ಆತ್ಮ ಸಂವೇದನಾ. ಅಧ್ಯಾಯ 35
ಕಪ್ಪು ಜೀವಿಗಳ ಅಂತ್ಯವಾಗಿತ್ತು. ಮನುಷ್ಯ ಬದುಕು ಉಳಿಸಿಕೊಂಡಿದ್ದ. ಆದರೂ ಆಚರಿಸುವ ಹುಮ್ಮಸಿರಲಿಲ್ಲ ಭೂಮಿಯಲ್ಲಿ. ಏಕೆಂದರೆ ಉಳಿದ ಪ್ರಾಣಿಗಳು, ಸಸ್ಯಗಳು ಎಲ್ಲವೂ ಸಾಯತೊಡಗಿದ್ದವು. ಮನುಷ್ಯನನ್ನು ರಕ್ಷಿಸಿದ ಪ್ರಕೃತಿಯೇ ಕೊನೆಯುಸಿರೆಳೆಯುತ್ತಿರುವಂತೆ ತೋರಿತು. ಇಲ್ಲಿ ಯಾವುದೂ ನಿರ್ಜೀವಿಯಲ್ಲ ಎಂದು ಮನುಷ್ಯ ಅರಿತುಕೊಂಡಿದ್ದ. ಈಗ ಎಲ್ಲವುಗಳ ರಕ್ಷಣೆಯ ಭಾರ ಮನುಷ್ಯನ ಹೆಗಲ ಮೇಲೆ.
ಜವಾಬ್ದಾರಿ ಹೆಗಲು ಹತ್ತಿದಾಗಲೇ ಮನುಷ್ಯನ ನಿಜವಾದ ಬದುಕು. ಅಲ್ಲಿಯವರೆಗೆ ಮಕ್ಕಳಾಟವೇ ಎಲ್ಲವೂ. ಕಪ್ಪು ಜೀವಿಗಳು ಆತ್ಮನನ್ನು ಕುರಿತು ನೀನೊಬ್ಬ ಮಾತ್ರ ವರ್ಷಿಯ ಮನಸ್ಸನ್ನು ಮೀರಬಲ್ಲೆ ಎಂದಿದ್ದವು. ಆತ್ಮನಿಗೆ ಅವನ ಬಗ್ಗೆಯೇ ಅಷ್ಟೊಂದು ವಿಶ್ವಾಸವಿರಲಿಲ್ಲ. ಸ್ವಲ್ಪ ಸಮಯ ವರ್ಷಿಯ ಪ್ರಯೋಗಾಲಯದಲ್ಲಿ ಏಕಾಂಗಿಯಾಗಿರುತ್ತೇನೆಂದು ಕಪ್ಪು ಜೀವಿಗಳನ್ನೂ, ಸನಾಳನ್ನೂ ಹೊರಗಡೆ ಕಳುಹಿಸಿದ. ವರ್ಷಿ ಎಂತಹ ಕೆಲಸ ಮಾಡಿದೆ ನೀನು? ಇದರ ಪರಿಣಾಮಗಳನ್ನು ಎಲ್ಲರೂ ಅನುಭವಿಸುತ್ತಿದ್ದಾರೆ. ಎಲ್ಲವೂ ನೋವುಣ್ಣುತ್ತಿದೆ ಎಂದು ಯೋಚಿಸುತ್ತ ಕುಳಿತಿದ್ದ.
ಒಮ್ಮೆಲೇ ವಿಶ್ವಾತ್ಮ ನೆನಪಾದ ಆತ್ಮನಿಗೆ. ವಿಶ್ವಾತ್ಮ ಇರುವುದು ನಿಜವೇ? ಸಾಯುವಾಗ ವರ್ಷಿ ಕೂಡ ವಿಶ್ವಾತ್ಮನಿರುವುದೇ ಸುಳ್ಳು ಎಂದುಬಿಟ್ಟಿದ್ದಾನೆ. ಈಗ ವರ್ಷಿಯ ಎರಡನೇ ಸೂರ್ಯನನ್ನು ಹೇಗೆ ನಾಶ ಮಾಡುವುದು? ಕೇವಲ ವರ್ಷಿಯ ಮನಸ್ಸಿನ ನಿಗ್ರಹ ಶಕ್ತಿ ಎರಡನೇ ಸೂರ್ಯನನ್ನು ಸೃಷ್ಟಿಸಿತೇ??? ಇಲ್ಲಿರುವ ಗಾಜಿನ ಪೆಟ್ಟಿಗೆ ಅದರ ಕೆಂದ್ರ ಮಾತ್ರವೇ? ಏನು ಮಾಡಬೇಕು? ವಿಶ್ವಾತ್ಮ ನೀನೇ ಹೇಳು ಎಂದು ಬೇಡಿಕೊಂಡ ಮನಸ್ಸಿನಲ್ಲಿಯೇ.
