ಕಾದಂಬರಿ

ಆತ್ಮ ಸಂವೇಧನಾ-34

ಆತ್ಮ ಸಂವೇಧನಾ-33

“ಆತ್ಮ”, “ಆತ್ಮ” ಕೂಗಿದಳು ಸನಾ. ಹಚ್ಚ ಹಸುರಿನ ಮನೆ ಅವರದು. ಆತ್ಮನ ಕನಸಿನರಮನೆ. ಅದರಲ್ಲಿ ಪ್ರತೀ ವಸ್ತುಗಳೂ ಜೀವದಿಂದಿರುವಂತೆ ನೋಡಿಕೊಂಡಿದ್ದ. ಬಿಳಿ, ಕಂದು ಮೊಲಗಳು, ಬಣ್ಣದ ಪಟ್ಟೆಯ ಅಳಿಲುಗಳು, ಚಂದನೆಯ ಹಕ್ಕಿಗಳು ಅವನ ಮನೆಯಲ್ಲಿ ಅತ್ತಿಂದಿತ್ತ ಓಡಾಡಿಕೊಂಡಿರುತ್ತಿದ್ದವು.

  ಆತ್ಮ ಎಲ್ಲರನ್ನೂ ಮಾತನಾಡಿಸುತ್ತಿದ್ದ, ಎಲ್ಲವನ್ನೂ ಪ್ರೀತಿಸುತ್ತಿದ್ದ. ಅವುಗಳು ಹಾಗೇ ಅಷ್ಟೇ ಪ್ರೀತಿಯನ್ನು ಹಿಂದಿರುಗಿಸುತ್ತಿದ್ದವು. ಆತ್ಮನ ಈ ವಿಶಿಷ್ಟ ಶೈಲಿಯ ಮನೆ ಅವೆಷ್ಟೋ ಜನರಿಗೆ ಮಾದರಿಯಾಗಿತ್ತು.

  ಬಹುತೇಕ ಭೂಮಿ ಹಚ್ಚ ಹಸುರಿನಿಂದ ತುಂಬಿತ್ತು. ಮನುಷ್ಯ ಎಲ್ಲವನ್ನೂ ಪ್ರೀತಿಸುವುದನ್ನು ಕಲಿತೊಡನೆ ಎಲ್ಲವೂ ಮನುಷ್ಯನನ್ನು ಪ್ರೀತಿಸತೊಡಗಿದ್ದವು. “ವಸುಧೈವ ಕುಟುಂಬಕಂ” ಜಗತ್ತನ್ನೇ ಒಂದುಗೂಡಿಸಿತ್ತು. ಕೇವಲ ಮನುಷ್ಯರ ಕುಟುಂಬ ಸೇರಿದರೆ ವಸುದೈವ ಕುಟುಂಬವಲ್ಲ. ವಿಶ್ವದ ಎಲ್ಲರನ್ನೂ ಪ್ರೀತಿಸಬೇಕು. ಎಲ್ಲರೂ ನನ್ನವರೇ ಎಂಬಂತೆ ಬದುಕಬೇಕು.

 ದೊಡ್ಡ ಪಟ್ಟಣಗಳಲ್ಲಿ ಗಿಡಮರಗಳ ಸಾಲು. ಹಳ್ಳಿಗಳಲ್ಲಿ ಊರಿಗೊಂದು ವನವಾದರೆ, ಪೇಟೆಗಳಲ್ಲಿ ದಾರಿಗೊಂದು ವನ, ಮನೆಯಲ್ಲೊಂದಿಷ್ಟು ಮರ. ಅಲ್ಲಲ್ಲಿ ಕಾಣುವ ಫ್ಯಾಕ್ಟರಿಗಳು, ಅವೆಷ್ಟೋ ಶಹರಗಳಿಗೆ ಸೇರಿ ಒಂದೇ Industrial Area. ಮಾಹನಗಳ ಮಿತ ಬಳಕೆ, ಬಳಸಿ ಬಿಸಾಡಿದವುಗಳ ಮರು ಬಳಕೆ, ಎಲ್ಲವನ್ನೂ ಮಾದರಿಯಾಗಿ ಬದಲಾಯಿಸಿದ್ದ. ದೇಶ-ಪ್ರದೇಶಗಳ ವಿಂಗಡನೆ, ಜಾತಿ ಧರ್ಮಗಳ ಅವಹೇಳನ ಯಾವುದೂ ಇರಲಿಲ್ಲ.ಭೂಮಿ ಸುಖದ ಸುಧೆಯಾಗಿತ್ತು. ಮನುಷ್ಯ ತೃಪ್ತಿಯ ಹೊನಲಾಗಿದ್ದ.

 ರಸ್ತೆಯ ಬದಿಯಲ್ಲಿ ಮಕ್ಕಳ ಕೈ ಹಿಡಿದೇ ಸಾಗುವ ಅಪ್ಪ ಅಮ್ಮಂದಿರು, ಅವರ ಕೈ ತಪ್ಪಿಸಿ ಗುಂಪು ಸೇರಿ ಆಡುವ ಮಕ್ಕಳ ತುಂಟತನ ಎಲ್ಲವೂ ಸಹಜವಾಗಿತ್ತು. ಅದೊಂದು ಭಾವಯಾನದ ಪ್ರಪಂಚ, ಸುಂದರ ಭಾವನೆಗಳ ಕಲಾ ಜಗತ್ತು.

  ದುಡ್ಡು ಅಧಿಕಾರ ನಡೆಸುತ್ತಿಲ್ಲ. ದುಡ್ಡಿದ್ದವರು ಎಲ್ಲರಂತೆಯೇ ಬದುಕುತ್ತಿದ್ದಾರೆ.

  “ಸರಳತೆಯೇ ಆನಂದ”

  “ನಗುವುದೇ ಜೀವನ”

  ಎಲ್ಲರೂ ಸಮಾನರು. ಒಬ್ಬರಿಗೊಬ್ಬರು ನೆರವಾದರು. ದುಡ್ಡು ಮಧ್ಯವರ್ತಿಯಾಗಲೂ ಇಲ್ಲ.

  ಆತ್ಮ ಎಲ್ಲವನ್ನೂ ನೋಡಿ ಬಹಳ ಖುಷಿಗೊಂಡಿದ್ದ. ಐದು ವರ್ಷದ ಹಿಂದೆ ಹೇಗಿತ್ತು ಭೂಮಿ? ಹೇಗಿದ್ದರು ಜನ? ಎಲ್ಲವೂ ಮುಗಿಯುವ ಹಂತದಲ್ಲಿ.. ಎಲ್ಲರದೂ ಸಾಯುವ ಮುಖಗಳೇ.. ಈಗ..!? ಯೋಚಿಸಿದ. ಬದಲಾವಣೆಗೆ ಭವಗಳು ದಾಟಬೇಕೆಂದಿಲ್ಲ.. ಯುಗಗಳು ಕಳೆಯಬೇಕೆಂದಿಲ್ಲ. ಅದೆಷ್ಟು ಹೊತ್ತಿನ ಕೆಲಸವೂ ಅಲ್ಲ. ಪರಿಶುದ್ಧತೆಯೊಂದೇ ಸಾಕು. ಶುದ್ಧ ಮನಸ್ಸು, ಪರಿಶುದ್ಧ ಬದುಕು ಬದಲಾವಣೆ ತಂದುಬಿಡುತ್ತದೆ.

  ಬದುಕಿನಲ್ಲಿ ಬದಲಾವಣೆ ಬಯಸುವವ ಪ್ರಪಂಚವನ್ನೇ ಬದಲಾಯಿಸಬಲ್ಲ. ಅವರಲ್ಲಿ ಸ್ವಾರ್ಥ ಇರುವುದಿಲ್ಲ. ಎಲ್ಲರೂ ನಿಸ್ವಾರ್ಥಿಗಳಾಗಿದ್ದರಿಂದಲೇ ಈ ಭೂಮಿ ಇಷ್ಟು ಬದಲಾದದ್ದು ಎಂದುಕೊಂಡ.

