Critic ratings – ****
ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳು ಬರುತ್ತಿಲ್ಲ ಎಂದು ಅಲವತ್ತುಕೊಳ್ಳುವವರು ತಮ್ಮ ನಿಲುವನ್ನು ಬದಲಿಸಿಕೊಳ್ಳಬೇಕಾದ ಕಾಲ ಹತ್ತಿರವಾಗಿದೆ. ಮೊದಲು ರಂಗಿತರಂಗ, ನಂತರ ಉಪ್ಪಿ-2 ಈಗ ಇಂಥ ವಿಭಿನ್ನ ಕಥಾಹಂದರವುಳ್ಳ ಚಿತ್ರಗಳ ಸಾಲಿಗೆ ಹೊಸ ಸೇರ್ಪಡೆ ‘ಆಟಗಾರ’ ಸಿನಿಮಾ. ಚಾರುಲತಾ ಸಿನಿಮಾ ನಂತರ ದ್ವಾರಕೀಶ್ ಬಹಳ ಆಸ್ಥೆಯಿಂದ ನಿರ್ಮಿಸಿರುವ,`ಪರಾರಿ’ ಎಂಬ ಪ್ಲಾಪ್ ಸಿನಿಮಾ ಕೊಟ್ಟು ಕಳೆದು ಹೋಗಿದ್ದ ಕೆ.ಎಂ.ಚೈತನ್ಯ ಬಹಳ ನಿರೀಕ್ಷೆ ಇಟ್ಟುಕೊಂಡು ನಿರ್ದೇಶಿಸಿರುವ ಸಿನಿಮಾ ಆಟಗಾರ. ಮೊದಲ ದಿನ ಮಂದವಾಗಿ ಸಾಗಿದರೂ ಮಾಧ್ಯಮಗಳಲ್ಲಿ ಒಳ್ಳೆಯ ವಿಮರ್ಶೆ ಬಂದ ಮೇಲೆ ಆಟಗಾರನ ಅಸಲಿ ಆಟ ಶುರುವಾಗಿದೆ.
ಒಂದು ಪ್ರಸಿದ್ಧ ಟಿವಿ ಚಾನೆಲ್ ನ ರಿಯಾಲಿಟಿ ಶೋ.ಅದರಲ್ಲಿ ಭಾಗವಹಿಸುವವರು ಹತ್ತು ಸ್ಪರ್ಧಿಗಳು. ಬೇರೆ ಬೇರೆ ರಂಗದಲ್ಲಿ ಹೆಸರು ಮಾಡಿರುವವರು. ಹೆಸರಾಂತ ವೈದ್ಯ(ಪ್ರಕಾಶ್ ಬೆಳವಾಡಿ), ನ್ಯೂಸ್ ಚಾನೆಲ್ ಒಂದರ ಪ್ರಧಾನ ಸಂಪಾದಕ (ಅಚ್ಚುತ್ ಕುಮಾರ್), ನಟಿ ಮಾಡೆಲ್ ಗಳು(ಮೇಘನಾ ರಾಜ್, ಪರೋಲ್ ಯಾದವ್), ಫೋಟೋಗ್ರಾಫರ್, ಹೆಸರಾಂತ ಅಡುಗೆ ಭಟ್ಟ (ಸಾಧು ಕೋಕಿಲ), ಅರಣ್ಯಗಳ ಉಳಿವಿಗಾಗಿ ಎನ್.ಜಿ.ಒ ದಲ್ಲಿ ಕೆಲಸ ಮಾಡುವವಳು(ಪಾವನಾ), ಕುಖ್ಯಾತ ಡ್ರಗ್ ಡೀಲರ್(ಚಿರಂಜೀವಿ ಸರ್ಜಾ), ಒಳ್ಳೆಯ ಹೆಸರು ಮಾಡಿದ ಶಾಲೆಯೊಂದರ ಮುಖ್ಯೋಪಾಧ್ಯಾಯಿನಿ (ಅನು ಪ್ರಭಾಕರ್) ಮತ್ತು ಒಬ್ಬಳು ಸಾಮಾನ್ಯ ಮಹಿಳೆ. ಹೀಗೆ ಹತ್ತು ಜನ ಆ ರಿಯಾಲಿಟಿ ಶೋ ನಲ್ಲಿ ಸ್ಪರ್ಧಿಗಳು. ಆ ಸ್ಪರ್ಧೆ ನಡೆಯುವುದು ಸಮುದ್ರದ ಮಧ್ಯೆ ಇರುವ ನಿರ್ಜನ ದ್ವೀಪವೊಂದರಲ್ಲಿ.