ಕಥೆ ಕಾದಂಬರಿ

ಆತ್ಮ ಸಂವೇದನಾ ಅಧ್ಯಾಯ 12

ಆತ್ಮ ಸಂವೇದನಾ ಅಧ್ಯಾಯ 11

ಆತ್ಮ ಗೋಗರೆದ, ತಂದೆಯೆದುರು ಮಗುವಿನ ಕಕ್ಕುಲತೆ ಅವನದು.

” ವರ್ಷಿ ಒಮ್ಮೆ ಯೋಚಿಸಿ ನೋಡು ನಾನು ಯಾವಾಗಲೂ ನಿನ್ನನ್ನು ತಂದೆಯೆಂದು ಗೌರವಿಸಿದ್ದೇನೆ. ನಿನ್ನ ಸಾಧನೆಗಳ ಬಗ್ಗೆ ನನಗೆ ನಂಬಿಕೆಯಿದೆ; ಸಾಮರ್ಥ್ಯಗಳ ಬಗ್ಗೆ ಸಂಶಯವಿಲ್ಲ. ಇದೊಂದು ಆವಿಷ್ಕಾರವನ್ನು ಇಲ್ಲಿಗೇ ನಿಲ್ಲಿಸಿಬಿಡು. ಮನುಷ್ಯನಲ್ಲಿ ಕಡಿದುಹೋದ ಭಾವನೆಗಳ ಕೊಂಡಿಯನ್ನು ಮತ್ತೆ ಬೆಸೆಯಲು ಪ್ರಯತ್ನಿಸೋಣ. ಎಲ್ಲವನ್ನೂ ನಾಶ ಮಾಡಿ ಹೊಸ ಸೃಷ್ಟಿಗೆ ಮೊದಲಾಗುವ ಮುನ್ನ ಇರುವುದನ್ನೇ ಬದಲಾಯಿಸಿವ್ಚಂದಗಾಣಿಸುವ ಪ್ರಯತ್ನಕ್ಕೆ ನಾಂದಿಯಾಗಲಿ, ವರ್ಷಿ ನನ್ನ ಮಾತು ಕೇಳು” ಬೇಡಿಕೊಂಡ ಆತ್ಮ.

ವರ್ಷಿ ಅವನದೇ ದಿಕ್ಕಿನಲ್ಲಿ. ಅವನೆಂದಿಗೂ ಅವನ ಮೂಗಿನ ನೇರಕ್ಕೆ ಮಾತ್ರ.

” ನಾನು ಮಾಡುತ್ತಿರುವುದೂ ಅದೇ ಆತ್ಮ. ಜನರಲ್ಲಿ ಭಾವನೆಗಳು ಬತ್ತಿ ಹೋಗಲು ಅವರಲ್ಲಿನ ನಿರ್ಭೀತಿ. ಸಾವಿಗೆ ಹೆದರದ ಮನುಷ್ಯ ಮತ್ತಾವುದಕ್ಕೂ ಭಯಪಡಲಾರ. ಅವರು ಸಾಯದಿರುವುದೇ ಇಷ್ಟು ವಿನಾಶಕ್ಕೆ ಕಾರಣ. ಅದು ನನ್ನದೇ ಆವಿಷ್ಕಾರ. ಈಗ ಜನರಿಗೆ ಸಾವಿನ ಭಯ ತೋರಿಸುತ್ತೇನೆ. ಸಾವಿನ ಭಯ ಹತ್ತಿರವಾದಾಗಲೇ ಜೊತೆಗೊಂದು ಜೀವ ಇರುವಿಕೆಯ ಕೊರತೆಯನ್ನು ತೋರಿಸುತ್ತದೆ; ಕತ್ತಲು ಬಲವಾದಾಗಲೇ ವೇದನೆ ಹೆಚ್ಚುತ್ತದೆ, ಬದುಕಿಸಲು ಇನ್ನೊಬ್ಬರು ಬೇಕು ಎಂಬ ಭಾವ ಬೆಳೆಯುತ್ತದೆ. ಸಾಯುವ ಮುಖದಲ್ಲಿ ನಾನದನ್ನು ನೋಡಬೇಕು, ಕೊನೆಯುಸಿರಿನ ಕೊನೆಯ ಕ್ಷಣದಲ್ಲಿ ಕೊರಗಬೇಕು ಮನುಷ್ಯ, ಇನ್ನೊಬ್ಬರಿಗಾಗಿ ಕರಗಬೇಕು. ಅದೊಂದು ಭಾವ ಸಾಯುವವನ ಮುಖದಲ್ಲಿ ಶಾಶ್ವತವಾಗಬೇಕು” ಎಂದ ವರ್ಷಿ.

