ಸಿನಿಮಾ - ಕ್ರೀಡೆ

ಇನ್ನಾದರೂ ಕನ್ನಡ ಸಿನೆಮಾವನ್ನು ಬೆಂಬಲಿಸದಿದ್ದರೆ…

ಅದು ನೂರಾರು ಕೋಟಿ ಸುರಿದು ನಿರ್ಮಾಣ ಮಾಡಿರುವ ಚಿತ್ರ. ಅದರ ನಿರ್ದೇಶಕನಿಂದ ಹಿಡಿದು ನಟ ನಟಿಯರೂ ಕೂಡ ಪ್ರಖ್ಯಾತರೇ. ಚಿತ್ರದ ಪೋಸ್ಟರ್, ಟ್ರೈಲರ್ ಎಲ್ಲವೂ ಭಾರೀ ಸದ್ದು ಮಾಡುತ್ತಾ ತೆರೆಗೆ ಬರುತ್ತಿದೆ. ಟ್ರೈಲರನ್ನು ವೀಕ್ಷಿಸಿದವರ ಸಂಖ್ಯೆ, ಬೃಹತ್ ಪೋಸ್ಟರಿನಿಂದಾಗಿ ದಾಖಲೆ ನಿರ್ಮಿಸಿರುವ ಚಿತ್ರ, ಬಿಡುಗಡೆಯ ಬಳಿಕ ಬಾಕ್ಸ್ ಆಫೀಸ್ ಲೆಕ್ಕದಲ್ಲಿಯೂ ಭಾರೀ ದಾಖಲೆಯನ್ನು ಮಾಡುವ ನಿರೀಕ್ಷೆ ಹೊಂದಿದೆ. ಭಾರತೀಯ ಚಿತ್ರವೊಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಪರಿ ಸದ್ದು ಮಾಡುತ್ತಿದೆಯೆಂದರೆ ಅದು ಸಂತೋಷದ ವಿಷಯವೇ. ಆದರೆ ಈ ಚಿತ್ರದಿಂದಾಗಿ ಇತರ ಭಾಷೆಯ ಚಿತ್ರಗಳ ಸದ್ದಡಗಿ ಹೋಗುತ್ತಿದೆಯೆಂಬುದು ಬೇಸರದ ವಿಷಯವೂ ಆಗಿದೆ. ಹೌದು… ಬಾಹುಬಲಿಗೆ ಕನ್ನಡದ ಹಲವು ಉತ್ತಮ ಚಿತ್ರಗಳೂ ಸೇರಿ ಇತರ ಭಾಷೆಗಳ ಚಿತ್ರಗಳೂ ಬಲಿಯಾಗುತ್ತಿವೆ.

