Featured ಅಂಕಣ ಜೇಡನ ಜಾಡು ಹಿಡಿದು..

ಗೋಡೆಯ ಮೇಲಿನ ಜೇಡ- ಭಾಗ ೨

ಕಳೆದವಾರ ಬರೆದ ಬಲೆಂಗಾರನ ಬಲೆಯ ಸೋಂಕುನಿವಾರಕ ಗುಣಕ್ಕೆ ಬೆರಗಾದವರು ಅನೇಕ. ಹಲವರು ಇದರ ಬಗೆಗೆ ಇನ್ನಷ್ಟು ಮಾಹಿತಿ ತಿಳಿಸಿ ಎಂದು ಕರೆ ಮಾಡಿದರು. ಎಲ್ಲಾ ಜೇಡನ ಬಲೆಗೂ ಈ ಗುಣವಿದೆಯೇ ಎಂಬುದೇ ಅನೇಕರ ಸಂದೇಹ.
ಹೌದು, ಎಲ್ಲಾ ಜೇಡನ ಬಲೆಗೂ ಈ ಗುಣವಿದೆ, ಆದರೆ ನಮಗೆ ಗೋಡೆಯ ಮೇಲೆ ಅಥವಾ ಮರದ ತೊಗಟೆಯಲ್ಲಿ ಮುದ್ದೆಯಾಗಿ ಸಿಗುವ ಬಿಳಿಯ(ಹತ್ತಿಯಂಥಾ) ಬಲೆ ಉಪಯೋಗಕ್ಕೆ ಸುಲಭ. ಜೇಡನು ತನ್ನ ವಾಸಕ್ಕೆಂದು ಮಾಡುವ ಬಲೆಯನ್ನು ಪ್ರತಿನಿತ್ಯ ಅವೇ ತಿನ್ನುತ್ತವೆ. ಈ ವಿಷಯದ ಕುರಿತು ಇನ್ನೊಮ್ಮೆ ದೀರ್ಘವಾಗಿ ವಿವರಿಸುವೆ. ಹಾಗಾಗಿ ಆ ಬಲೆಯು ನಮಗೆ ಲಭ್ಯವಾಗುವುದಿಲ್ಲ. ನಮಗೆ ಲಭಿಸುವುದು, ಜೇಡವು ಸಂತಾನೋತ್ಪತ್ತಿಗೆಂದು ಮಾಡುವ ದಪ್ಪನೆಯ, ಹತ್ತಿಯಂಥಾ ಬಲೆ. ಈ ಬಲೆಯು ಮರಿಗಳು ಹೊರಬಂದ ಅನಂತರವೂ ಹಾಗೆಯೇ ಇರುತ್ತದೆ. ಒಂದಲ್ಲ ಎರಡಲ್ಲ, ಸಾಲು ಸಾಲು ಬಲೆಗಳನ್ನು ಕಾಣಬಹುದು. ಕಳೆದ ಸಂಚಿಕೆಯಲ್ಲಿ ಪರಿಚಿತವಾದ ಪ್ಲೆಕ್ಸಿಪಸ್ ಮತ್ತು ಈ ಸಂಚಿಕೆಯಲ್ಲಿ ಪರಿಚಿತವಾಗಲಿರುವ ಮೆನೆಮರಸ್, ಹಸಾರಿಯಸ್ಸಿನಂಥಾ ಜಿಗಿಯುವ ಜೇಡ ಮತ್ತು ಈ ಮೊದಲೇ ನಿಮಗೆ ಪರಿಚಿತವಾದ ಎರಡು ಬಾಲದ ಜೇಡನ ಬಲೆಯ ಬಳಕೆ ಸುಲಭ.