” ವರ್ಷಿ ನೀನು ನಿನ್ನದೇ ಪ್ರಪಂಚದಲ್ಲಿರುವೆ. ಅದಕ್ಕೆ ಹೊರತಾಗಿ ಬದಲಾಗಿದ್ದನ್ನು ಗಮನಿಸಿಯೇ ಇಲ್ಲ. ನಿನ್ನದೇ ಆದ ಕಲ್ಪನೆಗಳನ್ನು ರೂಪಿಸಿಕೊಂಡು ಅವುಗಳಲ್ಲೇ ಕಳೆದುಹೋಗಿರುವೆ; ಕೊಳೆತುಹೋಗಿರುವೆ ಕೂಡಾ. ಸಾಯುತ್ತಿರುವ ಮನುಷ್ಯನ ಬದುಕು ಶಾಶ್ವತವಾಗುವಂತೆ ಆವಿಷ್ಕರಿಸಿದ್ದು ನೀನೇ. ಇದರಿಂದಲೇ ಭೂಮಿಯ ಪರಿಸ್ಥಿತಿ ಹದಗೆಟ್ಟಿದ್ದು; ಪರಿಸ್ಥಿತಿ ಮಿತಿ ಮೀರಿದ್ದು. ನಿನಗೆ ದುಡ್ಡಿನ ಮೇಲೆ ದ್ವೇಷವಿತ್ತು, ಹಣವೆಂದರೆ ಅಸಹ್ಯ ಪಡುತ್ತಿದ್ದೆ. ಅದರ ಪರಿಣಾಮ ವಿಜ್ಞಾನದ ನವೀಕರಣ. ಮನುಷ್ಯ ಅಂತಸ್ತಿನ ಮೋಹದಿಂದ ಹೊರಬರಲು ತಂತ್ರಜ್ಞಾನದ ಮೊರೆ ಹೋದೆ ನೀನು. ಈಗ ನಿನಗೂ ತಿಳಿಯುತ್ತಿದೆ ಮನುಷ್ಯ ಇದೇ ಕಾರಣಕ್ಕೆ ಪ್ರಬಲನಾಗುತ್ತಿರುವನೆಂದು. ದುಡ್ಡಿಗೂ ಮೀರಿದ ಮಾಯೆ ಈ ಬದುಕು ಎಂದು ತೋರಿಸುವ ಬದಲು ಅಸ್ತಿತ್ವವೇ ಅವನ ಪ್ರಬಲತೆ ಎಂಬಂತ ಯಾಂತ್ರಿಕ ಬದುಕು ನೀಡಿದೆ ಅವನಿಗೆ. ತಪ್ಪು ನಿನ್ನದಲ್ಲ ವರ್ಷಿ, ನಿನ್ನ ಒಂಟಿತನದ್ದು, ಕ್ರೂರ ಏಕತಾನತೆಯದ್ದು” ದೂಷಿಸಿದ ಆತ್ಮ.

ಅದೆಲ್ಲಿಂದ ಹೊರಬಂದ ಧ್ವನಿಯೋ ಜಗತ್ತಿನ ಶಕ್ತಿಯೆಲ್ಲ ನಾಭಿಯಾಳದಿಂದ ಹೊರಬಂದಂತೆ ” ನಾನು ಒಂಟಿಯಲ್ಲ, ಕ್ಷಣ ಮಾತ್ರಕ್ಕೂ ಒಂಟಿಯಲ್ಲ” ಕೂಗಿಕೊಂಡ ವರ್ಷಿ.

ಆತ್ಮ ಸಮಚಿತ್ತಿ, ಅದೇ ನಿರ್ಲಿಪ್ತತೆ, ಅದೇ ಶಾಂತತೆ.

“ನೀನು ಒಂಟಿಯೇ ವರ್ಷಿ, ನಿನ್ನ ಸಾಕು ತಂದೆ ಸತ್ತ ದಿನದಿಂದಲೂ ನೀನು ಒಂಟಿಯೇ, ಪ್ರೀತಿಸಿದ ಹುಡುಗಿ ಬೇರಾದ ದಿನದಿಂದಲೂ ನೀನು ಒಬ್ಬಂಟಿಯೇ.”

ಆತ್ಮನ ಮುಖ ಪ್ರಶಾಂತವಾಗಿಯೆ ಇತ್ತು. ಎಂದೂ ಅವನ ನಾಲಿಗೆ ಮಾತನಾಡಿದ್ದೆ ಇಲ್ಲ; ಕಂಗಳು ಮೌನವಾಗಿಲ್ಲ. ನೋಡುವವರು ಅವನ ಮುಖ ನೋಡಿದರು, ಕಣ್ಣುಗಳನ್ನಲ್ಲ.

“ಇಲ್ಲ ನಾನು ಯಾವಾಗಲೂ ಒಂಟಿಯಲ್ಲ, ನನ್ನ ತಂದೆ, ಹೆಮ್ಮೆಯ ತಂದೆ, ವಿಶ್ವಾತ್ಮ ನನ್ನ ಜೊತೆಗಿದ್ದಾನೆ. ಎಲ್ಲರ ತಂದೆ ವಿಶ್ವಾತ್ಮ ನನಗೆ ಮಾತ್ರ ಒಲಿದಿದ್ದಾನೆ. ನಾನು ಅವನ ಜೊತೆ ಯಾವಾಗಲೂ ಮಾತನಾಡುತ್ತೇನೆ, ಅವನು ಕೇಳುವ ಕಿವಿಯಾಗುತ್ತಾನೆ; ಭರವಸೆಯ ಹೆಗಲಾಗುತ್ತಾನೆ. ವಿಶ್ವಾತ್ಮನೂ ನನ್ನನ್ನು ಪ್ರೀತಿಸಿದ್ದಾನೆ. ತಂದೆಯೆಂದು ಬಳಿ ಹೋದರೆ ಮಗನಂತೆ ಮುಚ್ಚಟೆ ಮಾಡುತ್ತಾನೆ. ನನಗೆ ಯಾವಾಗಲೂ ಒಂಟಿತನ ಕಾಡಿಯೇ ಇಲ್ಲ. ನಿನ್ನ ಯೋಚನೆಗಳ ಧಾಟಿ ಸರಿಯಿಲ್ಲ, ಕಿಂಚಿತ್ತು ಕೂಡಾ” ಕಿರುಚಿದ ವರ್ಷಿ.

ಅವನ ಒಂಟಿಯೆಂಬ ಭಾವವೆಲ್ಲವೂ ಅವನಾಡಿದ ಮಾತುಗಳಿಂದ ಅವನಿಗರಿವಿಲ್ಲದೆಯೇ ಹೊರಬಂದಿತ್ತು. ಆತ್ಮನೆದುರು ಬೆತ್ತಲಾಗಿದ್ದ ಮಾನಸಿಕವಾಗಿ; ಸೋತು ನಿಂತಿದ್ದ ಅವನಿಗೇ ತಿಳಿಯದಂತೆ.

