ತಂಗಾಳಿ ಮುಖದ ಮೇಲೆ ಬೀಸ್ತು.ಕೂದಲು ಹಾರುತ್ತಾ ಇತ್ತು.ವಾಸ್ತವದ ಅರಿವಾಗಿ ದೀಪಕ್ ಒಮ್ಮೆ ಸುತ್ತಮುತ್ತಲೂ ನೋಡಿದ.ರಾಮ ಆಂಜನೇಯ ತಬ್ಬಿರುವ ದೃಶ್ಯ ಕಾಣ್ತಿದೆ.ದೇವಸ್ಥಾನ.ಪ್ರಶಾಂತ ಜಾಗ.ಜನ ಅಲ್ಲಲ್ಲಿ ಚದುರಿದ್ದಾರೆ.ಹಕ್ಕಿಗಳು ಕಾಳು ಹುಡುಕಿ ಬಂದು ಕೂತಿವೆ. ನೆನಪುಗಳು ಮನಸ್ಸಿನಲ್ಲಿ ಆಹಾರವಾಗಿ ಹೃದಯತುಂಬಿ ಬರ್ತಿದೆ.
”ಇದೇ ರಾಮಾಂಜನೇಯ ಗುಡ್ಡ ಅಲ್ವ ಮೊದ್ಲು ಭೇಟಿಯಾಗಿದ್ದು?” ಮನಸ್ಸು ಗುನುಗಿತು.
***
“ಥ್ಯಾಂಕ್ಸ್.. ಫ಼ೇಸ್ಬುಕ್ಕಲ್ಲಿ ಫ಼್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ್ದಕ್ಕೆ.ನಂಬರ್ ಕೊಟ್ಟಿದ್ದಕ್ಕೆ.” ತನ್ನ ಸಾಮಾನ್ಯ ರಸಿಕತೆಯಿಂದ ಕೇಳಿದ ದೀಪಕ್.
“ವೆಲ್ಕಮ್” ಮುಖದ ಮೇಲೆ ನಗುವಿನಿಂದ ಹೊಡೆದಂತೆ ಒಂದೇ ಪದದಲ್ಲಿ ಉತ್ತರ ಹೇಳಿ ತಲೆ ತಗ್ಗಿಸಿದಳು ಸಂಜೀವಿನಿ.
“ನೀವ್ ಯಾವಾಗ್ಲು ಸೈಲೆಂಟಾ? ಅಥ್ವ ನನ್ ಜೊತೆ ಮಾತ್ರ ಹೀಗೆ ಮಾತಾಡೋಕ್ ಪ್ರಾಬ್ಲಮ್ಮ?” ಒಂದು ಹುಬ್ಬು ಮೇಲೇರಿಸಿ ಕೇಳಿದ.
“ಹಾಗೇನಿಲ್ಲ,ಆನಂದ ನಿಮ್ ಬಗ್ಗೆ ಹೇಳ್ತಿದ್ದ”
ತಕ್ಷಣಕ್ಕೆ ಏನೇನು ವಿಚಾರ ಹೇಳಿರಬಹುದು ಅಂತ ಭಯ ಆಯ್ತು.ಹುಡುಗೀರ ಬಗ್ಗೆ ತನಗಿದ್ದ ಉತ್ಸುಕತೆಯನ್ನ ಇವಳ ಮುಂದೆ ಬಿಚ್ಚಿಟ್ಬಿಟ್ನ ಅಂತ ಕಾತುರ.
“ಹೌದ.ಏನೇನ್ ಹೇಳಿದ ನನ್ ಬಗ್ಗೆ?” ಕೇಳಬಾರದು ಅಂತ ಇದ್ರು,ತಾನಾಗೆ ತಾನೆ ಭಯದಲ್ಲಿ ಬಂದುಬಿಡ್ತು.
ಸಂಜೀವಿನಿ ನಕ್ಕು “ಅಷ್ಟೆಲ್ಲಾ ಹೆದರಬೇಡಿ.ಅಲ್ಪ ಸ್ವಲ್ಪ ಹೇಳಿದಾನೆ ಅಷ್ಟೆ.”
ಕುಸಿದು ಬೀಳ್ತಿದ್ದ ಎದೆ,ಹದಕ್ಕೆ ಬಂದು ನಿಲ್ತು. ಮಾತು ಹಾಡಾಗಿ ಮುಂದ್ವರೀತು. ಘಳಿಗೆಗಳೆಲ್ಲಾ ಘಂಟೆಗಳಾದ್ವು. ರಾತ್ರಿ ಹಗಲು ಇಲ್ಲದೆ ಫ಼ೋನ್ ಬಿಜ಼ಿಯಾಗಿರ್ತಿತ್ತು.
***
ಕೈಯಲ್ಲಿ ಫ಼ೋನ್ ಹಿಡಿದು ಸಮಯ ನೋಡಿದ. ಇನ್ನು ಸ್ವಲ್ಪ ಟೈಮ್ ಇತ್ತು. ಹಾಡು ಶುರುವಾಗೋವರೆಗು ನೆನಪಿನ ಕಥೆಯನ್ನ ಮುಗಿಸೋಕೆ ಸಾಧ್ಯಾನ ಅಂತ ಯೋಚನೆ ಮಾಡ್ತ ಇದ್ದ? ಪಕ್ಕದಲ್ಲೇ ನಲವತ್ತು ವರ್ಷದವನೊಬ್ಬ ಒಬ್ಬ ಹೆಂಗಸನ್ನ ರಮಿಸೋಕೆ ಪ್ರಯತ್ನ ಪಡ್ತಿದ್ದ. ಅವಳು ಕೋಪದಲ್ಲಿದ್ಲು. ಅವನ ಹೆಂಡತಿ ಇರಬಹುದು.ಅಕ್ಕ ಪಕ್ಕದವರ ಪರಿವೆ ಇಲ್ದೇ ಮಾತುಗಳು ಸ್ವಲ್ಪ ಜೋರಾಗೆ ಹರಿದಾಡ್ತಿದ್ವು.
“ನಿಮ್ಮಮ್ಮನಿಗೆ ಹೇಳು, ನಾನು ಮೆಶೀನ್ ಅಲ್ಲ.ನಂಗು ರೆಸ್ಟ್ ಬೇಕು ಅಂತ” ನೊಂದ ಧ್ವನಿಯಲ್ಲಿ ಆ ಹೆಣ್ಣು ಹೇಳ್ತಿದ್ಲು.
“ಈ ಹೆಂಗಸರದ್ದೇ ಪ್ರಾಬ್ಲಮ್ಮು ಯಾವಾಗ್ಲು.ನಾನು ನಿಮ್ಮಪ್ಪ ಯಾವತ್ತಾದ್ರು ಜಗಳ ಆಡ್ತೀವ ನೋಡು? ಯಾಕ್ ಹೀಗ ಮಾಡಿಟ್ಬಿಟ್ನೋ ಆ ಭಗವಂತ” ಅಂತ ತುಂಟತನವನ್ನ ಬೆರಸಿ ತತ್ವ ಹೇಳೋಕ್ ಹೊರಟ.
“ಥು” ಎಂದು ಎದ್ದು ಹೊರಟೇ ಬಿಟ್ಲು.
ಇಷ್ಟನ್ನು ನೋಡ್ತಿದ್ದ ದೀಪಕ್ಗೆ ನಗಬೇಕೋ ವಿಪರ್ಯಾಸ ಅಂದ್ಕೋಬೇಕೋ ಅರ್ಥ ಆಗ್ಲಿಲ್ಲ.
ಸಂಜೀವಿನಿಯನ್ನ ಇಷ್ಟ ಪಡ್ತಿದ್ದದ್ದು ಆಟಿಕೆಗೋ,ಆನಂದಕ್ಕೋ,ಅವಸರಕ್ಕೋ?ಅರ್
***
ಅವತ್ತು ಅವಳ ಧ್ವನಿ ಇನ್ನು ನನ್ನ ಮನಸಲ್ಲಿ ತಿರುಗುತ್ತಾ ಇದೆ.ಆ ನಿಲುವು, ಆ ನೇರೆ ನಡೆ.ನೋವಿನಿಂದ ಕಲ್ಲಾಗಿದ್ದ ಮನಸ್ಥಿತಿ ತೋರಿಸ್ತಾ ಇತ್ತು.
“ಇದು ಪ್ರೀತಿ ಅಲ್ಲ ಅಂತ ನಿನಗೆ ಮೊದಲೇ ತಿಳಿದಿರಲಿಲ್ವ?”
