ಕಥೆ

ಬದುಕು ಸಶೇಷವಂತೆ….. –2

ಬದುಕು ಸಶೇಷವಂತೆ……. – 1

ಮಾತನಾಡಬೇಕೆಂದು ಪಕ್ಕದ ಬೋಳುಗುಡ್ಡ ಹತ್ತಿದಾಗ ಸಾಗರಿಕಾಳೇನೂ ತಂಟೆ ಮಾಡಲಿಲ್ಲ; ಅಕ್ಕನ ಮನಸ್ಸಿಗೆ ಸಾಂತ್ವನ ಹೇಳಲೊಬ್ಬ ಗೆಳೆಯ ಬೇಕೆಂದು ಆಕೆಗೂ ಅನಿಸಿರಬಹುದು. ಕೂತ ನಮ್ಮಿಬ್ಬರ ನಡುವೆ ಕೇವಲ ಅರ್ಧ ಅಡಿ ಅಂತರವಿತ್ತು. ಆದರೆ ಆ ಅಂತರದಲ್ಲಿ ಒಂದು ಸಾಗರವೇ ತುಂಬುವಷ್ಟು ಮೌನ ಗುಡ್ಡೆಯಾಗಿ ಬಿದ್ದಿತ್ತು. ಅವಳದೂ ಮಾತಿಲ್ಲ, ನನ್ನದೂ ಇಲ್ಲ. ಇನ್ನು ತಡೆಯಲಾಗದೆಂಬ ಹಂತ ತಲುಪಿದಾಗ ಮೌನ ಮುರಿದೆ.

“ಸುದ್ದಿ ಹೇಳ ಹೇಳಿ ಕರ್ಸ್‍ಕಂಡು ಛೊಲೋ ಮಾತಾಡ್ತಿದ್ಯಲೇ ಮಾರಾಯ್ತಿ.”
“ಹಂಗರೆ ನಿನ್ ಕರೂಲಾಗಾಗಿತ್ತು ಅಲ್ದಾ?” ಕಣ್ಣುಗಳಲ್ಲಿ ತೀಕ್ಷ್ಣತೆ ಹೆಪ್ಪುಗಟ್ಟಿತ್ತು.
“ಹಂಗಲ್ದೆ, ಎಂಥಾ ಆದ್ರೂ ಮಾತಾಡು ಹೇಳಿ ಹೇಳ್ದೆ ಅಷ್ಟೇಯಾ.”
ಮತ್ತೆ ಮೌನ. ಕೊನೆಗೊಮ್ಮೆ ಅದನ್ನೂ ಸೀಳಿ ಬಂದ ಸಣ್ಣಗಿನ ಸ್ವರದ ಬಿಕ್ಕಳಿಕೆ. ನಾನೇನೂ ಸಾಂತ್ವನಿಸುವ ಕೆಲಸಕ್ಕೆ ಹೋಗಲಿಲ್ಲ; ಮೋಡ ಖಾಲಿಯಾದ ಮೇಲೇ ಮಳೆ ನಿಲ್ಲುವುದೆಂದು ಗೊತ್ತು.
“ನೀನೇ ಹೇಳು, ನಂದೆಂತಾ ತಪ್ಪು?” ಅವಳು ಕೇಳಿದಳು.
“ವಿಷಯ ಗೊತ್ತಿದ್ರಲ್ದಾ, ನ್ಯಾಯಾಧೀಶರು ನ್ಯಾಯ ಕೊಡುದು, ತಪ್ಪು-ಒಪ್ಪು ಹೇಳುದು ಎಲ್ಲವಾ?”
“ಎಲ್ಲಾ ಮತ್ತೆ ಮೊದ್ಲಿಂದ ಹೇಳವಾ ನಾನು?” ಬಹುಶಃ ಅವಳು ಬಂಡೆಯಷ್ಟು ಗಟ್ಟಿಯಾಗುತ್ತಿದ್ದಳು.
“ಬರೋಬ್ಬರಿ ಐದು ವರ್ಷ ಎಲ್ಲವನ್ನೂ ಹೇಳ್ಕಂಡವ್ನ ಹತ್ರ ಇದ್ನೂ ಹೇಳ ಅನ್ಸಿದ್ರೆ ಅಥ್ವಾ ಎದೆ ಒಳ್ಗೆ ಬೆಳ್ಕಂಡ್ ಬೆಟ್ಟ ಒಡೆದ್ ಹೋಗ್ಲಿ ಹೇಳಿದ್ರೆ ಹೇಳು”

