ಸುಶಾಂತ್ ಕೋಮಾ ಸ್ಥಿತಿಯಲ್ಲಿದ್ದ ..ವೈದ್ಯರ ಪ್ರಯತ್ನದಿಂದ ಎರಡು ತಿಂಗಳ ನಂತರ ಸರಿಯಾಗಿ ಕಣ್ಣು ತೆರೆದಿದ್ದ. ಅವನಿಗೆ ನೆನಪಾಗಿದ್ದು ಅವನ ಜಾನೂ …ಅಪ್ಪ ಸತ್ತ ವಿಷಯವೂ ಅವನಿಗೆ ತಿಳಿದಿರಲಿಲ್ಲ. ಮನೆಗೆ ಕರೆದುಕೊಂಡು ಹೋಗಿ ನಿಧಾನವಾಗಿ ವಿಷಯ ತಿಳಿಸಿದರಾಯಿತೆಂದುಕೊಂಡ ಜನಾರ್ಧನ. ಆದರೆ ಬಿಲ್ ಕಟ್ಟಿ ಬರುತ್ತೇನೆಂದು ಹೇಳಿ ಹೋಗಿದ್ದ ಜನಾರ್ಧನನಿಗೂ ಕಾಯದೇ ಅಲ್ಲಿಯೇ ಇದ್ದ ಆಟೋ ಕರೆದು ಜಾಹ್ನವಿಯ ಮನೆ ಕಡೆಗೆ ಓಡಿಸಲು ಹೇಳಿದ. ಅವಳ ಮನೆ ಹತ್ತಿರ ಬಂದರೆ ಮನೆ ಬೀಗ ಹಾಕಿತ್ತು. ಪಕ್ಕದ ಮನೆಯ ಹೆಂಗಸನ್ನು ವಿಚಾರಿಸಿದ. ಅವರದೇ ಬೀದಿಯಲ್ಲಿನ ಹುಡುಗ ಅಂತ ಗೊತ್ತಿದ್ದರೂ ಆ ಹೆಂಗಸು..”ನೀವೇನಾಗಬೇಕು ನೀತಿಗೆಟ್ಟವಳಿಗೆ…?”ಎಂದಳು. ಕೋಪ ನೆತ್ತಿಗೇರಿತ್ತಾದರೂ ತಡೆದುಕೊಂಡು “ನಾನು ಅವರ ಕ್ಲಾಸ ಮೇಟ್ ..ಅವರದೊಂದು ಮಾರ್ಕ್ಸ್ ಕಾರ್ಡ್ ನನ್ನ ಹತ್ತಿರ ಇತ್ತು.ಕೊಡೋಣ ಎಂದು ಬಂದೆ.”ಎಂದ. ಸುಶಾಂತ್. “ಇನ್ನೆಲ್ಲಿ ಅವಳು…!ಮದುವೆಗೆ ಮುಂಚೆ ಗರ್ಭಿಣಿ ಆಗಿದ್ಲು…ಅಪ್ಪ ಅಮ್ಮನ್ನ ಪ್ರಾಣ ತೆಗೆದ್ಲು..ಅದೇನೋ ಅವಳ ಗರ್ಭಕ್ಕೆ ಕಾರಣನಾದವನನ್ನು ಹುಡುಕ್ಕೊಂಡು ಹೋದೋಳು ..ಅವನು ಮನೆ ಖಾಲಿ ಮಾಡಿದ್ದು ನೋಡಿ ಮೋಸ ಮಾಡಿದ್ದಾನೆ ಅಂತ ಗೊತ್ತಾಗಿ ಸಾಯೋಕೆ ಹೋಗಿದ್ಲು..ಅವಳ ದೂರದ ಸಂಬಂಧಿ ಅವಳ ಪ್ರಾಣಾ ಕಾಪಾಡಿ ದೊಡ್ಡ ಮನಸ್ಸು ಮಾಡಿ ಮದುವೆ ಮಾಡ್ಕೊಂಡು ಕರ್ಕೊಂಡ್ ಹೋದ..ಆಮೇಲೆ ಎಲ್ಲಾ ಸಂಬಂಧಿಕ್ರೂ ಛೀ… !ಥೂ …! ಅಂದ್ರು ಅಂತ ಅವಳ್ನ ಕರ್ಕೊಂಡು ಎಲ್ಲಿಗೋದ್ನೋ ತಿಳಿಲಿಲ್ಲ..