ಕಥೆ

ಗಲ್ಲಿ ಕ್ರಿಕೆಟ್ – 1

ಶನಿವಾರ ಅರ್ಧ ದಿನ ಸ್ಕೂಲು ಮುಗಿಸಿ ಮನೆಗೆ ಬಂದಿದ್ದಾಯ್ತು. ನಾನು ನಮ್ಮಣ್ಣ ಯಾವತ್ತೂ ಸ್ಕೂಲಿಂದ ಜೊತೆಗೆ ವಾಪಸ್ ಬಂದಿರಲಿಲ್ಲ.ದಾರಿ ಪೂರ್ತಿ ನಾನು ಹಾಡ್ ಹೇಳ್ಕೊಂಡು, ಎಲ್ಲಾರ್ ಜೊತೆ ಮಾತಾಡ್ಕೊಂಡು ನಡೀತೀನಿ ಅಂತ ರವಿಯ ಕಂಪ್ಲೇಂಟ್. ರವಿ ಅವನ ಗೆಳೆಯರ ಜೊತೆ ಏನು ಮಾತಾಡ್ತಾನೆ ಅನ್ನೋದು ನನಗೆ ಕುತೂಹಲ. ಅವ್ನು ಸುಮಾರು ಎಂಟನೇ ಕ್ಲಾಸಲ್ಲಿ ಇದ್ದ. ನಾನು ಐದು.

“ರಘು..ಸುಮ್ನೆ ಸೈಕಲ್ ತಳ್ಕೊಂಡ್ ಬಾ” ಅಂತ ಗದರಿಸಿ ನನ್ನ ಕಡೆಗೆ ಅಮ್ಮ ಕೊಡಿಸಿದ ಗೇರ್ ಸೈಕಲ್ ತಳ್ಳೋನು ರವಿ. ಸ್ವಲ್ಪ ದೂರ ತಳ್ಳಿದ ಹಾಗೆ ನಾಟಕ ಮಾಡಿ ನಾನು ಏನೋ ಒಂದು ನೆಪ ಹೇಳಿ ಅವ್ನಿಗೆ ವಾಪಸ್ ಕೊಟ್ಬಿಡ್ತಿದ್ದೆ. ಅಯ್ಯೋ ಅವ್ನ ಆಸ್ತಿ ಸ್ವಾಮಿ ಅದು. ನಂಗೆ ಕೊಡ್ಸಿದ್ದು ನಮ್ಮಮ್ಮ ಸೈಕಲ್ಲು? ಒಂದಿನ ಸ್ಕೂಲಿಗೆ ಸೈಕಲ್ ಓಡಿಸ್ಕೊಂಡು ಹೋಗಿ ಮೈನ್-ರೋಡಲ್ಲಿ ಬುಟ್ಟಿ ಒಳಗೆ ತರಕಾರಿ ತುಂಬ್ಕೊಂಡ್ ಹೋಗ್ತಿದ್ದ ಆಂಟಿಗೆ ಡಿಕ್ಕಿ ಹೊಡಿದು ಬಿದ್ದಿದ್ದಕ್ಕೆ ರಾದ್ಧಾಂತ ಮಾಡಿದ್ದ ನಮ್ಮಣ್ಣ. ಮಂಡಿ ತೆರಚಿದ್ದು ನನಗೆ. ತಲೆ ತಿರುಗಿದ್ದು ಮನೆಯವ್ರಿಗೆಲ್ಲ. ಅವ್ನ ಸೈಕಲ್  ಅವ್ನೆ ತಳ್ಳಲಿ ಅಂತ ಬಿಟ್ಟು ಕೈಯಲ್ಲಿ ಕ್ಯಾರಿಯರ್ ಅಲ್ಲಾಡಿಸಿಕೊಂಡು ಆರನೇ ಕ್ಲಾಸ್ ಮೀರಾ ಜೊತೆ ಮಾತಾಡ್ಕೊಂಡು ಬರ್ತಿದ್ದೆ. ನಾನು ತುಂಬಾ ಮುದ್ದಾಗಿದೀನಿ ಅಂತ ಅನ್ನಿಸೋದಂತೆ ಮೀರಾಗೆ.

ಮನೆಗೆ ಬಂದು ಊಟ ಮಾಡಿ ಸ್ವಲ್ಪ ಹೊತ್ತು ಟಿವಿಯಲ್ಲಿ WWF ನೋಡಿದೆ. ನೋಡ್ತಿದ್ದ ಹಾಗೆ ಕಣ್ಣೆಳ್ಕೊಂಡ್ ಹೋಗಿ ಇನ್ನೊಂದ್ ಲೋಕಕ್ಕೆ ಬಿಸಾಕಿತ್ತು. ಒಳ್ಳೆ ನಿದ್ದೆ. ಕನಸಲ್ಲಿ ಯಾರೋ ಕೂಗ್ತಿರೋ ಹಾಗೆ.

“ಏಯ್ ಸರಿಯಾಗ್ ಹಾಕೊ.. ವಿಕೆಟ್ ಟು ವಿಕೆಟ್ ಬಾಲ್ ಮಾಡೋ” ಅಂತ ಚೀರೋ ಹಾಗೆ.

ಎದ್ದು ಕಣ್ಣುಜ್ಜಿ ಗಡಿಯಾರ ನೋಡಿದೆ. ಟೈಮ್ ನೋಡೋದನ್ನ ಇನ್ನು ಕಲೀಬೇಕಿತ್ತು.

