ಕಥೆ

ಸಂಬಂಧ – 3

ಸಂಬಂಧ – 2

“ಶಂಭುಲಿಂಗೇಶ್ವರ ಶರ್ಮ ಅಂತ”

“ನಿಮ್ಗಿಂತ ನಿಮ್ಮ ಹೆಸರೇ ದೊಡ್ಡ ಇದ್ಯಲ್ಲಾ ಅಂಕಲ್” ತಮಾಷೆ ಮಾಡಿದೆ, ಮೆದುವಾಗಿ ನಕ್ಕರು.

“ನಾನು ಶಿಕ್ಷಣ ಪೂರೈಸಿದ್ದೆಲ್ಲಾ ಮೈಸೂರಲ್ಲೇ. ಯುನಿವರ್ಸಿಟೀಲಿ English Literature ಅಲ್ಲಿ Master’s ಮಾಡ್ದೆ. ಕೊನೆವರ್ಷದಲ್ಲಿರೋವಾಗ ಅಪ್ಪ ತೀರ್ಕೊಂಡ. ಒಂದೈದು ವರ್ಷ ಬಿಟ್ಟು ವಿದ್ವತ್ ಕೂಡಾ ಮುಗಿಸ್ದೆ.”

“ಓ!! ಎಲ್ಲವನ್ನೂ ಜೀರ್ಣಿಸಿಕೊಂಡು ಬಿಟ್ಟಿದ್ದೀರಾ ಅಂಕಲ್!” ಸಾಧಾರಣ ಮನುಷ್ಯನ ಅರಿವಿನಗಲ ಕಂಡು ಅಚ್ಚರಿಯಾಯಿತು. ಹೊರಗಿನ ರೂಪದಿಂದ ಯಾರನ್ನೂ ಅಳೆಯಬಾರದೆನ್ನುವ ವಿಚಾರ ಮತ್ತೊಮ್ಮೆ ಮೆದುಳಿನ ನರ ಸಮೂಹಗಳಿಗೆ ಅಪ್ಪಳಿಸಿತು.

“‘ಎಲ್ಲವನ್ನೂ’ ಅನ್ನೋದು ನಮ್ಮ ಭ್ರಮೆ ಅಷ್ಟೇ ಸಾರ್. ನಾವೆಷ್ಟೇ ಬಾರಿ ಓದಿದ್ರೂ ಕೂಡಾ ಖಲೀಲ್ ಗಿಬ್ರಾನ್‍ನನ್ನೂ, ಕಾರಂತರ ಮೂಕಜ್ಜಿಯನ್ನೂ, ರಮಣರ ‘ನಾನು’ವಿನ ಬೋಧನೆಯನ್ನೂ ತಿಳಿಯೋದು ಕಷ್ಟವೇ. ಪ್ರತೀ ಬಾರಿಗೂ ಬೇರೆ ಬೇರೆ ಅರ್ಥಗಳು ಕಾದಿರ್ತವಲ್ಲಿ. ನಮ್ಮ ಪಕ್ವತೆಯ ಆಧಾರದ ಮೇಲೆ ವಿವಿಧ ಅರ್ಥ ಹೊಳೆಯುತ್ತದಷ್ಟೇ.”

“ಹೌದೌದು ಅಂಕಲ್, ನಾನು ಓದಿರುವ ಪ್ರಕಾರ ‘ಹರ್ಮನ್ ಹೆಸ್’ ಕೂಡಾ ಇದೇ ಸಾಲಿಗೆ ಬರ್ತಾನೆ”