 ಯೋಚನೆಗಳ ಸಾಲಲ್ಲಿ ಕಳೆದು ಹೋದವನಿಗೆ ಸನಾಳ ಕೂಗು ಕೇಳಿಸಲೇ ಇಲ್ಲ. “ಆತ್ಮಾ……..”ದೊಡ್ಡದಾಗಿ ಕೂಗಿದಳು. ಯೋಚನೆಗಳಿಂದ ಹೊರಬಂದು “ಬಂದೆ ಸನಾ..” ಎನ್ನುತ್ತಾ ಅವಳಿರುವ ಕಡೆ ನಡೆದ. ಆಗಸವನ್ನು ನೋಡುತ್ತಿರಲು, ನಕ್ಷತ್ರಗಳ ಲೆಕ್ಕಿಸಲು ಮನೆಯ ಮೇಲೊಂದು ಮಾಡು ಮಾಡಿಕೊಂಡಿದ್ದ. ರಾತ್ರಿಯಲ್ಲೊಂದರ್ಧ ಘಂಟೆ ಕತ್ತಲ ಸಹವಾಸ, ನಕ್ಷತ್ರಗಳ ಸಾಂಗತ್ಯ.

  ಅದೊಂದು ಮೂವತ್ತು ನಿಮಿಷಗಳು ಸುತ್ತಲಿನ ಎಲ್ಲ ಜೀವಿಗಳೂ ಅವರಿಬ್ಬರನ್ನು ನೋಡುತ್ತಿದ್ದವು. ಮೌನದಲ್ಲೇ ಮಾತುಗಳನ್ನು ಬದಲಾಯಿಸಿಕೊಳ್ಳುತ್ತಿದ್ದವು; ಮಾತುಗಳು ಮೌನದಲ್ಲೇ ಮುಗಿದು ಹೋಗುತ್ತಿದ್ದವು. ಆಗಸವು ವಿಶಾಲತೆ ಏನೆಂಬುದನ್ನು ತಿಳಿಸುತ್ತದೆ. ಕಡಲು ಆಳವನ್ನು ತೋರಿಸುತ್ತದೆ. ಎಲ್ಲವೂ ಬದುಕಿನ ಪ್ರತಿರೂಪಗಳೇ ಭೂಮಿಯಲ್ಲಿ. ವಿಶ್ವಾತ್ಮ ಎಲ್ಲವನ್ನೂ ಸೂಚನೆಗಳಲ್ಲೇ ಹೇಳುತ್ತಾನೆ. ಗ್ರಾಹಿ ಸೂಕ್ಷ್ಮತೆ ಹೊಂದಿರಬೇಕಷ್ಟೆ.

  ಆತ್ಮ ಕಾದಂಬರಿ ಬರೆಯಲು ಕುಳಿತಾಗ ಆಗಸ ಆತನ ಶಬ್ಧಕೋಶದಂತಿತ್ತು, ಪುಸ್ತಕದ ಮಾರ್ಗದರ್ಶಿಗಳಂತಿತ್ತು. ಈಗಲೂ ಅಲ್ಲೇ ಕುಳಿತಿದ್ದಳು ಸನಾ. ಆತ್ಮ ಬಳಿ ಬಂದು ಕುಳಿತ.

  ಸಂವೇದನಾ ಅಷ್ಟೆ ಆತ್ಮನ ಕಾದಂಬರಿಯ ಪ್ರತಿಯನ್ನು ಓದಿ ಮುಗಿಸಿದ್ದಳು. ಓದು ಮುಗಿದಿತ್ತು.. ಬದುಕಲ್ಲ.

  ಹಿಂದೆ ನಡೆದಿರುವುದರ ನೆನಪು, ಆತನ ಬರೆಯುವ ಶೈಲಿಯಲ್ಲಿನ ತೀವ್ರತೆ, ವರ್ಷಿಯ ಕೊನೆಯ ಕ್ಷಣಗಳ ಹತಾಶೆ, ಆತ್ಮನ ತನ್ನೆಡೆಗಿನ ಪ್ರೀತಿ, ವಿಶ್ವಾತ್ಮನ ಬದುಕುವ ನೀತಿ, ಅವನು ಬದುಕಿದ ರೀತಿ…. ಅವಳೂ ತಿಳಿದು, ಬದುಕು ತಿಳಿಯಾಗಿಸಿದ ಜೀವನದ ಸತ್ಯಗಳು ಎಲ್ಲವೂ ಕಣ್ಮುಂದೆ ಬಂದು ಕಣ್ಣುಗಳಲ್ಲಿ ನೀರು ತುಂಬಿತ್ತು. ಅದನ್ನೇನು ವ್ಯಕ್ತಪಡಿಸದೆ “ಆತ್ಮಾ, ಕಾದಂಬರಿ ಇಲ್ಲಿಗೆ ಮುಗಿಯಿತಾ?” ಎಂದು ಪ್ರಶ್ನಿಸಿದಳು.

  ಹೌದೆಂಬಂತೆ ತಲೆಯಾಡಿಸಿದ ಆತ್ಮ. ಅವಳ ಭುಜಕ್ಕೆ ಒರಗಿ ಕುಳಿತಿದ್ದ ಅವನು. ಆತ್ಮ ಅವಳ ಹೊಟ್ಟೆಯ ಮೇಲೆ ಕೈಯಾಡಿಸಿದ, ನೋವೂ ಹಿತವೆನ್ನಿಸಿತು ಅವಳಿಗೆ. ತುಂಬು ಗರ್ಭಿಣಿ ಸನಾ, ತಾಯಿಯಾಗುವ ಸಂಭ್ರಮ ಅವಳಲ್ಲಿ.

  ಆದರೂ ಆತ್ಮನ ಕಾದಂಬರಿಯ ಯೋಚನೆ. ಹೆಣ್ಣು ಹಾಗೆಯೇ. ಬದುಕಾಗಿಸಿಕೊಳ್ಳುತ್ತಾಳೆ ತನ್ನವನೆಂದುಕೊಂಡವನ ಬದುಕನ್ನು. “ಆತ್ಮ ನನಗೇಕೋ ಕಾದಂಬರಿ ಅರ್ಧವಾದಂತೆ ತೋರುತ್ತಿದೆ..”

“ಹಾಗೇಕೆ ಯೋಚನೆಗಳು ನಿನಗೆ??” ಕೊರತೆಗಳ ತುಂಬುವ ಯತ್ನ ಆತ್ಮನದು.

“ನೀನು ಯುದ್ಧ ಹೇಗೆ ನಡೆಯಿತು ಎಂಬುದನ್ನು ಬರೆದೇ ಇಲ್ಲ. ಮನುಷ್ಯ ಕಪ್ಪು ಜೀವಿಗಳನ್ನು ಹೇಗೆ ಎದುರಿಸಿದ? ಗೆದ್ದು ನಿಂತದ್ದು ಯಾರು ಎಂಬುದೂ ತಿಳಿಯಲಿಲ್ಲ. ಮನುಷ್ಯ ಬದುಕು ನಡೆಸುತ್ತಿದ್ದರು ಸೋಲು ಗೆಲುವಿನ ಅಧ್ಯಾಯಗಳೇ ಇಲ್ಲ. ಯುದ್ಧದ ನಂತರ ಕಪ್ಪು ಜೀವಿಗಳು ಏನಾದವು ಎಂಬುದನ್ನು ಹೇಳಿಯೇ ಇಲ್ಲ.” ಪ್ರಶ್ನೆಗಳ ಪಟ್ಟಿ ಬೆಳೆಯುತ್ತಲೇ ಇತ್ತು. ಅವಳ ಮಾತು ಮುಗಿಯುತ್ತಿದ್ದಂತೆಯೇ “ಮತ್ತೇನಾದರೂ ಪ್ರಶ್ನೆಗಳಿವೆಯೆ? ಮುಗಿಯಿತೇ?” ಪ್ರಶ್ನೆಯಾದ ಆತ್ಮ. ನಸುನಕ್ಕು ಅವಳ ಹಣೆಗೊಂದು ಸಿಹಿ ಮುತ್ತನಿಟ್ಟ.

  “ದಿನಕ್ಕೆ ಅದೆಷ್ಟು ಬಾರಿ ಮುದ್ದಿಸಿಕೊಳ್ಳುವ ಆತ್ಮ!? ಲೆಕ್ಕವಿಟ್ಟರೆ ಆಗಸದ ನಕ್ಷತ್ರಗಳನ್ನೂ ಮೀರಿಸುತ್ತದೆಯೆನೋ? ಗೆಳೆಯಾ..” ನಾಚಿದಳು.

  ಆಗಸದ ನಕ್ಷತ್ರಗಳ ಎಣಿಸುವವರಾರು!!?

  ಕೂಡಿಸಿ ಗುಣಿಸುವವರ್ಯಾರು!!?

