ಕಥೆ

ಗಲ್ಲಿ ಕ್ರಿಕೆಟ್- 2

ಗಲ್ಲಿ ಕ್ರಿಕೆಟ್- 1 

ಒಂದು ವರ್ಷದ ಕೆಳಗೆ ನಮ್ಮಣ್ಣ ರವಿ ಕ್ರಿಕೆಟ್ ಕೋಚಿಂಗ್ ಸೇರೋಕೆ ಹಠ ಮಾಡಿದ್ದ. ನಮ್ಮ ಸ್ಕೂಲಲ್ಲೇ ಪರಮೇಶ್ ಸಾರು ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ಈ ಶಿಬಿರ ಶುರು ಮಾಡಿದ್ದ್ರು. ನಮ್ಮಣ್ಣ ಸೇರುತ್ತಾನೆ ಅಂದ್ರೆ ನಾನು ಸೇರಲೇ ಬೇಕಲ್ಲ. ಅದು ನಮ್ಮ ಮನೆಯ ನಿಯಮ, ಸರಿ ಸ್ವಲ್ಪ ದಿನ ಅತ್ತು ಕರೆದು ಮಾಡಿದ ಮೇಲೆ ನಮ್ಮ ತಾತ ಅಮ್ಮನ ಕೈಗೆ ಹಣ ಕೊಟ್ಟು “ಸೇರಿಸು ಪಾಪ.. ಮಕ್ಳು” ಅಂತ ಹಿತವಚನ ನುಡಿದ್ರು.ಆಗ ತೊಗೊಂಡಿದ್ದು ಈ ಬ್ಯಾಟು. ಚಡ್ಡಿ ಹಾಕೋದು ಮರೆತು ಬಿಡ್ತಿದ್ವೇನೋ ಆದ್ರೆ ಕೈಯಲ್ಲಿ ಈ ಬ್ಯಾಟು ಹಿಡಿಯೋದನ್ನ ಮರೀತಿರಲಿಲ್ಲ.

ಒಂದು ಬಾಲ್ ಕಳೆದು ಹಾಕ್ಕೊಂಡ್ರೆ ಬರೆ ಎಳಿತಿದ್ದ ನಮ್ಮಮ್ಮ ಸಾವಿರಾರು ರೂಪಾಯಿ ಕೊಟ್ಟು ಬ್ಯಾಟ್ ಕೊಡಿಸಿದ್ರು,ಅದನ್ನ ಕಳೆದು ಹಾಕ್ಕೊಂಡ್ರೆ ಹೆಂಗ್ ಇರಬಹುದು?

ಅವತ್ತು ಸಂಜೆ ನಮ್ಮ ಪಕ್ಕದ ಬೀದಿಯ ನಿಖಿಲ್ ಮತ್ತು ತಂಡದ ಮೇಲೆ ವಿವೇಕಾನಂದ ಫೀಲ್ಡಲ್ಲಿ ಮ್ಯಾಚಿತ್ತು. ಪ್ರತಿ ವಾರ ಇದ್ದ ಹಾಗೆ ಸಂಜೆ ೪ಕ್ಕೆ ಶುರು ಮಾಡಿ ಎರಡು ಮ್ಯಾಚಾಡ್ತಿದ್ವಿ.ಆ ವಾರ ಸ್ವಲ್ಪ ಬೇಗ ಮುಗಿದಿತ್ತು. ನಾವು ಎರಡೂ ಪಂದ್ಯಗಳನ್ನು ಇನ್ನೇನು ಗೆದ್ವಿ ಅನ್ನೋವಾಗ ಸೋತಿದ್ವಿ. ಅವ್ನಿಂದ ಸೋತಿದ್ದು ಅಂತ ಇವ್ನು, ಇವ್ನಿಂದ ಸೋತಿದ್ದು ಅಂತ ಅವ್ನು. ಇದೇ ವಿಷಯವಾಗಿ ಜಗಳ ರಸ್ತೆ ಪೂರ ಮಾಡ್ಕೊಂಡು ಕೊನೇಗೆ ಮನೆಗೆ ಬಂದ್ವಿ. ಸುಸ್ತಾಗಿತ್ತು. ಮುಖಾನು ತೊಳಿಯದೆ [ಅಭ್ಯಾಸಾನೆ ಇರಲಿಲ್ಲ ಅಂತಿಟ್ಕೊಳ್ಳಿ] ಗಪ-ಗಪ ಅಂತ ಅಮ್ಮ ಮಾಡಿಟ್ಟಿದ್ದ ಅವ್ಲಕ್ಕಿ ತಿಂದ್ವಿ.