“ಓಹ್… ‘ಸಿದ್ದಾರ್ಥ’ದ ಬಗ್ಗೆ ಹೇಳ್ತಿದ್ದೀಯಾ ನೀನು!! ಹೌದು. ಏನೋ ಅಂದ್ಕೊಂಡಿದ್ದೆ; ತುಂಬಾ ಓದಿದ್ದೀಯಾ ಅನ್ಸುತ್ತೆ” ಮಾತು ಮೆಚ್ಚುಗೆಯ ಹೊಗಳಿಕೆಯಾಯಿತು. ಅಲ್ಲಿಂದ ಎಡೆಬಿಡದೇ ಸಾಗಿದ ನಮ್ಮ ಹರಟೆ ತೇಜಸ್ವಿ, ಅನಂತಮೂರ್ತಿ, ಭೈರಪ್ಪನವರನ್ನೂ ಹಾದು, ಆರ್. ಕೆ. ನಾರಾಯಣ್, ಚಾರ್ಲ್ಸ್ ಡಿಕನ್ಸ್, ವರ್ಜಿನೀಯಾ ವೂಲ್ಫರನ್ನೂ ಸವರಿ, ಓಶೋ, ಪರಮಹಂಸ, ರಮಣರೆಡೆಗೂ ತಲುಪಿತು. ಟೋಲ್ಕೀನ್‍ನ ‘ಲಾರ್ಡ್ ಆಫ಼್ ರಿಂಗ್ಸ್’ ನ ಕೆಲವು ಸಾಲುಗಳು ಬಾಯಿಪಾಠವಾದಂತೆ ನಿರರ್ಗಳವಾಗಿ ಉದ್ಧರಿಸುತ್ತಿದ್ದರು. ಇಪ್ಪತ್ತನೇ ಶತಮಾನದ ಮಹಾಕಾವ್ಯದ ಕರ್ತೃ ಟೋಲ್ಕೀನ್ ಮಹಾಶಯನೆಂದು ಐದಾರು ಬಾರಿಯಾದರೂ ಹೇಳಿದ್ದಿರಬಹುದು. ಹಾರ್ಪರ್ ಲೀಯ ‘ಟು ಕಿಲ್ ಎ ಮೊಕ್ಕಿಂಗ್ ಬರ್ಡ್’ ನಲ್ಲಿ ಸಮಾಪ್ತಿಯಾದ ಮಾತುಕತೆಯ ನಂತರ ಕೆಲವು ಕ್ಷಣಗಳ ಮೌನ ಆವರಿಸಿತು. ಮುಂದೆ ಕುಳಿತಿದ್ದ ಶಂಭುಲಿಂಗೇಶ್ವರರು ದೊಡ್ಡ ಹಸುವಿನಂತೆ ಕಂಡರು – ಈಗ ಮಾತಾಡಿದ್ದೆಲ್ಲವನ್ನೂ ಮೆಲುಕುಹಾಕುತ್ತಿರುವಂತೆ, ಆಗಾಗ ತಮ್ಮ ಪಾಡಿಗೆ ತಾವು ತಲೆಯಲ್ಲಾಡಿಸುತ್ತಾ ಕುಳಿತಿದ್ದರು. ಬಹುಶಃ ನಾನು ಸೇರಬೇಕಾದ ಜಾಗ ಹತ್ತಿರದಲ್ಲೆಲ್ಲೋ ಇರಬಹುದು; ಒಂದೂವರೆ ತಾಸಿಗೂ ಮಿಕ್ಕಿ ಕುಳಿತಿದ್ದೆ.

“ಬಂತಾ ಅಂಕಲ್, ಮಾರತಹಳ್ಳಿ?”

“ಹಾ…. ಇನ್ನೊಂದೈದತ್ತು ನಿಮಿಷ”

ಹತ್ತು ನಿಮಿಷ ಏನಾದರೂ ಮಾತಾಡಬೇಕೆನಿಸಿತು.

“ಈಗಂತೂ ಕನ್ನಡದಲ್ಲಿ ಒಳ್ಳೆಯ ಸಾಹಿತ್ಯವೇ ಬರ್ತಾ ಇಲ್ಲ ಅಲ್ವಾ ಅಂಕಲ್? ಎಲ್ಲಾ ರೈಟ್ ಲೆಫ಼್ಟ್ ಅಂತಾ ವಿಭಜನೆಗೊಂಡೇ ಬರೀತಿದ್ದಾರೆ ಅನ್ಸತ್ತೆ. ಶುದ್ಧ ಸಾಹಿತ್ಯಕ್ಕಾಗಿ ಅಂತ ಬರೆಯುವವರು ಒಬ್ರೂ ಸಿಗಲ್ವೇನೋ!!”