ಅವನ ಮನಸ್ಸು ನಿಜವಾಗಿಯೂ ವಿಶ್ವಾತ್ಮನನ್ನು ನಂಬಿ ಕರೆದಿತ್ತು. ವಿಶ್ವಾತ್ಮನೂ ಅದಕ್ಕೇ ಕಾಯುತ್ತಿದ್ದ. “ಆತ್ಮ” ಮೆಲುವಾದ ಧ್ವನಿಯೊಂದು ಕೇಳಿಸಿತು. ಆತ್ಮ ತನ್ನದೇ ಯೋಚನೆಗಳ ಲಹರಿಯಲ್ಲಿದ್ದ. ಆತ ಆ ಧ್ವನಿಯನ್ನು ಗ್ರಹಿಸಲಿಲ್ಲ.
ಒಮ್ಮೆ ಮಾತನಾಡಿಸುವ ಮನಸ್ಸು ಮಾಡಿದರೆ ವಿಶ್ವಾತ್ಮ ಸುಮ್ಮನಿರುವವನಲ್ಲ. “ಆತ್ಮ..” ಎಂದ ಮತ್ತೊಮ್ಮೆ. ಈ ಬಾರಿ ಆತ್ಮ ಸುತ್ತಲೂ ನೋಡಿದ. ಯಾರೂ ಕಾಣಿಸಲಿಲ್ಲ ಆತನಿಗೆ. “ಯಾರು!?” ಭಯವಿರಲಿಲ್ಲ ಆತನ ಮಾತಿನಲ್ಲಿ. ಏನೋ ಅವ್ಯಕ್ತ ಅನಿಸಿಕೆಗಳು ಮನಸಿನ ಆಳದಲ್ಲಿ, ಯೋಚನೆಗಳ ಆರಂಭದಲ್ಲಿ.
“ಇಷ್ಟು ಹೊತ್ತು ನೀನು ಕಾಣಲು ಬಯಸಿರುವ ವಿಶ್ವಾತ್ಮ.!!”
ನಂಬದಾದ ಆತ್ಮ. ನಾನು ಭ್ರಮೆಯಲ್ಲಿ ಸಿಲುಕಿರಬಹುದು. ಇದು ಕೇವಲ ನನಗೆ ನಾನೇ ಮಾಡಿಕೊಂಡ ಹಿಪ್ನಾಟಿಸಂ ಎಂದುಕೊಂಡ. ಆದರೆ ಆ ಧ್ವನಿ ಮತ್ತೆ ಕೇಳಿಸಿತು.
“ನೀನು ಕೇಳುತ್ತಿರುವುದು ನಿಜವೇ. ಇದು ಭ್ರಮೆಯಲ್ಲ.” ಆತ್ಮ ಎಂದೂ ಕೇಳಿರದ ಸುಮಧುರ ನಾದವೊಂದು ಕಿವಿಯ ತುಂಬಿತು. ಆತ್ಮ ಅದರ ಮೋಡಿಗೆ ಒಳಗಾದ. ತಾನೇನು ಹೇಳಬೇಕೆಂದುಕೊಂಡಿದ್ದೆನೋ ಅವೆಲ್ಲವೂ ಇರುವಲ್ಲಿಯೇ ಕಲ್ಲಾದವು. ಏನೂ ಮಾಡದಾದ ಆತ್ಮ.
ವಿಶ್ವಾತ್ಮನೇ ಮುಂದುವರೆಸಿದ. “ಅಷ್ಟೊಂದು ಭಾವುಕನಾಗದಿರು ಆತ್ಮ. ನಾನು ಕೂಡ ನಿನ್ನಂತೆಯೇ ಒಬ್ಬ ಸಾಮಾನ್ಯ ಜೀವಿ. ಈಗ ನಿನ್ನ ಹೆಗಲ ಮೇಲೆ ದೊಡ್ಡ ಜವಾಬ್ದಾರಿಯಿದೆ. ನೀನು ಎರಡನೇ ಸೂರ್ಯನನ್ನು ನಾಶ ಮಾಡಬೇಕಿದೆ. ಆತ್ಮ” ವಿಶ್ವಾತ್ಮ ಆತ್ಮನ ಜೊತೆಯಾಗಿದ್ದ.