“ಯಾಕ್ ಏನೇನೋ ಮಾತಾಡ್ತ್ಯ? ನಂಗೆ ಸರಿಯಾಗಿ ಕೆಲಸ ಸಿಗೋದಿಲ್ಲ,ಎಕ್ಸಾಮ್ಸ್ ಅಲ್ಲಿ ಫ಼ೇಲ್ ಆಗ್ತಿದ್ದೀನಿ. ನಿನ್ನ ಭವಿಷ್ಯ ನಿಂಗೆ ಮುಖ್ಯ ಅಲ್ವ?”
“ಕಾರಣಗಳು ಸಾಕಷ್ಟಿದೆ. ನನ್ನ ಭವಿಷ್ಯ ನನ್ನ ತಲೆ ನೋವು ದೀಪಕ್.ನಿನ್ನ ಪ್ರೀತಿ ಮಾಡೋವಾಗ ನನ್ನ ಭವಿಷ್ಯವನ್ನ ತೂಕಕ್ ಹಾಕೇ ಅಲ್ವ ಮುಂದ್ವರೆದಿದ್ದು.”
“ಹಾಗಲ್ಲ” ಬಡಬಡಿಸೋ ಆತುರದಲ್ಲಿದ್ದ.ನಿಜ ಹೇಳಬೇಕು ಅಂದ್ರೆ ಅವಳನ್ನು ಎದುರಿಸುವ ಭಯದಲ್ಲಿದ್ದ.ಹಾಗೆ ಅಲ್ಲಿಂದ ಎಸ್ಕೇಪ್ ಆಗೋ ತವಕದಲ್ಲಿದ್ದ.ಅವಳ ಮಾತು ಅವನಿಗೂ ಸಾಕಾಗಿತ್ತು.
“ಬೇರೆ ಆಗ್ಬೇಕು ಅಂತ ನಿರ್ಧರಿಸಿಕೊಂಡೆ ಬಂದಿದ್ದೀಯ ಅಂದ್ಮೇಲೆ ನನ್ನಿಂದ ಅದನ್ನ ಬದಲಿಸೋಕೆ ಆಗೋದಿಲ್ಲ.ಇನ್ಯಾರಿಗು ಹೀಗ್ ಮಾಡ್ಬೇಡ.”
“ನೋಡು, ನಾನು ನಿನ್ನ ಮುಟ್ಟೂ ಇಲ್ಲ ಸಂಜು” ಚೀಪ್ ಆಗಿ ಮಾತನಾಡಿದನೆಂದು ಮಾತು ಹೊರಟು ಎದುರಾಳಿಗೆ ಇರಿದ ಮೇಲೆ ಗೊತ್ತಾಯ್ತು.
ಒಮ್ಮೆ ನಸುನಕ್ಕಳು. ಆದ್ರೆ ಈಗ ಆ ನಗುವಿಗೆ ಬೀಳೋ ಸನ್ನಿವೇಶ ಇರಲಿಲ್ಲ. ಈ ಸಂಬಂಧದಿಂದ ಹೊರಗೆ ಹೋಗೋ ಆತುರದಲ್ಲಿದ್ದ.
“ಥ್ಯಾಂಕ್ಸ್” ಎಂದು ಹಿಂತಿರುಗಿದ್ಲು. ಇಡೀ ಭೂಮಿಯೇ ನಿಧಾನಗತಿಯಲ್ಲಿ ಚಲಿಸ್ತಾ ಇದ್ಯೇನೋ ಅಂತ ಅನ್ನಿಸ್ತು. ಕ್ಷಮೆಯಾಚಿಸೋಕೆ ಸಮಯವಿರಲಿಲ್ಲ. ಆಟದ ಮಿತಿ ಮೀರಿದ್ದೆ.ಸಣ್ಣನೆ ಸೋನೆ ಮಳೆ ಸುರಿಯೋಕೆ ಶುರುವಾಯ್ತು.ಪ್ರತೀ ಬಾರಿ ಬೀಳ್ಕೊಡೋವಾಗ್ಲು ಹಿಂತುರಿಗಿ ನೋಡಿ ಹೋಗ್ತಿದ್ಲು.ಈ ಬಾರಿ ಅವಳು ಹಿಂತಿರುಗಿ ನೋಡ್ಲಿಲ್ಲ.ಮಳೆಯಲ್ಲಿ ಅವಳ ಕಣ್ಣೀರು ಕಾಣಿಸ್ಲಿಲ್ಲ.ಗಾಡಿಗಳ ಶಬ್ಧ ಕೂಡ ಎಲ್ಲೋ ದೂರದಲ್ಲಿ ಕೇಳಿಸಿದಂತೆ ಭಾಸವಾಗ್ತಿತ್ತು. ಮುಂದೆಂದು ಈ ಹುಡುಗಿ ನನಗೆ ಸಿಗೋದಿಲ್ಲ. ಸಿಕ್ಕರು ತುಚ್ಚ ಭಾವನೆಯಲ್ಲೇ ಕಾಣ್ತಾಳೆ ಅಂತ ಮನಸ್ಸಿನಲ್ಲೇ ಎಣಿಸಿ ತನ್ನ ಗಾಡೀನ ಹತ್ತಿದ್ದ.