“ಸಮಾಜ ಬದಲಾದ ಹಾಗೆ ಯೋಚನೆ-ಯೋಜನೆಗಳೂ ಬದಲಾಗತ್ವೆ ಸಾರ್. ಹಿಂದಿನವರು ನಮಗೇನು ಕೊಟ್ಟಿದ್ದಾರೋ ಅದನ್ನು ಮುಂದುವರಿಸಿಕೊಂಡು ಹೋಗ್ತಿದ್ದೀವಷ್ಟೇ. ನೀವ್ ಹೇಳ್ತಿದ್ದೀರಲ್ಲಾ, ಸಾಹಿತ್ಯದ ರಾಜಕೀಯಕರಣ ಅಂತಾ, ಇದು ಎಪ್ಪತ್ತು-ಎಂಭತ್ತರ ದಶಕದಲ್ಲೇ ಮೊಳಕೆಯೊಡೆದು ದೊಡ್ಡದಾಗಿದ್ದು. ಚರ್ಚೆ ಮಾಡೋದು ವ್ಯರ್ಥ ಬಿಡಿ” ಮತ್ತೆ ಮೌನಿಯಾದರು. ಮಾತನಾಡುವುದು ಇಷ್ಟವಿರಲಿಲ್ಲವೇನೋ. ಆದರೆ, ಸಮಾನ ಯೋಚನೆಯ ಮನುಷ್ಯರೊಬ್ಬರು ಸಿಕ್ಕರೆ, ಆದಷ್ಟು ಕೆದಕದೇ ಬಿಡುವ ವ್ಯಕ್ತಿಯಲ್ಲ ನಾನು.

“ಇಳಿವಯಸ್ಸನ್ನ ಶೃಂಗೇರಿಯಲ್ಲಿ, ಮಲೆಪರ್ವತಗಳಡಿಯಲ್ಲಿ ಕಳೆಯೋ ಮನಸ್ಸೇನೂ ಇಲ್ವಾ?”

“ಹೇಗೆ ಹೋಗ್ಲಿ ಸಾರ್!!!! ಅಜ್ಜನ ಮೊಮ್ಮಗ ಅಂತ ಹೇಳ್ಕೊಳ್ಳೋ ಇಲ್ಲಾ ಅಪ್ಪನ ಮಗ ಅಂತಾನೋ??? ನಂದೇ ಒಂದು ಸ್ವತಂತ್ರ ವ್ಯಕ್ತಿತ್ವ ಬೆಳೆಸಿಕೊಳ್ಲೇ ಇಲ್ಲ. ಜೀವನ ಇಡೀ ಯಾರು ಸತ್ಯ ಯಾರು ಸುಳ್ಳು? ಅಪ್ಪ ಸೋತಿದ್ದೋ ನಾನೇ ಸೋತಿದ್ದೋ ಅಂತ ಹುಡ್ಕಾಡೋದ್ರಲ್ಲೇ ಕಳೆದುಹೋಯ್ತು”

“ನಿಮ್ಮ ಮಕ್ಳು ಏನ್ಮಾಡ್ತಿದ್ದಾರೆ ಅಂಕಲ್?”

ಕೆಲವು ನಿಮಿಷಗಳ ನಂತರ ನಿಟ್ಟುಸಿರೊಂದನ್ನು ಬಿಟ್ಟು ಮಾತನಾಡತೊಡಗಿದರು.

“ಮಗ್ಳು ಮದ್ವೆಯಾಗಿದ್ದಾಳೆ; ಜರ್ಮನಿಯಲ್ಲಿದ್ದಾಳೆ. ಮಗ, ಇಲ್ಲೇ ವೈಟ್ ಫೀಲ್ಡ್ ನಲ್ಲಿ ಮನೆ ಮಾಡ್ಕೊಂಡಿದಾನೆ. ನಿಮ್ ಥರಾನೇ ಐಟಿ ಕೆಲಸ.”

“ಓ… ವೈಟ್ ಫೀಲ್ಡ್ ಲ್ಲೇನಾ ಆಫೀಸು?”

“ಹಂ….. ಹೌದು ಇರಬಹುದು!!”