“ವರ್ಷಿ ಒಮ್ಮೆ ಯೋಚಿಸು, ಏನೂ ದ್ವಂದ್ವಗಳಿಗೆ ಸಿಲುಕದೆ, ನಿಲ್ಲದೇ ಕಲ್ಪನೆಗಳಲ್ಲಿ ನಿಲುಕದೆ ನಿರಾಳವಾಗಿ ಒಮ್ಮೆ ಯೋಚಿಸು. ವಿಜ್ಞಾನವನ್ನೇ ಅರೆದು ಕುಡಿದವ ನೀನು, ತಂತ್ರಜ್ಞಾನಗಳಿಗೆ ಸವಾಲು ಹಾಕಿ ಗೆದ್ದವನು ನೀನು. ಅದ್ಯಾವುದೋ ಅನಾಮಿಕ ಶಕ್ತಿ ನಿನ್ನ ಜೊತೆ ಇದೆ, ನಿನಗೆ ಮಾತ್ರ ಗೋಚರಿಸುತ್ತದೆ, ನಿನ್ನ-ಅದರ ನಡುವೆ ಮಾತುಕತೆಗಳು ನಡೆಯುತ್ತವೆ ಎಂದರೆ ನಂಬಲಶಕ್ಯ ವರ್ಷಿ. ನಂಬುವವರೆಗೆ ನಂಬಿಸುವವನೂ ಇರುತ್ತಾನೆ. ನಂಬಿಕೆಯೇ ಹೊರಟು ಹೋದರೆ?? ನಂಬಿಸುವವ ಮೂರ್ಖ ಅಷ್ಟೆ.

ಇಂಥವೆಲ್ಲ ಸುಳ್ಳು ವರ್ಷಿ. ನಿನ್ನ ಒಂಟಿತನವನ್ನು ತಾಳಲಾರದೆ ರೋಸಿಹೋದೆ, ಕ್ರೂರ ಏಕಾಂತದೆದುರು ಧಂಗೆ ಎದ್ದೆ. ತಪ್ಪು ನಿನ್ನ ಮನಸ್ಸಿನದು. ಅದಕ್ಕೇ ನಿನಗೆ ನೀನೇ ಇಲ್ಲದ ಒಂದು ಶಕ್ತಿಯನ್ನು ಭ್ರಮಿಸಿಕೊಂಡೆ, ಜೊತೆಯಾಗಿಸಿಕೊಂಡೆ. ನೀನು ಏನನ್ನೇ ಸಾಧಿಸಿದ್ದರೂ, ಶಾಶ್ವತ ಬದುಕಿನ ಸೂತ್ರವನ್ನೇ ಸಿದ್ಧಿಸಿದ್ದರೂ ಅದು ಕೇವಲ ನಿನ್ನ ಸಾಮರ್ಥ್ಯದಿಂದ ಮಾತ್ರ. ಇನ್ಯಾವುದೇ ಬಾಹ್ಯ ಶಕ್ತಿ ಸಹಾಯ ಮಾಡುತ್ತಿಲ್ಲ ನಿನಗೆ.

ಅಂಥದ್ದೊಂದು ಬಾಹ್ಯ ಶಕ್ತಿ ಭ್ರಮೆಯೇ ಹೊರತು ಬದುಕಲ್ಲ. ನಿನಗೆ ನೀನೇ ಹಿಪ್ನಾಟಿಸಂ ಮಾಡಿಕೊಂಡಿರುವುದರ ಪರಿಣಾಮ ಇದು. ಆ ಗುಂಗಿನಿಂದ ಹೊರಗೆ ಬಾ ವರ್ಷಿ. ಒಮ್ಮೆ ನಿನ್ನ ಮನಸ್ಸು ಬಿಚ್ಚಿ ನನ್ನೊಡನೆ ಮಾತನಾಡು. ನಾನು ನಿನ್ನ ಮಗ, ನಿನ್ನದೇ ಸೃಷ್ಟಿ. ಅದನ್ನು ಭಾವಿಸು. ತೆರೆದಿಟ್ಟ ಪುಸ್ತಕವಾಗು ಒಮ್ಮೆ, ಎಲ್ಲವೂ ನಿರಾಳವಾಗುತ್ತದೆ.” ಸ್ನೇಹಿತನ ಪ್ರೀತಿಯ ಕರೆಯಿದು.

ವರ್ಷಿ ಒಮ್ಮೆ ಚಲಿಸಿಹೋದ. ವಿಶ್ವಾತ್ಮನ ಅಸ್ತಿತ್ವಕ್ಕೆ ಸವಾಲು…!?

ವಿಶ್ವಾತ್ಮ ಇರುವುದು ಸುಳ್ಳಾ?? ಸುಳ್ಳಲ್ಲ, ನಗ್ನ ಸತ್ಯ.

“ಆತ್ಮ ಹುಚ್ಚು ನಿನಗೆ, ವಿಶ್ವಾತ್ಮ ನನಗೆ ಕಾಣಿಸುತ್ತಾನೆ, ನೋಡುವ ಮನಸ್ಸಿದ್ದರೆ ಆತ ಎಲ್ಲರಿಗೂ ಕಾಣಿಸುತ್ತಾನೆ. ನೋಡುವ ಮನಸ್ಸು ಬೇಕು” ಎಂದು ತನ್ನನ್ನು ಸಮರ್ಥಿಸಿಕೊಂಡ.