’ಬಾಲ್ ಆ ತಮಿಳ್ ಆಂಟಿ ಮನೇಗ್ ಹೋಗಿದೆ. ಹುಷಾರಾಗಿ ಒಳಗೆ ಹೋಗು.ಗೊತ್ತಾಗಬಾರದು ಅವ್ರಿಗೆ’ ಅಂತ ನಮ್ಮಣ್ಣ ಪಕ್ಕದ ಮನೆ ಪದ್ದಿಗೆ ಹೇಳಿದ. ನಿದ್ದೆ ಇಂದ ಎದ್ದ ಮೂಡು.ರಪ್ಪಂತ ಕೋಪ ತಲೆಗೆ ಹತ್ತಿತು. ಆಗ್ಲೆ ಆಡೋಕೆ ಶುರು ಮಾಡಿದಾರೆ. ನನ್ನನ್ನ ಎಬ್ಬಿಸು ಇಲ್ಲ. ಬೇಕು ಅಂತ ಮಾಡ್ತಾರೆ. ನನ್ ಕಂಡ್ರೆ ಹೊಟ್ಟೆ ಉರಿ ಈ ನಮ್ಮಣ್ಣಂಗೆ ಅಂತ ಮನಸಲ್ಲೇ ಶಾಪ ಹಾಕ್ಕೊಂಡು ಹೊರಗೆ ಓಡಿ ಹೋಗಿ ಗೇಟ್ ಬಳಿ ನಿಂತೆ.

’ಲೇ ನನ್ ಮಗನೆ.. ನನ್ನ ಯಾಕೋ ಎಬ್ಬಿಸಲಿಲ್ಲ’ ಅಂತ ಕೋಪದಲ್ಲಿ ಅಣ್ಣನ ಮೇಲೆ ರೇಗಿದೆ.

“ಅಂಡಿಗೆ ವಿಕೆಟ್ ತಿವಿದ್ರು ಏಳ್ದೆ ಹೋದ್ರೆ ನಾನೇನ್ ಮಾಡ್ಲಿ” ಅನ್ನುತ್ತಾ ಕಿರಣ್ ತಂದಿದ್ದ ಬ್ಯಾಟ್ ಹಿಡಿದು ನಿಂತ.

ಮೂರು ವಿಕೆಟ್ ಟಾರ್ ರೋಡಿನೊಳಗೆ ನೆಟ್ಟಿದ್ದರು.ಅದ್ರಲ್ಲಿ ಒಂದರ ಪಾಯಿಂಟು ಸೊಟ್ಟ ಆಗಿತ್ತು. ಹೋದ ಸರ್ತಿ ಟಾರ್ ಹಾಕಿದಾಗ ನಮ್ಮ ಪಿಚ್ ನೋಡ್ಕೊಂಡು ಮೂರು ಹಳ್ಳ ಮಾಡ್ಕೊಂಡಿದ್ವಿ. ವಿಕೆಟ್ ನೆಡೋಕೆ.

“ಮುಂದಿನ ಮ್ಯಾಚು ನಾನು ಒಂದು ಟೀಮಿಗೆ ಆಡ್ತೀನಿ” ಅಂತ ಬೆಪ್ಪಾಗಿ ಹೇಳಿ ಗೇಟ್ ತೆಗೆದು ಮೋರಿಯ ಪಕ್ಕ ಕೂತೆ.

ಅವರು ಆಡ್ತಿದ್ದ ಮ್ಯಾಚಲ್ಲಿ ನನಗೆ ಹೆಚ್ಚು ಆಸಕ್ತಿ ಇರಲಿಲ್ಲ. ನಮ್ಮಣ್ಣ ಬ್ಯಾಟಿಂಗ್ ಮಾಡ್ತಿದ್ದ. ಬಾಲ್ ಮತ್ತೆ ತಮಿಳ್ ಆಂಟಿ ಮನೆಗೆ ಹೊಡೆದ.

ತಮಿಳ್ ಆಂಟಿ ಅಂದ್ರೆ ನಮಗೆ ಸಿಕ್ಕಾಪಟ್ಟೆ ಭಯ. ಒಂದು ಸರ್ತಿ ಪಕ್ಕದ ಬೀದಿಯ ಮೂರ್ತಿ ನಮ್ ಜೊತೆ ಕ್ರಿಕೆಟ್ ಆಡ್ಬೇಕಾದ್ರೆ ಅವರ ಮನೇಗೆ ಬಾಲ್ ಹೊಡೆದು ಔಟಾಗಿದ್ದ. ಆಗ ನಾನು ಬಾಲ್ ತರೋಕೆ ಒಳಗೆ ಹೋಗಿದ್ದೆ. ನಿಧಾನವಾಗಿ ಬೆಕ್ಕಿನ ಹಾಗೆ ಹೆಜ್ಜೆ ಹಾಕಿ ಗಿಡದ ಮಧ್ಯ ಸಿಕ್ ಹಾಕ್ಕೊಂಡಿದ್ದ ಬಾಲನ್ನ ತೆಗೆದು ಹಿಂತಿರುಗುತ್ತಿದ್ದೆ.

’ಏಯ್, ನಿಂತ್ಕೊಳೋ.ನಿಮ್ಗೇನು ಬುದ್ಧಿ ಇಲ್ವ?’ ಅಂತ ಆಂಟಿ ಹಿಂದಿಂದ ನನ್ನ ನಿಲ್ಲಿಸಿದ್ರು.

