ಸಿನಿಮಾ - ಕ್ರೀಡೆ

Movie review: ರಂಗಿತರಂಗ-ರಂಗು ರಂಗಿನ ರಹಸ್ಯಗಳ ಅನಾವರಣ

Critic Ratings(3.5 out of 5)-  [yasr_overall_rating size=”large”]

ಕನ್ನಡ ಚಿತ್ರರಂಗದಲ್ಲಿ ಪ್ರತಿದಿನವೂ ಹೊಸ ಹೊಸ ನಿರ್ದೇಶಕರು ಹತ್ತು ಹಲವು ಕಥೆಗಳೊಂದಿಗೆ ನೂರಾರು ಕನಸು ಹೊತ್ತು ಇಂಡಸ್ಟ್ರಿಗೆ ಬರುತ್ತಲೇ ಇರುತ್ತಾರೆ.ತಮ್ಮ ಚೊಚ್ಚಲ ಸಿನಿಮಾವನ್ನು ಹೊಸ ಪ್ರಯೋಗದೊಂದಿಗೆ ಮಾಡಬೇಕು,ಮೊದಲ ಯತ್ನದಲ್ಲೇ ಯಶಸ್ವಿಯಾಗಬೇಕೆಂಬ ತುಡಿತ ಅವರಲ್ಲಿರುತ್ತದೆ. ಆದರೆ ಹಾಗೆ ಮೊದಲ ಸಿನಿಮಾದಲ್ಲೇ,ಚಿತ್ರರಂಗಕ್ಕೆ ಅಂಬೆಗಾಲಿಡುವ ಹೊತ್ತಲ್ಲೇ ಹೊಸ ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗುವವರು ಕೆಲವೇ ಮಂದಿ ಮಾತ್ರ.ಈಗ ‘ರಂಗಿತರಂಗ’ ಎಂಬ Horror cum Thriller ಸಿನಿಮಾದ ಮೂಲಕ ಹೊಸ ನಿರ್ದೇಶಕ ಅನೂಪ್ ಭಂಡಾರಿ ಗೆಲುವಿನ ಹೊಸ್ತಿಲಲ್ಲಿದ್ದಾರೆ.

ಕಥೆಗಾರ ಮತ್ತು Freelance writer ಗೌತಮ್(ನಿರೂಪ್ ಭಂಡಾರಿ) ಮತ್ತು ಆತನ ಗರ್ಭಿಣಿ ಪತ್ನಿ ಇಂದು(ರಾಧಿಕಾ ಚೇತನ್) ಊಟಿಯಲ್ಲಿ ವಾಸವಾಗಿರುತ್ತಾರೆ. ಗೌತಮ್ ‘ಅನುಷ್ಕು’ ಎಂಬ ಹೆಸರಲ್ಲಿ ಅನಾಮಧೇಯನಾಗಿ ಪ್ರಸಿದ್ಧ ಕಥೆ,ಕಾದಂಬರಿಗಳನ್ನೂ ಬರೆಯುತ್ತಿರುತ್ತಾನೆ.ಆತನ ಒಂದು ಕಾದಂಬರಿಯನ್ನು ಸಿನಿಮಾ ಮಾಡಬೇಕೆಂದು ಪತ್ರಕರ್ತೆ ಸಂಧ್ಯಾ(ಆವಂತಿಕಾ ಶೆಟ್ಟಿ) ಗೌತಮ್ ನನ್ನು ಹುಡುಕುತ್ತಿರುತ್ತಾಳೆ.ಅದೇ ಸಮಯದಲ್ಲಿ ದಕ್ಷಿಣ ಕನ್ನಡ-ಕೇರಳ ಗಡಿಯಲ್ಲಿರುವ ಕಮರೊಟ್ಟು ಎಂಬ ಗ್ರಾಮದಲ್ಲಿ ತನ್ನ ಪೂರ್ವಜರ ಮನೆಯಿದ್ದು ಅಲ್ಲಿಗೆ ತೆರಳಿ ಭೂತಾರಾಧನೆಯನ್ನು ಮಾಡಿಸಬೇಕೆಂದು ಇಂದು ಗಂಡನನ್ನು ಒಪ್ಪಿಸಿ ಕಮರೊಟ್ಟುವಿಗೆ ಕರೆದುಕೊಂಡು ಬರುತ್ತಾಳೆ. ಅಲ್ಲಿನ ಕಮರೊಟ್ಟು ಮನೆಗೆ ಬಂದ ನಂತರ ಅನೇಕ ನಿಗೂಢ ಘಟನೆಗಳಿಗೆ ಗೌತಮ್-ಇಂದು ದಂಪತಿ ಸಾಕ್ಷಿಯಾಗುತ್ತಾರೆ. ಕಮರೊಟ್ಟುವಿನಲ್ಲಿ ಗುಡ್ಡದ ಭೂತವಿದೆಯಂದೂ,ಅಲ್ಲಿ ಗೌತಮ್-ಇಂದು ವಾಸವಾಗಿರುವ ಮನೆಯಲ್ಲಿ ಅಂಗಾರ ಎಂಬವನ ಭೂತವಿದೆಯೆಂದೂ ಅಲ್ಲಿನ ಅನೇಕರು ಹೇಳುತ್ತಾರೆ.ಇಂದುವಿಗೆ ಪದೇಪದೇ ಆ ಮನೆಯಲ್ಲಿ ಯಾರೋ ಕಣ್ಣಿಗೆ ಕಾಣದೇ ನಡೆದಾಡಿದಂತೆ,ಗೆಜ್ಜೆ ಕಟ್ಟಿಕೊಂಡು ಯಕ್ಷಗಾನ ಕುಣಿದಂತೆ ಭಾಸವಾಗುತ್ತಿರುತ್ತದೆ. ಒಂದು ದಿನ ಇದ್ದಕ್ಕಿಂದ್ದಂತೆ ಇಂದು ಕಾಣೆಯಾಗುತ್ತಾಳೆ.

