ಕಥೆ

ವಸಂತ ರಾಗ  – 1

ಶನಿವಾರ ಸಂಜೆಯಾಗಿತ್ತು. ಸಿಗುವುದೇ ಎರಡು ದಿನ ರಜ.ಶನಿವಾರ ಮತ್ತು ಭಾನುವಾರ.ಇಡೀ ವಾರ ಅದೇ ಮೆಕಾನಿಕಲ್ ಜೀವನ. ಬೆಳಗೆದ್ದು ಕಣ್ಣು ದೊಡ್ಡದಾಗುವಷ್ಟರಲ್ಲಿ ಸಿಲ್ಕ್ ಬೋರ್ಡ್ ಜಂಕ್ಷನ್ ಟ್ರಾಫಿಕ್ನಲ್ಲಿ ಕಾಲ ಕಳೆಯುವುದು,ಸಮಯಕ್ಕೆ ಸರಿಯಾಗಿ ಆಫೀಸ್ ತಲುಪುವುದು.ಒಂಭತ್ತು ಘಂಟೆಗಳ ಕಾಲ ಫಿರಂಗಿಗಳ ಕರೆಗೆ ಉತ್ತರ ನೀಡಿ ಅವರಿಗೆ ಸಹಾಯ ಮಾಡುವುದು.ಮತ್ತೆ ಕೆಲಸ ಮುಗಿಸಿ ಒಂದೂವರೆ ತಾಸು ಐ.ಟಿ.ಪಿ.ಎಲ್ ಇಂದ ಕಾಮಾಕ್ಯವರೆಗು ಪ್ರಯಾಣ. ಈ ಕೆಲಸ ಮುಗಿಸೋ ಸಮಯದಲ್ಲಿ ತಿಂದದ್ದು ಅಜೀರ್ಣವಾಗಿ ಗ್ಯಾಸ್ ತುಂಬಿ ಹೊಟ್ಟೆ ಉಬ್ಬರ ಬರೋದು ಸಹಜವಾಗಿತ್ತು. ಮೈಗೆ ವ್ಯಾಯಾಮ ಇಲ್ಲ,ಮನಸ್ಸಿಗೆ ಹಿತವಿಲ್ಲ.ದಿನದ ಹನ್ನೆರಡು ಘಂಟೆಗಳು ಇದಕ್ಕೆ ಸೀಮಿತ.ಯಾಕೆ ದುಡೀತ್ತಿದ್ದೇನೆ?ಯಾರಿಗಾಗಿ ದುಡೀತಿದ್ದೇನೆ?ನಾ ಕಲಿತ್ತದ್ದೇನು?ಕಲಿತ್ತದ್ದನ್ನ ಎಲ್ಲಿ ಉಪಯೋಗಿಸುತ್ತಿದ್ದೇನೆ? ಎಲ್ಲವೂ ಶೂನ್ಯ.