  “ಇನ್ನು ಮುಗಿದಿಲ್ಲ. ವಿಶ್ವಾತ್ಮ ಏನಾದ? ಎಂಬುದರ ಬಗ್ಗೆ ನೀನು ಹೇಳಿಯೇ ಇಲ್ಲ. ವಿಶ್ವಾತ್ಮನಿಗಿಂತಲೂ ದೊಡ್ಡ ಶಕ್ತಿ, ವಿಶ್ವದ ಅಭೂತ ಚೇತನ, ಎಲ್ಲವನ್ನೂ ನಡೆಸುವ, ನಿಲ್ಲಿಸುವ ಶಕ್ತಿ ಇದೆ ಎಂದೆ ಅದು ಯಾವುದೆಂದು ಹೇಳಿಯೇ ಇಲ್ಲ.” ದೂರಿದಳು.

  ಮತ್ತೆ ನಸು ನಗು. “ಮುಂದೆ ಹೇಳು..” ಎನ್ನುತ್ತಾ ಅವಳ ತುಂಬಿದ ಗರ್ಬದ ಮೇಲೆ ಮುತ್ತನಿಟ್ಟ. ಒಳಗಿದ್ದ ಪುಟ್ಟ  ಕಂದಮ್ಮ ಹಿತವಾಗಿ ಒದೆಯಿತು. ಸಂವೇದನಾ ತೃಪ್ತಿಭರಿತ ನೋಟ ಬೀರಿದಳು. ಅದರ ಹಿಂದೆ ಮಧುರವಾದ ನೋವು ಕದ್ದು ನೋಡಿತ್ತು.

  ಹೆಣ್ಣು ಸಹನೆಯ ಮೂರ್ತಿ;

 ಅವೆಷ್ಟೋ ಬಾರಿ ಗಂಡು ಅದನ್ನು ನಿರ್ಮಿಸುವ ಕಲಾಕಾರನೇ ಆಗಿ ಬಿಡುತ್ತಾನೆ.

ಸಂವೇದನಾ ಮಾತನಾಡುತ್ತಲೇ ಇದ್ದಳು. “ಮುಗಿದ ಕಾದಂಬರಿಯಲ್ಲಿ ಅವೆಷ್ಟೋ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದುಹೋಗಿವೆ ಗೆಳೆಯಾ. ಕೆಲವೊಂದಿಷ್ಟು ಮಾತ್ರ ಉತ್ತರಗಳ ಸುಖ ಪಡೆದರೆ ಉಳಿದವು ನಿರಂತರ ಹತಾಶೆಯ ನೋವಿನಡಿಯಲ್ಲಿಯೇ. ಉಳಿದ ಪ್ರಶ್ನೆಗಳ ಉತ್ತರ ಕೊಡುವವರಾರು ಆತ್ಮ? ಇದು ಪರಿಪೂರ್ಣವಾಗಲು ಹೇಗೆ ಸಾಧ್ಯ? ಅಪೂರ್ಣ.” ಬೇಸರಗೊಂಡಳು ಸನಾ.

  ಅವಳಿಗೆ ಆತ್ಮನೆಂದೂ ಪರಿಪೂರ್ಣನಿರಬೇಕು.

  ಅವಳೆಂಬುದು ಹಾಗೆಯೇ. ಅವನ ಪರಿಪೂರ್ಣತೆಯೇ ಅವಳ ಸಂತೃಪ್ತಿ.

  ಆತ್ಮ ನಗು ನಿಲ್ಲಿಸಲೇ ಇಲ್ಲ ಈ ಬಾರಿ.

 “ನೀನು ಪ್ರತಿಯೊಂದಕ್ಕೂ ನಗುವುದಿದ್ದರೆ ನಾನೇನನ್ನೂ ಹೇಳುವುದಿಲ್ಲ” ಹುಸಿಮುನಿಸು ತೋರಿದಳು ಸನಾ.

  ಆತ್ಮ ನವಿರಾಗಿ ಅವಳ ಕೆನ್ನೆ ಸವರಿ ಹೂಮುತ್ತನಿಟ್ಟ.

  “ನೀನು ಹೀಗೆ ಮಾಡು, ನಮ್ಮ ಮಗು ರಸಿಕನಾಗಿ ಬಿಡುತ್ತದೆನೋ? ಆಮೇಲೆ ಹಿಡಿದು ನಿಲ್ಲಿಸುವುದೇ ಕಷ್ಟ.” ತುಂಟ ನಗು ಮುಖದಲ್ಲಿ.

  “ಅದಕ್ಕಿಂತ ಮತ್ತಿನ್ನೇನು ಬೇಕು ಗೆಳತಿ? ಅತ್ಯಂತ ರಸಿಕರು ಬೆಟ್ಟದಷ್ಟು ಭಾವುಕರೂ, ಎಲ್ಲಕ್ಕಿಂತ ಹೆಚ್ಚು ಪ್ರೀತಿಸುವವರೂ ಆಗಿರುತ್ತಾರೆ ಸನಾ.” ಹಿಗ್ಗಿದ ಹುಟ್ಟುವ ಮಗುವಿನ ಬಗ್ಗೆ.

ತಂದೆಯ ಭಾವವೇ ಅಂಥದ್ದು. ಮೊದಲ ಉಸಿರು ತನ್ನದೇನೋ ಎಂಬಷ್ಟು ಕಾಳಜಿ.

  “ಇದಕ್ಕೇನೂ ಕಡಿಮೆಯಿಲ್ಲ. ನಿನ್ನನ್ನು ಮಾತಿನಲ್ಲಿ ಸೋಲಿಸುವುದು ಯಾರು?” ಮೌನವಾದಳು.

  “ನನ್ನ ನಿನ್ನ ಎಂದು ಬೇರೆಯೇಕೆ ಸನಾ?? ನಿನ್ನ ಸೋಲು ನನ್ನದೂ; ನನ್ನ ಗೆಲುವು ನಿನ್ನದೇ.

ಇಬ್ಬರೂ ಒಂದೇ ಗೆಳತಿ. ನಾನೆಂದೂ ನಾನು, ನೀನು ಬೇರೆಯೆಂದು ಯೋಚಿಸಲೇ ಇಲ್ಲ. ಇಲ್ಲಿ ಎಲ್ಲವೂ ನಾವೇ, ನಮ್ಮದೇ.” ಅವಳ ಕೈಗಳಿಗೆ ಮುತ್ತಿಟ್ಟ.

“ಕೊರತೆಗಳ ಅಧ್ಯಾಯ ಮುಂದುವರೆಯಲಿ ಪ್ರಿಯೆ” ಎಂದ  ಸ್ವಲ್ಪ ಹೆಚ್ಚೇ ನಾಟಕೀಯವಾಗಿ.

  “ಕೊನೆಯಲ್ಲೊ0ದು ಉಳಿದಿರುವುದು ಆತ್ಮ. ಕೊರತೆಯಲ್ಲ, ಹೆಚ್ಚಾಗಿರುವುದು.” ಮಾತು ಮುಗಿಸಿದಳು.

ಮಾತು ನಿಲ್ಲಿಸುವುದು ಬೇರೆ, ಮುಗಿಯುವುದೇ ಒಂದು ರೀತಿ.

  “ಏನದು? ಅರ್ಥವಾಗಲಿಲ್ಲ. ಸರಿಯಾಗಿ ಹೇಳಬಾರದೇ?”

ನಕ್ಕಳವಳು “ನೀನೆಲ್ಲವನ್ನೂ ತಿಳಿದವನು. ಅರ್ಥಮಾಡಿಕೊಳ್ಳಬೇಕು. ಅರ್ಥವಾಗಬೇಕಿತ್ತಲ್ಲವೇ ನಿನಗೆ??” ನಗೆಯ ಹೊನಲಾದಳು; ಅವನು ಅದರಲ್ಲೇ ಕಳೆದುಹೋದ.

ಕಳೆದುಕೊಂಡವನಿಗೆ ಹುಡುಕಿ ಹೊರಡುವುದು ಗೊತ್ತು. “ಇಷ್ಟು ದಿನದಿಂದ ನಾನು ಅರ್ಥ ಮಾಡಿಕೊಂಡ ಸತ್ಯ ಹೇಳಲಾ?” ಗಂಭೀರ ಪ್ರಶ್ನೆ ಆತ್ಮನದು.

  “ಸಮ್ಮತಿ” ಇಣುಕುವ ಕುತೂಹಲ ಸನಾಳಿಗೆ.

