ಕಥೆ

ಸಂಬಂಧ – 2

“ಆಗ್ಲಿಂದ ಗಂಟ್ಲು ಹರಿದು ಹೋಗೋ ಥರ ಕೂಗ್ತಾನೇ ಇದ್ದೀನಿ, ಯಶ್ವಂತ್ಪುರ, ಯಶ್ವಂತ್ಪುರ ಅಂತ. ಮತ್ತೇನ್ ಹೇಳ್ಬೇಕು ನಿಮ್ಗೆ ಸಾರ್? ಕೊಡಿ ಕಾಸು.” ಕಂಡಕ್ಟರನ ಕೂಗಿಗೆ ಹೆದರಿದ ಪಾಪದ ವೃದ್ಧರು ಮುದುಡಿಕೊಂಡರು. ಆದರೆ ಆ ಮಾತುಗಳು ಅಪರೋಕ್ಷವಾಗಿ ಬಿಸಿ ಮುಟ್ಟಿಸಿದ್ದು ನನಗೆ. ತುಂಬಿಕೊಂಡ ಜನರೆದುರು ನಾನೆಲ್ಲಿ, ಬೈಸಿಕೊಂಡು ಅಪಹಾಸ್ಯಕ್ಕೀಡಾಗಬೇಕಾಗುತ್ತೇನೋ ಅನ್ನಿಸಿತು; ಸುಮ್ಮನಾದೆ. ತೆಪ್ಪಗೆ ಯಶ್ವಂತ್ಪುರ ಟಿಕೆಟ್ ತೆಗೆದುಕೊಂಡೆ.

ಬಸ್ಸು ನಿಧಾನವಾಗಿ, ಗಜಗಮನೆಯಂತೆ, ಕುಂಡೆಯನ್ನೆಳೆದುಕೊಳ್ಳುತ್ತಾ ಚಲಿಸಿತು. ಮತ್ತದೇ ತುಂಬಿ ತುಳುಕುವ ರಸ್ತೆ, ‘ಪೀಂ… ಪೋಂ… ಭುರ್ರ್…’ ಎನ್ನುವ ಹಾರ್ನ್ ಶಬ್ದಗಳು, ಕಪ್ಪು ಗೋಡೆಯ ಮೇಲೆ, ಕೆಂಪು ಧೂಳು ಕುಳಿತು ತನ್ನಿಂದ ತಾನೇ ಮೂಡಿದ ಆಬ್‍ಸ್ಟ್ರಾಕ್ಟ್ ಚಿತ್ರ ಕಲೆಯ ತುಣುಕುಗಳು, ಮುಖಕ್ಕೆ ರಾಚಿ ಗಂಟಲೊಳಗೆ ಒಂದು ಥರಹದ ಕಹಿಯ ಅನುಭವ ತರಿಸುವ ಉಚ್ಚೆಯ ವಾಸನೆ. ಭಾರತೀಯ ಪಟ್ಟಣವೊಂದು ಬದಲಾದಂತೆ ತನ್ನ ಮೂಲ ದ್ರವ್ಯಗಳನ್ನು ಕಳೆದುಕೊಳ್ಳಲು ಸಾಧ್ಯವೇ ಇಲ್ಲವೇ? ಯಾವತ್ಕಾಲದಲ್ಲೂ, ಭಯಂಕರ, ಅನಿಶ್ಚಿತತೆಯನ್ನು ರಹಸ್ಯವಾಗಿ ಗರ್ಭೈಸಿಕೊಂಡೇ ಬೆಳೆದಿದೆ ಈ ಬೆಂಗಳೂರು. ಬಯಲೆಲ್ಲವನ್ನೂ ಆವರಿಸಿ, ಮನಬಂದಂತೆ ಬೆಳೆದು, ನೆಮ್ಮದಿಯನ್ನು ಭಸ್ಮವಾಗಿಸಿ, ಆಶಾಂತದೆಡೆಗೆ ತೂರಿಬಿಟ್ಟಿದೆಯೇನೋ. ಸೂರ್ಯನ ಕಿರಣಗಳು ಅದ್ಯಾವ ದಿಕ್ಕಿನಿಂದ ಹಾದು ಬರುತ್ತವೆಂದು ಹೇಳಲಾಗದು. ಊರಿನ ರಸ್ತೆಗಳಲ್ಲಿ ಓಡಾಡುವಾಗ ಕಾಣಬರುವ ಬಸ್ಸಿನ ಗತಿಬಿಂಬ ಇಲ್ಲಿಲ್ಲ. ಬದಲು, ಸುತ್ತಮುತ್ತಲಲ್ಲಿ ನೆರಳಿಲ್ಲದೇ ಚಲಿಸುವ ವಿಧವಿಧ ವಾಹನಗಳು.

ಅದ್ಯಾವ ಸಮಯದಲ್ಲಿ ಪಕ್ಕ ಕುಳಿತಿದ್ದ ‘ಕಲಾವಿದ’ ಎದ್ದು ಹೋಗಿದ್ದನೋ ಗೊತ್ತಿಲ್ಲ; ನೋಡುತ್ತೇನೆ ಬಸ್ ಪೂರ್ತಿ ಖಾಲಿಯಾಗಿದೆ. ಅಲ್ಲಲ್ಲಿ ಒಂದಿಬ್ಬರು ಪ್ರಯಾಣಿಕರಷ್ಟೇ. ನನ್ನ ಗಂತವ್ಯಸ್ಥಳ ಬಂತೆಂಬುದರ ಸೂಚಕವಾಗಿ, ಸುಕೋಮಲ ಧ್ವನಿಯೊಂದು, “ನೆಕ್ಟ್ಸ್ ಸ್ಟಾಪ್ ಈಸ್ ಯಶ್ವಂತ್ಪುರ.” ಎಂದು ಉಲಿಯಿತು. ಕೈ ಗಡಿಯಾರ ನೋಡಿಕೊಂಡೆ. ಅರೆ! ಐದೂವರೆ; ಬಸ್ಸಿನಲ್ಲಿ ಸುಮಾರು ಮುಕ್ಕಾಲು ತಾಸು ಕೂತಿದ್ದೆ; ಯಾವ್ಯಾವುದೋ ಯೋಚನೆಯಲ್ಲಿ ಸಮಯ ಸಂದಿದ್ದೇ ತಿಳಿಯಲಿಲ್ಲ. ಕಂಡಕ್ಟರ್ ಸ್ವಲ್ಪ ಪ್ರಸನ್ನವದನನಾಗಿದ್ದಂತೆ ಕಂಡ. ಮೆಲ್ಲಗೆ, ಸಣ್ಣ ಸ್ವರದಲ್ಲಿ, “ಸರ್ ಇಲ್ಲಿ ಇಳ್ದು, ಮಾರತಹಳ್ಳಿ ಕಡೆ ಹೋಗೋದ್ ಹೇಗೆ?” ಎಂದು ಕೇಳಿದೆನಷ್ಟೇ. ಬಸ್ಸಿನ ಯಾವ ಮೂಲೆಯಲ್ಲಿ ಕುಳಿತಿದ್ದನೇನೋ, ಒಮ್ಮೇಲೆ ಆತನ ದೇಹದಲ್ಲಿ ಆಹ್ವಾಹನೆಯಾಗಿಬಿಟ್ಟ ನರಸಿಂಹ ಪ್ರಭು.

