“ನೆತ್ತರ ಹನಿ ಮಣ್ಣಿಗೆ ಬಿದ್ದು ಆಕಾಶ ಕೆಂಪಾಗಿ ನೋವಿಗೆ ಹೊಸ ಅರ್ಥ ಬಂದು ಮನದಲ್ಲಿ ಈಗ ಕ್ರಾಂತಿಯ ಬೆಂಕಿ. ಸೂರಿನ ಸುಖವಿಲ್ಲ, ನಿದ್ದೆಯ ಕನಸಿಲ್ಲ. ಬಾ ಸಾಥೀ ಈಗ ಗುರಿಯೊಂದೇ. ಹಲ್ಲಿಗೆ ಹಲ್ಲು, ಕಣ್ಣಿಗೆ ಕಣ್ನು, ರಕ್ತಕ್ಕೆ ರಕ್ತ… ಲಾಲ್ ಸಲಾಂ..”. ನಿಮ್ಮ ಮನದಲ್ಲಿರುವ ಸಮಸ್ಯೆಯೇನೇ ಇರಲಿ, ನಿಮಗೆ ಯಾರ ಮೇಲೆಯೇ ಕೋಪ ಇರಲಿ. ಕಿಚ್ಚ ಸುದೀಪ್ ಗಡಸು ಧ್ವನಿಯಲ್ಲಿ ಕೇಳಿ ಬರುವ ಆ ಡೈಲಾಗ್ ನಿಮ್ಮ ಮನದೊಳಗೆ ಕಿಡಿಯೆಬ್ಬಿಸದಿರಲು ಸಾಧ್ಯವೇ ಇಲ್ಲ. ಅಂದ ಹಾಗೆ ರಿಕ್ಕಿ ಲಾಲ್ ಸಲಾಂ ಎನ್ನುತ್ತಾ ಥಿಯೇಟರ್’ಗೆ ಬಂದಿದ್ದರೆ ಪ್ರೇಕ್ಷಕರೂ ಸಹ ರಿಕ್ಕಿಗೆ ಸಲಾಂ ಹೊಡೆಯುತ್ತಿದ್ದಾರೆ. .
ರಿಕ್ಕಿಯನ್ನು ನಿರ್ದೇಶಿಸಿದ್ದು ಕುಂದಾಪುರದ ರಿಷಬ್ ಶೆಟ್ಟಿ. ಹೇಳದ ಕವನ ಎನ್ನುವ ಕಿರುಚಿತ್ರದ ಮೂಲಕ ಗಮನ ಸೆಳೆದ ರಿಷಬ್ ಉಳಿದವರು ಕಂಡಂತೆಯಲ್ಲಿ ಪ್ರಮುಖ ಪಾತ್ರವನ್ನೂ ಮಾಡಿದ್ದಾರೆ. ರಿಕ್ಕಿ, ರಿಷಬ್ ಅವರ ಕನಸಿನ ಕೂಸು. ಅದಕ್ಕೆ ಮೂರು ವರ್ಷಗಳ ಕಾಲ ಕಾವು ನೀಡಿ ರಿಕ್ಕಿಯನ್ನು ಈಗಷ್ಟೆ ಹೊರ ತಂದಿದ್ದಾರೆ. ರಿಕ್ಕಿ ಮೊದಲ ವಾರದಿಂದಲೇ ಯಶಸ್ವಿಯಾಗಿ ಓಡುತ್ತಿದೆ. ರಿಕ್ಕಿ ಯಶಸ್ಸಿನ ಕುರಿತಾಗಿ ನಿರ್ದೇಶಕ ರಿಷಬ್ ಶೆಟ್ಟಿ ರೀಡೂ ಕನ್ನಡದ ಜತೆಗೆ ಮನಬಿಚ್ಚಿ ಮಾತನಾಡಿದ್ದಾರೆ.
ನಮಸ್ತೆ ಶೆಟ್ರೆ..
-ಭಟ್ರೆ ನಮಸ್ತೆ..
ರಿಕ್ಕಿಯ ಸಕ್ಸಸ್ಸ್’ಗಾಗಿ ಅಭಿನಂದನೆಗಳು
-ಥ್ಯಾಂಕ್ ಯೂ..