“ಮಾತಿರದ ಜೀವಿಗಳನ್ನೂ, ನಿರ್ಜೀವಗಳನ್ನೂ, ಪೂರ್ತಿ ವಿಶ್ವವನ್ನೇ ಬೇಕಾದರೂ ಅರ್ಥ ಮಾಡಿಕೊಳ್ಳಬಹುದು, ಹೆಣ್ಣೊಬ್ಬಳನ್ನು ಹೊರತುಪಡಿಸಿ. ಅವಳು ಅರ್ಥವಾಗುವುದೇ ಇಲ್ಲ. ಅರ್ಥವಾದಂತೆ ಇರುವುದೂ ಕಷ್ಟವೇ.”

  ಅವನ ಕಣ್ಣುಗಳನ್ನೇ ನೋಡಿದಳು ತೀಕ್ಷ್ಣವಾಗಿ. “ನೀನು ಹೇಳುವುದು ನಿಜವೇ?” ಪಕಪಕನೆ ನಕ್ಕಳು.

  ಬೆಳಕು ಹರಿಯಿತು. ಆತ್ಮ ಹಿಗ್ಗಿದ. ಹಾಗೆಯೇ ಕಂಗಳ ಗೂಡಿಂದ ಹಕ್ಕಿಯೊಂದು ಜಾರಿತು. ಕತ್ತಲಾದಂತೆ ಭಾಸ. ಆದರೂ ನಕ್ಷತ್ರಗಳು ಸಿಗಲಿಲ್ಲ ಅವನಿಗೆ. ದಂಗಾದ.

  ಒಮ್ಮೆಲೇ ನಕ್ಕ. ಹಿಂದೆಯೇ ಅಳುವ ಸನಾಳನ್ನು ನೋಡಿ ಏನೆಂದು ಅರ್ಥವಾಗಲಿಲ್ಲ ಆತ್ಮನಿಗೆ. ತಾನು ಹೇಳಿದುದಕ್ಕೆ ನಿದರ್ಶನ ಎನ್ನಿಸಿತು. ಮನಸ್ಸಿನಲ್ಲೊಂದು ನಗು ಹಾದುಹೋಯಿತು. “ಏನಾಯಿತು ಸನಾ?” ಮುದ್ದುಗರೆದ.

 ಸಣ್ಣ ಮಕ್ಕಳಂತೆ ಮೂಗೊರೆಸಿಕೊಂಡು ಕಣ್ಣೀರು ಮರೆಮಾಡಿಕೊಂಡು ಏನಿಲ್ಲವೆಂಬಂತೆ ತಲೆಯಾಡಿಸಿದಳು.

 “ನೀನೆಷ್ಟು ಪ್ರೀತಿ ನೀಡಿದೆ ಆತ್ಮ.. ಅದೆಷ್ಟು ತೃಪ್ತಿ ನಿನ್ನ ಸಾಂಗತ್ಯದಲ್ಲಿ…” ಹೇಳಬೇಕೆಂದುಕೋಂಡಳು.

  ಎಲ್ಲರೂ ಬದಲಾಗುತ್ತಾರೆ ಬದುಕಾಗುವ ಪ್ರೀತಿಯೆದುರು.

  ಅವಳೂ ಬಚ್ಚಿಡುವುದನ್ನು ಕಲಿತಿದ್ದಳು.

 “ಹೋಗಲಿ ಬಿಡು, ಮುಂದೆ ಹೇಳು ಕಾದಂಬರಿಯ ಬಗ್ಗೆ..” ಎಂದ ಆತ್ಮ.

  “ಕೊನೆಯದಾಗಿ ಎರಡನೇ ಸೂರ್ಯನನ್ನು ಯಾರು ನಾಶ ಮಾಡಿದರು? ಹೇಗೆ ಎಂಬುದನ್ನು ನೀನು ಹೇಳಿಯೇ ಇಲ್ಲ. ಅಷ್ಟೇ ಅಲ್ಲದೇ ನೀನು ಕಾದಂಬರಿಯನ್ನು ಕಾವ್ಯಾತ್ಮಕವಾಗಿಯೂ, ಬಹಳ ಕ್ಲಿಷ್ಟಕರವಾಗಿಯೂ ಬರೆದಿರುವೆ ಎಂದು ನನ್ನ ಅಭಿಪ್ರಾಯ. ಎಲ್ಲ ಸಾಮಾನ್ಯರು ಇದನ್ನು ಓದಿ, ಅರ್ಥಮಾಡಿಕೊಳ್ಳುವುದು ಕಷ್ಟ ಆತ್ಮ.”

ಅವಳನ್ನು ಮೆಚ್ಚಿದ ಆತ್ಮ. ತಾನೆನೇನೆಲ್ಲವನ್ನು ಬಿಟ್ಟಿರುವೆನೋ ಅದನ್ನೆಲ್ಲವನ್ನೂ ಹೇಳಿದಾಳೆ. ಕಥೆಯಲ್ಲಿ ಒಂದು ವ್ಯಕ್ತಿಯಾಗಿ ಇಳಿದರೆ ಮಾತ್ರ ಸಾಧ್ಯ.

  “ನಿನಗೆ ಉತ್ತರಗಳು ಬೇಕಲ್ಲವೇ?” ಆತ್ಮನ ಬಳಿ ಎಲ್ಲದಕ್ಕೂ ಉತ್ತರವಿತ್ತು.

“ಹೌದು, ಅದಕ್ಕೇ ಅಲ್ಲವೇ ಕೇಳಿರುವುದು. ಕೇವಲ ಪ್ರಶ್ನೆ ಕೇಳಿ, ಬಿಡುವುದು ನಿನ್ನ ಗುಣ. ನನಗೆ ಉತ್ತರಗಳು ಕೂಡ ಬೇಕು. ನಾನು ನೀನಲ್ಲ, ನೀನು ನನ್ನಂತಲ್ಲ.” ಕಾಡಿಸಿದಳು ಸನಾ.

  “ನಿನ್ನ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುತ್ತೇನೆ. ಅಷ್ಟಾದ ಮೇಲೆಯೂ ನಿನ್ನಲ್ಲಿ ಪ್ರಶ್ನೆಗಳು ಉಳಿದಿದ್ದರೆ ಕೇಳು. ಅದಕ್ಕೂ ನನ್ನ ಬಳಿ ಉತ್ತರವಿದೆ” ಎಂದ.

  “ಸರಿ” ಎಂದಳವಳು ಆತ್ಮನ ಭುಜಕ್ಕೆ ಒರಗುತ್ತಾ.

  “ನಿನ್ನೆಲ್ಲ ಪ್ರಶ್ನೆಗಳಿಗೂ ಉತ್ತರವಿದೆ ಸನಾ, ಹೇಳುತ್ತೇನೆ ಕೇಳು. ನಾನು ಯುದ್ಧದ ಬಗ್ಗೆ ಏಕೆ ಪ್ರಸ್ತಾಪಿಸಿಲ್ಲ ಗೊತ್ತಾ!? ಯುದ್ಧ ಕ್ರೌರ್ಯದ ಪ್ರತೀಕ. ಭೀಕರ ದುರಂತಗಳ ಮೊದಲ ಅಧ್ಯಾಯ ಯುದ್ಧ.

  ಎಲ್ಲ ಅಂತ್ಯಗಳ ಆದಿ ಯುದ್ಧ. ರಕ್ತದೋಕುಳಿಯ ಪ್ರವಾಹ ಯುದ್ಧ. ಯುದ್ಧವೆಂಬುದು ನೋವು, ಚೀತ್ಕಾರಗಳ ಪ್ರತಿಧ್ವನಿ.

  ಕಣ್ಣಿಗೆರಚುವಂತೆ ರಾಚಿದರೆ ಕಣ್ಣೇ ಉಳಿಯುವುದಿಲ್ಲ. ಬಣ್ಣಗಳ ಹಬ್ಬವೂ ಹಿತಮಿತವಿರಬೇಕು.

  ಅಂತೆಯೇ ಯುದ್ಧ ಕೂಡ. ಅದರಲ್ಲಿನ ಮೋಜು ಮುಂದಿನ ಪೀಳೀಗೆಯನ್ನು ಅದರತ್ತ ಆಕರ್ಷಿಸಿದರೆ ಎಂಬ ಯೋಚನೆ ಕಾಣಿಸಿತು, ಬಿಟ್ಟೂ ಬಿಡದೆ ಕಾಡಿಸಿತು. ಅದಕ್ಕೆ ಯುದ್ಧದ ಪ್ರಸ್ತಾವನೆಯನ್ನು ಪ್ರಾರಂಭದಲ್ಲಿಯೇ ಮುಗಿಸಿದೆ ಸನಾ.