“ಎಂಥಾ ಜನಾರೀ ನೀವು! ಮಾರತಹಳ್ಳಿ ಇರೋದು ಆ ಕಡೆ; ಯಶವಂತಪುರ ಇರೋದು ಈ ಕಡೆ. ಅದ್ಯಾರ ಕೇಳ್ಕೊಂಡ ಬಂದ್ರಿ ಇಲ್ಗೆ? ಬಸ್ಸಲ್ಲಿ ಕೂತಿದ್ದಾಗ ಒಂದ್ ಮಾತ್ ಕೇಳ್ಬಾರ್ದಿತ್ತಾ ನನ್ಹತ್ರ? ಒಳ್ಳೆ ದೆವ್ವದ ಥರ ಹಿಂದೆ-ಮುಂದೆ ಸುತ್ತಾಡ್ತಿದ್ದೆ. (ನನ್ನಾಣೆ ಆತ ಮಾತಾಡಿದ್ದು ಹೀಗೆಯೇ!) ಹೋಗಿ ಇಳ್ಕೊಳ್ಳಿ, ವಾಪಾಸು ಮೆಜೆಸ್ಟಿಕ್ ಕಡೆ ಹೋಗಿ. ಎಲ್ಲಿಂದ ಬರ್ತಾರೋ ಇವ್ರುಗಳು??” ಧುಮುಧುಮುಗುಡುತ್ತಾ ಬಸ್ಸಿನ ಮುಂದಿನ ಸೀಟಿನಲ್ಲಿ ಹೋಗಿ ಕುಳಿತ. ಕಂಗಾಲಾದೆ. ಹಿಂದೆ-ಮುಂದೆ ತಿಳಿಯದ ಊರೊಂದರಲ್ಲಿ ನನ್ನನ್ನು ತೋಡಾಕಿದ ಬಸ್ಸು, ಕಪ್ಪನೆಯ ಹೊಗೆ ಬಿಡುತ್ತಾ ಹೊರಟು ಹೋಯಿತು.

ಯಶವಂತಪುರದ ವಾಹನ-ಸಮುದ್ರದ ರೋಡಿಗೆದುರಾರಿ, ಜೊತೆಗಾರರಿಲ್ಲದೇ ಒಬ್ಬಾನೊಬ್ಬ ನಿಂತಿದ್ದ ನನಗೆ, ಹಿಂದೆ ಮುಂದೆ ತಿರುಗಾಡುವವರೆಲ್ಲಾ, ಹಾಯ್ ಬೆಂಗಳೂರು, ಕ್ರೈಂ ಡೈರಿಯಲ್ಲಿ ಸುದ್ದಿಯಾಗುವ ಚೈನ್ ಚಿಕ್ಕಣ್ಣ, ಲಾಂಗ್ ಲಿಂಗಪ್ಪ, ಮಚ್ಚಿನ ಮಹಾದೇವಿಯರಂತೆ ಕಂಡರು. ಪ್ರಾಂಜ್ ಕಾಫ್ಕನ ‘ಮೆಟಾಮಾರ್ಫೊಸಿಸ್’ ನಲ್ಲಿ ಬರುವ ಗ್ರೆಗರ್ ಸಾಂಸನಿಗೂ ನನಗೂ ಯಾವುದೂ ವ್ಯತ್ಯಾಸವಿಲ್ಲವೇನೋ ಅನಿಸಿತು. ಮುಂದೇನು ಮಾಡಬೇಕೆಂದು ತಿಳಿಯದೇ ಅಸಹಾಯಕನಾಗಿ ನಿಂತಿದ್ದ ನಾನು, ಸುತ್ತಲಿದ್ದವರಿಗೆಲ್ಲಾ ಸಾವಿರಾರು ಕಾಲುಗಳ, ರಾಕ್ಷಸ ತಲೆಯ ವಿಚಿತ್ರ ಹುಳದಂತೆ ಕಾಣಿಸುತ್ತಿದ್ದೆನೇನೋ. ನೋಡುವವರ ಮುಖದಲ್ಲಿ ಅನೂಹ್ಯ ಅನುಮಾನವೊಂದು ಮನೆ ಮಾಡಿತ್ತು. ಗ್ರೆಗರ್ ಹಾಸಿಗೆಯಿಂದೆದ್ದಾಗ ಅದ್ಯಾವ ಪರಿಯ ಅಚ್ಚರಿ, ಉದ್ವೇಗ, ಆತಂಕಗಳನ್ನು ಅನುಭವಿಸಿದ್ದನೋ, ಅದಕ್ಕಿಂತ ಕಮ್ಮಿಯದ್ದೇನಾಗಿರಲಿಲ್ಲ ನನ್ನ ಪರಿಸ್ಥಿತಿ. ಎಲ್ಲರೂ ಕೇಕೆ ಹಾಕಿ ಹಾರುತ್ತಿದಾರೆ; ನಮಗೂ ರೆಕ್ಕೆಗಳಿವೆ, ಗುರಿಯೊಂದಿದೆ ಎಂದು. ವಿಶಾಲ ಹುಲ್ಲುಗಾವಲ ಮಧ್ಯ ನಿಂತ ಒಂಟಿ ಕುರಿಯಾಗಿಬಿಟ್ಟೆನಲ್ಲಾ! ಅದೋ, ಲೋನ್ಲಿ ಮೌಂಟೆನ್ ನಲ್ಲಿ ವಾಸಿಸುವ ಬ್ರಹತ್ ಡ್ರಾಗನ್ ಬೆಂಕಿಯುಗುಳುತ್ತಾ ಬರುತ್ತಿದೆ. ಇನ್ನರೆಕ್ಷಣವಷ್ಟೇ. ಅಗ್ನಿಯ ಕೆನ್ನಾಲಿಗೆಗೋ, ಅಥವಾ ಡ್ರಾಗನ್ನಿನ ಚೂಪನೆಯ ಹಲ್ಲುಗಳಿಗೋ ಸಿಕ್ಕು ಸಾಯುತ್ತೇನೆ. ಅದ್ಯಾವುದೋ ಮೂಲೆಯಿಂದ ಉದ್ದನೆಯ ಲಾಂಗ್ ಒಂದು ತೂರಿಬರುತ್ತಿದೆ;

ಕತ್ತರಿಸಿಬಿಡಬಹುದು ರುಂಡವನ್ನು. ಎದುರಿನ ರಸ್ತೆ ದಾಟಿ ಬಾಲಕನೊಬ್ಬ ಓಡಿ ಬರುತ್ತಿದ್ದಾನೆ. ಆತನ ಕೈಯಲ್ಲಿರುವುದೇನು? ಅರ್ಧ ಮೊಳದ ಚಾಕು! ಹೊಟ್ಟೆಯಲ್ಲಿ ತೂರಿಸಿ, ಬಟನ್ ಒತ್ತಿಬಿಟ್ಟರಾಯಿತು. ಒಳಗೆ ಚಕ್ರವೊಂದು ಬಿಚ್ಚಿಕೊಂಡು, ಗರಗರನೆ ತಿರುಗಿ, ಕರುಳನ್ನೆಲ್ಲಾ ಕತ್ತರಿಸಿ, ಗೊಜ್ಜು ಮಾಡಿಬಿಡುತ್ತದೆಂದು ಕೇಳಿದ ನೆನಪು. ತಲೆಸುತ್ತಿದಂತಾಗಿ ಕಣ್ಣುಮುಚ್ಚಿದೆ. ಹೊನ್ನಾವರದ ಕರಿಕಾನ ಪರಮೇಶ್ವರಿಯೇ ಕಾಪಾಡಬೇಕು.

“ಪೋಂ… ಪೋಂ…” ಶಬ್ದ ಮಾಡುತ್ತಾ ಸೈಕಲ್ಲಿನಲ್ಲಿ ಬಂದ ಬಾಲಕನೊಬ್ಬ ತೀರಾ ಮೈಮೇಲೆ ಹಾಯಿಸುವಷ್ಟು ಅಂತರದಲ್ಲಿ ಚಲಿಸಿ ಹೋದ. ಧಗ್ಗನೆ ತಲೆಕೊಡವಿ ವಾಸ್ತವಕ್ಕೆ ಬಂದೆ. ಹಿಂಭಾಗದಲ್ಲಿದ್ದ ಅಂಗಡಿ ಸಾಲುಗಳೆದುರು ಸ್ವಲ್ಪ ಹಳೆಯದೇ ಎನ್ನಬಹುದಾದ ಬೈಕಿನಿಂದ ವ್ಯಕ್ತಿಯೊಬ್ಬ ಇಳಿಯುತ್ತಿದ್ದ. ಸುಮಾರು ಅರವತೈದು-ಎಪ್ಪತ್ತರ ಇಳಿವಯಸ್ಸು. ಬಳಿಸಾರಿ ಕೇಳಿದೆ, “ಅಂಕಲ್, ಮಾರತಹಳ್ಳಿಗೆ ಹೋಗಬೇಕಿತ್ತು, ಯಾವ ಕಡೆ ಅಂತಾ….???”

ಅಚ್ಚರಿಯಾಗಿರಬಹುದು, ನನ್ನನ್ನು ಅಡಿಯಿಂದ ಮುಡಿಯವರೆಗೆ ಎಂಬಂತೆ ಸೂಕ್ಷ್ಮವಾಗಿ ನೋಡಿದರು. “ಅಲ್ಲಿ ಹೋಗೋರು, ಇಲ್ಲಿ ಯಾಕೆ ಬಂದ್ರಿ ಸಾರ್?” ಪ್ರಶ್ನೆಯಲ್ಲಿ ಪ್ರಕೃತಿ ಸ್ವಭಾವದ ಗದರಿಕೆಯ ಧ್ವನಿಯಿತ್ತು.

“ಹೂಂ ಅಂಕಲ್, ಇನ್ನೊಬ್ರ ಮಾತು ಕೇಳ್ಕೊಂಡು ಬಸ್ ಹತ್ದೆ. ಮೊಬೈಲ್ ಬೇರೆ ಸ್ವಿಚ್ ಆಫ್ ಆಗಿತ್ತು.” ಅಸಹಾಯಕತೆಯನ್ನು ತೋರಿಸುವುದು ಅನಿವಾರ್ಯವಾಗಿತ್ತು.

“ಒಂದೆರಡು ನಿಮಿಷ ಕಾಯೋದಾದ್ರೆ ಇರಿ; ನಾನೂ ಮಾರತಹಳ್ಳಿ ಕಡೆಗೇ ಹೋಗ್ತಾ ಇದ್ದೀನಿ. ಗಾಡಿಯಲ್ಲಿ ಹೊಗ್ಬಹುದು.” ಅರಸುತ್ತಿದ್ದ ಬಳ್ಳಿ ಕಾಲಿಗೇ ತೊಡರಿತು ಅಂತಾರಲ್ಲಾ, ಹಾಗಾಯ್ತು.

“ಸರಿ ಅಂಕಲ್” ಎಂದೆ.
ಮರುಕ್ಷಣವೇ ಅನುಮಾನವೊಂದು ಬಾಧಿಸಿತು. ಒಪ್ಪಿಕೊಂಡು ಬಿಟ್ಟಿದ್ದೆ. ಈ ಮನುಷ್ಯನೂ ಸಹಾ ನಗರದ ಇನ್ನೊಂದು ಮೂಲೆಗೆ ನನ್ನನ್ನು ಕೊಂಡೊಯ್ದು ಬಿಟ್ಟರೆ? ಕೆಲವು ಸಮಯಗಳೇ ಹಾಗೆ. ಅಸಹಾಯಕತೆಯೇ ಮಾನವನನ್ನು ಬದುಕಿರುವಂತೆ ಮಾಡುವ, ಮುಂಬರುವ ಘಟನೆಗಳನ್ನು ಎದುರಿಸಲು ತಯಾರಾಗಿಸುವ ಯಂತ್ರ. ದಿಗಿಲು-ಧೈರ್ಯ, ನೋವು-ಬದುಕು, ಕಹಿ-ಸಿಹಿಗಳಿಲ್ಲದೇ ಹೋದಲ್ಲಿ ಜೀವನದ ಶೂನ್ಯ ಬೀಕರತೆಗೆ ತುತ್ತಾಗಿ ಮಾನವ ಅದ್ಯಾವತ್ತೋ ನಶಿಸಿಹೋಗುತ್ತಿದ್ದ. ಅಡೆತಡೆಯಿಲ್ಲದೇ ತಿರುಗುವ ಗಾಣಕ್ಕೆ ಕಬ್ಬು ಸಿಕ್ಕಾಗ, ಎತ್ತುಗಳು ಕಷ್ಟಪಟ್ಟರೂ ಸಿಗುವುದು ಸಿಹಿಯಾದ ಹಾಲು-ಬೆಲ್ಲ. ಅಡಚಣೆಯುಂಟು ಮಾಡುವ ಕಬ್ಬಿಲ್ಲದೇ ಹೋದಲ್ಲಿ ಗಾಣಕ್ಕೆಲ್ಲಿಯ ಅಸ್ತಿತ್ವ?(ಅದರಿಂದ ಎತ್ತಿಗೇನು ಲಾಭ ಎಂಬ ಶುದ್ಧ ತರ್ಕಶಾಸ್ತ್ರದ ಪ್ರಶ್ನೆಯೊಂದನ್ನು ಮಾತ್ರ ಹಾಕಬೇಡಿ)