ಇಂದು ಕಾಣೆಯಾಗಿರುವ ಬಗ್ಗೆ ಗೌತಮ್ ಕಂಪ್ಲೇಂಟ್ ಕೊಡಲು ಹೋದಾಗ ಪೋಲೀಸರು ಅವನನ್ನೇ ಅನುಮಾನಿಸುತ್ತಾರೆ. ಏಕೆಂದರೆ ಇಂದು ಸತ್ತು ಹೋಗಿ ಆಗಲೇ ಆರು ವರ್ಷಗಳಾಗಿವೆ, ಈಗ ಗೌತಮ್ ಯಾವುದೋ ನಿಗೂಢ ಆಟವಾಡುತ್ತಿದ್ದಾನೆ ಎಂದು ಪೋಲೀಸರಿಗೆ ಅನುಮಾನ ಬರುತ್ತದೆ. ಆ ಹೊತ್ತಿಗೆ ಅನುಷ್ಕು ಕಾವ್ಯನಾಮದ ಗೌತಮ್ ನನ್ನು ಹುಡುಕಿಕೊಂಡು ಸಂಧ್ಯಾ ಕೂಡಾ ಕಮರೊಟ್ಟುವಿಗೆ ಬರುತ್ತಾಳೆ.ಕಾಣೆಯಾಗಿರುವ ಇಂದುವನ್ನು ಹುಡುಕಲು ಗೌತಮ್ ಗೆ ಸಹಾಯ ಮಾಡುತ್ತಾಳೆ. ಅವರು ವಿಚಾರಿಸಲಾಗಿ ಕಮರೊಟ್ಟುವಿನಲ್ಲಿ ಹಿಂದೆಯೂ ಅನೇಕ ಸಲ ತುಂಬು ಗರ್ಭಿಣಿಯರು ಕಾಣೆಯಾಗಿದ್ದಾರೆಂದೂ, ಕೊನೆಗೆ ಗುಡ್ಡದ ಮೇಲೆ ಅವರ ಚೀತ್ಕಾರ ಕೇಳಿಸುತ್ತಿತ್ತೆಂದೂ, ಇದೆಲ್ಲಕ್ಕೂ ಗುಡ್ಡದ ಭೂತವೇ ಕಾರಣವೆಂದು ಊರವರು ಹೇಳುವುದು ಅವರಿಗೆ ಗೊತ್ತಾಗುತ್ತದೆ. “ಇಲ್ಲಿ ಏನಾದ್ರೂ ವಿಚಿತ್ರ ಅಂತ ಕಂಡ್ರೆ ಅದರಿಂದ ನೀವು ದೂರಾನೇ ಇರಿ” ಎಂದು ಮೊದಲ ಸಲ ಸಿಕ್ಕಿದಾಗಲೇ ಹೇಳುವ ಪೋಸ್ಟ್ ಮಾಸ್ಟರ್ ಕಾಳಿಂಗ ಭಟ್ಟ(ಸಾಯಿ ಕುಮಾರ್), ಅಲ್ಲಿನ ಪೋಲೀಸ್ ಇಸ್ಪೆಕ್ಟರ್, ಕಮರೊಟ್ಟುವಿನಲ್ಲಿರುವ ಏಕಮಾತ್ರ ವೈದ್ಯ, ಅಕ್ರಮ ಮರಳು ದಂಧೆ ಮಾಡುವ ಮಹಾಬಲ ಹೆಗ್ಡೆ(ಶಂಕರ್ ಅಶ್ವಥ್) ಎಲ್ಲರೂ ಗೌತಮ್ ಗೆ ನಿಗೂಢವಾಗಿ ಕಾಣುತ್ತಾರೆ. ತನ್ನ ಪತ್ನಿ ಕಾಣೆಯಾಗಿರುವುದರಲ್ಲಿ ಇವರ ಕೈವಾಡ ಇದೆಯೇನೋ ಎಂದು ಅವನಿಗೆ ಅನುಮಾನ ಬರಲಾರಂಭಿಸುತ್ತದೆ. ಇದರ ರಹಸ್ಯವನ್ನು ಬೇಧಿಸಲು ಪ್ರಯತ್ನ ಪಡುತ್ತಿರುವಾಗಲೇ ತನ್ನ ಹೆಂಡತಿಯ ಡೈರಿ ಗೌತಮ್ ನಿಗೆ ಸಿಗುತ್ತದೆ. ಅದನ್ನು ಓದಿದವನಿಗೆ ಶಾಕ್. ಯಾರನ್ನು ತಾನು ಇಂದು ಅಂದುಕೊಂಡಿದ್ದೆನೋ ಅವಳು ಇಂದುವಲ್ಲ ಅವಳ ಹೆಸರು ಹರಿಣಿ ಮತ್ತು ಗೌತಮ್ ಎಂಬ ಹೆಸರಿನ ತಾನೂ ಸಹ ಆರು ವರ್ಷಗಳ ಹಿಂದೆಯೇ ಇಂದುವಿನ ಜೊತೆ ಕಾರು ಅಪಘಾತದಲ್ಲಿ ಸತ್ತು ಹೋಗಿದ್ದೇನೆ ಎಂದು ತಿಳಿಯುತ್ತದೆ. ಗೌತಮ್ ನಿಜವಾಗಿಯೂ ಯಾರು? ಆತನ ಹೆಂಡತಿ ಅಂದರೆ ಇಂದುವಾಗಿ ಬದಾಲಾದ ಹರಿಣಿ ನಿಗೂಢವಾಗಿ ಕಾಣೆಯಾದವಳು ಸಿಗುತ್ತಾಳಾ, ನಿಜವಾದ ಇಂದುವಿಗೆ ಆಗಿದ್ದಾದರೂ ಏನು?, ಸಂಧ್ಯಾ ಯಾರು, ಆಕೆ ಏಕೆ ಗೌತಮ್ ನನ್ನು ಹುಡುಕಿಕೊಂಡು ಬರುತ್ತಾಳೆ? ನಿಜವಾಗಿಯೂ ಅವಳಿಗೆ ಅನುಷ್ಕುವಿನ ಕಥೆಯನ್ನು ಸಿನಿಮಾ ಮಾಡುವ ಆಲೋಚನೆ ಇದೆಯೇ ಅಥವಾ ಬೇರಾವುದೋ ಉದ್ದೇಶ ಇಟ್ಟುಕೊಂಡು ಕಮರೊಟ್ಟುವಿಗೆ ಬಂದಿದ್ದಾಳಾ,ಅವಳಿಗೂ ಗೌತಮ್ ಗೂ ಇರುವ ಸಂಬಂಧವೇನು? ಅಲ್ಲಿ ಕಾಣೆಯಾಗಿ ಸಾವಿಗೀಡಾಗ ತುಂಬು ಗರ್ಭಿಣಿಯರನ್ನು ಕೊಂದಿದ್ದು ಗುಡ್ಡದ ಭೂತವೋ ಅಥವಾ ಮತ್ತೆ ಬೇರೆ ಯಾರೋ?ಕೊನೆಗೆ ಕಮರೊಟ್ಟು ಮನೆಯಿಂದ ಕಾಣೆಯಾಗಿದ್ದ ಇಂದು ಸಿಗುತ್ತಾಳಾ? ಈ ಎಲ್ಲ ರಹಸ್ಯಗಳಿಗೂ ನಿಮಗೆ ಉತ್ತರ ಬೇಕೆಂದರೆ ನೀವು ಸಿನಿಮಾ ನೋಡಬೇಕು.