“ನಾನು!? ಅದು ಸಾಧ್ಯವಿಲ್ಲ. ಪ್ರಯತ್ನಿಸಿದರೆ ಆಗಬಹುದೇನೋ. ಅದು ನಿನ್ನ ಬಳಿಯೂ ಆಗದ ಕೆಲಸವೇನೂ ಅಲ್ಲ. ನೀನೇ ಅದಕ್ಕೆ ಸಮರ್ಥ ವ್ಯಕ್ತಿ. ಎರಡನೇ ಸೂರ್ಯನನ್ನು ನೀನೇ ನಾಶಗೊಳಿಸು ವಿಶ್ವಾತ್ಮ.” ಮೌನಿಯಾದ ಆತ್ಮ.
ವಿಶ್ವಾತ್ಮ ಮುಗುಳ್ನಕ್ಕ. “ನೀನು ಹೇಳುವುದು ಸರಿಯೇ ಆತ್ಮ. ಅದು ನನಗೆ ಸುಲಭದ ಕೆಲಸ. ನಿನ್ನ ಬಳಿಯೂ ಆಗದ ಕೆಲಸವೇನೂ ಅಲ್ಲ. ಆಗದ್ದು ಎಂಬುದು ಈ ಪ್ರಪಂಚದಲ್ಲಿ ಯಾವುದೂ ಇಲ್ಲ. ಅದನ್ನು ನೀನೇ ಮಾಡಬೇಕು. ಕೇವಲ ಮನಸ್ಸನ್ನು ನಿಗ್ರಹಿಸು ಆತ್ಮ” ಧೈರ್ಯ ತುಂಬಿದ ವಿಶ್ವಾತ್ಮ.
“ಅದೇ ಏಕೆ? ಪ್ರಪಂಚದಲ್ಲಿರುವ ಎಲ್ಲರನ್ನೂ ಬಿಟ್ಟು ನಾನೇ ಏಕೆ?” ಕೇಳಿದ ಆತ್ಮ.
ವಿಶ್ವಾತ್ಮ ಮತ್ತೆ ನಕ್ಕ. “ಎಲ್ಲ ಕೆಲಸಗಳೂ ಎಲ್ಲರಿಂದಲೂ ಸಾಧ್ಯ ಆತ್ಮ. ಆದರೆ ಪ್ರತಿಯೊಬ್ಬರಿಗೂ ಅವರದೇ ಆದ ಒಂದು ದಾರಿ ಎಂಬುದಿರುತ್ತದೆ. ಸಿಗುವ ಸಮಯದಲ್ಲಿ ಎಲ್ಲ ದಾರಿಗಳನ್ನು ಕ್ರಮಿಸುವುದು ಕಷ್ಟ. ದಾರಿ ಯಾವುದಾದರೇನು? ಗುರಿ ಪರಮಾತ್ಮನೆಡೆಗೆ.
ಎಂತಹ ಪ್ರಚೋದನೆ ಸಿಗುತ್ತದೆ ಎಂಬುದರ ಮೇಲೆ ಪ್ರತಿಕ್ರಿಯೆ ನಿರ್ಧಾರವಾಗುತ್ತದೆ. ಕೊಡುವ ಪ್ರಚೋದನೆ ಎಂತಹುದಿರುತ್ತದೆಯೋ ಅದರ ಮೇಲೆ ಜೀವನದ ದಾರಿ. ಹಾಗೆಯೇ ನಿನಗೆ ಸಿಕ್ಕ ಪ್ರಚೋದನೆಗಳು ಮತ್ತು ನೀನಿತ್ತ ಪ್ರತಿಕ್ರಿಯೆಗಳು ನಿನ್ನನ್ನು ಈ ದಾರಿಯಲ್ಲಿ ನಿಲ್ಲಿಸಿವೆ. ನೀನು ನನಗೆ ಪ್ರತ್ಯೇಕವಲ್ಲ. ನೀನೊಬ್ಬನೇ ಅಲ್ಲ, ಯಾರೂ ಬೇರೆಯಲ್ಲ ನನಗೆ. ನನಗೆ ಎಂಬುದಕ್ಕಿಂತ ವಿಶ್ವದ ಅತಿ ದೊಡ್ಡ ಶಕ್ತಿಗೆ ಎಲ್ಲರೂ ಒಂದೇ ಆತ್ಮ.”