***
ಈಗ ಗೆಳೆಯ ಆನಂದತೀರ್ಥ ಮೆಲ್ಬೌರ್ನಿನಲ್ಲಿದಾನೆ,ಆರ್ಯನ್ ತನ್ನದೇ ಬಿಸಿನೆಸ್ ಮಾಡಿಕೊಂಡು ಬೆಂಗಳೂರಲ್ಲಿದಾನೆ.ತನ್ನ ಕೆಲಸ ಬೋರ್ ಆಗಿದೆ. ಗಂಡಸರ ಕಥೇನೆ ಇಷ್ಟು. ಕೆಲವೊಮ್ಮೆ ಇರಾದೇನೋ ಸರಿ ಇರೋದಿಲ್ಲ,ಇನ್ನು ಕೆಲವೊಮ್ಮೆ ಮಾತುಗಳು ಹೃದಯಕ್ಕೆ ಕನ್ನಡಿ ಹಿಡಿಯೋದಿಲ್ಲ. ಪಕ್ಕದಲ್ಲಿದ್ದ ಗಂಡನ ಹಾಗೆ ತನ್ನದೂ ಆಗಿದ್ದು. ಹೆಣ್ಣು ಸೃಷ್ಟಿಯಂತೆ, ಅವಳನ್ನ ಉಳಿಸೋದು ಅಳಿಸೋದು ಎರಡೂ ನಮ್ಮ ಕೈಲಿರತ್ತೆ. ಇದೆಲ್ಲಾ ಇತ್ತೀಚಿಗೆ ಅರಿವಾದ ತತ್ವಗಳು.ಮಾತನ್ನ ಮೆಲಕು ಹಾಕ್ತ ಸಭಾಂಗಣದ ಕಡೆ ಹೆಜ್ಜೆ ಹಾಕಿದ. ಜನಗಳು ಕಿಕ್ಕೆರಿದಿದ್ರು. ಒಂದ್ ಮೂಲೆಯಲ್ಲಿ ಖಾಲಿ ಇದ್ದ ಜಾಗ ಕಂಡು ಹೋಗಿ ಕುಳಿತ ದೀಪಕ್.
“ಹಾಡು : ಮನಸ್ಸಿನ ಆಳಕೆ ಧುಮುಕುವ ಪ್ರೀತಿಯ ಜಲಪಾತ, ರಚನೆ : ಸಂಜೀವ ಶಾಸ್ತ್ರಿಗಳು , ರಾಗ : ವಸಂತ” ಹಾಡುವಾಕೆ ಹುರುಪಿನಿಂದ ಪ್ರಕಟಿಸಿದ್ಲು.
