ಕಥೆ

ಬದುಕು ಸಶೇಷವಂತೆ……. – 1

“ಏ ಗುತ್ತಾತನ, ಸೌಗಂಧಿದು ಮದ್ವೆಯಡ ಗಣೇಶನ ಸಂತಿಗೆ.” ಆಯಿ ಫೋನಲ್ಲಿ ಹೇಳಿದ ಮಾತುಗಳಿಗೆ ನಾನು ಬೆಚ್ಚಿಬಿದ್ದಿದ್ದೆ.
“ಅಲ್ದೆ, ನಿದ್ರೆಗಣ್ಣಲ್ಲಿ ಮಾತಾಡ್ತಿದ್ಯ ಎಂತದು! ಎಲ್ಲಿಯ ಸೌಗಂಧಿ, ಎಲ್ಲಿಯ ಗಣೇಶ? ಅದಂಥೂ ಓಡಿಹೋಗಿ ಒಂದ್ವರ್ಷ ಆಗ್ತೇ ಬಂತು.”
“ನೋಡು ಶಾಕ್ ಆಗೋತು ಅಲ್ದಾ? ನಂಗಕ್ಕೂ ಹಾಂಗೇ ಆತು. ರಾಮಣ್ಣ ಇವತ್ತು ಮದ್ವೆ ಕರೂಲೆ ಬಂದವ, ’ಅರ್ಜೆಂಟಲ್ ಮದ್ವೆ ಇಟ್ಕಂಡ್ದ’ – ಹೇಳಿ ಕಡೆಗ್ ಎಲ್ಲಾ ಹೇಳ್ದ”
“ಎಂಥದಡ ಕಥೆ!?”
“ಕೂಸು ಓಡೋಗದ್ದೆಲ್ಲಾ ಅಲ್ದಡ, ಬೆಂಗ್ಳೂರಲ್ಲಿ ಯಾವ್ದೋ ಯುನಿವರ್ಸಿಟೀಲಿ ಎಂಥದೋ ಒಂದ್ವರ್ಷದ್ದು ಕೋರ್ಸ್ ಇದ್ದಿತ್ತಡ. ಮನೇಲ್ ಕೇಳದ್ದಕ್ಕೆ ಆ ವಿಶ್ವಾಮಿತ್ರ ಸುಬ್ರಾಯ ಬೇಡ ಅಂದ್ನಡ. ಅದ್ಕೇ ಗಣೇಶನತ್ರ ಹೇಳಿ ಯಾರಿಗೂ ಹೇಳ್ದೇ ಕೇಳ್ದೇ ಹೋಗದ್ದಡ; ಓದುಲೆ ಹೇಳಿ.” ನನಗಂತೂ ಕೇಳಿ ತಲೆ ಕೆಟ್ಟು ಹೋಯಿತು. ಸಿನಿಮಾ-ಧಾರಾವಾಹಿಗಳನ್ನು ನಿಯಾಮಕನೂ ನೋಡತೊಡಗಿ ಆ ಮೂಲಕ ಪ್ರೇರಣೆ ಪಡೆದು ವೈಚಿತ್ರ್ಯಗಳನ್ನು ಸೃಷ್ಟಿಸತೊಡಗಿದನೇ ಎನಿಸಿತು.
“ಸರಿ ಆಯಿ; ನಾ ನಾಳೆಗೆ ಮಾಡ್ತೆ ಆತಾ.” ಫೋನಿಟ್ಟೆ.

ಆಯಿ ಹೇಳಿದ ವಿಷಯಗಳು, ಅಮವಾಸ್ಯೆಯಂದು ಬಿಳಿಕಾಗೆ ಕಂಡಷ್ಟು ಅಥವಾ ಕೋಣ ಕರಿಹಾಲು ಕೊಟ್ಟಿತೆಂಬಷ್ಟು ಸತ್ಯಕ್ಕೆ ದೂರವಾಗಿದ್ದವು. ಇದೇನಾದರೂ ನಿಜವಾದಲ್ಲಿ ಸಮಾಜದ ಹಿರಿಯರೆಂದುಕೊಂಡವರಿಗೆ ಮೂಲಭೂತವಾದ ಸಾಮಾನ್ಯ ತಿಳುವಳಿಕೆಯು ಒಂದಂಶದಷ್ಟೂ ಇಲ್ಲವೆಂಬುದು ಇನ್ನೂರು ಪ್ರತಿಶತ ಖಾತ್ರಿಯಾದಂತಾಗುತ್ತಿತ್ತು. ಒಂದೂರಿಗೆ ಕಲಿಯಲೆಂದು ಮನೆ ಬಿಟ್ಟು ಹೋಗುವುದೆಂದರೇನು? ಅದನ್ನು ಪತ್ತೆಹಚ್ಚಲಾಗದ ಪಾಲಕರ ಹೊಣೆಗಾರಿಕೆಯೇನು? ಅಷ್ಟಕ್ಕೂ ಇಷ್ಟು ಕಷ್ಟಪಟ್ಟು ಕಲಿತು ಸಾಧಿಸಿದ ನಂತರ ಹಿಂದಿರುಗಿ ಹಳ್ಳಿಕೊಂಪೆಗೆ ಬರುವ ಪ್ರಮೇಯವೇನಿತ್ತು? ವಾಸ್ತವಿಕ ಘಟನೆಗಳೆಂದು ಊರಲ್ಲಿ ಹರಿಬಿಟ್ಟ ಕಥೆಗೂ ನನ್ನ ಯೋಚನೆಗಳಿಗೂ ಏನೇನೂ ತಾಳೆಯಾಗುತ್ತಿರಲಿಲ್ಲ. ಏನೇ ಆಗಲಿ, ಒಮ್ಮೆ ಸುಗಂಧಿಗೆ ಫೋನೆ ಮಾಡಿ ವಿಚಾರಿಸೋಣವೆಂದುಕೊಂಡು ಮೊಬೈಲ್ ಕೈಗೆತ್ತಿಕೊಂಡೆ. ಛೇ, ಯಾವ ಮುಖವಿಟ್ಟುಕೊಂಡು ಮಾತಾಡಲಿ ಅವಳೊಂದಿಗೆ? ಒಂದು ವರ್ಷದಿಂದೀಚೆಗೆ ಒಮ್ಮೆಯೂ ಸಂಭಾಷಣೆ ನಡೆದಿಲ್ಲ ನಮ್ಮೀರ್ವರ ನಡುವೆ. ಈಗೇನು ತಿಳಿದುಕೊಂಡಾಳು? ಎಲ್ಲರಂತೇ ಇವನೂ ಸಂಶಯಪಟ್ಟನಲ್ಲ ಎಂಬ ಯೋಚನೆಯೊಂದು ಇದ್ದೇ ಇರುತ್ತಲ್ಲ? ಇಲ್ಲ, ನಾನೇನೂ ತಪ್ಪುಮಾಡಿಲ್ಲ. ಸೌಗಂಧಿ ಯಾವುದೋ ಹುಡುಗನೊಂದಿಗೆ ಓಡಿಹೋಗಿದ್ದಳೆಂಬ ಆಘಾತಕರ ಸುದ್ದಿ ತಿಳಿದೊಡನೆಯೇ ಸಂಪರ್ಕಿಸಲು ಪ್ರಯತ್ನಿಸಿದ್ದೆ. ನೂರುಸಲ ಮಾಡಿದರೂ ಎತ್ತಲಿಲ್ಲ; ಕೊನೆಕೊನೆಗೆ ರಿಂಗ್ ಆದತಕ್ಷಣವೇ ಸಂಪರ್ಕ ಕಡಿಯುತ್ತಿತ್ತು. ಒಂದು ವಾರದ ನಂತರ ’ಸ್ವಿಚ್ ಆಫ಼್’ ಎಂಬ ಹೆಣ್ಣುಧ್ವನಿ, ಉರಿಯುತ್ತಿದ್ದ ಕೋಪಕ್ಕೆ ತುಪ್ಪವೆರಚಿತ್ತು. ’ಏನೇ ಆಗಲಿ, ಎಲ್ಲಾದರೂ ಇರಲಿ; ಸುಖವಾಗಿರಲಿ’ ಎಂಬ ಧೋರಣೆಯೊಂದಿಗೆ ಸುಮ್ಮನಾಗಿದ್ದೆ. ಹೀಗಿರುವಾಗ ನನ್ನದು ತಪ್ಪು ಹೇಗಾದೀತು? ಸರಿ, ಫೋನ್ ಮಾಡೇಬಿಡುವುದೆಂದು ನಿರ್ಧರಿಸಿದೆ.
ಟ್ರಿಣ್‘ಣ್ ಟ್ರಿಣ್‘ಣ್…..
“ಹಲೋ, ಯಾರು?”
“ಹಲೋ, ಅಂ….., ಸೌಗಂಧಿ ಅಲ್ದಾ?”
“ಅಲ್ಲ, ನಾನು ಸಾಗರಿಕಾ; ನೀವ್ಯಾರು ಹೇಳಿ?”
“ನಾನೇ ಮಾರಾಯ್ತಿ, ಸಂಪತ್”
“ಓ….., ಸ್ಯಾಮ್! ಆರಾಮನೋ? ಅಪರೂಪಕ್ಕೆ ನೆನ್ಪು ಮಾಡ್ಕಂಡಿಕಿದೆ.” ನನ್ನ ಗೆಳೆತನದ ಬಳಗದಲ್ಲೆಲ್ಲಾ ಹಾಗೇ ಕರೆಯುವುದು. ಸೌಗಂಧಿಯ ತಂಗಿ ಸಾಗರಿಕಾ, ನಮ್ಮಿಬ್ಬರಿಗಿಂತ ಮೂರುವರ್ಷ ಚಿಕ್ಕವಳಾದರೂ ಏನೋ ಸಲಿಗೆಯಿತ್ತು.
“ಎಂಥದು? ದಿವ್ಸಾ ನೆನ್ಪು ಮಾಡ್ಕಂಬ್ಲೆ ನೀ ಎಂಥಾ ನನ್ ಗರ್ಲ್ ಫ಼್ರೆಂಡಾ?”
“ಆಗಿದ್ರೆ ಮಾಡ್ತಿತ್ತೆ ಹೇಳು. ಟ್ರೈ ಮಾಡ್ವನಾ? ನಂಗಂತೂ ಓಕೆನಪ್ಪಾ.”
“ಕತ್ತೆ. ಮನೇಲೆಲ್ಲಾ ಆರಾಮಾ?”
“ಹಾ, ಆರಾಮು.”
“ಸೌಗಂಧಿ ಇಲ್ಯಾ? ಮನೇಗ್ ಬಂದು ಹೇಳಿ ಗುತ್ತಾತು.”
“ಹಂ, ನಿನ್ನೇನೆ ನಿಂಗೆ ವಿಶ್ಯ ಗುತ್ತಾಗಿ ಫೋನ್ ಮಾಡ್ತೆ ಅಂದ್ಕಂಡಿತ್ತು. ಇವತ್ ಗುತ್ತಾತಾ!”
