“ನಾನು ಪ್ರಧಾನಿಯಾದಾಗ ನನ್ನ ತಾಯಿಯ ಭಾವ ಹೇಗಿತ್ತು ಎನ್ನುವ ಪ್ರಶ್ನೆಯನ್ನು ಬಹಳಷ್ಟು ಜನ ನನ್ನಲ್ಲಿ ಕೇಳುತ್ತಾರೆ. ಅದಾಗಲೇ ‘ಮೋದಿ’ ಎನ್ನುವ ಹೆಸರು ಎಲ್ಲೆಡೆ ಪಸರಿಸಿತ್ತು, ನನ್ನ ಭಾವಚಿತ್ರಗಳು ಪ್ರಿಂಟ್ ಆಗಿ ಉತ್ಸಾಹ ತುಂಬಿತ್ತು. ಆದರೆ ನಾನು ಮುಖ್ಯಮಂತ್ರಿ ಆಗಿದ್ದೇ ನನ್ನ ಅಮ್ಮನಿಗೆ ಮೈಲಿಗಲ್ಲು. ಮುಖ್ಯಮಂತ್ರಿ ಆಗುತ್ತಿದ್ದೇನೆ ಎನ್ನುವ ವಿಚಾರ ತಿಳಿದಾಗ ನಾನು ದೆಹಲಿಯಲ್ಲಿದ್ದೆ. ನಾನು ನೇರವಾಗಿ ಅಮ್ಮನನ್ನು ಭೇಟಿಯಾಗಲು, ನನ್ನ ಸಹೋದರನೊಂದಿಗೆ ಅಹಮದಾಬಾದ್’ನಲ್ಲಿ ವಾಸಿಸುತ್ತಿದ್ದ ಮನೆಗೆ ತೆರಳಿದೆ.
ಆಗಲೇ ಅಮ್ಮನಿಗೆ ನಾನು ಮುಖ್ಯಮಂತ್ರಿ ಆಗಿದ್ದೆ ಎನ್ನುವ ವಿಚಾರ ತಿಳಿದಾಗಿತ್ತು. ಪ್ರಾಮಾಣಿಕವಾಗಿ ಹೇಳುವುದಾದರೆ, ಆಕೆಗೆ ಈ ಮುಖ್ಯಮಂತ್ರಿ ಸ್ಥಾನದ ಬಗ್ಗೆ ತಿಳಿದಿರಲಿಕ್ಕಿಲ್ಲ. ನಾನು ಮನೆಗೆ ತಲುಪಿದಾಗ ಅಲ್ಲಿ ಹಬ್ಬದ ವಾತಾವರಣವಿತ್ತು, ಸಂಭ್ರಮಾಚಾರಣೆ ಅರಂಭವಾಗಿತ್ತು. ಆದರೆ ನನ್ನ ಅಮ್ಮ ಸುಮ್ಮನೆ ನನ್ನನ್ನು ನೋಡಿ, ಅಪ್ಪಿ ಹಿಡಿದು ಹೇಳಿದ್ದಿಷ್ಟು ‘ಉತ್ತಮ ವಿಚಾರವೆಂದರೆ ನೀನು ಮತ್ತೆ ಗುಜರಾತಿಗೆ ಬರುತ್ತೀಯ’ ಎಂದು. ಇದು ಅಮ್ಮನ ಸಹಜಗುಣ, ಆಕೆಯ ಸುತ್ತ ಏನೇ ನಡೆಯುತ್ತಿರಲಿ, ತಾನು ಸದಾ ಮಕ್ಕಳ ಜೊತೆಯಾಗಿರಬೇಕು.
ಬಳಿಕ ‘ನೋಡು ನೀನು ಏನು ಮಾಡುತ್ತಿದ್ದೀಯ ಎಂದು ನನಗೆ ಆರ್ಥವಾಗುವುದಿಲ್ಲ. ಆದರೆ ಎಂದಿಗೂ ಲಂಚವನ್ನು ಪಡೆಯುವುದಿಲ್ಲ ಎಂದು ಆಣೆ ಮಾಡು. ಎಂದೆಂದಿಗೂ ಅಂತಹಾ ಪಾಪದ ಕೆಲಸವನ್ನು ಮಾಡಬೇಡ’ ಎಂದಳು. ಈ ಮಾತುಗಳು ನನ್ನಲ್ಲಿ ಬಹಳ ಪರಿಣಾಮವನ್ನು ಬೀರಿದವು. ಏಕೆ ಎಂದು ಹೇಳುತ್ತೇನೆ. ಹೆಣ್ಣುಮಗಳು ಒಬ್ಬಾಕೆ, ತನ್ನ ಜೀವಮಾನವಿಡೀ ಬಡತನದಲ್ಲೇ ಕಳೆದಿದ್ದಳು. ಸೌಕರ್ಯಗಳು ಶೂನ್ಯವಾಗಿತ್ತು; ಈಕೆ ಸಂಭ್ರಮಾಚರಣೆಯ ಸಮಯದಲ್ಲಿ ಲಂಚ ತೆಗೆದುಕೊಳ್ಳಬೇಡ ಎಂದಳು. ಹಾಗಾಗಿ ನಾನು ಪ್ರಧಾನಿಯಾದ ಬಳಿಕವೂ ನನ್ನ ಬೇರುಗಳು ಬಲವಾಗಿ ಮತ್ತು ಪಟ್ಟುಬಿಡದೆ ಉಳಿದುಕೊಂಡಿವೆ. ಅಂದು ಯಾರಾದರೂ, ನನ್ನ ತಾಯಿಯ ಬಳಿ ನಾನು ಸಾಮಾನ್ಯವಾದ ಕೆಲಸವೊಂದನ್ನು ಪಡೆದಿದ್ದೇನೆ ಎಂದು ಹೇಳಿದ್ದರೂ ಆಕೆ ಊರಿಗೆಲ್ಲಾ ಮಿಠಾಯಿ ಹಂಚುತ್ತಿದ್ದಳು.
ಆದ್ದರಿಂದ, ಸ್ಥಾನದಲ್ಲಿರುವ ವ್ಯಕ್ತಿ ಪ್ರಾಮಾಣಿಕವಾಗಿ ಮತ್ತು ಸಂಪೂರ್ಣವಾಗಿ ದೇಶಕ್ಕಾಗಿ ಶ್ರಮಿಸುತ್ತಿದ್ದರೆ, ಮುಖ್ಯಮಂತ್ರಿ – ಪ್ರಧಾನಮಂತ್ರಿ ಎನ್ನುವುದು ಆಕೆಗೆ ವಿಷಯವೇ ಅಲ್ಲ.
ಮೂಲ: ಹ್ಯೂಮನ್ಸ್ ಆಫ್ ಬಾಂಬೆ
#TheModiStory