ಪ್ರತಿ ತಿಂಗಳು ಕೊನೆಯಲ್ಲಿ ಅಕೌಂಟಿಗೆ ಸಂಬಳ ಬಂದು ಬೀಳುತ್ತಿದೆ. ಕೆಲವೊಮ್ಮೆ ಒಂಟಿಯಾಗಿದ್ದಾಗ ರಮ್,ವಿಸ್ಕಿ,ಬಿಯರ್‍ಗೆ ಈ ದುಡ್ಡು ಖರ್ಚಾಗುತ್ತದೆ.ಗೆಳೆಯರ ಜೊತೆಯಾಗಿದ್ದಾಗ ಕೂಡ ಕೆಲವೊಮ್ಮೆ ಸ್ವಲ್ಪ ಖರ್ಚಾಗುತ್ತದೆ. ಫ಼ಾರಿನ್ ಹಣವನ್ನ ಫ಼ಾರಿನ್ ಸಂಸ್ಕೃತಿಯಂತೆ ಉಡಾಯಿಸೋ ಚಟ. ಕೆಲಸ ಮುಗಿಸಿ ಮನೆಗೆ ಬಂದು ಕೆಲ ಕಾಲ ಮೊಬೈಲಿನಲ್ಲಿ ಫ಼ೇಸ್ ಬುಕ್ಕು,ವಾಟ್ಸಾಪು ಅಂತ ಸಮಯ ಕೂಡ ಖರ್ಚ್ ಮಾಡೋ ಚಟ.ಮಲಗು,ಏಳು,ರೆಡಿಯಾಗು,ಕೆಲಸಕ್ಕೆ ಹೊರಡು. ದೇವ್ರು ಈ ಕೀಲು ಕುದುರೆಯ ಬದುಕನ್ನು ಹುಟ್ಟಿಸಿದ,ನಾನು ನನಗೆ ಹೇಗೆ ಬೇಕೋ ಹಾಗೆ ಕೀಲು ಕೊಟ್ಟು ಬದುಕನ್ನ ಚಲಾಯಿಸ್ತಾ ಇದ್ದೀನಿ. ಸ್ವಂತ ತಪ್ಪು ಮಾಡೋ ಸ್ವಾತಂತ್ರ್ಯ ಇಲ್ಲ. ನಿರ್ಧಾರ ದೂರದ ಮಾತು. ನಗುವು ಕಾರ್ಪೋರೇಟ್ ಸ್ಟೈಲಲ್ಲಿ,ನೋವು ಕಾರ್ಪೋರೇಟ್ ಸ್ಟೈಲಲ್ಲಿ. ಬದುಕಿನ ಆಳದ ಭಾವನೆಗಳ್ಯಾವು ಹೃದಯಕ್ಕೆ ನಾಟದೆ ಎಷ್ಟೋ ವರ್ಷಗಳಾಗಿ ಹೋದ್ವು. ಥ್ರಿಲ್ ಇಲ್ಲ, ಎಲ್ಲಾ ಸಪ್ಪೆ ಸಪ್ಪೆ.