“ಹೌದು, ಯಾರಾದ್ರೂ ಹೇಳಿದ್ರೆ ಮಾತ್ರ ಗುತ್ತಾಗ್ತು; ನಾನೇನ್ ತ್ರಿಕಾಲಜ್ಞಾನಿ ಅಲ್ಲ.” ನನ್ನೊಳಗೆ ಕೋಪವೆನ್ನುವುದು ಸುನಾಮಿ ಅಲೆಯಂತೆ ಒಮ್ಮೇಲೆ ಉಕ್ಕಿ ಬಂದಿತ್ತು.
“ಸಿಟ್ಟು ಮಾಡ್ಕಳಡ್ದೋ ಮಾರಾಯ, ನೋಡು ಅದೇ ಬಂತು, ಕೊಡ್ತೆ. ಅಕ್ಕಾ….., ಸ್ಯಾಮ್ ಫೋನಲ್ಲಿದ್ದ, ತಕ”
“…..”
“ಹಲೋ, ಸೌಗಂಧಿ?”
“…..”
“ಮಾತಾಡೇ. ಆರಾಮಾ?”
ಆ ಕಡೆಯಿಂದ ಸಣ್ಣದಾಗಿ ಅಳುವಿನ ಧ್ವನಿ ಕೇಳಿಸಿತು. ಸೌಗಂಧಿ ಅಳುತ್ತಿದ್ದಳು, ಬಿಕ್ಕಿಬಿಕ್ಕಿ.
“ಅಳಡ್ದೆ ಮಾರಾಯ್ತಿ, ನೀ ಮಾತಾಡೂ ಬದ್ಲಿಗೆ ಸುಮ್ಸುಮ್ನೆ ಕಣ್ಣೀರ್ ಹಾಕ್ತಿದ್ರೆ ಬ್ಯಾಲೆನ್ಸ್ ಅಷ್ಟೂ ಖಾಲಿಯಾಗಿ ಫೋನ್ ಕಟ್ಟಾಗ್ತು ಈಗ ನೋಡು” ಚಿಕ್ಕಂದಿನ ಸಲಿಗೆಯಲ್ಲಿ ಹೇಳಿದೆನಾದರೂ ಅವಳೇನು ತಪ್ಪು ತಿಳಿದುಕೊಂಡಳೋ ಎಂದು ಭಯವಾಯಿತು.
“ನಿನ್ನತ್ರ ಮಾತಾಡ; ಊರಿಗ್ ಬತ್ಯಾ?”
“ಯಾವಾಗ?”
“ನಾಳೇಗೇ ಬರ”
“ಸರಿ, ಈಗೇ ಹೊರಡ್ತೆ. ಬೆಂಗ್ಳೂರಿಂದ ಮೂರ್-ನಾಲ್ಕು ಬಸ್ ಇದ್ದು. ನಾಳೆ ಸಂಜೆಗೆ ಸಿಗ್ತೆ.” ಅವಳು ಮತ್ತೇನೂ ಮಾತಾಡಲೇ ಇಲ್ಲ, ಫೋನಿಟ್ಟ ಸದ್ದು.
ಕೈಗೆ ಸಿಕ್ಕ ಬ್ಯಾಗೊಂದರಲ್ಲಿ ಎರಡು ಪುಸ್ತಕ ಮತ್ತು ಲ್ಯಾಪ್ಟೊಪ್ ತುಂಬಿಕೊಂಡೆ. ಪ್ರೊಜೆಕ್ಟ್ ವರ್ಕ್ ಇದ್ದುದರಿಂದ ಗಣಕಯಂತ್ರ ಅವಶ್ಯವಾಗಿತ್ತು. ಆಯಿಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಹಬ್ಬಗಳೇನೂ ಇಲ್ಲವಾದ್ದರಿಂದ ಬಸ್ಸಿನಲ್ಲಿ ಯಾವುದೇ ತೊಂದರೆಯಿಲ್ಲದೇ ಜಾಗ ದೊರಕಿತ್ತು. ಕಣ್ಣು ಮುಚ್ಚಿದರೂ ನಿದ್ದೆ ಸುಳಿಯದೇ ಪರದೆಯ ಮೇಲಿನ ಚಲನಚಿತ್ರದಂತೆ ಒಂದೊಂದೇ ಘಟನೆಗಳು ಸರಸರನೆ ಸರಿದವು. ರಾತ್ರಿಯ ಹತ್ತು ತಾಸಿನ ಪ್ರಯಾಣದಲ್ಲಿ ಕಣ್ಣುಮುಚ್ಚಿದ್ದೇ ಬೆಳಗಿನ ಜಾವ ಮೂರು ಗಂಟೆಗೆ.

