ನನ್ ಯಕ್ಡಾ!! ಇಡೀ ಕರ್ನಾಟಕನ್ ಬೆಂಡೆತ್ತ್ ಬಿಡ್ತೀನಿ, ಐಟಮ್ ಸಾಂಗ್ ಬ್ಯಾನ್ ಮಾಡ್ತೀನಿ. ಹಂಗ್ ಮಾಡ್ತೀನಿ, ಹಿಂಗ್ ಮಾಡ್ತೀನಿ ಅಂತ ಅಂದು ಕೆ.ಜಿ.ರಸ್ತೆಯ ಚಿತ್ರಮಂದಿರದ ಮುಂದೆ ಸಮಯ ಸುದ್ಧಿ ವಾಹಿನಿ ಕ್ಯಾಮೆರಾ ಮುಂದೆ ಈ ವ್ಯಕ್ತಿ ಮಾತಾಡಿದ್ದು ಇಡೀ ಕರ್ನಾಟಕವನ್ನ ಈತನತ್ತ ಸೆಳೆಯುತ್ತದೆ. ಅಲ್ಲಿ ತನಕ ಈತ ಯಾರು ಅಂತ ತಿಳಿದಿದ್ದದ್ದು ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ. ಅದು ಕೂಡಾ ಒಂದು ಕಾಂಟ್ರವರ್ಷಿಯಲ್ ಕಹಾನಿ ಮೂಲಕ. ಚಿತ್ರನಟಿ ರಮ್ಯರನ್ನು ತಾನು ಮದುವೆ ಆಗಿದ್ದೇನೆ ಎಂದು ಹೇಳಿಕೆ ಕೊಟ್ಟು ಪೋಲಿಸ್ ಠಾಣೆ ಮೆಟ್ಟಿಲೇರಿ ಬಂದಿದ್ದ ಈ ಭೂಪ.!!
ಹೌದು.. ಆತ ಬೇರಾರು ಅಲ್ಲ. ತನ್ನ ಹುಚ್ಚಾಟಿಕೆ, ಓತಪ್ರೋತವಾದ ಹೇಳಿಕೆ, ನಂಬಲಸಾಧ್ಯವಾದ ಸುಳ್ಳುಗಳ ಕಂತೆಯ ಮೂಲಕ ಜನರಿಗೆ ಕಾಮಿಡಿ ಪೀಸ್ ಆಗಿರುವ ನಟ, ನಿರ್ದೇಶಕ(??) ಹುಚ್ಚ ವೆಂಕಟ್..!! ಒಂದು ವಿಷಯವಂತೂ ಸತ್ಯ. ಹುಡುಗ್ರಿಗೆ ಲೈಫ್ ಅಲ್ಲಿ ಬೋರಾದಾಗ, ಆಫೀಸ್ ಜಂಜಡಗಳಿಂದ ಜೀವನ ಜರ್ಜರಿತವಾದಾಗ ಇತ್ತೀಚೆಗೆ ಮೊದಲು ನೆನಪಾಗುತ್ತಿರುವುದು ಹುಚ್ಚ ವೆಂಕಟ್’ನ ಹುಚ್ಚಾಟಗಳ ವಿಡಿಯೋ ತುಣುಕುಗಳು.!!
