ಕಥೆ ಕಾದಂಬರಿ

ಆತ್ಮ ಸಂವೇದನಾ. ಅಧ್ಯಾಯ 35

ಆತ್ಮ ಸಂವೇದನಾ. ಅಧ್ಯಾಯ 34

ಭೂಮಿಯ ಮೇಲೆ ಎಲ್ಲ ಕಡೆ ನಿಶ್ಯಬ್ಧ. ಕ್ರೂರ ಕತ್ತಲಿನಂತೆ ಸ್ವಚ್ಛ ನಿಶ್ಯಬ್ಧ. ದೊಡ್ಡ ಗಡಿಯಾರದ ಕಡ್ಡಿಗಳು ಚಲಿಸುತ್ತಲೇ ಇದ್ದವು. ಅದೇ ಅವುಗಳ ಬದುಕು. ಕೊನೆಯ ಎರಡು ನಿಮಿಷಗಳು ಮಾತ್ರ ಬಾಕಿ ಇದ್ದವು. ಕಪ್ಪು ಜೀವಿಗಳು ಆಕ್ರಮಣ ಮಾಡುತ್ತವೆಯೆನೋ ಅಥವಾ ಈ ಅಧ್ಯಾಯ ಇಲ್ಲಿಗೆ ಮುಗಿಯಲೂಬಹುದು. ಅವೆಷ್ಟೊ ಜನರು ಜೀವ ಉಳಿಸಿಕೊಳ್ಳಲು ಮನೆಯೊಳಗಿನ ನೆಲಮಾಳಿಗೆಯೊಳಗೆ ಅವಿತು ಕುಳಿತಿದ್ದರು. ಮನದೊಳಗಿನ ಮಾಳಿಗೆ ಸಾವಿಗೆ ಹೆದರಿ ಕತ್ತಲಾಗಿತ್ತು. ಇನ್ನೊಂದಿಷ್ಟು ಜನ ಏನಾಗುವುದೋ ಆಗಿ ಬಿಡಲಿ ಎಂದು ಯುದ್ಧಕ್ಕೆ ಸಿದ್ಧರಾಗಿ ಬಂದು ನಿಂತಿದ್ದರು.
ಕಪ್ಪು ಜೀವಿಗಳನ್ನು ಹೇಗೆ ಎದುರಿಸಬೇಕು ಎಂದು ತಿಳಿಯದೆ ತಮ್ಮಲ್ಲಿರುವ ಎಲ್ಲ ಆಯುಧಗಳನ್ನು, ಆಯುಧಗಳಂತೆ ಕಂಡವುಗಳನ್ನು ಭಯದಿಂದಲೇ ಸಿದ್ಧ ಮಾಡಿಕೊಂಡು ಬಂದಿದ್ದರು. ಕೈ ತುಂಬ ಬಂದೂಕಿನ ಗೋಲಿಗಳು. ಕತ್ತಿ, ಗುರಾಣಿಯಂಥ ವಸ್ತುಗಳನ್ನೆಲ್ಲ ಮೈ ತುಂಬ ಸಿಕ್ಕಿಸಿಕೊಂಡು ಬಂದಿದ್ದರು. ಎಲ್ಲರೂ ಮನೆಯಿಂದ ಹೊರಬಂದು ಆಗಸದತ್ತ ನೋಡುತ್ತಿದ್ದರು.
ಪ್ರತೀ ಒಂದು ಸೆಕೆಂಡ್ ಗಳು ನಿಮಿಷಗಳಂತೆ ಭಾರವೆನಿಸಿತು. ಮುಂದಿನ ಕ್ಷಣ ಬಹಳ ದೂರವೆನಿಸಿತು. ಕೊನೆಯ ಒಂದು ನಿಮಿಷ ಬಾಕಿ ಉಳಿದಿತ್ತು. ಅದರಿಂದ ಅರ್ಧ ದಿನ ಮೊದಲು ಆ ಕಪ್ಪು ಜೀವಿಗಳು ಮನುಷ್ಯ ಉಳಿಯಲು ಮಾಡಬೇಕಾದ ಕೆಲಸವನ್ನು ಹೇಳಿದ್ದವು. ಮನುಷ್ಯ ಅದರಲ್ಲಿ ಸಫಲನಾಗಿದ್ದ.
“ನೀವು ಕಪ್ಪು ಜೀವಿಗಳನ್ನು ಎದುರಿಸಿ ಗೆಲ್ಲಬೇಕೆಂದರೆ ನಿಮ್ಮ ಸುತ್ತಲಿನ ಪ್ರಕೃತಿಯನ್ನು ಒಲಿಸಿಕೊಳ್ಳಬೇಕು. ಆಗ ಮಾತ್ರ ನಿಮ್ಮ ಉಳಿಗಾಲ ಸಾಧ್ಯ. ನಿಮ್ಮ ಬದುಕು ಶಾಶ್ವತವಾಗಬೇಕೆಂದರೆ ಈ ಭೂಮಿ, ನೀರು, ಗಾಳಿ.. ಪೂರ್ತಿ ಪ್ರಕೃತಿಯಿಂದ ಮಾತ್ರ ಸಾಧ್ಯ. ನಶ್ವರ ಜೀವನದ ಶಾಶ್ವತತೆಯ ಹಂಬಲ.
