ಸಿನಿಮಾ - ಕ್ರೀಡೆ

ಇವನ ಅಟವನ್ನು ಮತ್ತೆ ನೋಡಲು ಬಯಸುತ್ತಿರುವವನು ನಾನು ಒಬ್ನೇನಾ?

ಅದು ಭಾರತ ಮತ್ತು ನ್ಯೂಝಿಲ್ಯಾಂಡ್ ನಡುವಿನ ಏಕದಿನ ಸರಣಿ. ಶೇನ್ ಬಾಂಡ್ ಎಂಬ ಬೆಂಕಿ ಬೌಲರ್ ಪ್ರವರ್ಧಮಾನಕ್ಕೆ ಬಂದ ಸಮಯವದು. ತನ್ನ ಅತಿವೇಗದ ಬೌಲಿಂಗ್’ನಿಂದ ಜಗತ್ತಿನ ಎಂತೆಂಥಾ ಬ್ಯಾಟ್ಸ್’ಮೆನ್’ಗಳನ್ನು ಬಲೆಗೆ ಕೆಡವಿದ್ದ ಬಾಂಡ್ ಕುರಿತು ಸರಣಿ ಆರಂಭಕ್ಕೂ ಮುನ್ನವೇ ಭಾರೀ ಹೈಪು ಕ್ರಿಯೇಟ್ ಆಗಿತ್ತು. ಆದರೆ ಈ ದಾಂಡಿಗನೂ ಸಾಮಾನ್ಯದವನಲ್ಲ. ಬ್ರೇಟ್ಲಿ, ಅಖ್ತರ್, ಮೆಗ್ರಾಥ್’ಗೇ ಕ್ಯಾರೇ ಅನ್ನದವನಿಗೆ ಬಾಂಡ್ ಯಾವ ಲೆಕ್ಕ? ಬಾಂಡ್ ಬಚ್ಚ ಅಷ್ಟೇ. ಬಾಂಡ್ ಎಸೆದ ಸರಣಿಯ ಮೊದಲ ಪಂದ್ಯದ ಮೊದಲ ಓವರಿನ ಮೊದಲ ನಾಲ್ಕೂ ಬಾಲ್’ಗಳನ್ನೂ ಎಗ್ಗಿಲ್ಲದೆ ಬೌಂಡರಿ ಗೆರೆ ದಾಟಿಸಿದ್ದ . ಆರಂಭದಲ್ಲೇ ಬಾಂಡ್’ನನ್ನು ಲೆಕ್ಕಕ್ಕಿಲ್ಲದಂತೆ ಮಾಡಿದ್ದ. ಮುಂದೆ ಬಾಂಡ್ ಮಾತ್ರ ಅಲ್ಲ,  ಯಾವ ವೇಗದ ಬೌಲರ್’ಗೂ ಕೇರ್ ಮಾಡದವ ಈತ, ವಿಶ್ವದ ಯಾವ ಸ್ಪಿನ್ ಬೌಲರ್’ಗೂ ಧರ್ಮದೇಟು ಕೊಡದೆ ಬಿಟ್ಟಿಲ್ಲ. ಯಾರ್ಕರ್ ಬಾಲ್ ಹಾಕಿದರೂ ಬೌಂಡರಿ ಬಾರಿಸುತ್ತಾನೆಂದು ಬೌನ್ಸರ್ ಹಾಕಿದರೆ ಅದಕ್ಕೂ ಜಗ್ಗದೆ ತನ್ನದೇ ಬ್ರಾಂಡಿನ ಊಪರ್ ಕಟ್ ಸಿಕ್ಸರ್ ಹೊಡೆದಾಗ ಬೌಲರ್’ಗಳೆಲ್ಲಾ ಕಕ್ಕಾಬಿಕ್ಕಿ!