ಪ್ಲೆಕ್ಸಿಪಸ್(Plexipus)ನಷ್ಟೇ ಸಾಮಾನ್ಯವಾಗಿ ನಮ್ಮನೆಯ ಗೋಡೆಗಳಲ್ಲಿ, ಅದರಲ್ಲೂ ಪೇಟೆ ಮನೆಯ ಗೋಡೆಗಳಲ್ಲಿ ಮತ್ತು ಮರದ ಕಾಂಡದಲ್ಲಿ ಕಾಣಸಿಗುವುದೆಂದರೆ ಅದು ಮೆನೆಮರಸ್ (Menemerus) ಗಣದ ಜಿಗಿಯುವ ಜೇಡ. ಒಂಬತ್ತು ಎಂ.ಎಂ. ಗಾತ್ರದ ಬೂದು ಬಣ್ಣದ ಗೋಡೆ ಜೇಡವಿದು. ಹಾಗಾಗಿ ಇದಕ್ಕೆ ಹೆಸರೇ Gray wall jumper. ನಾವಿದನ್ನು ಕನ್ನಡಕ್ಕೆ ಹಾಗೆ ಅನುವಾದಿಸಿ ಬೂದು ಗೋಡೆ ಜೇಡವೆನ್ನೋಣ.

ಈ ಬೂದು ಜೇಡನಲ್ಲಿ ಎರಡು ಪ್ರಭೇದಗಳನ್ನು ಸಾಮಾನ್ಯವಾಗಿ ಕಾಣಬಹುದು.
೧. Menemerus bivittatus
೨. Menemerus fulvus


ಎರಡೂ ಜೇಡಗಳು ನೋಡಲು ಒಂದೇ ತರನಾಗಿ ಕಾಣುವುದರಿಂದ ಖಚಿತವಾಗಿ ಇದು ಇಂತದ್ದೇ ಪ್ರಭೇದದ್ದು ಎಂದು ಹೇಳಲು ಬರುವುದಿಲ್ಲ. ಗಂಡು ಜೇಡನಲ್ಲಿ ಸ್ವಲ್ಪ ಮಟ್ಟಿನ ಬಾಹ್ಯ ವ್ಯತ್ಯಾಸವಿದೆಯಾದರೂ ಅದು ಪಕ್ಕನೆ ಗೋಚರಕ್ಕೆ ಬಾರದು. ಹೆಣ್ಣು ಜೇಡಗಳಿಗೆ ಯಾವುದೇ ಬಾಹ್ಯ ವ್ಯತ್ಯಾಸವಿಲ್ಲ. ಅಷ್ಟೇ ಅಲ್ಲ, ಜಿಗಿಯುವ ಜೇಡಗಳ ಅಧ್ಯಯನದಲ್ಲಿ ನಿರತರಾಗಿರುವ ವಿಜ್ಞಾನಿಯೊಬ್ಬರು ಹೇಳುವ ಪ್ರಕಾರ, ಪ್ಲೆಕ್ಸಿಪಸ್ ಪಾಯ್ಕುಲಿ ಮತ್ತು ಪೆಟಾರ್ಸಿಯ ಹೆಣ್ಣು ಜೇಡಗಳು ಬಾಹ್ಯವಾಗಿ ಒಂದೇ ತರನಾಗಿ ಇದ್ದರೂ ಅವುಗಳ ಜನನೇಂದ್ರಿಯವು ಭಿನ್ನವಾಗಿರುತ್ತದೆ. ಆದರೆ ಈ ಬೂದು ಗೋಡೆ ಜೇಡನ ಎರಡೂ ಪ್ರಭೇದಗಳ ಹೆಣ್ಣಿನ ಜನನೇಂದ್ರಿಯದಲ್ಲೂ ಯಾವ ವ್ಯತ್ಯಾಸವೂ ಇಲ್ಲವಂತೆ. ಆದರೂ ಗಂಡು ಜೇಡಗಳು ತಮ್ಮದೇ ಪ್ರಭೇದದ ಹೆಣ್ಣನ್ನು ಹೇಗೆ ಪತ್ತೆ ಮಾಡುತ್ತವೆ ಎಂಬುದು ವಿಸ್ಮಯವೇ ಸರಿ.