ಅವತ್ತು ನಮ್ಮ ಖರ್ಮಕ್ಕೆ ತಮಿಳ್ ಆಂಟಿ ಮಗ ದಿನೇಶ ನಮ್ ಜೊತೆ ಆಡೋಕೆ ಬಂದಿರಲಿಲ್ಲ. ಅವ್ನು ಇದ್ದಾಗ ನಾವು ಅವ್ನನ್ನೆ ಕಳಿಸ್ತಾ ಇದ್ವಿ.ಆ ಆಂಟಿ ಅವ್ನನ್ನು ಬಿಡ್ತಿರಲಿಲ್ಲ. ತಮಿಳಿನಲ್ಲಿ ಅವ್ನಿಗೂ ಏನೋ ಬಯ್ಯೋರು. ನಮಗೆ ಅರ್ಥ ಆಗ್ತಿರಲಿಲ್ಲ. ಬಾಲ್ ತಂದ್ಕೊಟ್ಟು ಅರ್ಧಕ್ಕೆ ಆಟ ಬಿಟ್ಟು ಒಳಗೆ ಹೊರಟು ಹೋಗೋನು. ಬೇಜಾರಾಗೋದು ಪಾಪ ಆದ್ರೆ ಸದ್ಯ ಬಾಲ್ ಸಿಕ್ತಲ್ಲ ಅಂತ ಮತ್ತೆ ಅವ್ನನ್ನ ಟೀಮ್ ಇಂದ ತೆಗೆದ್ ಹಾಕಿ ಆಟ ಮುಂದುವರೆಸ್ತಾ ಇದ್ವಿ.

ಆದ್ರೆ ಅವತ್ತು ಹಾಗಿರಲಿಲ್ಲ. ನಾನು ಸಿಕ್ ಹಾಕ್ಕೊಂಡಿದ್ದೆ. ನನ್ನ ಕಣ್ಣಲ್ಲಿ ಆಂಟಿ ಕಣ್ಣಿಟ್ಟು ನೋಡ್ತಾ ಇದ್ರು. ಕೋಪದಲ್ಲಿ ಹತ್ರ ನಡ್ಕೊಂಡ್ ಬಂದು ನನ್ ಕೈಲಿದ್ದ ಬಾಲನ್ನ ಕಿತ್ಕೊಂಡು ಮನೆಯೊಳಗೆ ಹೋದ್ರು.“ಆಂಟಿ.. ಮತ್ತೆ ಹೊಡ್ಯಲ್ಲ..ಪ್ಲೀಸ್ ಕೊಟ್ಬಿಡಿ ಪ್ಲೀಸ್” ಅಂತ ನನ್ನ ಮುಖದಲ್ಲಿ ಅಪರೂಪಕ್ಕೆ ಬರೋ ಸಿಕ್ಕಾಪಟ್ಟೆ ಮುದ್ದಾದ ನಗೂನ ಅವ್ರಿಗೆ ಹಂಗೆ ಬಿಟ್ಟಿದ್ದೆ ನೋಡಿ.

ಉಪಯೋಗಕ್ಕೆ ಬರಲಿಲ್ಲ. ಅವ್ರು ಅದೇ ಗಂಟು ಮುಖ ಹಾಕ್ಕೊಂಡು ಮನೆಯೊಳಗೆ ನಡೆದುಬಿಟ್ಟಿದ್ರು. ಒಂದೆರಡು ನಿಮಿಷ ಕಾದಿದ್ದೆ “ಪ್ಲೀಸ್ ಆಂಟಿ” ಅಂತ ಕೇಳ್ಕೊಂಡು.ಈ ಥರ ಕೇಳೋದು ನಮಗೆ ಸ್ಕೂಲಿಂದ ಅಭ್ಯಾಸ. ಕ್ಲಾಸಿಂದ ಹೊರಗೆ ಹಾಕಿ ಉಟಾಬೈಸ್ ಹೊಡೆಸ್ದಾಗ ಇದೇ ರಾಗ ಎಳ್ಯೋದು ನಾವು. ಅಷ್ಟು ಹೊತ್ತಿಗಾಗ್ಲೆ ಪದ್ದಿ, ನಮ್ಮಣ್ಣ ರವಿ, ಮೂರ್ತಿ, ಕಿರಣ ಎಲ್ರೂ ಬಂದು “ಆಂಟೀ.. ಆಂಟೀ” ಅಂತ ರಾಗ ಎಳೀತಿದ್ರು.ಕೊನೆಗೂ ಆಂಟಿ ಹೊರಗೆ ಬಂದ್ರು. ಆದ್ರೆ ಒಂದು ಕೈಯ್ಯಲ್ಲಿ ಬಾಲು ಇನ್ನೊಂದು ಕೈಯಲ್ಲಿ ಚಾಕು!

ಎಲ್ರೂ ಬಾಯಿ ತೆಕ್ಕೊಂಡು ನೋಡ್ತ ಇದ್ರೆ, ತಮಿಳ್ ಆಂಟಿ ಆಲೂಗಡ್ಡೆ ಹೆಚ್ಚಿದ ಹಾಗೆ ಬಾಲನ್ನ ಚಾಕುವಿಂದ ಕಚ ಕಚ ಅಂತ ಹೆಚ್ಚಿಹಾಕ್ಬಿಟ್ರು. ನಮ್ಮೆದೆ ಒಡೆದು ಹೋಗಿತ್ತು. ಒಂದು ಕ್ಷಣ ಮೌನ. ಒಬ್ಬರ ಮುಖ ಒಬ್ಬರು ನೋಡ್ಕೊಂಡ್ವಿ.