’ಬ್ಯಾಟೆಲ್ಲಿ ಇಟ್ಟಿದ್ಯೋ ರಘು?’ ಪ್ರೀತಿಯಿಂದ ಕೇಳಿದ್ದ ನಮ್ಮಣ್ಣ.

’ನಂಗೊತ್ತಿಲ್ಲ’ ಪ್ರೀತಿಯಿಂದಲೇ ಉತ್ತರ ನೀಡಿದೆ.

’ಮತ್ತೆಲ್ಲಿ ಹೋಯ್ತು ಬ್ಯಾಟು? ಎಲ್ಲೂ ಕಾಣಿಸ್ತಾ ಇಲ್ಲ?’

’ನಂಗೇನೋ ಗೊತ್ತು. ಮ್ಯಾಚಾದ್ಮೇಲೆ ನೀನೆ ಹಿಡ್ಕೊಂಡ್ ಬರೋದು ಅದನ್ನ ಅಲ್ಲಾಡಿಸ್ಕೊಂಡು. ನನ್ ಕೈಗೆ ಯಾವಾಗ್ ಕೊಡ್ತೀಯ?’

’ಸುಮ್ನೆ ಎಲ್ಲಾದಕ್ಕು ಕಿರೀಕ್ ಮಾಡ್ಬೇಡ. ಬ್ಯಾಟ್ ಕಾಣಿಸ್ತಿಲ್ಲ. ಎಲ್ಲಾ ನಿನ್ನಿಂದಾನೆ.’

’ಎಲ್ಲಾ ನನ್ ಮೇಲೆ ಹಾಕೋ. ಮಾಡೋದೆಲ್ಲ ಮಾಡಿ. ಅಮ್ಮ ಬೈತಾರೆ ಅಂತ ಭಯ ನಿಂಗೆ. ಅದಕ್ಕೆ ನನ್ ಮೇಲೆ ಹಾಕ್ತಿದ್ಯ?’

ಮರು ಕ್ಷಣವೇ ನನ್ನ ಜುಟ್ಟು ಅವನ ಕೈಯಲ್ಲಿ ಸಿಕ್ಕು, ಅವನ ಮುಖ ನನ್ನ ಬೆರಳುಗಳಿಂದ ಪರ್ಚಿ ಮಹಾಯುದ್ಧ ನಡೀತು.

“ಬ್ಯಾಟ್ ಕಳೆದು ಹಾಕ್ಕೊಂಡ್ ಬಂದು ನಾಯಿಗಳ ಥರ ಕಚ್ಚಾಡ್ತಿರೋದ್ ನೋಡು.ದುಡ್ಡಿನ ಬೆಲೆ ಇಲ್ಲ” ಎಂದು ಬೈಯುತ್ತಾ ಪಟಾರ್ ಪಟಾರ್, ಇಬ್ಬರ ಕೆನ್ನೆಗೂ ಅಮ್ಮನ ಕೈಯಿಂದ ಜೋರಾದ ಮುತ್ತು.

ನಮ್ಮ ಪ್ರೀತಿಯ ಬ್ಯಾಟನ್ನ ಇಬ್ರೂ ಮರೆತು ಮೈದಾನದಲ್ಲೇ ಬಿಟ್ಟು ಬಂದಿದ್ವಿ. ಕತ್ತಲಾದ್ಮೇಲೆ ಓಡಿ ಹೋಗಿ ನೋಡಿದಾಗ ಅದು ಅಲ್ಲಿರಲಿಲ್ಲ. ಸ್ವಲ್ಪ ದಿನ ಹಗಲು ರಾತ್ರಿ ಬೈಗುಳ ಕೇಳಿ ಮಲಗುವ ಸ್ಥಿತಿ ನಮ್ಮದು. ನನ್ನ ನಮ್ಮಣ್ಣನ ಮನಸಲ್ಲಿ ಅಚ್ಚಾಗಿತ್ತು ಆ ನೆಚ್ಚಿನ ಬ್ಯಾಟು.