“ಹಾಗಾದ್ರೆ ಮನೆಯಿಂದಲೇ ಹೋಗ್ಬಹುದಿತ್ತಲ್ಲಾ ಅಂಕಲ್? ಆರಾಮಾಗಿ ಕಾರಲ್ಲೋ, ಬಸ್ಸಲ್ಲೋ ತಿರುಗಾಡ್ಬಹುದಿತ್ತಲ್ಲಾ.” ಕೇಳುವುದೇನೋ ಕೇಳಿದೆ, ಆಮೇಲನಿಸಿತು – ಇನ್ನೊಬ್ಬರ ಸಂಸಾರದ ವಿಚಾರಗಳು ಸಂಪೂರ್ಣ ಹೊರಗಿನವನಾದ ನನಗೇಕೆ ಬೇಕಿತ್ತು?

“ನನ್ನಪ್ಪನ ಬಗ್ಗೆ ಎಲ್ಲಾ ಹೇಳ್ಬಿಟ್ಟಿದ್ದೀನಿ ಸಾರ್, ಈಗ ಮಕ್ಕಳ ಬಗ್ಗೆ ಮುಚ್ಚಿಟ್ಟರೆ, ನಿಮ್ಮ ಕಣ್ಣಲ್ಲಲ್ಲದಿದ್ದರೂ, ನನ್ನ ಆತ್ಮಸಾಕ್ಷಿಯಲ್ಲಿ ನಾನೊಬ್ಬ ಸುಳ್ಳುಗಾರನಾಗ್ತೇನೆ. ಆದ್ರಿಂದ ಹೇಳಿಬಿಡ್ತೀನಿ. ಮಗಳಿಗೆ ಒಳ್ಳೆ ವರ ಅಂತ ಹುಡುಕಿ ಮದುವೆ ಮಾಡಿದ್ದು ನಾನೇ. ಒಂದೇ ವರ್ಷದ ಬಂಧನ ಅದು. ಅವಳಿಗೇನೇ ಸರಿ ಹೊಂದ್ತಾ ಇರ್ಲಿಲ್ವಂತೆ; ಡೈವೋರ್ಸ್ ಮಾಡಿ ನಾಲ್ಕು ವರ್ಷ ಆಯ್ತು. ಇಷ್ಟೆಲ್ಲಾ ಆದ್ಮೇಲೆ ಎರಡು ವರ್ಷದ ಹಿಂದೆ ಒಂದ್ಸಲ ಬೆಂಗ್ಳೂರಿಗೆ ಬಂದಿದ್ಲು. ತಿಂಗಳೆರಡು ತಿಂಗ್ಳಿಗೆ ಫ಼ೋನ್ ಮಾಡಿ, ಮೂರು ನಿಮಿಷ ಮಾತಾಡ್ತಾಳೆ. ನಾನಿಲ್ಲಿ ಸಂತೋಷವಾಗಿದೀನಿ ಅಂತಾಳೆ; ಡೀಟ್ರಿಚ್ ಅಂತ ಹೆಸ್ರಂತೆ. ಲಿವಿಂಗ್ ಟುಗೆದರ್ ಇರ್ಬೇಕು. ಮಾತೆತ್ತಿದ್ರೆ ‘ನಿಂಗವೆಲ್ಲಾ ಗೊತ್ತಾಗಲ್ಲ ಅಪ್ಪಾ, come out of your Oriental mindset. This is an era of cohabitation and secularization’ ಅಂತಾಳೆ. ಬೀಳ್ತಾ ಇರೋ ಸಂಬಂಧಗಳ ಮನೆಗೆ secularization ಅನ್ನೋ ಪೇಂಟ್ ಹೊಡ್ದು ಹೊಸತು ಮಾಡ್ತೀನಂತ ಹೊರಟ ಹಾಗೆ. You know!! What they call this cohabitation……………. Its nothing but an act of fornication.” ಮಾತಲ್ಲಿ ಉದ್ವೇಗವಿಲ್ಲದಿದ್ದರೂ ಕಟುತನವಿತ್ತು. ಉಸಿರೆಳೆದುಕೊಂಡು ಮುಂದುವರೆಸಿದರು. ನಾನೇನೂ ಮಾತನಾಡಲಿಲ್ಲ.