ನನಗೆ, ಅವಳು – ಎಂದರೆ ಸೌಗಂಧಿ ಪರಿಚಯವಾದದ್ದು ಹೈಸ್ಕೂಲಿಗೆ ಹೋಗುವಾಗ. ನಾನು ಬಸ್ ಹತ್ತುತ್ತಿದ್ದುದು ಮೊದಲನೇ ಸ್ಟಾಪಿನಲ್ಲಾದರೆ, ಅವಳದ್ದು ಎರಡನೇಯದು. ಸುಮಾರು ಅರ್ಧ ದಾರಿಯವರೆಗೂ ಬಸ್ಸಿನಲ್ಲಿರುತ್ತಿದ್ದುದು ನಾಲ್ಕೇ ಜನ; ನಾವಿಬ್ಬರು ಮತ್ತು ಡ್ರೈವರ್-ಕಂಡಕ್ಟರ್. ಒಂದೇ ಶಾಲೆ ಮತ್ತು ತರಗತಿಯಾದ್ದರಿಂದಲೋ ಅಥವಾ ಇಬ್ಬರೂ ಕನ್ನಡ ಮಾಧ್ಯಮದಿಂದ ಆಂಗ್ಲ ಮಾಧ್ಯಮಕ್ಕೆ ಹೋದ್ದರಿಂದಲೋ ಏನೋ ಕೂಡಲೇ ಪರಿಚಯವಾಯಿತು. ಮುಂದಿನ ಕೆಲವೇ ದಿನಗಳಲ್ಲಿ ತರಗತಿಯವರೆಲ್ಲಾ ’ಆಡಿಕೊಳ್ಳುವಷ್ಟು’ ಸ್ನೇಹವಿತ್ತು ನಮ್ಮಲ್ಲಿ. ಬಸ್ಸಿನಲ್ಲೂ ಕೂಡ ಜನ ನೋಡಿ ನಗುತ್ತಿದ್ದರು. ಇಂತಿರುವಾಗ ಮೂರನೇ ವಾರ, ಅವಳಪ್ಪ ಸುಬ್ರಾಯ ನಮ್ಮ ಮನೆಗೇ ಬಂದ. ಅವನ ಸಿಟ್ಟು ಮತ್ತು ತೆಗೆದುಕೊಳ್ಳುವ ಆತುರದ ನಿರ್ಧಾರಗಳು ’ವಿಶ್ವಾಮಿತ್ರ’ ಎಂಬ ಬಿರುದಾಂಕಿತವಾಗಲು ಕಾರಣವಾಗಿದ್ದವು. ಎದುರಿಗ್ಯಾರೂ ಸಂಭೋದಿಸದಿದ್ದರೂ ಹೇರಳವಾಗಿ ಬಳಕೆಯಾಗುತ್ತಿದ್ದ ಅಡ್ಡಹೆಸರದು. ಅಪ್ಪನೊಂದಿಗೆ ಸಂತೆಗೆ ಹೋದಾಗಲೆಲ್ಲಾ ಈ ಸುಬ್ರಾಯನನ್ನು ನೋಡುತ್ತಿದ್ದ ನೆನಪು. ಪ್ರೀತಿಯಿಂದ ತಲೆ ಸವರಿ ನೈಲಾನ್ ಬಳ್ಳಿಯ ಕೈಚೀಲದಿಂದೊಂದು ಚಾಕಲೇಟ್ ತೆಗೆದು ಕೊಡುತ್ತಿದ್ದ. ’ಗೊಬ್ಬರ ಕಂಬಳ’ ಇದೆಯೆಂದು ಕರೆದಾಗಲೆಲ್ಲಾ ತಪ್ಪದೇ ಬರುತ್ತಿದ್ದ. ಗೊಬ್ಬರ ಹೊರುವಾಗ ಕರೆದು ಗುಂಡಿಯ ಪಕ್ಕದಲ್ಲೇ ಕೂರಿಸಿಕೊಂಡು ಏನಾದರೂ ಛೇಡಿಸುತ್ತಲೇ ಇರುತ್ತಿದ್ದ ಆಸಾಮಿ, ನಿನ್ನದೇ ವಯಸ್ಸಿನ ಮಗಳೊಬ್ಬಳಿದ್ದಾಳೆಂದು ಹೇಳಿರಲೇ ಇಲ್ಲ. ಗೊತ್ತಿದ್ದರೆ ನಾನ್ಯಾಕೆ ಮಾತಾಡಿಸುತ್ತಿದ್ದೆ ಅವಳನ್ನು; ’ಸಹವಾಸವೇ ಬೇಡ ತಾಯಿ’ ಎಂದು ಸುಮ್ಮನಾಗಿಬಿಡುತ್ತಿದ್ದೆ. ಆವರೆಗೂ ಅವರಮನೆಗೆ ಹೋಗುವ ಸಂದರ್ಭ ಬಂದಿರಲೂ ಇಲ್ಲ. ಮೊನ್ನೆಮೊನ್ನೆಯಷ್ಟೇ ಗೊತ್ತಾದ ವಿಷಯವಿದು.

ಇಂತಿಪ್ಪ ವಿಶ್ವಾಮಿತ್ರ ಧಡಬಡಿಸಿಕೊಂಡು ಬಂದಿದ್ದು ನೋಡಿ, ಎದೆ ಧಸಕ್ಕೆಂದಿತು. ಇದುವರೆಗೂ ಅಪ್ಪನಿಂದಲೇ ಪೆಟ್ಟುತಿನ್ನದಿದ್ದವನಿಗೆ, ಈತನಿಂದ ಒದೆ ಬೀಳುತ್ತದಲ್ಲಾ ಎಂಬ ಭಯದಿಂದ ಅಡುಗೆ ಮನೆಗೆ ಓಡಿದೆ.
“ಭಾವ, ಏ ಈಶ್ವರ್ ಭಾವ…..”
ಊರ ಕಡೆ ಒಬ್ಬರಿಗೊಬ್ಬರು ಪರಸ್ಪರ ಕರೆದುಕೊಳ್ಳುವುದು ಹಾಗೇ. ಮಧ್ಯಾಹ್ನ ಊಟ ಮಾಡಿ ಮಲಗಿದ್ದ ಅಪ್ಪ ಎದ್ದುಕುಳಿತ.
“ಬಾರೋ ಮಾರಾಯ. ಕೂತ್ಕ; ಆಸ್ರಿಗೆ?”
“ಎಂಥದು ಬೇಡ. ಅಲ್ಲಾ, ಒಂದ್ ಮಾತು ಹೇಳೂಲ್ ಆಗ್ತಿಲ್ಯನ; ನನ್ ಮಗ್ನ ಇಂಥಾ ಹೈಸ್ಕೂಲಿಗ್ ಸೇರಿಸ್ತೆ ಹೇಳಿ?”
“ಎಂಥಾ ಆತು ಈಗ?”