ವಿಶ್ವಾತ್ಮನ ವಾಗ್ಝರಿ ಮುಗಿದಂತಾಯಿತು ಒಮ್ಮೆ.
“ನಾನು ಪ್ರಯತ್ನಿಸಿದೆ, ಆದರೆ ಸಾಧ್ಯವಾಗುತ್ತಿಲ್ಲ.” ಎಂದ ಆತ್ಮ.
“ಇಷ್ಟು ದಿನ ನೀನು ನನ್ನನ್ನು ನೋಡಲು ಪ್ರಯತ್ನಿಸಿದೆ, ಆದರೆ ಅದು ಸಾಧ್ಯವಾಗಲಿಲ್ಲ.
ಪ್ರತೀ ಯಶಸ್ಸಿಗೂ ನಿರ್ದಿಷ್ಟ ಪ್ರಮಾಣದ ಪ್ರಯತ್ನ ಅಗತ್ಯ; ಇಲ್ಲದಿದ್ದಲ್ಲಿ ಅದು ಯಶಸ್ಸೆನಿಸುವುದೇ ಕಷ್ಟ.
ಎಲ್ಲಿಯವರೆಗೆ ಜೀವಿ Effort ಹಾಕುವುದಿಲ್ಲವೋ, ಪ್ರತಿಕ್ರಿಯೆಗಳು ಪ್ರಚೋದನೆಗೆ ಸರಿಸಮವಾಗಿರುವುದಿಲ್ಲವೋ ಅಲ್ಲಿಯವರೆಗೆ ಯಶಸ್ಸು ದೂರವೇ ನಿಲ್ಲುತ್ತದೆ.
ಹತ್ತಿರ ಹೋದಷ್ಟೂ ದೂರ ಓಡುತ್ತದೆ;
ದೂರವಿದ್ದೇ ಕಣ್ಣೆದುರು ಆಡುತ್ತದೆ.
ಯಶಸ್ಸು ಬಣ್ಣದ ಜಿಂಕೆ, ಮರೀಚಿಕೆ.
ಪ್ರತೀ ಜೀವಿಯೂ ಕನಸು ಕಾಣಬೇಕು. ಕನಸುಗಳು ಪ್ರಪಂಚದಷ್ಟಿರಬೇಕು, ಬರೆದರೂ ಮುಗಿಯದ ಬದುಕಿನಷ್ಟಿರಬೇಕು. ಕಾಣುವ ಕನಸುಗಳೇ ಚಿಕ್ಕದಾದರೆ ಅದೇ ಪರಿಧಿ. ಕನಸಿಗೆ ಪರಿಧಿಯಿರಬಾರದು. ಗುರಿಯೂ ಉನ್ನತವಾಗಿಯೇ ಇರಬೇಕು. ಕೇವಲ ಕನಸುಗಳು ಕಾಣುವುದಕ್ಕಲ್ಲ. ಹಗಲು ರಾತ್ರಿಗಳ ಅರಿವಿಲ್ಲದೆ ಕನಸು ಕಂಡವ ಹುಚ್ಚನಂತೆ ಕನವರಿಸುತ್ತಾನೆ. ಕಂಡ ಕನಸಿನೆಡೆಗೆ ಹೆಜ್ಜೆ ಹಾಕುವವ ಎತ್ತರದಲ್ಲಿ ನಿಲ್ಲುತ್ತಾನೆ. ವಿಶ್ವವು ಪ್ರತೀ ಜೀವಿಯ ಕನಸುಗಳನ್ನು ನನಸಾಗಿಸಲು ಕಾಯುತ್ತಿರುತ್ತದೆ. ಜೀವಿಯು ವಿಶ್ವವನ್ನು ಪ್ರಚೋದಿಸಬೇಕು. ವಿಶ್ವಕ್ಕೆ ಅದರ ನಿರೀಕ್ಷೆಯ ಪ್ರತಿಕ್ರಿಯೆ ನೀಡಬೇಕು ಇಷ್ಟೇ. ಇದೇ ಸತ್ಯ ಆತ್ಮ, ಬದುಕ ಬಯಲಿನ ಸತ್ಯ.”