  ಶುದ್ಧ ಮನಸ್ಸು;

  ಪರಿಶುದ್ಧ ಬದುಕು,

  ವಿಶ್ವದ ಒಳಿತಿಗಾದರೆ ಅಳಿಲ ಸೇವೆಯೂ ಶ್ರೇಷ್ಠವೇ.

  ಇನ್ನು ಕಪ್ಪು ಜೀವಿಗಳು ಏನಾದವು ಎಂದಲ್ಲವೇ? ಮನುಷ್ಯರು ಬದುಕಿದ್ದಾರೆ ಎಂದರೆ ಅವುಗಳು ನಾಶವಾಗಿವೆ. ನಾಶವೆಂದರೆ ಪೂರ್ತಿ ಸಂಕುಲವಲ್ಲ. ಯುದ್ಧಕ್ಕೆ ನಿಂತು ಸೋತವರು ಮಾತ್ರ. ಆತ್ಮನ ಜೊತೆಗಿದ್ದ ಉಳಿದ ಕಪ್ಪು ಜೀವಿಗಳು ಎರಡನೇ ಸೂರ್ಯ ನಾಶವಾದ ಕ್ಷಣವೇ ಕಪ್ಪು ರಂಧ್ರದೆದೆಗೆ ಸಾಗಿದವು.”

  ಒಂದೂ ಮಾತಿಲ್ಲದೆ ಕುಳಿತಿದ್ದಳು ಸನಾ. ಆತ್ಮ ಮಾತನಾಡುವಾಗ ಅವಳು ಒಮ್ಮೆಯೂ ಮಾತಾಡಿದ್ದಿಲ್ಲ. ಕೇಳುವ ಕಿವಿ ಮಾತ್ರ ಆಗುತ್ತಿದ್ದಳು.

  ಅವನೆಂಬುವವನಿಗೆ ಇಂಥದೇ ಇಷ್ಟವಾಗುತ್ತದೆ. ಅವಳು ನನ್ನದೆಲ್ಲವ ಕೇಳುವ ಕಿವಿಯಾಗಬೇಕು. ಎಲ್ಲವನ್ನೂ….

  ಅದೇ ಬದುಕಿನಲ್ಲಿ ಬರುವ ಅರ್ಧ ಸಮಸ್ಯೆಯನ್ನು ಬರದಂತೆ ಮಾಡುವುದು.

  “ವಿಶ್ವಾತ್ಮ ಏನಾದ? ಎರಡನೇ ಸೂರ್ಯ ಹೇಗೆ ನಾಶವಾದ ಎಂಬುದಕ್ಕೂ ಸಂಬಂಧವಿದೆ. ಎರಡನೇ ಸೂರ್ಯ ನಾಶವಾಗಬೇಕೆಂದರೆ ವರ್ಷಿಯ ಮನಸ್ಸನ್ನು ಮೀರುವ ಮನಸ್ಸು ಬೇಕು. ಗುರುತ್ವವನ್ನೂ ದಾಟುವ ವ್ಯಕ್ತಿ ಬೇಕಿತ್ತು. ಅದು ವಿಶ್ವಾತ್ಮನ ಹೊರತಾಗಿ ಮತ್ತಾರಿಗೂ ಸಾಧ್ಯವಿರಲಿಲ್ಲ. ಆದರೆ ವಿಶ್ವಾತ್ಮ ಹಾಗೆ ಮಾಡಲಿಲ್ಲ. ಸ್ವತಃ ಆತ್ಮ ಆ ಕೆಲಸ ನಡೆಸಿದ. ನಾನು ವರ್ಷಿಯನ್ನೂ ಮೀರಿದ್ದೆ. ಅದನ್ನು ಬರೆಯಬೇಕಾಗಿತ್ತು. ನನ್ನ ಬಗ್ಗೆಯೇ ಬರೆದುಕೊಂಡರೆ ಬದುಕು ಬದುಕಾಗುವುದಿಲ್ಲ, ನಾಟಕದ ಅಂಕಗಳಾಗಿ ಬಿಡುತ್ತವೆ. ಇರದಿರುವುದನ್ನೂ ಬರೆದುಬಿಡಬಹುದು ನಾನು ನನ್ನ ಬಗ್ಗೆ. ಅಹಂ ಯಾರನ್ನು ಬಿಟ್ಟಿದೆ!? ಅಹಂ ಬಿಟ್ಟವರೂ ಯಾರೂ ಇಲ್ಲ.

  ಅದೊಂದು ಅಧ್ಯಾಯವನ್ನು ನಿನ್ನಿಂದ ಬರೆಸಲು, ಬರಿದಾಗಿಸಲು ಹಾಗೆಯೇ ಬಿಟ್ಟಿರುವೆ” ಎಂದ ಆತ್ಮ.

  ಹಿಗ್ಗಿದಳು ಸನಾ. ನಿಸ್ವಾರ್ಥವೆಂದರೆ ಇದೇ ಇರಬೇಕು.

  “ಪ್ರಯತ್ನಿಸುವೆ, ಮುಂದೆ ಹೇಳು ನೀನು.” ಕೇಳಲು ಸಿದ್ಧಳಾದಳು.

“ವಿಶ್ವಾತ್ಮನಿಗಿಂತಲೂ ದೊಡ್ಡ ಶಕ್ತಿ ಒಂದಿದೆ ಸನಾ, ಅದು ಎಷ್ಟೋ ವಿಶ್ವಾತ್ಮಗಳನ್ನು ಸೃಷ್ಟಿಸಿದ ಶಕ್ತಿ. ವಿಶ್ವದ ಅಭೂತ ಚೇತನ ಅದು, ಪ್ರತಿಯೊಬ್ಬರ ಜೊತೆಗೂ ನಿಲ್ಲುವ ಶಕ್ತಿ ಅದು. ಅದನ್ನು ಎಲ್ಲರೂ ಗೌರವಿಸಬೇಕು. ಅದರ ಬಗ್ಗೆ ಒಂದು ಭಯ ಎಲ್ಲರಲ್ಲೂ ಇರಬೇಕು. ವಿಶ್ವದಲ್ಲಿನ ಎಲ್ಲಕ್ಕಿಂತ ದೊಡ್ಡ ಶಕ್ತಿ ಅತ್ಯಂತ ಶಾಂತ ಮತ್ತು ಸುಂದರ. ಅಷ್ಟೇ ನ್ಯಾಯಪರ ಕೂಡ. ವಿಶ್ವಾತ್ಮ ಎಲ್ಲರಿಗೂ ಬದುಕುವ ನೀತಿಯನ್ನು ಹೇಳುತ್ತಾನೆ. ಅದರಂತೆ ನಡೆಯಿರಿ ಎಂಬ ಭಾವ ತುಂಬುತ್ತಾನೆ. ಆದರೆ ವಿಶ್ವಾತ್ಮ ಯಾರನ್ನೂ ಶಿಕ್ಷಿಸುವುದಿಲ್ಲ.

  ಶಿಕ್ಷಿಸುವುದು ವಿಶ್ವದ ಅಭೂತ ಚೇತನದ ಕೆಲಸ;

  ರಕ್ಷಿಸುವ ಹೊಣೆಯೂ ಅವನದೇ.

ಎಲ್ಲರನ್ನೂ, ಎಲ್ಲವನ್ನೂ ನ್ಯಾಯ ಮತ್ತು ಅನ್ಯಾಯ, ಕತ್ತಲು ಮತ್ತು ಬೆಳಕಿನ ತಕ್ಕಡಿಯಲ್ಲಿ ಇಟ್ಟು ಅಳೆಯುವುದು ಅದೇ ಅತಿದೊಡ್ಡ ಶಕ್ತಿ ಸನಾ. ಪ್ರತೀ ಜೀವಿ- ನಿರ್ಜೀವಿಗಳನ್ನು ಕೊನೆಯಲ್ಲಿ ಎಲ್ಲ ವಿಶ್ವಾತ್ಮಗಳನ್ನು ಬಿಡದೆ ರಕ್ಷಿಸುವುದು ಅಗತ್ಯವಾದಲ್ಲಿ ಶಿಕ್ಷಿಸುವುದು ಇದೇ ಅಭೂತ ಚೇತನದ ಜವಾಬ್ದಾರಿ.

  ಅದು ನಿರಂತರ… ಅನಂತದೆಡೆಗೆ ಶಾಶ್ವತ.