ಆದ್ರೆ ಈಗ ಅದು ತಮಿಳ್ ಆಂಟಿ ಮನೇಲಿ. ದಿನೇಶ ನಮ್ ಬ್ಯಾಟ್ನ ಕದ್ದು ನಮಗೇ ಚಾಕ್ಲೇಟ್ ತಿನ್ನಿಸಿದಾನೆ. ಹೇಗಾದ್ರು ಮಾಡಿ ಆ ಬ್ಯಾಟ್ನ ನಾವ್ ನಮ್ಮದಾಗಿಸ್ಕೋಬೇಕು.

ರಾತ್ರಿ ಮಲಗೋ ಸಮಯ. ಸಂಜೆಯಿಂದ ಹೆಚ್ಚು ಮಾತಿಲ್ಲ. ಏನೋ ಸರಿಯಿಲ್ಲ ಅಂತ ಅಮ್ಮಂಗೂ ಅನುಮಾನ ಬಂದಿದೆ.ಅಕ್ಕ-ಪಕ್ಕ ಹಾಕಿರುವ ಮಂಚದ ಮೇಲೆ ನಾನು ನಮ್ಮಣ್ಣ ಮಲಗಿದ್ವಿ, ನಿದ್ದೆ ಬಂದಿಲ್ಲ. ನಾನು ಮುಸುಕು ಹಾಕಿಕೊಂಡು ಯೋಚನೆಯಲ್ಲಿದ್ದೀನಿ. ನಿಧಾನವಾಗಿ ಮುಸುಕು ಕೆಳಗೆ ಎಳೆದ ನಮ್ಮಣ್ಣ.

’ನಮ್ ಬ್ಯಾಟು ನಾಳೆ ನಮ್ಮನೇಲಿ ಇರತ್ತೆ. ನಾವೆ ಹೋಗಿ ಅದನ್ನ ತರೋಣ’ ಎಂದು ಅಣ್ಣ ಪಿಸುಗುಟ್ಟಿದ. ಅವನ ಮಾತಲ್ಲಿ ಧೃಢತೆ ಇತ್ತು.

’ಆದ್ರೆ ಹೇಗೆ?’

ರವಿ ಒಂದು ಸೂಪರ್-ಸುಪ್ರೀಮ್ ಐಡಿಯಾ ಕೊಟ್ಟ.

ಮರು ದಿನ ಭಾನುವಾರ. ಎಂದಿನಂತೆ ಸ್ನಾನ,ತಿಂಡಿ, ವಿಡಿಯೋ ಗೇಮೂ ಇತ್ಯಾದಿ ಇತ್ಯಾದಿಗಳು ಮುಂದೆವರೆದಿದ್ದವು. ಈ ವಾರ ಪಕ್ಕದ ಬೀದಿಯವರ ಮೇಲೆ ಮ್ಯಾಚ್ ಕೂಡ ಇರಲಿಲ್ಲ. ಹಾಗಾಗಿ ಸಂಜೆ ನಾಲ್ಕರವರೆಗೂ ಹಾಗೋ ಹೀಗೋ ಕಾಲ ಕಳೆದ್ವಿ. ಅರ್ಧ ದಿನ ಕಳೆಯೋ ಅಷ್ಟ್ರಲ್ಲಿ ಒಂದು ವಾರ ಶಾಲೆಗೆ ಹೋದಂತಾಗಿತ್ತು.