ಆ ಮಾರ್ಕ್ಸ್’ಕಾರ್ಡ್ ನಾ ಕಸಕ್ಕೆ ಹಾಕು….. ಅವಳಿನ್ನು ಬರಲ್ಲಾ…’ಎಂದಳು “ಸುಶಾಂತ್ ಗೆ ತಲೆ ತಿರುಗಿದಂತಾಯಿತು…ತಲೆ ಸುತ್ತಿ ಬಿದ್ದ. ಆ ಹೆಂಗಸು ಅವನ ಮುಖದ ಮೇಲೆ ನೀರು ಸಿಂಪಡಿಸಿದಳು. ಆಟೋದವನು ಈ ಕಥೆ ಕೇಳಿ ಅವನು ಬಿದ್ದಿದ್ದನ್ನು ಕಂಡು ಹೊರಟು ಹೋಗಿದ್ದ. ಸುಶಾಂತ್ ಭಾರವಾದ ಹೆಜ್ಜೆ ಇಡುತ್ತ ಅದೇ ಬೀದಿಯಲ್ಲಿದ್ದ ತನ್ನ ರೂಮಿನ ಹತ್ತಿರ ಬಂದ. ಓನರ್ ಕೊಟ್ಟ ಎರಡು ಕೀ ಯಲ್ಲಿ ಒಂದು ಕೀ ಕಳೆದು ಹೋಗಿದ್ದರಿಂದ ಉಳಿದ ಒಂದು ಕೀಯನ್ನು ಯಾವಾಗಲೂ ಕಿಟಕಿಯ ಹಿಂದೆ ಇಡುತ್ತಿದ್ದರು ಇಬ್ಬರಿಗೂ ಅನುಕೂಲವಾಗುವಂತೆ. ರೂಮಿನ ಕೀ ತೆಗೆದು ಒಳ ಬಂದವನು ಹಾಸಿಗೆ ಮೇಲೆ ಕುಸಿದ. ಜನಾರ್ಧನ ಅವನನ್ನು ಆಸ್ಪತ್ರೆಯಲ್ಲಿ ಹುಡುಕಿ ಹುಡುಕಿ ರೂಮಿಗೆ ಲಗೇಜ್ ಇಟ್ಟು ಸುಶಾಂತ್ ತಂದೆಯ ನೆನಪಾಗಿ ಹೇಳದೇ ತನ್ನೂರಿಗೆ ಹೋಗಿರಬಹುದೆಂದು ಯೋಚಿಸಿ ಅವನ ಲಗೇಜ್ ರೂಮಿನಲ್ಲಿಟ್ಟು ಸುಶಾಂತ್ ಊರಿಗೆ ಹೋದರಾಯಿತೆಂದುಕೊಂಡು ರೂಮಿಗೆ ಬಂದ. ಸುಶಾಂತ್ ಆಳುತ್ತಿದ್ದಾನೆ. ಜನಾರ್ಧನನಿಗೆ ಶಾಕ್ ಆಯಿತು ..ಅವನ ತಂದೆ ತೀರಿಕೊಂಡದ್ದನ್ನು ಆಸ್ಪತ್ರೆಯಲ್ಲಿ ಯಾರಾದರೂ ಹೇಳಿರಬೇಕು ಎಂದುಕೊಂಡ.ಸುಶಾಂತ್ ಜನಾರ್ಧನನನ್ನು ತಬ್ಬಿಕೊಂಡು ಜೋರಾಗಿ ಅತ್ತ.”ಅಳಬೇಡ್ವೋ ಅಂಕಲ್ ಆಯಸ್ಸು ಅಷ್ಟೇ ಇತ್ತು….ನಿನಗೆ ನಾನೀದೀನಿ ಕಣೋ…ಏನು ಮಾಡಲಿ ನಿನ್ನ ಸ್ಥಾನದಲ್ಲಿ ನಿಂತು ನಾನು ಅಂತ್ಯಕ್ರಿಯೆ ಮಾಡಬೇಕಾಯಿತು..ನಾನು ಹೇಗೆ ನಿನಗೆ ಹೇಳುವುದೆಂದು ಯೋಚಿಸಿತ್ತಿದ್ದೆ ..ಸಮಾಧಾನ ಮಾಡಿಕೋ…”ಎಂದ….ಸುಶಾಂತ್’ಗೆ ಬರಸಿಡಿಲೆರಗಿದಂತಾಯಿತು….”ಅಂದರೆ ಅಪ್ಪ ….! ? ಎಂದು ತೊದಲಿದ. ಜನಾರ್ಧನನಿಗೆ ಆಶ್ಚರ್ಯ. “ಹಾಗಾದರೆ ಇವನಿಗೆ ವಿಷಯ ಗೊತ್ತಿಲ್ಲ ..!