ಕಾಲೇಜೆ ಎಷ್ಟೋ ಚೆನ್ನಾಗಿತ್ತು.ಮುಂದೇನು ಗೊತ್ತಿರಲಿಲ್ಲ,ಯಾಕೆ ಓದಬೇಕು ಅನ್ನೋ ಅರಿವಿರಲಿಲ್ಲ.ಎಕ್ಸಾಮ್ ಪಾಸ್ ಆದ್ರೆ ಸಾಕು ಅನ್ನೋದಕ್ಕೆ ಪುಸ್ತಕ ಹಿಡಿಯೋದು.ಹಿಡಿದಿರೋ ಪುಸ್ತಕದಲ್ಲಿದ್ದ ಪದಗಳು ಬೈಹಾರ್ಟು ಮಾಡೋದು,ಎಕ್ಸಾಮ್ ಅಲ್ಲಿ ಬಂದದ್ದಕ್ಕೆ ತೋಚಿದ್ದನ್ನ ಗೀಚೋದು.ಎಕ್ಸಾಮ್ ಹತ್ತಿರ ಬರುವವರೆಗು ಗಾಡಿಯಲ್ಲಿ ತಿರುಗುತ್ತಾ ಬೆಂಗಳೂರು ಗಲ್ಲಿಗಲ್ಲಿಗಳ ಗಾಳಿ ಕುಡಿಯೋ ಚಟ.ಅಡ್ಡಾಗಳು ನಮಗಲ್ಲ, ನಾವು ಅಡ್ಡಾಗಳಿಗೆ ಎಂಬಂತೆ ಸಿಕ್ ಸಿಕ್ಕಿದ್ ಕಡೆಗೆಲ್ಲಾ ನಿಂತು ಹರಟೋದು.ಆ ಗೆಳೆಯರು,ತಿಳಿ ಗಡ್ಡ,ಕಿರು ಮೀಸೆ,ಹೊಳಪು ಕಣ್ಗಳು,ಹುಡ್ಗೀರ ವಿಚಾರಗಳು. ಒಬ್ಬಳೇ ಹುಡುಗಿಗೆ ಅಂಟೋ ಜಾತಿ ನಮ್ಮದಲ್ಲ.ಹಾಗಂತ ನಮಗೇನು ಕ್ಯೂ ನಿಲ್ತಿರಲಿಲ್ಲ ಹುಡ್ಗೀರು.ಹಾಗು ಹೀಗು ಯಾರೋ ಒಬ್ಬ ಗೆಳೆಯನ ಜೊತೆಗೆ ಬಂದರೆ ಅಲ್ಪ ಸ್ವಲ್ಪ ನಕ್ಕು ಪಟಾಯಿಸಿಕೊಳ್ಳೊ ಪ್ರಯತ್ನ ನಡೀತಿತ್ತು.ಅದರಲ್ಲಿ ಒಂದೋ ಎರಡೋ ಬುಟ್ಟಿಗೆ ಬೀಳೋವು.ಆ ಹೆಂಗಳೆಯರೂ ನಮ್ ಥರ.ಒಂದ್ ಕಡೆ ಠಿಕಾಣಿ ಹೂಡೋದಿಲ್ಲ.ಸೀಸನ್ನಿಗೆ ತಕ್ಕ ಹಾಗೆ ರೀಸನ್ ಹುಡುಕಿ ಕೈ ಕೊಡೋ ಯುಗ ನಮ್ದು.ಅದಕ್ಕೆ ತಕ್ಕಂತೆ ನಾವು ಹೆಜ್ಜೆ ಹಾಕ್ತಿದ್ವಿ.ಸಿನೆಮಾ,ಪಾರ್ಕಿಂಗ್ ಲಾಟು,ತುಂಡ್ ಬೀಡಿ,ಸಿಗರೇಟು.ತುಂಬ ಶೆಖೆಯಾದಾಗ ತಣ್ಣಗೆ ಎಣ್ಣೆ-ತಲೆಗಲ್ಲ,ಹೊಟ್ಟೆಗೆ ಹೀಗೆ ಜೀವ್ನ ಗುರುತು ಗುರಿ ಇಲ್ಲದೆ ಹಳಿ ತಪ್ಪಿದ ರೈಲಿನ ಥರ ಯಗ್ಗಾ ಮಗ್ಗಾ ಎಲ್ಲೆಲ್ಲೋ ಹೋಗ್ತಿತ್ತು. ಆ ಬದುಕೇ ಬದುಕು.ಖಾಲಿ ರೋಡಲ್ಲಿ ಬೈಕ್ ಮೇಲೆ ಕೂತು ನೂರು ನೂರಿಪ್ಪತ್ತು ಸ್ಪೀಡಲ್ಲಿ ಹೋಗ್ತಿದ್ರೆ ಕೂದಲಿಗೆ ತಂಗಾಳಿ ಬೀಸ್ತ ಆಕಾಶಕ್ಕೆ ಕೊನೇನೆ ಇಲ್ಲ,ದಾರಿಗೆ ತಿರುವೇ ಇಲ್ಲ ಅನ್ನೋ ಭಾವನೆ.ಆಗ ಜವಾಬ್ದಾರಿ ಇರಲಿಲ್ಲ. ಗುರಿ ಇರಲಿಲ್ಲ. ಕಾರಣಗಳಿರಲಿಲ್ಲ.ಎಲ್ಲದಕ್ಕು ಮಿಗಿಲಾಗಿ ಕಾಸಿರಲಿಲ್ಲ. ಈಗ ಎಲ್ಲಾ ಇದೆ.ಆದರೆ ಮನಸ್ಸನ್ನ ತೊಳೆಯೋ ವಿಚಾರಗಳಿಲ್ಲ,ಸ್ನೇಹಿತರಿಲ್ಲ,ಹೆಂಗಳೆಯರಿಲ್ಲ.ಇದಾರೆ ಆದ್ರೆ ಆಫೀಸಲ್ಲಿ ವಯ್ಸಿಗ್ ಬಂದ್ ತಕ್ಷಣ ಬುದ್ಧಿ ಗಟ್ಟಿಯಾಗಿ ಜೇಬು,ಸೀಟು ನೋಡಿ ಜೊತೆಗೆ ಬರ್ತಾರೆ. ಇದೇ ಆಗೋಯ್ತು ಬೆಂಗಳೂರು ಜೀವ್ನ.