ಆಕೆಯದ್ದೊಂದು ನಿಟ್ಟುಸಿರು. ಕಾನುಕಪ್ಪೆಗಳು ಸುತ್ತೆಲ್ಲ ಕಡೆಗಳಿಂದಲೂ ’ವಟರ್ ವಟರ್’ ಶಬ್ದ ಹೊರಡಿಸುತ್ತಿದ್ದವು. ಸಾಯುತ್ತಿದ್ದ ಸೂರ್ಯನ ದೇಹದಿಂದ ಚೆಲ್ಲಿದ್ದ ರಕ್ತದೋಕುಳಿ ಬಾನಂಗಳವನ್ನು ಕೆಂಪಗಾಗಿಸಿತ್ತು. ಪೇಟೆಯಲ್ಲಿರುವಂತೆ ಸೊಳ್ಳೆಗಳ ಕಾಟ ಊರಲ್ಲಿಲ್ಲವೆಂದುಕೊಂಡೆ. ಪಕ್ಕದ ನೆಲ್ಲಿಮರದಲ್ಲಿ ಕಾಯಿಗಳು ತೊನೆಯುತ್ತಿದ್ದ ಕಾರಣ ಇಡೀ ಮರ ಎಲೆಗಳಿಲ್ಲದೇ ಬೋಳಾದಂತೆ ಅನಿಸಿತು, ಎಷ್ಟೆಂದರೂ ಮರವೆಂದರೆ ಎಲೆ ಹೂಗಳಿದ್ದರೇ ಚಂದ. ಎರಡು ಕಾಯಿ ಕೊಯ್ದು, ಒಂದನ್ನು ಬಾಯಿಗೆ ಹಾಕಿ ಇನ್ನೊಂದನ್ನವಳಿಗೆ ಕೊಟ್ಟೆ. ಸುಮ್ಮನೆ ಕೈಯಲ್ಲಿ ಹಿಡಿದುಕೊಂಡು ತಿರುಗಿಸಹತ್ತಿದಳು.