ಪೋಸ್ಟ್ ಮಾಸ್ಟರ್ ,ಭಾಗವತರಾಗಿ ಸಾಯಿಕುಮಾರ್ ಅತ್ಯುತ್ತಮ ಅಭಿನಯ ನೀಡಿದ್ದಾರೆ. ಹಾಗೆ ನೋಡಿದರೆ ಅವರದ್ದೇ ಚಿತ್ರದಲ್ಲಿ ಪ್ರಮುಖ ಟ್ವಿಸ್ಟ್ ಗೆ ಕಾರಣವಾಗುವ ಪಾತ್ರ. ಈ ಹಿಂದೆ ಎಲ್ಲೂ ನಿರ್ವಹಿಸದ ಹೊಸ ರೀತಿಯ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಯಕ್ಷಗಾನದ ವೇಷದಲ್ಲಿ ಅವರು ಗಿರಕಿ ಹೊಡೆಯುವುದಂತೂ ಅದ್ಭುತ. ಮೊದಲ ಸಿನಿಮಾದಲ್ಲೇ ನಾಯಕ ನಿರೂಪ್ ಭಂಡಾರಿ ಪ್ರಬುದ್ಧ, ಪಾತ್ರಕ್ಕೆ ತಕ್ಕುದಾದ ಗಂಭೀರ ಅಭಿನಯ ನೀಡಿದ್ದಾರೆ. ಇಬ್ಬರು ನಾಯಕಿಯರಲ್ಲಿ ಮುದ್ದುಮೊಗದ ರಾಧಿಕಾ ಚೇತನ್ ಗೌತಮ್ ನ ಗರ್ಭಿಣಿ ಪತ್ನಿಯಾಗಿಯೂ, ದ್ವಿತೀಯಾರ್ಧದಲ್ಲಿ ಹರಿಣಿಯಾಗಿಯೂ ತಮಗೆ ವಹಿಸಿದ ಪಾತ್ರವನ್ನು ಸೊಗಸಾಗಿ ನಿರ್ವಹಿಸಿದ್ದಾರೆ. ಮತ್ತೊಬ್ಬ ನಾಯಕಿ ಆವಂತಿಕಾ ಶೆಟ್ಟಿ ನಟನೆಯಲ್ಲಿ ಇನ್ನಷ್ಟೇ ಪಳಗಬೇಕಿದೆ. ಅನಂತವೇಲು,ಶಂಕರ್ ಅಶ್ವಥ್ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಇಡೀ ಚಿತ್ರದಲ್ಲಿ ನಮ್ಮ ಮನಸೂರೆಗೊಳ್ಳುವುದು ದಕ್ಷಿಣ ಕನ್ನಡದ ಸೊಬಗನ್ನು ಸೊಗಸಾಗಿ ಸೆರೆ ಹಿಡಿದಿರುವ ಲ್ಯಾನ್ಸ್ ಕ್ಯಾಪ್ಲಾನ್ ಮತ್ತು ವಿಲಿಯಮ್ ಅವರ ಛಾಯಾಗ್ರಹಣ. ಅನೂಪ್ ಭಂಡಾರಿ ಸಾಹಿತ್ಯ ರಚಿಸಿ, ಸಂಗೀತ ನೀಡಿರುವ ಎಲ್ಲಾ ಹಾಡುಗಳೂ ಕಿವಿಗೆ ಇಂಪಾಗಿವೆ. ಅಜನೀಶ್ ಲೋಕನಾಥ್ ಅವರ ಹಿನ್ನಲೆ ಸಂಗೀತ ಪ್ರೇಕ್ಷಕರಿಗೆ ಹಾರರ್ ದೃಶ್ಯಗಳ ಜೊತೆಗೆ ಭಯಾನಕ ಧ್ವನಿ ನೀಡುವಲ್ಲಿಯೂ ಯಶಸ್ವಿಯಾಗಿದೆ. ಒಟ್ಟಾರೆಯಾಗಿ ರಂಗು ರಂಗಾದ ರಹಸ್ಯಗಳುಳ್ಳ ರಂಗಿತರಂಗವನ್ನು ಉತ್ತಮವಾಗಿ ಕಟ್ಟಿಕೊಡುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ.

