ಸಿನಿಮಾ - ಕ್ರೀಡೆ

ರಂಬಾರೂಟಿಗೆ ಚೆಲ್ಲಾಟ, ಪ್ರೇಕ್ಷಕನಿಗೆ ಪ್ರಾಣ ಸಂಕಟ

ಚಿತ್ರ : ರಂಬಾರೂಟಿ

ತಾರಾಗಣ : ವಿನೀತ್, ಚಿರಶ್ರೀ ಅಂಚನ್, ಸಂದೇಶ್ ಶೆಟ್ಟಿ, ಶ್ರುತಿ ಕೋಟ್ಯಾನ್, ಶಬರೀಶ್ ಕಬ್ಬಿನಾಲೆ, ಶನಿಲ್ ಗುರು ಮತ್ತಿತರರು

ನಿರ್ದೇಶನ : ಪ್ರಜ್ವಲ್ ಕುಮಾರ್ ಅತ್ತಾವರ್

ನಿರ್ಮಾಣ : ಪ್ರಕಾಶ್ ಕಾಬೆಟ್ಟು, ಶ್ರೀನಿವಾಸ್ ಉಜಿರೆ

*****

ಸಂಪೂರ್ಣ ಹೊಸಬರ ಹೊಸ ಪ್ರಯತ್ನ ಎಂದು ಚಿತ್ರಮಂದಿರಕ್ಕೆ ಬಂದ ರಂಬಾರೂಟಿ ಚಿತ್ರದ ಒನ್ ಲೈನ್ ವಿಮರ್ಶೆ ಬರೆಯುವುದಾದರೆ ಅದು ಹೀಗಿರುತ್ತದೆ ; “ಎಂಚಿ ಸಾವುಯಾ”.

ಅಂದ ಹಾಗೆ ‘ಎಂಚಿ ಸಾವುಯಾ’ ಎಂಬುದು ಇದೇ ಚಿತ್ರದ ಹಾಡಿನ ಸಾಲು ಎಂಬುದು ಗಮನಾರ್ಹ !!!

ರಂಬಾರೂಟಿ ಎಂದರೆ ಗೋಜಲು ಗೋಜಲಾಗಿ ಗೊಂದಲವೇರ್ಪಡಿಸುವುದು ಎಂದರ್ಥ. ತುಳು ಆಡು ಭಾಷೆಯಲ್ಲಿ ಅಪರೂಪಕ್ಕೆ ಎಂಬಂತೆ ಬಳಕೆಯಾಗುವ ಪದ ಇದು. ನಿರ್ದೇಶಕರ ಮನದಲ್ಲಿ ಏನಿತ್ತೋ ಏನೋ, ಚಿತ್ರ ಕೂಡ ಅದೇ ಗೊಂದಲದ ಹಾದಿಯಲ್ಲಿಯೇ ಸಾಗುತ್ತದೆ. ಎಲ್ಲಿಯವರೆಗೆ ಎಂದರೆ ಸ್ವತಃ ಪ್ರೇಕ್ಷಕ ಬಾಯಿಬಿಟ್ಟು ‘ಎಂಚಿ ಸಾವುಯಾ’ ಎಂದು ಹೇಳುವವರೆಗೆ.

ಬಾಲ್ಯದಲ್ಲಿ ಲಗೋರಿ ಆಡುವ ಸಂದರ್ಭ ದೊರಕುವ ಒಂದು ಆನೆಯ ಗೊಂಬೆಗಾಗಿ 5 ಜನ ಸ್ನೇಹಿತರು ಜಗಳವಾಡಿ ದೂರವಾಗುತ್ತಾರೆ. ಈ ಐವರು ಸ್ನೇಹಿತರ ಸುತ್ತ ಸುತ್ತುವ ಕತೆಯೇ ರಂಬಾರೂಟಿ. ಚಿತ್ರದ ನಾಯಕನಿಗೆ ಸಿಗುವ ಆ ಆನೆಯ ಗೊಂಬೆಯನ್ನು ತನಗೇ ನೀಡಬೇಕೆಂದು ಉಳಿದ 4 ಜನ ಸ್ನೇಹಿತರು ಪರಸ್ಪರ ಹೊಡೆದಾಡಿಕೊಂಡು ಬೇರ್ಪಡುತ್ತಾರೆ. ಮುಂದೆ ಬೆಳೆದು ದೊಡ್ಡವರಾಗುವ ಈ ಐವರಲ್ಲಿ ಚಿತ್ರದ ನಾಯಕ ರೋಡ್ ರೋಮಿಯೋ ಆಗಿ ಕಾಣಿಸಿಕೊಂಡರೆ, ಮತ್ತೊಬ್ಬ ಡಾನ್ ಆಗುವ ಕನಸು ಹೊತ್ತ ಪುಡಿ ರೌಡಿಯಾಗಿ, ಇನ್ನೊಬ್ಬ ಕ್ರಿಕೆಟ್ ಬೆಟ್ಟಿಂಗ್ ಕುಳವಾಗಿ, ಮಗದೊಬ್ಬ ಕೋಳಿ ಅಂಕದ ದಾಸನಾಗಿ, ಕೊನೆಯವ ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಕಾಣಿಸಿಕೊಳ್ಳುತ್ತಾರೆ. ಆ ಐವರ ಚಿತ್ರ ವಿಚಿತ್ರ ಚಟುವಟಿಕೆಗಳೇ ಇಲ್ಲಿ ಸಿನೆಮಾವಾಗಿದೆ.