“ನಾ ಓದುಲೆ ಹೇಳಿ ಊರು ಬಿಟ್ಟೆ ಅಂದ್ರೆ ನಂಬ್ತ್ಯಾ?”
“ನೀ ಹಂಗೇ ಹೇಳ್ದ್ರೆ ನಂಬ್ತೆ”
“ಯಾರೂ ಸರ್ಯಾಗಿ ಮುಖ ಕೊಟ್ಟು ಮಾತಾಡ್ತ್ವಿಲ್ಲೆ, ಪ್ಲೀಸ್ ನೀ ಆದ್ರೂ ಮಾತಾಡೋ…..” ತಿರುಗಿ ನೋಡಲಿಲ್ಲ ನಾನು, ಬಹುಶಃ ಅವಳ ಕಣ್ಣು ಕಟ್ಟೆ ಕಟ್ಟಿದ್ದಿರಬಹುದು.
“ಮತ್ತೆ ಹೆಂಗ್ ಮಾತಾಡ? ಸರ್ಯಾಗೇ ಮಾತಾಡ್ತಿದ್ನಪ” ನನ್ನ ದನಿಯಲ್ಲಿ ಅಸಡ್ಡೆಯಿತ್ತೇ? ಗೊತ್ತಿಲ್ಲ.
ಅವಳು ಸರಿದಳು. ಕುಕ್ಕುರುಗಾಲಲ್ಲಿ ಕೂತು ಮೊಣಕಾಲಿಗೆ ಸುತ್ತುಗಟ್ಟಿದ್ದ ನನ್ನ ಕೈಯನ್ನು ಹಿಡಿದು, ಭುಜದ ಮೇಲೆ ತಲೆಯಿಟ್ಟಳು. ಒಮ್ಮೇಲೆ ಬೆಚ್ಚಿಬಿದ್ದೆ. ಇದುವರೆಗೂ ಯಾವ ಹೆಣ್ಣಿಗೂ ಆಸರೆ ಕೊಟ್ಟಿರಲಿಲ್ಲ ಆ ಭುಜಗಳು. ನಿಮಿಷಾರ್ಧದಲ್ಲಿ ಹೆಗಲೆಲ್ಲಾ ಒದ್ದೆಯ ಅನುಭವವಾಯಿತು.
ಸೌಗಂಧಿ ಅಳುತ್ತಿದ್ದಾಳೆಯೇ…..?
ಅಳಬೇಡ ಅನ್ನಲಿಲ್ಲ, ಕೈ ಬಿಡಿಸಿಕೊಂಡು ಸುಮ್ಮನೆ ತಲೆ ನೇವರಿಸಿದೆ. ಮೌನ ಸಾಗರಕ್ಕೆ ಕಟ್ಟಿದ್ದ ಕಟ್ಟೆ ಒಡೆದಿತ್ತು. ಅತ್ತು ಅತ್ತು ಸುಸ್ತಾಗಿ ಸುಮ್ಮನಾಗುವವರೆಗೂ ಕಾದೆ. ಆ ಸಮಯದಲ್ಲಿ ನಮ್ಮನ್ನಾರಾದರೂ ನೋಡಿದ್ದರೆ ಏನಂದುಕೊಳ್ಳುತ್ತಿದ್ದರೋ ಏನೋ. ಅವಳು ಕಣ್ಣೊರೆಸಿಕೊಂಡು ಹೇಳಿದಳು, ಹೇಳುತ್ತಲೇ ಹೋದಳು, ನೆರೆ ಬಂದು ಮನೆಯೊಳಗೆ ತುಂಬಿದ ಹೊಲಸು ನೀರನ್ನು ಮೊಗೆಮೊಗೆದು ಹೊರಗೆ ಸುರಿಯುವಂತೆ.

“ನಾ ಎಂಥಕ್ಕೆ ಅವನ್ನ ಇಷ್ಟಪಟ್ಟೆ ಗೊತ್ತಾಗ್ತಾ ಇಲ್ಲೆ. ಆ ಮುಗ್ಧ ಮುಖ ನೋಡಾ? ಬೈಕ್ ನೋಡಾ? ಅಥ್ವಾ ಎಲ್ಲರೂ ಅವ್ನ್ ಬಗ್ಗೇ ಮಾತಾಡೂದ್ ನೋಡಾ? ಒಂದೂ ತಿಳೀತಿಲ್ಲೆ. ಅಂತೂ ಗುಂಡಿ ಒಳ್ಗೆ ಬಿದ್ದದ್ದಂತೂ ಹೌದು, ಸಗಣಿ ಗುಂಡೀನೂ ಅಲ್ಲ ಅದು, ಕಕ್ಕಸು ಗುಂಡಿ. ಒಂದು ಮುಖದ ಹಿಂದೆ ಎಷ್ಟ್ ದೊಡ್ಡ ವ್ಯಾಘ್ರ ಇರ್ತು ಹೇಳಿ ಎಲ್ಲಾ ಮುಗ್ದು ಹೋದ್ಮೇಲೇ ಗುತ್ತಾತು.” ಆಕೆಯ ಕೈ, ನನ್ನ ಷರ್ಟಿನ ಗುಂಡಿಯೊಂದಿಗೆ ಆಟವಾಡುತ್ತಿತ್ತು. ಸ್ವಲ್ಪ ಒಣಗಿದ್ದರೂ ಅದೇ ಸುಕೋಮಲತೆಯನ್ನು ಉಳಿಸಿಕೊಂಡಿದ್ದವು ಆ ಬೆರಳುಗಳು. ಹೆಗಲ ಮೇಲೆ ಮತ್ತೆ ಮಲಗಿದ್ದ ತಲೆಯಿಂದ ಸೂಸುತ್ತಿದ್ದ ಪರಿಮಳ ಅದ್ಯಾವ ಶಾಂಪೂವಿನದ್ದೆಂದು ಎಷ್ಟೇ ಯೋಚಿಸಿದರೂ ಗುರುತಿಸಲಾಗಲಿಲ್ಲ.