ಅಲ್ಲಿ ಈ ಹತ್ತು ಜನ ಸ್ಪರ್ಧಿಗಳು ಮಾತ್ರ ಇರುತ್ತಾರೆ. ಚಾನೆಲ್ ಆಫೀಸ್ ಗೆ ಮಾತ್ರ ಫೋನ್ ಮಾಡಲು ಆಗುವಂಥ ಲ್ಯಾಂಡ್ ಫೋನ್ ಮತ್ತು ಮನೋರಂಜನೆಗೆ ಒಂದು ಟಿವಿ ಮಾತ್ರ ಆ ನಿರ್ಜನ ದ್ವೀಪದ ಬಂಗಲೆಯೊಳಗೆ ಇರುತ್ತದೆ.ಅಲ್ಲಿ ಆ ಸ್ಪರ್ಧಿಗಳು ಒಂದು ತಿಂಗಳು ಕಳೆದ ನಂತರ ವಿಜೇತರು ಯಾರು ಎಂಬುದನ್ನು ಘೋಷಿಸಲಾಗುತ್ತದೆ.
ಆ ನಿರ್ಜನ ದ್ವೀಪಕ್ಕೆ ತೆರಳಿದ ಮೊದಲ ದಿನವೇ ವಿಲಕ್ಷಣ, ನಿಗೂಢ ಘಟನೆಗಳು ನಡೆಯಲು ಆರಂಭವಾಗುತ್ತವೆ. ಒಬ್ಬಬ್ಬರಾಗೇ ನಿಗೂಢವಾಗಿ ಸಾವನ್ನಪ್ಪುತ್ತಾರೆ. ಅದೇ ಸಮಯಕ್ಕೆ ಚಾನೆಲ್ ಆಫೀಸ್ ಜೊತೆ ಆ ದ್ವೀಪದ ಸಂಪರ್ಕ ಕಡಿತಗೊಳ್ಳುತ್ತದೆ. ಸಾವಿನ ಸರಣಿ ಮುಂದುವರೆಯುತ್ತದೆ. ಕಾರಣ ಹುಡುಕಲು ಆ ಕ್ಷಣಕ್ಕೆ ಬದುಕಿದ್ದವರು ಪ್ರಯತ್ನಿಸಿದರೂ ಕಾರಣ ಸಿಗುವುದಿಲ್ಲ. ಅದೃಶ್ಯ ಆಟಗಾರ ತನ್ನ ಸಾವಿನ ಆಟವನ್ನು ಮುಂದುವರೆಸುತ್ತಲೇ ಹೋಗುತ್ತಾನೆ. ಅದೇ ಸಮಯಕ್ಕೆ ಪೊಲೀಸ್ ಅಧಿಕಾರಿ ರವಿ ಗೌಡ(ರವಿಶಂಕರ್) ಆ ಹತ್ತು ಜನರ ಬಗ್ಗೆ ಮಾಹಿತಿ ಕಲೆ ಹಾಕಲು ಶುರು ಮಾಡುತ್ತಾನೆ. ಕೆಲ ದಿನಗಳ ನಂತರ ಆತನಿಗೊಂದು ಅನಾಮಧೇಯ ಪತ್ರ ಬರುತ್ತದೆ. ಆ ಪತ್ರದಲ್ಲಿ ಏನಿರುತ್ತದೆ? ಆ ದ್ವೀಪಕ್ಕೆ ತೆರಳಿದವರು ಯಾಕಾಗಿ ಸಾಯುತ್ತಾರೆ? ಅದರ ಹಿಂದಿನ ಕಾರಣ ಏನು?ಕೊನೆಗೆ ಯಾರಾದರೂ ಬದುಕುತ್ತಾರಾ ಎಂದು ತಿಳಿಯಬೇಕಾದರೆ ನೀವು ಸಿನಿಮಾ ನೋಡಬೇಕು.