ಇಷ್ಟು ದಿನ ನೀವು ನಡೆಸಿದ ದಬ್ಬಾಳಿಕೆಯಿಂದ ಅವುಗಳೆಲ್ಲ ನಿಮ್ಮ ಮೇಲೆ ಸಿಟ್ಟಿಗೆದ್ದಿವೆ. ಎಲ್ಲರೂ ಅವರ ಮಕ್ಕಳೇ. ಮನವಿಟ್ಟು ಕೇಳಿಕೊಳ್ಳಿ. ಹೃದಯ ತುಂಬಿ ಶರಣೆನ್ನಿ. ಒಮ್ಮೆ ಅವುಗಳೆಲ್ಲ ಒಲಿದು ನಿಮ್ಮ ಜೊತೆಯಲ್ಲಿ ನಿಂತರೆ ಯಾವ ಆಯುಧಗಳೂ ಬೇಡ. ಯಾವ ಶಕ್ತಿಯೂ ನಿಮ್ಮೆದುರು ಗೆದ್ದು ನಿಲ್ಲಲಾರದು. ಕೇವಲ ಅದೊಂದು ದಾರಿಯಲ್ಲಿ ಮಾತ್ರ ನಿಮ್ಮ ಬದುಕು ನಡೆಯುವುದು. ಇಲ್ಲದಿದ್ದರೆ ಬದುಕ ದಾರಿ ಮುಚ್ಚಿಹೋಗುತ್ತದೆ. ಜೊತೆಯಲ್ಲಿ ನಡೆಯುವ ಕನಸುಗಳು ಕೊಚ್ಚಿ ಹೋಗುತ್ತವೆ.”
ಎಷ್ಟು ಜನ ನಂಬಿದರೋ, ಇಲ್ಲವೋ, ಅಲ್ಲಿಂದ ಒಂದು ಬದಲಾವಣೆಯ ಪರ್ವವಂತೂ ಆರಂಭವಾಗಿತ್ತು. ಉಸಿರಾಡುವ ಗಾಳಿ, ಉರಿಯುವ ಬೆಂಕಿ, ನಡೆಯುವ ಭೂಮಿ, ಕುಡಿಯುವ ನೀರು ಎಲ್ಲವೂ ಜೀವಿಗಳೇ. ಓ ಮನುಷ್ಯನೇ, ನೀನು ಗುರುತಿಸಲಾರದಾದೆ. ಕಣ್ಬಿಟ್ಟು ನೋಡು, ಮನಸ್ಸಿನ ಕಣ್ಣುಗಳನ್ನು ತೆರೆದು ನೋಡು. ವಿಶ್ವವು ಅದೆಷ್ಟು ಬಾರಿ ಸೂಚಿಸಿತ್ತು. ಮನುಷ್ಯ ಗಮನಿಸಿರಲಿಲ್ಲ. ಗ್ರಹಿಸಿರಲಿಲ್ಲ. ಆದರೀಗ ಸತ್ಯ ಕಣ್ಣೆದುರೇ ನಿಂತಿದೆ.
ಸತ್ಯ ಎಂದಿಗೂ ಹಾಗೆಯೇ. ಸತ್ಯವನ್ನು ಹೌದೆಂದು ಒಪ್ಪಿಕೊಂಡರೆ ಯಾವ ತೊಂದರೆಗಳೂ ಇರುವುದಿಲ್ಲ.ಸತ್ಯವನ್ನು ಸುಳ್ಳು ಎಂದು ಎಷ್ಟು ದಿನ ದೂರವಿಟ್ಟರೂ ಒಂದು ದಿನ ತನ್ನೆಲ್ಲ ಬಲವನ್ನು ಒಗ್ಗೂಡಿಸಿಕೊಂಡು ಮತ್ತೂ ಕಹಿಯಾಗಿ ಬದುಕಿನೆದುರು ಬಂದು ನಿಲ್ಲುತ್ತದೆ.
ಈಗ ಮನುಷ್ಯ ಅದನ್ನು ನಂಬಲೇ ಬೇಕಿತ್ತು, ಬೇರೆ ದಾರಿಯಿರಲಿಲ್ಲ; ಆಯ್ಕೆಗಳೂ ಉಳಿದಿರಲಿಲ್ಲ. ಪ್ರಯತ್ನ ನಮ್ಮದೆಂದು ಪ್ರತಿಯೊಬ್ಬರೂ ಪ್ರಕೃತಿಯೆದುರು ಶರಣಾದರು. ನಂಬಿಕೆಯಿಲ್ಲದವರೂ ಮನಸ್ಸಿನಲ್ಲಿಯೇ ಮಾಡಿದ ತಪ್ಪುಗಳನ್ನು ಕ್ಷಮಿಸು ಎಂದು ಶರಣಾಗಿದ್ದರು. ನಾವು ಕೂಡ ನಿನ್ನ ಮಕ್ಕಳು, ಆದ ತಪ್ಪುಗಳಿಗೆ ಕ್ಷಮೆಯಿರಲಿ, ಮುಂದೆ ಇಂಥವು ಪುನರಾವರ್ತನೆಯಾಗುವುದಿಲ್ಲವೆಂದು ಬಿನ್ನವಿಸಿಕೊಂಡರು. ಪೂರ್ತಿ ಮನುಕುಲವೇ ಅಂದು ಪ್ರಕೃತಿಯೆದುರು ಸೋತು ತಲೆ ತಗ್ಗಿಸಿತು. ಭೂಮಿಗೆ ಹಣೆ ಹಚ್ಚಿ ನಮಸ್ಕರಿಸಿತು.