ಮೂರನೇ ಬೆಂಚಲ್ಲಿ ಕೂಡ್ತಿದ್ದ ಮಧುಮಿತಾ ತಿರುಗಿ ಓರೆಗಣ್ಣಲ್ಲಿ ನೋಡಿದ್ರೆ ಸಾಕು ಹೃದಯ ಹಾರಿ ಒಂದ್ ಪೀರಿಯಡ್ ಪೂರ್ತಿ ಡ್ಯುಯೆಟ್ ಹಾಡ್ಕೊಂಡ್ ಬಂದಿರೋದು. ಲಂಚ್ ಟೈಮ್ ಅಲ್ಲಿ ಯಾರದೋ ಮನೆ ಅಡ್ಗೆ, ಯಾರದೋ ಡಬ್ಬಿ,ಯಾರದೋ ಕೈ ರುಚಿ,ಆಗ ನಾಲ್ಗೆಗೆ ಹೊಟ್ಟೆಗೆ ಮರ್ಯಾದೇನೆ ಇರುತ್ತಿರಲಿಲ್ಲ.ಈಗ ಎಲ್ಲಾ ಗಂಭೀರ. ಆ ವಯಸ್ಸಲ್ಲೇ ಜೀವನ ನಿಲ್ಲಬಾರದಿತ್ತೇ ಅಂತ ಈಗ ಮನಸ್ಸಲ್ಲಿ ಆಲೋಚನೆ ಹಾದು ಹೋಗ್ತಿದೆ.

***

ಹೀಗೆ ಉಡಾಫ಼ೆ ಮಾಡಿಕೊಂಡು ಹತ್ತು ಹುಡುಗಿಯರಿಗೆ “ಐ ಲವ್ ಯು” ಹೇಳಿ ಒಬ್ಬಳಾದ್ರು ಒಪ್ಪಿ ನಿಯತ್ತಾಗಿ ಪ್ರೀತಿ-ಗೀತಿ ಮಾಡಿ ಸೆಟ್ಟಲ್ ಆಗೋಣ ಅಂತ ಇದ್ದ ಕಾಲದಲ್ಲಿ ಹತ್ತರಲ್ಲಿ ಒಂದು ಅಂತ ಅವಳು ಸಿಕ್ಕಳು. ಬಾಲ್ಯದಿಂದಲು ನನ್ನ ಗೆಳೆಯನಾಗಿರೋ ಆನಂದತೀರ್ಥನ ದೊಡ್ಡಪ್ಪನ ಮಗಳು.ಸಂಜೀವಿನಿ.