ಬೇಕೆಂದರೆ ತರುವುದೆಲ್ಲಿಂದ? ತಂದರೂ ಸ್ವಂತ ಮನಸ್ಸಾದೀತೆ ಅದು? ಆತ್ಮ ಬಹಳ ಯೋಚಿಸಿದ್ದ. ಅವೆಷ್ಟೊ ರಾತ್ರಿ ತಲೆ ಕೆಡಿಸಿಕೊಂಡಿದ್ದ. ಹೀಗೊಂದು ಅತೀತವಾದ ಶಕ್ತಿ ಇರುವುದು ಸಾಧ್ಯವೇ? ಇದೆ ಎಂದಾದರೆ ನೋಡುವುದು ಹೇಗೆ? ನೋಡಿದರೂ ವಿಶ್ವಾತ್ಮನನ್ನೇ ಪ್ರತ್ಯೇಕವಾಗಿ ಗುರುತಿಸುವುದು ಹೇಗೆ? ಯೋಚನೆಗಳು ವಿಶ್ವಾತ್ಮನ ಅಸ್ತಿತ್ವವೇ ಸುಳ್ಳು ಎಂದು ನಿಂತಿದ್ದರೆ, ಭಾವುಕ ಮನಸ್ಸು ಇದ್ದರೂ ತಪ್ಪಿಲ್ಲ ಕಂಡೂ ಕಾಣದಂತೆ ವಿಶ್ವಾತ್ಮ ಜೊತೆ ನಿಲ್ಲಬಹುದೆನೋ ಎಂದು ಮಾತಾಡಿತ್ತು. ಈ ಕ್ಷಣದಲ್ಲಿ ಆತ್ಮ ವರ್ಷಿಯ ಮನ ಬದಲಾಯಿಸಬೇಕಿತ್ತು, ಯೋಚನೆಗಳ ದಾರಿ ಬೇರಾಗಿಸಬೇಕಿತ್ತು. ಇಷ್ಟೆ ಅವನ ಕರ್ತವ್ಯ ತತ್ಕಾಲಕ್ಕೆ.

ಇಬ್ಬರೂ ಅವರದೇ ಆದ ವಾದ-ವಿವಾದಗಳಲ್ಲಿ ತಲ್ಲೀನರಾಗಿದ್ದರು, ಅವರವರದೇ ಲಹರಿಯಲ್ಲಿ ಓಲಾಡುತ್ತಿದ್ದರು. ವರ್ಷಿಗೆ ಆತ್ಮನ ಮಾತುಗಳು ಗಮನಕ್ಕಿಲ್ಲ, ಆತ್ಮನಿಗೆ ವರ್ಷಿಯ ಉದ್ದೇಶ ಸರಿಕಾಣುತ್ತಿಲ್ಲ. ಆದರೂ ಅದೆಷ್ಟೋ ಹೊತ್ತು ಸಾಗುತ್ತಲೇ ಇತ್ತು. ಅಷ್ಟರಲ್ಲಿ ಒಳಬಂದ ಮೂರನೇ ವ್ಯಕ್ತಿಯನ್ನು ಗಮನಿಸಲೇ ಇಲ್ಲ. ಇಬ್ಬರೂ ಪಟ್ಟು ಬಿಡದ ಜಟ್ಟಿಗಳೇ. ಸರಿಯಾದ ಪಾಸ್ ವರ್ಡ್ ಬಳಸದೆ ಒಳಗೆ ಬರುವುದು ಅಸಾಧ್ಯ. ಒಳಬಂದ ಮೂರನೇ ವ್ಯಕ್ತಿ ಇಬ್ಬರ ವಾದ-ವಿವಾದ ಕೇಳುತ್ತ ಅಲ್ಲಿಯೇ ನಿಂತಿತ್ತು. ಇಬ್ಬರಿಗೂ ಸುತ್ತಲಿನ ಪರಿವಿಲ್ಲ. ಒಬ್ಬ ಮಾತಿನ ಮಹಾಪೂರ, ಇನ್ನೊಬ್ಬ ಮಹಾಸಮುದ್ರ.

“ನನ್ನ ಪ್ರಕಾರ ಎರಡನೇ ಸೂರ್ಯ ಹಾರಿಸುವುದೇ ಸರಿ” ಮೂರನೆ ವ್ಯಕ್ತಿಯ ಕಂಠದಿಂದ ಬಂದ ಮಧುರ ಕಾವ್ಯಾಲಾಪ. ಮಾತೆಂದರೆ ಮಣಿ ಪೋಣಿಸಿದಂತೆ, ಏರಿಳಿತವಿಲ್ಲದ ಮಧುರ ಸಂಗೀತ. ಇದ್ದಕ್ಕಿದ್ದಂತೆ ಬಂದ ಹೆಣ್ಣಿನ ಧ್ವನಿಗೆ ಬೆರಗಾಗಿ ತಮ್ಮ ಮಾತುಗಳಿಗೆ ಅರ್ಧದಲ್ಲಿಯೇ ಪೂರ್ಣವಿರಾಮವಿತ್ತು ಇಬ್ಬರೂ ಅತ್ತಕಡೆ ತಿರುಗಿದರು.

“ಸಂವೇದನಾ” ಆಶ್ಚರ್ಯದಿಂದ ಕೂಗಿದ ಆತ್ಮ. ವರ್ಷಿ ಆತ್ಮನ ತಂದೆಯಂಥವನು. ಇವಳು ಸೃಷ್ಟಿಯಾದವಳು, ಅದೂ ಆತ್ಮನಿಂದಲೇ ಸೃಷ್ಟಿಯಾದವಳು ಎಂಬುದು ತಿಳಿದುಕೊಂಡವನಂತೆ ಮಧ್ಯ ಮಾತನಾಡದೆ ಸುಮ್ಮನೆ ನಿಂತ.

“ಹೌದು ಆತ್ಮ, ನಾನೇ… ಸಂವೇದನಾ…”

“ಇಲ್ಲಿಯವರೆಗೆ ಹೇಗೆ ಬಂದೆ?” ಬದುಕಿನ ಅತಿ ದೊಡ್ದ ಹಿಗ್ಗು ಮುಚ್ಚಿಟ್ಟುಕೊಳ್ಳುವುದರಲ್ಲಿ ವಿಫಲನಾದ ಆತ್ಮ. ಕಂಗಳ ಕನವರಿಕೆ ತುಂಬುದ ಕಂಗಳ ಮಬ್ಬಿನಲ್ಲಿ ಮರೆಯಾಯಿತು. ಮನದಂಗಳದಲ್ಲಿ ಮಳೆಗಾಲದ ತೋಂತನನ.