ಹಾಡು ಶುರುವಾಯ್ತು. ತಾನು ತನ್ನ ಕಾಲೇಜಿನ ದಿನಗಳಲ್ಲಿ ಹೀರೋ ಆಗಲಿಕೆ ಹೊರಟು ಏನೆಲ್ಲಾ ತರಲೆ ಮಾಡಿಬಿಟ್ಟೆ. ಎಷ್ಟು ಮನಸ್ಸುಗಳಿಗೆ ನೋವು ಮಾಡಿದೆ. ಅದರಲ್ಲಿ ಸಂಜು ಕೂಡ ಒಬ್ಬಳಾದ್ಲು. ಆದ್ರೆ ಇಂದಿಗೂ ಅವಳನ್ನ ನೆನಪು ಮಾಡಿಕೊಂಡ್ರೆ ಹೃದಯ ತೊಳಸಿದಂತಾಗತ್ತೆ. ಜೊತೆಗೆ ಇರಬಹುದಿತ್ತೇನೋ. ಯಾಕೆ ಹಾಗೆ ಮಾಡಿದೆ? ಸಂಬಂಧಗಳ ಸುಳಿಯಲ್ಲಿ ಸಿಲುಕೋ ಭಯಾನ? ಅವಳಿಂದ ಏನು ಪಡೆಯಬೇಕೆಂದಿದ್ನೋ ಅದು ಸಿಗಲಿಲ್ಲ ಅನ್ನೋ ಅಸಹ್ಯ ಯೋಚನೆ ಇಂದಾನ? ಅವಳ ನಂತರ ತನ್ನ ಜೀವನದಲ್ಲಿ ಮತ್ತಾರು ಬರಲಿಲ್ಲ. ಇಂದಿಗೂ ಏಕಾಂಗಿ. ಬೆಂಗಳೂರಿನ ಬದುಕು ಬೇಡವಾಗಿದೆ. ಎಲ್ಲಾದರು ಹೊರಟು ಹೋಗುವ ಆಸೆಯಾಗಿದೆ. ಹಿಮಾಲಯ,ರಾಜಸ್ಥಾನ,ಡೆಲ್ಲಿ ಎಲ್ಲಾ ಕಡೆ ಒಂದು ರೌಂಡು ಹಾಕಬೇಕು. ಬದುಕಿನ ರಹಸ್ಯ ಏನು ತಿಳ್ಕೋಬೇಕು ಎನ್ನುವ ವೇದಾಂತಿ ಯೋಚನೆಗಳು ಬರತೊಡಗಿದ್ವು. ಸಂಜೀವಿನಿ ಈಗ ಆರಾಮಾಗಿದ್ದಾಳೆ. ತನ್ನೊಡನೆ ಇದ್ದಿದ್ರೆ ಸಂತೋಷವಾಗಿರುತ್ತಿದ್ಲೋ ಇಲ್ವೋ? ಪ್ರೀತಿ,ಮದ್ವೆ,ಸಂಬಂಧಗಳ ಬಲೆಯಲ್ಲಿ ಸಿಲುಕೋ ವ್ಯಕ್ತಿ ತಾನಲ್ಲ. ಹಾಗಾದ್ರೆ ಈಗ್ಲು ಆ ಹುಡುಗಿಯ ನೆನಪು ಕಾಡತ್ತಲ್ಲ. ಆ ಭಾವನೆ ಏನು?
ಇವೆಲ್ಲಾ ಮನಸ್ಸಿನಲ್ಲಿ ಕಲಸಿಕೊಳ್ಳುತ್ತಿರಬೇಕಾದರೆ, ಜೋರಾದ ಚಪ್ಪಾಳೆಯ ಸುರಿಮಳೆ ಕೇಳಿಸಿತು. ಈ ಹಾಡಿನಿಂದ ಇವನ ಯೋಚನೆಗಳು ಅಲೆಮಾರಿಯಂತೆ ಎಲ್ಲಿಂದೆಲ್ಲೋ ಹೋಗಿ ಬಂದಿದೆ ಎಂದು ಖಚಿತವಾಯ್ತು. ಮತ್ತಷ್ಟು ಹಾಡುಗಳು ಇಂಪಾಗಿ ತಂಪಾದ ಗಾಳಿಯಲ್ಲಿ ತೇಲಿ ಇವನ ಕಿವಿಗೆ ಬಂದು ಬೀಳ್ತಿದ್ವು. ಕಾರ್ಯಕ್ರಮ ಮುಗಿದು ಹಾಡುಗಾರರಿಗೆಲ್ಲಾ ಹೂಗುಚ್ಚ ನೀಡಲಾಯ್ತು. ತಕ್ಷಣ ಜನರೆಲ್ಲಾ ಹೋಗಿ ಗಾಯಕಿಯನ್ನು ಸುತ್ತುವರೆದರು. ತಾನು ಅಭಿನಂದನೆ ಸಲ್ಲಿಸೋಕೆ ನಿಂತ. ಒಂದೆರಡು ಬಾರಿ ಆ ಗಾಯಕಿ ಇವನನ್ನು ಕಂಡರು ಕಾಣದಂತೆ ಎಲ್ಲರನ್ನು ಮಾತಾಡಿಸಿ ಬೀಳ್ಕೊಡ್ತಾ ಇದ್ಲು. ಇವನ ಸರದಿ ಬಂತು.