ಈ ವ್ಯಕ್ತಿ ಆಡಿರುವ ಮಾತುಗಳಾವುವೂ ಸತ್ಯವಲ್ಲ, ಶುದ್ಧ ಸುಳ್ಳು ಎಂಬ ಸತ್ಯವನ್ನೇ ತಿಳಿದು ಕೇವಲ ಮನರಂಜನೆಯ ದಾಹಕ್ಕಾಗಿ ಆತನ ಹುಚ್ಚಾಟಗಳನ್ನು ನೋಡಿದವರೇ ಬಹಳ ಮಂದಿ. ಕೆಲವು ಸುದ್ಧಿ ಮಾಧ್ಯಮಗಳೂ ಈತನ ವಿಡಿಯೋಗಳನ್ನು ಪ್ರಚಾರ ಮಾಡಿ ತಮ್ಮ ಟಿಆರ್ಪಿಯನ್ನು ಭರ್ಜರಿಯಾಗೇ ಹೆಚ್ಚಿಸಿಕೊಳ್ಳುತ್ತಿವೆ ಬಿಡಿ. ಹುಚ್ಚ ವೆಂಕಟ್ ಸೇನೆ ಇದೆ ಅಂತ ಪ್ರಥಮ ಸಂದರ್ಶನದಲ್ಲೇ ಹೇಳಿದ್ದ ಈ ವೆಂಕಟನ ಸೇನೆ ಅದ್ಯಾಕೋ ಯಾವುದೇ ಕನ್ನಡಪರ ಹೋರಾಟಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಸೇನೆ ಇದ್ರೆ ತಾನೇ ಹೋರಾಟದಲ್ಲಿ ಭಾಗವಹಿಸುವುದು ಅನ್ನೋದು ಇನ್ನೊಂದು ಸತ್ಯ ಬಿಡಿ. ಇನ್ನೂ ಅನೇಕ ಪುಂಖಾನುಪುಂಖ ಸುಳ್ಳುಗಳ ಮೂಲಕ ಜನರಿಗೆ ಪುಕ್ಕಟೆ ಎಂಟರ್ಟೈನ್ಮೆಂಟ್ ಕೊಟ್ಟ ಈ ಆಸಾಮಿ ಸಹಜವಾಗಿಯೇ ಈ ಸಾಲಿನ ಬಿಗ್ ಬಾಸ್ ಸ್ಪರ್ಧೆಯ ಟಾಪ್ ಸಂಭಾವಿತರಲ್ಲೊಬ್ಬನಾಗಿ ಬಹಳ ಸುದ್ಧಿಮಾಡಿಯೇ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾನೆ. ಅದರಲ್ಲೂ ಬಿಗ್ ಬಾಸ್ ಮನೆಗೆ ಹೋಗುವಾಗ ಸುದೀಪ್’ಗೇ ಏಕವಚನದಲ್ಲಿ ಮಾತಾಡಿ ತಿರುನಲ್ವೇಲಿ ಹಲ್ವ ತಿನ್ನಿಸಿ ಮನೆಯೊಳಗೆ ಕಾಲಿಟ್ಟಿದ್ದಾನೆ.(ಇದು ಫುಲ್ ಸ್ಕ್ರಿಪ್ಟೆಡ್ ಪ್ರೋಗ್ರಾಮ್ ಅನ್ನೋದು ನಂಗೊತ್ತು) ಎಂತೆಂತವರ ಕಾಲೆಳೆದಿದ್ದ ಸುದೀಪ್ ಕೂಡಾ ಒಂದು ಕ್ಷಣ ಅವಕ್ಕಾಗುವಂತೆ ಮಾಡಿದ್ದಾನೆ ಈ ವೆಂಕಟ್!!
ಹಾಗಾದರೆ ಈ ವೆಂಕಟ್ ಅಷ್ಟೂ ಪ್ರಸಿದ್ಧ ವ್ಯಕ್ತಿಯೇ??? ಕರ್ನಾಟಕದಲ್ಲಿ ಈತ ಸೂಪರ್ ಸ್ಟಾರೇ?? ಬಿಗ್ ಬಾಸ್ ಮನೆಗೆ ಕಾಲಿಡುವಾಗ ಯಾರಿಗೂ ಇಲ್ಲದಷ್ಟು ಪ್ರಾಮುಖ್ಯತೆ ಈತನಿಗೇತಕ್ಕೆ?? ಕಳೆದೆರಡು ಸೀಸನ್ ನಲ್ಲಿ ಹಳಸಿ ನಾರಿದ್ದ ಬಿಗ್ ಬಾಸ್ ಶೋಗೆ ಟಿಆರ್ಪಿಯ ಪ್ರಮುಖ ಅಸ್ತ್ರವಾಗಿ ಸಿಕ್ಕಿದ್ದೇ ಈ ಹುಚ್ಚ ವೆಂಕಟ್..!! ಇಲ್ಲಿ ಹಲವಾರು ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ. ಎರ್ರಾ ಬಿರ್ರಿ ಮಾತನ್ನಾಡಿ, ಮಾಧ್ಯಮಗಳ ಮುಂದೆ ವಿಚಿತ್ರವಾಗಿ ಕಿರುಚಿ,ಯೂ ಟ್ಯೂಬ್ ನಲ್ಲಿ ಹೊಸ ಹೊಸ ವಿಡಿಯೋ ಹಾಕಿದರೆ ದಿನ ಬೆಳಗಾಗುವುದರಲ್ಲಿ ಒಬ್ಬ ವ್ಯಕ್ತಿ ಇಷ್ಟೊಂದು ಹವಾ ಉಂಟು ಮಾಡುತ್ತಾನೆಯೇ?? ಹೇಳೀ ಕೇಳಿ ಇದು ಸೋಶಿಯಲ್ ಮೀಡಿಯಾ ಯುಗ ಬಿಡಿ. ಇಂತಹ ರಂಪಾಟದ ವ್ಯಕ್ತಿಯ ಬಗ್ಗೆ ಜನರಿಗೆ ಕ್ಷಣಮಾತ್ರದಲ್ಲಿ ಗೊತ್ತಾಗುತ್ತದೆ ಎಂದಾದರೆ ಉಳಿದ ವಿಷಯಗಳು ಏಕೆ ಗೊತ್ತಾಗುವುದಿಲ್ಲ ನಮ್ಮ ಜನರಿಗೆ?? ಹಲವಾರು ಸಮಸ್ಯೆಗಳಿಗೆ ಜನಬೆಂಬಲ ಸೋಶಿಯಲ್ ಮೀಡಿಯಾ ಮುಖಾಂತರ ಏಕೆ ದೊರಕುವುದಿಲ್ಲ?? ಸಮಾಜದ ಸ್ವಾಸ್ಥ್ಯ ಹಾಳುಮಾಡುತ್ತಿರುವ ಪ್ರೊ. ಭಗವಾನ್ ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ವಿರೋಧಿಸಿ ೧೧೦೦೦ ಕ್ಕೂ ಅಧಿಕ ಮಂದಿ ಅಂತರ್ಜಾಲದಲ್ಲಿ ಸಹಿ ಅಭಿಯಾನ ಮಾಡಿದರೂ ತಲುಪಬೇಕಾದವರಿಗೆ ತಲುಪದಿರುವುದು ನಮ್ಮ ಸಮಸ್ಯೆಗೆ ಹಿಡಿದ ಕನ್ನಡಿಯಂತಿದೆ. ಇನ್ನು ಕಳೆದ ಸೀಸನ್’ನಲ್ಲಿ ಬಂದಿದ್ದ ಅನಿತಾ ಭಟ್ ಎಂಬ ಕಲಾವಿದೆ, ಲಯ ಕೋಕಿಲಾ ಈ ಸೀಸನ್ ನಲ್ಲಿ ಬಂದಿರುವ ರವಿ ಮುರೂರು ಯಾರು ಅಂತಾನೇ ಬಹಳಷ್ಟು ಮಂದಿಗೆ ಗೊತ್ತಿರಲಿಲ್ಲ. ಆದರೆ ಹುಚ್ಚ ವೆಂಕಟ್ ಗೊತ್ತಿಲ್ಲ ಅನ್ನೋರೇ ಬಹಳ ಕಮ್ಮಿ!!!ಹಲವಾರು ಉದಯೋನ್ಮುಖ ಕಲಾವಿದರಿಗೆ ಸಿಗದ ಪ್ರಚಾರ ಕೇವಲ ಹುಚ್ಚ ವೆಂಕಟ್’ಗೆ ಏನಕ್ಕೆ ಸಿಕ್ತಾ ಇದೆ?? ಇಂತಹ ಪ್ರಚಾರ ಕೊಡುತ್ತಿರುವವರು ನಾವಲ್ಲವೇ???
ಇದನ್ನೆಲ್ಲಾ ನೋಡಿದ ಮೇಲೆ ನಮ್ಮಲ್ಲಿ ಮೂಡುವ ಕಟ್ಟ ಕಡೆಯ ಪ್ರಶ್ನೆ ನಿಜವಾಗಿಯೂ ಹುಚ್ಚ ಯಾರು? ದಿನ ಬೆಳಗಾದ್ರೆ ಏನಾದ್ರೂ ಗಾಂಚಾಲಿ ಮಾಡುವ ಈ ವೆಂಕಟನೇ? ಇಲ್ಲಾ ಬೆಳಗಾದ್ರೆ “ಯಪ್ಪಾ.. ಒಮ್ಮೆ ರಾತ್ರಿ ಆಗ್ಲಿ, ಬಿಗ್ ಬಾಸ್ ನೋಡ್ಬೇಕು” ಅಂತ ಕಾತರಿಸುವ ನಾವುಗಳೇ?!
ಲಾಸ್ಟ್ ಪಂಚ್: ಒಂದು ಮಾತು ಎಲ್ಲರಿಗೂ ತಿಳಿದಿರಲಿ. ನಾವು ಬಿಗ್ ಬಾಸ್ ನೋಡಿಲ್ಲಾ ಅಂದ್ರೆ ಟಿವಿಯವ್ರೇನು ಬೀದಿಗ್ ಬರಲ್ಲ, ಟಿವಿಯವ್ರು ಕೋಟ್ಯಾಧಿಪತಿಗಳು!!