ಅಪ್ಪ ಗಾಬರಿಯಾಗಿದ್ದ. ನಾನಂತೂ ಆಯಿಯ ಹಿಂದೆ ನಿಂತು ಗಡಗಡ ನಡುಗುತ್ತಿದ್ದೆ. ಚಡ್ಡಿಯಲ್ಲಿ ಚೊಳ್ಳೆಂದು ಇಳಿಯುವುದೊಂದು ಬಾಕಿಯಿತ್ತು.
“ಸೌಗಂಧಿ ಹೋಪು ಶಾಲೆಗೇ ಇವ್ನೂ ಹೋಪ್ದಡ”
“ಎಂಥಾ ಆತು ಈಗ? ನಮ್ಮನೆ ಮಾಣಿ ಎಂಥದಾರೂ ಹೇಳಿದ್ನಡ?”
“ಥೋ ಅದೆಲ್ಲಾ ಅಲ್ದ. ನಂಗೆ ನಿನ್ನೆ ಗುತ್ತಾತು; ಹಿಂಗೇ ಹೊರ್ಗಡೆ ಹೋಗಿದ್ದಾಗ ಯಾರೋ ಹೇಳ್ದ- ’ಕೂಸು ಬಸ್ಸಲ್ಲಿ ಯಾವ್ದೋ ಮಾಣಿ ಸಂತಿಗೆ ಮಾತಾಡ್ತ ಕೂತ್ಕತ್ತು, ಸ್ವಲ್ಪ ವಿಚಾರಿಸ್ಕಳಿ’. ಮನೇಗ್ ಬಂದು ಗಟ್ಟಿಯಾಗ್ ಕೇಳ್ದೆ. ನಿಮ್ಮನೆ ಮಾಣಿ ಹೇಳಿ ಗುತ್ತಾತು, ಅದ್ಕೇ ಬಂದೆ.”
ನನಗೆ ಖಾತ್ರಿಯಾಯ್ತು. ಇವತ್ತಂತೂ ಈ ಸುಬ್ರಾಯ ತಿಥಿ ಮಾಡುವುದು ಗ್ಯಾರಂಟಿ; ಯಾವ ಬ್ರಹ್ಮನಿಗೂ ತಪ್ಪಿಸಲಾಗದು. ಮಿದುಳು ಭಯದಿಂದ ಯೋಚಿಸುವುದನ್ನೇ ನಿಲ್ಲಿಸಿತ್ತು. ಆತ ಬಂದಾಗಲೇ ಹಣೆಯಲ್ಲಿ ಮುತ್ತುಗಟ್ಟಿದ್ದ ಬೆವರ ಹನಿಗಳು ಈಗ ಮಳೆಗಾಲದ ಹಳ್ಳದ ತರಹ ಮುಖದ ಮೇಲೆಲ್ಲಾ ಇಳಿಯುತ್ತಿದ್ದವು. ಅರ್ಧ ಚಡ್ಡಿ ಒದ್ದೆಯಾಗಿದ್ದು ಬೆವರಿನಿಂದಲೋ ಅಥವಾ ಇನ್ನಾತರಿಂದಲೋ ಎಂದು ಯೋಚಿಸುವ ವ್ಯವಧಾನವೂ ಇರಲಿಲ್ಲ. ಒಮ್ಮೆ ತೋಟಬಿದ್ದು ಓಡಿಹೋಗೋಣವೇ ಎಂದುಕೊಂಡೆ. ಆತನೇನಾದರೂ ಹೊಡೆಯಬಂದರೆ ಪರಾರಿಯಾಗಬೇಕಾದುದು ಮೊದಲ ಕರ್ತವ್ಯವೆಂದು ಮನದಲ್ಲಿ ಪಕ್ಕಾ ಮಾಡಿಕೊಂಡೆ.
“ಅದ್ಕೆ ಎಂಥಾ ಮಾಡ ಈಗ? ಸಣ್ಣ ಮಕ್ಳಪ, ಒಂದೇ ಕ್ಲಾಸು…..” ಅಪ್ಪ ಮುಂದೆ ಮಾತಾಡುವ ಮೊದಲೇ ಆತ ಬಾಯಿಹಾಕಿದ.
“ಅದ್ಕಲ್ದೋ ಮಾರಾಯ, ನಮ್ಮನೆ ಕೂಸಿಗೆ ಇಂಗ್ಲೀಷು, ಗಣಿತ ಎಲ್ಲಾ ಅರ್ಥ ಆಗ್ತಿಲ್ಯಡ. ದಿವ್ಸಾ ಸಂಪತ್ ಸಂತಿಗೆ ನಿಮ್ಮನೆಗೇ ಬಂದ್ ಹೇಳಿಸ್ಕಳ್ಲಿ ಸ್ವಲ್ಪ. ಕಡೆಗೆ ಸಂಜೆ ಹೊತ್ತಿಗೆ ನಾ ಬಂದು ಕರ್ಕಂಡ್ ಹೋಗ್ತೆ. ಅಡ್ಡಿಲ್ಯಾ?”