“ಹೆಸ್ರು ಎಂಥದು ಅಂದೆ?” ಅಷ್ಟಕ್ಕೂ ಅವಳೇನೂ ಹೇಳಿರಲಿಲ್ಲ, ನಾನೇ ಕೇಳಿದೆ. ಆಮೇಲನಿಸಿತು, ಪ್ರಸ್ತುತ ಸನ್ನಿವೇಶಕ್ಕೆ ಹೆಸರಿನವಶ್ಯಕತೆಯಿರಲಿಲ್ಲವೆಂದು. ಪ್ರಶ್ನೆ ಕೇಳಬೇಕೆಂಬ ಏಕೈಕ ಮನಸ್ಥಿತಿಯಿಂದ ಕೇಳಿದ್ದೆನಷ್ಟೇ.
“ಅದೆಲ್ಲಾ ಎಂಥಕ್ಕೆ. ಅಂಥಾ ಅಸಹ್ಯದ ಹೆಸ್ರು ಹೇಳೂದ್ ಸಾಯ್ಲಿ, ನೆನಪು ಮಾಡ್ಕಂಡ್ರೂ ವಾಂತಿ ಬತ್ತು. ಯಾರು ಎಂಥಾ ಅನಿಷ್ಟದ ಗಳಿಗೇಲಿ ಹುಟ್ಟಿಸಿದ್ವೇನ ಅವನ್ನ.” ಉಗಿಯುವಷ್ಟು ಉಗಿಯಲಿ, ಅದೊಂದೇ ದುಃಖ ಹೊರಹೋಗಲಿರುವ ಹೆದ್ದಾರಿ. ಸುಧಾರಿಸಿಕೊಂಡು ನಿಟ್ಟುಸಿರುಬಿಡುತ್ತಾ ಮುಂದುವರೆಸಿದಳು.
“ಆವತ್ತೊಂದಿನ ಕೆಟ್ಟ ಘಳಿಗೇಲಿ ಮನೆ ಬಿಟ್ಟು ಓಡ್‍ಹೋದೆ. ಹೊರದೇಶಕ್ಕೆ ಹೇಳಿದ್ದ, ನಿನ್ ಬಿಟ್ರೆ ಬೇರೆ ಯಾರನ್ನೂ ಕಣ್ಣೆತ್ತೂ ನೋಡ್ತ್ನಿಲ್ಲೆ ಹೇಳಿದಿದ್ದ…..” ಮತ್ತೆ ಕಣ್ಣೀರು. ಮಾತು ತಪ್ಪಿದ ಎಂತಲಾ? ಮೋಸ ಹೋದೆ ಎಂತಲಾ? ಬಯಸಿದ ಪ್ರೀತಿ ಸಿಗಲಿಲ್ಲ ಎಂತಲಾ? ಹೆಣ್ಣಿನ ಮನಸ್ಸು ಸೃಷ್ಟಿಕರ್ತನಿಗೂ ಅರ್ಥವಾಗುವುದಿಲ್ಲ.
“ಸೀದಾ ಮುಂಬೈಗೆ ಕರ್ಕಂಡು ಹೋದ. ಅಲ್ಲಿ ಮೂರು ತಿಂಗ್ಳು ಗುಟ್ಟಾಗಿ ಉಳ್ಕಂಡ, ಪಾಸ್‍ಪೋರ್ಟ್ ಮಾಡೂಲೆ ತಡ ಆಗ್ತಿದ್ದು ಹೇಳಿ ಕಾರಣ ಕೊಟ್ಟಿದಿದ್ದ. ಮೂರೂ ತಿಂಗ್ಳೂ ನನ್ನನ್ನ ಬಳಸ್ಕಂಡ. ಕಡೆಗೆ ಒಂದ್ ಕಡೆ ಬಿಟ್ಟಿಕಿ ಹೋದ.” ಸೌಗಂಧಿಯ ಕಣ್ಣಲ್ಲಿ ನೀರಿರಲಿಲ್ಲ. ಒಮ್ಮೆ ತಣ್ಣೀರು ಸುರಿದುಕೊಂಡ ಮೇಲೆ ಮತ್ಯಾವ ನೀರಾದರೇನು ಎಂಬ ಭಾವವೇ ಅದು? ಆದರೆ ನನ್ನ ಕಣ್ಣು ಮಂಜಾಗಿತ್ತು.
“ನೀನೇ ಹೇಳು, ನಾ ಮಾಡದ್ದು ತಪ್ಪಲ್ದಾ? ಈಗ ಗಣೇಶನ್ ಜೊತೆ….., ಇದಕ್ಕೆ ಧರ್ಮ ಹೇಳ್ತ್ವಾ?”
“ನೋಡು ಸೌಗಂಧೀ, ಧರ್ಮ ಹೇಳೂದು ಸೂಕ್ಷ್ಮವಾದದ್ದು. ಎಷ್ಟು ಥರಹದ ನೋಡೂ ಕಣ್ಣು ಇರ್ತೋ ಅಷ್ಟೇ ವಿಧದ ಧರ್ಮ ಇರ್ತು. ರಾಕ್ಷಸರಿಗೆ ಮಾನವ ಭಕ್ಷಣೆ ಧರ್ಮ ಆದ್ರೆ, ಮನುಷ್ಯರಿಗೆ ಅದು ಅಧರ್ಮ. ಅವ್ರ ಧರ್ಮನ ವಿಶ್ಲೇಷಣೆ ಮಾಡ ಹೇಳಾದ್ರೆ ರಾಕ್ಷಸರ ನೆಲೆಯಲ್ಲಿ ನಿತ್ಕಂಡು ನೋಡಕಾಗ್ತು. ಅದ್ಕೇ ತುಂಬಿದ್ ಸಭೇಲಿ ದ್ರೌಪದಿ ಮಾನಾಪಹರಣ ಆಗ್ತಿದ್ರೂ ’ಧರ್ಮಸೂಕ್ಷ್ಮ’ ಹೇಳಿ ಭೀಷ್ಮ ಸುಮ್ನೆ ಕೂತ್ಕಂಡ. ನಿಂಗೆ ಈ ಸಮಯದಲ್ಲಿ ಯಾವ್ದು ಸರಿ ಕಾಣ್ತೋ ಅದ್ನೇ ಮಾಡು, ಆದ್ರೆ ಹಾಂಗ್ ನಿರ್ಧಾರ ತಕಳಕರೆ ಒಂದ್ಸಲ ಆಳವಾಗಿ ಯೋಚ್ನೆ ಮಾಡು. ಕಡೆಗೆ ಪಶ್ಚಾತ್ತಾಪ ಪಡೂಲಾಗ. ಈಗ ಮಾಡ್ತಿದ್ದದ್ದು ಒಂಚೂರೂ ತಪ್ಪಿಲ್ಲೆ. ಜೀವನ ಹೇಳೂದು ತುಂಬಾ ದೊಡ್ದು; ಸಣ್ಣ ಬೆಂಕಿಕಿಡಿ ತಾಗಿ ಗುಳ್ಳೆ ಎತ್ತು ಹೇಳಿ ಯಾರಾದ್ರೂ ಕೈಯನ್ನೇ ಕಡ್ಕತ್ವಾ? ಇಂಥಾ ಚಿನ್ನದಂಥಾ ಲೈಫ್‍ನಾ ಸಾಮಾನ್ಯ ಕಾರಣಕ್ಕೆಲ್ಲಾ ಹಾಳು ಮಾಡ್ಕಳಡ.” ಹೆಣ್ಣಿಗೆ ಅದೊಂದು ಸಾಮಾನ್ಯ ಕಾರಣವಲ್ಲವೆಂದು ನನಗೂ ಗೊತ್ತು. ಆದರೆ ಅನುಭವಿಸುವುದಕ್ಕೂ ಹಿತೋಪದೇಶ ಕೊಡುವುದಕ್ಕೂ ವ್ಯತ್ಯಾಸವಿದೆಯಲ್ಲವೇ? ಆಕೆಗೆ ಉಪದೇಶ ಬೇಕಿರಲಿಲ್ಲ, ಮನಸ್ಸನ್ನು ಹಂಚಿಕೊಳ್ಳಬೇಕಿತ್ತಷ್ಟೇ. ಮುಂದೇನೂ ಹೇಳಲಾಗಲಿಲ್ಲ. ಗಂಟಲು ಕಟ್ಟಿ, ಕಣ್ಣು ಮಸುಕಾಯಿತು.