ಎಲ್ಲರೂ ಆಟ ಆರಂಭ ಮಾಡಿದ್ವಿ. ಇವತ್ತು ನಮ್ಮಣ್ಣ ನನ್ನ ಬಿಟ್ಟು ಆಟ ಆರಂಭ ಮಾಡೋಕೆ ಸಾಧ್ಯಾನೆ ಇರಲಿಲ್ಲ. ನಮ್ಮ ತಂತ್ರ ಕೆಲಸ ಮಾಡ್ಬೇಕು ಅಂದ್ರೆ ನಾವಿಬ್ರು ಇರಲೇ ಬೇಕು. ನಾನು ನಮ್ಮಣ್ಣ ಎಂದಿನಂತೆ ಬೇರೆ ಬೇರೆ ತಂಡದಲ್ಲಿ ಆಡ್ತಿದ್ವಿ. ಒಂದು ಮ್ಯಾಚು ಮುಗೀತು. ಎರಡನೇ ಮ್ಯಾಚ್. ನಮ್ಮ ತಂಡದಲ್ಲಿ ಪದ್ದಿ ಅತ್ಯುತ್ತಮವಾಗಿ ಆಡಿ ೬ ಓವರ್ ಅಂತ್ಯಕ್ಕೆ ೪೨ ರನ್ನುಗಳನ್ನ ಗಳಿಸಿದ್ದ. ನಮ್ಮಣ್ಣನ ತಂಡದವ್ರು ಬ್ಯಾಟಿಂಗ್. ಕಿರಣ್ ಮತ್ತು ಮೂರ್ತಿ ೨೮ ರನ್ನುಗಳಿಗೆ ಔಟಾಗಿದ್ರು. ಒಂದು ಓವರ್ ೧೫ ರನ್ ಬೇಕಿತ್ತು. ನಮ್ಮಣ್ಣ ಬ್ಯಾಟಿಂಗ್. ಮೊದಲ ಬಾಲ್  ಜೋರಾಗಿ ಬೀಸಿದ. ನೇರ ಬೌಂಡ್ರಿ ಪಾಲು. ಮುಂದಿನ ಎಸೆತ ಕೂಡ ಹಾಗೆ ಆಯ್ತು.

೪ ಬಾಲ್.. ೭ ರನ್. ಮತ್ತೊಂದು ಬೌಂಡ್ರಿ. ೩ ಬಾಲ್ ೩ ರನ್.

ಪದ್ದಿ ಬೌಲಿಂಗ್, ರವಿ ಬ್ಯಾಟಿಂಗ್. ಜೋರಾಗಿ ಬೀಸಲು ಯತ್ನ ಆದ್ರೆ ಬಾಲ್ ನೇರ ಕೀಪರ್ ಕೈಗೆ.

೨ ಬಾಲ್ ೩ ರನ್. ಮತ್ತೊಂದು ಮಿಸ್. ಬಾಲ್ ಕನೆಕ್ಟ್ ಆಗ್ತಿಲ್ಲ. ರವಿ ತಂಡ ಸೋಲೋದು ಖಚಿತ ಅಂತ ನಮಗನ್ನಿಸೋಕೆ ಶುರು ಆಯ್ತು.

೧ ಬಾಲ್ ೩ ರನ್. ಈ ಬಾಲ್ ಬೌಂಡ್ರಿ ಹೊಡೆದ್ರೆ ಗೆಲ್ಲೋ ಸಾಧ್ಯತೆ ಇನ್ನೂ ಇದೆ. ಬ್ಯಾಟಿಂಗ್ ಚೆನ್ನಾಗಾಡಿರೋ ಪದ್ದಿ ಬೌಲಿಂಗ್ ಕೂಡ ಚೆನ್ನಾಗ್ ಮಾಡ್ತಾನ? ಬಾಲ್ ಪದ್ದಿ ಕೈಯಿಂದ ಹಾರಿ ನೆಲಕ್ಕೆ ತಾಕಿ ರವಿಯ ಕಡೆಗೆ ತೇಲಿ ಹೋಯ್ತು. ರವಿ ಕೈಯಲ್ಲಿದ್ದ ಬ್ಯಾಟನ್ನು ಜೋರಾಗಿ ಬೀಸಿದ. ಬಾಲ್ ಬ್ಯಾಟಿಗೆ ಬಡೆದ ಶಬ್ಧ ಎಲ್ಲರಿಗೂ ಜೋರಾಗಿ ಕೇಳಿಸಿತು. ಗಾಳಿಯಲ್ಲಿ ತೇಲಿದ ಬಾಲ್ ತೇಲುತ್ತಾ ನೇರ ತಮಿಳ್ ಆಂಟಿ ಮನೆಯ ಒಳಗೆ ಬಿತ್ತು.