ಅಬ್ಬಬ್ಬಾ, ಗುಡ್ಡದಂತೆ ಬಂದಿದ್ದು ಕಡ್ಡಿಯಂತೆ ಹೋಯಿತು ಎನ್ನುತ್ತಾರಲ್ಲ, ಹಾಗಾಗಿತ್ತು ನನ್ನ ಸ್ಥಿತಿ. ಕೂಡಲೇ ಹೋಗಿ ಮುಖ ತೊಳೆದುಕೊಂಡು ಬಂದವ, ಒಮ್ಮೆ ಮೂಸಿ, ಒದ್ದೆಯಾಗಿದ್ದು ಬೆವರಿನಿಂದಲೆಂದು ಖಾತ್ರಿಪಡಿಸಿಕೊಂಡು ಧೈರ್ಯಕ್ಕಾಗಿ ಸ್ವತಃ ಬೆನ್ನುತಟ್ಟಿಕೊಂಡಿದ್ದೆ. ಇದಾದ ಮೇಲೆ ಐದುವರ್ಷಗಳ ಕಾಲ, ಎಂದರೆ ಪಿಯುಸಿ ಮುಗಿಯುವವರೆಗೂ ನಾವಿಬ್ಬರೂ ಒಟ್ಟಿಗೇ ಓದಿದ್ದು. ಯಾರ್ಯಾರೋ, ಏನೇನೋ ಹೇಳಿದರೂ ತಲೆಕೆಡಿಸಿಕೊಂಡಿರಲಿಲ್ಲ. ಅಷ್ಟೇಕೆ, ವಿಶ್ವಾಮಿತ್ರನೆದುರಿಗೇ ಬೇರೆಯವರು ನನ್ನನ್ನು ರೇಗಿಸಿದರೂ ಆತನೇನೂ ಅನ್ನದೇ ನಕ್ಕು ಸುಮ್ಮನಾಗಿಬಿಟ್ಟಿದ್ದ. ನಾವಿಬ್ಬರೂ ಇರುವಾಗ ಯಾರಾದರೂ ಛೇಡಿಸಿದರೆ ಅವಳ ಹಾಲಿನಂಥ ಕೆನ್ನೆಗಳು ಅದೆಷ್ಟು ಕೆಂಪಗಾಗುತ್ತಿದ್ದವೆಂದು ನನಗೀಗಲೂ ನೆನಪಿದೆ. ಅದ್ಯಾಕೆ ಅವಳಷ್ಟು ಸುಂದರಿ ಬೇರೆ ಯಾರೂ ಕಾಣುವುದೇ ಇಲ್ಲವೆಂದು ದಿನವಿಡೀ ತಲೆಕೆಡಿಸಿಕೊಂಡು ಯೋಚಿಸಿದ್ದೂ ಇದೆ. ಈರ್ವರ ನಡುವೆ ಪರಸ್ಪರ ಅದ್ಯಾವ ಪ್ರಚ್ಛನ್ನ ಭಾವನೆಗಳಿದ್ದುವೆಂದು ಇದುವರೆಗೂ ಗೊತ್ತಿಲ್ಲದಿದ್ದರೂ, ಉತ್ಕೃಷ್ಟ ಮಟ್ಟದ ಗೆಳೆತನ, ಸ್ನೇಹ, ಕಾಳಜಿ ಮಾತ್ರ ಇದ್ದೇಇತ್ತು.

ಹಂ, ಗಣೇಶನೂ ನೆನಪಾಗುತ್ತಿದ್ದಾನೆ. ಈ ಗಣೇಶ ಎಂಬಾತ ವಯಸ್ಸಿನಲ್ಲಿ ನನಗಿಂತ ಎರಡು ವರ್ಷ ದೊಡ್ಡವನಾದರೂ ತರಗತಿಯಲ್ಲಿ ಮಾತ್ರ ಒಂದೇ ವರ್ಷದ ಅಂತರ. ಎಸ್ಸೆಲ್ಸಿಯಲ್ಲಿ ಢುಮ್ಕಿ ಹೊಡೆದ ನಂತರ ಆತ ಓದುವುದನ್ನೇ ನಿಲ್ಲಿಸಿಬಿಟ್ಟಿದ್ದ. ಮನೆಯಲ್ಲಿ ಎಲ್ಲರ ಬುದ್ಧಿವಾದವನ್ನೂ ಕಡೆಗಣಿಸಿಬಿಟ್ಟ. ಕೂತು ತಿಂದರೂ ಕರಗದಷ್ಟು ಆಸ್ತಿ ಇದ್ದುದರಿಂದಲೂ, ವಂಶಕ್ಕೊಂದು ಕುಡಿಯಾದ್ದರಿಂದಲೂ ಓದೆಂದು ಜಾಸ್ತಿ ಒತ್ತಾಯವನ್ನೂ ಮಾಡಲಿಲ್ಲ. ಎಸ್ಸೆಲ್ಸಿಯವರೆಗೂ ನಮ್ಮೊಂದಿಗೇ ಬರುತ್ತಿದ್ದ ಗಣೇಶನಿಗೆ ಏಕಾಏಕಿ ಅದೇನಾಯ್ತೋ ಗೊತ್ತಿಲ್ಲ, ದಿನಾ ಬೆಳಿಗ್ಗೆ-ಸಂಜೆ ಸೌಗಂಧಿಯ ಬಸ್ ಸ್ಟಾಪ್ನಲ್ಲಿ ನಿಲ್ಲುತ್ತಿದ್ದ. ಆಗ ನಾವು ಕಾಲೇಜಿನಲ್ಲಿ ಓದುತ್ತಿದ್ದ ಸಮಯ. ಆತನನ್ನು ನೋಡಿದರೆ ದ್ರೌಪದಿಯ ಪಕ್ಕದಲ್ಲಿ ನಿಂತ ಭೀಮನಂತೆ ಕಾಣುತ್ತಿದ್ದ. ಸುಮ್ಮನೇ ಬರುತ್ತಿದ್ದವ, ಬಸ್ ಸ್ಟಾಪಿನ ಪಕ್ಕದ ಮರದ ಕೆಳಗೆ ನಿಂತು ಸೌಗಂಧಿ ಹೋಗುವವರೆಗೂ ನೋಡುತ್ತಲೇ ಇರುತ್ತಿದ್ದ. ದಿನಾ ಇದೇ ವೃತ್ತ ಪುನಃ ಪುನಃ ಸುತ್ತುತ್ತಿತ್ತು. ಈ ವಿಷಯ ವಿಶ್ವಾಮಿತ್ರನಿಗೆ ಗೊತ್ತೇ ಆಗೋಯ್ತು ನೋಡಿ….., ಗಣೇಶನಿಗೆ ಎರಡು ಬಾರಿಸಿಯೇ ಬಿಟ್ಟ. ಅವರಮನೆಗೂ ಹೋಗಿ ಕೂಗಾಡಿ ಬಂದ. “ಒಂದ್ ಗಟ್ಟಿ ಕೆಲ್ಸಾನೂ ಇಲ್ದೇ ಮನೇಲಿ ನಾಯಿ ಥರ ಬಿದ್ದಿರುವವಂಗೆ ನನ್ ಮಗಳ್ನ ಕೊಡ್ತ್ನಿಲ್ಲೆ” ಎಂದು ರಾಮಾರಂಪ ಮಾಡಿದ್ದ.