ಜೆರ್ಸಿ ನಂ ೪೪.. 10 ಸಚಿನ್, 7 ಧೋನಿ ಇದೆರಡು ಬಿಟ್ರೆ ಬೇರೆ ಜೆರ್ಸಿ ನಂಬರ್  ಗೊತ್ತಾ ನಮ್ಗೆ? ಬಹುಷಃ ಬೌಲರ್’ಗಳ ಲಯ ತಪ್ಪುವಂತೆ ಮಾಡಿ, ಫೀಲ್ಡರ್’ಗಳ ಕಣ್ಣು ತಪ್ಪಿಸಿ ಬೆನ್ನು ಬೆನ್ನಿಗೆ  ಬೌಂಡರಿ ಬಾರಿಸುತ್ತಿದ್ದಕ್ಕೋ ಏನೋ ಈತನಿಗೆ ೪೪ ನಂಬರಿನ ಜೆರ್ಸಿ ನೀಡಿದ್ದು.  ಮೊನ್ನೆ ಇಂಧೋರಿನಲ್ಲಿ ನಡೆದ ಭಾರತ ಆಪ್ರಿಕಾ ನಡುವಿನ ಎರಡನೇ ಏಕದಿನ ಪಂದ್ಯದ ಕಾಮೆಂಟರಿ ಬಾಕ್ಸಿನಲ್ಲಿ  ಅನಿಲ್ ಕುಂಬ್ಳೆ ಒಂದು ಕಾಲದಲ್ಲಿ ನಂ.೧ ಆಲ್ರೌಂಡರ್ ಆಗಿದ್ದ ಶಾನ್ ಪೊಲಾಕ್’ರನ್ನು ಕೇಳುತ್ತಾರೆ, ನೀವು ಎದುರಿಸಿದ ಅತ್ಯಂತ ಡೇಂಜರ್ ಭಾರತೀಯ ಬ್ಯಾಟ್ಸ್’ಮೆನ್ ಯಾರು? ಸಚಿನ್, ಗಂಗೂಲಿ, ದ್ರಾವಿಡ್ ಎಂಬ ಮೂರು ಆಯ್ಕೆಯನ್ನೂ ನೀಡುತ್ತಾರೆ ಕುಂಬ್ಳೆ. ಪೊಲಾಕ್ ಉತ್ತರಿಸಿದ್ದೇನು ಗೊತ್ತೇ? “ವೀರೇಂದ್ರ ಸೆಹ್ವಾಗ್!”. ವೀರೇಂದ್ರ ಸೆಹ್ವಾಗ್.. ಎಂಬ ಹೆಸರು ಕೇಳಿದ್ರೆ ಜಗತ್ತಿನ ಎಂತೆಂಥಾ ಬೌಲರುಗಳ ಮೈ ನಡುಗುತ್ತದೆ.ಈ ಬ್ಯಾಟ್ಸ್’ಮೆನ್ ಬ್ಯಾಟಿಂಗ್’ಗೆ ಬರುತ್ತಾನೆಂದರೆ ಅಭಿಮಾನಿಗಳ ಮೈನವಿರೇಳುತ್ತದೆ.ಈತ ಮೊದಲ ಹತ್ತು ಓವರುಗಳಲ್ಲಿ ಔಟಾಗದೇ ನಿಲ್ಲುವುದೇ ಅಪರೂಪ, ಹಾಗೊಂದು ವೇಳೆ ನಿಂತನೆಂದರೆ ಎದುರಾಳಿಗಳೆಲ್ಲ ಚಿಂದಿ ಚಿತ್ರಾನ್ನ. ಅಂತಹಾ ಒಬ್ಬ ರಫ್ ಆಂಡ್ ಟಫ್ ಡ್ಯಾಶಿಂಗ್ ಓಪನರ್ ಯಾರಾದರೂ ಇದ್ದರೆ ಅದು ಸೆಹವಾಗ್ ಮಾತ್ರ.