menemerus-bivittatus-female-eye-pattern

ಮೆನೆಮರಸ್ ಗಣವನ್ನು Eugene Louis simon ಎಂಬ ವಿಜ್ಞಾನಿಯು 1868ರಲ್ಲಿ ಮೊದಲಬಾರಿಗೆ ಜಗತ್ತಿಗೆ ಪರಿಚಯಿಸಿದರು. ಚಪ್ಪಟೆ ಶರೀರದ ಈ ಜೇಡಕ್ಕೆ ಬೂದು ಮಿಶ್ರಿತ ಬಿಳಿಯ ಕೂದಲು. ಹೆಣ್ಣಿಗಿಂತ ಗಾತ್ರದಲ್ಲಿ ಗಂಡು ತುಸು ಸಣ್ಣ. ಗಂಡು ಜೇಡದ ಹೊಟ್ಟೆ ಬಾಗದ ಎರಡೂ ಕರೆಯಲ್ಲಿ ಕಪ್ಪು ಉದ್ದನೆಯ ಪಟ್ಟಿ ಇರುತ್ತದೆ. ತಲೆಯ ಮೇಲ್ಭಾಗ ಮತ್ತು ಚೆಲಿಸೆರಾ ಕೂಡಾ ಕಪ್ಪು ಮತ್ತು ಬಿಳಿ ಬಣ್ಣದ ಮಿಶ್ರಣದಲ್ಲಿದ್ದು, ಕಾಲುಗಳಿಗೂ ಕಪ್ಪು ಬಿಳಿ ಪಟ್ಟಿ ಇರುತ್ತದೆ. ಹೆಣ್ಣು ತುಸು ಪೇಲವ ಮತ್ತು ಕಂದು ಬಣ್ಣದ ಛಾಯೆಯಲ್ಲಿರುತ್ತದೆ. ಕಾಲಿನ ಪಟ್ಟಿಗಳೂ ಸ್ವಲ್ಪ ಮಾಸಿರುತ್ತದೆ. ಪ್ಲೆಕ್ಸಿಪಸ್ ಜೇಡಗಳಂತೆ ಇವೂ ಉಷ್ಣವಲಯದಲ್ಲೆಲ್ಲಾ ವ್ಯಾಪಿಸಿದೆ.

menemerus-juvenille -with-caterpiller

೨೦೧೮ರ ದಶಂಬರದಲ್ಲಿ ನಮ್ಮ ಸಾಲಿಗ ತಂಡ ಜೇಡಗಳ ಅಧ್ಯಯನಕ್ಕೆಂದು ಉತ್ತರಕನ್ನಡದ ಶಿರ್ಸಿಗೆ ಹೋಗಿದ್ದೆವು. ಅಲ್ಲಿನ ಪರಿಸರ ಇಂದಿನವರೆಗೂ, ಉಳಿದ ಕಡೆಗೆ ಹೋಲಿಸಿದರೆ ಇನ್ನೂ ಹಾಳಾಗದೆ ಉಳಿದಿದೆ. ಸಹಜವಾಗಿಯೇ ನಮಗೆ ಅನೇಕ ವಿಶೇಷ ಜೇಡಗಳ ದರ್ಶನ ಅಲ್ಲಿ ಆಗಿತ್ತು. ಈ ಬೂದು ಜೇಡವಂತೂ ಪ್ರತಿ ಮರದಲ್ಲೂ ಕಾಣಸಿಗುತ್ತಿತ್ತು. ಮರದ ಬಣ್ಣದಲ್ಲೇ ಇರುವ ಈ ಜೇಡವನ್ನು ಪತ್ತೆ ಹಚ್ಚುವುದು ಅಷ್ಟು ಸುಲಭವಲ್ಲ.

ಮರದ ಬಣ್ಣದಲ್ಲೇ ಇರುವ ಜೇಡ

ನಮ್ಮ ಪರಿಸರದ ಕುರಿತಾದ ಆಸಕ್ತಿಗೆ ಸರಿಯಾಗಿ ನಮ್ಮ ಕಣ್ಣುಗಳೂ ತರಬೇತ್ತಾದ್ದರಿಂದ ಹೆಚ್ಚು ತ್ರಾಸ ಪಡದೆ ಜೇಡಗಳು ನಮ್ಮ ಕಣ್ಣೆದುರೇ ಬರುತ್ತಿತ್ತು! ಶಿರ್ಸಿಯ ಗಣೇಶ ಪಾಲದಲ್ಲಿ ಹರಿಯುವ ಹೊಳೆಗೆ ಕಾವಲಿರುವ ಮರದ ಬೂದು ಕಾಂಡದಲ್ಲಿ ಈ ಬೂದು ಜೇಡ ಅಷ್ಟೇ ಬೂದಾದ ಪತಂಗದ ಕಂಬಳಿಹುಳದ ಜೊತೆಗಿದ್ದು, ಸರ್ವವೂ ಬೂದುಮಯವಾದ ದೃಶ್ಯ ಇನ್ನೂ ಹಸಿರಾಗಿದೆ.

