ಸಿನಿಮಾ - ಕ್ರೀಡೆ

ಹೇ ಬಡ್ಡಿ .. ಖೇಲ್ ಕಬಡ್ಡಿ..!

ಲಿಯಾಂಡರ್ ಪೇಸ್ ನಲುವತ್ತೆರಡರ ಹರೆಯದಲ್ಲೂ ವಿಂಬಲ್ಡನ್ ಚಾಂಪಿಯನ್ ಆಗಿ ನಮ್ಮೆಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದಾರೆ. ಸಾನಿಯಾ ಮಿರ್ಜಾ ವಿಂಬಲ್ಡನ್ ಜಯಿಸುವ ಮೂಲಕ, ವಿಂಬಲ್ಡನ್ ಜಯಿಸಿದ ಮೊದಲ ಭಾರತೀಯ ಮಹಿಳೆ ಎಂಬ ಇತಿಹಾಸ ನಿರ್ಮಿಸಿದ್ದಾರೆ. ಅಷ್ಟೂ ಸಾಲದೆಂಬಂತೆ ಸುಮಿತ್ ನಾಗಾಲ್ ಎಂಬ ಹದಿನೇಳರ ಹುಡುಗನೂ ಬಾಲಕರ ವಿಭಾಗದಲ್ಲಿ ವಿಂಬಲ್ಡನ್ ಜಯಿಸಿದ್ದಾನೆ. ಬರೆಯುವುದಾದರೆ ಒಂದೇ ವಾರದಲ್ಲಿ ಘಟಿಸಿದ  ಈ ಮೂರು ಜೈತ್ರಯಾತ್ರೆಯ ಕುರಿತು ಬರೆಯಬಹುದಿತ್ತು. ಮತ್ತೊಂದು ಕಡೆ ಐಪಿಎಲ್ ಕರ್ಮಕಾಂಡದ ತೀರ್ಪು ಹೊರಬಿದ್ದು ರಾಜಸ್ತಾನ್ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಎರಡು ವರ್ಷಗಳ ನಿಷೇಧಕ್ಕೊಳಗಾಯ್ತು. ಕ್ರಿಕೆಟ್ ಮಾಯಾಲೋಕದಲ್ಲಿ ಸಂಚಲನವುಂಟು ಮಾಡಿದ ಈ ತೀರ್ಪಿನ ಕುರಿತಾಗಿಯೂ ಬರೆಯಬಹುದಿತ್ತು.  ಉಹೂಂ, ನನ್ನ ಮನಸ್ಸು ಬೇರೆಯೇ ಕಡೆ ಮನಸ್ಸು ಮಾಡಿತ್ತು. ಅದೇನಂತೀರಾ?

ನಾವೆಲ್ಲರೂ ಕಾತರದಿಂದ ಕಾಯುತ್ತಿರುವ ಸ್ಟಾರ್ ಪ್ರೋ ಕಬಡ್ಡಿ ಲೀಗ್!