“And……., ಕೀರ್ತಿಗೊಬ್ಬ ಮಗ. ಮದ್ವೆಗೆ ಹೆಣ್ಣು ಹುಡುಕ್ತೀನಿ ಅಂದಾಗ, ‘ಬೇಡ ಅಪ್ಪಾ, ನಾನೊಬ್ಳನ್ನ ನೋಡಿದೀನಿ’ ಅಂದ. ಸರಿ ಅಂದೆ. ಗುಜರಾತಿ ಹುಡುಗಿ. ನಾನಂತೂ ಜಾತಿ-ಧರ್ಮಗಳನ್ನ ಯಾವತ್ತೂ ನಂಬೋನಲ್ಲ ಸಾರ್. ನನ್ನಪ್ಪ ಒಂದಿಷ್ಟು ಬದುಕಿನ ಮೌಲ್ಯಗಳನ್ನ ಕಲಿಸಿದ್ನಲ್ವಾ. ಪ್ರೀತಿಗೆ ಯಾವ ಜಾತಿಯಾದ್ರೇನು? ಯಾವ ಧರ್ಮವಾದ್ರೇನು? ನೆಂಟರಿಷ್ಟರನ್ನೂ ಕೂಡಾ ಕರೀದೆ ಮದ್ವೆ ಆಯ್ತು. ಅವ್ರದ್ದೇ ಫ್ಲಾಟ್ ತೊಗೊಂಡು ಉಳ್ಕೊಂಡಿದ್ರು. ಶನಿವಾರ ಮತ್ತು ಭಾನುವಾರ ಈ ಮುದುಕನ ಮನೆಗೆ ಬರೋದು. ಆಕೆಯ ನಡವಳಿಕೆಗಳು ನಂಗೆ ಸರಿ ಹೋಗ್ತಿರ್ಲಿಲ್ಲ. ಎರಡೂ ದಿನ living room ಅಲ್ಲಿ ಡ್ರಿಂಕ್ಸ್ ಮಾಡ್ತಾ ಕೂರೋಳು. ಒಂದ್ಸಲ ಮಗನ್ನ ಕರ್ದು ಹೇಳ್ದೆ, ‘ನೋಡಪ್ಪಾ, ಇದು ಸರಿ ಅಲ್ಲ, ನಂಗೆ ಆಗಿಬರಲ್ಲಾ’ ಅಂತ. ಅವ್ನು ಸುಮ್ನಿದ್ದ ಅನ್ಸತ್ತೆ; ಬಹುಶಃ ಹೆಂಡ್ತಿಗೆ ಹೆದರಿಕೊಂಡಿರ್ಬೋದು. ಒಂದಿನ ನಾನೇ ಮಿದುವಾಗಿ ಹೇಳ್ದೆ, “This is not our culture, please change your habbit” ಅಂತ. “Go and fuck with your culture” ಅಂತ, ಕೈಲಿರೋ ಬಾಟಲ್ ನ ಎಸ್ದು ರಾತೋರಾತ್ರಿ ಹೊರಟು ಹೋದ್ಲು. ಅದಾದ್ ಮೇಲೆ ಇಬ್ರೂ ಬಂದಿದ್ದಿಲ್ಲ. ನಾನೂ ಒಂದೆರ್ಡ್ ಸಲ ಕರ್ದೆ – ಎಷ್ಟು ಅಂತ ಕಾಲಿಗೆ ಬೀಳೋದು ಸಾರ್? ಸ್ವಾಭಿಮಾನ ಅಡ್ಡ ಬಂತು.” ನಿಟ್ಟುಸಿರು ಬಿಟ್ಟರು. ಭೂಮಿಯ ಇಂಚಿಂಚನ್ನೂ ಆಕ್ರಮಿಸಿದ ಕಾವಳ, ಉರಿಯುತ್ತಿದ್ದ ನಿಯಾನ್ ಬೆಳಕನ್ನು ಮುಕ್ಕಲು ಕಾದು ಕುಳಿತಂತಿತ್ತು. ಒಂದೆರಡು ಮಾರು ದೂರದಲ್ಲಿ, ನಾ ಸೇರಬೇಕಾದ ಹೋಟೆಲ್ ನ ಬೋರ್ಡು, ರಕ್ತದಲ್ಲದ್ದಿ ತೆಗೆದಂತೆ ಕೆಂಪಾಗಿ ಹೊಳೆಯುತ್ತಿತ್ತು.