“ಉಪ್ಪಿನಕಾಯಿ ಮಾಡ್ಕೊಂಡ್ ತಿನ್ನಿ” ಅಂತ ಎಲ್ಲರ ಹಿಂದೆ ನಿಂತು ಪಿಸುಗುಟ್ಟಿದ್ದ ನಮ್ಮಣ್ಣ ರವಿ. ಭಯ ತುಂಬಿದ್ದ ಎಲ್ಲರ ಮುಖದಲ್ಲೂ ಮುಗುಳ್ನಗೆ. ಬಂದ ದಾರಿಗೆ ಸುಂಕ ಇಲ್ಲ ಅನ್ನೋ ರೀತಿ ಎಲ್ರೂ ಅವತ್ತು ಮನೇಗೆ ವಾಪಸ್ ಹೋಗಿದ್ವಿ.

ಇವತ್ತು ಬಾಲ್ ಹೊಡೆದ ನಮ್ಮಣ್ಣ ಕೈಲಿದ್ದ ಬ್ಯಾಟನ್ನು ಕೋಪದಿಂದ ನೆಲಕ್ಕೆ ಕುಕ್ಕಿದ. ತಕ್ಷಣ ಕಿರಣ್ ಎದೆಗೆ ಗುದ್ದಿದಂತಾಯ್ತು.

“ಏಯ್.. ಬ್ಯಾಟ್ ಯಾಕೋ ಎಸೀತೀಯಾ? ಬೇಕಾದ್ರೆ ನಿಮ್ ಬ್ಯಾಟ್ ತಂದು ಬಿಸಾಕು” ಅಂತ ಹೇಳ್ತ ಓಡಿ ಬಂದು ಆ ಬ್ಯಾಟನ್ನು ಕೈಗೆತ್ತುಕೊಂಡು ತನ್ನ ಮನೆಗೆ ಓಡಿ ಹೋಗಿ ಅದನ್ನು ಬಚ್ಚಿಟ್ಟು, ಏನೋ ಘನಕಾರ್ಯ ಮಾಡಿರುವಂತೆ ನಡೆದು ಬಂದ.

“ಬ್ಯಾಟು ಇಲ್ಲ ಬಾಲು ಇಲ್ಲ.. ವಾಪಸ್ ಹೋಗೋಣೇನ್ರಪ್ಪ?” ಪದ್ದಿ ಗುನುಗಿದ.

ನಮ್ಮಣ್ಣ ಇವತ್ತು ಬಾಲನ್ನು ಉಪ್ಪಿನಕಾಯಿಗೆ ಆಹುತಿ ನೀಡುವ ಮೂಡಿನಲ್ಲಿರಲಿಲ್ಲ.

“ಬಾಲ್ನ ಹಾಗೆ ಬಿಟ್ಟು ವಾಪಸ್ ಹೋಗೋದು ಬೇಡ ಕಣ್ರೋ” ಎನ್ನುತ್ತಾ ಏನೋ ಯೋಚಿಸ್ತಾ ನಿಂತ. ಈ ಕ್ಷಣದಲ್ಲಿ ನಮ್ಮಣ್ಣನ್ನ ನೋಡ್ತಿದ್ರೆ,ಕೋಪ ಬಂದಿರೋ ನಮ್ ಹೆಡ್’ಮೇಡಮ್ ಕಂಡ ಹಾಗೆ ಕಾಣ್ತಿದ್ದ, ಕೈಲೊಂದು ಕೋಲು ಕಮ್ಮಿ ಅಷ್ಟೆ.

“ಹೊಡ್ಯೋದ್ ಹೊಡೆದು ಬಿಟ್ಟು ಈಗ ಏನೋ ಮಾಡೋ ಹಾಗೆ ಯೋಚಿಸ್ತಾ ಇದ್ಯ? ನಡಿ ಹೋಗೋಣ” ಎನ್ನುತ್ತ ನಾನು ಕೂತಲ್ಲೆ ಎದ್ದು ನಿಂತೆ.

“ಬಾರೋ ಹೋಗೋಣ” ಎಂದು ನನ್ನ ತೋಳಿಗೆ ಕೈ ಹಾಕಿ ಎಳೆದುಕೊಂಡು ತಮಿಳ್ ಆಂಟಿ ಮನೆ ಗೇಟ್ ಮುಂದೆ ನಿಲ್ಲಿಸಿದ.

“ನಿಧಾನವಾಗಿ ಒಳಗೆ ಹೋಗಣ. ನೀ ಮುಂದೆ, ನಾ ನಿನ್ ಹಿಂದೇನೆ ಇರ್ತೀನಿ. ಹೆದರಿಕೆ ಬೇಡ.” ಎಂದ ರವಿ

“ನಾನ್ಯಾಕ್ ಯಾವಾಗ್ಲು ಮುಂದೆ ಹೋಗ್ಬೇಕು, ನೀನೆ ಹೋಗು ಮಗ್ನೆ” ಅಂತ ನಾನು ನಿಧಾನವಾಗೆ ಘರ್ಜಿಸಿದೆ.

“ವಿಡಿಯೋ ಗೇಮಲ್ಲಿ ಜಾಸ್ತಿ ಆಟ ಯಾರಿಗೆ ಬೇಕಾಗಿರೋದು? ಹಠ ಮಾಡಿ ಆಡ್ತ್ಯ? ಸುಮ್ನೆ ಒಳಗ್ ಹೋಗು.”

“ನಾನ್ ಮ್ಯಾಚಲ್ಲು ಇರಲಿಲ್ಲ ಕಣೋ ಲೋ.ಎಲ್ಲಾ ಕಡೆ ಮೋಸ ಮಾಡ್ತ್ಯಲ್ಲ” ಎಂದು ಅಳಲು ತೋಡ್ಕೊತ್ತಿದ್ದಂತೆ ನಮ್ಮಣ್ಣ ನಿಧಾನವಾಗಿ ಗೇಟ್ ತೆಗೆದು ನನ್ನ ಒಳಗೆ ತಳ್ಳಿದ.