“ಹಂ… ಹೋಗೋಣ್ವಾ..?” ಪುಟ್ಟ ಚೀಲದೊಂದಿಗೆ ಬಂದವರು, ನನ್ನ ಪ್ರತ್ಯುತ್ತರಕ್ಕೂ ಕಾಯದೇ ಗಾಡಿಯನ್ನು ಹೊರತೆಗೆದು, ಹತ್ತಿ ಕುಳಿತರು. ‘ಮಂಗನ ಹಿಂದೊಂದು ಬಾಲ’ ಎಂಬಂತೆ ಸುಮ್ಮನೆ ಹತ್ತಿ ಕುಳಿತೆ. ಮುಸ್ಸಂಜೆಯ ಹೊತ್ತಲ್ಲಿ, ನಗರದ ಕೃತಕ ಬೆಳಕುಗಳ ಸಾಲಿನ ನಡುವೆ, ಇರುವೆಯಂತೆ ಚಲಿಸುವ ವಾಹನಗಳ ಹಿಂದೆ, ಕ್ಷಣಾರ್ಧದಲ್ಲಿ ಸೇರಿ ಹೋದೆವು.

“ಹೊಸಬ್ರಾ ಬೆಂಗಳೂರಿಗೆ?”

“ಇಲ್ಲಾ ಅಂಕಲ್ ಮೂರು ವರ್ಷದ ಹಿಂದೆ ಬಂದಿದ್ದೆ.”

“ಹಂಗಾದ್ರೆ ಹೊಸಬ್ರೇ ಬಿಡಿ.”

“ಯಾಕ್ ಅಂಕಲ್! ಹಾಗಂತೀರಾ?”

“ದಿನದಿನಕ್ಕೂ ಬದಲಾಗತ್ತೆ ಸಾರ್ ಬೆಂಗಳೂರು. ಇವತ್ತಿನ ಮನೆಗಳು ನಾಳೆಗಿಲ್ಲ. ಕಣ್ಣುಮುಚ್ಚಿ ತೆಗೆಯುವುದರೊಳಗೆ ಬಯಲು ಗಗನಾನ ಮುಟ್ಟಿರತ್ತೆ.” ನಿಧಾನವಾಗಿ ಯೋಚಿಸಿ, ಹೃದಯದಾಳದಿಂದ ಆಡುವ ಮಾತವರದ್ದು.

“ಹಂ” ಎಂದೆ. ಮಾತನ್ನು ಮುಂದುವರಿಸಬೇಕೋ ಬೇಡವೋ ತಿಳಿಯಲಿಲ್ಲ. ಮೌನವಾದೆ. ಟ್ರಾಫಿಕ್ಕಿನ ಬಾಲದಲ್ಲಿ ಸಿಕ್ಕಿಕೊಂಡಿದ್ದರಿಂದ ಅದುವರೆಗೆ ಓಡುತ್ತಿದ್ದ ಗಾಡಿ ನಿಧಾನವಾಗಿ ಒಂದೆಡೆ ಸ್ತಬ್ಧವಾಯಿತು. ಪಕ್ಕದಲ್ಲಿದ್ದ ಫ಼ುಟ್‍ಪಾತಿನ ಮೇಲೆ ತೆರೆದಿದ್ದ ಗೂಡಂಗಡಿಯಿಂದ ಚಿಕನ್ನಿನ ಕೆಟ್ಟವಾಸನೆ ಮೂಗಿಗೆ ರಾಚುತ್ತಿತ್ತು. ಬಲಗೈಯಿಂದ ಮೂಗು-ಬಾಯಿ ಎರಡನ್ನೂ ಬಲವಾಗಿ ಒತ್ತಿ ಹಿಡಿದೆ. ಕೈಚಾಚಿದರೆ ಸಿಗುವಷ್ಟು ಸಮೀಪದಲ್ಲಿತ್ತು ಅಂಗಡಿ. ಮಸಾಲೆಯೊಂದಿಗೆ ಮಾಂಸವನ್ನೂ ಕರಿಯುವಾಗ ಹೊರಸೂಸುವ ವಾಸನೆ ಆಗಿಬರುವುದಿಲ್ಲ. ಹತ್ತು ಸೆಕೆಂಡುಗಳ ಕಾಲ ತಾಳಿಕೊಂಡಿದ್ದೆನೇನೋ. “ಅಂಕಲ್, ಹಾಗೆ ಸ್ವಲ್ಪ ಮುಂದೆ ಹಾಕ್ತೀರಾ ಬೈಕನ್ನ. ಸ್ಮೆಲ್ ತುಂಬಾ ಕಟು ಇದೆ. ತಡಕೊಳ್ಳೋಕೆ ಆಗ್ತಿಲ್ಲ” ದೈನ್ಯದಿಂದ ಕೇಳಿದೆ. ಸಂದಿಗೊಂದಿಗಳಲ್ಲಿ ನುಗ್ಗಿಸಿ ಎರಡುಮಾರು ಮುಂದೆ ತಂದು ನಿಲ್ಲಿಸಿದರು.

“ಬ್ರಾಹ್ಮಣರಾ?”

“ಏನ್ ಅಂಕಲ್?” ಡುರ್ರ್ ಡುರ್ರ್ ಎನ್ನುವ ನೂರು ಶಬ್ದಗಳ ನಡುವೆ ಅವರೇನೆಂದರೋ ಕೇಳಿಸಲಿಲ್ಲ.

“ಬ್ರಾಹ್ಮಣರಾ?ಎಂದು ಕೇಳ್ದೆ”

“ಹಂ, ಹೌದು ಅಂಕಲ್” ‘ವಾಸನಾ ಮೂಲ’ದಿಂದ ಜಾತಿಯ ವಾಸನೆ ಹೊಡೆದಿರುವುದು ಸಹಜ. ನಮ್ಮ ನಡುವೆ ಸ್ವಲ್ಪ ಸಮಯಗಳ ಕಾಲ ಮೌನ ಮನೆ ಮಾಡಿತ್ತು. ತೊಂಬತ್ತು ದಶಕಗಳ ಕೆಲವು ಮನೆಗಳ ನಡುವೆ, ನವಯುಗದ ಹತ್ತಾರು ಮಹಡಿಯ ಕಟ್ಟಡಗಳು ಸೊಡ್ಡನ್ನೆತ್ತಿ ನಿಂತಿದ್ದವು. ರಸ್ತೆಯಲ್ಲಿ ಕೃತಕವಾಗಿ ನಿರ್ಮಿಸಿದ ಉಬ್ಬುತಗ್ಗುಗಳಿದ್ದವೆಂದು ಅನಿಸುತ್ತದೆ; ಆಗಾಗ ಬೈಕು ಏರಿಳಿಯುತ್ತಿತ್ತು.