ಜಗತ್ತು ಕಂಡ ಅತ್ಯಂತ ಶ್ರೇಷ್ಠ ಬ್ಯಾಟ್ಸ್’ಮೆನ್ ನಮ್ಮ ಸಚಿನ್ ತೆಂಡುಲ್ಕರ್. ಸಚಿನ್’ನಂಥ ಸಚಿನನೇ ಅದೆಷ್ಟು ಭಾರಿ ನರ್ವಸ್ ನೈಂಟಿಗೆ ಔಟಾಗಿದ್ದಾನೆ ಅಂಥ ನಮಗೆ ಗೊತ್ತು, ಅದರಲ್ಲೂ ನೂರನೇ ಶತಕಕ್ಕೆ ಪರದಾಡಿದ್ದೋ ಪರದಾಡಿದ್ದು. ಎಂಬತ್ತಕ್ಕೆ ಬಂದರೆ ಸಾಕು ಸಚಿನ್ ಬ್ಯಾಟಿಂಗ್ ಮೊಲ ಆಮೆಯಾದಂತಾಗುತ್ತಿತ್ತು. ಹಲವು ಭಾರಿ ನಮ್ಮನ್ನು ಕಾಯಿಸಿ, ಸತಾಯಿಸಿ ಕಡೆಗೆ ತೊಂಬತ್ತು ನೂರರ ಮಧ್ಯೆ ಔಟಾಗಿ ನಮ್ಮನ್ನು ನಿರಾಸೆಗೊಳಿಸುತ್ತಿದ್ದ. ಸೆಹ್ವಾಗ್ ಇದಕ್ಕೆ ಕಂಪ್ಲೀಟ್ ವೈಸ್ ವರ್ಸ. ನೂರಕ್ಕೋಸ್ಕರ ಕುಟ್ಟಿದವಲ್ಲ, ಇನ್ನೂರಕ್ಕೆ ಪರದಾಡಿದವನೂ ಅಲ್ಲ, ಬಿಡಿ ಮುನ್ನೂರಕ್ಕೂ ಕ್ಯಾರೇ ಅನ್ನದ ಆಸಾಮಿ ಇವನು. ಹೌದು. ತೊಂಬತ್ತು ಬಂತೆಂದು ಎಚ್ಚರಿಕೆಯ ಆಟವಾಡಲಿಲ್ಲ, ಎಂದಿನಂತೆ ಬೌಂಡರಿಯೋ ಸಿಕ್ಸರ್ ಬಾರಿಸಿ ಶತಕದ ಸಂಭ್ರಮಿಸುವುದು ಸೆಹ್ವಾಗ್ ಸ್ಟೈಲಾಗಿತ್ತು. ಮೆಲ್ಬೋರ್ನ್’ನಲ್ಲಿ  ಬಹು ಪ್ರತಿಷ್ಟೆಯ ಬಾಕ್ಸಿಂಗ್ ಡೇ ಟೆಸ್ಟ್’ ನಡೆಯುತ್ತಿತ್ತು. ಒಂದು ಕಡೆಯಲ್ಲಿ ವಿಕೆಟ್ ಉರುಳುತ್ತಿದ್ದರೂ ಇವ ಬೌಂಡರಿಗಳ ಸುರಿಮಳೆಗೈದು ನೂರ ತೊಂಬತ್ತೈದರವರೆಗೂ ತಲುಪಿದ್ದ. ಯಾರಾದರೂ ಆವಾಗ ಬೌಂಡರಿ, ಸಿಕ್ಸರ್ ಬಾರಿಸಲು