ಹಾವಿನ ಹೆಜ್ಜೆ ಹಾಕುತ್ತಾ ಒಳಗೆ ನುಸುಳಿಕೊಂಡ್ವಿ. ಹಿಂದೆ ನಮ್ಮಣ್ಣ ಇದಾನೋ ಇಲ್ವೊ ಅನ್ನೂ ಭಯಕ್ಕೆ ತಿರುಗಿ-ತಿರುಗಿ ನೋಡ್ತಾ ಇದ್ದೆ.

“ಹಿಂದೇನೆ ಇದ್ದೀನಿ ಹೋಗಲೊ” ಅಂತ ಬೈದ ರವಿ.

ಓದದೆ ಪರೀಕ್ಷೆಗೆ ಹೋದಾಗ್ಲು ಇಷ್ಟು ಭಯ ಆಗ್ತಿರಲಿಲ್ಲ. ಹಾಗೆ ಒಳಗೆ ಹೋಗಿ ಪೊದೆ ಸಂದಿಯಲ್ಲಿ ಕೈ ಹಾಕಿ ಹುಡುಕ್ತಾ ಇದ್ದೀನಿ.

“ರಘು!ಲೇ ಬಾ ಇಲ್ಲಿ”

ಗಾಬರಿಯಿಂದ ತಿರುಗಿ ನೋಡಿ “ಬಾಲ್ ಸಿಕ್ತ?” ಎಂದೆ

“ಇಲ್ಲ.ಬಾ ಇಲ್ಲಿ.” ಎಂದು ಧ್ವನಿಯಲ್ಲಿ ಆಶ್ಚರ್ಯವನ್ನು, ಖುಷಿಯನ್ನು ವ್ಯಕ್ತ ಪಡಿಸಿದ ನಮ್ಮಣ್ಣ. ಮಂಡಿ ಊರಿಕೊಂಡೇ ಅಂಬೆಗಾಲಲ್ಲಿ ಅವನ ಬಳಿ ಹೋದೆ. ಮನೆಯ ಕಿಟಕಿಯ ಕೆಳಗೆ ಅವಿಸಿಕೊಂಡಿದ್ದವನು ನನ್ನ ಕಿವಿಯಲ್ಲಿ ಏನೋ ಹೇಳಿದ. ನನಗೆ ಸರಿಯಾಗಿ ಕೇಳಿಸಲಿಲ್ಲ.

“ಏನು?” ಎಂದೆ.

“ಥತ್. ಮನೆಯೊಳಗೆ ನಾವ್ ಕಳ್ಕೊಂಡಿದ್ವಲ್ಲ ಬ್ಯಾಟು, ಅದನ್ನ ನೋಡಿದೆ” ಎಂದ.

ಕೂತಲ್ಲೆ ಪಲ್ಟಿ ಹೊಡೆದ ಹಾಗಾಯ್ತು ನನಗೆ.”ನಮ್ಮ favourite ಬ್ಯಾಟು. ಎಷ್ಟು ಪ್ರೀತಿಯಿಂದ ನೋಡ್ಕೊತಿದ್ವಿ ಆ ಬ್ಯಾಟ್ನ. ಅದು ತಮಿಳ್ ಆಂಟಿ ಮನೇಲಿದ್ಯ? ಅಂದ್ರೆ ಕದ್ದು ಬಿಟ್ಟಿದಾರ? ಅಯ್ಯೋ ದೇವ್ರೆ.ಈ ಉಪ್ಪಿನಕಾಯಿ ಆಂಟಿ ಹತ್ರ ನಮ್ ಬ್ಯಾಟಿದೆ. ಆದ್ರೆ ಹೇಗೆ ವಾಪಸ್ ತೊಗೊಳೋದು. ಓಂ ಶ್ರೀ ಗಣೇಶಾಯ ನಮಃ”

“ಬಾ ಇಲ್ಲಿ ನೋಡು” ಎಂದು ನಿಧಾನವಾಗಿ ಕಿಟಕಿಯ ಕಂಬಿಗೆ ಕೈ ಹಾಕಿ ಮೇಲೆದ್ದು ಇಣುಕಿ ನೋಡಿದ್ವಿ.

ಕತ್ತಲಲ್ಲೂ ಎದ್ದು ಕಾಣ್ತಿತ್ತು ಬ್ಯಾಟು. ಸಂದೇಹಾನೆ ಇಲ್ಲ.ಅದು ನಮ್ಮದೇ ಬ್ಯಾಟು. ನಿಧಾನವಾಗಿ ನೆಲಕ್ಕೆ ಕುಸಿದು ಕೂತ್ಕೊಂಡ್ವಿ. ಯೋಚನೆ ಮಾಡ್ತ ಬಲಕ್ಕೆ ತಿರುಗಿದರೆ ಬಾಲ್ ಕಾಣಿಸ್ತು. ಸರಕ್ಕನೆ ಅಂಬೆಗಾಲಲ್ಲಿ ಓಡಿ ಆ ಬಾಲ್ನ ತೊಗೊಂಡು ಜೇಬೊಳಗೆ ಹಾಕ್ಕೊಂಡು ವಾಪಸ್ ಓಡಿ ಬಂದು ನಮ್ಮಣ್ಣನ ಪಕ್ಕ ಕೂತೆ. ಉದ್ವೇಗದಲ್ಲಿ ನಮ್ಮಣ್ಣ ಮೇಲುಸಿರು ಬಿಡುತ್ತಾ ನನ್ನ ಕಡೆ ತಿರುಗಿದ.