ಮತ್ತೇಕೆ ಅಳುತ್ತಿದ್ದ ..?!”ಎಂದು ದಿಗಿಲಾಯಿತು ..”ನೀನು ಅಂಕಲ್ ತೀರಿಕೊಂಡ ವಿಷಯ ತಿಳಿದು ಅಳುತ್ತಿದ್ದುದು ಅಂದುಕೊಂಡೆ ಕಣೋ…ಏನಾಯಿತು ಹೇಳೋ….”ಅಂದ ಜನಾರ್ಧನ “ಅಪ್ಪನಿಗೇನಾಯಿತು ಹೇಳೋ….! ಅಪ್ಪಾ …. ಅಪ್ಪಾ……”ಎಂದು ಚೀರಿದ ಸುಶಾಂತ್. ಜನಾರ್ಧನ ನಡೆದ ದುರ್ಘಟನೆಯನ್ನು ವಿವರಿಸಿದ. ಸುಶಾಂತ್’ಗೆ ಎರಡೆರಡು ಬರಸಿಡಿಲು ಬಡೆದಿತ್ತು..”ಅವಳು ನನ್ನ ಬಿಟ್ಟು ಹೋದಳು…ನನ್ನ ಪ್ರೀತಿ ನನ್ನ ಬಿಟ್ಟು ಹೋಯಿತು…ಅಪ್ಪನೂ ನನ್ನ ಬಿಟ್ಟು ಹೋದ್ರು. .ನಾನು ಯಾರಿಗೋಸ್ಕರ ಬದುಕಲಿ…?”ಎಂದು ನೆಲದ ಮೇಲೆ ಬಿದ್ದು ಉರುಳಾಡಿದ. ಜನಾರ್ಧನನಿಗೆ”ಅವಳು “ಎಂದರೆ ಯಾರೆಂದು ತಿಳಿಯಲಿಲ್ಲ. ಸ್ವಲ್ಪ ದಿನ ಕಳೆದ ಮೇಲೆ ಕೇಳಿದರಾಯಿತೆಂದುಕೊಂಡ. ಅಂದಿನಿಂದ ಸುಶಾಂತ್ ಮೌನಿಯಾದ…ತನ್ನ ಜಾನೂವನ್ನು ಹುಡುಕಿ ಊರೂರು ಅಲೆದ. ಅವಳು ಸಿಗಲೇ ಇಲ್ಲ.
ಜನಾರ್ಧನ ಹಳೆಯದನ್ನು ಮರೆಯಲು ರೂಮ್ ಬದಲಾಯಿಸಿದ್ದ. ಅಲ್ಲಿದ್ದರೆ ಜಾನೂ ನೆನಪು ಕಾಡುತ್ತಿತ್ತು. ಜೊತೆಗೆ ಸುಶಾಂತ್’ನನ್ನು ಕರೆದುಕೊಂಡು ಹೋಗಿದ್ದ. ತಾನು ಈ ಕೆಲಸದಲ್ಲಿರಲು ಅವನೇ ಕಾರಣವೆಂಬ ಅಭಿಮಾನ ಅವನಿಗಿತ್ತು. ಸುಶಾಂತ್’ಗೆ ಒಂದೊಂದು ಬಾರಿ ಸತ್ತು ಹೋಗೋಣವೆನಿಸುತ್ತಿತ್ತು. ಏನಾದರಾಗಲಿ ಅವಳಿಗೆ “ತಾನು ಮೋಸಗಾರನಲ್ಲ “ಎಂದು ಹೇಳಿ ಸಾಯಬೇಕೆಂದುಕೊಂಡ..ಅವನಿಗೆ ಕೆಲಸ ಮಾಡಲಿಷ್ಟವಿರಲಿಲ್ಲ. ಎಲ್ಲಾ ಆಸಕ್ತಿ ಕಳೆದುಕೊಂಡಿದ್ದ. ಊರಿನಲ್ಲಿರುವ ತನ್ನ ಹೆಸರಿಗೆ ಮಾಡಿಸಿದ್ದ ಎಲ್ಲಾ ಆಸ್ತಿ..