಡಗಿದ್ದರು ..ಸುಶಾಂತ್ ಅವಳ ಸುಖ ಸಂಸಾರ ನೋಡಿ ಮೈಮರೆತ.ಜನಾರ್ಧನನಿಗೆ ಅವಳ ಮುಖ ನೋಡಿ ಮೊದಲು ಗುರುತು ಸಿಗಲಿಲ್ಲ ..ಮುಖ ಸ್ಪಷ್ಟವಾಗಿ ಕಾಣಿಸಿದಾಗ ಅವನಿಗೆ ಶಾಕ್ …”ಜಾನೂ …..!”ಎಂದು ತೊದಲಿದ..ಪ್ರಜ್ಞೆ ತಪ್ಪುವುದೊಂದು ಬಾಕಿ…ಜನಾರ್ಧನ ಶಿಲೆಯಂತೆ ಕುಳಿತಿದ್ದ.ಅವನೀಗೀಗ ಸ್ಪಷ್ವವಾಗಿ ಅರ್ಥವಾಗಿತ್ತು ಸುಶಾಂತ್ ಪ್ರೀತಿಸಿದ್ದು ಜಾನೂ ವನ್ನು….ರವಿ ಕಾರನ್ನು ಮುಂದೆ ಚಲಿಸಿದ ..ಜನಾರ್ಧನ ಎಚ್ಚೆತ್ತುಕೊಂಡು ಕಾರನ್ನು ಹಿಂಬಾಲಿಸಿದ.ಸುಶಾಂತ್ ನಿಲ್ಲಿಸುವಂತೆ ಹೇಳಿದ.ಜನಾರ್ಧನ ಪ್ರಶ್ನಾರ್ಥಕವಾಗಿ ನೋಡಿದಾಗ ಸುಶಾಂತ್ “ನಿನಗರ್ಥವಾಯಿತಲ್ಲ…..ನಾನ್ಯಾರನ್ನು ಪ್ರೀತಿಸಿದ್ದೆ ಎಂದು ..ಅದೇ ಜಾನೂ ನಾನು ಪ್ರೀತಿಸಿದ್ದವಳು. ಅವಳು ಗರ್ಭಿಣಿಯಾಗಲು ನಾನೇ ಕಾರಣವಾಗಿದ್ದೆ.ನನ್ನ ಒಂದು ಕ್ಷಣದ ತಪ್ಪಿನಿಂದ ಅವಳು ಅವಳ ಅಪ್ಪ ಅಮ್ಮನನ್ನು ಕಳೆದುಕೊಂಡಳು.ಅವಳ ಮಾನ ಮರ್ಯಾದೆ…ನನ್ನಿಂದ ಹಾಳಾಯಿತು.ನಾನೇನು ಬೇಕಂತ ಹಾಗೆ ಮಾಡಲಿಲ್ಲ.ಅವಳನ್ನ ನಾನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದೆ….ಅವಳು ಗರ್ಭಿಣಿ ಎಂದು ತಿಳಿದ ತಕ್ಷಣ ನಾನು ಅಪ್ಪನಿಗೆ ನಮ್ಮ ಪ್ರೀತಿಯ ವಿಷಯ ತಿಳಿಸಲು ಹೊರಟೆ..ದೇವರಂತ ಅಪ್ಪನೂ ಅವಳು ಯಾರು ಯಾವ ಜಾತಿ ಎಂದು ಕೇಳಲಿಲ್ಲ…ನಿನ್ನ ಸಂತೋಷ ಎಂದರು.ಅದೇ ಖುಷಿಯಲ್ಲಿ ಅವಳಿಗೆ ಸರ್ಪ್ರೈಸ್ ಕೊಡೋಣವೆಂದು ಹೊರಟೆ…ವಿಧಿ ನಮ್ಮಿಬ್ಬರನ್ನು ಒಂದಾಗಲು ಬಿಡಲಿಲ್ಲ.ಹಿಂದೆ ಬರುತ್ತಿದ್ದ ಕಾರಿನವ ನನ್ನ ಕಾರಿಗೆ ಗುದ್ದಿದ ..ಆಮೇಲಿಂದು ನಿನಗೆ ಗೊತ್ತೇ ಇದೆ …ನಾನು ತಲೆಗೆ ಏಟು ಬಿದ್ದಾಗ ಕೂಡಾ ಅವಳನ್ನೆ ನೆನೆಸುತ್ತಿದ್ದೆ..