’ನಮ್ ಜೊತೆ ಆಡ್ತಿದ್ದ ದಿನೇಶಾನೆ ಬ್ಯಾಟ್ ಕದ್ದುಬಿಟ್ಟಿದಾನೆ ರಘು. ನಮ್ ಫ಼ೇವರೇಟ್ ಬ್ಯಾಟು. ನೀನು ಎಷ್ಟು ರನ್ನುಗಳನ್ನ ಹೊಡೆದಿದ್ಯ ಅದ್ರಲ್ಲಿ. ಆ ಬ್ಯಾಟು ಈಗ ಇಲ್ಲಿ..ತಮಿಳ್ ಆಂಟಿ ಮನೇಲಿ ಇದೆ.ಯಾವತ್ತೋ ರೋಡಲ್ಲೆ ಮರೆತು ಹೋದಾಗ ಅಬೇಸ್ ಮಾಡಿ ಬಿಟ್ಟಿದಾರೆ.”

’ಅಮ್ಮ ನಮಗೆ ಎಷ್ಟು ಹೊಡೆದಿದಾಳೆ ಈ ಬ್ಯಾಟು ಕಳ್ಕೊಂಡ್ವಿ ಅಂತ. ಎಷ್ಟು ಅತ್ತಿದೀವಿ ನಾವು. ಆಮೇಲೆ ಬೇರೆ ಬ್ಯಾಟು ಕೊಡ್ಸ್ಕೊಳ್ಳೋಕೆ ಎಷ್ಟು ಕಷ್ಟ ಪಟ್ಟಿದೀವಿ. ಇನ್ನು ಒಂದು ಬ್ಯಾಟ್ ತೊಗೊಳ್ಳೋಕೆ ಆಗಿಲ್ಲ. ನಮ್ ಬ್ಯಾಟ್ ನೋಡಿದ್ರೆ ಇಲ್ಲಿದ್ಯಲ್ಲೊ ರವಿ?’

’ಅವ್ರ ಮಗ ಇದ್ದಾಗ ಬಾಲ್ ಹೊಡಿದ್ರೆ ಏನು ಮಾಡಲ್ಲ. ನಾವು ಬಾಲ್ ಹೊಡೆದ್ರೆ ಮಾತ್ರ ಪ್ರಾಬ್ಲಮ್ಮು ಇವ್ರಿಗೆ. ಸಾಯ್ತಾರೆ. ಇನ್ನು ಸುಮ್ನಿರೋದ್ ಬೇಡ. ನಮ್ ಬ್ಯಾಟ್  ಕದ್ದವ್ರನ್ನ ಬಿಡೋದ್ ಬೇಡ. ಅವ್ರು ನಮ್ಮಿಂದ ಹೇಗೆ ಆ ಬ್ಯಾಟ್ನ ಕದ್ದ್ರೋ ನಾವು ಆ ಬ್ಯಾಟ್ನ ಹಾಗೆ ಅವ್ರಿಂದ ಕದಿಯೋಣ.’

ಆಶ್ಚರ್ಯದಿಂದ, ಭಯದಿಂದ ಅವ್ನ ಕಡೆ ನೋಡ್ತ ‘ಏನ್ ಹುಚ್ಚ್ ಹಿಡಿದಿದ್ಯ ನಿನಗೆ? ಕದಿಯೋದು ಅಂದ್ರೆ ಏನರ್ಥ ಅಸಹ್ಯ’ ಅಂತ ಹಲ್ಲು ಕಚ್ಚಿಕೊಂಡು ಅವನನ್ನು ಕೇಳಿದೆ. ನಿಜ ಹೇಳ್ಬೇಕು ಅಂದ್ರೆ ನಂಗೂ ಕದಿಯಬಹುದು ಅನ್ನೊ ಕುತೂಹಲ ಹುಟ್ಕೊಳ್ತು. ’ಹೇಗ್ ಕದೀತ್ಯ?’ ಅಂತ ಶಂಕೆ ತುಂಬಿರೋ ಧ್ವನಿಯಲ್ಲಿ ಕೇಳಿದೆ.

‘ಇಲ್ಲೆ ಕೂತಿರು. ಈಗಲೆ ತಂದು ಬಿಡ್ತೀನಿ. ತಡ ಮಾಡೋದ್ ಬೇಡ’ ಎಂದು ಸ್ವಲ್ಪ ದೂರ ಸರಿದ ನಮ್ಮಣ್ಣ.

ತಲೆಯೆತ್ತಿ ನೋಡಲು ನಮ್ ಹುಡ್ಗೂರು ಕಾಂಪೌಂಡ್ ಸಂದಿಯಿಂದ ಗುಟ್ಟಾಗಿ ನೋಡ್ತಾ ಇದಾರೆ. ಯಾವ್ದೋ ವೀಡಿಯೋ ಗೇಮಿದ್ದಂತೆ ಇದೆ ಇದು ಅಂತ ಅನ್ನಿಸ್ತಾ ಇತ್ತು. ಯಾವ್ದು ಅಂತ ಗೊತ್ತಾಗ್ತಿಲ್ಲ.