1349247_DIVAL

ನಿಜ ಹೇಳಬೇಕಾದ್ರೆ ಕ್ರಿಕೆಟ್ಟೇ ನಮಗೆ ಸರ್ವಸ್ವ. ಕ್ರಿಕೆಟ್ ಆಟಗಾರರೇ ದೇವರು ಎಂಬಂತಿರುವ ನಮ್ಮೀ ಕ್ರಿಕೆಟ್ ಹುಚ್ಚು ಉಳಿದ ಆಟಗಳ ಪ್ರಾಮುಖ್ಯತೆಯನ್ನು ಸ್ವಲ್ಪ ಮಂಕಾಗಿಸಿದ್ದು ಸುಳ್ಳಲ್ಲ. ಕ್ರಿಕೆಟ್ ಆಟ ಮತ್ತು  ವಿಶ್ವಕಪ್ಪು, ಏಶ್ಯಾಕಪ್ಪು, ಚಾಂಪಿಯನ್ಸ್ ಟ್ರೋಫಿ, ಟಿ೨೦ ವಿಶ್ವಕಪ್ಪು ಹೀಗೆ ಬಿಎ.ಎಮ್.ಟಿ.ಸಿ ಬಸ್ ಥರಾ ಒಂದರ ಹಿಂದೆ  ಮತ್ತೊಂದು ಬರುವ ಟೂರ್ನಮೆಂಟುಗಳು. ಸಾಲದ್ದಕ್ಕೆ ಈ  ಐಪಿಎಲ್ ಅದರ ನಂತರ ಚಾಂಪಿಯನ್ಸ್ ಲೀಗ್. ಒಟ್ಟಿನಲ್ಲಿ ಭಾರತೀಯ ಋತುಮಾನವಿಡೀ ಕ್ರಿಕೆಟಿಗೇ ಮೀಸಲು.  ಅಲ್ಲಿಗೆ ಉಳಿದ ಆಟಗಳಿಗೆ ಸರಿಯಾದ ಪ್ರೋತ್ಸಾಹ ಸಿಗದೆ ಅವುಗಳು ಮೂಲೆಗುಂಪಾಗುತ್ತಿದ್ದವು. ಬೇರೆ ಆಟಗಳ ನೇರ ಪ್ರಸಾರ ಮಾಡಲು ಚಾನೆಲುಗಳೂ ಇಲ್ಲ, ಅವುಗಳಿದ್ದರೆ ಜಾಹೀರಾತುದಾರರಿಲ್ಲ. ಒಟ್ಟಿನಲ್ಲಿ ಬೇರೆ ಆಟಗಳ ಆಟಗಾರರ ವೈಯಕ್ತಿಕ ಹಾಗು ಕ್ರೀಡಾ ಬದುಕು ಎರಡೂ ಮೂರಾಬಟ್ಟೆ. ಆದರೆ ಕಳೆದ ವರ್ಷ ಶುರುವಾಯ್ತು ನೋಡಿ ಸ್ಟಾರ್ ಪ್ರೋ ಕಬಡ್ಡಿ ಲೀಗ್, ದೇಶಾದ್ಯಂತ ಇರುವ  ನಮ್ಮ ಕಬಡ್ಡಿ ಆಟಗಾರರ ಸ್ಟಾರನ್ನೇ ಬದಲಾಯಿಸಿ ಬಿಟ್ಟಿತು. ನಮ್ಮ ಕ್ರಿಕೆಟ್ ವ್ಯಾಮೋಹದ ನಡುವೆಯೂ  ಪ್ರಚಂಡ ಸದ್ದು ಮಾಡಿತು.

ಪ್ರೋ ಕಬಡ್ಡಿ… ಸ್ಟಾರ್ ಸ್ಪೋರ್ಟ್ಸ್ ನೇತೃತ್ವದಲ್ಲಿ ಹಲವು ಪ್ರಾಂಚೈಸಿಗಳ ಸಹಭಾಗಿತ್ವದಲ್ಲಿ ಆರಂಭವಾದ ಈ ಕಬಡ್ಡಿ ಲೀಗ್ ಮೊದಲ ಆವೃತ್ತಿಯಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ಪಡೆದಿದೆ. ಬೆಂಗಳೂರು ಬುಲ್ಸ್, ಯೂ ಮುಂಬಾ, ತೆಲುಗು ಟೈಟಾನ್ಸ್, ಜೈಪುರ್ ಪಿಂಕ್ ಪಾಂಥರ್ಸ್, ಬೆಂಗಾಲ್ ವಾರಿಯರ್ಸ್, ದಬಾಂಗ್ ಡೆಲ್ಲಿ, ಪುಣೇರಿ ಪಲ್ತಾನ್ಸ್, ಪಾಟ್ನಾ ಪೈರೇಟ್ಸ್  ಇತ್ಯಾದಿ ಎಂಟು ತಂಡಗಳುಳ್ಳ ಪ್ರೋ ಕಬಡ್ಡಿಯ ಮೊದಲ ಯಶಸ್ಸೇ ಹಲವು ವಿಶ್ವ ದರ್ಜೆಯ ಆಟಗಾರರನ್ನು ನಮಗೆ ಪರಿಚಯಿಸಿದ್ದು. ಪ್ರತಿಭೆಯಿದ್ದರೂ ಸರಿಯಾದ ಅವಕಾಶಗಳಿಲ್ಲದೆ ಎಲ್ಲೋ ತಮ್ಮಷ್ಟಕ್ಕೆ ತಮ್ಮ ಆಟವನ್ನು ಆಡುತ್ತಿದ್ದ ಹಲವರನ್ನು ಪ್ರೊ ಕಬಡ್ಡಿಯೊಳಗೆ ತಂದು ರಾತ್ರೋ ರಾತ್ರಿ ಅವರನ್ನು ಫೇಮಸ್ ಮಾಡಿದ ಕೀರ್ತಿ ಸ್ಟಾರ್ ಸ್ಪೋರ್ಟ್ಸ್ ಕಬಡ್ಡಿಗೆ ಸಲ್ಲುತ್ತದೆ. ಸಚಿನ್ ಸುವರ್ಣ, ರಿತೀಶ್ ದೇವಾಡಿಗ, ಸುಕೇಶ್ ಹೆಗ್ಡೆ ಮುಂತಾದವರು ತಮ್ಮ ಆಟದಿಂದ ನಮ್ಮ ಮನ ಗೆದ್ದಿರುವುದು ಅಲ್ಲದೆ ಸ್ಟಾರ್ ವಾಲ್ಯೂ ಪಡೆದುಕೊಂಡಿದ್ದಾರೆ.