“ನೀ ಎಂತಕ್ಕೆ ಅಳ್ತಿದ್ಯ? ಗಂಡಸ್ರು ಅತ್ರೆ ಸಮುದ್ರ ಉಕ್ಕಿ ಬತ್ತಡ” -ನಕ್ಕಳು.
ನಾನ್ಯಾಕೆ ಅತ್ತಿದ್ದೆಂದು ಹೇಳಲಿ?
ಇಪ್ಪತ್ತು ವರ್ಷ ಸಾಕಿದ ಅಪ್ಪ-ಅಮ್ಮನನ್ನು ಒಂದುಸುರಿಗೆ ಬಿಟ್ಟು ಹೋಗಿ ತಪ್ಪು ಮಾಡಿದೆ ನೀನು ಅಂತಲಾ? ಹೋಗುವ ಮುನ್ನ ಒಂದು ಮಾತೂ ಹೇಳಲಿಲ್ಲವೆಂತಲಾ? ಸುಮ್ಮನೆ ಬಂಗಾರದ ಬದುಕನ್ನು ಹಾಳುಮಾಡಿಕೊಂಡೆ ಅಂತಲಾ?
ಅಥವಾ……,
ನನಗೂ ಹೇಳದೇ….., ನಿನ್ನನ್ನು ರಹಸ್ಯವಾಗೇ ಪ್ರೀತಿಸುತ್ತಿದ್ದ ನನಗೂ ಹೇಳದೇ…..
ಅರೇ….., ನಾನೇನು ಯೋಚಿಸುತ್ತಿದ್ದೇನೆ? ಇಷ್ಟಪಟ್ಟಿದ್ದೆನಾ ಅವಳನ್ನು? ಅದಕ್ಕೇನಾ ಅಷ್ಟು ಸುಂದರಿಯಾಗಿ ಕಂಡದ್ದು? ಭುಜದ ಮೇಲೆ ತಲೆಯಿಟ್ಟವಳಲ್ಲಿ ಇದೇ ಭಾವನೆಯಿದ್ದಿರಬಹುದೇ? ಆಕೆಯ ತಲೆ ನೇವರಿಸಿದ ಅಂಗೈಗಳ ಹಿಂದೆ ಅಕ್ಕರೆಯ ಜೊತೆ ಮಧುರ ಭಾವವಿತ್ತೇ?
“ಕಪ್ಪಾತು ಬಾರಾ, ನಾನೇ ಅಷ್ಟು ಯೋಚನೆ ಮಾಡ್ತಾ ಇಲ್ಲೆ, ನೀ ಎಂಥಕ್ ಮಾಡ್ತೆ? ಹೆಂಗಂದ್ರೂ ಭಾವನೆಗಳೆಲ್ಲಾ ಸತ್ತು ಹೋಯ್ದು, ಬಾ…..” ಅವಳು ಕೆಳಗಿಳಿಯುತ್ತಾ ಕರೆಯುತ್ತಿದ್ದಳು. ಸಣ್ಣ ಗುಡ್ಡವಿಳಿಯುವ ತ್ರಾಣವೂ ಇರಲಿಲ್ಲ ನನ್ನಲ್ಲಿ. ಸೋತು ಬರುತ್ತಿದ್ದ ಕಾಲುಗಳು ಎದೆಯಲ್ಲಿನ ಪರ್ವತವನ್ನು ಹೊರಲಾರೆವೆಂದು ಚೀರಿಡುತ್ತಿದ್ದವು.