ಅದು ಎರಡನೇ ಪಿಯುಸಿಯ ಕೊನೆಯ ದಿನಗಳು. ಬಸ್ಸ್ಟ್ಯಾಂಡಿನಲ್ಲಿ ನಾವಿಬ್ಬರೂ ಕೂತಿದ್ದಾಗ ಬಂದ ಗಣೇಶ, ಸೌಗಂಧಿಯ ಪಕ್ಕ ಆಸೀನನಾದ.
“ಬದುಕು ನಡ್ಸೂಲೆ ಬೇಕಾಗದ್ದು ದೊಡ್ಡ ಜಾಬು, ಕೈತುಂಬಾ ಹಣ ಅಲ್ಲ; ಹೃದಯದ ತುಂಬಾ ಪ್ರೀತಿ”
“ನಂಗ್ ಪಾಠ ಹೇಳೂದ್ ಬೇಡ ನೀನು. ಕೆಲ್ಸ ಇಲ್ದೇ ಹಳ್ಳೀಲಿ ತೋಟ-ಮನೆ ಮಾಡ್ಕಂಡು ಇಪ್ಪವ ಇಷ್ಟ ಇಲ್ಲೆ; ಇನ್ನೂ ಓದ ನಾನು.”
“ನಮ್ಮನೇಲಿ ಎಂಥಾ ತೊಂದ್ರೆ ಇದ್ದು ಹೇಳು? ಪೇಟೆಗಿಂತ ಸೌಕರ್ಯ ಇದ್ದು. ಎಷ್ಟ್ ಓದ್ತ್ಯ ಓದು.”
“ಜೀವನದಲ್ಲಿ ಒಳ್ಳೆ ವಿದ್ಯೆ ಕೆಲ್ಸ ಇದ್ರೆ ಮಾತ್ರ ನಾಲ್ಕು ಜನ ಗುರ್ತಿಸಿ ಗೌರವಿಸ್ತ…..,”
“ವಿದ್ಯೆ-ಕೆಲಸದಿಂದ ಪ್ರೀತಿನ ಕೊಂಡುಕೊಳ್ಳೂಲೆ ಆಗ್ತಿಲ್ಲೆ. ನಾಲ್ಕು ಜನರತ್ರ ನಮಸ್ಕಾರ ಮಾಡ್ಸಿಕಂಬರೆಲ್ಲಾ ಜೀವನದಲ್ಲಿ ಗೆಲ್ತ ಹೇಳೇನೂ ಇಲ್ಲೆ.”
“ನೋಡು, ನಂಗೆ ಊರಲ್ ಇಪ್ಪುಲೇ ಇಷ್ಟ ಇಲ್ಲೆ ಗುತ್ತಾತಾ. ಸುಮ್ನೆ ನನ್ ಹಿಂದೆ ಬೀಳಡ, ನಿನ್ ಕೆಲ್ಸ ನೋಡ್ಕೊ ಹೋಗು.”
ಅಬ್ಬಾ ಇವಳ…! ಯಾರ ಜೊತೆಗೂ ಮಾತೇ ಆಡದವಳಿಗೂ ಇಷ್ಟು ಬರುತ್ಯೇ. ಆಶ್ಚರ್ಯವಾಯಿತು. ಬಸ್ಸಲ್ಲಿ ಹೋಗುವಾಗ ಹೇಳಿದೆ, “ನಂಗೆ ಊರಲ್ಲಿಪ್ಪವ ಇಷ್ಟ ಇಲ್ಲೆ ಹೇಳಿ ಹೇಳೂಲಾಗಾಗಿತ್ತು ನೀನು.”
“ಎಂಥಕ್ಕೆ?”
“ಎಲ್ಲರೂ ಹಿಂಗೇ ಅಂದ್ರೆ ಊರಲ್ಲಿಪ್ಪವ್ರನ್ನ ಯಾರ್ ಮದ್ವೆ ಆಗ್ತ?”
“ನಿಂದೊಳ್ಳೆ ಕಥೆ ಆತು. ಅದ್ಕೆ ನಾ ಎಂಥಾ ಮಾಡವೋ ಮಾರಾಯ, ಯಾರಿಗೋ ಮಕ್ಳಾಯ್ದಿಲ್ಲೆ ಹೇಳಿ ನಾ ಹೆತ್ತುಕೊಡ್ತೆ ಹೇಳೂಲ್ ಆಗ್ತಾ? ಹಾಗಾದ್ರೆ ಹೆಣ್ ಮಕ್ಳು ಕನಸು ಕಾಂಬ್ಲೇ ಆಗ್ದ?”