ನಮ್ಮಣ್ಣ ನಿಧಾನವಾಗಿ ನೆಲಕ್ಕೆ ಮಂಡಿ ಊರಿ ತಮಿಳ್ ಆಂಟಿ ಮನೆಯ ಬಾಗಿಲ ಬಳಿ ನಡೆದು ಹೋದ. ನಾನು ಮತ್ತೆ ಕಿಟಕಿಯೊಳಗೆ ಇಣುಕಿ ನೋಡಿದೆ. ಬಾಗಿಲಿನ ಚಿಲಕ ಹಾಕಿರಲಿಲ್ಲ. ತಳ್ಳಿದರೆ ತೆರೆದುಕೊಳ್ಳುವಂತಿತ್ತು. ರವಿ ಬಾಗಿಲ ಎದುರು ತೆವಳುತ್ತಿದ್ದಂತೆ ನಾನು ಮೇಲುಸಿರು ಬಿಡುತ್ತ ಕೆಳಗೆ ಕೂತೆ. ಬಾಗಿಲು ತೆರೆದ ಸದ್ದು ನನ್ನ ಕಿವಿಗೆ ಕೇಳ್ತು. ಎದ್ದು ಕಿಟಕಿಯೊಳಗೆ ಇಣುಕಿದೆ. ನಮ್ಮಣ್ಣನ ಕೈ ಒಳಗೆ ಹೆಜ್ಜೆ ಇಡುತ್ತಿದ್ದದ್ದು ಕಾಣಿಸಿತು. ಮುಂದಿನ ಕ್ಷಣಗಳಲ್ಲಿ ನಡೆದದ್ದು ನಮ್ ಕರ್ಮ. ನಿಧಾನವಾಗಿ ನನ್ನ ನೋಟವನ್ನ ಬಲಕ್ಕೆ ಹಾಯಿಸಿದೆ. ಕೋಣೆಯ ಒಳಗಿನಿಂದ ತಮಿಳ್ ಆಂಟಿ ಅಂಗಡಿಗೆ ಹೋಗಲು ತಯಾರಾಗಿ ಕೈಲೊಂದು ಚೀಲ ಹಿಡಿದು ಹೊರಗೆ ನಡೆದರು. ಹೊರಗೆ ಜಗುಲಿಯಲ್ಲಿ ನಡೆಯುತ್ತಿದ್ದ ಕಳ್ಳತನವನ್ನು ನೋಡಲು ಅವ್ರು ಒಳಗಿದ್ದ ಕೋಣೆಯಿಂದ ನಡೆದು ಬರಬೇಕು. ಇಲ್ಲಿ ನಮ್ಮಣ್ಣ ಒಳಗೆ ಬಂದಿದ್ದಾನೆ. ತಮಿಳ್ ಆಂಟಿ ದೇವರ ಮನೆ ದಾಟಿ ನಡೆಯುತ್ತಿದ್ದಾರೆ. ಇವನ ಕೈ ನಿಧಾನವಾಗಿ ಬ್ಯಾಟ್ ಬುಡಕ್ಕೆ ಹೋಯ್ತು. ಆಂಟಿ ಮತ್ತೊಂದು ಕೋಣೆಯೊಳಗೆ ಹೋದ್ರು.ಇವನ ಬೆರಳುಗಳು ಬ್ಯಾಟ್ ಬುಡವನ್ನು ಸೋಕುತ್ತಿದೆ. ನಾನು ಕೂಗುವ ಹಾಗೂ ಇಲ್ಲ ಬಿಡುವ ಹಾಗೂ ಇಲ್ಲ. ನನ್ನನ್ನು ಬಿಟ್ಟು ಆಟವಾಡಿದ್ರು, ಸ್ಕೂಲಿಂದ ಒಬ್ಬನನ್ನೇ ಬಿಟ್ಟು ನಡ್ಕೊಂಡ್ ಬಂದ್ರು, ಸೈಕಲ್ ನನ್ನ ಕೈಲಿ ತಳ್ಳಿಸಿದ್ರು, ಚಾಕ್ಲೇಟ್ ನನ್ನ ಬಿಟ್ಟು ತಿಂದಿದ್ರು ಅವ್ನು ನಮ್ಮಣ್ಣ. ಪ್ರೀತಿ ಉಕ್ಕಿ ಬಂತು.

“ರವಿ,ಲೇ ರವೀ.. ಆಂಟಿ” ಅಂತ ಕೂಗು ಹಾಕಿದೆ.

ಗಾಬರಿಯಿಂದ ಕೈಗೆ ಸಿಕ್ಕಿದ್ದ ಬ್ಯಾಟು ಜಾರಿ ಕೆಳಗೆ ಬಿತ್ತು. ಧಡ್ಡೆಂದು ಶಬ್ಧವಾಯ್ತು. ಎರಡನೇ ಕೋಣೆಯಲ್ಲಿದ್ದ ಆಂಟಿ ಹೊರಗೆ ಓಡಿ ಬಂದು ತಿರುಗಿ ಓಡಲು ಪ್ರಯತ್ನ ಪಡ್ತಿದ್ದ ರವಿಯ ಬೆನ್ನಿನ ಮೇಲೆ ಕೈಚೀಲದಲ್ಲಿ ಗುದ್ದಿದರು. ಅವ್ನು ಅಲ್ಲೆ ಬಿದ್ದ. ನಾನು ಹೊರಗೆ ಕುಸಿದು ಬಿದ್ದೆ. ತಲೆಯಲ್ಲಿದ್ದ ಶಕ್ತಿ ನೆಲಕ್ಕೆ ಜಾರಿದಂತಾಯ್ತು. ಕೈಕಾಲು ಅಲ್ಲಾಡಿಸಲಾಗ್ತಿಲ್ಲ. ಹೊರಗಿದ್ದ “ನಮ್ ಹುಡ್ಗೂರು” ನಮ್ ಹುಡ್ಗೂರಾಗಿರಲಿಲ್ಲ. ಎಲ್ರೂ ಓಡಿದ್ದರು!