***

ಅಲಾರಂ ಶಬ್ಧ ಇಡೀ ಕೋಣೆ ಆವರಿಸಿತು.ಸಂಜೆ ಐದೂವರೆ.ದೀಪಕ್ ಎಲ್ಲಾ ಯೋಚನೆಗಳಿಂದ ಹೊರಬಂದ.ಸಂಜೀವಿನಿ ಅಂದ್ರೆ ಹಾಗೆ ಅಲಾರಂ ಥರ,ಮೈ ಮನಸ್ಸು ಎರಡೂ ಅಲರ್ಟ್ ಆಗಿ ಹೋಗತ್ತೆ ಎಂದು ಮನಸ್ಸಿನಲ್ಲೇ ಗೊಣಗ್ತಾ ಮುಖಕ್ಕೆ ತಣ್ಣೀರೆರಚಿಕೊಂಡ. ಶನಿವಾರ ಸಂಜೆ ಆರುವರೆಗೆ ಕೆ.ಎಚ್ ಕಲಾಸೌಧದಲ್ಲಿ ’ಸಂಭ್ರಮ’ ಅನ್ನೋ ತಂಡದಿಂದ ಸಂಗೀತ ಸಂಜೆ ಏರ್ಪಾಡಾಗಿತ್ತು.ಈ ಕಾರ್ಯಕ್ರಮವನ್ನ ಅದೇ ತಿಂಗಳ ಮೊದಲ್ನೇ ವಾರದಿಂದ ಆರಂಭ ಮಾಡಿದ್ರು. ದೀಪಕ್ ಮೊದಲ್ನೇ ವಾರದಿಂದ ಹೋಗ್ತಿದ್ದ. ಮನಸ್ಸಿಗೆ ಸ್ವಲ್ಪ ಹಿತವಾಗಿರೋದು.ಹಾಗಾಗಿ ಹಾಜಾರಿ ಹಾಕ್ತಿದ್ದ.ಕೆ ಎಚ್ ಕಲಾಸೌಧ ಇರೋದು ಹನುಮಂತನಗರದ ರಾಮಾಂಜನೇಯಗುಡ್ಡದ ತಪ್ಪಲಲ್ಲಿ. ರಾಮಾಂಜನೇಯ ಗುಡ್ಡ ದೀಪಕ್ಗೆ ಬಲು ಪ್ರಿಯ.ಪ್ರಶಾಂತವಾದ ಜಾಗ.ಮೌನ ಮನಸ್ಸನ್ನ ಆವರಿಸುವಂಥ ಸ್ಥಳ.ಅದರ ಮಡಿಲಲ್ಲಿ ಕಟ್ಟಿದ್ದ ಕಲಾಸೌಧ.ಕಾಲೇಜಿನಲ್ಲಿ ರಾಕ್ ಮ್ಯೂಸಿಕ್ ಇಷ್ಟ ಪಡುತ್ತಿದ್ದ ದೀಪಕ್ಗೆ ಈಗ ಸುಗಮ ಸಂಗೀತ,ಘಜ಼ಲ್,ಹಿಂದುಸ್ತಾನಿ ಇತ್ಯಾದಿಗಳು ಆತ್ಮಕ್ಕೆ ನೆಮ್ಮದಿ ನೀಡಿ ತಲೆ ತಣ್ಣಗೆ ಮಾಡ್ತಿತ್ತು.ಬೆಂಗಳೂರಿನ ಏಕಾಂಗಿ ಜೀವನಕ್ಕೆ ಹೇಳಿಮಾಡಿಸಿದ ಮದ್ದು “ಸಂಭ್ರಮ” ತಂಡದ ಸಂಗೀತ ಸಂಜೆಯಾಗಿತ್ತು.ದೀಪಕ್ ಗಾಡಿ ಏರಿ ಶ್ರೀನಗರ ದಾಟಿ ಕಲಾಸೌಧದ ಪಾರ್ಕಿಂಗ್ ಜಾಗದಲ್ಲಿ ಗಾಡಿ ನಿಲ್ಲಿಸಿದ. ಒಮ್ಮೆ ತಲೆ ಎತ್ತಿ ನೋಡಿದ.ಜನ ಅಲ್ಲೊಬ್ರು ಇಲ್ಲೊಬ್ರು ಅಂತ ನಿಂತದ್ದು ಕಂಡು ಬಂತು. ರಾಮಾಂಜನೇಯ ಗುಡ್ಡದಲ್ಲಿರೋ ದೇವಸ್ಥಾನದ ಮುಂದೆ ವಿಶಾಲವಾದ ಜಾಗ ಇದೆ.ಅಲ್ಲಿ ಕೂತು ಸ್ವಲ್ಪ ಕಾಲ ಕಳೆಯೋ ಮನಸ್ಸಾಯ್ತು ದೀಪಕ್ಗೆ.ನಿಧಾನವಾಗಿ ನೆಲ ನೋಡುತ್ತ,ಅತ್ತಿತ್ತ ನೋಡುತ್ತ ಮೆಟ್ಟಲು ಹತ್ತಿ ಒಂದು ಮೂಲೆಯಲ್ಲಿ ಮೈ ಊರಿ ಕೂತ.

***

ಸಂಜೀವಿನಿ! ಆವತ್ತು ಸಂಜೆ ಕಾಲೇಜು ಮುಗಿಸಿ ಗೆಳೆಯ ಆರ್ಯನ್ ಜೊತೆಗೆ ಬೈಕ್ ಏರಿ ಸೀದ ಆನಂದತೀರ್ಥನ ಮನೆಯ ಕಡೆಗೆ ಸವಾರಿ ಮಾಡಿದರು.ವಾರಕ್ಕೆ ಮೂರು ದಿನ ಮೂರು ಗೆಳೆಯರು ಸೇರಿ ಅಲ್ಲೇ ಗಿರಿನಗರದಲ್ಲಿ ಇದ್ದ ಎಸ್.ಎಲ್.ವಿ ಹೋಟಲ್ಲಿನಲ್ಲಿ ದೋಸೆ ತಿನ್ನುವುದು,ಇಲ್ಲವೆಂದರೆ ಗೋಬಿ ಮಂಚೂರಿ ಕೊಂಡು ಒಂದು ತಟ್ಟೇಲಿ ಮೂರು ಮಂದಿ ಮೇಯುವುದು ಅಭ್ಯಾಸವಾಗಿ ಹೋಗಿತ್ತು.ಜೇಬಲ್ಲಿ ದುಡ್ಡಿಲ್ಲ ಆದರೆ ಸಮಯ ಪೂರ್ತಿ ಯೌವ್ವನಭರಿತ.ಅಂದು ಆನಂದತೀರ್ಥನ ಮನೆಗೆ ಇದೇ ಇರಾದೆ ಇಟ್ಕೊಂಡು ಹೋದ ಆರ್ಯನ್ ಮತ್ತು ದೀಪಕ್ಗೆ ಬೇಸರ.ಆನಂದನ ಮನೆಯಲ್ಲಿ ನೆಂಟರು. “ಆನಂದ,ಆನಂದ” ಅಂತ ಮೂರುನಾಲ್ಕು ಸಾರ್ತಿ ಬುಲಾವ್ ಕೊಟ್ರು. ಕೊನೆಗೆ ಪಂಚೆಯಲ್ಲಿ ಹೊರಗೆ ಬಂದ ಆನಂದ.