ಸೋಲು ಅವಮಾನವಲ್ಲ; ಎದುರಿನವರ ಸಾಮರ್ಥ್ಯಕ್ಕೆ ನೀಡುವ ಗೌರವ.
ನಮಸ್ಕಾರ ಭಯವಲ್ಲ; ಭಕ್ತಿಯ ಪರಮರೂಪ.
ದುರಂತವೆಂದರೆ ಪ್ರಕೃತಿ ಮುನಿದಿತ್ತು. ವಿಷವಾದ ಗಾಳಿ, ಕಲುಷಿತ ನೀರು, ಕಸದ ತೊಟ್ಟಿಯಾದ ಭೂಮಿ, ಹೊತ್ತಿ ಉರಿಯುವ ಬೆಂಕಿ ಎಲ್ಲವೂ ಕೋಪಗೊಂಡಿದ್ದವು. ಮನುಷ್ಯನಿಗೆ ಇನ್ನೂ ಅಚ್ಚರಿಗೊಳಿಸುವ ಒಂದು ವಿಚಿತ್ರ ನಡೆದಿತ್ತು.
ಮನುಷ್ಯ ಯಾವುದನ್ನೆಲ್ಲ ನಿರ್ಜೀವ ಎಂದು ಬೇರ್ಪಡಿಸಿದ್ದನೋ, ಪಂಚಭೂತಗಳೆಲ್ಲವೂ ಮಾತನಾಡತೊಡಗಿದ್ದವು. ಹೇಗೆ ಸಾಧ್ಯವಿದು??
ಮನುಷ್ಯನ ಬೇಡಿಕೆಯನ್ನು ಅವು ಮನ್ನಿಸಲಿಲ್ಲ. ಇಷ್ಟು ದಿನದ ನಿರಂತರ ದಬ್ಬಾಳಿಕೆಗೆ ನೀನು ದಂಡ ಕಟ್ಟಬೇಕೆಂದು ಪ್ರತಿಯೊಬ್ಬನಿಗೂ ಎಚ್ಚರಿಸಿದವು. ಅವುಗಳ ಮಾತಿನಲ್ಲಿ ಸಿಟ್ಟಿತ್ತು. ಮನುಷ್ಯನ ಮೇಲಿನ ಮಡುಗಟ್ಟಿದ ಸೇಡಿತ್ತು.
“ನಾವು ಮನಸ್ಸು ಮಾಡಿದ್ದರೆ ಎಂದೋ ನಿಮ್ಮ ವಿನಾಶವಾಗಿ ಹೋಗುತ್ತಿತ್ತು,ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದು, ಕೆಟ್ಟ ತಾಯಿಯಲ್ಲ. ಈಗ ಅಂತ್ಯವೇ ನಿಮ್ಮೆದುರು ಬಂದು ನಿಂತಿದೆ. ನಾವದನ್ನು ನೋಡುತ್ತೇವೆ, ಆನಂದಿಸಲೂಬಹುದು. ವಿಷಾದದ ನಗುವೊಂದು ಹೊರಹೊಮ್ಮಬಹುದು ನಮ್ಮಿಂದ.” ಎಂದು ನಕ್ಕವು.
ತಾನೆಷ್ಟು ಮೂಢನಂತೆ ಯೋಚಿಸಿದ್ದೆ? ಇಷ್ಟು ದಿನದ ಸ್ವಾರ್ಥದ ಬದುಕಿಗೆ ಉಳಿದೆಲ್ಲವುಗಳನ್ನೂ ಎಷ್ಟು ಹೀನಾಯವಾಗಿ ನಡೆಸಿಕೊಂಡೆನಲ್ಲ. ಇಂದು ಸಹಾಯ ಬೇಕೆಂದಾಗ ಎದುರು ನಿಂತು ಶರಣಾದೆ, ಅವುಗಳ ಕೋಪ ಸರಿಯಾಗಿಯೇ ಇದೆ ಎಂದುಕೊಂಡ ಮನುಷ್ಯ.