ನೀರಸವಾಗಿ ಸಾಗುವ ಚಿತ್ರದಲ್ಲಿ ನೋಡಿಸಿಕೊಂಡು ಹೋಗುವ ಯಾವುದೇ ಅಂಶಗಳು ಇರದ ಕಾರಣ ಪ್ರೇಕ್ಷಕ ವಿಲ ವಿಲನೆ ಒದ್ದಾಡುತ್ತಾನೆ. ಚಿತ್ರದಲ್ಲಿನ ಯಾವುದೇ ದೃಶ್ಯಗಳು ಮನ ಮುಟ್ಟುವಂತಿಲ್ಲ. ಹಾಸ್ಯ ದೃಶ್ಯಗಳೂ ಅಷ್ಟಕಷ್ಟೇ. ಒಮ್ಮೆ ನೋಡಿ ಮರೆತು ಹೋಗುವಂತಿವೆ. ಇನ್ನು ರೊಮ್ಯಾಂಟಿಕ್ ದೃಶ್ಯಗಳಾದರೂ ಇಷ್ಟವಾಗುತ್ತವಾ ಎಂದರೆ ಅದೂ ಇಲ್ಲ. ಅತ್ತ ಒಂದು ಸಸ್ಪೆನ್ಸ್ ಚಿತ್ರವೂ ಆಗದೆ ಇತ್ತ ಒಂದು ಹಾಸ್ಯ ಚಿತ್ರವೂ ಆಗದೆ ಮಧ್ಯದಲ್ಲಿ ಸಿಲುಕಿ ಪ್ರೇಕ್ಷಕನನ್ನು ತ್ರಿಶಂಕು ಸ್ಥಿತಿಗೆ ತಳ್ಳುತ್ತದೆ.

ಚಿತ್ರಕತೆಯಲ್ಲಿ ನಿರ್ದೇಶಕರಿಗೆ ಯಾವುದೇ ಸ್ಪಷ್ಟತೆ ಇದ್ದಂತಿಲ್ಲ. ಕಿರು ಚಿತ್ರಕ್ಕಾಗಿ ಹೆಣೆದ ಕತೆಯನ್ನು ಒಂದು ಪೂರ್ಣ ಪ್ರಮಾಣದ ಚಿತ್ರವನ್ನಾಗಿ ಪರಿವರ್ತಿಸುವಾಗ ಇರಬೇಕಾದ ಪರಿಪಕ್ವತೆ ಇಲ್ಲಿ ಕಾಣೆಯಾಗಿದೆ. ಪೂರ್ಣ ಪ್ರಮಾಣದ ಚಿತ್ರ ತಯಾರಿಕೆಯಲ್ಲಿ ಯಾವುದೇ ಅನುಭವ ಪಡೆಯದೇ ಕೇವಲ ಕಿರು ಚಿತ್ರಗಳ ಅನುಭವದ ಆಧಾರದಲ್ಲಿ ಚಿತ್ರ ನಿರ್ದೇಶನಕ್ಕೆ ಇಳಿದರೆ ಬಹುಶಃ ಇದೇ ರೀತಿ ಆಗುವುದೇನೋ. ಯಾವುದೇ ಬಲವಾದ ಕಥಾ ತಿರುಳಿಲ್ಲದೆ ಚಿತ್ರವನ್ನು 2 ಮುಕ್ಕಾಲು ಗಂಟೆ ಎಳೆಯುವ ಅಗತ್ಯವೇನಿತ್ತೋ.? ಪ್ರೌಡಿಮೆ ಬಯಸಿದ್ದ ಪಾತ್ರಗಳಲ್ಲಿ ಸಣ್ಣ ಹುಡುಗರನ್ನು ಕೂರಿಸಿದ್ದು ಕೂಡ ಚಿತ್ರದ ಅಧೋಗತಿಗೆ ಮತ್ತೊಂದು ಕಾರಣ. ಚಿತ್ರದಲ್ಲಿನ ಹೆಚ್ಚಿನ ದೃಶ್ಯಗಳು ಬಾಲಿಶವೆನಿಸುವುದು ಕೂಡ ಇದೇ ಕಾರಣಕ್ಕೆ.