ನಮ್ಮ ತಂತ್ರದ ಮೊದಲ ಹೆಜ್ಜೆ ರವಿ ಪೂರೈಸಿದ್ದ. ಇನ್ನೇನಿದ್ರು ನಮ್ಮಿಬ್ಬರ ಕೆಲಸ ಶುರು.

ಎಲ್ಲರೂ ಮ್ಯಾಚ್ ಮುಗಿದ ಅಬ್ಬರದಲ್ಲಿ, ಪದ್ದಿ ಗೆದ್ದ ಖುಷಿಯಲ್ಲಿ ಇರಬೇಕಾದ್ರೆ ನಮ್ಮಣ್ಣ ಮುಂದಿನ ಹೆಜ್ಜೇನ ಇಟ್ಟ. ನನ್ನ ಕಡೆಗೆ ತಿರುಗಿ ನೋಡಿ “ಹೊರಡು” ಎನ್ನುವಂತೆ ತಲೆಯಾಡಿಸಿ ಒಮ್ಮೆ ಮುಗುಳ್ನಗೆ ಬೀರಿದ. ಪ್ರತಿ ದಿನ ಬೆಕ್ಕಿನಂತೆ ತಮಿಳ್ ಆಂಟಿ ಮನೆಯ ಒಳ ಹೊಕ್ಕುತ್ತಿದ್ದ ನಾನು ಪ್ಲ್ಯಾನ್ ಪ್ರಕಾರ ಇಂದು ಓಡಿ ಹೋಗಿ ಜೋರಾಗಿ ಸದ್ದು ಬರುವಂತೆ ಮನೆಯ ಗೇಟ್ ತೆರೆದೆ. ಚಪ್ಪಲಿ ಗೂಡಿನ ಬಳಿ ಬಾಲ್ ಕಂಡಿತು. ಆದ್ರು ನನಗೆ ಕಾಣಲಿಲ್ಲವೇನೋ ಎಂಬುವಂತೆ ಗಿಡಗಳ ಮಧ್ಯ ಕೈಯ್ಯಾಡಿಸುತ್ತಿದ್ದೆ. ಇದೇ ಸಮಯದಲ್ಲಿ ನಮ್ಮಣ್ಣ ಎದುರು ಮನೆಯ ಜೈನರ ಮನೆಯ ಕಾಂಪೌಂಡ್ ಏರಿ, ಮಹಡಿಗೆ ಜಿಗಿದಿದ್ದ. ಎಲ್ಲರಿಗೂ ಏನು ನಡೀತಿದೇ ಅನ್ನೋದರ ಅರಿವೂ ಇರಲಿಲ್ಲ. ರವಿ ಬೆಕ್ಕಿನ ಹೆಜ್ಜೆ ಇಡುತ್ತಾ ನಿಧಾನವಾಗಿ ಮಹಡಿಯ ಹಿಂಭಾಗಕ್ಕೆ ಹೋದ. ಜೈನರ ಮನೆಯ ಪಕ್ಕದ ಮನೆಯೇ ತಮಿಳ್ ಆಂಟಿ ಮನೆ. ನಮ್ಮಣ್ಣ ಮಹಡಿಯಿಂದ ಜಿಗಿದರೆ ನೇರ ತಮಿಳ್ ಆಂಟಿ ಮನೆಯ ಹಿತ್ತಲಿಗೆ ಬೀಳುತ್ತಾನೆ.

ಪ್ಲ್ಯಾನ್ ಪ್ರಕಾರವಾಗಿ ನಾನು ’ಬಾಲ್ ಸಿಗ್ತಿಲ್ಲಾ ಕಣ್ರೋ’ ಎಂದು ಜೋರು ಧ್ವನಿಯಲ್ಲಿ ಕೂಗು ಹಾಕಿದೆ. ತಮಿಳ್ ಆಂಟಿ ತಕ್ಷಣ ನಿದ್ದೆ ಕಣ್ಣಲ್ಲಿ ಬಾಗಿಲು ತೆಗೆದು ಹೊರ ನಡೆದರು. ನಾನು ಹುಡುಕುವಂತೆ ನಟನೆ ಮಾಡ್ತಿದ್ದೆ.