ಗೆಳೆಯ ಸುಮುಖನು ಅವನ ಬೆಂಗಳೂರಿನ ಮನೆಯ ಗೋಡೆಯಲ್ಲಿ ಈ ಮೆನೆಮರಸ್ ಗಂಡು ಜೇಡಗಳ ಕುಸ್ತಿಯನ್ನು ದಾಖಲಿಸಿದ್ದನೆ. ನಾನು ಅದನ್ನು ವಿವರಿಸುವ ಬದಲು ಆ ದೃಶ್ಯಾವಳಿಯ ಚಿತ್ರಗಳನ್ನು ಇಲ್ಲಿ ಹಾಕಿರುವೆ. ಯಾವ ಗಂಡಿಗೆ ಬುದ್ಧಿ ಮತ್ತು ದೇಹ ಬಲವಿರುತ್ತದೆಯೋ ಅದೇ ಆ ಜಾಗದ ಅಧಿಪತಿ. ಸೋತ ಗಂಡು ಜಾಗ ಕಾಲಿ ಮಾಡುತ್ತದೆ. ಹಾಗೆಂದ ಮಾತ್ರಕ್ಕೆ ಈ ಜೇಡಗಳು ಒಂದೇ ಗೋಡೆಯಲ್ಲಿ ಅಥವ ಮರದಲ್ಲಿ ಇರುತ್ತದೆ ಎಂದಲ್ಲ. ಬಲಾಢ್ಯ ಜೇಡವು ಆಹಾರವನ್ನರಸಿಕೊಂಡು ಗೋಡೆಯಿಂದ ಗೋಡೆಗೆ ಹೋಗುತ್ತದೆ. ಅಲ್ಲಿ ಅದಕ್ಕಿಂತ ಬಲಾಢ್ಯ ಜೇಡವೇನಾದರು ಎದುರಾದರೆ ಶರಣಾಗುತ್ತದೆ.

ಈ ಮೆನೆಮರಸ್ ಜೇಡಕ್ಕೆ ಗೋಡೆಯ ಮೇಲೆ ಹರಿದಾಡುವ ಜಂತುಗಳೇ ಆಹಾರ. ನೊಣ ಮತ್ತು ಸೊಳ್ಳೆಗಳನ್ನು ತಿನ್ನುವ ದೃಶ್ಯ ನೋಡಿರುವ ನನಗೆ ಈ ಜೇಡವು ಬಲು ವೇದನೆ ಪಡುವಂತೆ ಕಚ್ಚುವ ಕೊಯಿಂಪ ಇರುವೆಗಳನ್ನು(Camponotus) ತಿನ್ನುತ್ತವೆ ಎಂಬುವುದು ಗೆಳೆಯ ಹಯಾತ್ ತೆಗೆದ ಚಿತ್ರದಿಂದಲೇ ತಿಳಿದದ್ದು. ಈ ಜೇಡಗಳ ಅಧ್ಯಯನ ಒಬ್ಬರಿಂದಲೇ ಆಗಬೇಕೆಂದೇನೂ ಇಲ್ಲ. ಪ್ರತಿಯೊಂದು ಜೇಡಕ್ಕೂ ಅದರದೇ ಆದ ವಿಶೇಷತೆಗಳಿವೆ. ಅಂಥಾ ವಿಶೇಷತೆಗಳನ್ನು ಬೇರೊಬ್ಬರು ದಾಖಲಿಸಿದ ಚಿತ್ರಗಳಿಂದಲೂ ಕಾಣಬಹುದು. ಅಂಥಾ ವಿಶೇಷತೆಗಳತ್ತ ಬೆಳಕು ಚೆಲ್ಲುವ ಪ್ರಯತ್ನ ನನ್ನದು, ನಮ್ಮ ತಂಡ ಸಾಲಿಗದ್ದು.