“ಬಂತು ನೋಡಿ ಸಾರ್, ನೀವ್ ಹೇಳಿದ ಹೋಟೆಲ್ಲು” ಬಹುಶಃ ಮಾತಿನ ಮಧ್ಯದಲ್ಲೆಲ್ಲೋ ಹೋಟೆಲ್ ಬಗ್ಗೆ ಹೇಳಿದ್ದಿರಬೇಕು. ನಾನಿನ್ನೂ ಶಂಭುಲಿಂಗೇಶ್ವರರ ಜೀವನದ ಘಟನೆಗಳನ್ನು ಮೆಲುಕು ಹಾಕುತ್ತಿದ್ದೆ.

“ಈಗ ಮನೇಲಿ ನೀವು-ಮನೇವ್ರು ಇಬ್ರೇ ಇದೀರಾ?”

“ಅವ್ಳೆಲ್ಲಿದಾಳೆ? ೨೮ ವರ್ಷದ ಹಿಂದೇ ‘ಶಿವಾ ರಾಮಾ’ ಅಂತ ಕೈಲಾಸ ಸೇರ್ಕೊಂಬಿಟ್ಳು”

ಯಾಕಾದರೂ ಪ್ರಶ್ನೆ ಹಾಕಿದೆನೋ ಅನ್ನಿಸಿತು. ತಮ್ಮ ಜೀವನದಲ್ಲಿ ಅದೆಷ್ಟು ನೋವುಗಳ ಸರಮಾಲೆಯನ್ನನುಭವಿಸಿರಬೇಡ?

“ಸ್ಸಾರಿ, ಅಂಕಲ್” ನನ್ನಲ್ಲಿ ನೋವು ಮಡುಗಟ್ಟಿತ್ತು.

“ಅಯ್ಯೋ, ಅದ್ಯಾಕೆ ಸ್ಸಾರಿ ಕೇಳ್ತೀರಾ? ನನ್ನ ಕರ್ಮಗಳ ಫಲವನ್ನು ನಾನು ಅನುಭವಿಸ್ತಿದೀನಿ ಅಷ್ಟೇ. ‘ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನಾ’ !! ಅವ್ನು ಹೇಳಿರೋ ಹಾಗೆ, ಫಲ ಬಯಸದೇ ಕೆಲಸ ಮಾಡೋದೂ ತುಂಬಾ ಕಷ್ಟಾನೇ!” ಹಲ್ಲು ಕಾಣದ ಹಾಗೆ ಮುಗುಳ್ನಕ್ಕರು. ಕನ್ನಡಕದ ಹಿಂದಿನ ಕಣ್ಣುಗಳು ಆಳವಾದ ಬಾವಿಯಲ್ಲಿರುವಂತೆ ಕಂಡವು.

“ನಿಮ್ಮತ್ರ ಮಾತಾಡಿದ್ದು ತುಂಬಾ ಖುಷಿಕೊಡ್ತು ಸಾರ್. ಆಗಾಗ ಬರ್ತಾ ಇರಿ ನಮ್ಮನೆಗೆ; ಒಂಟಿ ಮುದುಕನ ಜೊತೆ ಕೂತು ಸಾಹಿತ್ಯಾನ ಮಂಥಿಸುವಿರಂತೆ” ಹುಬ್ಬು ಹಾರಿಸಿ, ಮುಗುಳ್ನಕ್ಕು ಹೇಳಿದರು.

“ಸರಿ ಅಂಕಲ್, ಬಂದೇ ಬರ್ತೀನಿ” ನಾನಿನ್ನೂ ಯಾವುದೋ ಗುಂಗಿನಲ್ಲಿದ್ದೆ. ಅವರ ಕಣ್ಣುಗಳಲ್ಲಿ ನೀರು ಕಟ್ಟೆ ಕಟ್ಟಿದಂತೆ ಕಾಣಿಸಿತು; ಅಥವಾ ನನ್ನ ಕಣ್ಣಲ್ಲೇನೋ!!! ಗಾಡಿ ತಿರುಗಿಸಿ ಹೊರಟರು. ಬಲಗೈಯಿಂದ ಕಣ್ಣೊರಿಸಿಕೊಂಡಿದ್ದು ಹಿಂದಿನಿಂದ ನನಗೆ ಅಸ್ಪಷ್ಟವಾಗಿ ಕಾಣಿಸಿತು. ಬಹುಶಃ ಪತ್ನಿಯ ನೆನಪಿರಬೇಕು.