ಮತ್ತೂ ಒಂದು ಅತಿ ವಿರಳ ಸಂಗತಿಯೆಂದರೆ ಸದಾ ಕ್ರಿಕೆಟ್ ಹಿಂದೆಯೇ ಬಿದ್ದಿರುತ್ತಿದ್ದ ಕೆಲವು ಸೆಲೆಬ್ರಿಟಿಗಳೂ ಕಬಡ್ಡಿ ತಂಡಗಳನ್ನು ಮುನ್ನಡೆಸುತ್ತಿರುವುದು. ಅಭಿಷೇಕ್ ಬಚ್ಚನ್, ಐಶ್ವರ್ಯ ರೈ, ಅಮೀರ್ ಖಾನ್, ಸುನಿಲ್ ಶೆಟ್ಟಿ ಮುಂತಾದವರು ಕೆಲವು ತಂಡಗಳ ಮಾಲಕತ್ವ ವಹಿಸಿ ಸ್ವತಃ ಕ್ರೀಡಾಂಗಣಕ್ಕೆ ತೆರಳಿ ತಮ್ಮ ತಮ್ಮ ತಂಡಗಳನ್ನು ಹುರಿದುಂಬಿಸುತ್ತಾ ಕಬಡ್ಡಿಯ ಬೆಳವಣಿಗೆಗೆ ತಮ್ಮದೇ ಆದ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ. ಸಚಿ ತೆಂಡುಲ್ಕರ್, ಅಮಿತಾಬ್ ಬಚ್ಚನ್ ಸಹ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.

ರೋಚಕತೆಯ ವಿಷಯದಲ್ಲಿ ಕಬಡ್ಡಿ ಯಾವ ಕ್ರಿಕೆಟ್ ಪಂದ್ಯಾಟಕ್ಕೂ ಕಡಿಮೆಯಿಲ್ಲ. ಅಂಕಣದಲ್ಲಿರುವ ಎಲ್ಲಾ ಆಟಗಾರರಿಗೂ ಸಮಾನ ಅವಕಾಶ ಕೊಡುವ ಕಬಡ್ಡಿ ಪ್ರತಿ ಕ್ಷಣ ಕ್ಷಣವೂ ರೋಚಕ ಆಟವೇ. ಮುಂಬೈಯ ಅನೂಪ್ ಕುಮಾರ್ ರೈಂಡಿಗ್ ಬಂದನೆಂದರೆ ಸಾಕು ನಮಗೆ ನಡುಕವುಂಟಾಗುತ್ತದೆ. ಬೆಂಗಳೂರಿನ ಅಜಯ್ ಠಾಕೂರ್ ರೈಡ್ ಹೋಗಿ ಉಸಿರುಕಟ್ಟಿಕೊಂಡು ಕಬಡ್ಡಿ ಕಬಡ್ಡಿ ಎನ್ನುತ್ತಾ ಗೆರೆ ಮುಟ್ಟುವುದರೊಳಗೆ ನಮ್ಮ ಉಸಿರು ನಿಂತು ಹೋಗಿರುತ್ತದೆ. ಮತ್ತೆ ಬೆಂಗಳೂರು ಬುಲ್ ಮಂಜೀತ್ ಚೆಲ್ಲರ್ ಕ್ಯಾಚ್ ಹಿಡಿಯುವ ಶೈಲಿ ನಮ್ಮ ಎದೆ ಝಲ್ಲೆನಿಸುತ್ತದೆ. ಎದುರಾಳಿ ರೈಡರನ್ನು ಒಂದಿಡೀ ತಂಡದವರು ಸೇರಿ ಎತ್ತಿ ಬಿಸಾಡುವಾಗ ಮತ್ತೆ ಕೆಲವೊಮ್ಮೆ ರೈಡರ್ ಹಾರಿ ತಪ್ಪಿಸಿಕೊಳ್ಳುವಾಗ ‘ವಾಹ್’ ಎನಿಸುತ್ತದೆ. ಒಟ್ಟಿನಲ್ಲಿ ಕ್ಷಣ ಕ್ಷಣವೂ ನಮ್ಮಲ್ಲಿ ರೋಚಕತೆ ಕೆರಳಿಸುವ ಈ ಸ್ಟಾರ್ ಪ್ರೋ ಕಬಡ್ಡಿ ಲೀಗ್ ಒಂದು ಸಖತ್ ಎಂಟರ್ ಟೈನಿಂಗ್ ಪ್ಯಾಕೇಜ್ ಎಂದರೆ ತಪ್ಪಾಗಲಾರದು.