ಆಷ್ಟ್ರಲ್ಲಿ ನಮ್ಮಣ್ಣ ಜೈನರ ಮನೆಯ ಮಹಡಿಯಿಂದ ಹಾರಿ ತಮಿಳ್ ಆಂಟಿ ಮನೆಯ ಹಿತ್ತಲಲ್ಲಿ ನಿಂತಿದ್ದ. ನಿಧಾನವಾಗಿ ಹೆಜ್ಜೆ ಹಾಕುತ್ತ ಅವರ ಮನೆಯ ಹಿಂಭಾಗಕ್ಕೆ ನಡೆದಿದ್ದ.

’ತಲೇಲಿ ಏನ್ ತುಂಬ್ಕೊಂಡಿದ್ದೀರೋ? ಏನ್ ತಿನ್ನುತ್ತೀರ ಹೊಟ್ಟೇಗೆ?’ ಎಂದು ಕಿರುಚಿದ್ರು ಆಂಟಿ.

’ಆಂಟಿ..ಅದೂ… ಅದೂ.. ಬಾಲ್ ಬಿದ್ದಿತ್ತು..’ ಎಂದು ಬೇಕು ಅಂತಾನೆ ಮಾತನ್ನು ಬೆಳೆಸ್ತಾ ಇದ್ದೆ.

ಮಂಡಿಯೂರಿ ಅಂಬೆಗಾಲು ಹಾಕಿಕೊಂಡು ನಮ್ಮಣ್ಣ ಮನೆಯ ಬಾಗಿಲ ಕಡೆಗೆ ಬರುತ್ತಿದ್ದದ್ದು ನನಗೆ ಕಂಡಿತು. ಮುಂದಿನ ಮೂರು ನಿಮಿಷಗಳು ನಾನು ಆಂಟಿಯನ್ನು ಮಾತಿನಲ್ಲಿ ತೊಡಗಿಸ ಬೇಕು. ಅವ್ರನ್ನ ಬಿಟ್ರೆ ಮನೆಯೊಳಗೆ ಹೋಗ್ತಾರೆ. ಜಗುಲಿಯಲ್ಲಿ ನಮ್ಮಣ್ಣ ಬ್ಯಾಟ್ ಕದೀತಿರೋದ್ನ..ಕದೀತಿರೋದಲ್ಲ ನಮ್ಮದಾಗಿಸಿಕೊಳ್ತಿರೋದ್ನ ನೋಡಿಬಿಡ್ತಾರೆ. ಮತ್ತೆ ರಾದ್ಧಾಂತ ಆಗಿ ಹೋಗತ್ತೆ.

’ಬಾಲ್ ಇಲ್ಲೆ ಎಲ್ಲೋ ಬಿದ್ದಿತ್ತು ಆಂಟಿ. ಹುಡುಕ್ತಾ ಇದ್ದೆ. ನೀವ್ ನಿದ್ದೆ ಮಾಡ್ತಿದ್ರ? ಎಬ್ಬಿಸಿದ್ದಕ್ಕೆ ತಪ್ಪಾಯ್ತು ಆಂಟಿ.’

ರವಿ ಮನೆಯೊಳಗೆ ಹೋಗಿದ್ದಾನೆ.

’ಆಂಟಿ ದಿನೇಶನ್ನ ಯಾಕಾಂಟಿ ಆಟಕ್ಕೆ ಕಳ್ಸಲ್ಲ. ತುಂಬಾ ಚೆನ್ನಾಗಾಡ್ತಾನೆ ಅವ್ನು. ನಿಜ್ವಾಗ್ಲು. ಅವ್ನಿದ್ರೆ ಅವ್ನೆ ನಮ್ ಕ್ಯಾಪ್ಟನ್ನೂ’

ಮನೆಯೊಳಗೆ ಏನ್ ನಡೀತಿದ್ಯೋ ಗೊತ್ತಾಗ್ತಿಲ್ಲ. ಬ್ಯಾಟ್ ಸಿಕ್ಕಿದ್ಯೋ ಇಲ್ವೊ?