ಮನೆ ಮಾರಿದ ದುಡ್ಡನ್ನು ಜನಾರ್ಧನ ಬೇಡ ಬೇಡವೆಂದರೂ ಅವನಿಗೊಪ್ಪಿಸಿದ್ದ. ಕೆಲಸಕ್ಕೆ ಸೇರಿದರೆ ಎಲ್ಲ ಮರೆಯಬಹುದೆಂದು ಜನಾರ್ಧನ ಎಷ್ಟು ತಿಳಿಸಿ ಹೇಳಿದರೂ ಸುಶಾಂತ್ ಮಾತ್ರ ಒಪ್ಪಿರಲಿಲ್ಲ. ಈ ನಡುವೆ ಜನಾರ್ಧನ ಕುಡಿತದ ದಾಸನಾಗಿದ್ದ. ಕುಡಿದಾಗ ಅವನು” ಜಾನೂ” ಎಂದು ಕನವರಿಸುತ್ತಿದ್ದ. ಸುಶಾಂತ್’ನಿಗೆ ಅವನೂ ಜಾಹ್ನವಿಯನ್ನು ಪ್ರೀತಿಸುತ್ತಿದ್ದ ವಿಷಯ ಗೊತ್ತಾಗಿತ್ತು. ಜಾಹ್ನವಿ ತನಗೆ ಆ ದಿನ ಹೇಳಿದ ವಿಷಯ ನಿಜ…ಜನಾರ್ಧನ ಜಾಹ್ನವಿಯನ್ನು ಪ್ರೀತಿಸಿದ್ದ. ಆದರೆ ಜಾಹ್ನವಿ ಜನಾರ್ಧನ ತನ್ನನ್ನು ಪ್ರೀತಿಸುತ್ತಿರುವ ಬಗ್ಗೆ ಹೇಳಿದರೂ ಸುಶಾಂತ್ ನಂಬಿರಲಿಲ್ಲ. ತಮಾಷೆ ಮಾಡಿ ಬಿಟ್ಟಿದ್ದ. ಈಗ ಅದು ನಿಜವೆಂದು ತಿಳಿದಿತ್ತು. ಅದಕ್ಕೆಂದೇ ಅವನೆಷ್ಟೇ ಕೇಳಿದರೂ ತಾನು ಯಾವ ಹುಡುಗಿಯನ್ನು ಪ್ರೀತಿಸುತ್ತಿದ್ದೆ ಎಂದು ಹೇಳಲೇ ಇಲ್ಲ. ಆದರೆ ಕುಡಿದ ಅಮಲಿನಲ್ಲಿ ಜನಾರ್ದನ ಅವಳನ್ನು “ನೀತಿಗೆಟ್ಟವಳು…ಮೋಸಗಾತಿ”ಎಂದಾಗ” “ತಾನೇ ಅವಳು ನೀತಿಗೆಡಲು ಕಾರಣ…ಅವಳು ಮೋಸಗಾತಿಯಲ್ಲ…..” ..ಎಂದು ಚೀರಿ ಹೇಳಬೇಕೆನಿಸುತ್ತಿತ್ತು ಸುಶಾಂತ್’ನಿಗೆ. ಈಗ ಹೇಳಿ ಏನು ಪ್ರಯೋಜನ ಅವಳಿಗೆ ಮದುವೆಯಾಗಿದೆ..ಎಂದು ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತಿದ್ದ.
“ಅವಳು ಹೇಗಿರಬಹುದು…ಅವಳು ಗರ್ಭವನ್ನು ತೆಗೆಸಿಬಿಟ್ಟು ಈ ನತದೃಷ್ಟನನ್ನು ಮೋಸಗಾರನೆಂದು ತಿಳಿದು ಮರೆತು ಗಂಡನೊಂದಿಗೆ ಚೆನ್ನಾಗಿರಬಹುದೇನೋ…? ಅವಳು ಖುಷಿಯಾಗಿದ್ದರೆ ಸಾಕು….”ಎಂದು ಹೀಗೇ ಯೋಚಿಸಿ, ಯೋಚಿಸಿ ರಾತ್ರಿ ಎಷ್ಟೋ ಹೊತ್ತಿಗೆ ಮಲಗುತ್ತಿದ್ದ.”