ಆತ್ಮನ ಮನಸ್ಸಿನಲ್ಲಿ ವಿಶ್ವಾಸ ಮೂಡುತ್ತಿತ್ತು. ದೊಡ್ಡ ಕನಸುಗಳನ್ನು ಕಾಣುವವ ಅದರತ್ತ ನಡೆಯತೊಡಗಿದರೆ ವಿಶ್ವ ಜೊತೆಯಿರುತ್ತದೆ. ಪ್ರಕೃತಿ ನೆರಳು ನೀಡುತ್ತದೆ.
ವಿಶ್ವಾತ್ಮ ಮುಂದುವರೆಸಿದ- “ನೀನು ಆತ್ಮನಾಗಿ ಪ್ರಯತ್ನಿಸುತ್ತಿರುವೆ. ನಿನಗೇನು ತಿಳಿದಿದೆಯೋ ಅದರ ಬಗ್ಗೆ ಮಾತ್ರ ಯೋಚಿಸುತ್ತಿರುವೆ. ನಿನ್ನ ಪ್ರಯತ್ನಗಳು ನಿನಗೆ ಹಿತವೆನ್ನಿಸಿದ ಕ್ರಿಯೆಗಳಲ್ಲಿ ಮಾತ್ರ. ಅದಕ್ಕೇ ವಿಫಲತೆ ಕಾಡುವುದು. ಒಮ್ಮೆ ಮುಗ್ಧವಾಗು, ಪುಟ್ಟ ಮಗುವಾಗು. ನಿನಗೇನೂ ತಿಳಿದಿಲ್ಲ ಎಂಬಂತೆ ಪ್ರಯತ್ನಿಸು ಆತ್ಮ.
ಪುಟ್ಟ ಮಗು ನಡೆಯಲು ಕಲಿಯುವಾಗ ಎಡವುತ್ತದೆಂದು ತಿಳಿದಿರುವುದೇ ಇಲ್ಲ; ಬುದ್ಧಿಯಿರುವವ ಎಡವುತ್ತದೆಂದು ತಿಳಿದರೆ ನಡೆಯುವುದೇ ಇಲ್ಲ.
ಚಿಕ್ಕ ಮಗುವಿಗೆ ಏನೂ ತಿಳಿದಿರುವುದಿಲ್ಲ. ಕೇವಲ ಮುಗ್ಧತೆ, ಆದರೆ ಮೈತುಂಬ ಆತ್ಮವಿಶ್ವಾಸ. ತಿಳುವಳಿಕೆಯು ಅಷ್ಟಕ್ಕೆ ಅಷ್ಟೆ ಅದಕ್ಕೆ. ಕಲಿಯುವ ಹಂಬಲ. ಮಗು ತಪ್ಪು ಮಾಡುತ್ತದೆ, ತಿದ್ದಿಕೊಳ್ಳುತ್ತದೆ. ದೊಡ್ಡವ ತಪ್ಪು ಮಾಡುತ್ತಾನೆ, ತಿರುಗಿ ನೋಡದೆ ಮುಂದೆ ನಡೆಯುತ್ತಾನೆ.
ಮಗುವಿನ ಹಿಂದೆ ಪ್ರಕೃತಿ; ದೊಡ್ಡವನ ಹಿಂದೆ ಪಾಪಗಳ ನೆರಳು.
ಏನೂ ತಿಳಿಯದ ಮಗು ಎಲ್ಲವನ್ನೂ ಕಲಿಯುತ್ತ ಹೋಗಿ ಬಿಡುತ್ತದೆ, ಸಾಧಿಸಲೂ ಸಿದ್ಧ. ಅಷ್ಟರಲ್ಲಿ ಬುದ್ಧಿ ಬೆಳೆದಿರುತ್ತದೆ; ಬಲಿತಿರುತ್ತದೆ. ಕಲಿತ ವಿಷಯಗಳ ಬಗ್ಗೆ ಅಹಂ ಹುಟ್ಟಿಕೊಳ್ಳುತ್ತದೆ. ತರ್ಕ, ವಿತರ್ಕಗಳಿಗೆ ಜೋತು ಬೀಳುತ್ತಾನೆ. ಆಗ..!? ಪ್ರಕೃತಿ ದೂರ ನಿಲ್ಲುತ್ತದೆ. ಕಲಿಯುವಾಗ, ಸಾಧಿಸುವಾಗ ಏನೂ ತಿಳಿದಿಲ್ಲ ಎಂಬ ಭಾವವಿರಬೇಕು. ತಪ್ಪುಗಳಾಗುತ್ತವೆ ಆದರೂ ಸರಿಪಡಿಸಿ ಮುಂದೆ ಸಾಗಬೇಕು. ಅದೇ ಪ್ರಬಲತೆ ಆತ್ಮ.” ವಿಶ್ವಾತ್ಮ ಹೇಳುತ್ತಲೇ ಇದ್ದ. ಮಾತುಗಳೆಂದರೆ ನಿರಂತರ ಸತ್ಯದೆಡೆಗಿನ ಪ್ರಪಾತ; ಬಯಲ ಬದುಕಿನ ಭೋರ್ಗರೆವ ಜಲಪಾತ.