Hasarius adansoni
Adanson’s house jumper ಎಂದೇ ಹೆಸರಾಗಿರುವ ಜೇಡ ವಿಶ್ವವ್ಯಾಪಿ ಎಂದು ಹೇಳಿದರೆ ತಪ್ಪಲ್ಲ. ಸೆಖೆ ಜಾಸ್ತಿ ಇರುವ ಪ್ರದೇಶದಲ್ಲಿ ಯಥೇಚ್ಚವಾಗಿ ಕಾಣಸಿಗುತ್ತದೆ. ಚಳಿ ಪ್ರದೇಶದಲ್ಲಿ ಇವುಗಳು ಇರುವುದಿಲ್ಲವಂತೆ. ಆದರೆ ಇದರ ಸೌಂದರ್ಯಕ್ಕೆ ಮಾರು ಹೋಗಿ ಜರ್ಮನಿಯಂಥ ಮುಂದುವರಿದ ದೇಶಗಳು ಅಲ್ಲಿನ ಮೃಗಾಲಯಗಳಲ್ಲಿ ಸಾಕಿದ್ದಾರೆ. ಹಾಗಾಗಿಯೇ ನಾನು ಹೇಳಿದ್ದು, ಇದು ವಿಶ್ವವ್ಯಾಪಿ.

ಈ ಜೇಡದ ಗಂಡು(೬ ಎಂ.ಎಂ.) ಬಲು ಚಂದ. ಕಪ್ಪು ಬಣ್ಣದ ಜೇಡಕ್ಕೆ ಕೆಂಪು ಮುಖವಾಡ, ಪೆಡಿಪಾಲ್ಪಿನ ಮೇಲ್ಮುಖ ಬಿಳಿ, ಒಳ ಮುಖ ಕಪ್ಪು. ಪೆಡಿಪಾಲ್ಪ್ ಸದಾ ಆಡಿಸಿಕೊಂಡಿರುತ್ತದೆ. ನೋಡುವಾಗ ಕಪ್ಪು ಬಿಳುಪಿನ ಆಟದಂತೆ ಕಾಣುತ್ತದೆ. ಒಂಥರಾ ಮಾಯಾವಿ ಜೇಡವಿದು. ಗಂಡು ಜೇಡದ ಬೆನ್ನಿನ ಮುಂಬಾಗದಲ್ಲಿ ಬಿಳಿಯ ಪಟ್ಟಿ. ಹಿಂಬದಿಯಲ್ಲಿ ಎರಡು ಚುಕ್ಕಿ. ಈ ಚುಕ್ಕಿಗಳು ಕಣ್ಣಿನಂತೆ ಕಾಣುವುದರಿಂದ ಹೊಟ್ಟೆ ಭಾಗಕ್ಕೆ ಮುಖವಾಡದ ರೂಪ ಕೊಡುತ್ತದೆ. ಈ ಜೇಡದ ಹೆಣ್ಣು ,ಗಂಡಿಗಿಂತ ಗಾತ್ರದಲ್ಲಿ ದೊಡ್ಡದು (೮ ಎಂ. ಎಂ.), ಆದರೆ ಅಷ್ಟು ಚಿತ್ತಾಕರ್ಷಕವಾಗಿಲ್ಲ. ಕಡುಗಂದು ಬಣ್ಣದ ತಲೆಗೆ, ಮಾಸಲು ಕಂದು ಬಣ್ಣದ ಹೊಟ್ಟೆ.