ಜಾನೂ ” ಎನ್ನುವ ಹೆಣ್ಣು ಇಬ್ಬರ ಮನದಲ್ಲೂ ನೋವಿನ ಸೆಲೆಯಾಗಿ ಆಗಾಗ ಉಕ್ಕಿ ಹರಿಯುತ್ತಿದ್ದಳು. ಐದಾರು ವರ್ಷಗಳುರುಳಿದ್ದವು. ಯಾರೋ ಸಂಬಂಧಿಕರು ಜನಾರ್ಧನನ ದೂರದ ಸಂಬಂಧಿ ವರಸೆಯಲ್ಲಿ ಅತ್ತೆಯಾಗುತ್ತಿದ್ದ ಗಿರಿಜಮ್ಮನವರ ಮಗಳು ಹೇಮಾಳನ್ನು ಮದುವೆಯಾಗುವಂತೆ ಸಲಹೆ ಕೊಟ್ಟಿದ್ದರು. ಜನಾರ್ಧನನ ಅಮ್ಮನೂ ಅಸ್ತು ಎಂದಿದ್ದರು. ಆದರೆ ಜನಾರ್ಧನ ಏಕೋ ಇದರಿಂದ ವಿಮುಖವಾಗಿದ್ದ. ಅಮ್ಮನ ಒತ್ತಾಯಕ್ಕೆ ಹುಡುಗಿಯನ್ನು ನೋಡಲು ಹೋಗಿದ್ದ. ಹೇಮಾ ಮುದ್ದಾದ ಹುಡುಗಿ..ಅವಳಿಗೆ ಇರುವ ಸಂಗತಿ ಹೇಳಿಬಿಡೋಣ ಎನಿಸಿ ಅವಳನ್ನು ವರಾಂಡಕ್ಕೆ ಕರೆದುಕೊಂಡು ಹೋಗಿ..”ನೋಡಿ ಹೇಮಾ…ನಾನು ಈ ಮೊದಲು ಒಂದು ಹುಡುಗಿಯನ್ನು ಪ್ರೀತಿಸಿದ್ದೆ. ಆದರೆ ಅವಳು ನನಗೆ ಸಿಗಲಿಲ್ಲ. ಅವಳ ನೆನಪಿನಲ್ಲಿ ಕುಡುಕನಾದೆ..ನಾನು ತುಂಬಾ ಕುಡಿಯುತ್ತೇನೆ. ನಿಮ್ಮಿಂದ ಸತ್ಯ ಮುಚ್ಚಿಟ್ಟು ನಿಮಗೆ ಕುಡುಕ ಗಂಡನಾಗುವುದು ನನಗಿಷ್ಟವಿಲ್ಲ “ಎಂದು ನೇರವಾಗಿ ನುಡಿದಿದ್ದ. ಅವನ ನೇರ ನುಡಿ ಇಷ್ಟವಾದರೂ ಅವಳಿಗೇಕೋ ಕಸಿವಿಸಿಯಾಯಿತು. ಫೋನ್ ಮಾಡಿ ಒಪ್ಪಿಗೆ ಇದ್ದರೆ ತಿಳಿಸುವುದಾಗಿ ಹೇಳಿ ಅಮ್ಮನನ್ನು ಕರೆದುಕೊಂಡು ಹೊರಟ. ಅವನ ಫೋನ್ ನಂಬರ್ ಅಪ್ಪನ ಮೊಬೈಲ್’ನಲ್ಲಿತ್ತು. ಅವರ ಸಂಬಂಧಿಯಿಂದ ಹುಡುಗ ಯಾವಾಗ ನೋಡಲು ಬರುತ್ತಾನೆಂದು ತಿಳಿಯಲು ಫೋನ್ ನಂಬರ್ ತೆಗೆದುಕೊಂಡಿದ್ದರು ಹೇಮಾಳ ಅಪ್ಪ. ತುಂಬಾ ಯೋಚಿಸಿ ಹೇಮಾ ಒಂದು ನಿರ್ಧಾರಕ್ಕೆ ಬಂದು ಅಪ್ಪನ ಮೊಬೈಲ್’ನಿಂದ ಜನಾರ್ಧನನ ನಂಬರ್ ತೆಗೆದುಕೊಂಡು ಜನಾರ್ಧನನಿಗೆ ಕರೆ ಮಾಡಿದಳು.”ನಿಮ್ಮ ನೇರ ಮಾತು ನನಗಿಷ್ಟವಾಯಿತು..ನಿಮ್ಮನ್ನು ಮದುವೆಯಾಗಲು ನನಗೊಪ್ಪಿಗೆಯಿದೆ”ಎಂದಿದ್ದಳು .ಆದರೆ ಜನಾರ್ಧನ ಒಪ್ಪಿರಲಿಲ್ಲ. ಅವಳು ಮಾತ್ರ ಅವನನ್ನು ಪ್ರೀತಿಸಲಾರಂಭಿಸಿದ್ದಳು. ಇತ್ತೀಚೆಗೆ ಅವಳು ಹೇಳಿದ ಮಾತು ಸತ್ಯವೆನಿಸತೊಡಗಿತ್ತು.”