ಸಾವು ಆತ್ಮ ವಿಮರ್ಶೆಯ ಘಟ್ಟ. ಸಾವು ಅನಿಹ ಬಂದಂತೆಲ್ಲ ಪ್ರತೀ ಜೀವಿಯೂ ತಾನು ಮಾಡಿದ ಕರ್ಮಗಳಲ್ಲಿ ಸರಿಗಳನ್ನು ಎಣಿಸುತ್ತಾನೆ. ನೀಡಿದ ಪ್ರತಿಕ್ರಿಯೆಗಳಲ್ಲಿ ತಪ್ಪುಗಳನ್ನು ಕಡೆಗಣಿಸಲು ನೋಡುತ್ತಾನೆ. ಇಷ್ಟು ದಿನ ಮನುಷ್ಯನಿಗೆ ಸಾವಿನ ಭಯವಿರಲಿಲ್ಲ. ಸಾವಿಗೆ ದೂರವಾಗಿ ಬದುಕುತ್ತಿರುವ ಮನುಷ್ಯ ಆತ್ಮ ವಿಮರ್ಶೆಗಳಿಂದಲೂ ದೂರ ಉಳಿದಿದ್ದ. ಏನು ಮಾಡಿದರೂ ಸರಿ ತಪ್ಪುಗಳ ಯೋಚನೆಯಿರುತ್ತಿರಲಿಲ್ಲ.
ಸಾವು ಬದುಕಿನ ಬಗ್ಗೆ ಭಯ ಉಳಿಸುತ್ತದೆ;
ಬದುಕು ಸಾವಿನ ಕಡೆಗೇ ಸೆಳೆಯುತ್ತದೆ.
ಆದರೆ ಈಗ ಪ್ರಕೃತಿಯೆದುರು ಆತ ಸೋತು, ಬೆತ್ತಲಾಗಿ ನಿಂತಿದ್ದ. ಪ್ರಕೃತಿ ಕೂಡ ಅವನನ್ನು ತಿರಸ್ಕರಿಸಿತ್ತು. ಆತ್ಮ, ಸಂವೇದನಾ.. ಪ್ರತಿಯೊಬ್ಬರೂ ಪ್ರಕೃತಿಯನ್ನು ಮನಸ್ಸಿಟ್ಟು ಪೂಜಿಸುತ್ತಿದ್ದರು. ಆದರೆ ಪ್ರಕೃತಿಯ ಮನಸ್ಸು ಬದಲಾಗಲೇ ಇಲ್ಲ. ಬದಲಾಗುವುದು ಮನುಷ್ಯ, ತನಗೆ ಬೇಕೆನ್ನಿಸಿದಾಗ; ತನಗೆ ಬೇಕಾದಂತೆ.
ಪ್ರಕೃತಿ ಸಹಾಯಕ್ಕೆ ಬರಲಾರದೆ ದೂರ ನಿಂತಿತು. ವಿಶ್ವಾತ್ಮ ಎಲ್ಲ ಬಂಧನಗಳಿಂದ ಹೊರಬರಲು ಪ್ರಯತ್ನಿಸುತ್ತಿದ್ದ. ತನ್ನ ಆತ್ಮಬಲವನೆಲ್ಲ ಒಗ್ಗೂಡಿಸಿಕೊಳ್ಳುತ್ತಿದ್ದ.
ಸಮಯ ಮೀರುತ್ತಿತ್ತು. ಆತ್ಮ, ಸಂವೇದನಾ ನಿರಂತರವಾಗಿ ಪ್ರಕೃತಿಯೆದುರು ಸಹಾಯಕ್ಕೆ ನಿಲ್ಲಬೇಕೆಂದು ಬೇಡಿಕೊಳ್ಳುತ್ತಿದ್ದರು, ಬಯಲಾಗುತ್ತಿದ್ದರು. ಅವೆರಡು ಕಪ್ಪು ಜೀವಿಗಳು ಕೈಲಾದಷ್ಟು ಕಪ್ಪು ಜೀವಿಗಳ ಸೋಲಿಸುವ ಹೊಣೆ ನಮ್ಮದೆಂದು ಹೊರಟರು. ತನ್ನವರೆಂಬುದನ್ನೂ ಮರೆತು ಹೋರಾಡಬೇಕಾಗಿತ್ತು ಅವರಿಗೆ.
ಇರುವ ಒಂದೆ ಒಂದು ನಿಮಿಷವೂ ಕಳೆಯಿತು. ಶಾಂತ ವಾತಾವರಣದಲ್ಲಿನ ದೊಡ್ಡ ಗಡಿಯಾರ ಆಗಸದಲ್ಲಿ ಕಳೆದುಹೋಯಿತು. ಭೂಮಿಯಲ್ಲಿ ಮತ್ತೆ ಬೆಳ್ಳನೆ ಬೆಳಕು ಮೂಡಿತು.
ಮರುಕ್ಷಣವಾಗುವ ಮುನ್ನವೇ ಕಪ್ಪು ಜೀವಿಗಳು ಭೂಮಿಯ ಮೇಲಿದ್ದವು. ಎಲ್ಲ ಕಡೆ ಗದ್ದಲ. ಯುದ್ಧಕ್ಕೆ ಮೊದಲಾಯಿತು. ನೋಡು ನೋಡುತ್ತಲೇ ಕಪ್ಪು ಜೀವಿಗಳ ಸಂಖ್ಯೆ ಹೆಚ್ಚುತ್ತಲೇ ಇತ್ತು. ಪ್ರತಿಯೊಬ್ಬ ಮನುಷ್ಯನಿಗೂ ಅಡ್ಡಲಾಗಿ ನಿಂತವು ಕಪ್ಪು ಜೀವಿಗಳು.