  ಕತ್ತಲು, ಬೆಳಕು ಯಾವುದು ಇರಲಿ, ಇಲ್ಲದಿರಲಿ, ಆ ಶಕ್ತಿ ಇದ್ದೇ ಇರುತ್ತದೆ. “

“ಅದೇ ಆ ಶಕ್ತಿ ಯಾವುದೆಂದು ಹೇಳಬಹುದಿತ್ತು. ವಿವರವಾಗಿ ಬರೆಯಬಹುದಿತ್ತು. ಅದು ಯಾವುದೆಂದು ನಿನಗೇ ತಿಳಿದಿಲ್ಲ ಬಹುಶಃ. ಅದು ನಿನ್ನ ಕಲ್ಪನೆಯೇ ಆತ್ಮ. ಕಟ್ಟು ಕಥೆಯಾಗಿಸಿದೆ ಬದುಕನ್ನು. ಜನರನ್ನು ಕಲ್ಪನೆಗಳಲ್ಲಿ ಸಿಲುಕಿಸಿ ನಲುಗುವಂತೆ ಮಾಡಿದೆ. ಇರುವುದನ್ನು ಮಾತ್ರ ಹೇಳಿದ್ದರೆ ಚೆನ್ನಿತ್ತು.” ಒಮ್ಮೆ ಬೇಸರಗೊಂಡಳು ಸನಾ.

  ನಕ್ಕ ಆತ್ಮ “ನಾನೇಕೆ ಕಲ್ಪಿಸಿ ಬರೆಯಲಿ ಸನಾ!? ಎಲ್ಲವೂ ನಿಜವೇ. ಇಲ್ಲಿ ಯಾವುದೂ ಭ್ರಮೆಯಿಲ್ಲ. ವಾಸ್ತವದಿಂದ ಸ್ವಲ್ಪ ದೂರವಾಗಿರುವ ಎಲ್ಲವೂ ಭ್ರಮೆಯಲ್ಲ ಸನಾ. ಅಂತಹ ಒಂದು ಶಕ್ತಿಯಿದೆ. ಆ ಶಕ್ತಿ ಯಾವುದೆಂದು ತಿಳಿದರೆ ಜನ ಅದರ ಬಗೆಗಿನ ಭಯ ಕಳೆದುಕೊಂಡು ಬಿಡುತ್ತಾರೆ. ಭಯವಿಲ್ಲದವ ಸಾವಿಗೂ ಅಂಜುವುದಿಲ್ಲ. ಅದರ ಬಗ್ಗೆ ಭಯವಿದ್ದರೆ ಮನುಷ್ಯನ ಬದುಕು ಬಂಗಾರವಾಗುತ್ತದೆ. ಅದಕ್ಕೆ ಅದನ್ನು ಗೌಪ್ಯವಾಗಿರಿಸಿದೆ. “

  ತಲೆಯಾಡಿಸಿದಳು ಸನಾ.  “ಉಳಿದವರಿಗೆ ಬೇಡ, ನನಗೆ ಹೇಳಲಾರೆಯಾ?? ಅದೇನೆಂದು. ನನಗೆ ಆ ಶಕ್ತಿಯನ್ನು ಗೌರವಿಸುವ ಮನಸ್ಸಿದೆ. ನಾನೂ ತಿಳಿದುಕೊಳ್ಳುವೆ ಆತ್ಮ, ಅದೇನೆಂದು ಹೇಳು” ಗೋಗರೆದಳು. ಆತ್ಮ ಅವಳ ಬಳಿ ಏನನ್ನೂ ಮುಚ್ಚಿಟ್ಟಿಲ್ಲ. ಇದು ಹೇಳಬಾರದ ವಿಷಯ ಅಂತೇನೂ ಇಲ್ಲ. ಆತ್ಮ ಎಲ್ಲರಿಗೂ ಹೇಳದೆ ಇರಲೂ ಒಂದು ಕಾರಣವಿತ್ತು.

  ಮನುಷ್ಯ ಕಣ್ಣಿಗೆ ಕಾಣಿಸುವುದನ್ನು ಕಡೆಗಣಿಸುವುದು ಹೆಚ್ಚು. ಕಣ್ಣಿಗೆ ಕಾಣದುದರೆಡೆಗೆ ಭಯ; ಕಣ್ಣು ಕಾಣದ ಕತ್ತಲೂ ಭಯವೇ ಅವನಿಗೆ.

  ಯಾವುದೋ ಕಾಣದ ಪ್ರಪಂಚವಿದೆ, ಕಂಡರಿಯದ ಶಕ್ತಿಯಿದೆ ಎಂದರೆ ಅದನ್ನು ಗೌರವಿಸುತ್ತಾರೆ. ಅದಕ್ಕೆ ಭಯ ಪಡುತ್ತಾರೆ. ಆ ಭಯ ಇರಲಿ ಎಂದೇ ಆತ್ಮ ಏನೊಂದೂ ಬರೆದಿರಲಿಲ್ಲ. ಆತ್ಮ ಸನಾಳಿಗೆ ಆ ಶಕ್ತಿ ಯಾವುದೆಂದು ಹೇಳಿದ.

“ಸನಾ, ವಿಶ್ವದಲ್ಲಿ ಎಲ್ಲಕ್ಕಿಂತ ದೊಡ್ಡ ಶಕ್ತಿ ಯಾವುದು ಗೊತ್ತಾ!? “ಟೈಮ್” “ಸಮಯ”. ನಡೆಯುತ್ತಿರುವ ಪ್ರತಿ ಕ್ಷಣಗಳು, ಪ್ರತಿ ಸೆಕೆಂಡ್ ಗಳು ಎಲ್ಲಕ್ಕಿಂತ ದೊಡ್ಡ ಶಕ್ತಿ. ಎಲ್ಲವನ್ನು ಸೃಷ್ಟಿಸುವುದು, ಎಲ್ಲವನ್ನೂ ಅಂತ್ಯಗೊಳಿಸುವುದೂ ಎಲ್ಲವೂ ಸಮಯದ ಹಿಡಿತದಲ್ಲಿಯೇ ಇದೆ.

  ಸಮಯದ ಬಳಿ ಎಲ್ಲದಕ್ಕೂ ಉತ್ತರವಿದೆ. ಮಾಡಿದ ತಪ್ಪುಗಳಿಗೆ ಅದು ಶಿಕ್ಷಿಸುತ್ತದೆ. ಒಳ್ಳೆಯ ಪ್ರಯತ್ನಗಳಿಗೆ ಸರಿಯಾದ ಫಲ ನೀಡುತ್ತದೆ. ಯಾರು ಸಮಯವನ್ನು ಗೌರವಿಸುವರೋ ಅದೂ ಅವರನ್ನು ಗೌರವಿಸುತ್ತದೆ.

  ಸಮಯವೇ ಎಲ್ಲರನ್ನು ಆಳುವ ಶಕ್ತಿ; ಆಡಿಸುವ ದೈತ್ಯ ಶಕ್ತಿಯೂ ಕೂಡ.”

  ಸನಾ ಮಾತನಾಡದಾದಳು. ಎಷ್ಟು ದೊಡ್ಡ ವಿಚಾರಗಳಿವೆಲ್ಲಾ?? ನನ್ನ ಯೋಚನೆಗಳಿಗೆ ನಿಲುಕದ ವಿಷಯಗಳೆಂದುಕೊಂಡೆ. ಇಂಥ ವಿಷಯವನ್ನು ಗಮನಿಸದೆ ಹೋದೆನಲ್ಲ ಎಂದು ವ್ಯಥೆಗೊಂಡಳು. ತನ್ನದೇ ಯೋಚನೆಗಳಿಗೆ ಮತ್ತೆ ನಕ್ಕಳು. ಎಷ್ಟೋ ದೊಡ್ದ ವಿಚಾರವೆಂದುಕೊಂಡಿದ್ದು ಉತ್ತರ ತಿಳಿದ ಮೇಲೆ ಇದು ಇಷ್ಟೇ ಎನ್ನಿಸಿದೆ, ಆತ್ಮ ಅದನ್ನು ಬರೆಯದಿರುವುದೇ ಸರಿ ಎಂದುಕೊಂಡಳು ಸನಾ.

“ನೀನೆ ಸರಿ ಆತ್ಮ ಮುಂದೆ ಹೇಳು”

“ಅವೆಷ್ಟೋ ಪ್ರಶ್ನೆಗಳನ್ನು ಪ್ರಶ್ನೆಗಳಾಗಿಯೇ ಉಳಿಸಿರುವೆ ನೀನು, ಉತ್ತರ ಕೊಡುವವರು ಯಾರು? ಎಂದು ಕೇಳಿಲ್ಲವೇ ನೀನು? ನಾನು ಎಲ್ಲದಕ್ಕೂ ಉತ್ತರಗಳನ್ನು ನೀಡಿದ್ದೇನೆ ಸನಾ. ನಿನಗೆ ಉತ್ತರ ದೊರಕಬೇಕೆಂದರೆ ಇನ್ನೊಮ್ಮೆ ಈ ಬದುಕೊಳಗೆ ಸೇರಬೇಕು. ಏಕೆ ಗೊತ್ತಾ??