“ನನ್ನಲ್ಲಿ ಎಲ್ಲವನ್ನೂ ತುಂಬಿರುವೆ ಆತ್ಮ. ಪೂರ್ತಿ ಜ್ಞಾನ, ಏನೂ ಉಳಿಯದಂತೆ ಸಂಪೂರ್ಣ ವಿದ್ಯೆ, ಸಮಯಕ್ಕೆ ಬೇಕಾಗುವ ಬುದ್ಧಿ ಎಲ್ಲವನ್ನೂ.. ಭಾವನೆಗಳನ್ನು ಬಿಟ್ಟು, ನೀನು ಬದುಕಿನ ಬುನಾದಿಯೆಂದುಕೊಂಡಿದ್ದ ಭಾವನೆಗಳನ್ನು ಹೊರತುಪಡಿಸಿ ಎಲ್ಲವನ್ನು ತುಂಬಿದೆ. ನಾನು ಆಗಲೇ ಎಚ್ಚರಗೊಂಡಿದ್ದೆ. ಆಗ ನಿ ಪಕ್ಕ ಕುಳಿತು ಹಣೆಯ ಮೇಲೆ ನವಿರಾಗಿ ಬೆರಳಾಡಿಸುತ್ತಿದ್ದೆ. ಬಹುಶಃ ನಿನ್ನ ಮನದ ವೀಣೆ ನುಡಿಯುತ್ತಿತ್ತೆನೋ, ತಂತಿ ನುಡಿಯುತ್ತಿತ್ತೆನೋ ಅನುರಾಗದ ಪದಗಳನ್ನು. ನಾನು ಅದನೆಲ್ಲವ ಸಹಿಸದಾದೆ. ಅದಕ್ಕೆ ಉಸಿರು ನಿಂತಂತೆ ಮಲಗಿದೆ. ನೀನು ಸೃಷ್ಟಿಸಿರಬಹುದು ಆತ್ಮ, ಅದೊಂದೇ ಕಾರಣಕ್ಕೆ ನಾನು ನಿನಗೆ ಬೇಕಾದಂತೆ ಇರಬೇಕು, ನಿನ್ನೆಲ್ಲ ಪರಿಸ್ಥಿತಿಗಳಿಗೆ ಸಹಕರಿಸಬೇಕು ಎಂಬ ಯೋಚನೆಗಳಿದ್ದರೆ ಹೇಳಿಬಿಡು ನಾನೀಗಲೇ ದೂರ ಹೋಗುತ್ತೇನೆ.. ಸಾವಿನಷ್ಟು ದೂರ.. ನನಗೆ ಬದುಕ ದಾರಿಯಲ್ಲಿ ಬೇಲಿಗಳು ಎಡತಾಕುವುದು ಸರಿ ಹೋಗುವುದಿಲ್ಲ. ಸಂಬಂಧಗಳು, ಪ್ರೀತಿ, ಪ್ರೇಮ, ನೋವು, ತ್ಯಾಗದ ಬೇಲಿಗಳು ಇರದ ದಾರಿಯೇ ಹಿತ ನನಗೆ. ನಾನು ಸ್ವತಂತ್ರವಾಗಿ ಬದುಕಲು ಇಚ್ಛಿಸುವವಳು.” ಯಾವ ಭಾವನೆಗಳು ಅವಳ ಮುಖವನ್ನಲಂಕರಿಸಲಿಲ್ಲ.

ನಿರಾಭರಣೆ ಸಂವೇದನಾ. ನಿಸ್ತೇಜ ಮುಖವಾದರೂ ಕಂಗಳಲ್ಲಿ ತೇಜಸ್ವಿ ಹೊಳಪು. ಆತ್ಮ ಕುಸಿದು ಕುಳಿತ. ಗಲಿಬಿಲಿಯಾದ ಆತ್ಮನ ಪರಿಸ್ಥಿತಿ ವರ್ಷಿಗೆನೋ ಹೊಸದೊಂದು ಯುದ್ಧ ಗೆದ್ದ ಹಿಗ್ಗು ನೀಡಿತು. ವರ್ಷಿಯ ಮೊಗದಲ್ಲೊಮ್ಮೆ ನಗು ಹಾದು ಹೋಯಿತು. ಪರಿಹಾಸ್ಯವೋ? ಅಪಹಾಸ್ಯವೋ?? ಕುಹಕವಿರಬೇಕು. ಗೆದ್ದೆನೆಂಬ ಅಹಂ ಇರಬೇಕು. ಮತ್ತೊಂದು ಭಾವವಿಲ್ಲದ ಜೀವಿಯ ಜನನ ಎಂದುಕೊಂಡ ವರ್ಷಿ.

ಕಾಲಚಕ್ರ ತಿರುಗುತ್ತಲೇ ಇರುತ್ತದೆ ಒಂದು ಗಳಿಗೆಯೂ ನಿಲ್ಲದಂತೆ. ನಿಲ್ಲುವವ ಮನುಷ್ಯ. ಮನಸ್ಸು ಬಂದ ಕಡೆ, ಬುದ್ಧಿ ಓಡಿದ ಕಡೆ. ವರ್ಷಿಯದು ಅವಕಾಶ, ಕಾಲ ಅವನ ಕೈಯಲ್ಲಿ. ಕಾಲ ಚಕ್ರವೇ ಹೀಗೆ, ಒಮ್ಮೆ ಮೇಲೆರಿಸಿದರೆ ಇನ್ನೊಮ್ಮೆ ಪ್ರಪಾತಕ್ಕಿಳಿಸುತ್ತದೆ. ನಿಂತಲ್ಲಿ ನಿಂತು ತಿಳಿದೇ ಇಲ್ಲ ಅದಕ್ಕೆ. ಸಂವೇದನಾ ಬಹಳ ರೋಮಾಂಚನಗೊಂಡಳು. ಅವಳಿಗೆ ಹಿಂದಿನದೆಲ್ಲವೂ ಗೊತ್ತು. ಅವಳು ವರ್ಷಿಯನ್ನೂ ಗುರುತಿಸಿದಳು.