ಎರಡು ಕಪ್ಪು ಜೀವಿಗಳು ಆತ್ಮ ಸಂವೇದನಾರಿಗೆ ರಕ್ಷಣೆಯಾಗಿ ನಿಂತಿದ್ದವು. ಅವುಗಳೆದುರೇ ಬಂದು ನಿಂತ ಕಪ್ಪು ಜೀವಿಗಳ ಮುಖಂಡ ಅವೆರಡೂ ಕಪ್ಪು ಜೀವಿಗಳ ಮುಖ ನೋಡಿದ. “ವಿಶ್ವಾಸ ಘಾತುಕರು, ನಂಬಿಕೆ ದ್ರೋಹಿಗಳು ನಮ್ಮನ್ನು ಬಿಟ್ಟು ಈ ಪಾಪಿಗಳ ಜೊತೆ ಸೇರಿರುವ ನಿಮಗೆ ಕೂಡ ಸಾವೇ ನಿಶ್ಚಿತ” ಎಂದು ಕೂಗಿಕೊಂಡಿತು.
ಆದರೂ ಅವು ಮಾತನಾಡಲಿಲ್ಲ. “ಎಲ್ಲವನ್ನೂ, ಎಲ್ಲರನ್ನೂ ಸರ್ವನಾಶ ಮಾಡಿಬಿಡುತ್ತೇನೆ, ನಿಮ್ಮನ್ನು ಕೂಡ” ಎಂದಿತು ಆ ಏಲಿಯನ್.
ಆಗ ಕಪ್ಪು ಜೀವಿ ಮಾತನಾಡಿತು. “ಮನುಷ್ಯರ ಮೇಲೆ ರೋಷ ತೀರಿಸಿಕೊಂಡು ಮಾಡುವುದು ಏನೂ ಇಲ್ಲ. ಅಲ್ಲಿಗೆ ಏನೂ ಉಳಿಯುವುದು ಇಲ್ಲ. ಬದುಕುವ ನೀತಿಯಲ್ಲ ಅದು. ಎಲ್ಲರೂ ಒಂದಾಗಿ ಎರಡನೇ ಸೂರ್ಯನನ್ನು ನಾಶ ಮಾಡೋಣ. ನಂತರ ಇಬ್ಬರ ದಾರಿಯೂ ಬೇರೆ, ಬದುಕು ಬೇರೆಯೇ. ಈ ಯುದ್ಧ, ನಾಶ, ಕ್ರೌರ್ಯಗಳೇನು ಬೇಡ.” ನೊಂದುಕೊಂಡಿತು.
ಎದುರಿನ ಕಪ್ಪು ಜೀವಿಗಳು ಮಾತನಾಡಲಿಲ್ಲ. ದೇಹದಿಂದ ಕಪ್ಪು ಚೆಂಡೊಂದನ್ನು ಎಸೆಯಿತು. ಅದರ ವೇಗ ಆತ್ಮ-ಸಂವೇದನಾರ ಕಣ್ಣಿಗೆ ಕೂಡ ನಿಲುಕದೆ ಸಾಗಿತ್ತು.
ಬೆಳಕಿಗಿಂತಲೂ ವೇಗ ಕತ್ತಲಿಗೆ..!!??
ಉಳಿದೆರಡು ಕಪ್ಪು ಜೀವಿಗಳು ಅದನ್ನು ಮೊದಲೇ ನಿರೀಕ್ಷಿಸಿದ್ದವು. ಅಷ್ಟೇ ವೇಗದಲ್ಲಿ ಮಾತನಾಡಿದ ಏಲಿಯನ್ ಪಕ್ಕ ಸರಿದಿತ್ತು. ಮರುಕ್ಷಣದಲ್ಲಿ ಅಲ್ಲೊಂದು ಮಹಾಸ್ಫೋಟ. ಮತ್ತೊಂದು ಜೀವಿ ತನ್ನ ದೇಹದ ಜೊತೆ ಆತ್ಮ ಸಂವೇದನಾರನ್ನು ಸೆಳೆದುಕೊಂಡು ದೂರ ಸರಿಯಿತು.
ಅಲ್ಲಿ ಮತ್ತೆ ಸಮಬಲರ ಹೋರಾಟ ಪ್ರಾರಂಭವಾಯಿತು. ಭೂಮಿಯ ಎಲ್ಲ ಕಡೆಗಳಲ್ಲಿ ಮನುಷ್ಯನ ರಕ್ತ ಓಕುಳಿಯಾಯಿತು. ವಯಸ್ಸು ಮೀರಿ ಬದುಕಿದ ಬಿಸಿ ರಕ್ತದ ಯುವಕರೇ ಎಲ್ಲರೂ.