ಹೊಟೆಲ್ಲಿನ ರಿಸೆಪ್ಶನ್ ಕೌಂಟರ್ ನಲ್ಲಿ ಚೆಕ್-ಇನ್ ಮಾಡಿಸಿಕೊಂಡೆ. ಆಗಲೂ ಕೂಡಾ ಕಲ್ಪನಾವಿಲಾಸದಿಂದ ಮನಸ್ಸು ಹೊರಬಂದಿರಲಿಲ್ಲ. ಈ ಮನುಷ್ಯನ ಕುರಿತಾಗಿ ಹೇಳತೀರದಷ್ಟು ಅನುಕಂಪ ಉಕ್ಕುಕ್ಕಿ ಬರುತ್ತಿತ್ತು. ರೂಮಿನ ಬೀಗ ತೆಗೆಯುವಾಗ ನೆನಪಾಯಿತು, ‘ಬರ್ತಾ ಇರಿ ನಮ್ಮನೆಗೆ’ ಎಂದು ಹೃದಯಪೂರ್ವಕವಾಗಿ ಕರೆಯುವುದೇನೋ ಕರೆದಿದ್ದರು, ‘ಬಂದೇ ಬರ್ತೀನಿ’ ಎಂದು ಹೇಳುವುದೇನೋ ಹೇಳಿಬಿಟ್ಟಿದ್ದೆ. ಆದರೆ, ವಿಳಾಸ ಕೊಡುವುದನ್ನೂ, ಕೇಳಿ ಪಡೆದುಕೊಳ್ಳುವುದನ್ನೂ ಇಬ್ಬರೂ ಮರೆತಿದ್ದೆವು.

ಮುಗಿಯಿತು..

Facebook ಕಾಮೆಂಟ್ಸ್

ಲೇಖಕರ ಕುರಿತು

Sandeep Hegde

ಭಟ್ಕಳ ತಾಲ್ಲೂಕಿನ ಕೆರೆಹಿತ್ಲು ಗ್ರಾಮದವನಾಗಿದ್ದು, ಮೊದಲ ಹಂತದ ಶಿಕ್ಷಣವನ್ನು ಭಟ್ಕಳ ಮತ್ತು ಬೈಂದೂರಿನಲ್ಲಿ ಮುಗಿಸಿ, ಎಂಜಿನಿಯರಿಂಗ್ ಪದವಿಯನ್ನು ಮೈಸೂರಿನ ಜಯಚಾಮರಾಜೇಂದ್ರ ಕಾಲೇಜಿನಲ್ಲಿ ಪಡೆದು, ಪ್ರಸ್ತುತ M.N.C ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದೇನೆ. ಚಿಕ್ಕಂದಿನಿಂದಲೂ ಜತನದಿಂದ ಉಳಿಸಿಕೊಂಡು ಬಂದ ಅಭ್ಯಾಸವೆಂದರೆ ಓದುವುದು ಮತ್ತು ಬರೆಯುವುದು. ಅರೆಮಲೆನಾಡಿನ ಜನಜೀವನ, ಭಾಷೆ, ಅಭ್ಯಾಸ, ಕೃಷಿ, ಪ್ರೇಮ, ಕಾಮ, ಹಾಸ್ಯ, ಮಣ್ಣು, ನಿಸರ್ಗ ಸೌಂದರ್ಯದ ಕುರಿತಾಗಿ ಹೇಳಲು ಹಾಗೂ ಬರೆಯಲು ಯಾವಾಗಲೂ ಸಿದ್ಧ. ಹತ್ತು ಹಲವು ವಿಚಾರಧಾರೆಗಳ, ವ್ಯಕ್ತಿಗಳ ಸೈದ್ಧಾಂತಿಕ ಧೋರಣೆಗಳನ್ನು ಗಮನಿಸಿ, ಕೊನೆಗೂ ಯಾವುದಕ್ಕೂ ಪಕ್ಕಾಗದೇ ಇರುವ ವ್ಯಕ್ತಿ. ಹಲವಾರು ಕಥೆಗಳು ಮಯೂರ, ತರಂಗ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!