ಹೋಗುತ್ತಾರಾ? ಹೋಗುತ್ತಾರೆಂದರೆ ಅದು ಸೆಹ್ವಾಗ್ ಮಾತ್ರ. ನೂರಾ ಎಂಬತ್ತೊಂಬತ್ತು ಇರುವಾಗ ಸಿಕ್ಸರ್ ಬಾರಿಸಿದ. ಅವಾಗಾದರೂ ಸುಮ್ಮನಾಗುತ್ತಾನೆ ಅಂದ್ಕೊಂಡರೆ ಮುಂದಿನ ಎಸೆತದಲ್ಲೂ ಸಿಕ್ಸರ್ ಬಾರಿಸಲು ಮುಂದಾದ. ವೇಗವಾಗಿ ಬಂದ ನಥನ್ ಬ್ರೇಕನ್ ಎಸೆತವನ್ನು  ಹಿಂದೆ ಮುಂದೆ ನೋಡದೆ  ಹೊಡೆದೇ ಬಿಟ್ಟ. ಲಾಂಗ್ ಆಫ್’ನಲ್ಲಿದ್ದ ಫೀಲ್ಡರ್ ಅದನ್ನು ಸ್ವಲ್ಪವೂ ಕರುಣೆಯಿಲ್ಲದೆ ಹಿಡಿದೇ ಬಿಡಬೇಕಾ ಮಾರ್ರೆ? ದ್ವಿಶತಕ ಪೂರೈಸದ ದುಗುಡದೊಂದಿಗೆ ಪೆವಿಲಿಯನ್ನತ್ತ ಮುನ್ನಡೆದ ಈ ಭೂಪ. ಮತ್ತೊಂದು ಪಂದ್ಯದಲ್ಲಿ ಶ್ರೀಲಂಕಾ ವಿರುಧ್ಧ ಒಂದೇ ದಿನದಲ್ಲಿ ಇನ್ನೂರ ಎಂಬತ್ನಾಲ್ಕು ಭಾರಿಸಿ ನಮ್ಮೆಲ್ಲರ ಹುಬ್ಬೇರಿಸಿದ.ಅದು ಟೆಸ್ಟ್ ಸ್ವಾಮಿ ಅಂತ ಎಲ್ಲರೂ ಆಶ್ಚರ್ಯ ಪಡುತ್ತಿರುವಾಗಲೇ ಇನ್ನೂರ ತೊಂಬತ್ಮೂರು ತಲುಪಿದ. ಅನಗತ್ಯ ಹೊಡೆತಕ್ಕೆ ಕೈ ಹಾಕಿ, ಮುರಳೀಧರನ್ ಸ್ಪಿನ್ ಅರ್ಥೈಸಲಾಗದೇ ಕಾಟ್ ಆಂಡ್ ಬೌಲ್ಡ್ ಆದ. ಟೆಸ್ಟಿನಲ್ಲಿ ಮುನ್ನೂರು ಹೊಡೆದ ಭಾರತದ ಮೊದಲ ಆಟಗಾರ ಇವನೇ ಬಿಡಿ,  ಆವತ್ತು ಮುನ್ನೂರು ಕಂಪ್ಲೀಟ್ ಮಾಡಿದಿದ್ದರೆ ಮೂರು ತ್ರಿಶತಕ ಭಾರಿಸಿದ ಜಗತ್ತಿನ ಮೊದಲ ಬ್ಯಾಟ್ಸ್’ಮೆನ್ ಎಂಬ ವಿಶ್ವದಾಖಲೆಗೆ ಪಾತ್ರನಾಗುತ್ತಿದ್ದ.