ಈ ಸಿನಿಮಾದಲ್ಲಿ ಇಂಥವನೇ ಹೀರೋ, ಇವಳೇ ಹೀರೋಯಿನ್ ಅಂತ ಇಲ್ಲ. ಎಲ್ಲರ ಪಾತ್ರವೂ ಅಷ್ಟೇ ಮುಖ್ಯವಾದದ್ದು. ಅನಂತ್ ನಾಗ್ ಹಿಂದೆಂದೂ ಕಾಣಿಸಿಕೊಂಡಿರದ ಸರಳ ಶ್ರೀ ಸಾಮಾನ್ಯನಾಗಿ ಮತ್ತು ಚಿತ್ರದ ಬಹುಮುಖ್ಯ ಪಾತ್ರವಾಗಿ ಕಾಣಿಸಿಕೊಂಡಿದ್ದಾರೆ. ರಿಯಾಲಿಟಿ ಶೋ ಆಯೋಜಿಸಿರುವ ಚಾನೆಲ್ ನ ಮುಖ್ಯಸ್ಥನಾಗಿ ಕನ್ನಡದ ಕುಳ್ಳ ದ್ವಾರಕೀಶ್ ಚಿಕ್ಕದಾಗಿ,ಚೊಕ್ಕವಾಗಿ ನಟಿಸಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ರವಿಶಂಕರ್ ಅವರದ್ದು ತೂಕದ ಪಾತ್ರ. ರವಿಶಂಕರ್ ತಾವು ಕಾಮೆಡಿಯನ್ ಮತ್ತು ಪೋಷಕ ನಟ ಎರಡನ್ನೂ ಸಮರ್ಥವಾಗಿ ನಿಭಾಯಿಸಬಲ್ಲೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಸಾಧುಕೋಕಿಲ ಹಾಸ್ಯಕ್ಕಿಂತಲೂ ‘ಆರುಮುಗ’ನ ಹಾಸ್ಯಕ್ಕೇ ನಗು ಉಕ್ಕುಕ್ಕಿ ಬರುತ್ತದೆ. ಚಿರು ಸರ್ಜಾ, ಮೇಘನಾ ರಾಜ್, ಅನು ಪ್ರಭಾಕರ್, ಅಚ್ಚುತ್ ಕುಮಾರ್, ಸಾಧು ಕೋಕಿಲ, ಪ್ರಕಾಶ್ ಬೆಳವಾಡಿ, ಪಾವನಾ ತಮ್ಮ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಎಲ್ಲಿಯೂ ಓವರ್ ಆಕ್ಟಿಂಗ್ ಇಲ್ಲ. ಆದರೆ ಪರೋಲ್ ಯಾದವ್ ಮಾತ್ರ ತಮಗೆ ಗ್ಲಾಮರ್ ಪಾತ್ರ ಬಿಟ್ಟು ಗಂಭೀರವಾದ ಪಾತ್ರ ಮಾಡಲು ಬರುವುದಿಲ್ಲ ಎಂದು ತೋರಿಸಿದ್ದಾರೆ.