ರಿಷಬ್.. first of all, ನಿಮ್ಮ ಊರು, ಓದಿನ ಬಗ್ಗೆ ಹೇಳಿ.
-ಕುಂದಾಪುರ ಸಮೀಪ ಕೆರಾಡಿ ಅನ್ನೋದು ನನ್ನ ಹುಟ್ಟೂರು. ಪ್ರಾಥಮಿಕ ಶಿಕ್ಷಣವ್ವನ್ನು ಅಲ್ಲೇ ಪಡೆದು ಮತ್ತೆ ಭಂಡಾರ್’ಕಾರ್ಸ್ ಕಾಲೇಜ್ ಸೇರ್ಕೊಂಡೆ. ಅಲ್ಲಿ ಕಾಲೇಜಿನ ಗಲಾಟೆ ಜಗಳಗಳಲ್ಲಿ ಭಾಗಿಯಾಗ್ತಾ ಇದಿದ್ರಿಂದ, ಅಪ್ಪನ ಕೆಂಗಣ್ಣಿಗೆ ಗುರಿಯಾಗೆ ಬೆಂಗಳೂರಿಗೆ ಕಳುಹಿಸಿದ್ರು. ಇಲ್ಲಿ ಬಂದು B.Com ಮಾಡಿದೆ. ಅಮೇಲೆ ನಿರ್ದೇಶನ ವಿಭಾಗದಲ್ಲಿ ಡಿಪ್ಲೋಮಾವನ್ನೂ ಪಡೆದೆ.
ಸಿನೆಮಾ ಕ್ಷೇತ್ರ ನಿಮ್ಮನ್ನು ಸೆಳೆದಿದ್ದು ಹೇಗೆ?
-ಉಪೇಂದ್ರ.. ನನ್ನದೇ ಊರಿನ ಉಪೇಂದ್ರ ಅವರು ಆವಾಗ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿದ್ದರಷ್ಟೇ. ಅವರ ಥರ ನಾನೂ ಆಗ್ಬೇಕೂಂತ ಆವಾಗ್ಲೆ ಆಸೆ ನಂಗೆ. ಮತ್ತೆ ಸಣ್ಣವನಿರೋವಾಗ್ಲೇ ಯಕ್ಷಗಾನದಲ್ಲಿ ಪಾತ್ರಗಳನ್ನು ಮಾಡೋದಂದ್ರೆ ಬಹಳ ಇಷ್ಟ, ಕಾಲೇಜಿನಲ್ಲಿ ನಾಟಕಗಳನ್ನು ಮಾಡುತ್ತಿದ್ದೆ. ಹೀಗೆ ಒಂದೊಂದೇ ಪಾತ್ರಗಳನ್ನೆಲ್ಲಾ ಮಾಡಿ ಮಾಡಿ ಸಿನೆಮಾ ಇಂಡಸ್ಟ್ರಿಗೆ ಬಂದಿದ್ದೇನೆ.
ರಿಕ್ಕಿ ಕಥೆ ಹುಟ್ಕೊಂಡಿದ್ದು ಹೇಗೆ? ಮಂಗಳೂರಿನ ಕೆಲ ನೈಜ ಘಟನೆಗಳ ಸುತ್ತ ಹೆಣೆದ ಕಥೆಯಾ ಅದು?
-ಖಂಡಿತಾ ಅಲ್ಲ. ರಿಕ್ಕಿ ಒಂದು ಕಾಲ್ಪನಿಕ ಕಥೆ. ಆದ್ರೆ ಸಣ್ಣದಿರುವಾಗಲೇ ನಾನು ನೋಡಿದ ಈ ನಕ್ಸಲಿಸಂನ ಅವಾಂತರಗಳು ರಿಕ್ಕಿಯ ಮೇಲೆ ಪ್ರಭಾವ ಬೀರಿದ್ದಂತೂ ಸತ್ಯ. ನನ್ನ ಕಲ್ಪನೆಗೆ ಪೂರಕವಾಗಿ ಕೆಲ ನೈಜ ಘಟನೆಗಳನ್ನು ಉಲ್ಲೇಖಿಸಿದ್ದೇನೆಯೇ ಹೊರತು ನೈಜ ಘಟನೆಗಳ ಸುತ್ತವೇ ಹೆಣೆದಿದ್ದಲ್ಲ.