ಕ್ರಿಕೆಟೆಂದರೆ ಬರೀ ಹುಡುಗರ ಆಟವೆಂದು ಹೇಳುವ ಕಾಲವೊಂದಿತ್ತು. ಧೋನಿ, ಕೊಹ್ಲಿ, ಯುವರಾಜ್’ಗಿಂತಲೂ ಮೊದಲು ಕ್ರಿಕೆಟ್ ಹುಡುಗಿಯರ ಆಕರ್ಷಣೆ ಸೆಳೆಯುವಂತೆ ಮಾಡಿದ್ದು ಈ ಸೆಹ್ವಾಗ್. ಕ್ರಿಕೆಟ್’ನಲ್ಲಿ ನಿಜವಾದ ಆಟವಿರುವುದು ಟೆಸ್ಟ್ ಕ್ರಿಕೆಟಿನಲ್ಲಿ. ಆದರೆ ನಿಧಾನಗತಿಯ ಆಟದಿಂದಾಗಿ ಟೆಸ್ಟ್ ಜನರ ಮನಸೆಳೆಯುವಲ್ಲಿ ಸೋತಿತ್ತು. ಅಂತಹಾ ಟೆಸ್ಟ್ ಕ್ರಿಕೆಟನ್ನು ಟಿ20 ರೇಂಜ್’ಗೆ ತಂದು ಜನರ ಮನಗೆಲ್ಲುವಂತೆ ಮಾಡಿದ್ದೂ ಇವನೇ. ಅಷ್ಟೇ ಯಾಕೆ ಟಿ20 ಪಂದ್ಯ ಹುಟ್ಟುವ ಮೊದಲೇ ಏಕದಿನದಲ್ಲಿ ಟಿ20 ಆಡಿದ ಕಿಲಾಡಿ ಈತ.   ಸೆಹ್ವಾಗ್ ಪ್ರತೀ ಪಂದ್ಯದಲ್ಲೂ ಸೆಂಚುರಿ ಬಾರಿಸಲ್ಲ, ಹಾಫ್ ಸೆಂಚುರಿಯೂ ಹೊಡೆಯಲ್ಲ ಹೋಗಲಿ ಹೇಳಿಕೊಳ್ಳುವಂತಹ ಅವರೇಜ್’ನ ಆಟವೂ ಅವನದಲ್ಲ. ಆದರೆ ಮೊದಲ ಹತ್ತು ಓವರುಗಳಲ್ಲಿ ಸೆಹ್ವಾಗ್ ಎಷ್ಟು ಬಾರಿಸಿದ್ದಾನೆ ಎಂಬುದೇ ಸಾಕಾಗುತ್ತಿತ್ತು ಪಂದ್ಯದ ಫಲಿತಾಂಶವನ್ನು ನಿರ್ಧರಿಸಲು, ಪಂದ್ಯದ ಗತಿಯನ್ನು ಬದಲಿಸಲು.

ಬ್ಯಾಟಿಂಗ್ ಎಷ್ಟು ರಾಶೋ. ಅಷ್ಟೇ ಸಾಫ್ಟ್ ಸ್ವಭಾವ ಸೆಹ್ವಾಗ್’ದು. ಮೈದಾನವಿರಲಿ, ಡ್ರೆಸ್ಸಿಂಗ್ ರೂಮ್ ಇರಲಿ, ಎಲ್ಲೂ ಹೆಸರು ಕೆಡಿಸಿಕೊಂಡವನಲ್ಲ(ಧೋನಿಯ ಜೊತೆಗೆ ವೈಮನಸ್ಯವಾಗಿತ್ತು ಎಂಬ ಆರೋಪ  ಬಿಟ್ಟರೆ). ಸಹ ಆಟಗಾರರ ಜೊತೆಗೆ, ತನ್ನ ಆಟದ ಜೊತೆಗೆ ಬಹಳ ಕೂಲ್ ಮೈಂಡೆಡ್. ಒಮ್ಮೆ ಭಾರತ ಮತ್ತು ಶ್ರೀಲಂಕಾ ಪಂದ್ಯದಲ್ಲಿ ಭಾರತಕ್ಕೆ ಜಯಗಳಿಸಲು ಒಂದು ರನ್ನಿನ ಅವಶ್ಯಕತೆಯಿತ್ತು. ಸ್ಟ್ರೈಕ್’ನಲ್ಲಿದ್ದ ಸೆಹ್ವಾಗ್ ಸೆಂಚುರಿಗೂ ಅಷ್ಟೇ ರನ್ ಬೇಕಿತ್ತು. ಬೌಂಡರಿ ಭಾರಿಸಲು ಮುಂದಾಗಿದ್ದಾಗಲೇ ಸೂರಜ್ ರಾಂಧೀವ್ ಕಂತ್ರಿ ಬುಧ್ಧಿ ಪ್ರಯೋಗಿಸಿ ವೈಡ್ ಎಸೆದ. ಶತಕ ತಪ್ಪಿದ್ದಕ್ಕೆ ಬೇಸರವಾಗಲಿಲ್ಲವಾ ಎಂದು ಕೇಳಿದ್ದಕ್ಕೆ ಏನಂದ ಗೊತ್ತಾ? “ ಸೆಂಚುರಿ ತಪ್ಪಿದ್ದು ದೊಡ್ಡ ವಿಷಯವಲ್ಲ, ತಂಡ ಜಯಗಳಿಸುವಲ್ಲಿ ನಾನು ಭಾರಿಸಿದ ಅಷ್ಟೂ ರನ್ನುಗಳು ಎಷ್ಟು ನೆರವಿಗೆ ಬಂತೆಂಬುದಷ್ಟೇ ಮುಖ್ಯ”. ಸೂರಜ್ ರಾಂಧೀವ್ ಜನರ ಮನದಲ್ಲಿ ಹೇಡಿಯಾಗಿಬಿಟ್ಟ, ಸೆಹ್ವಾಗ್ ಹೀರೋ ಆಗಿಬಿಟ್ಟ.

ಹಾಗೆ ನೋಡಿದರೆ ಈ ಹೊಡೆಬಡಿಯ ದಾಂಡಿಗ ಆರಂಭಿಕ ದಾಂಡಿಕನಾಗಿ ತಂಡಕ್ಕೆ ಆಯ್ಕೆಯಾದವನಲ್ಲ ಎಂಬುದು ನಿಮಗೆ ತಿಳಿದಿರಬಹುದು. ಸೆಹ್ವಾಗ್ ನಿಜ್ವಾಗ್ಲೂ ತಂಡಕ್ಕೆ ಆಯ್ಕೆಯಾಗಿದ್ದಿದು ಬೌಲಿಂಗ್ ಆಲ್ರೌಂಡರ್ ಆಗಿ. ಆವಾಗೆಲ್ಲ ಆರಂಭಿಕರಾಗಿ ಅಬ್ಬರಿಸುತ್ತಿದ್ದಿದು ಗಂಗೂಲಿ ಮತ್ತು ಸಚಿನ್.  ಆವತ್ತಿನ ಒಂದು ಪಂದ್ಯಕ್ಕೆ ಸಚಿನ್ ಗಾಯದಿಂದ ಅಲಭ್ಯರಾದಾಗ ಗಂಗೂಲಿಗೆ ಕಂಡಿದ್ದು ಸೆಹ್ವಾಗ್. ಆರಂಭಿಕನಾಗಿ ಬಂದ ಮೊದಲ ಪಂದ್ಯದಲ್ಲೇ ವೀರೂ ಅಬ್ಬರದ ಶತಕ ಭಾರಿಸಿ ಗಂಗೂಲಿ ನಂಬಿಕೆ ಉಳಿಸಿದ. ಇವತ್ತು ಆರಂಭಕ್ಕೆ ಗಂಗೂಲಿ ಇಲ್ಲ, ಸಚಿನ್ ಇಲ್ಲ. ಸೆಹ್ವಾಗನ್ನೂ ಉಳಿಸಿಕೊಳ್ಳಲಿಲ್ಲ, ಗಂಭೀರ್  ಕೂಡಾ ಫಾರ್ಮ್ ಕಳೆದುಕೊಂಡು ತಂಡದಿಂದ ಹೊರ ತಳ್ಳಲ್ಪಟ್ಟ.  ಅದಾದ ಬಳಿಕ ನಮಗೆ ಇಬ್ಬರು ಉತ್ತಮ ಆರಂಭಿಕರನ್ನು ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಈಗ ಹೇಗಾಗಿದೆ ಎಂದರೆ ಧವನ್ ಆಡಿದರೆ ರೋಹಿತ್ ಇಲ್ಲ, ರೋಹಿತ್ ಆಡುವಾಗ ಧವನ್ ಇಲ್ಲ. ಟೆಸ್ಟ್ ಅಂತೂ ಕೇಳಲೇಬೇಡಿ. ಬಹುಶಃ ಕಳೆದ ಇಪ್ಪತ್ತು ವರ್ಷಗಳಲ್ಲಿ ನಮ್ಮ ಆರಂಭಿಕ ಆಟ ಇಷ್ಟು ಕಳೆಗುಂದಿರಲಿಕ್ಕಿಲ್ಲ!