“ಯಾವೂರು ನಿಮ್ದು?” ಅವರಿಗೂ ಸಹ ಮೌನ ಅಸಹನೀಯವೆನ್ನಿಸಿದ್ದಿರಬೇಕು. ಮನುಷ್ಯ ಒಂಟಿಯಾಗಿ ಏನನ್ನೂ ಮಾಡಲಾರನೇನೋ. ಬಲ್ಲವರು ಹೇಳಿದ್ದನ್ನು ಕೇಳಿದ್ದೇನೆ. ‘ವೇಗವಾಗಿ ಪ್ರಯಾಣಿಸಬೇಕೆಂದರೆ ಒಂಟಿಯಾಗಿರು, ಬಲುದೂರದ ಪ್ರಯಾಣಕ್ಕೆ ಗುಂಪಲ್ಲಿರು’ ಎಂದು. ಬಹುಶಃ ದೂರಪ್ರಯಾಣವನ್ನು ವೇಗವಾಗಿ ಕ್ರಮಿಸಿದ ಒಂಟಿ ಮನುಷ್ಯ ಸಿಗಲಾರ. ಮಾತು….ಮಾತು…..ಮಾತು. ಮಾತಿನಿಂದಲೇ ಒಣಜೀವನ ಹಸಿರಾಗಿದೆಯೆನ್ನಲೂಬಹುದು.

“ಉತ್ತರಕನ್ನಡ; ಭಟ್ಕಳ ತಾಲ್ಲೂಕು. ನೀವು ಇಲ್ಲಿಯವರೇ ಇರಬೇಕು.” ನನಗೇನೂ ತಿಳಿದುಕೊಳ್ಳುವ ಕುತೂಹಲವಿರಲಿಲ್ಲ, ಮಾತು ನಡೆಸುವ ಪರಿಯಷ್ಟೇ.

“ಹೋ… ಹಾಗಾದರೆ ಹವ್ಯಕರಿರಬೇಕು?” ನಾ ಕೇಳಿದ ಪ್ರಶ್ನೆಗೆ ಉತ್ತರಿಸುವ ಬದಲು ಇನ್ನೊಂದು ಪ್ರಶ್ನೆ ಹಾಕಿದರು. “ಹವ್ಯಕ” ಶಬ್ದ ಕೇಳಿದ್ದೇ ನನ್ನಲ್ಲೂ ಕುತೂಹಲದ ಸಣ್ಣ ಸೆಲೆ ಮೊಳೆಯಿತು.

“ಹೌದು, ಅಂಕಲ್”

“ನಾವು ಮೂಲತಃ ಶೃಂಗೇರಿಯವರು. ತಾತ ಆಗಿನ ಕಾಲದಲ್ಲಿ ಶೃಂಗೇರಿಯ ಪ್ರಮುಖ ವಿದ್ವಾಂಸರಾಗಿದ್ರು. ಭುಜಂಗಶರ್ಮರ ಬಗ್ಗೆ ಈಗಲೂ ಊರಿನ ಹಿರಿತಲೆಗಳು ಮಾತಾಡಿಕೊಳ್ತಾರೆ. ಶಾಸ್ತ್ರ ವಿಚಾರದಲ್ಲಿ ಮಹಾ ಪಂಡಿತರಾಗಿದ್ರಂತೆ. ಕಾಶಿಯಲ್ಲಿ ನಡೆದಿದ್ದ ವಿದ್ವತ್ ಸಮಾವೇಶದಲ್ಲಿ ಪಂಚಾಯತನ ಪೂಜಾ ವಿಧಾನದ ಕುರಿತು ಮಂಡಿಸಿದ ವಾದದೆದುರು ಯಾರೂ ಸೊಲ್ಲೆತ್ತಲಿಲ್ಲವಂತೆ. ಆಗವರು ಪಡೆದ ಜರಿಶಾಲು ಈಗಲೂ ನನ್ನ ಬಳಿಯೇ ಇದೆ.” ತಮ್ಮ ವಂಶದ ಮೇಲೆ ಹೇಳತೀರದ ಅಭಿಮಾನವಿತ್ತವರಲ್ಲಿ. ಇಷ್ಟು ಸಮಯ ಗಮನಿಸಿರಲೇ ಇಲ್ಲ; ಹಣೆಯ ಮೇಲಿನ ಮೂರು ಗೆರೆಯ ಭಸ್ಮದ ಗುರುತು ಅಲ್ಲಲ್ಲಿ ಅಳಿಸಿದ್ದರೂ ಕೂಡಾ, ಹತ್ತಿರದಿಂದ ಕಾಣಿಸುತ್ತಿತ್ತು. ಹುಬ್ಬುಗಳ ಮಧ್ಯದಲ್ಲಿದ್ದ ಕುಂಕುಮ ಬೇರೆ. ನಿಯಮಿತವಾಗಿ ಅನುಷ್ಠಾನ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರಬಹುದು. ನಗರದಲ್ಲೂ ಇಂಥ ವ್ಯಕ್ತಿಗಳಿರುವುದು ಅಚ್ಚರಿಯ ವಿಷಯವೇ ಸರಿ.

“ಓ, ಹೌದೇ!!! ನೀವು ಹೆಮ್ಮೆಪಟ್ಟುಕೊಳ್ಳುವಂತ ವಿಷಯವೇ ಬಿಡಿ” ಎಂದೆ.

“ಎಂಥಾ ಹೆಮ್ಮೆಯೋ ಏನೋ! ನಮ್ಮಪ್ಪನ ಕಾಲಕ್ಕೆ ಎಲ್ಲಾ ದಿವಾಳಿ ಎದ್ದು ಹೋಯ್ತು. ಹುಟ್ಟು ಕ್ರಾಂತಿಕಾರಿ ಆತ. ಐವತ್ತರ ದಶಕದಲ್ಲಿ, ಗಾಂಧಿ-ಮಾರ್ಕ್ಸ್ ಸಿದ್ಧಾಂತಗಳು ಹಬ್ತಾ ಇರೋವಾಗ, ಊರಿನ ಇತರರೊಂದಿಗೆ ಕೂತು ಸಹಪಂಕ್ತಿ ಭೋಜನ ಮಾಡ್ತೇನೆ ಅಂದಾಗ ಒಂದಿಬ್ಬರು ಹಿರಿಯರೆನಿಸಿಕೊಂಡವರು ಒದ್ದು ಊರಿಂದ ಅಟ್ಟಿದರಂತೆ. ಗಾಂಧಿವಾದದ ಜೊತೆಗೆ ವೈದಿಕ ಅಭ್ಯಾಸವೂ ಆಗಿತ್ತು ಅಪ್ಪನಿಗೆ. ಅದೇನೋ ಅಂತಾರಲ್ಲಾ ಸಾರ್! ‘Know your enemy before battle’ ಅಂತ. ವೈದಿಕ ಗ್ರಂಥಗಳೆಲ್ಲವನ್ನೂ ಆದಷ್ಟೂ ತಿರುಚಿ ತಿರುಚಿ ತನಗೆ ಬೇಕಾದ ಹಾಗೆ ಬಳಸಿಕೊಂಡು ಭಾಷಣ ಮಾಡುತ್ತಿದ್ದ.ಆತನ ಮಾತಿನಲ್ಲಿ ಒಂಥರಾ ಚುಂಬಕದ ಶಕ್ತಿ ಇತ್ತು ಸಾರ್. ನಮ್ಮಲ್ಲಿ ಏನಾದ್ರೂ ಕೆಲಸ ಹೇಳ್ಬೇಕೆಂದ್ರೂನೂ, ಸುತ್ತಿನ ಬಳಸೀ ಬಂದು ನಯವಾಗಿ ಬೆಣ್ಣೆಯಲ್ಲಿನ ಕೂದಲು ತೆಗೆದಂತೆ ಹೇಳ್ತಿದ್ದ. ಅಮ್ಮ ಅಂತೂ ಅಪ್ಪನಿಗೆ ತದ್ವಿರುದ್ಧ. ವಾರದ ಪ್ರತೀ ದಿನಕ್ಕೂ ಒಂದೊಂದು ದೇವಸ್ಥಾನ. ಅವರು ಅದು ಹೇಗೆ ಹೊಂದಾಣಿಕೆಯಿಂದ ಬಾಳಿದ್ರೂಂತ ಈಗ್ಲೂ ಆಶ್ಚರ್ಯವಾಗತ್ತೆ ನಂಗೆ.” ಯಾವುದೇ ಗಟ್ಟಿ-ಮೃದು ಸ್ವರಗಳಿಲ್ಲದೇ, ಒಂದೇ ಧಾಟಿಯಿಂದ ಮಾತನಾಡುತ್ತಿದ್ದರವರು.