ಬದುಕಿನ ಪ್ರೀತಿ, ಮನುಷ್ಯ ಸಿಕ್ಕ ಸಿಕ್ಕ ವಸ್ತುಗಳಿಂದ ಕಪ್ಪು ಜೀವಿಗಳಿಗೆ ಹೊಡೆಯತೊಡಗಿದ. ಇವೆಲ್ಲ ಮಕ್ಕಳಾಟದಂತೆ ಕಂಡಿತು ಏಲಿಯನ್ ಗಳಿಗೆ. ಅವು ಮನುಷ್ಯನನ್ನು ಕ್ರೂರವಾಗಿ ಕೊಲ್ಲತೊಡಗಿದವು. ಎಲ್ಲೆಡೆ ಭೀಕರ ವಾತಾವರಣ ಸೃಷ್ಟಿಯಾಯಿತು.
ಅವೆರಡು ಕಪ್ಪು ಜೀವಿಗಳು ಆತ್ಮ ಸಂವೇದನಾರ ರಕ್ಷಣೆಗೆ ನಿಂತಿದ್ದವು. ಉಳಿದವರ ಪರಿಸ್ಥಿತಿ?? ಏಲಿಯನ್ ಗಳು ಎದುರಾದವರನ್ನೆಲ್ಲ ಕುತ್ತಿಗೆ ಕೊಯ್ದು ಕೊಲ್ಲತೊಡಗಿದವು. ಆತ್ಮ ಭೂಮಿಯ ಅಂತ್ಯ ಎಂದುಕೊಂಡ. ಎಲ್ಲವೂ ಮುಗಿದೇ ಹೋಯಿತು ಎಂದು ಭಾವಿಸಿದ.
ಸನಾ ಅಂತಹ ಪರಿಸ್ಥಿತಿಯಲ್ಲೂ ಪ್ರಕೃತಿಯೆದುರು ನಿವೇದಿಸಿಕೊಳ್ಳುತ್ತಿದ್ದಳು.
ಹೆಣ್ಣು ಕ್ಷಮಯಾಧರಿತ್ರಿ; ಪ್ರಕೃತಿಯೂ ಹೆಣ್ಣೇ.
“ನಿಮಗೇನೂ ಅನ್ನಿಸುತ್ತಿಲ್ಲವೇ? ಸಿಟ್ಟು, ಸೇಡು ಇರಬೇಕು.. ಅದಕ್ಕೂ ಒಂದು ಮಿತಿ ಬೇಕು. ನಮ್ಮೆಲ್ಲರಿಗಿಂತ ಕ್ರೂರಿ ನೀನು. ಪ್ರಪಂಚದ ಮೊದಲ ಕೆಟ್ಟ ತಾಯಿ ಇನ್ನೂ ಹುಟ್ಟಿಲ್ಲ. ನೀನೇ ಮಾದರಿಯಾದರೆ ಬದುಕು ಇನ್ನೂ ಕಷ್ಟ.” ಕೂಗಾಡಿದಳು. ಪ್ರಕೃತಿ ಎಲ್ಲವನ್ನೂ ನೋಡುತ್ತಿತ್ತು. ಕಷ್ಟದರಿವಾಗಲಿ ಎಂದು ಕಾಯುತ್ತಿತ್ತು. ನೋವಿನಲ್ಲಿ ಮನುಷ್ಯ ಬೇಗ ಬುದ್ಧಿ ಕಲಿಯುತ್ತಾನೆ; ನಲಿವುಗಳಲ್ಲಿ ಬುದ್ಧಿ ಮಂದ.
ಹೃದಯ ವಿದ್ರಾವಕ ನೋವುಗಳು ಕಿವಿಗಪ್ಪಳಿಸತೊಡಗಿದವು.ಅವುಗಳದೇ ಪ್ರತಿಧ್ವನಿ.ಕಣ್ಣು ಹಾಯಿಸುವವರೆಗೂ ಸತ್ತ ಮನುಷ್ಯನ ದೇಹಗಳು, ನರಳುವ ಶರೀರಗಳು.. ಕ್ರೌರ್ಯತೆಯ ಕೊನೆಯ ಪರ್ವ ಭೂಮಿಯ ಮೇಲೆ ಸೃಷ್ಟಿಯಾಯಿತು. ಇನ್ನೆಲ್ಲವೂ ಮುಗಿದಂತೆ, ಮನುಷ್ಯ ಕುಲ ಇತಿಹಾಸ ಸೇರಿತು ಎಂಬಷ್ಟು ಸ್ಥಿತಿ ಉಂಟಾಯಿತು.