’ಮರ್ಯಾದೆ ಇಲ್ಲ ನಿನಗೂ ನಿಮ್ಮಣ್ಣಂಗೂ. ನೀವಂತೂ ಓದಲ್ಲ. ನನ್ನ ಮಗ ಆದ್ರು ಓದಿ ಉದ್ಧಾರ ಆಗ್ಲಿ. ನಿಮ್ ಥರ ಪೋಲಿ ಅಲ್ಲ ಅವ್ನು.’ ಅಂದು ತಮಿಳು ಮಿಶ್ರಿತ ಕನ್ನಡದಲ್ಲಿ ಉಪದೇಶದಂತೆ ಬೈದ್ರು ಆಂಟಿ.

ಒಂದು ಕೈಯಲ್ಲಿ ಬ್ಯಾಟು ಹಿಡಿದು ನಿಧಾನವಾಗಿ ನಮ್ಮಣ್ಣ ಹೊರಗೆ ಬಂದ. ಈ ಬಾರಿ ಬಗ್ಗಿ ನಡಿಯುತ್ತಿದ್ದಾನೆ. ಎದೆ ಢವ-ಢವ ಎಂದು ಜೋರಾಗಿ  ಬಡಿತಾ ಇದೆ.

’ಏನ್ ಆಂಟಿ ಹಾಗಂತೀರ. ನಾವೇನ್ ಓದಲ್ವ? ಈ ಸರ್ತಿ ಟೆಸ್ಟಲ್ಲಿ ೧೦ಕ್ಕೆ ೯ ತೆಗೆದಿದ್ದೀನಿ ಗೊತ್ತ? ಸುಮ್ ಸುಮ್ನೆ ಹಾಗೆಲ್ಲ ಬೈಬೇಡಿ ನೀವು’

’ನಿನಗೂ ನಿಮ್ಮಣ್ಣನಿಗೂ ದೊಡ್ಡವ್ರಿಗೆ ಹೇಗೆ ಮರ್ಯಾದೆ ಕೊಡ್ಬೇಕು ಅನ್ನೋದೆ ಗೊತ್ತಿಲ್ಲ. ನಿಮ್ಮ ಮನೇಗ್  ಬಂದು ನಿಮ್ಮಮ್ಮಂಗೆ ಹೇಳ್ತೀನಿ ಇರು.’

ರವಿ ಕಾಣ್ತಿಲ್ಲ. ಬಹುಶಃ ಮನೆಯ ಹಿಂದಿನಿಂದ ನಡೆದು ಹೋಗ್ತಿದ್ದಾನೆ. ಇನ್ನು ಒಂದೂವರೆ ನಿಮಿಷ ನನ್ನ ನಾಟಕ,

’ಆಂಟಿ ದಯವಿಟ್ಟು ಬೇಡ ಆಂಟಿ, ಇನ್ಮೇಲೆ ನಿಮ್ಮನೆಗೆ ಬಾಲ್ ಹೊಡ್ಯಲ್ಲ. ನಮ್ಮಮ್ಮಂಗೆ ಮಾತ್ರ ಹೇಳ್ಬೇಡಿ ಆಂಟಿ’ ಎನ್ನುತ್ತ ಚಿಕ್ಕ ಮಗುವಿನ ಹಾಗೆ ಪಿಳ ಪಿಳ ಕಣ್ಣಾಡಿಸಿದೆ.

ಇನ್ನೇನೆ ಆದ್ರು ಇದೇ ಕೊನೆ ಮಾತು. ಬಾಲ್ ತೊಗೊಂಡು ಏನು ತಿಳಿಯದವನ ಹಾಗೆ ಹೊರಗೆ ನಡೆದು ಹೋಗೋದು ಅಂತ ನಿಶ್ಚಯ ಮಾಡ್ಕೊಂಡೆ.