ಅವಳು ನಮ್ಮೂರಿಗೆ ನನ್ನ ಹುಡುಕಿಕೊಂಡು ಹೋದಾಗ ನಾನು ಆಸ್ಪತ್ರೆಯಲ್ಲಿದ್ದೆ.ನನ್ನ ಫೋನ್ ಅಪಘಾತವಾದಾಗ ಎಲ್ಲಿ ಹೋಯಿತೋ ಗೊತ್ತಿಲ್ಲ..ಅವಳು ಫೋನ್ ಮಾಡಿದರೂ ನನ್ನ ಫೋನ್ ಸ್ವಿಚ್ ಆಪ್ ಆಗಿತ್ತು..ಇನ್ನೇನು ಅವಳು ನನ್ನನ್ನು ಮೋಸಗಾರನೆಂದು ತೀರ್ಮಾನಿಸಿ ಸಾಯಲು ಹೋದವಳನ್ನು ಅವಳೊಂದಿಗೆ ಈಗ ಹೋದನಲ್ಲ ಆ ವ್ಯಕ್ತಿ ಮದವೆಯಾದ…ಆ ಎರಡು ಮಕ್ಕಳು ನನ್ನವೇ ಅನ್ನಿಸುತ್ತದೆ ನನಗೆ…..ಅವಳು ಗರ್ಭ ತೆಗಿಸಿರಬಹುದು ಎಂದುಕೊಂಡಿದ್ದೆ..ಆದರೆ ಗೊತ್ತಿಲ್ಲ…ಆ ಮಕ್ಕಳ ಕೆನ್ನೆ ಮೇಲಿನ ಮಚ್ಚೆ ಮಾತ್ರ ನೋಡಿ ಹೇಳುತ್ತಿದ್ದೇನಷ್ಟೆ….ಏನಾದರಾಗಲಿ ಅವಳು ಚೆನ್ನಾಗಿದ್ದಾಳೆ ಸಾಕು..ಅಪ್ಪನನ್ನೂ ನನ್ನ ಪಾಲಿಗೆ ಬಿಡಲಿಲ್ಲ ದೇವರು..ಅವಳನ್ನೂ ದೂರ ಮಾಡಿಬಿಟ್ಟಿತು ವಿಧಿ.. ಅವಳು ಸಂಸಾರ ಎಷ್ಟು ಖುಷಿಯಾಗಿದೆ ನೋಡಿದೆಯಾ..? ಅಷ್ಟೇ ಸಾಕು ನನಗೆ …ಹಾಲಿನಂತ ಅವಳ ಸಂಸಾರದಲ್ಲಿ ಹುಳಿ ಹಿಂಡಲು ನನಗಿಷ್ಟವಿಲ್ಲ ..ಇಷ್ಟು ದಿನ ನಾನು ಅವಳಿಗೆ ಮೋಸಗಾರನಲ್ಲ ಎಂದು ಹೇಳಬೇಕೆಂದುಕೊಂಡಿದ್ದೆ.ಆದರೆ ಈಗ ಅವಳು ಎದುರು ಬಂದರೂ ಹೇಳುವುದಿಲ್ಲ..ಅವಳು ನನ್ನನ್ನು ಮೋಸಗಾರನೆಂದು ತಿಳಿದು ಮರೆತು ಗಂಡ ಮಕ್ಕಳೊಂದಿಗೆ ಖುಷಿಯಾಗಿದ್ದಾಳೆ..ನಾನು ಮೋಸಗಾರನಲ್ಲ ಎಂದು ತಿಳಿದರೆ ಅವಳು ಕೊರಗುತ್ತಾಳೆ.. ನಾನು ಅವಳ ದೃಷ್ಟಿಯಲ್ಲಿ ಮೋಸಗಾರನಾಗಿಯೇ ಉಳಿಯುತ್ತೇನೆ…..ನಡಿ ..ರೂಮಿಗೆ ಹೋಗೋಣ ಕೊನೆಯವರೆಗೂ ಅವಳದೇ ಚಿತ್ರ ಬಿಡಿಸುತ್ತ ಇದ್ದುಬಿಡುತ್ತೇನೆ ಎಂದ ನಿಟ್ಟುಸಿರು ಬಿಡುತ್ತ. ಜನಾರ್ಧನನಿಗೆ ಏನು ಹೇಳಬೇಕೋ ತಿಳಿಯಲಿಲ್ಲ …ಒಂದಂತೂ ಗೊತ್ತಾಗಿತ್ತು ಜಾಹ್ನವಿ ನೀತಿಗೆಟ್ಟವಳಲ್ಲ ಎಂದು…..