ವಿದಾಯ ಹೇಳಿ, ಮದುವೆಯ ಮುಂಚಿತ ಶುಭಾಷಯ ತಿಳಿಸಿ ಹಿಂತಿರುಗಿದೆ. ಏನೋ ಕಳೆದುಕೊಂಡ ಭಾವ ಅವಳ ಮುಖದಲ್ಲಿತ್ತು. ಮದುವೆಗೆ ಬರಲೇಬೇಕೆಂದಾಗ ಖಂಡಿತವಾಗಿಯೂ ಬರುವ ಆಶ್ವಾಸನೆಯಿತ್ತೆ. ಆದರೆ ನನ್ನೀ ಕಣ್ಣುಗಳಿಗೆ ಆ ಸಮಾರಂಭವನ್ನು ನೋಡುವುದು ಅಸಾಧ್ಯವಾದ ಕೆಲಸವೆಂದು ತಿಳಿದಿತ್ತು. ಆಶ್ವಾಸನೆ, ಕೇವಲ ಆಶ್ವಾಸನೆಯಾಗಷ್ಟೇ ಉಳಿಯಬೇಕಾದ ಕೆಲವು ಸಂದರ್ಭಗಳಲ್ಲಿ ಇದೂ ಒಂದು. ಮಾರನೇದಿನ ಗಣೇಶನನ್ನು ಭೇಟಿಯಾದೆ, ತಾನು ಹಪಹಪಿಸಿದ ಪ್ರೀತಿಯನ್ನು ಮರಳಿ ಪಡೆದ ಖುಶಿಯಿತ್ತು ಆತನಲ್ಲಿ. ಅಷ್ಟಕ್ಕೂ ಆತನೇಯಂತೆ ಅವಳನ್ನು ಮುಂಬೈಯಿಂದ ಕರೆತಂದು, ಓದಲು ಹೋಗಿದ್ದೆನೆಂದು ಸುಳ್ಳು ಹೇಳುವಂತೆ ತಿಳಿಸಿದ್ದು.