ಎಲ್ಲರ ವಾದ ವಿವಾದಗಳಿಗೆ ಪೂರ್ಣವಿರಾಮ. ವರ್ಷಿ ಹೊರಡಲನುವಾದ. “ನಾನೂ ಜೊತೆ ಬರಲೇ” ಎಂದಳು ಸಂವೇದನಾ.

ವರ್ಷಿ ಎಲ್ಲವೂ ಅರಿತವನಂತೆ ತಲೆಯಾಡಿಸಿದ. ಎಲ್ಲವೂ ತನ್ನ ವಿರುದ್ಧವೇ ನಡೆಯುತ್ತದೆ. ನಾನೇನನ್ನೂ ಮಾಡಲಾರೆ ಎಂದು ಕುಗ್ಗಿಹೋದ ಆತ್ಮ. ಮುಂದೇನು ನಡೆಯುತ್ತದೆ ಎಂಬ ಭಯ ಅವನಿಗೆ. ನಿರ್ಭಾವುಕ ವರ್ಷಿ, ಆತ್ಮರಹಿತ ಸಂವೇದನಾ ಮುಂದೆ ಮುಂದೆ ನಡೆಯುತ್ತಿದ್ದರೆ ಆತ್ಮ ಅವರಿಬ್ಬರ ಹಿಂದೆ ನಡೆದ.

ಅಲ್ಲಿ ಹೊಸದೆಂಬ ಯಾವ ಉಪಕರಣಗಳ್ಯಾವುವೂ ಇರಲಿಲ್ಲ. ಅದೇ ಹಳೆಯ ಹೊಸದನ್ನು ಸೃಷ್ಟಿಸುವ ವರ್ಷಿಯ ಪ್ರಪಂಚ ಪುಟ್ಟ ಪ್ರಯೋಗಶಾಲೆ. ಮೇಜಿನ ಮೇಲೆ ಚಿಕ್ಕ ಪೆಟ್ಟಿಗೆಯೊಂದರಲ್ಲಿ ಅಚ್ಚ ಬಿಳಿಯ ಪುಟ್ಟ ವಸ್ತುವೊಂದು ಗಾಳಿಯಲ್ಲಿ ತೇಲುತ್ತಿತ್ತು.

ಆತ್ಮನಿಗೆ ಏನೊಂದು ಅರ್ಥವಾಗಲಿಲ್ಲ. ಸಂವೇದನಾ ಅಷ್ಟೆ ಹೊಸ ಜಗತ್ತು ಕಂಡವಳು. ಮೂಕಳಾಗಿ ನೋಡುತ್ತಲೇ ಇದ್ದಳು. ವರ್ಷಿ ಏನು ಮಾಡುತ್ತಿದ್ದಾನೆ, ಎರಡನೇ ಸೂರ್ಯ ಎಲ್ಲಿದೆ ಏನೂ ತಿಳಿಯದೇ ಸುಮ್ಮನೇ ನೋಡುತ್ತಲೇ ನಿಂತಿದ್ದಳು. ವರ್ಷಿ ಮೇಜಿನೆದುರಿನ ಖುರ್ಚಿಯಲ್ಲಿ ಕುಳಿತು ಆ ಪೆಟ್ಟಿಗೆಯ ಮೇಲೆ ನಿಧಾನವಾಗಿ ಕೈ ಇಟ್ಟ. ಆ ಪೆಟ್ಟಿಗೆ ವಿಶಿಷ್ಟವಾಗಿತ್ತು. ಗಾಜಿನ ಪೆಟ್ಟಿಗೆಯಲ್ಲಿ ವಿವಿಧ ರೀತಿಯ ವೈರ್ ಗಳಿದ್ದವು.

ವರ್ಷಿ ಆ ಗಾಜಿನ ಪೆಟ್ಟಿಗೆಗಿದ್ದ ಬಾಗಿಲನ್ನು ತೆಗೆದು ಅದರ ಒಳಗೆ ಬೆಳಕು ಚೆಲ್ಲಿದ. ಆ ಬಿಳಿಯ ವಸ್ತುವಿನ ನೆರಳು ಕಂಡುಬಂತು. ನಕ್ಕ ವರ್ಷಿ. ಅವನ ಆವಿಷ್ಕಾರ ಕೊನೆಯ ಹಂತ ತಲುಪುವುದರಲ್ಲಿತ್ತು. ಬೆಳಕಿನ ಕಿರಣಗಳನ್ನು ಓರೆಯಾಗಿ ಚದುರಿಸಿ ನೆರಳು ಗಾಜಿನ ಪೆಟ್ಟಿಗೆಯಿಂದ ಹೊರಬರುವಂತೆ ಮಾಡಿ ಬಾಗಿಲು ಮುಚ್ಚಿದ. ಅದಕ್ಕೆ ಜೋಡಿಸಿಕೊಂಡಂತಿರುವ ಕಂಪ್ಯೂಟರ್ ಪರದೆಯ ಮೇಲೆ ಅಂಕೆಗಳ ಎಣಿಕೆ ಪ್ರಾರಂಭವಾಯಿತು. ಬಾಗಿಲು ಮುಚ್ಚಿದ ಗಾಜಿನ ಪೆಟ್ಟಿಗೆಯ ಒಳಗಿನ ಎಲಿಮೆಂಟ್ ಆ ಕಡೆಗೂ ಈ ಕಡೆಗೂ ಚಲಿಸುವುದು ಕಂಡುಬಂತು. ಹೊರಬರುತ್ತಿರುವ ನೆರಳು ಅದರ ಪ್ರತಿಬಿಂಬವಾಗಿ ಚಲಿಸತೊಡಗಿತು.