ಇವೆಲ್ಲ ಗೊಂದಲಗಳ ಮಧ್ಯೆ ಚಿತ್ರ ನೋಡುವಾಗ ಕೊಂಚ ಉಸಿರಾಡುವಂತೆ ಮಾಡುವುದು ನಾಯಕ ವಿನೀತ್ ಹಾಗು ಶಬರೀಶ್ ಕಬ್ಬಿನಾಲೆ ಜೋಡಿ. ವಿನೀತ್ ಅವರ ಎಂದಿನ ಮ್ಯಾನರಿಸಂ ಹಾಗು ಡೈಲಾಗ್ ಡೆಲಿವರಿ ಹಾಗು ಕಬ್ಬಿನಾಲೆ ಜತೆಗಿನ ಜುಗಲ್ಬಂದಿ ಪ್ರೇಕ್ಷಕನಿಗೆ ಕೊಂಚ ರಿಲೀಫ್ ನೀಡಲು ತಕ್ಕ ಮಟ್ಟಿಗೆ ಯಶಸ್ವೀಯಾಗಿವೆ. ಇಡೀ ಚಿತ್ರದಲ್ಲಿ ಗಮನಸೆಳೆಯುವುದು ಇವರಿಬ್ಬರೇ. ಅದು ಬಿಟ್ಟರೆ ಖಳನಾಯಕನ ಪಾತ್ರ ಮಾಡಿದ ಶನಿಲ್ ಗುರು. ಬಹುಶಃ ಭವಿಷ್ಯದಲ್ಲಿ ಇನ್ನಷ್ಟು ಚಿತ್ರಗಳು ಈ ಮೂವರನ್ನು ಹುಡುಕಿಕೊಂಡು ಬರಬಹುದು. ಈ ಒಂದು ಕಾರಣಕ್ಕೆ ಮಾತ್ರ ಚಿತ್ರ ಸಾರ್ಥಕವೆನಿಸುತ್ತದೆ.

ಚಿತ್ರದ ಛಾಯಾಗ್ರಹಣ, ಸಂಕಲನ, ಸಂಗೀತ, ಸಾಹಿತ್ಯ ಎಲ್ಲವೂ ರಂಬಾರೂಟಿಯಾಗಿದೆ. ಚಿತ್ರದ ನಿರ್ಮಾಣ ಸಂಸ್ಥೆ ಒಪೇರಾ ಡ್ರೀಮ್ ಮೂವೀಸ್ ಈ ಹಿಂದೆ ನಿರ್ಮಿಸಿದ್ದ ‘ಪಕ್ಕಿಲು ಮೂಜಿ’ ಚಿತ್ರದ ಗುಣಮಟ್ಟ ಯಾವ ಮಟ್ಟದಲ್ಲಿತ್ತೋ ಹೆಚ್ಚು ಕಡಿಮೆ ಈ ಚಿತ್ರವೂ ಅದೇ ಮಟ್ಟದಲ್ಲಿದೆ. ಪೋಸ್ಟರ್ ನಲ್ಲಿರುವ ಕ್ಲಾರಿಟಿ ಚಿತ್ರದಲ್ಲಿಲ್ಲ. ತುಳು ಸಿನಿಮಾರಂಗದಲ್ಲಿ ಗುಣಮಟ್ಟದ ಚಿತ್ರಗಳು ಬರುತ್ತಿರುವ ಈ ಸಮಯದಲ್ಲಿ ಇಂತಹ ಚಿತ್ರಗಳನ್ನು ನೋಡುವ ಪರಿಸ್ಥಿತಿ ಬಂದಿದ್ದು ವಿಪರ್ಯಾಸ.

ಚಿತ್ರ ಒಂದು ವಿಮರ್ಶೆಗೆ ಒಳಪಡುವ ಕನಿಷ್ಠ ಅರ್ಹತೆಯನ್ನೂ ಹೊಂದಿರದ ಕಾರಣಕ್ಕೋ ಏನೋ ಹೆಚ್ಚಿಗೆ ಬರೆಯಲು ತೋಚುತ್ತಿಲ್ಲ. ಇಂತಹ ಇನ್ನೆರಡು ಚಿತ್ರಗಳು ಬಂದರೆ ಸಾಕು ತುಳು ಚಿತ್ರ ಎಂದು ಖುಷಿಯಿಂದ ಚಿತ್ರಮಂದಿರದೆಡೆಗೆ ಬರುತ್ತಿದ್ದ ಪ್ರೇಕ್ಷಕ ಸೈಲೆಂಟ್ ಆಗಿ ಮನೆಯಲ್ಲಿ ಕೂತು ಬಿಡುತ್ತಾನೆ. ಇದರ ನೇರ ಪರಿಣಾಮ ಬೀರುವುದು ಮಾತ್ರ ತುಳು ಚಿತ್ರರಂಗಕ್ಕೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Ashwin Amin Bantwal

Self Employed & Journalist

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!