“ನಾನು ಅವ್ಳನ್ನ ಪ್ರೀತಿಸಿದ್ದೆ ನಿಜ, ಆದ್ರೆ ’ನೋಡಿ’ ಪ್ರೀತ್ಸಿನಿಲ್ಲೆ. ಸೌಂದರ್ಯ ಯಾವತ್ತೂ ನನ್ಗೆ ಮುಖ್ಯನೇ ಅಲ್ಲ. ನನ್ನವರು ಹೆಂಗಿದ್ರೂ ಸಂತೋಷ ಆಗಿರ” ಈಗಿನ ಕಾಲದಲ್ಲೂ ಇಂಥವರಿರುತ್ತಾರಾ ಅನಿಸಿತು. ಬಹುಶಃ ಧರ್ಮ, ವೇದಾಂತ, ಪುರಾಣಗಳೆಲ್ಲಾ ಇವರನ್ನೇ ಹೊಗಳಿ ಬರೆದಿದ್ದೆನ್ನಿಸಿತು. ಹಿಂದಿರುಗಿದೆ ಬೆಂಗಳೂರಿಗೆ. ನಾಲ್ಕು ದಿನ ಹಗಲೂ-ರಾತ್ರಿ ಬಿಕ್ಕಿ ಬಿಕ್ಕಿ ಅತ್ತೆ. ಯಾಕೋ ಗೊತ್ತಿಲ್ಲ, ಎಷ್ಟು ಅತ್ತರೂ ಎದೆಯಲ್ಲಿನ್ನೂ ಹಂಡೆ ನೀರನ್ನು ಹೊತ್ತಿರುವ ಭಾವ. ಆಕೆಯ ನೆನಪಿನ ಪರ್ವತವಿನ್ನೂ ಹಾಗೇ ಇದೆ ಎದೆಯೊಳಗೆ.
ನಾನ್ಯಾಕೆ ಅಳುತ್ತಿದ್ದೇನೆ?
ಗೊತ್ತಾಗುತ್ತಿಲ್ಲ.
ಮತ್ತೆ, ಮತ್ತೆ ಎದೆಯಲ್ಲೇನೋ ಕಲಕಿದ ಹಾಗೆ. ಮೃತ್ಯುಸಮಾನ ನೋವು, ಅಳು……….