ನಿಜ.. ಈ ಕಬಡ್ಡಿ ಲೀಗ್ ‘ಇಂಡಿಯನ್ ಪ್ರೀಮಿಯರ್ ಲೀಗ್’ನಷ್ಟು ಫೇಮಸ್ಸ್ ಆಗಿಲ್ಲ. ಬಹುಶಃ ಕ್ರಿಕೆಟನ್ನೇ ಮೂರು ಹೊತ್ತು ಆರಾಧಿಸುವ ನಮ್ಮ ದೇಶದಲ್ಲಿ ಕಬಡ್ಡಿ ಕ್ರಿಕೆಟ್ಟನ್ನು ಮೀರಲು ಸಾಧ್ಯವೂ ಇಲ್ಲ.  ವಾಸ್ತವ ಸ್ಥಿತಿ ಹೀಗಿರುವಾಗ ಸ್ಟಾರ್ ಪ್ರೊ ಕಬಡ್ಡಿ ಬೆಳೆದು ನಿಂತ ರೀತಿ ನಿಜಕ್ಕೂ ಅದ್ಭುತ. ನೀವೇನು ಹೇಳ್ತೀರಿ, ಕ್ರಿಕೆಟ್ ಗೆ ಐಪಿಎಲ್ ನಂತೆ, ಫುಟ್ಬಾಲ್ ಗೆ ಐ.ಎಸ್.ಎಲ್ ಮತ್ತು ಬ್ಯಾಡ್ಮಿಂಟನ್ ಗೆ ಐಬಿಎಲ್ ಕೂಡಾ ನಮ್ಮಲ ದೇಶದಲ್ಲಿ ನಡೆಯುತ್ತದೆ. ಅವೆಲ್ಲಾ ಭರ್ಜರಿ ಆರಂಭವನ್ನು ಪಡೆದರೂ ಯಶಸ್ಸಿನ ಅಂತ್ಯ ಕಾಣಲಿಲ್ಲ. ಕ್ರೀಡಾಂಗಣವೇ ತುಂಬಲಿಲ್ಲ. ಟಿವಿಯಲ್ಲಿ ನೋಡುವವರ ಸಂಖ್ಯೆಯೂ ಅಷ್ಟಾಗಿ ಇರಲಿಲ್ಲ. ಹೋಗಲಿ ಪ್ರೋ ಕಬಡ್ಡಿ ನಮ್ಮಲ್ಲಿ ಹುಟ್ಟಿಸಿದಷ್ಟು ಕ್ರೇಜನ್ನೂ ಹುಟ್ಟಿಸಲಿಲ್ಲ. ಆ ದೃಷ್ಟಿಯಿಂದ ನೋಡುವಾಗ ಕಬಡ್ಡಿ ಲೀಗಿನದ್ದು ಭರ್ಜರಿ ಯಶಸ್ಸೇ ಸರಿ.