ವರ್ಷಿ ಆತ್ಮನೆಡೆಗೆ ತಿರುಗಿ ಹುಸಿನಗೆ ನಕ್ಕು “ಮುಗಿಯಿತು” ಎಂದ.

ಆತ್ಮ ನಿಜವಾಗಿಯೂ ವರ್ಷಿಗೆ ಹುಚ್ಚು ಹಿಡಿದಿದೆ ಎಂದು ತೀರ್ಮಾನಿಸಿಯೇ ಬಿಟ್ಟ. ಸಂವೇದನಾಳಿಗೆ ಏನೂ ಅರ್ಥವಾಗದೇ ಇದ್ದರೂ ವರ್ಚುವಾಲಿಟಿಯ ಕಲ್ಪನೆ ಮೂಡಿತು. ಆತ್ಮ ಮನಸ್ಸಿನಲ್ಲಿಯೇ ಸಮಾಧಾನಗೊಂಡ ಇದು ಫಲ ನೀಡದ ಆವಿಷ್ಕಾರ ಎಂದು. ಮೊದಲ ಬಾರಿಗೆ ತಿಳಿದು ತಿಳಿದೂ ವರ್ಷಿ ಸೋತು ನಿಲ್ಲಲು ಬಯಸುತ್ತಿದ್ದಾನೆಂದರೆ ಆತ್ಮನಿಗೆ ನಿರಾಳವೇ. ಎಲಿಮೆಂಟ್ ಇರುವಲ್ಲಿಯೇ ಇದೆ. ಏನನ್ನೂ ಮೇಲಕ್ಕೆ ಚಿಮ್ಮಿಸದೇ ಎಲಿಮೆಂಟ್ ಅಲ್ಲಿ ಹೋಗಿ ಸೂರ್ಯನಾಗುವುದು ಹೇಗೆ? ಕ್ರಿಯೆಗಳೇ ಸ್ಪಷ್ಟವಿಲ್ಲದಿದ್ದರೆ ನಿರ್ಧರಿಸಿದ ಪ್ರತಿಕ್ರಿಯೆಗಳು ಅಸಾಧ್ಯ. ಇದು ವರ್ಷಿಯ ಹುಚ್ಚು ಕಲ್ಪನೆ ಎಂದುಕೊಂಡ. ಏನಾದರೂ ಕತ್ತಲಾಗಲು ಇನ್ನೂ ಸಮಯವಿದೆ. ಕಾದುನೋಡಲು ಕಾಸು ಕೊಡಬೇಕಿಲ್ಲ ಎಂದು ಕಾಯತೊಡಗಿದ.

ಸಂವೇದನಾಳ ಮುಖ ನೆನಪಾಯಿತು, ಮಾತನಾಡಿಸುವ ಮನಸ್ಸಾಯಿತು.

ಸಂವೇದನೆಗೆ ಮರುಳುಹೋಗಿ.. ಸಾಂಗತ್ಯಕ್ಕೆ ಸಾರವಾಗಿ…

ಅಳುತಿರುವ ಮನಸಿಗೆ ಸಾಂತ್ವನವಾಗಿ…

ಮುಗ್ಧತೆಯ ಪ್ರಪಂಚದಲ್ಲಿ ಒಂಟಿಯಾಗಿ….

ನೀ ಆಗಾಗ ಬರುವೆ ನನ್ನ ನೆನಪಿನಲ್ಲಿ…..

ಅವಳು ವರ್ಷಿಯ ಪ್ರಯೋಗಾಲಯದ ವಿನ್ಯಾಸ ವೀಕ್ಷಿಸುತ್ತಿದ್ದಳು. ಗೋಡೆಯ ಮೇಲಿನ ಸೂತ್ರಗಳು, ಅವುಗಳ ಅರ್ಥ ಹುಡುಕುವುದರಲ್ಲಿ ಮಗ್ನಳಾಗಿದ್ದಳು.

ವರ್ಷಿ ಆತ್ಮನ ಬಳಿ ನಿಂತು ಬೆನ್ನು ತಟ್ಟಿದ. “ನಾನು ಏನನ್ನು ಸೃಷ್ಟಿಸಲಾರದೇ ಸೋತುಹೋದೆನೊ ಅದನ್ನು ನೀನು ಸೃಷ್ಟಿಸಿರುವೆ. ಆದರೂ ಗೆಲುವು ನನ್ನದೇ.” ಕುಹಕವಾಡಿದ.

“ನಾನೇನನ್ನು ಸೃಷ್ಟಿಸಲು ಹೊರಟಿದ್ದೆನೋ ಅದನ್ನು ನಾನು ಸಾಧಿಸಲಿಲ್ಲ ವರ್ಷಿ. ಆದರೆ ನಾನದನ್ನು ಸಾಧಿಸುತ್ತೇನೆ, ಈ ಪ್ರಪಂಚದಲ್ಲಿ ಭಾವನೆಗಳನ್ನು ಬೆಳೆಸುತ್ತೇನೆ. ನೀನು ಮಾಡುವುದನ್ನು ನಾನು ವಿರೋಧಿಸುತ್ತೇನೆ. ಇಂದಿನ ನಂತರ ನನಗು ನಿನಗೂ ಸಂಬಂಧವಿಲ್ಲ” ಹೊರಟುನಿಂತ ಆತ್ಮ.

ಇಬ್ಬರ ವಾಗ್ವಾದ ಕೇಳಿ ಸಂವೇದನಾ ಅತ್ತ ಕಡೆಯೇ ಬಂದಳು.