ಸಿನಿಮಾದ ಒಂದೇ ನೆಗೆಟಿವ್ ಪಾಯಿಂಟ್ ಎಂದರೆ ಚಿತ್ರದ ಅವಧಿ. ಒಂದೆರಡು ಹಾಡುಗಳಿಗೆ ಮತ್ತು ನಾಯಕಿ ಭಯಬೀಳುವುದನ್ನು ಪದೇ ಪದೇ ತೋರಿಸುವ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ ಅವಧಿಯನ್ನು ಕಡಿತಗೊಳಿಸಬಹುದಿತ್ತು. ಮೊದಲಾರ್ಧ  ವೇಗವಾಗಿ ಸಾಗಿದರೂ ಇಂಟರ್ವಲ್ ಮುಗಿದ ನಂತರದ ಮುಕ್ಕಾಲು ಗಂಟೆ ಚಿತ್ರವನ್ನು ಎಳೆದಿದ್ದಾರೆ ಎಂದು ಪ್ರೇಕ್ಷಕರಿಗೆ ಅನ್ನಿಸದೇ ಇರದು. ಇದೊಂದನ್ನು ಹೊರತುಪಡಿಸಿದರೆ ಮೊದಲ ಯತ್ನದಲ್ಲೇ ವಿಭಿನ್ನ ಪ್ರಯೋಗದ ಚಿತ್ರವನ್ನು ಕೊಡುವಲ್ಲಿ ರಂಗಿತರಂಗ ಯಶಸ್ವಿಯಾಗಿದೆ.ಅವಧಿ ಜಾಸ್ತಿಯಿದೆ ಎಂದು ನೋಡದೇ ಇರಬೇಡಿ.ಉತ್ತಮ ಥ್ರಿಲ್ಲರ್ ಕಥೆಯುಳ್ಳ,ರಂಗು ರಂಗಾದ ರಹಸ್ಯಗಳನ್ನು ಅನಾವರಣಗೊಳಿಸುವ ರಂಗಿತರಂಗವನ್ನು ನೋಡಿ ಹೊಸ ಹುಡುಗರನ್ನು ಪ್ರೋತ್ಸಾಹಿಸಿ. ಕೊಟ್ಟ ಹಣಕ್ಕೆ,ನಿಮ್ಮ ಸಮಯಕ್ಕೆ ಏನೂ ಮೋಸವಿಲ್ಲ. ಒಳ್ಳೆಯ ಅನುಭವ ಕಟ್ಟಿಕೊಡುವಲ್ಲಿ ಸಿನಿಮಾ ಸಫಲವಾಗಿದೆ.

User Ratings- [yasr_visitor_votes size=”large”]

Facebook ಕಾಮೆಂಟ್ಸ್

ಲೇಖಕರ ಕುರಿತು

Lakshmisha J Hegade

ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಓದಿರುವ ವೈದ್ಯ.ಹೆಮ್ಮೆಯ ಕನ್ನಡಿಗ.ದೇಶದ ಶ್ರೀಸಾಮಾನ್ಯ ಪ್ರಜೆಗಳಲ್ಲೊಬ್ಬ.ಕನ್ನಡ ಬ್ಲಾಗರ್.ಇವಿಷ್ಟೇ ನನ್ನ ಪ್ರವರ.ಹೆಚ್ಚು ತಿಳಿಸುವ ಅಗತ್ಯವಿಲ್ಲ.ನನ್ನ ನಿಲುವು,ಸಿದ್ಧಾಂತ,ಮನಸ್ಥಿತಿಯನ್ನು ತಿಳಿಯಲು ಇಲ್ಲಿ ಪ್ರಕಟವಾಗಿರುವ ನನ್ನ ಬರಹಗಳನ್ನು ಓದಿ.ಏನಾದರೂ ಗೊತ್ತಾಗಬಹುದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!