ನಾವು ಯಾರನ್ನು ಪ್ರೀತಿಸುತ್ತೇವೋ ಅವರ ಹಿಂದೆ ಬೀಳುವುದಕ್ಕಿಂತ ನಮ್ಮನ್ನು ಪ್ರೀತಿಸುವವರಿಗೆ ಬೆಲೆ ಕೊಟ್ಟರೆ ನಮ್ಮ ಜೀವನ ಸುಖಮಯವಾಗುತ್ತದೆ. ಕಾಲ ಎಲ್ಲವನ್ನೂ ಮರೆಸುತ್ತದೆ..”ಎಂದು ನುಡಿದ ಹೇಮಾಳ ಮಾತು ಸತ್ಯ ಎನಿಸತೊಡಗಿತ್ತು..ಅವನ “ಜಾನೂ”ವಿನ ಜಾಗವನ್ನು “ಹೇಮಾ” ಆವರಿಸಿಕೊಂಡಿದ್ದಳು ..ಜನಾರ್ಧನ ಮದುವೆಗೆ ಒಪ್ಪಿದ್ದ. ಹೇಮಾ ಜನಾರ್ಧನ ದಂಪತಿಗಳಾಗಿದ್ದರು. ಜನಾರ್ಧನ ಕುಡಿಯುವುದನ್ನು ಕಡಿಮೆ ಮಾಡಿದ್ದ. ಸುಶಾಂತ್ ಅದೇ ರೂಮಿನಲ್ಲಿದ್ದ. ಆಗಾಗ ಜನಾರ್ಧನ ಬಂದು ನೋಡಿಕೊಂಡು ಹೋಗುತ್ತಿದ್ದ. ಸುಶಾಂತ್’ನನ್ನು ತನ್ನ ಮನೆಗೆ ಕರೆದುಕೊಂಡು ಹೋಗಲು ಯೋಚಿಸಿದ. ಆದರೆ ಹೇಮಾ ಸುಶಾಂತ್’ನಿಂದ ಜನಾರ್ಧನ ಮತ್ತೆ ಕುಡಿತ ಜಾಸ್ತಿ ಮಾಡಬಹುದೆಂದು ಒಪ್ಪಲಿಲ್ಲ. ಅಸಲಿಗೆ ಸುಶಾಂತ್’ಗೆ ಕುಡಿತದ ಹವ್ಯಾಸವಿರಲಿಲ್ಲ. ತನ್ನ ಜಾನೂವಿಗೆ ಕುಡಿಯುವವರನ್ನು ಕಂಡರೆ ಆಗಿಬರುತ್ತಿರಲಿಲ್ಲ ಎಂದು ಅವನಿಗೆ ಗೊತ್ತಿತ್ತು. ಅವಳ ನೆನಪಿನಲ್ಲಿ ದಿನಗಳು ಕಳೆದು ಹೋಗುತ್ತಿದ್ದವು. ಜನಾರ್ದನ ಎಷ್ಟು ಹೇಳಿದರೂ ಅವನು ಮದುವೆಯಾಗಲು ಒಪ್ಪಲಿಲ್ಲ ಸುಶಾಂತ್ ಜನಾರ್ಧನನ ಒತ್ತಾಯಕ್ಕೆ ಸಮೀಪದಲ್ಲಿದ್ದ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ರಾತ್ರಿ ಒಬ್ಬೊಬ್ಬನೇ “ಜಾನೂ …..ನಾನು ಮೋಸಗಾರನಲ್ಲ ಕಣೆ …”ಎಂದು ಬಡಬಡಿಸುತ್ತಿದ್ದ. ಜನಾರ್ಧನ ಹೆಣ್ಣು ಮಗುವಿನ ತಂದೆಯಾಗಿದ್ದ. “ತನು” ತನ್ನ ತೊದಲು ಮಾತುಗಳಿಂದ ಎಲ್ಲಾ ನೋವುಗಳನ್ನು ಮರೆಯುವಂತೆ ಮಾಡಿದ್ದಳು ಜನಾರ್ಧನನಿಗೆ. ಅವನ ಸಂಸಾರ ನೋಡಿದಾಗಲೆಲ್ಲ. . “ಎಲ್ಲ ಸರಿಯಾಗಿದ್ದಿದ್ದರೆ ಜಾನೂ ತನ್ನ ಹೆಂಡತಿಯಾಗಿರುತ್ತಿದ್ದಳು. ನಮಗೊಂದು ಮಗುವಾಗಿರುತ್ತಿತ್ತು ” ಎಂದುಕೊಳ್ಳುತ್ತಿದ್ದ ಸುಶಾಂತ್ ..