ಕಬಡ್ಡಿ ನಿಜವಾಗಿಯೂ ಅಪ್ಪಟ ನಮ್ಮದೇ ಆಟ. ಕಬಡ್ಡಿಯಲ್ಲಿ ವಿಶ್ವಕಪ್ ಶುರುವಾದಾಗಿನಿಂದಲೂ ನಾವೇ ಚಾಂಪಿಯನ್ ಪಟ್ಟ ಗಳಿಸಿಕೊಂಡಿದ್ದೇವೆ. ಏಷ್ಯಾ ಕಪ್ ಅಲ್ಲಿಯೂ ನಮ್ಮದೇ ಸಾರ್ವಭೌಮತ್ವ ಸಾಧಿಸಿದ್ದೇವೆ. ಪುರುಷರ ವಿಭಾಗದಲ್ಲಿ ಮಾತ್ರವಲ್ಲ, ಮಹಿಳೆಯರ ವಿಭಾಗದಲ್ಲಿಯೂ ನಾವೇ ಸತತ ಚಾಂಪಿಯನ್ ಆಗಿದ್ದೇವೆ. ಇದು ನಮಗೆಲ್ಲ ಹೆಮ್ಮೆಯ ವಿಚಾರವಾದರೂ ಕಬಡ್ಡಿಗೆ ಅದರ ಯೋಗ್ಯತೆಗೆ ತಕ್ಕ ಪುರಸ್ಕಾರ ಸಿಗುತ್ತಿಲ್ಲವೆನ್ನುವುದು ವಿಷಾದಕರ ಸಂಗತಿಯೂ ಆಗಿದೆ. ಆ ನಿಟ್ಟಿನಲ್ಲಿ ಸ್ಟಾರ್ ಸ್ಪೋರ್ಟ್ಸ್ ಆಯೋಜಿಸುತ್ತಿರುವ ‘ಸ್ಟಾರ್ ಪ್ರೋ ಕಬಡ್ಡಿ’ ನಿಜಕ್ಕೂ ಪ್ರಶಂಸನೀಯವಾಗಿದೆ. ಐಪಿಎಲ್ ಅಲ್ಲಿ ನಡೆದಂತೆ ಯಾವುದೇ ಫಿಕ್ಸಿಂಗ್ ಹಗರಣಗಳಿಗೆ ಎಡೆ ನೀಡದೆ ಉತ್ಕೃಷ್ಟ  ಕಬಡ್ಡಿ ಆಟಕ್ಕೆ ಆದ್ಯತೆ ನೀಡುವುದು, ಆ ಮೂಲಕ ಎಲ್ಲಾ ಯುವ ಸಮೂಹಕ್ಕೆ ಕಬಡ್ಡಿಯ ಸ್ಪೂರ್ತಿ ನೀಡುವುದು ಆಯೋಜಕರ ಮತ್ತು ಎಲ್ಲಾ ಆಟಗಾರರ ಧ್ಯೇಯವಾಗಲಿ ಎನ್ನುವುದು ನನ್ನ ಹಾರೈಕೆ..

ಅಂದಹಾಗೆ ಹದಿನೆಂಟಕ್ಕೆ ಈ ವರ್ಷದ ಸ್ಟಾರ್ ಪ್ರೋ ಕಬಡ್ಡಿ ಶುರುವಾಗ್ತಾ ಇದೆ. ಮಳೆಗಾಲದ ಈ ಸುಸಂದರ್ಭದಲ್ಲಿ ಕರು-ಕುರು ತಿಂಡಿ ಮೆಲ್ಲುತ್ತಾ ಸ್ಟಾರ್ ಸ್ಪೋರ್ಟ್ಸಿನಲ್ಲಿ ಕಬಡ್ಡಿ ನೋಡುವ ಭಾಗ್ಯ ನಮ್ಮೆಲರದ್ದಾಗಲಿ. ಉತ್ಸಾಹದಿಂದ ಕಬಡ್ಡಿ ಆಡಲು ಹೊರಟಿರುವ ನಮ್ಮೆಲ್ಲಾ ನೆಚ್ಚಿನ ಆಟಗಾರರಿಗೆ ನಾವೂ ಹೇಳೋಣ- ಹೇ ಬಡ್ಡಿ ಖೇಲ್ ಕಬಡ್ಡಿ..!

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!