ಸೆಹ್ವಾಗ್ ಈಗ ರಾಷ್ಟ್ರೀಯ ತಂಡದಿಂದ ತೆರೆಮರೆಗೆ ಸರಿದಿದ್ದಾನೆ. ಇದರಲ್ಲಿ ಅವರ ತಪ್ಪೂ ಇದೆ. ಭಾರಿ ಭಾರಿ ಅವಕಾಶಗಳನ್ನು ನೀಡಿದರೂ ಮಾಡಿದ ತಪ್ಪನ್ನೇ ಮಾಡಿ ಫಾರ್ಮೆಂಬ ಟ್ರ್ಯಾಕ್’ಗೆ ಬರಲು ವಿಫಲನಾಗುತ್ತಿದ್ದಾನೆ ಸೆಹ್ವಾಗ್. ಈ ನಿಟ್ಟಿನಲ್ಲಿ ಸೆಹ್ವಾಗ್’ನನ್ನು ತಂಡದಿಂದ ಹೊರಗಿಟ್ಟಿದ್ದು ಸರಿಯಾಗಿಯೇ ಇದೆ. ಆದ್ರೆ ಅದರಲ್ಲಿ ರಾಜಕೀಯವೂ ಇದೆಯೆಂದು ಕೇಳಿಬರುತ್ತಿದೆಯಲ್ಲಾ? ಧೋನಿಯೇ ಇಷ್ಟಕ್ಕೆಲ್ಲಾ ಕಾರಣ ಅಂತ ಹೇಳಲಿಕ್ಕಾಗುವುದಿಲ್ಲವಾದರೂ ಇದರಲ್ಲಿ ರಾಜಕೀಯ ಇಲ್ಲ ಅಂತ ಹೇಳಲು ಸಾಧ್ಯವೇ ಇಲ್ಲ. ಇದಕ್ಕೆ ತಕ್ಕುದಾಗಿ, ದೇಸಿ ಕ್ರಿಕೆಟಿನಲ್ಲಿ ಅಪರೂಪಕ್ಕೊಂದು ಒಳ್ಳೆಯ ಆಟವಾಡಿದರೂ ಕನ್ಸಿಸ್ಟೆನ್ಸಿ ತೋರಿಸಲು ವಿಫಲರಾಗುತ್ತಿದ್ದಾನೆ ಸೆಹ್ವಾಗ್. ಆದರೆ ಭಾರತ ತಂಡಕ್ಕೆ ಸೆಹ್ವಾಗ್ ಕನ್ಸಿಸ್ಟೆನ್ಸಿಯ ಆಟವೇ ಬೇಕಂತಿಲ್ಲ, ಅವ ತಂಡದಲ್ಲಿದ್ದರೂ ಸಾಕು, ಬ್ಯಾಟಿಂಗ್ ವಿಭಾಗಕ್ಕದು ಆನೆಬಲ ಇದ್ದ ಹಾಗೆ. ಇನ್ನೂ ಒಂದು ಮಾತು ಹೇಳುವುದಾದರೆ, “ ಫಾರ್ಮ್ ಈಸ್ ಟೆಂಪರರಿ, ಕ್ಲಾಸ್ ಈಸ್ ಪರ್ಮನೆಂಟ್” ಎಂಬ ಮಾತನ್ನು ಹೇಳಿರುವುದೇ ಸೆಹ್ವಾಗ್ ಆಟವನ್ನು ನೋಡಿ.