ರಿಕ್ಕಿ ನಕ್ಸಲಿಸಂ ಅನ್ನು ಬೆಂಬಲಿಸುವ ಥರಾ ಇದೆ ಅನ್ನೋ ಮಾತು ಕೇಳಿ ಬರ್ತಾ ಇದೆ, ಏನು ನಿಮ್ಮ ಪ್ರತಿಕ್ರಿಯೆ?
-ನೋಡಿ, ಸಿನೆಮಾ ಯಾವತ್ತೂ ಒಬ್ಬಂದೇ ಅಭಿಪ್ರಾಯವಾಗಿರುವುದಿಲ್ಲ. ನೀವು ಅದನ್ನು ಹೇಗೆ ತಗಳ್ತೀರೋ ಹಾಗೆ. ನಾವಂತೂ ಎಲ್ಲವನ್ನೂ ಬ್ಯಾಲೆನ್ಸಿಂಗ್ ಆಗಿ ಮಾಡಿದ್ದೂ ಎಲ್ಲೂ ನಕ್ಸಲಿಸಂ ಅನ್ನು ಬೆಂಬಲಿಸಿಲ್ಲ. ಅದೂ ಅಲ್ಲದೆ ನಕ್ಸಲಿಸಂ ಅನ್ನು ಹೆಚ್ಚು ಕಾವ್ಯಾತ್ಮಕವಾಗಿಯೇ ತೋರಿಸಿದ್ದು. ನಾವೆಲ್ಲೂ ಅದನ್ನು ರಿಯಲಿಸ್ಟಿಕ್ ಆಗಿ ತೋರಿಸಿಲ್ಲ. ಎಲ್ಲಕ್ಕಿಂತ ಹೆಚ್ಚು ಇದೊಂದು ರಾಧಾ-ಕೃಷ್ಣರ ಪ್ರೇಮ ಕಥೆಯೇ ಹೊರತು ಮತ್ತೇನಲ್ಲ.
ಗೆಳೆಯ ರಕ್ಷಿತ್ ಬಗ್ಗೆ ಏನ್ ಹೇಳಕ್ಕೆ ಬಯಸ್ತೀರಾ?
-ನೋ ವರ್ಡ್ಸ್.. ಅವನೀಗ ಇಂಡಸ್ಟಿಯಲ್ಲಿ ಏನ್ ಹೆಸರು ಗಳಿಸಿದ್ದಾನೋ ಅದೆಲ್ಲಾ ಅವನ ಹಾರ್ಡ್’ವರ್ಕ್’ನಿಂದಾನೇ ಗಳಿಸಿಕೊಂಡಿದ್ದು. ಅವನೊಬ್ಬ ಡೆಡಿಕೇಟೆಡ್, matured actor. ಒಂದೂಕಾಲು ಕೋಟಿ ಹಣ ಹೂಡಿ, ಶ್ರಮ ಪಟ್ಟು ಕನಸಿನ ತುಘಲಕ್ ಸಿನೆಮಾ ಮಾಡಿ, ಅದು ಕೈ ಕೊಟ್ಟಾಗ ತ್ರಿಭುವನ್ ಥಿಯೇಟರ್’ನ ಎರಡನೇ ಮಹಡಿಯ ಮೆಟ್ಟಿಲಿನಲ್ಲಿ ಕುಳಿತು ಕಣ್ಣೀರು ಹಾಕಿ “ನಮ್ಮ ಲೈಫ್ ಮುಗೀತು ಮಗಾ..” ಅಂತ ಹೇಳಿದವನು ರಕ್ಷಿತ್. ಅವನ ಆ ಸೋಲು ನಮ್ಮಿಬ್ರನ್ನ ಹತ್ರ ಮಾಡ್ತು.