ಜಾಹ್ನವಿ ದೂರವಾಗಿ ಹದಿನೆಂಟು ವರ್ಷಗಳುರಿದ್ದವು. ಅವನ ಅನ್ಯಮನಸ್ಕತೆಯಿಂದ ಕೆಲಸವನ್ನೂ ಕಳೆದುಕೊಂಡಿದ್ದ..ಸುಶಾಂತ್ ಹಿಂದೆ ಆಸ್ತಿ ಮಾರಿ ಕೊಟ್ಟಿದ್ದ ಹಣದಲ್ಲಿ ಅವನನ್ನು ನೋಡಿಕೊಳ್ಳುತ್ತಿದ್ದ..ಹಣ ಖಾಲಿಯಾದರೂ ತನ್ನ ಹಣದಲ್ಲಿ ಅವನನ್ನು ನೋಡಿಕೊಳ್ಳುತ್ತಿದ್ದ..ಇದರಿಂದ ಸುಶಾಂತನ ಮನಸಿಗೆ ಪಿಚ್ಚೆನಿಸಿದರೂ ಬೇರೆ ದಾರಿ ಇರಲಿಲ್ಲ.
ಜಾಹ್ನವಿಯ ಚಿತ್ರ ಬರೆಯುತ್ತಲೇ ಕಾಲ ಕಳೆಯುತ್ತಿದ್ದ ಸುಶಾಂತ್ ……ಮತ್ತೊಂದು ಅನಿರೀಕ್ಷಿತ ಘಟನೆಯಿಂದ ಅವನು ಪೂರ್ಣ ಮಂಕಾಗಿ ಹೋದ.ಮಾತನ್ನೇ ಮರೆತುಬಿಟ್ಟ. ಜಾಹ್ನವಿಯನ್ನು ಇಷ್ಟು ವರ್ಷಗಳ ಮೇಲೆ ನೊಡಿದ್ದ. ಆ ದಿನ ತಮ್ಮ ಮನೆದೇವರ ಜಾತ್ರೆಗೆಂದು ಮಕ್ಕಳು ಗಂಡನೊಡನೆ ಬಂದಿದ್ದಳು ಜಾಹ್ನವಿ. ಹದಿನೆಂಟು ವರ್ಷಗಳ ಹಿಂದೆ ಜಾಹ್ನವಿ ಹೇಳಿದ್ದ ಮಾತು ಅವನಿಗೆ ನೆನಪಿತ್ತು.”ಪ್ರತಿಮೂರು ವರ್ಷಕ್ಕೊಮ್ಮೆ ಆ ಜಾತ್ರೆ ನಡೆಯುತ್ತದೆ ಎಂದೂ….ಎಷ್ಟೇ ಕಷ್ಟಗಳಿದ್ದರೂ….ಎಷ್ಟೇ…ಕೆಲಸಗಳಿದ್ದರೂ ಅವರ ಮನೆಯಲ್ಲಿ ಆ ಜಾತ್ರೆ ತಪ್ಪಸುವುದಿಲ್ಲ….ತಪ್ಪಿಸಿದರೆ ಮನೆಗೆ ಕೇಡಾಗುತ್ತದೆ ಎಂದು ತನ್ನ ತಂದೆ ತಾಯಿಯ ನಂಬಿಕೆ “ಎಂದು ಹೇಳಿದ್ದಳು. ಅವಳು ಆ ಜಾತ್ರೆಗಾದರೂ ಬಂದೇ ಬರುತ್ತಾಳೆಂದು ನನ್ನ ಅದೃಷ್ಟವಿದ್ದರೆ ಸಿಕ್ಕೇ ಸಿಗುತ್ತಾಳೆ…….”ನಾನು ಮೋಸಗಾರನಲ್ಲನೆಂದು ಹೇಳಬೇಕು ” ಎಂದು ಆ ಜಾತ್ರೆಗೆ ತಪ್ಪದೇ ಬರುತ್ತಿದ್ದ ಸುಶಾಂತ್. ಈ ದಿನ ಅವನ ಅದೃಷ್ಟಕ್ಕೆ ಅವಳು ಜಾತ್ರೆಗೆ ಬಂದಿದ್ದಳು..