ಮಾತಾಡದೆ ರೂಮಿನತ್ತ ಕಾರು ಓಡಿಸಿದ.ಸುಶಾಂತ್ ನನ್ನು ಹೋಟೆಲ್ ಗೆ ಕರೆದುಕೊಂಡು ಹೋಗಿ ಊಟ ಮಾಡಿಸಿದ. ಈ ಬಾರಿ ನಗುನಗುತ್ತಲೇ ಊಟ ಮಾಡಿದ ಸುಶಾಂತ್…
ಜನಾರ್ಧನ ಇನ್ನೂ ಶಾಕ್ ನಿಂದ ಹೊರಬಂದಿರಲಿಲ್ಲ.ಸುಶಾಂತ್ ನನ್ನು ರೂಮಿಗೆ ಬಿಟ್ಟು ಹೇಮಾ ಮಗಳಿಗೆ ಜ್ವರವೆಂದು ಕರೆ ಮಾಡಿದ್ದರಿಂದ ಮನೆಯತ್ತ ಹೊರಟ.ಸುಶಾಂತ್ ಈ ಬಾರಿ ಅಳಲಿಲ್ಲ ಅವಳದೊಂದು ಹದಿನೆಂಟು ವರ್ಷದ ಹಿಂದಿನ ಮುಖದ ಚಿತ್ರ ಬಿಡಿಸಿದ …ಮನಸಾರೆ ನೋಡಿದ. ಚಿತ್ರದ ಮುಂದೆ..”ಜಾನೂ ನಿನ್ನ ಸುಶಾಂತ್ ಮೋಸಗಾರನಲ್ಲ ಕಣೆ…”ಎಂದು ಚೀರಿದ. ಮುಂದಿನ ಜನ್ಮ ಅಂತ ಒಂದಿದ್ದರೆ ನಿನ್ನನ್ನೇ ಪ್ರೀತಿಸಿ ನಾನು ಮೋಸಗಾರನಲ್ಲ ಎಂದು ನಿರೂಪಿಸುತ್ತೇನೆ “ಎಂದು ಆ ಚಿತ್ರಕ್ಕೊಂದು ಮುತ್ತು ಕೊಟ್ಟ…ತನ್ನ ಎಡಗೈ ನಾಡಿಯನ್ನು ಚಾಕುವಿನಿಂದ ಕ್ಯುಯ್ದುಕೊಂಡ..ಅವನು ಕಣ್ಮುಚ್ಚುವವರೆಗೂ ಹದಿನೆಂಟು ವರ್ಷಗಳ ಹಿಂದಿನ “ಜಾನೂ” ವಿನ ನಗುಮುಖ ಕಾಣುತ್ತಿತ್ತು ..ಅವನ ಮುಖದಲ್ಲಿ ಮುಗುಳ್ನಗುವೊಂದು ಹಾಯ್ದು ಹೋಯಿತು…”ಜಾನೂ” ಎನ್ನುತ್ತಲೇ ಹೃದಯ ಬಡಿತ ನಿಲ್ಲಿಸಿತು..ಜನಾರ್ಧನನ ದುಃಖ ಮುಗಿಲು ಮುಟ್ಟಿತ್ತು.”ಅವನ ಚಿತೆಯಲ್ಲಿ ಅವಳ ಚಿತ್ರವನ್ನೂ ತನ್ನೊಂದಿಗೆ ಇಡುವಂತೆ….ಜಾನೂವಿಗೆ ಸತ್ಯ ಹೇಳದಂತೆ ಜನಾರ್ಧನನಿಗೆ ಪತ್ರ ಬರೆದಿಟ್ಟಿದ್ದ ಸುಶಾಂತ್.” ಅವಳ ಚಿತ್ರ ಅವನೊಂದಿಗೆ ಸುಟ್ಟು ಹೋಯಿತು..