’ಹಾಂ!! ಆಂಟಿ ಬಾಲ್ ಸಿಕ್ತು. ಇನ್ಮೇಲೆ ನಿಜ್ವಾಗ್ಲು ಹೊಡಿಯಲ್ಲ ಆಂಟಿ. ದಿನೇಶನ್ನ ಆಟಕ್ಕೆ ಕಳಿಸಿ ಪ್ಲೀಜ಼್’ ಎನ್ನುತ್ತಾ ತಲೆಯೊಳಗೆ ಲೆಕ್ಕಾಚಾರ ಹಾಕ್ಕೊಂಡು, ನೆನ್ನೆ ರಾತ್ರಿ ನಮ್ಮಣ್ಣ ಮಾಡಿದ ಪ್ಲ್ಯಾನ್ ಸಫ಼ಲವಾಯ್ತು ಅಂತ ನಂಬಿ, ಹೊರಗೆ ಹೋದಾಗ ನಮ್ಮ ಬ್ಯಾಟ್ ಹಿಡಿದು ರವಿ ನಿಂತಿರಬೇಕಪ್ಪ ಗಣೇಶ ಅಂತ ಬೇಡ್ಕೊಂಡು, ಅಲ್ಲೇ ಕಾಣುತ್ತಿದ್ದ ಬಾಲನ್ನು ಕೈಯಲ್ಲಿ ಹಿಡಿದು ಹೊರಗೆ ಚಿಕ್ಕ ಮಗುವಿನ ಹಾಗೆ ನಡೆದು ಹೋದೆ.

ಮೂರು ದಿನಗಳ ನಂತರ

’ಇವತ್ತೇ ಹೊರಗೆ ತರಬೇಡ ಕಣೋ ಬ್ಯಾಟನ್ನ, ದಿನೇಶ ಆಡೋಕೆ ಬಂದಿದ್ದಾನೆ.’ ಅಂತ ಮೆಲುಧ್ವನಿಯಲ್ಲಿ ನಾನು ರವಿಗೆ ಹೇಳಿದೆ.

’ಹೆದರಿಕೆ ಯಾಕೋ? ನಮ್ಮ ಬ್ಯಾಟು, ನಾವ್ ಆಡೋಣ’ ಎನ್ನುತ್ತಾ ತಮಿಳ್ ಆಂಟಿ ಮನೆಯಿಂದ ಜೈನರ ಮನೆಗೆ ಹಾರುವಾಗ ಬಿದ್ದು ತೆರಚಿದ ಕಾಲನ್ನು ನಿಧಾನವಾಗಿ ಇಡುತ್ತಾ ನಮ್ಮಣ್ಣ ಆಡಲು ನಿಂತ. ನಾನು ಅವನ ಹಿಂದೆ ನೆರಳಾದೆ.

-Rohith Padaki

Facebook ಕಾಮೆಂಟ್ಸ್

ಲೇಖಕರ ಕುರಿತು

Rohit Padaki

ಕನ್ನಡದ ಯುವ ಲೇಖಕರಲ್ಲಿ ಒಬ್ಬರು. ದೃಶ್ಯ ಮಾಧ್ಯಮದಲ್ಲಿ ಸಾಕಷ್ಟು ಕಾರ್ಯ ನಿರ್ವಹಿಸಿ ಬಿಗ್ ಬಾಸ್, ವೀಕೆಂಡ್ ವಿತ್ ರಮೇಶ್ ಎಂಬ ಶೋಗಳಿಗೆ ಇವರ ಬರವಣಿಗೆಯಿದೆ. ಇತ್ತೀಚೆಗೆ ಬಿಡುಗಡೆಯಾದ ಆಟಗಾರ ಚಿತ್ರಕ್ಕೆ ಸಂಭಾಷಣೆ ಸಾಹಿತ್ಯ ಇವರದೇ ಆಗಿತ್ತು. ಮೊನಚಾದ ಪದಗಳಿಗೆ ಹೆಸರುವಾಸಿಯಾಗಿರುವ ಇವರ ಬರಹ ಪ್ರಭಾವಶಾಲಿ, ಹಾಗು ಹೊಸತನ ತುಂಬಿರುತ್ತದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!