ಬಾಹುಬಲಿಗೆ ನನ್ನದೇನೂ ಆಕ್ಷೇಪವಿಲ್ಲ, ಆ ಚಿತ್ರತಂಡದವರದ್ದೂ ತಪ್ಪಿಲ್ಲ. ಆದರೆ ಇದರಲ್ಲಿ ಮುಖ್ಯವಾಗಿ ನಮ್ಮ ಜವಾಬ್ದಾರಿಕೆಯಿದೆ. ಕನ್ನಡದಲ್ಲಿ ಒಳ್ಳೆಯ ಚಿತ್ರಗಳು ಬರುವುದೇ ಇಲ್ಲ ಎಂದು ಸದಾ ದೂರುತ್ತೇವೆ, ಇವರು ಮಾಡಿದರೆ ತೆಲುಗಿನಿಂದಲೋ ತಮಿಳಿನಿಂದಲೋ ರಿಮೇಕ್ ಮಾತ್ರ ಮಾಡಿಯಾರಷ್ಟೇ ಎಂದು ಮುಖ ಸಿಂಡರಿಸುತ್ತೇವೆ. ಆದರೆ ನಮ್ಮವರೇ ಸ್ವಮೇಕ್ ಚಿತ್ರ ಮಾಡಿದಾಗ ನಾವೆಷ್ಟು ಬೆಂಬಲಿಸುತ್ತೇವೆ ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕಾಗಿದೆ. ಯಾವೆಲ್ಲಾ ಚಿತ್ರಗಳನ್ನು ಥಿಯೇಟರಿನಲ್ಲಿ ನೋಡುತ್ತೇವೆ ಎಂದು ಯೋಚಿಸಬೇಕಿದೆ. ಲೂಸಿಯಾ, ಉಳಿದವರು ಕಂಡಂತೆ, ಉಗ್ರಂ ಮತ್ತು ಇತ್ತೀಚೆಗಿನ ರಂಗಿತರಂಗ ಇವುಗಳು ಕನ್ನಡದಲ್ಲಿ ಹೆಚ್ಚು ಸದ್ದು ಮಾಡಿದ ಸ್ವಮೇಕ್ ಚಿತ್ರಗಳು. ಸಿನೆಮಾವೆಂದರೆ ಒಂದು ಲವ್ ಸ್ಟೋರಿ, ಒಂದು ರೊಮ್ಯಾನ್ಸ್, ಒಂದು ಟಪ್ಪಾಂಗುಚ್ಚಿ ಐಟಂ ಹಾಡು ಮತ್ತು ಲಾಂಗು ಮಚ್ಚುಗಳ ಕಾದಾಟ ಮಾತ್ರ ಅಲ್ಲ ಅಂತ ತೋರಿಸಿಕೊಟ್ಟದ್ದೇ ಈ ಮೇಲಿನ ಚಿತ್ರಗಳು. ಇವೆಲ್ಲದರಲ್ಲೂ ಸ್ವಂತದ್ದೇ ಆದ ಕಥೆಗಳಿವೆ, ನಿರ್ದೇಶಕರುಗಳ ಕ್ರಿಯೇಟಿವಿಟಿ ಇದೆ. ಈ ಎಲ್ಲಾ ಚಿತ್ರಗಳು ಕನ್ನಡ ಚಿತ್ರರಂಗಕ್ಕೆ ಹೊಸತನವನ್ನು ತೋರಿಸಿಕೊಟ್ಟರೂ ಬಾಕ್ಸ್ ಆಫೀಸ್ ವಿಚಾರದಲ್ಲಿ ಭಾರೀ ಸಾಧನೆಯನ್ನೇನೂ ಮಾಡಲಿಲ್ಲ. ಆ ನಿರ್ದೇಶಕರು ಇನ್ನೊಂದು  ಚಿತ್ರ ಮಾಡುವಂತೆ ಉತ್ಸಾಹ ನೀಡಿದರೂ ಅದಕ್ಕೆ ಬೇಕಾದ ವಿಟಮಿನ್ ಎಮ್ ಕೊಡಲಿಲ್ಲ. ನಮ್ಮ ಪ್ರಶಂಸೆಗೊಳಗಾದರೂ ನಾವು ಆ ನಿರ್ಮಾಪಕರ, ನಿರ್ದೇಶಕರ ಕೈ ಹಿಡಿಯಲಿಲ್ಲ. ( ಅವರುಗಳು ತಮ್ಮ ಸ್ವಂತ ಸಾಮರ್ಥ್ಯದ ಮೇಲೆ ಮತ್ತೆ ಎದ್ದು ನಿಂತಿದ್ದಾರೆ, ಅದು ಬೇರೆ ವಿಷಯ)

ಉದಾಹರಣೆಗೆ ನಮ್ಮ ರಂಗಿತರಂಗವನ್ನೇ ನೋಡಿ. ಎರಡು ನಿಮಿಷದ ಟ್ರೈಲರನಲ್ಲಿಯೇ ನಮ್ಮೆಲ್ಲರ ಗಮನ ಸೆಳೆದ ಚಿತ್ರವಿದು. ಅದ್ಭುತವಾದಂತಹ ಛಾಯಾಗ್ರಹಣ, ಸ್ವಲ್ಪ ವಿಭಿನ್ನವಾಗಿ ತೋರುವ ಸಂಭಾಷಣೆ, ಕುತೂಹಲ ಕೆರಳಿಸುವ ಕಥೆ ಎಲ್ಲವೂ ಟ್ರೈಲರಿನಲ್ಲಿಯೇ ಪ್ರತಿಫಲನಗೊಂಡಿತ್ತು.  ಈ ಚಿತ್ರತಂಡವೇನೋ ಹೊಸತನ್ನು ಕನ್ನಡ ಚಿತ್ರರಂಗಕ್ಕೆ ನೀಡುತ್ತೆ ಎನ್ನುವ ಭರವಸೆ ಆಗಲೇ ಮೂಡಿಸಿತ್ತು. ಚಿತ್ರತಂಡದಲ್ಲಿ ಮುಕ್ಕಾಲು ಭಾಗ ಜನ ಹೊಸಬರೇ ಆಗಿದ್ದುದರಿಂದ ನಮ್ಮ ನಿರೀಕ್ಷೆಯೇನೂ ಅಷ್ಟಾಗಿರಲಿಲ್ಲವಾದರೂ ಟ್ರೈಲರಿನಲ್ಲಿ ಕಂಡ ಆ ಅದ್ಭುತ ಪ್ರೆಸೆಂಟೇಷನ್ ಕುತೂಹಲ ಕೆರಳಿಸಿತ್ತು. ಕಳೆದ ವಾರ ತೆರೆಗೆ ಬಂದ ರಂಗಿತರಂಗ ಟ್ರೈಲರಿನಲ್ಲಿ ಮೂಡಿಸಿದ್ದ ನಿರೀಕ್ಷೆಯನ್ನು ಸುಳ್ಳುಮಾಡಲಿಲ್ಲ. ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆಯನ್ನೇ ಪಡೆಯಿತು. ಎಲ್ಲೋ ಒಂದೆರಡು ಕಡೆಯಲ್ಲಿ ಬೋರಾಗಿದೆ ಎನ್ನುವ ಪ್ರತಿಕ್ರಿಯೆ ಬಿಟ್ಟರೆ ಛಾಯಾಗ್ರಹಣ, ಅಭಿನಯ ಮತ್ತು ಕಥೆಯನ್ನು ಬಹಳ ಜಾಣ್ಮೆಯಿಂದ ತೆರೆಗೆ ತಂದಿರುವ ನಿರ್ದೇಶಕನ ತಲೆಗೆ ಎಲ್ಲರೂ ಸಲಾಂ ಹೊಡೆದರು. ಅದರೆ ಸಲಾಂ ಹೊಡೆದರೇನು ಬಂತು? ತೆರೆಗೆ ಬಂದ ಒಂದೇ ವಾರದಲ್ಲಿ ತೆಲುಗಿನ ಬಾಹುಬಲಿ ಬಂದಿದ್ದುರರಿಂದ ಹಲವು ಥಿಯೇಟರುಗಳಲ್ಲಿ ರಂಗಿತರಂಗ ಖೋ ಪಡೆಯಿತು. ಅದೂ ಸಹ ಹಲವು ಥಿಯೇಟರುಗಳಲ್ಲಿ ‘ಹೌಸ್ ಫುಲ್’ ಬೋರ್ಡ್ ತಗುಲಿಸಿಕೊಂಡೇ ರಂಗಿತರಂಗ ಅಲ್ಲಿಂದ ಹೊರಬಿತ್ತು. ಅಲ್ಲಿಗೆ ಓಡುವ ಕುದುರೆ ರಂಗಿತರಂಗಕ್ಕೆ ಲಗಾಮು ಬಿತ್ತು.