“ಬನ್ರೋ” ಅಂದ.

“ಏನ್ ಜಾತ್ರೇಲ್ ಪೂಜಾರಿ ಥರ ವೇಷ ಹಾಕ್ಕೊಂಡಿದ್ಯ?ದುಡ್ಡಿಲ್ಲ.ಇವತ್ತು ನಿಂದೇ ಟ್ರೀಟು” ಎಂದು ದೀಪಕ್ ಪೂಸಿ ಹೊಡೆದ.

“ಮನೇಲಿ ಫ಼ಂಕ್ಷನ್ನು.ಮನೇಲೆ ಸ್ವೀಟು ಖಾರ ಎಲ್ಲಾ ಇದೆ.ಗಾಡಿ ನಿಲ್ಸಿ ಒಳಗ್ ಬನ್ನಿ”.ಇನ್ನು ಹೆಚ್ಚು ಮಾತನಾಡಿದರೆ ದಂಡ ಎನ್ನುವಂತೆ ಆನಂದ ಮನೆಯೊಳಗೆ ಹೊರಟು ಹೋದ.ವಿಧಿ ಇಲ್ಲ,ಹೊಟ್ಟೆ ಹಸಿವು.ಆರ್ಯನ್ ಮತ್ತು ದೀಪಕ್ ಗಾಡಿ ನಿಲ್ಲಿಸಿ ಮನೆಯೊಳಗೆ ನಡೆದರು. ನೆಲದ ಮೇಲೆ ನೆಂಟರ ಮಹಾಪೂರ. ಒಬ್ಬರ ಮೈಮೇಲೆ ಮತ್ತೊಬ್ಬರು ಕೂತ ಹಾಗೆ ಭಾಸವಾಗ್ತಿತ್ತು. ಬಿಳೀ ಕೂದಲಿನ ತಾತ,ಕೆಂಚು ಕೂದಲಿನ ಆಂಟಿ.ಎಲೆ ಅಡಿಕೆ ಸುತ್ತುತ್ತಿದ್ದ ಮೇಡಂ.ಹೀಗೆ ಹತ್ತು ಹಲವಾರು ಮಂದಿ. ನಡುವಲ್ಲಿ ಆನಂದನ ತಂದೆ ಕೂತು ಚೌಕಾಬಾರ ಆಡ್ತಿದ್ರು. ಎದುರಾಳಿ ಕಡೆಗೆ ದೀಪಕ್ ಕಣ್ ಹೊರಳ್ತು. ಉದ್ದ ಜಡೆ,ಸುಂದರ ನಗು, ಹೊಳೆಯೋ ಕಣ್ಗಳು,ಕಾಲೇಜಿನಲ್ಲಿ ಬೋರ್ಡ್ ಮೇಲೆ ನೂರಕ್ಕೆ ನೂರು ಮಾರ್ಕ್ಸ್ ತೆಗೆದವ್ರ ಫ಼ೋಟೋ ನೋಡಿದ ಭಾವು. ಹುಚ್ಚಾಪಟ್ಟೆ ಪ್ರೀತಿಯಲ್ಲ.ಆದ್ರೆ ಆ ಹುಡುಗಿಯ ಮುಖದಲ್ಲಿ ಏನೋ ಖಳೆ ಇದೆ.ಮದುವೆ ಪ್ರಾಡಕ್ಟು. ತುಂಬಾ ಜನಗಳ ಮೇಲೆ ಲವ್ ಆಗೋ ದೀಪಕ್ಗೆ ಇವ್ಳ್ ಮೇಲೆ ಲವ್ ಆಗದೇ ಇರಲಿಲ್ಲ. ಅವಳ ಮುದ್ದು ನಗು ಮೇಲಂತು ಪೂರ್ತಿ ಪಲ್ಟಿ ಹೊಡೆದಿದ್ದ ದೀಪಕ್.