ಸೆಹ್ವಾಗ್’ಗೆ ವಯಸ್ಸಾಯಿತು, ಫೀಲ್ಡಿಂಗ್ ಚೆನ್ನಾಗಿ ಮಾಡಲು ಸಾಧ್ಯವಿಲ್ಲ ಎನ್ನಲಾಗದು. ಯಾಕೆಂದರೆ ಮೂವತ್ತಾರನೇ ವಯಸ್ಸಿನಲ್ಲಿ ತಂಡಕ್ಕೆ ಮರಳಿ ಎರಡು ವರ್ಷ ನಿರಂತರವಾಗಿ ಅದ್ಭುತ ಫಾರ್ಮ್ ಪ್ರದರ್ಶಿಸಿದ ದಾದಾನ ಉದಾಹರಣೆ ನಮಗೆ ತಿಳಿದೇ ಇದೆ. ಒಂದೆರಡು ಪಂದ್ಯಗಳ ವೈಫಲ್ಯತೆಯಿಂದ ಸೆಹ್ವಾಗ್ ಕೆಪಾಸಿಟಿಯನ್ನು ಅಳೆಯಲು ಸಾಧ್ಯವಿಲ್ಲ, ಯಾವುದೇ ಕ್ಷಣದಲ್ಲಿ ಸಿಡಿಯಬಲ್ಲ ಆಟಗಾರ ಈ ಸೆಹ್ವಾಗ್. ನಿನ್ನೆ ರಾತ್ರಿಯಷ್ಟೇ ಸೆಹ್ವಾಗ್ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಹೇಳಿದ್ದಾನೆ ಎನ್ನುವ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿ ಅಭಿಮಾನಿಗಳಿಗೆ ಸಣ್ಣ ಮಟ್ಟಿನ ಹಾರ್ಟ್ ಅಟ್ಯಾಕ್ ಆಗಿತ್ತು. ಕಡೆಗೆ ಅದು ಸೆಹ್ವಾಗ್ ನಿವೃತ್ತಿಯ ಕುರಿತು ಹಿಂಟ್ ಅಷ್ಟೇ ನೀಡಿದ್ದಾನೆ ಎನ್ನುವಾಗ ಎಲ್ಲರಿಗೂ ತುಸು ಸಮಧಾನ ಆಯ್ತು.

ಇವತ್ತು ಸೆಹ್ವಾಗ್ ಬರ್ತ್’ಡೇ.  ಇದು ನಾನು ಸೆಹ್ವಾಗ್’ಗೆ ಕೊಡುತ್ತಿರುವ ಬರ್ತ್’ಡೇ ಗಿಫ಼್ಟ್ ಅಂತಾನಾದರೂ ಅನ್ಕೊಳ್ಳಿ, ಇಲ್ಲಾ ಹುಚ್ಚು ಹೊಗಳಿಕೆ ಅಂತಾನಾದ್ರೂ ಅನ್ಕೊಳ್ಳಿ. ಅಪ್ಪಟ ಅಭಿಮಾನಿಯಾಗಿ ಇಷ್ಟಾದರೂ ಮಾಡದಿದ್ದರೆ  ಹೇಗೆ ಅಂತ ಅನಿಸಿತು ನನಗೆ. ಅಂದ ಹಾಗೆ ಸೆಹ್ವಾಗ್ ಆಟವನ್ನು ಮತ್ತೆ ನೋಡಲು ಬಯಸುತ್ತಿರುವವನು ನಾನು ಒಬ್ನೇನಾ?? ಅಲ್ಲ ಅಂತ ನಂಗೆ ಚೆನ್ನಾಗಿ ಗೊತ್ತು.

ಹ್ಯಾಪಿ ಬರ್ತ್’ಡೇ ವೀರೂ..

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!