 ಖಂಡಿತವಾಗಿಯೂ ಇದರಲ್ಲಿ ಬಾಹುಬಲಿಯದ್ದೇನೂ ತಪ್ಪಿಲ್ಲ. ಬಾಹುಬಲಿಯನ್ನು ನೋಡಬಾರದೆಂದೂ ಹೇಳುತ್ತಿಲ್ಲ, ಬೇರಾವುದೋ ಭಾಷೆಯ ಚಿತ್ರವನ್ನು ನೋಡುವ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆ. ಆದರೆ ನಮ್ಮವರು ಸಿನೆಮಾ ಮಾಡಿದಾಗ ಅದಕ್ಕೆ ವಿಶೇಷ ಆದ್ಯತೆ  ಸಿಗಲಿ ಎಂಬುದೇ ನನ್ನ ಆಶಯ.ನಿತ್ಯವೂ ಅನ್ನ ನೀಡುತ್ತಿರುವ ಕನ್ನಡ ಚಿತ್ರಗಳನ್ನು ತೆಗೆದು ಹಾಕಿ ವರ್ಷದಲ್ಲಿ ಒಮ್ಮೆ ಮೃಷ್ಟಾನ್ನ ನೀಡುವ ತೆಲುಗು ಚಿತ್ರಗಳಿಗೆ ಮಣೆಹಾಕುವ ನಮ್ಮ ಥಿಯೇಟರುಗಳ ಮಾಲಕರು ಒಮ್ಮೆ ಆಲೋಚಿಸಬೇಕು ತಾವು ಮಾಡುತ್ತಿರುವುದು ಸರಿಯೇ ಎಂದು. ಅವರುಗಳು ಮಾತ್ರವಲ್ಲ, ತೆಲುಗು ಅಥವಾ ಬೇರೆ ಭಾಷೆಗಳ ಚಿತ್ರಗಳು ಬಂದಾಗ ಮುಂಗಡ ಟಿಕೆಟು ಕಾಯ್ದಿರಿಸಿ ಮುಗಿಬಿದ್ದು ನೋಡುವ ನಾವುಗಳೂ ಸಹ ಯೋಚಿಸಬೇಕಾಗಿದೆ.