“ನಿಮ್ಮ ತಂದೆಯವ್ರು ಶೃಂಗೇರಿ ಬಿಟ್ಟ ಮೇಲೆ ಎಲ್ಲಿ ಹೋದ್ರು?” ಕುತೂಹಲ ತಡೆಯಲಾಗಲಿಲ್ಲ.

“ಮೈಸೂರಿಗೆ ಬಂದ್ರು. ಬರಿಗೈಯಲ್ಲಿ ಬಂದ್ರೂ ಸಹಾ ತಲೆಯೊಳ್ಗೆ, ಮೂಟೆಗಟ್ಲೆ ಜ್ಞಾನ ಇತ್ತಲ್ಲಾ. ಅದೆಷ್ಟು ಬೇಗ ಪ್ರಸಿದ್ಧಿಯಾದ್ರು ಅಂದ್ರೆ ವರ್ಷಾಂತ್ಯದೊಳಗೆ ಮೈಸೂರಿನ ಯಾವ ವ್ಯಕ್ತಿಯ ಬಳಿ ಕೇಳಿದ್ರೂ ಶ್ರೀಪತಿರಾಯರ ಸುದ್ದಿಗಳು ಗೊತ್ತಾಗ್ತಿದ್ವಂತೆ. ಅದೂ ಇದೂ ಚಳುವಳಿ-ಧರಣಿ; ಪೇಪರಲ್ಲಿ ಕಟುವಾಗಿ ಬರೋ ಲೇಖನಗಳು. ಮನುಷ್ಯ ಏರುಭೂಮಿಕೆಯಲ್ಲಿದ್ದಾಗ ಎಲ್ರೂ ಗುರ್ತಿಸ್ತಾರೆ ನೋಡಿ.” ಬಹುವಚನಕ್ಕೆ ತಿರುಗಿದ ಅವರ ಮಾತುಗಳು ಅದೇ ಮೊದಲ ಬಾರಿಗೆ ಸ್ವಲ್ಪಮಟ್ಟಿಗೆ ಕಾವ್ಯಮಯವಾಗಿದೆ ಅನ್ನಿಸಿತು.

“ಯಾಕ್ ಅಂಕಲ್, ಹಾಗಂತೀರಾ?”
“ಇನ್ನೇನು, ಹಳೆ ಬಂಧುಗಳನ್ನು, ರಕ್ತ ಸಂಬಂಧದವ್ರನ್ನು ಕೈಯ್ಯಾರೆ ಕಳ್ಕೊಂಡ್ರು. ಅವ್ರ ಬಾಯಿ ಹಾಗಿತ್ತಲ್ಲಾ! ‘ವೈದಿಕ ಕುಲ ಘಾತುಕ’ ಅನ್ನೋ ಬಿರುದು ಬೇರೆ ಅಂಟಿಕೊಂಡಿತ್ತು. ಸರಕಾರದಿಂದ ಒಂದೆರಡು ಪ್ರಶಸ್ತಿಗಳನ್ನೂ ಹೊಡ್ಕೊಂಡ್ರು ಅನ್ನಿ! ಆದ್ರೂ, ಸಾಯೋ ಸಮಯದಲ್ಲಿ ಯಾರೂ ಬರ್ಲಿಲ್ಲ. ಹಳೆ ಸಂಬಂಧ ಹಳಸಲಾಗಿತ್ತು. ಹೊಸ ಗೆಳೆತನಗಳು ಕೇವಲ ಮುಖವಾಡಗಳಾಗಿದ್ದವು ಅಷ್ಟೇ. ಸಮಾಜದಲ್ಲಾಗಿರೋ ಬದಲಾವಣೆಗಳಿಗೆ ತಾವೇ ಹರಿಕಾರರಾಗ್ಬೇಕು ಅನ್ನೋ ಚಪಲದಿಂದ ಕೂತಲ್ಲಿ, ನಿಂತಲ್ಲಿ ಮಾಡೋ ಘನ-ಚರ್ಚೆಗಳಿಗೆ ಜೊತೆಯಾಗ್ತಿದ್ದರೇ ವಿನಾ ಹತ್ತಿರ ಆಗ್ಲೇ ಇಲ್ಲ. ನನಗೀಗ ಅನ್ನಿಸ್ತಿದೆ ಸಾರ್! ಗಾಂಧಿಯುಗದ ನೆರಳಲ್ಲಿ ಬೆಳೆದು ಬಂದ ಬಹುತೇಕ ಹಿರಿತಲೆಗಳೆಲ್ಲವೂ ಅಷ್ಟೇ! ಒಂಥರ ಮುಖವಾಡದ ಜಗತ್ತಿನಡಿಯಲ್ಲಿ ಜೀವಿಸುತ್ತಾರೆ. ಪಂಡಿತರಾಡುವಂತ ಮಾತು; ಕೇವಲ ತೋರ್ಪಡಿಕೆಗಳಷ್ಟೇ. ಒಳಗೊಳಗೆ ಏನೂ ಇಲ್ಲ, ಬರೀ ಟೊಳ್ಳು. ಪಪ್ಪಾಯಿ ಗಿಡದ ಥರ.” ಮಾತು ನಿಲ್ಲಿಸಿ, ಮುಂದುವರೆಸಿದರು.