ಸ್ಥಿತಿ ಚಂಚಲವಾಗಿದ್ದರೆ ಪರಿಸ್ಥಿತಿ ಅಧೋಗತಿಯೆಡೆಗೆ ನಡೆಯುತ್ತದೆ. ಅಷ್ಟರಲ್ಲಿ ಆಗಸದ ತುಂಬ ಕಪ್ಪು ಮೋಡಗಳು ಸೇರಿದವು. ಆಕಸ್ಮಿಕವಾಗಿ ಎಲ್ಲಿಂದ ಎಂದೂ ತಿಳಿಯದಷ್ಟು ಅನಿರೀಕ್ಷಿತವಾಗಿ ಒಮ್ಮೆಲೇ ಕತ್ತಲು ಆವರಿಸಿತು. ಅದರ ಜೊತೆಗೆ ಗಾಳಿ ರಭಸವಾಗಿ ಬೀಸತೊಡಗಿತ್ತು. ಕುಂಭದ್ರೋಣ ಮಳೆ ಪ್ರಾರಂಭವಾಯಿತು.
ಭೂಮಿಯ ಸ್ಥಿತಿ ಹದಗೆಡುತ್ತಿತ್ತು. ಮಳೆಯ ಹನಿಗಳು ಏಲಿಯನ್ ಗಳ ಮೇಲೆ ಬಿದ್ದಂತೆಲ್ಲ ಅವು ಕರಗತೊಡಗಿದವು. ಗೆಲುವಿಗೂ ಮುನ್ನ ತಮ್ಮ ಸಾವು ನಿಶ್ಚಿತವೆಂದು ಮರುಗತೊಡಗಿದವು.
ಇನ್ನು ಕೆಲವು ಕಡೆ ಗಾಳಿಯ ಬಿರುಸು ಮತ್ತೂ ಜೋರಾಯಿತು. ಕಪ್ಪು ಜೀವಿಗಳು ಗಾಳಿಯ ನಡುವೆ ಸಿಲುಕಿ ಮೇಲಕ್ಕೆ ಹಾರತೊಡಗಿದವು. ಮತ್ಯಾವ ವಸ್ತುಗಳಿಗೂ ಕಿಂಚಿತ್ತೂ ಹಾನಿಯಾಗಿರಲಿಲ್ಲ. ಗಿಡಮರಗಳ ಬಳಿ ನಿಂತ ಏಲಿಯನ್ ಗಳು ಅವುಗಳ ಪೊಟರೆಗಳಲ್ಲಿ, ಕೊಂಬೆಗಳಲ್ಲಿ ಸಿಲುಕಿ ಒದ್ದಾಡಿದವು. ಇನ್ನೊಂದಿಷ್ಟು ಕಪ್ಪು ಜೀವಿಗಳು ಮಣ್ಣಲ್ಲಿ ಮಣ್ಣಾಗಿ ಹೋದವು. ಮತ್ತೆ ಹುಟ್ಟುವ ಬಯಕೆ.. ಬದುಕುವ ಪ್ರೀತಿ ಯಾರನ್ನೂ ಬಿಟ್ಟಿಲ.
ಪ್ರೀತಿಯಿಲ್ಲದವರು ಹುಟ್ಟುವುದು ಇಲ್ಲ;
ಬದುಕುವುದು ಕಷ್ಟವೇ.
ಮುಖ್ಯಸ್ಥನಿಗೆ ತಿಳಿಯಿತು ಪ್ರಕೃತಿ ಮನುಷ್ಯನ ಸಹಾಯಕ್ಕೆ ನಿಂತಿದೆ ಎಂದು. ಅವೆರಡು ಜೀವಿಗಳ ನಡುವಿನ ಕದನ ನಡೆಯುತ್ತಲೇ ಇತ್ತು. ಆತ್ಮ ಸಂವೇದನಾ ಹಿಗ್ಗಿದರು. ಪ್ರತೀ ಮನುಷ್ಯನಿಗೂ ಭೂಮಿ ಮರುಜನ್ಮ ನೀಡಿತ್ತು.
ಎಲ್ಲರ ತಾಯಿ ಭೂಮಿ. ನೋಡುತ್ತಿರುವಂತೆಯೇ ಕಪ್ಪು ಜೀವಿಗಳ ಸಂಖ್ಯೆ ಕಡಿಮೆಯಾಯಿತು. ಒಂದು ಸಾಥ್ ಸಿಕ್ಕಿದ್ದೇ ಅವನ ಉತ್ಸಾಹ ಏರತೊಡಗಿತು. ಕಪ್ಪು ಜೀವಿಗಳ ಮೇಲೆ ಯುದ್ಧ ಸಾರಿ ನಡೆವ ಮನುಷ್ಯ ಏನು ಮಾಡಿದನೋ, ಏನೋ ಎದುರು ಹೋದಂತೆ ಕಪ್ಪು ಜೀವಿಗಳು ಇಬ್ಬಾಗವಾಗಿ ಬೀಳುತ್ತಿದ್ದವು. ಭೂಮಿ ಅವುಗಳನ್ನು ತನ್ನೊಳಗೆ ಸೆಳೆದುಕೊಳ್ಳುತ್ತಿತ್ತು.