“ನಮ್ಮ ಮಧ್ಯೆ ಯಾವತ್ತೂ ಸಂಬಂಧ ಇರಲೇ ಇಲ್ಲ. ನನಗೂ ಒಬ್ಬ ಪ್ರತಿಸ್ಪರ್ಧಿ ಬೇಕು. ನಿನ್ನ ಸವಾಲನ್ನು ಒಪ್ಪಿಕೊಳ್ಳುತ್ತೇನೆ. ನಿನ್ನೆದುರು ಗೆದ್ದು ನಿಲ್ಲುತ್ತೇನೆ” ಪ್ರತಿಸವಾಲು ಎಸೆದ ವರ್ಷಿ. ಎರಡನೆ ಸೂರ್ಯನಿಂದ ಈ ಭೂಮಿಯನ್ನು ಹೇಗೆ ಉಳಿಸುವೆಯೋ ಉಳಿಸು ಎಂದು ಗಹಗಹಿಸಿದ.

ಸಂವೇದನಾ ಸುಮ್ಮನೆ ನಿಂತೇ ಇದ್ದಳು. ಯಾರ ಪರ-ವಿರೋಧ ಹೇಳಲು ಅವಳಿಗೆ ಭಾವನೆಗಳೇ ಇಲ್ಲ. ಯಾರು ಏನಾದರೆ ನನಗೇನೂ ಅಲ್ಲ ಎಂಬಂತೆ ಅಲ್ಲಿಂದ ಹೊರಡಲನುವಾದಳು. ಮುಗ್ಧನಂತೆ “ಸಂವೇದನಾ” ಎಂದ ಆತ್ಮ.

ಏನು ಎಂಬಂತೆ ಮುಖ ತಿರುಗಿಸಿದಳು ಸನಾ.

“ನಿಜವಾಗಿಯೂ ನಿನ್ನಲ್ಲಿ ಭಾವನೆಗಳಿಲ್ಲವಾ?” ಉತ್ತರಕ್ಕೆ ನಿರೀಕ್ಷಿಸಿದ. ಕ್ಷಣಮಾತ್ರವೂ ಯೋಚಿಸದೇ “ಇಲ್ಲ” ಕಡ್ಡಿ ತುಂಡರಿಸಿದಂತೆ ಹೇಳಿ ಅಲ್ಲಿಂದ ನಡೆದೇ ಬಿಟ್ಟಳು.

ವರ್ಷಿ ನಕ್ಕ “ಆತ್ಮ ಈಗ ನೀನು ಒಂಟಿಯೇ, ಈ ಪ್ರಪಂಚದಲ್ಲಿ ನಿನ್ನವರು ಎನ್ನುವವರು ಯಾರೂ ಉಳಿದಿಲ್ಲ. ನನ್ನ ಜೊತೆ ವಿಶ್ವಾತ್ಮನಿರುವನು.. ನಿನ್ನ ಜೊತೆ??? ನೀನು ಒಂಟಿ… ಶಾಶ್ವತವಾಗಿ ಒಬ್ಬಂಟಿ…” ವರ್ಷಿ ನಗುತ್ತಲೇ ಉಳಿದ.

ತಲೆ ಸಿಡಿದು ಹೋಗುತ್ತಿದೆಯೇನೋ ಎಂಬಂತಾಯಿತು ಆತ್ಮನಿಗೆ. ಇನ್ನು ವರ್ಷಿಯ ಜೊತೆ ತನಗೇನೂ ಸಂಬಂಧವಿಲ್ಲ, ಸಂಬಂಧವೇ ಮುಗಿದುಹೋದ ಮೇಲೆ ಮಾತುಗಳು ಮೂಡಲು ಸಾಧ್ಯವಿಲ್ಲ. ಎಲ್ಲವೂ ಮುಗಿಯಿತು ಎಂದುಕೊಂಡು ಕೊನೆಯ ಬಾರಿಯೆಂಬಂತೆ ವರ್ಷಿಯ ಮುಖ ನೋಡಿ ಅಲ್ಲಿಂದ ಹೊರನಡೆದ.

ವರ್ಷಿ ಬಹಳ ಹೊತ್ತು ನಗುತ್ತಲೇ ಇದ್ದ.

ಮೂರು ಪರ್ವಗಳು ಬೇರ್ಪಟ್ಟವು; ದಾರಿ ಬೇರಾಯಿತು.

ಒಂದಾಗಿದ್ದು ಯಾವಾಗ??? ಎಂದುಕೊಂಡ ವಿಶ್ವಾತ್ಮ.

ಮುಂದುವರೆಯುವುದು….

Facebook ಕಾಮೆಂಟ್ಸ್

ಲೇಖಕರ ಕುರಿತು

Gautam Hegde

ನಾಲ್ಕು ವರ್ಷದಿಂದ ಮಾಹಿತಿ ತಂತ್ರಜ್ಞಾನದಲ್ಲಿ ವೃತ್ತಿ, ಈಗ ಸ್ವಂತ ಕಂಪನಿಯೊಂದನ್ನು ನಡೆಸಬೇಕೆಂಬ ಹಂಬಲದಿಂದ ಸ್ಟಾರ್ಟ್ ಅಪ್ ನಡೆಸುತ್ತಿರುವ ನನಗೆ ಅತೀವ ಆಸಕ್ತಿ - ಸಾಹಿತ್ಯ - ಓದು - ಬರಹ. ಅದರ ಪ್ರತಿಬಿಂಬವೇ ಈ "ಆತ್ಮ ಸಂವೇದನಾ". ಕಾದಂಬರಿಗಳ ಲೋಕದಲ್ಲಿ ಮೊದಲ ಪ್ರಯತ್ನವಿದು. ನಿಮ್ಮೆಲ್ಲರ ಮನಸ್ಸು ಮುಟ್ಟಲಿ ಎಂದು ಪ್ರಯತ್ನದಲ್ಲಿ..

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!