Facebook ಕಾಮೆಂಟ್ಸ್

ಲೇಖಕರ ಕುರಿತು

Sandeep Hegde

ಭಟ್ಕಳ ತಾಲ್ಲೂಕಿನ ಕೆರೆಹಿತ್ಲು ಗ್ರಾಮದವನಾಗಿದ್ದು, ಮೊದಲ ಹಂತದ ಶಿಕ್ಷಣವನ್ನು ಭಟ್ಕಳ ಮತ್ತು ಬೈಂದೂರಿನಲ್ಲಿ ಮುಗಿಸಿ, ಎಂಜಿನಿಯರಿಂಗ್ ಪದವಿಯನ್ನು ಮೈಸೂರಿನ ಜಯಚಾಮರಾಜೇಂದ್ರ ಕಾಲೇಜಿನಲ್ಲಿ ಪಡೆದು, ಪ್ರಸ್ತುತ M.N.C ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದೇನೆ. ಚಿಕ್ಕಂದಿನಿಂದಲೂ ಜತನದಿಂದ ಉಳಿಸಿಕೊಂಡು ಬಂದ ಅಭ್ಯಾಸವೆಂದರೆ ಓದುವುದು ಮತ್ತು ಬರೆಯುವುದು. ಅರೆಮಲೆನಾಡಿನ ಜನಜೀವನ, ಭಾಷೆ, ಅಭ್ಯಾಸ, ಕೃಷಿ, ಪ್ರೇಮ, ಕಾಮ, ಹಾಸ್ಯ, ಮಣ್ಣು, ನಿಸರ್ಗ ಸೌಂದರ್ಯದ ಕುರಿತಾಗಿ ಹೇಳಲು ಹಾಗೂ ಬರೆಯಲು ಯಾವಾಗಲೂ ಸಿದ್ಧ. ಹತ್ತು ಹಲವು ವಿಚಾರಧಾರೆಗಳ, ವ್ಯಕ್ತಿಗಳ ಸೈದ್ಧಾಂತಿಕ ಧೋರಣೆಗಳನ್ನು ಗಮನಿಸಿ, ಕೊನೆಗೂ ಯಾವುದಕ್ಕೂ ಪಕ್ಕಾಗದೇ ಇರುವ ವ್ಯಕ್ತಿ. ಹಲವಾರು ಕಥೆಗಳು ಮಯೂರ, ತರಂಗ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!