  ನಿನಗೆ ಕಾದಂಬರಿ ಅರ್ಥವಾಗಿಲ್ಲ ಎಂದೇ ಅರ್ಥ. ನಾನು ಅಷ್ಟು ಪ್ರಶ್ನೆಗಳನ್ನು ಕೇಳಲು ಕಾರಣವಿದೆ. ಪ್ರಶ್ನೆಗಳು ಅಂತರಂಗವನ್ನು ತಾಗುತ್ತವೆ, ಯೋಚನೆಗಳನ್ನು ಕೆಣಕುತ್ತವೆ, ಮನದಂಗಳವನ್ನು ಕೆದಕುತ್ತವೆ.

  ಬಹುತೇಕ ಜನರು ಪ್ರಶ್ನೆಗಳನ್ನು ಹಾಕಿಕೊಳ್ಳದೇ ಬದುಕುತ್ತಾರೆ. ಆದ್ದರಿಂದ ಅವರಿಗೆ ಉತ್ತರಗಳು ಅನಾವಶ್ಯಕವೇ. ಇದಕ್ಕೇ ಪ್ರಶ್ನೆಗಳೇ ಏಳುವಂತೆ ಮಾಡಿದೆ. ಓದುವ ಪ್ರತಿಯೊಬ್ಬನಲ್ಲೂ ಪ್ರಶ್ನೆಗಳು ಏಳಬೇಕು. ಉತ್ತರಗಳನ್ನು ತಮ್ಮ ಮನಸ್ಸಿನಲ್ಲಿ ಹುಡುಕಬೇಕು. ಏಕೆ?? ಹೇಗೆ?? ಪ್ರಶ್ನೆಗಳು ಕಾಡಬೇಕು. ಆಗ ಉತ್ತರಗಳ ಹುಡುಕಾಟ ಶುರುವಾಗುತ್ತದೆ. ಉತ್ತರಗಳ ಹುಡುಕಾಟ ಶುರುವಾದಾಗ ನಮ್ಮನ್ನು ನಾವು ಬಗೆದುಕೊಳ್ಳಬೇಕಾಗುತ್ತದೆ. ಬೇರೆ ನಿಂತು ನೋಡಿಕೊಳ್ಳಬೇಕಾಗುತ್ತದೆ.

  ನಿರಂತರ ಸತ್ಯದೆಡೆಗಿನ ಸುದೀರ್ಘ ಪಯಣ ಅದು.

ಇಷ್ಟಾದ ಮೇಲೆಯೂ ಅದೊಂದಿಷ್ಟು ಪ್ರಶ್ನೆಗಳಿಗೆ ಉತ್ತರಗಳಾಗಿದ್ದೇನೆ. ನನ್ನದೇ ಯೋಚನೆಗಳ ಬೆಂಬಲದಿಂದ, ಕಲ್ಪನೆಗಳ ಸಾಮರ್ಥ್ಯದಿಂದ. ಅವೆಲ್ಲವೂ ಸರಿ ಅಥವಾ ತಪ್ಪು ಎಂಬುದೂ ತಿಳಿದಿಲ್ಲ ನನಗೆ. ನನ್ನ ದೃಷ್ಟಿಕೋನದಲ್ಲಿ ಸರಿಯೆನ್ನಿಸಿದ ಆಯ್ಕೆಗಳವು. ಬದುಕು ಯಾರಿಗೂ ಒಂದೆ ಅಲ್ಲ. ಅವರವರ ಯೋಚನೆಗಳಂತೆ ಬದುಕು ಬದಲಾಗುತ್ತದೆ. ಇದೂ ಅಷ್ಟೆ ಓದುವವನ ದೃಷ್ಟಿಕೋನದ ಮೇಲೆ ಅವಲಂಭಿಸಿದೆ.

 ಪ್ರಶ್ನೆಗಳು ಹುಟ್ಟಿದಾಗಲೇ ಮನುಷ್ಯ ಉತ್ತರಗಳ ಉಸಿರು ಕೊಡಲು ಪ್ರಯತ್ನಿಸುತ್ತಾನೆ. ಪ್ರಶ್ನೆ ಎಂಬುದು ಬರೀ ಪ್ರಶ್ನೆಯಲ್ಲ. ಅಂತರಂಗ ಬಹಿರಂಗದ ನಡುವಿನ ವ್ಯತ್ಯಾಸ ತೋರಿಸುವ ಅದ್ಭುತ ಕ್ರಿಯೆ ಅದು.

  ಕೊನೆಯದಾಗಿ ನನ್ನ ಪ್ರಯತ್ನದ ಈ ಪುಟ್ಟ ಬದುಕಿನಧ್ಯಾಯಕ್ಕೆ ಸೇರಿಹೋದರೆ ಎಲ್ಲ ಪ್ರಶ್ನೆಗಳಿಗೂ ಅವರದೇ ಉತ್ತರಗಳನ್ನು ಹುಡುಕಿಕೊಳ್ಳುತ್ತಾರೆ. ಇದು ಕಾದಂಬರಿಯಲ್ಲ. ಕೇವಲ ನನ್ನ ಕನಸಿನ ಬದುಕೂ ಅಲ್ಲ. ವಿಶ್ವ ಒಂದು ಪ್ರಚೋದನೆ ಎದುರಿನಿಂದ ಪ್ರತಿಕ್ರಿಯೆಗಳು ಬರಬೇಕು ಸನಾ.”

  ಆತ್ಮನ ತರ್ಕ ಅವಳಿಗೆ ಇಷ್ಟವಾಯಿತು. “ಆತ್ಮ, ನೀನು ಎಲ್ಲ ಸಮಯಗಳಲ್ಲಿಯೂ ಸರಿಯೇ ಇರುವೆ. ಇಲ್ಲವೇ ಸರಿಯಿಲ್ಲದಿದ್ದರೂ ಸರಿಯೆಂದೇ ಬಿಂಬಿಸುವೆ. ಇವೆರಡೂ ನನ್ನ ಕಲ್ಪನೆಗಳೋ, ಏನೋ ಅದೂ ತಿಳಿಯುತ್ತಿಲ್ಲ. ಆದರೂ ನೀನು ಬಹಳ ಇಷ್ಟವಾಗಿ ನಿಲ್ಲುವೆ.” ಎಂದು ನಕ್ಕಳು.

  ಅವಳಲ್ಲಿ ನನ್ನೆಡೆಗೆ ಆಕರ್ಷಣೆ ಇದೆ, ಅದು ಮುಗಿಯುವುದೂ ಅಲ್ಲ ಎಂದು ಆತ್ಮ ತೃಪ್ತಗೊಂಡ. ಸಣ್ಣ ನಗುವೊಂದು ಮಿಂಚಿತು. “ನಿನ್ನ ಮುಂದಿನ ಪ್ರಶ್ನೆಗೆ ಈಗಾಗಲೇ ಉತ್ತರ ಸಿಕ್ಕಿದೆ. ಅದನ್ನು ನೀನೇ ಬರೆಯಬೇಕಿದೆ” ಎಂದ ಆತ್ಮ.

“ಕೊನೆಯ ಪ್ರಶ್ನೆಗೆ ಉತ್ತರ ಹತ್ತಿರವಿದೆ ಗೆಳತಿ, ಕಾದಂಬರಿಯಂಥ  ಈ ಬದುಕು ಬಹಳ ಕಾವ್ಯಾತ್ಮಕವಾಗಿಯೂ, ಕ್ಲಿಷ್ಟಕರವಾಗಿಯೂ ಇದೆ ಎಂದು ನೀನು ಹೇಳುವುದು ಸ್ವಲ್ಪ ನಿಜವೇ ಇರಬಹುದು. ಆದರೆ ಸಾಮಾನ್ಯರು ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂಬುದು ನಿಜವಲ್ಲ. ಏಕೆಂದರೆ ನನ್ನ ಪ್ರಕಾರ ಸಾಮಾನ್ಯರು ಎಂಬುವವರು ಯಾರೂ ಇಲ್ಲ; ಎಲ್ಲರೂ ಅಸಾಮಾನ್ಯರಂತೂ ಅಲ್ಲ.