SEZ ಬೇಡವೇ ಬೇಡ ಅನ್ನುವುದು ನಿಮ್ಮ ಅಭಿಪ್ರಾಯಾನಾ ಹಾಗಾದ್ರೆ?
-ಖಂಡಿತ ಬೇಕು. ವಿಶೇಷ ಆರ್ಥಿಕ ವಲಯ ಅನ್ನೋದು ಬೇಕೇ ಬೇಕು. ಆದರೆ ಅದರ ಹೆಸರಿನಲ್ಲಿ ಹತ್ತಾರು ವರ್ಷಗಳಿಂದ ಕೃಷಿ ಮಾಡ್ಕೊಂಡು ಬದುಕುತ್ತಿರುವವರನ್ನು ಬಲವಂತವಾಗಿ ಒಕ್ಕಲೆಬ್ಬಿಸಬಾರದು. ಇವತ್ತು ಹೇಳಿ ನಾಳೆಯೇ ಎದ್ದು ಹೋಗಕ್ಕೆ ಅದೇನು ಬೆಂಗಳೂರಿನಲ್ಲಿ ಮಾಡ್ಕೊಂಡ ಬಾಡಿಗೆ ಮನೆ ಥರಾ ಅಲ್ವ ಅಲ್ವಾ?
ಹರಿಪ್ರಿಯ ಬಗ್ಗೆ ಒಂದೆರಡು ಮಾತು..
-ಅದ್ಭುತ.. ಅವರೊಂದು Surprise package! Caravan ಹೋಗದ ಕಾಡಲ್ಲಿ, ಹಿರೋಯಿನ್ ಎನ್ನುವ ಹಮ್ಮು ಬಿಮ್ಮ ತೋರಿಸದೆ ನಮ್ಮೊಂದಿಗೆ ಮುಕ್ತವಾಗಿ ಬೆರೆಯುತ್ತಿದ್ದವರು, ನಮ್ಮ ಜೊತೆಗೇನೇ ಊಟ ಮಾಡುತ್ತಿದ್ದವರು ಹರಿಪ್ರಿಯ. ಅಷ್ಟೇ ಡೆಡಿಕೇಶನ್.. ಬಹುಶಃ ರಾಧೆಯ ಪಾತ್ರವನ್ನು ಅವರಷ್ಟು ಒಳ್ಳೆಯದಾಗಿ ಬೇರೆಯವರಿಗೆ ಮಾಡಲು ಸಾಧ್ಯ ಆಗ್ತಿತ್ತೋ ಇಲ್ವೋ…
ಮುಂದಿನ ಪ್ಲಾನ್ ಏನು?
-ನನ್ನ ಮತ್ತು ರಕ್ಷಿತ್ ಕಾಂಬಿನೇಷನ್’ನಲ್ಲಿ “ಕಿರಿಕ್ ಪಾರ್ಟಿ” ಅನ್ನೋ ಕಂಪ್ಲೀಟ್ ಕಾಮೆಡಿ ಮೂವಿ ಮಾಡ್ತಾ ಇದ್ದೇವೆ. ಟೀಮ್ ಇದುವೇ, ಕ್ಯಾರೆಕ್ಟರ್ಸ್ ಮಾತ್ರ ಬೇರೆ ಅಷ್ಟೇ.. ಜೊತೆಗೆ ನಮ್ಮದೇ ಆದ Production House ಮಾಡ್ತಾ ಇದೇವೆ.
ಸರಿ ಶೆಟ್ರೇ.. ರಿಕ್ಕಿ ನೂರು ದಿನ ಓಡ್ಲಿ ಎನ್ನುವುದು ನಮ್ಮ ಹಾರೈಕೆ.. ಶುಭವಾಗಲಿ..
-ಥ್ಯಾಂಕ್ಸ್ ಎ ಲಾಟ್ ಭಟ್ರೇ..
[ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ರೀಡೂ ಕನ್ನಡಕ್ಕೆ ನೀಡಿದ ಮೊದಲ ಸಂದರ್ಶನ; ನಾಳೆ ನಿರೀಕ್ಷಿಸಿ ]
–ಶಿವಪ್ರಸಾದ್ ಭಟ್ ಟಿ