“ತುಂಬಾ ಚೆನ್ನಾಗಿ ಹಾಡಿದೆ. ನಿನ್ನ ಕನಸಿನ ಬೆನ್ನೇರಿ ಹಾಡೋದನ್ನ ಕಂಟಿನ್ಯೂ ಮಾಡಿದ್ಯಲ್ಲ.ಅದೇ ಖುಷಿ, ಮೊದಲ್ನೇ ವಾರದಿಂದ ಹಾಡು ಕೇಳ್ತಿದ್ದೀನಿ. ತುಂಬ ಚೆನ್ನಾಗಿರತ್ತೆ ನಿಮ್ ಪ್ರೋಗ್ರಾಮ್.”
ಅಷ್ಟರಲ್ಲಿ ಅವಳ ಹಿಂದಿನಿಂದ ಜುಬ್ಬ ಜೀನ್ಸ್ ಪ್ಯಾಂಟು ಧರಿಸಿದ ಯುವಕನೊಬ್ಬ ನಡೆದು ಬಂದ.
“ಇವ್ರು ನನ್ ಹಸ್ಬೆಂಡ್. ರಾಜೀವ್ ಅಂತ.” ಎಂದು ತನ್ನ ಗಂಡನ ಪರಿಚಯ ಮಾಡಿಕೊಟ್ಲು.
“ಆಲ್ ದಿ ಬೆಸ್ಟ್. ಆದಷ್ಟು ಬೇಗ ಸಿನೆಮಾದಲ್ಲಿ ನಿನ್ನ ಹಾಡು ಕೇಳ್ತೀನಿ. ನಿನ್ನ ದೊಡ್ಡ ಫ಼್ಯಾನ್ ನಾನು.” ಎಂದು ಬೆನ್ನ ಹಿಂದೆ ಕಟ್ಟಿದ್ದ ಕೈಯನ್ನು ಎತ್ತಿ ಜೋಡಿಸಿ ನಮಸ್ಕಾರ ಮಾಡಿದ.
“ಈಗ ಏನ್ ಮಾಡ್ತಿದ್ಯ?” ಅವಳು ಕೇಳಿದ್ಲು.
“ಇಷ್ಟ್ ದಿನ ಎಲ್ಲೋ ಕೆಲಸ ಮಾಡ್ತಿದ್ದೆ.ನಾಳೆ ಹೋಗಿ ರೆಸಿಗ್ನೇಶನ್ ಟೈಪ್ ಮಾಡ್ತೀನಿ.ಬೋರ್ ಆಗಿದೆ,ಸ್ವಲ್ಪ ದೇಶ ಸುತ್ತೋಣ ಅಂತ.ಹಿಮಾಲಯ,ಪಂಜಾಬು,ರಾಜಸ್ಥಾನ” ಎಂದು ಕನಸಿನ ಕಣ್ಣುಗಳಲ್ಲಿ ದೀಪಕ್ ನುಡಿದ.
“ವಾವ್!ಸೂಪರ್” ಹೇಳ್ಬೇಕು ಅಂತ ಹೇಳಿದ್ಲು.
“ಒಳ್ಳೆ ಜೋಡಿ ಸಂಜೀವಿನಿ” ಎಂದು ಅಲ್ಲಿಂದ ಹೊರಟ. ಬೆಂಗಳೂರಲ್ಲಿ ಯಾವಾಗಂದ್ರೆ ಆಗ ಬೀಳೋ ಅದೇ ಸಣ್ಣ ಸೋನೆ ಮಳೆ ಶುರುವಾಯ್ತು. ಭಾವನೆಗಳ ಮಳೆಯಲ್ಲಿ ನೆಂದು ಹೆಜ್ಜೆ ಹಾಕಿದ ದೀಪಕ್. ರಾಗ ಮನಸ್ಸಿನಲ್ಲೇ ಗುನುಗಿ ಭಾವನೆಗಳು ಉಮ್ಮಳಿಸಿದವು. ದಾರಿಯ ಚಿಂತೆ ಇಲ್ಲದಂತೆ ಜನಗಳ ನಡುವೆ ಮರೆಯಾದ….