ಭೂಮಿಯ ಬೆಂಬಲ ಕಂಡ ವಿಶ್ವಾತ್ಮ ತನ್ನೆಲ್ಲ ಬಲವನ್ನು ಒಗ್ಗೂಡಿಸಿಕೊಂಡು ಎದ್ದು ನಿಂತ. ಆತನೂ ಪ್ರಕೃತಿಯ ಜೊತೆ. ಯಾವ ತಂದೆ ತಾಯಿ ಮಕ್ಕಳನ್ನು ಬಿಟ್ಟುಕೊಡುತ್ತಾರೆ?? ಕೆಲವೇ ಘಂಟೆಗಳಲ್ಲಿ ಎಲ್ಲವೂ ಮುಗಿದಿತ್ತು.
ಕಪ್ಪು ಜೀವಿಗಳ ಮುಖ್ಯಸ್ಥ ಮತ್ತೊಂದು ಕಪ್ಪು ಜೀವಿಯ ಆಕ್ರಮಣದಿಂದ ಮಣ್ಣಾಯಿತು. ಅವುಗಳ ಕುರುಹೇ ಇಲ್ಲದಂತಾಯಿತು ಭೂಮಿಯಲ್ಲಿ. ಕುಂಭದ್ರೋಣ ಮಳೆ ಮನಸೊಳಗಿನ ಹೊಲಸನ್ನು ತೊಳೆದು ಹಾಕಿತ್ತು. ಭೀಕರ ಗಾಳಿ ದ್ವೇಷ, ಅಸೂಯೆ, ಸ್ವಾರ್ಥಗಳನ್ನು ಓಡಿಸಿತ್ತು. ಅವುಗಳ ಶಕ್ತಿ ಎಷ್ಟೆಂದು ಎಲ್ಲರಿಗೂ ತಿಳಿಯಿತು. ಕೆಟ್ಟು ಹೋಗುವ ಮುನ್ನವೇ ಬುದ್ಧಿ ಬಂದಿತ್ತು.
ಭೂಮಿ?? ಅದನ್ನು ಪೂರ್ತಿ ಕೆಡಿಸಿಬಿಟ್ಟಿದ್ದರು. ಯುದ್ಧ ಮುಗಿದ ಕ್ಷಣವೇ ಎಲ್ಲರೂ ಹಣೆಯನ್ನು ನೆಲಕ್ಕೆ ಹಚ್ಚಿದರು. ಅದು ಶರಣಾದೆ ಎಂಬ ಭಾವ. ನಮ್ಮನ್ನು ಉಳಿಸಿದ್ದಕ್ಕೆ ಎಂಬ ಭಾವದಲ್ಲಿ, ಇಷ್ಟು ದಿನ ಮೂಢರಂತೆ ನಡೆದುಕೊಂಡಿದ್ದಕ್ಕೆ ಎಂದು.
ಆತ್ಮ ಸಂವೇದನಾ ಬೆರಗಾಗಿ ನಿಂತಿದ್ದರು. ಆ ಕಪ್ಪು ಜೀವಿಯ ಮುಖದಲ್ಲಿ ತನ್ನವರನ್ನು ಕಳೆದುಕೊಂಡ ನೋವಿತ್ತು. ಆದರೂ ವಿಶ್ವದ ಹಿತಕ್ಕಾಗಿ ಬದುಕಿದ ಭಾವವಿತ್ತು. ಅದೇ ಬದುಕುವ ನೀತಿ.
ವಿಶ್ವಾತ್ಮ ಪ್ರಕ್ರತಿಯ ರೀತಿಗೆ ತಲೆಬಾಗಿದ್ದ. ಆತನ ಎದುರಿರುವ ಸವಾಲು ಎರಡನೇ ಸೂರ್ಯ.. ??
ಮನುಷ್ಯ ಬದುಕಿದ್ದ.. ಪ್ರಕೃತಿ ಸಾಯುತ್ತಿತ್ತು.
ಎರಡನೇ ಸೂರ್ಯನೆದುರು ಪ್ರಕೃತಿ ಮಂಕಾಗತೊಡಗಿತು.

Facebook ಕಾಮೆಂಟ್ಸ್

ಲೇಖಕರ ಕುರಿತು

Gautam Hegde

ನಾಲ್ಕು ವರ್ಷದಿಂದ ಮಾಹಿತಿ ತಂತ್ರಜ್ಞಾನದಲ್ಲಿ ವೃತ್ತಿ, ಈಗ ಸ್ವಂತ ಕಂಪನಿಯೊಂದನ್ನು ನಡೆಸಬೇಕೆಂಬ ಹಂಬಲದಿಂದ ಸ್ಟಾರ್ಟ್ ಅಪ್ ನಡೆಸುತ್ತಿರುವ ನನಗೆ ಅತೀವ ಆಸಕ್ತಿ - ಸಾಹಿತ್ಯ - ಓದು - ಬರಹ. ಅದರ ಪ್ರತಿಬಿಂಬವೇ ಈ "ಆತ್ಮ ಸಂವೇದನಾ". ಕಾದಂಬರಿಗಳ ಲೋಕದಲ್ಲಿ ಮೊದಲ ಪ್ರಯತ್ನವಿದು. ನಿಮ್ಮೆಲ್ಲರ ಮನಸ್ಸು ಮುಟ್ಟಲಿ ಎಂದು ಪ್ರಯತ್ನದಲ್ಲಿ..

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!