ರಂಗಿತರಂಗದಂತಹ ಚಿತ್ರಗಳಲ್ಲಿ ಕ್ರಿಯೇಟಿವಿಟಿಯಿದೆ. ಸಮಾಜಕ್ಕೆ ತನ್ನ ಕಲ್ಪನೆಗಳನ್ನು ಹೊಸದಾಗಿ ತೋರಿಸಬೇಕೆಂಬ ನಿರ್ದೇಶಕನ ಹಂಬಲವಿದೆ. ಒಳ್ಳೆಯ ಚಿತ್ರ ನಿರ್ಮಾಣದಲ್ಲಿ ಚಿತ್ರ ತಂಡದ ಪ್ರತಿಯೊಬ್ಬರ ಪರಿಪೂರ್ಣ ಪರಿಶ್ರಮವಿದೆ. ಬಾಹುಬಲಿಯಂತಹ ಚಿತ್ರಗಳಿಗೆ ನಿರ್ಮಾಪಕರುಗಳ ಹೆದರಿಕೆಯಿಲ್ಲ, ರಾಜಮೌಳಿ ಚಿತ್ರ ಮಾಡುತ್ತಾರೆಂದರೆ ನಿರ್ಮಾಪಕರು ಮುಗಿಬಿದ್ದು ಕ್ಯೂ ನಿಲ್ಲುತ್ತಾರೆ. ಥಿಯೇಟರುಗಳ ಮಾಲಕರೂ ಸಹ ಅಂತವರಿಗೆ ಬೇಗ ಮಣೆ ಹಾಕುತ್ತಾರೆ. ದೇಶ ವಿದೇಶಗಳಿಂದ ಚಿತ್ರಕ್ಕೆ ಬೇಡಿಕೆ ಬರುತ್ತದೆ.ಯಾಕೆಂದರೆ ರಾಜಮೌಳಿ ಈಗಾಗಲೆ ಸ್ಟಾರ್ ಗಿರಿಯನ್ನು ಪಡೆದುಕೊಂಡಿದ್ದಾರೆ. ನಮ್ಮವರು ಆ ಥರಾ ಅಲ್ಲ. ಮೊದಲ ಚಿತ್ರವನ್ನು ಈ ಮಟ್ಟಕ್ಕೆ ಕೊಂಡೊಯ್ಯುವಷ್ಟರಲ್ಲಿ ಪ್ರಸವ ವೇದನೆಯನ್ನೇ ಅನುಭವಿಸಿರುತ್ತಾರೆ.  ಒಂದು ಚಿತ್ರ ಯಶಸ್ವಿಯಾದರೂ ಸಹ ಮುಂದಿನ ಚಿತ್ರಕ್ಕೆ ಇನ್ಯಾರೋ ನಿರ್ಮಾಪಕನ ಮನೆ ಕದ ತಟ್ಟಬೇಕಾದ ಸ್ಥಿತಿ ಇವರದ್ದು.  ಅವರಲ್ಲಿ ಪ್ರತಿಭೆಯಿಲ್ಲ, ನಿರ್ಮಾಪಕನ ಹಣ ಹಿಂದಿರುಗಿಸುವ ಸಾಮರ್ಥ್ಯವಿಲ್ಲ ಎಂದರ್ಥವಲ್ಲ., ಹೊಡೆಬಡಿಯ ಕಮರ್ಷಿಯಲ್ ಸಿನೆಮಾಗಳನ್ನು ಬಿಟ್ಟು ಟಿಪಿಕಲ್ ಸಿನೆಮಾ ಮಾಡುವ  ಅವರಿಗೆ ಥಿಯೇಟರುಗಳ ಕೊರತೆಯಿದೆ. ಅವರ ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆಯ ಅಗತ್ಯತೆಯಿದೆ. ಅದಕ್ಕೆ ನಮ್ಮೆಲ್ಲರ ಬೆಂಬಲವೂ ಬೇಕು. ಇಲ್ಲದಿದ್ದರೆ ಅದೆಷ್ಟೋ ಜನರ ಪ್ರತಿಭೆಗೆ ಅವಮಾನ ಮಾಡಿದಂತೆ, ಅವರ ಕನಸುಗಳನ್ನು ನುಚ್ಚುನೂರು ಮಾಡಿದಂತೆ. ಇದರಿಂದ ಅದೆಷ್ಟೋ ಪ್ರತಿಭಾವಂತ ನಿರ್ದೇಶಕರುಗಳ, ನಟ ನಟಿಯರ ವೃತ್ತಿ ಬದುಕು ಹಸುಳೆಯಾಗಿರುವಾಗಲೇ ಚಿವುಟಿ ಹೋಗುತ್ತದೆ. ಇನ್ನಾದರೂ ನಾವು ಕನ್ನಡ ಚಿತ್ರಗಳನ್ನು ಬೆಂಬಲಿಸದಿದ್ದರೆ ಮುಂದೆ ಕನ್ನಡದವರು ಒಳ್ಳೆಯ ಚಿತ್ರಗಳನ್ನು ಮಾಡುವುದಿಲ್ಲ ಎಂದು ಬೈಯಲು ಯೋಗ್ಯತೆಯನ್ನು ಕಳೆದುಕೊಳ್ಳುತ್ತೇವೆ ಅಷ್ಟೇ!

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!