“ಯಾರೋ ಅವ್ಳು?” ದೀಪಕ್ ಆರ್ಯನ್ ಕಿವಿಯಲ್ಲಿ ಪಿಸುಗುಟ್ಟಿದ.

“ಸಂಜೀವಿನಿ,ಆನಂದನ್ ತಂಗಿ.ಕಣ್ ಹಾಕಿದ್ರೆ ಕಾಗೆ ಕೈಲ್ ಕುಕ್ಕಿಸ್ತಾನೆ”

“ಕಣ್ಣೇನು , ಹಾರ್ಟೇ ಹೊರ್ಟೋಯ್ತೋ ಲೋ”

“ತುಂಬ ಸರ್ತಿ ಹಿಂಗಾಗಿದೆ.ಸ್ವಲ್ಪ ಹೊತ್ತಾದ್ಮೇಲ್ ವಾಪಸ್ ಬರತ್ತೆ.ಅದಮ್ಕೊಂಡ್ ಇರು” ಎಂದು ಹಲ್ಲು ಕಚ್ಚುತ್ತಾ ಆರ್ಯನ್ ಮಾತಿನ ಬಾಣ ಬಿಟ್ಟ.

“ಸಂಜೀವಿನಿ” ಮನಸ್ಸಲ್ಲಿ ಹೇಳಿಕೊಳ್ಳಲು ಹೋಗಿ ಜೋರಾಗಿ ಬಾಯ್ ತಪ್ಪಿ ಹೊರಬಂತು ಹೆಸರು. ಒಂದು ಕ್ಷಣ ಅಕ್ಕ ಪಕ್ಕ ಮೌನ.

“ಫ಼ೇಸ್ ಬುಕ್ಕಲ್ಲಿ ನೋಡಿದ್ದೀನಿ ನಿಮ್ ಪ್ರೊಫ಼ೈಲು.ನನ್ ಹೆಸ್ರು ದೀಪಕ್.ಹಾಯ್” ಎಂದು ಪೆದ್ದು ಪೆದ್ದಾಗಿ ನಕ್ಕ.

ಅವಳು ಒಮ್ಮೆ ಪಕ್ಕದಲ್ಲಿದ್ದ ಹೆಂಗಸನ್ನು [ಮೋಸ್ಟ್ಲಿ ಅವಳ ತಾಯಿ ಇರಬೇಕು ಅಂತ ದೀಪಕ್ ಮನಸ್ಸಲ್ಲಿ] ನೋಡಿ,ವಾಪಸ್ ದೀಪಕ್ನ ನೋಡಿ

“ಹಲ್ಲೋ” ಎಂದು ಮುಗುಳ್ನಕ್ಕಳು.

ತಂಗಾಳಿ ಮುಖದ ಮೇಲೆ ಬೀಸ್ತು.ಹೃದಯ ನಿಜವಾಗ್ಲು ಕಳೆದುಹೋಯ್ತು.

Facebook ಕಾಮೆಂಟ್ಸ್

ಲೇಖಕರ ಕುರಿತು

Rohit Padaki

ಕನ್ನಡದ ಯುವ ಲೇಖಕರಲ್ಲಿ ಒಬ್ಬರು. ದೃಶ್ಯ ಮಾಧ್ಯಮದಲ್ಲಿ ಸಾಕಷ್ಟು ಕಾರ್ಯ ನಿರ್ವಹಿಸಿ ಬಿಗ್ ಬಾಸ್, ವೀಕೆಂಡ್ ವಿತ್ ರಮೇಶ್ ಎಂಬ ಶೋಗಳಿಗೆ ಇವರ ಬರವಣಿಗೆಯಿದೆ. ಇತ್ತೀಚೆಗೆ ಬಿಡುಗಡೆಯಾದ ಆಟಗಾರ ಚಿತ್ರಕ್ಕೆ ಸಂಭಾಷಣೆ ಸಾಹಿತ್ಯ ಇವರದೇ ಆಗಿತ್ತು. ಮೊನಚಾದ ಪದಗಳಿಗೆ ಹೆಸರುವಾಸಿಯಾಗಿರುವ ಇವರ ಬರಹ ಪ್ರಭಾವಶಾಲಿ, ಹಾಗು ಹೊಸತನ ತುಂಬಿರುತ್ತದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!