ಅನೂಪ್ ಸಿಳೀನ್ ಅವರ ಸಂಗೀತ ಮತ್ತು ಹಿನ್ನಲೆ ಸಂಗೀತ ಎರಡೂ ಸೂಪರ್. ಆಯಾಯ ದೃಶ್ಯಗಳಿಗೆ ಸರಿಹೊಂದುವಂತೆ ಹಿನ್ನಲೆಯಲ್ಲಿ ಸಂಗೀತ ಖುಷಿ ಕೊಡುತ್ತದೆ.ನಾಲ್ಕು ಹಾಡುಗಳೂ ಚೆನ್ನಾಗಿವೆ. ಒಗಟಿನ ರೂಪದಲ್ಲಿರುವ `ತಾರಮ್ಮಯ್ಯ ತಾತಾರಮ್ಮಯ್ಯ’ ಹಾಡನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ. ಸತ್ಯ ಹೆಗಡೆಯವರ ಛಾಯಾಗ್ರಹಣ ಅತ್ಯುತ್ತಮ ಎನ್ನುವಂತೆ ಇಲ್ಲದಿದ್ದರೂ ಡಿಸ್ಟಿಂಕ್ಷನ್ ಕೊಡಬಹುದು. ಚಿರು ಸರ್ಜಾ ಎಂಟ್ರಿ ಆಗುವ ಆರಂಭದ ಫೈಟ್’ನಲ್ಲಿ ಸಾಹಸ ನಿರ್ದೇಶಕ ರವಿವರ್ಮ ಅವರ ಶ್ರಮವೂ ಅಭಿನಂದನೀಯ.ಆದರೆ ಗಂಭೀರ ಪಾತ್ರವಿರುವಾಗ ಮೇಘನಾ ರಾಜ್ ಅವರನ್ನು ಸ್ವಲ್ಪ ಹೆಚ್ಚಾಗಿಯೇ ಗ್ಲಾಮರಸ್ ಆಗಿ ತೋರಿಸಿದ್ದು ಕೆಲವು ಕಡೆ ಸಹಿಸಿಕೊಳ್ಳಲು ಕೆಲವರಿಗೆ ಕಷ್ಟವಾಗಬಹುದು. ಎಲ್ಲೂ ಅನಗತ್ಯ ದೃಶ್ಯಗಳಿಲ್ಲದ ಎರಡು ಗಂಟೆ ಎಂಟು ನಿಮಿಷ ಅವಧಿಯ ಒಳ್ಳೆಯmystery and thriller ಸಿನಿಮಾ ಆಟಗಾರ. ವಿಭಿನ್ನವಾದ ಕಥಾಹಂದರವಾದ್ದರಿಂದ ಕೊಟ್ಟ ಹಣಕ್ಕೆ ಮೋಸವಿಲ್ಲ.
ಕಾನೂನನ್ನು ಎಲ್ಲರೂ ಗೌರವಿಸಬೇಕು. ಉಳ್ಳವರು ಬಹಳ ದೊಡ್ಡ ತಪ್ಪು ಮಾಡಿದರೂ ಸುಲಭವಾಗಿ ನ್ಯಾಯದೇವತೆಯ ಕಣ್ಣಿಗೆ ಮಣ್ಣೆರೆಚುತ್ತಾರೆ. ಆದರೆ ಒಬ್ಬ ಶ್ರೀಸಾಮಾನ್ಯ ಮನುಷ್ಯನಿಗೆ ನಮ್ಮ ಕಾನೂನು ಕೂಡಾ ನ್ಯಾಯ ಒದಗಿಸದಾದಾಗ ಆತ ಏನು ಮಾಡಬೇಕು? ನಾವು ನಮ್ಮ ಜೀವನದಲ್ಲಿ ಮಾಡುವ ಒಂದು ಸಣ್ಣ ತಪ್ಪು ಕೂಡಾ ಇನ್ನೊಬ್ಬರ ಜೀವನದ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಿ ನಮಗೇ ಗೊತ್ತಿಲ್ಲದಂತೆ ನಾವು ವೈರಿಗಳನ್ನು ಕಟ್ಟಿಕೊಳ್ಳಬಹುದು. ಹಾಗಾಗಿ ಮಾಡುವ ಪ್ರತಿ ಕೆಲಸವನ್ನೂ ಎಚ್ಚರಿಕೆಯಿಂದ ಮಾಡೋಣ ಎಂಬ ಸಂದೇಶವನ್ನು ‘ಆಟಗಾರ’ ಕೊಡುತ್ತಾನೆ.