“ಅಲ್ಲಾ, ಗಾಂಧಿ ಮಹಾತ್ಮನ ಬಗ್ಗೆ ಹೇಳ್ತಿಲ್ಲ ನಾನು. ಅವ್ರಂಥ ಮಾನವರು ಶತಮಾನಕ್ಕೊಬ್ರೂ ಹುಟ್ಟಲ್ಲ. ಆದ್ರೆ, ಗಾಂಧಿಯ ತತ್ವಗಳನ್ನ ತಮ್ಮ ಬೇಳೆ ಬೇಯ್ಸಕ್ಕೆ ಬಳಸಿಕೊಂಡ್ರಲ್ವಾ, ಅಂಥವ್ರನ್ನ ಕಂಡ್ರೇ ಮೈಯಲ್ಲಿ ಮುಳ್ಳೇಳತ್ತೆ.” ಅವರೇಕೋ ಮನಬಿಚ್ಚಿ ಮಾತನಾಡುತ್ತಿದ್ದರೆನಿಸಿತು. ನಾನ್ಯಾರು? ನನಗೇಕೆ ಇದನ್ನೆಲ್ಲಾ ಹೇಳುತ್ತಿದ್ದಾರೆ? ಹಂ….. ಕೆಲವೊಮ್ಮೆ ಮನುಷ್ಯನ ನೋವುಗಳಿಗೆ ಸ್ಪಂದನೆ-ಸಾಂತ್ವನದ ಅವಶ್ಯಕತೆಯಿರುವುದಿಲ್ಲ; ಬೇಕಾಗಿರುವುದೆಲ್ಲಾ ಕೇಳಿಸಿಕೊಳ್ಳುವ ಕಿವಿ ಅಷ್ಟೇ.

“ಆದ್ರೂ, ನಿಮ್ ತಂದೆ ಗ್ರೇಟು ಅಂಕಲ್. ಅಚ್ಚ ವೈದಿಕ ಮನೆತನದಲ್ಲಿ ಬೆಳೆದು ಹೀಗೆ ದಂಗೆಯೇಳಕ್ಕೆ ಎಲ್ಲರಿಂದಲೂ ಸಾಧ್ಯ ಆಗಲ್ಲ. ನಿಮ್ಮನ್ನೆಲ್ಲಾ ಗಾಂಧಿತತ್ವದಡಿಯಲ್ಲೇ ಬೆಳೆಸಿರ್ಬೇಕು. ಅದಕ್ಕೇ ಇಷ್ಟು ಸರಳವಾಗಿದ್ದೀರಾ ನೀವು.” ಗಾಡಿಯಲ್ಲಿ ಕುಳಿತು ಬಹಳ ಸಮಯ ಕಳೆದಿತ್ತು. ಸುಮಾರು ಮುಕ್ಕಾಲು ಗಂಟೆಗಳೇ ಆಗಿರಬಹುದೇನೋ. ಕಪ್ಪು-ಕಾವಳ ನಗರದ ಮೂಲೆಮೂಲೆಗೂ ಆವರಿಸತೊಡಗಿ, ರಸ್ತೆಯಂಚಿನ ಮರಗಳು ಪ್ಲೂರೋಸೆಂಟ್ ದೀಪಗಳಡಿ, ನೀಳ ಉಗುರು ಬಿಟ್ಟ ರಕ್ಕಸರಂತೆ ಕಾಣುತ್ತಿದ್ದವು. ವಿಮಾನದಿಂದ ನೋಡಿದಾಗ ಬೆಂಕಿಪೊಟ್ಟಣದ ಮರಿಯಂತೆ ಕಂಡ ಕಟ್ಟಡಗಳು, ಇಪ್ಪತ್ತು-ಮೂವತ್ತು ಮಹಡಿಗಳಷ್ಟು ಬೆಳೆದು ನಿಂತು, ಬಣ್ಣಬಣ್ಣದ ಬೋರ್ಡುಗಳೊಂದಿಗೆ ನುಂಗಿಯೇಬಿಡುತ್ತೇನೆಂದು ಬಾಯಿತೆರೆದು ಕಾಯುತ್ತಿರುವಂತನಿಸಿತು. ಖಾಲಿ ಬಿದ್ದ ಸ್ಟಾರ್ ಹೋಟೆಲುಗಳ ಮುಂದಿನ ಪೂಟ್ ಪಾತುಗಳಲ್ಲಿದ್ದ ಚಾಟ್ಸ್ ಗಾಡಿಗಳ ಸುತ್ತ ಜನಜಂಗುಳಿ!!! ಬೆಂಗಳೂರು ಯಾವ ಕಾಲಕ್ಕೂ ಅರಿಯಲಾಗದ ರಹಸ್ಯವೇ.

“ಯಾಕ್ ಗ್ರೇಟು ಸಾರ್?” ಶ್ರೀಯುತರ ಬಲಗೈ ಬೈಕನ್ನು ಬಿಟ್ಟು ಪ್ರಶ್ನಾರ್ಥಕವಾಗಿ ಹೆಬ್ಬೆರಳನ್ನೆತ್ತಿ ಕೇಳಿತು. ಅವರು ರಸ್ತೆಯಿಂದ ಆಗಾಗ ಮುಖ ತಿರುಗಿಸಿ ಮಾತನಾಡುತ್ತಿದ್ದರು. “ಬ್ರಾಹ್ಮಣನಾಗಿ ಹುಟ್ಟಿ, ವೈದಿಕ ಧರ್ಮ ತಿಳಿದೂ ಸಹಾ ಸನಾತನ ಪದ್ಧತೀನ ಧಿಕ್ಕರಿಸೋದು ಅಷ್ಟು ಸುಲಭ ಅಲ್ಲ ಅಂತೀರಾ ನೀವು. ನಾನು ಕೇಳ್ತೀನಿ, ಧಿಕ್ಕರಿಸೋ ಅವಶ್ಯಕತೆ ಏನಿತ್ತೂಂತ? ನನ್ನ ಅರವತ್ತೆಂಟು ವರ್ಷಗಳ ಜೀವನಾನುಭವದಿಂದ ಹೇಳ್ತಿದ್ದೀನಿ ಸಾರ್. ಜೀವನ ನಡೆಸುವ ಮೌಲ್ಯಗಳೇನಾದರೂ ಸಿಗುವುದಿದ್ದಲ್ಲಿ, ಅದು ಸನಾತನ ಧರ್ಮದಿಂದಲೇ ಹೊರತು, ಹತ್ತು ಮುಖವಾಡಗಳ ಹಿಂದೆ ಬದುಕುವ ಈ ಹುಚ್ಚು ಬೌದ್ಧಿಕವಾದಿಗಳ ಧೋರಣೆಯಿಂದಂತೂ ಅಲ್ಲ. ಒಪ್ತೀನಿ ನನ್ನಪ್ಪ ನನಗೊಂದಿಷ್ಟು ಮೌಲ್ಯಗಳನ್ನೇನೋ ಕಲಿಸಿದ; ಸ್ವಾಭಿಮಾನಿಯಾಗಿರು, ಎಲ್ಲರನ್ನೂ ಒಂದೇ ನೆಲೆಗಟ್ಟಿನಲ್ಲಿ ನೋಡು ಅಂತ. ಆದರೆ, ಒಬ್ಬ ಅಪ್ಪನಾಗಿ ಸೋತ ಅನ್ಸತ್ತೆ.