ಹದಿನೆಂಟು ವರ್ಷಗಳಲ್ಲಿ ಇದು ಆರನೆ ಬಾರಿ ಅವನು ಜಾತ್ರೆಗೆ ಬಂದಿದ್ದು ಜಾತ್ರಗೆ ಬಂದಾಗಲೆಲ್ಲಾ ಹುಚ್ಚನಂತೆ ಜಾತ್ರೆ ಪೂರ್ತಿ ತಿರುಗುತ್ತಿದ್ದ. ಆದರೆ ಅವಳು ಆ ಜಾತ್ರೆಗೆ ಬಂದಿದ್ದಳೇನೋ ಸುಶಾಂತ್’ಗೆ ಮಾತ್ರ ಸಿಕ್ಕಿರಲಿಲ್ಲ. ಹೀಗೆ ಈ ಸಲವೂ ಅವಳನ್ನು ಹುಡುಕುತ್ತ ತಿರುಗುತ್ತಿರುವಾಗ ಆಕಸ್ಮಾತ್ ಆಗಿ ಸಿಕ್ಕಿದ್ದಳು ಜಾಹ್ನವಿ. ಗುರುತು ಹಿಡಿಯಲು ಮೊದಲು ಕಷ್ಟವಾಯಿತವನಿಗೆ. ತುಂಬಾ ಸೊರಗಿ ಹೋಗಿದ್ದಾಳೆ ಎನಿಸಿತವನಿಗೆ. ಗಂಡ ಮಕ್ಕಳು ಆಗಲೇ ಕಾರಲ್ಲಿ ಕುಳಿತಾಗಿತ್ತು. ದೇವಿಯ ಕುಂಕುಮ ತರುವುದು ಮರೆತುಹೋಯ್ತು ಎಂದು ತಿರುಗಿ ಬಂದಿದ್ದಳು. ಕುಂಕುಮ ತೆಗೆದುಕೊಂಡು ಅವಸರವಾಗಿ ಹೊರಟಿದ್ದವಳನ್ನು “ಜಾನೂ……ಜಾನೂ……” ಎಂದು ಕರೆಯುತ್ತಾ ಹಿಂಬಾಲಿಸಿದ. ಅಷ್ಟೊಂದು ಜನರ ಗದ್ದಲದಲ್ಲಿ ಅವನಿಗಿಂತ ಮುಂದೆ ಹೋಗುತ್ತಿದ್ದ ಅವಳಿಗೆ ಆ “ಜಾನೂ” ಎಂಬ ಮರೆತು ಹೋದ ಹೆಸರು ಕೇಳಿಸಲೇ ಇಲ್ಲ. ತಡವಾಗಿದೆ ಎಂದು ರವಿ ಬೇಗನೇ ಬರಲು ಹೇಳಿದ್ದ. ಬಂದವಳೇ ಕಾರಿನ ಬಾಗಿಲು ತೆಗೆದು ರವಿಯ ಪಕ್ಕದ ಸೀಟಿನಲ್ಲಿ ಕುಳಿತಳು. ಸುಶಾಂತ್ ಜನರನ್ನು ತಳ್ಳಿಕೊಂಡು ಅವಳಿರುವ ಸ್ಥಳ ತಲುಪುವುದರಲ್ಲಿ ಕಾರು ಚಲಿಸಿ ಆಗಲೇ ತುಂಬಾ ಮುಂದೆ ಹೋಗಿತ್ತು..”ಜಾನೂ ….ನಾನು ಮೋಸಗಾರ ಅಲ್ಲ ಕಣೇ..ಇದೊಂದು ಮಾತು ಹೇಳಲು ಜೀವ ಹಿಡಿದುಕೊಂಡಿದ್ದೇನೆ ಕಣೇ….”ಎಂದು ನೆಲದ ಮೇಲೆ ಅಳುತ್ತಾ ಉರುಳಾಡಿದ ..ಜನ ಯಾವುದೋ ಹುಚ್ಚನಿರಬೇಕೆಂದು ಸುಮ್ಮನಾದರು. ತನ್ನದೇ ಮಕ್ಕಳ ಮುಖ ನೋಡದಂತೆ ತಡೆದಿತ್ತು ವಿಧಿ……ವಿಚಿತ್ರವಲ್ಲವೇ ವಿಧಿಯಾಟ …..
ಮುಂದುವರಿಯುವುದು ……