  ಆದರೆ ಎಲ್ಲರೂ ಒಂದೇ ರೀತಿಯ ಜಾಣ್ಮೆಯನ್ನು ಹೊಂದಿರುತ್ತಾರೆ. ಅವರು ಅದನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದರ ಮೇಲೆ ಅದರ ಸಾಮಾನ್ಯತೆಯ ಮಟ್ಟ ಅವಲಂಭಿಸಿದೆ.

  ಇದೊಂದು ಬದುಕುವ ನೀತಿ ಸನಾ. ಎಲ್ಲರೂ ಇದನ್ನು ಅರಿತುಕೊಳ್ಳಬಲ್ಲರು. ಸೂಕ್ಷ್ಮಗ್ರಾಹಿಯಾಗಿರಬೇಕು, ಪ್ರಬಲ ಮನಸ್ಸು ಬೇಕು. ಒಮ್ಮೆ ಅರ್ಥವಾಗದಿದ್ದರೆ ಇನ್ನೊಮ್ಮೆ ಬದುಕ ಒಳ ಸೇರಿಕೊಳ್ಳಲಿ.

  ಅರ್ಥ ಮಾಡಿಕೊಂದಾಗಲೇ ಭವ್ಯ ಬದುಕು.

  ದುರ್ಬಲರು ಈ ಕಾದಂಬರಿಯ ಆಳವನ್ನು ಅರಿಯಲಾರರು. ಏಕೆಂದರೆ ಅದು ಅಳಿದು ಹೋಗುವ ಜೀವಿಗಳ ಸಾಲು.” ಸನಾಳ ಮುಖ ನೋಡಿದ.

ಹೊಟ್ಟೆಯೊಳಗಿನ ಪುಟ್ಟ ಮಗು ಎಲ್ಲವನ್ನೂ ನಾನು ಕೇಳುತ್ತಿದ್ದೇನೆ ಎಂಬಂತೆ ಕಾಲಾಡಿಸಿತು.

  “ಮಾತನಾಡುತ್ತಿದ್ದರೆ ಸಮಯದ ಪರಿವೆಯೇ ಇರುವುದಿಲ್ಲ ಸನಾ, ನಿನಗೀಗ ಒಳ್ಳೆಯ ನಿದ್ರೆ ಅವಶ್ಯಕ. ಹೊತ್ತು ಬಹಳವಾಗಿದೆ. ನಡೆ, ಮಲಗೋಣ.” ಎಂದು ಕೈ ಚಾಚಿದ.

  “ಹೌದು ಆತ್ಮ, ನಿನ್ನ ಜೊತೆಯಿದ್ದರೆ ಯಾವಾಗಲೂ ಸಮಯ ಸಂದಿರುವುದೇ ತಿಳಿಯುವುದಿಲ. ಎನಿಸುತ್ತಿರುವಂತೆಯೇ ಮುಂದೆ ಸಾಗಿ ಬಿಡುತ್ತದೆ. ನೀನು ನನ್ನ ಆಯಸ್ಸು ಕಡಿಮೆ ಮಾಡುತ್ತಿರುವೆ” ನಕ್ಕಳವಳು.

  “ನಿನ್ನ ಎಲ್ಲ ಮಾತುಗಳೂ ಒಪ್ಪಿಗೆಯೇ. ಆದರೆ ಒಂದು ಅಭಿಪ್ರಾಯ ತಿಳಿಸುತ್ತೇನೆ. ನೀನು ಯುದ್ಧದ ಬಗ್ಗೆ ಬರೆಯಬೇಕು ಆತ್ಮ. ಬರೆಯುವುದು ಒಂದು ಕಲೆ. ಇದರಲ್ಲಿ ನೀನು ಕಾಮದ, ದೇಹ ಸುಖ, ಮನಸ್ಸಿನ ತೃಪ್ತಿಯ ಬಗ್ಗೆ ಬರೆದಿರುವೆ. ಇದು ಅಸಹ್ಯವೆಂಬಂತೆ ಎಲ್ಲಿಯೂ ತೋರುತ್ತಿಲ್ಲ. ಹಾಗೆಯೇ ಯುದ್ಧ ಹೇಗೆ ನಡೆಯಿತೆಂದು ಬರೆದುಬಿಡು. ಯುದ್ಧದ ಕ್ರೂರತೆಯನ್ನು ಬಿಂಬಿಸುವುದು ಬೇಡ. ಮನುಷ್ಯನ ಜೊತೆ ನಿಂತಿದ್ದು ಯಾರು!? ಒಳ್ಳೆಯದು ಯಾವುದು? ಕೆಟ್ಟದ್ದು ಹೇಗೆ ನಾಶವಾಗುತ್ತದೆ? ಎಂಬುದನ್ನು ತಿಳಿಸು ಆತ್ಮ. ಮುಂದಿನ ಪೀಳಿಗೆಗೆ ಇದರ ಉತ್ತರಗಳ ಅವಶ್ಯಕತೆಯಿದೆ. ನಮ್ಮ ಬಂಧುಗಳು ಯಾರು? ಕೊನೆಯಲ್ಲಿ ನಮ್ಮ ಜೊತೆ ನಿಲ್ಲುವವರು ಯಾರು ಎಂಬುದು ತಿಳಿಯಬೇಕು ಅವರಿಗೆ.”

  ಅದೂ ಹೌದೆನ್ನಿಸಿತು ಆತ್ಮನಿಗೆ. ಅವಳ ಮಾತಿಗೆ ಒಪ್ಪಿದ.

  ಒಪ್ಪಿಕೊಳ್ಳುವ ಮನಸ್ಸಿದ್ದರೆ ಜಗಳಗಳೇ ಮೂಡುವುದಿಲ್ಲ; ಯುದ್ಧಗಳೇ ನಡೆಯುವುದಿಲ್ಲ.

  “ಈಗ ಮುಗಿಸೋಣ, ನಾಳೆ ಮುಂದುವರೆಸೋಣ” ಸನಾಳ ಕೈ ಹಿಡಿದು ಭುಜಕ್ಕೆ ಭುಜ ಸೇರಿಸಿ ಮೆಲ್ಲಗೆ ಒಳ ಕರೆದುಕೊಂಡು ನಡೆದ.

  ಒಳ್ಳೆಯ ಗಂಡು; ಅಷ್ಟೇ ಚಂದದ ಹೆಣ್ಣು.

  ಬದುಕು ಕಲಾಶಾಲೆ.

  ಮೊದಲ ದಿನದ ಪ್ರೀತಿ ಇಂದಿಗೂ ನಳನಳಿಸುತ್ತಿದೆ. ಹಚ್ಚ ಹಸಿರಿನ ಮನೆಯಲ್ಲಿ ನಿತ್ಯ ಹಸಿರಿನ ಪ್ರೀತಿ. ಅವರಿಬ್ಬರ ಪ್ರೀತಿಯ ಸಂಕೇತ ಸನಾಳ ಉದರದಲ್ಲಿ.

  ಒಳ ನಡೆದರು ಇಬ್ಬರೂ.ಕಪ್ಪು ಕತ್ತಲ ರಾತ್ರಿ ಇಬ್ಬರನ್ನೂ ತನ್ನ ತೆಕ್ಕೆಗೆ ಎಳೆದುಕೊಂಡಿತು.

Facebook ಕಾಮೆಂಟ್ಸ್

ಲೇಖಕರ ಕುರಿತು

Gautam Hegde

ನಾಲ್ಕು ವರ್ಷದಿಂದ ಮಾಹಿತಿ ತಂತ್ರಜ್ಞಾನದಲ್ಲಿ ವೃತ್ತಿ, ಈಗ ಸ್ವಂತ ಕಂಪನಿಯೊಂದನ್ನು ನಡೆಸಬೇಕೆಂಬ ಹಂಬಲದಿಂದ ಸ್ಟಾರ್ಟ್ ಅಪ್ ನಡೆಸುತ್ತಿರುವ ನನಗೆ ಅತೀವ ಆಸಕ್ತಿ - ಸಾಹಿತ್ಯ - ಓದು - ಬರಹ. ಅದರ ಪ್ರತಿಬಿಂಬವೇ ಈ "ಆತ್ಮ ಸಂವೇದನಾ". ಕಾದಂಬರಿಗಳ ಲೋಕದಲ್ಲಿ ಮೊದಲ ಪ್ರಯತ್ನವಿದು. ನಿಮ್ಮೆಲ್ಲರ ಮನಸ್ಸು ಮುಟ್ಟಲಿ ಎಂದು ಪ್ರಯತ್ನದಲ್ಲಿ..

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!