ಕೆಲವು ಕರ್ತವ್ಯಗಳಿಂದ ವಿಮುಖನಾಗಿ ಓಡಿ ಹೋಗಲು ಆತನಿಗೊಂದು ನೆಪ ಬೇಕಿತ್ತಷ್ಟೇ. ಆ ನೆಪಗಳು, ಬೌದ್ಧಿಕ ಹಿನ್ನೆಲೆಯಲ್ಲಿ ದೊರೆತವೇನೋ. ಹೆತ್ತಮಗನಿಗೊಂದು ಜನಿವಾರದ ನೂಲು ಕೂಡಾ ಹಾಕಲು ಒಪ್ಲಿಲ್ಲ. ‘ಬ್ರಾಹ್ಮಣರಿಗೆ ಜನಿವಾರವಿರುವುದು ಹೊಟ್ಟೆಭಾರವಾದ ಮೇಲೆ ಬೆನ್ನು ತುರಿಸಿಕೊಳ್ಳಲು’ ಎಂದು ಕೂಗಾಡುತ್ತಿದ್ದ. ಆದರೆ, ಅಂವ ಯಾವತ್ತೂ ಜನಿವಾರವನ್ನ ಕಿತ್ತೆಸೆಯಲಿಲ್ಲ; ಬದಲಾಗಿ ‘ಇದು ನನ್ನ ಐಡೆಂಟಿಟಿ’ ಅಂತ ಹೇಳ್ತಿದ್ದ. ವೇದ ಗಾಯತ್ರಿಗಳನ್ನು ತಿಳಿದಿದ್ದರಿಂದ ಇಲ್ದೇ ಇರೋ ಪೊಳ್ಳೆಲ್ಲವನ್ನೂ ಲೋಕಕ್ಕೆ ಬಿಚ್ಚಿಡ್ತೇನೆ ಅಂತಿದ್ದ. ಆದ್ರೆ, ಕೊನೆಕೊನೆಗೆ ಅವನೇ ಪೊಳ್ಳಾದ. ಅವ್ನ ನೂರು ಮುಖಗಳನ್ನ ಮುಚ್ಚಿಡೋಕೆ ಒಂದು ಮುಖವಾಡಾನೂ ಇರ್ಲಿಲ್ವೇನೋ. ನಾನು ಸಾರಾಸಗಟಾಗಿ ತಿರಸ್ಕರಿಬಿಡ್ತೀನಿ ಸಾರ್, ಅಪ್ಪ ನನಗಂತ ಯಾವ ಗಟ್ಟಿ ಮೌಲ್ಯಗಳನ್ನೂ ಕೊಡಲಿಲ್ಲ. ಈಗಲೂ ಅರ್ಧ ನಾಸ್ತಿಕ ಅರ್ಧ ಆಸ್ತಿಕನಾಗಿ ಯಾವ ಹಿನ್ನೆಲೆ-ಮುನ್ನೆಲೆ ಇಲ್ದೆ ಬದುಕ್ತಿರೋನು ನಾನು” ಮಾತಿನ ಕೊನೆಗೆ ನಿಟ್ಟುಸಿರಿರಲಿಲ್ಲ. ಅದೇ ಶಾಂತ ವಾಕ್ಯಗಳು, ಓಶೋ ಮಾತುಗಳಂತೆ. ದುಃಖ, ಸಂತೋಷ, ಹಾಸ್ಯ, ಯಾವುದರಲ್ಲೂ ಮಮತೆಯಿಲ್ಲದ ಮಾತುಗಳವು.

“ನೀವು ತುಂಬಾ ಒಗಟಾಗಿ, ಕಾವ್ಯಮಯವಾಗಿ ಮಾತಾಡ್ತೀರಾ ಅಂಕಲ್” ನಗುತ್ತಾ ಹೇಳಿದೆ.

“ಕಾವ್ಯಮಯವಾಗಿ ಮಾತಾಡೊದಕ್ಕಿಂತ, ಅರ್ಥೈಸಿಕೊಳ್ಳುವುದು ಬಹಳ ಕಷ್ಟ.”

“ಹಂ… ಹೌದು, ನಿಮ್ಮ ಹೆಸರು?”

Facebook ಕಾಮೆಂಟ್ಸ್

ಲೇಖಕರ ಕುರಿತು

Sandeep Hegde

ಭಟ್ಕಳ ತಾಲ್ಲೂಕಿನ ಕೆರೆಹಿತ್ಲು ಗ್ರಾಮದವನಾಗಿದ್ದು, ಮೊದಲ ಹಂತದ ಶಿಕ್ಷಣವನ್ನು ಭಟ್ಕಳ ಮತ್ತು ಬೈಂದೂರಿನಲ್ಲಿ ಮುಗಿಸಿ, ಎಂಜಿನಿಯರಿಂಗ್ ಪದವಿಯನ್ನು ಮೈಸೂರಿನ ಜಯಚಾಮರಾಜೇಂದ್ರ ಕಾಲೇಜಿನಲ್ಲಿ ಪಡೆದು, ಪ್ರಸ್ತುತ M.N.C ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದೇನೆ. ಚಿಕ್ಕಂದಿನಿಂದಲೂ ಜತನದಿಂದ ಉಳಿಸಿಕೊಂಡು ಬಂದ ಅಭ್ಯಾಸವೆಂದರೆ ಓದುವುದು ಮತ್ತು ಬರೆಯುವುದು. ಅರೆಮಲೆನಾಡಿನ ಜನಜೀವನ, ಭಾಷೆ, ಅಭ್ಯಾಸ, ಕೃಷಿ, ಪ್ರೇಮ, ಕಾಮ, ಹಾಸ್ಯ, ಮಣ್ಣು, ನಿಸರ್ಗ ಸೌಂದರ್ಯದ ಕುರಿತಾಗಿ ಹೇಳಲು ಹಾಗೂ ಬರೆಯಲು ಯಾವಾಗಲೂ ಸಿದ್ಧ. ಹತ್ತು ಹಲವು ವಿಚಾರಧಾರೆಗಳ, ವ್ಯಕ್ತಿಗಳ ಸೈದ್ಧಾಂತಿಕ ಧೋರಣೆಗಳನ್ನು ಗಮನಿಸಿ, ಕೊನೆಗೂ ಯಾವುದಕ್ಕೂ ಪಕ್ಕಾಗದೇ ಇರುವ ವ್ಯಕ್ತಿ. ಹಲವಾರು ಕಥೆಗಳು ಮಯೂರ, ತರಂಗ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!