ನನ್ನ ಬಳಿ ಉತ್ತರವಿರಲಿಲ್ಲ; ಸುಮ್ಮನಾದೆ. ಇದಾದ ನಂತರ ಗಣೇಶ ಬಸ್ ಸ್ಟಾಪಿನ ಬಳಿ ಕಾಣಿಸಿಕೊಳ್ಳಲೇ ಇಲ್ಲ. ದಿನಾಲೂ ಬೆಳಿಗ್ಗೆಯಿಂದ ಸಂಜೆಯವರೆಗೂ ತೋಟದಲ್ಲಿರುತ್ತಿದ್ದ. ಮಗ ಶಾಲೆ ಬಿಟ್ಟರೂ ತುಂಡು ಅಲೆಯದೇ ಜವಾಬ್ದಾರಿಯನ್ನು ಹೊರಲು ನಿಂತಿದ್ದು ಮನೆಯವರಿಗೂ ಖುಷಿಯ ವಿಷಯವಾಗಿತ್ತು. ಈಗ ಗಣೇಶನಿಗೆ ಊರಲ್ಲೆಲ್ಲೇ ಹೋದರೂ ಗೌರವವಿದೆ. ಅಷ್ಟೊಂದು ಚಿಕ್ಕವನಾದರೂ ಆತನ ತೀರ್ಪುಗಳಿಗೆ, ಮಾತಿಗೆ ಹಿರಿಯರೂ ’ಹೂಂ’ಗುಟ್ಟುತ್ತಾರೆ. ಇದ್ದರೆ ಗಣೇಶನಂಥ ಮಗನಿರಬೇಕೆಂಬುದು ಆಗಾಗ ಕೇಳಿಬರುವ ಮಾತು.

ಬೆಳಿಗ್ಗೆ ಮನೆಯಂಗಳದಲ್ಲಿ ಕಾಲಿಡುವಾಗಲೇ ಸಬ್ಬಸಿಗೆ ಇಡ್ಲಿಯ ಘಮಘಮ ಪರಿಮಳ ರಾಚುತ್ತಿತ್ತು. ಸ್ನಾನ ಮಾಡಿ ಉಪಾಹಾರ ಮುಗಿಸಿದೆ. ಎಷ್ಟೇ ಪ್ರಯಾಣ ಮಾಡಿ ಸುಸ್ತಾದರೂ ಹಗಲಲ್ಲಿ ನಿದ್ದೆ ಮಾಡಿ ರೂಢಿಯೇ ಇಲ್ಲ. ಅಪ್ಪನೊಂದಿಗೆ ತೋಟ ತಿರುಗಿ ಬಂದು ಆಯಿಗೊಂದಿಷ್ಟು ರೇಗಿಸಿ ಬೈಯ್ಯಿಸಿಕೊಂಡೆ. ಅದ್ಯಾಕೋ ಗೊತ್ತಿಲ್ಲ, ದಿನಕ್ಕೊಮ್ಮೆಯಾದರೂ ಬೈಯ್ಯಿಸಿಕೊಳ್ಳದಿದ್ದಲ್ಲಿ ಉಂಡ ಊಟ ಕರಗುವುದೇ ಇಲ್ಲವೇನೋ.
ಮಧ್ಯಾಹ್ನ ಅವಳ ಮನೆಗೆ ಹೋದೆ. ಎಲ್ಲರಿಂದ ಕುಶಲೋಪಚಾರವಾಗಿ ಮಾಮೂಲಿನಂತೆ ಚಹಾ ಸಮಾರಾಧನೆ ಆಯಿತು.

ಮುಂದುವರಿಯುವುದು

Facebook ಕಾಮೆಂಟ್ಸ್

ಲೇಖಕರ ಕುರಿತು

Sandeep Hegde

ಭಟ್ಕಳ ತಾಲ್ಲೂಕಿನ ಕೆರೆಹಿತ್ಲು ಗ್ರಾಮದವನಾಗಿದ್ದು, ಮೊದಲ ಹಂತದ ಶಿಕ್ಷಣವನ್ನು ಭಟ್ಕಳ ಮತ್ತು ಬೈಂದೂರಿನಲ್ಲಿ ಮುಗಿಸಿ, ಎಂಜಿನಿಯರಿಂಗ್ ಪದವಿಯನ್ನು ಮೈಸೂರಿನ ಜಯಚಾಮರಾಜೇಂದ್ರ ಕಾಲೇಜಿನಲ್ಲಿ ಪಡೆದು, ಪ್ರಸ್ತುತ M.N.C ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದೇನೆ. ಚಿಕ್ಕಂದಿನಿಂದಲೂ ಜತನದಿಂದ ಉಳಿಸಿಕೊಂಡು ಬಂದ ಅಭ್ಯಾಸವೆಂದರೆ ಓದುವುದು ಮತ್ತು ಬರೆಯುವುದು. ಅರೆಮಲೆನಾಡಿನ ಜನಜೀವನ, ಭಾಷೆ, ಅಭ್ಯಾಸ, ಕೃಷಿ, ಪ್ರೇಮ, ಕಾಮ, ಹಾಸ್ಯ, ಮಣ್ಣು, ನಿಸರ್ಗ ಸೌಂದರ್ಯದ ಕುರಿತಾಗಿ ಹೇಳಲು ಹಾಗೂ ಬರೆಯಲು ಯಾವಾಗಲೂ ಸಿದ್ಧ. ಹತ್ತು ಹಲವು ವಿಚಾರಧಾರೆಗಳ, ವ್ಯಕ್ತಿಗಳ ಸೈದ್ಧಾಂತಿಕ ಧೋರಣೆಗಳನ್ನು ಗಮನಿಸಿ, ಕೊನೆಗೂ ಯಾವುದಕ್ಕೂ ಪಕ್ಕಾಗದೇ ಇರುವ ವ್ಯಕ್ತಿ. ಹಲವಾರು ಕಥೆಗಳು ಮಯೂರ, ತರಂಗ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!