ರವಿ ಕಾಲರ್ ಪಟ್ಟಿ ಹಿಡಿದು ಹೊರಗೆ ಎಳೆದು ಕೊಂಡು ಬಂದ್ರು ಆಂಟಿ.

’ಇಬ್ರೂ ಕಳ್ರೂ ನಮ್ಮನೇಗೆ ಬಂದು ಕದೀತಿರ?’ ಅಂತ ಸ್ವಲ್ಪ ತಮಿಳಿನಂತೆ ಕನ್ನಡ ಮಾತಾಡಿದ್ರು.

’ಬಾ..ಬಾ..ಬ್..ಬಾಲ್ ಬಿದ್ದಿತ್ತು ಆಂಟಿ. ಒಳಗೆ ಹೊರಟು ಹೋಗಿತ್ತು.. ಅದಕ್ಕೆ..’ ಎಂದು ಉಸಿರಾಡಿದೆ ನಾನು.

ನನ್ನ ಜುಟ್ಟು ಹಿಡಿದು ಜಗ್ಗಿ ಮೇಲೆ ಎತ್ತಿದರು. ಇಬ್ರಿಗೂ ಕಪಾಳ ಮೋಕ್ಷವಾಯ್ತು.

’ಬ್ಯಾಟ್ ಕದಿಯೋಕೆ ಬಂದಿದ್ದೀರ ಅಂತ ನಂಗೆ ಗೊತ್ತು. ಬೇವರ್ಸಿಗಳ.ಥು!’ ಅಂತ ಉಗಿದ್ರು.

ಇಷ್ಟೆಲ್ಲಾ ಆದ್ರು ನಮ್ಮಣ್ಣ ವೀರ. ಸುಮ್ನೆ ಬರೋದು ಬಿಟ್ಟು – “ಹಂಗೆಲ್ಲ ಬೈಬೇಡಿ ನೀವು. ಸರಿ ಇರಲ್ಲ” ಅಂತ್ ಮೂಗು ಹಿಗ್ಗಿಸಿ ಗದರಿಸಿದ.

’ಧಿಮಾಕು ನೋಡು. ಮಾಡ್ತೀನಿರು!’ ಎನ್ನುತ್ತಾ ಅಲ್ಲೇ ತೆಂಗಿನ ಮರದ ಕೆಳಗೆ ಬಿದ್ದ ಪೊರಕೆ ಎತ್ತಿ ನಮ್ಮತ್ತ ಬೀಸಿದ್ರು. ನಾವು ಅಲ್ಲಿಂದ ಓಡಿ ಹೊರ ಬಿದ್ವಿ.

ಸೂರ್ಯ ಮುಳುಗಿ ಕತ್ತಲು ಕವೆದಿತ್ತು. ಮನದಲ್ಲಿ ಏನೋ ಒಂಥರಾ ದುಗುಡ. ಮನೆಯಲ್ಲಿ ಈ ವಿಷಯ ತಿಳಿಯದ ಹಾಗೆ ನಮ್ಮಲ್ಲೆ ಕಾಪಾಡ್ಕೊಳ್ಬೇಕು. ನಮ್ಮಣ್ಣನ ಮುಖ ಕೆಂಪಗೆ ಟೊಮಾಟೋ ಥರ ಆಗಿತ್ತು. ಟಿವಿ ನೋಡುವ ನೆಪವಷ್ಟೆ, ಟಿವಿಯಲ್ಲೂ ತಮಿಳ್ ಆಂಟಿ ಹಿಡಿದ ಪೊರ್ಕೇನೆ ಕಾಣಿಸ್ತಾ ಇತ್ತು. ನಮಗೆ ಅತ್ಯಂತ ಪ್ರಿಯವಾದ ಬ್ಯಾಟು ಅವರ ಮನೇಲಿದೆ. ಅದು ನಮಗೆ ಬೇಕು. ಏನ್ ಮಾಡೋದು?

ಮುಂದೇನಾಗತ್ತೆ? ನಾಳೆ..

Rohith Padaki

Facebook ಕಾಮೆಂಟ್ಸ್

ಲೇಖಕರ ಕುರಿತು

Rohit Padaki

ಕನ್ನಡದ ಯುವ ಲೇಖಕರಲ್ಲಿ ಒಬ್ಬರು. ದೃಶ್ಯ ಮಾಧ್ಯಮದಲ್ಲಿ ಸಾಕಷ್ಟು ಕಾರ್ಯ ನಿರ್ವಹಿಸಿ ಬಿಗ್ ಬಾಸ್, ವೀಕೆಂಡ್ ವಿತ್ ರಮೇಶ್ ಎಂಬ ಶೋಗಳಿಗೆ ಇವರ ಬರವಣಿಗೆಯಿದೆ. ಇತ್ತೀಚೆಗೆ ಬಿಡುಗಡೆಯಾದ ಆಟಗಾರ ಚಿತ್ರಕ್ಕೆ ಸಂಭಾಷಣೆ ಸಾಹಿತ್ಯ ಇವರದೇ ಆಗಿತ್ತು. ಮೊನಚಾದ ಪದಗಳಿಗೆ ಹೆಸರುವಾಸಿಯಾಗಿರುವ ಇವರ ಬರಹ ಪ್ರಭಾವಶಾಲಿ, ಹಾಗು ಹೊಸತನ ತುಂಬಿರುತ್ತದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!