ಆತ್ಮ ಹುರಿಗೊಂಡ. ಆತನ ಪರಿಧಿ ವಿಸ್ತಾರವಾಯಿತು. ಸೋತು ನಿಂತಾಗಲೇ ಗೆಲ್ಲುವ ಹಟ, ಅಲ್ಲಿಂದಲೇ ಗೀತೆ ಪ್ರಾರಂಭವಾದದ್ದು. ಎರಡನೇ ಸೂರ್ಯನ ಬಿಂಬ ಕಡಿಮೆಯಾಗತೊಡಗಿತು. ಸತತ ಏಳು ದಿನಗಳ ನಂತರ ಆತ್ಮನಲ್ಲಿ ಹಿಗ್ಗು. ಅಲ್ಲಿಯವರೆಗೆ ಜೊತೆ ನಿಂತ ವಿಶ್ವಾತ್ಮ ಕಾಣೆಯಾಗಿದ್ದ. ಆತ್ಮ ಎಷ್ಟು ನೋಡಬೇಕೆಂದುಕೊಂಡರೂ ಕಾಣಿಸಲೇ ಇಲ್ಲ; ಕಣ್ಣೆದುರು ನಿಲ್ಲಲೇ ಇಲ್ಲ.
ಅಂದು ಎಲ್ಲರ ಮುಖದಲ್ಲಿ ಹೊಸ ಕಳೆ. ಭೂಮಿಯನ್ನು ಉಳಿಸಿಕೊಂಡ ಸಾರ್ಥಕತೆ ಮನುಷ್ಯನಿಗೆ.
ಕೆಟ್ಟ ಮಗನಿಗೂ ತಾಯಿ ಇಷ್ಟವೇ; ತೋರಿಸಿಕೊಳ್ಳುವುದಿಲ್ಲ ಅಷ್ಟೆ.
ಸುತ್ತಲೂ ಹಸಿರು; ಬದುಕು ಕಳೆ ತುಂಬಿತು. ಅಂದೆ ಆತ್ಮ ಸಂವೇದನಾ ಜೊತೆಯಾದರು. ಅವರೊಡನೆ ಅವೆಷ್ಟೋ ಸಾವಿರ ಜೋಡಿಗಳು. ವಿಶ್ವಾತ್ಮ ದೂರದಿಂದಲೇ ಎಲ್ಲವನ್ನೂ ನೋಡುತ್ತಿದ್ದ. ವಿಶ್ವದ ಅಭೂತ ಚೇತನ ಎಲ್ಲರ ಉಸಿರಿನ ಪಾಲುದಾರನಾಗಿ ಜೊತೆಯೇ ಇತ್ತು. ಭೂಮಿಯ ಮೇಲೆ ಹೊಸಪರ್ವ ಆರಂಭವಾಯಿತು.
ಪ್ರತೀ ಜೀವಿಗಳ ಆತ್ಮಕ್ಕೂ ಒಂದು ಪ್ರಚೋದನೆಯಾಗಿ ಒಬ್ಬಳು ಸಂವೇದನಾ. ಪ್ರತೀ ಸಂವೇದನೆಯೂ ಇನ್ನೊಂದು ಪ್ರತಿಕ್ರಿಯೆಯಾಗಿ ಆತ್ಮ ನಿನಾದ.
ಇದನ್ನೇ ನಾನು ಬಯಸಿದ್ದು ವಿಶ್ವಾತ್ಮ ಹಿಗ್ಗಿದ.
ಪ್ರತೀ ಆತ್ಮಕ್ಕೂ ಒಂದು ಸಂವೇದನಾ;
ಪ್ರತೀ ಸಂವೇದನೆಗೂ ಒಂದು ಆತ್ಮ.
ಪ್ರತೀ ಕ್ಷಣವೂ ಹೊಸ ಉಸಿರು,
ಪ್ರತೀ ಕ್ಷಣವೂ ಹೊಸ ಬದುಕು.
ಅದೇ ಆತ್ಮ ಸಂವೇದನಾ….