Hasarius-adansoni-female

Hasarius-adansoni-male

ನಮ್ಮ ಮನೆಯ ಗೋಡೆಯಲ್ಲಿ ಪ್ರತಿನಿತ್ಯ ಕಾಣುವ ಈ ಜೇಡ ಅತಿ ಚುರುಕು ಸ್ವಭಾವದ್ದು. ಒಂದೆಡೆ ಕುಳಿತ್ತದ್ದನ್ನು ನಾನಂತೂ ಕಂಡಿಲ್ಲ. ಈ ಜೇಡಕ್ಕೂ ಕಡಜಕ್ಕೂ ಬಲು ನಂಟು. ಕೆಲವು ಕಡಜಗಳು ಈ ಜೇಡವನ್ನು ಹೊತ್ತು ತಮ್ಮ ಗೂಡಿಗೆ ಸಾಗಿಸಿ ಅದನ್ನು ಮೂರ್ಛೆಗೊಳಿಸಿ ಅದರ ಮೇಲೆ ಮೊಟ್ಟೆಯಿಟ್ಟು ತನ್ನ ಸಂತಾನವನ್ನು ಬೆಳಸುತ್ತದೆ. (ಈ ಕಡಜ ಮತ್ತು ಜೇಡನ ಕಥೆ ಬಲು ರೋಚಕ, ಅದನ್ನು ಇನ್ನೊಮ್ಮೆ ಹೇಳುವೆ). ಈ ಹಸಾರಿಯಸ್ ಜೇಡ , ಕಡಜಗಳು ಮರಿ ಮಾಡಿ ಹೋದ ಮೇಲೆ ಉಳಿದ ಮಣ್ಣಿನ ಮನೆಯನ್ನು ಉಪಯೋಗಿಸುತ್ತವೆ. ಹೆಣ್ಣು ಜೇಡ ಕಡಜದ ಮೆನೆಯ ಒಳಗೆ ಹೋಗಿ ದ್ವಾರವನ್ನು ತನ್ನ ಬಲೆಯಿಂದ ಮುಚ್ಚುತ್ತದೆ. ಮುಚ್ಚಿದ ಮೇಲೆ ಮಡಿಕೆಯಂಥಾ ಮನೆಯ ಒಳಗೆ ಪೂರ್ತಿ ಕತ್ತಲು. ಆ ಕತ್ತಲ ಕೋಣೆಯಲ್ಲಿ ಹಸಾರಿಯಸ್ ಮೊಟ್ಟೆ ಇಡುತ್ತದೆ. ಮೊಟ್ಟೆಯೊಡೆದು ಮರಿ ಹೊರ ಬರಲು ಎಷ್ಟು ದಿನ ಬೇಕೋ ನನಗೆ ಗೊತ್ತಿಲ್ಲ. ಅದರ ಪೂರ್ತಿ ಅಧ್ಯಯನ ಮಾಡುವ ಬಯಕೆ ನನ್ನದು. ಕಾಲ ಕೂಡಿ ಬಂದಿಲ್ಲ. ನಾನು ನಮ್ಮ ಕೆಲ ಬಾಗಿಲಿನ ಮೇಲಿರುವ ಕಡಜದ ಗೂಡನ್ನು ತೆಗೆದು ನೋಡುವಾಗ ಅದರೊಳಗಿಂದ ಜೀವಂತ ಹಸಾರಿಯಸ್ ಛಂಗನೆ ನೆಗೆದಾಗ, ನನಗೆ ಈ ಜೇಡದ ಸಂತಾನೋತ್ಪತ್ತಿಯ ಅರಿವಾದದ್ದು. ಆ ಮಡಿಕೆಯೊಳಗೆ ಎಲ್ಲವೂ ಗೌಪ್ಯವಾಗಿರುವುದರಿಂದ ಈ ಜೇಡನ ಒಳರಹಸ್ಯದ ಅಧ್ಯಯನ ಅಷ್ಟು ಸುಲಭವಲ್ಲ.

ಈ ಜೇಡವು “ಹೊರನೋಟವನ್ನು ತಿಳಿದಷ್ಟು ಸುಲಭದಲ್ಲಿ, ಒಳನೋಟವನ್ನು ತಿಳಿಯಲಾಗುವುದಿಲ್ಲ” ಎಂಬ ಜೀವನ ಪಾಠವನ್ನು ಕಲಿಸಿದ್ದು ಸುಳ್ಳಲ್ಲ. ಆತ್ಮದರ್ಶನ ಸದಾ ಕಷ್ಟ.

ಚಿತ್ರಗಳು – ಡಾ. ಅಭಿಜಿತ್, ಸುಮುಖ ಜಾವಗಲ್, ಹಯಾತ್ ಮಹಮದ್.

Facebook ಕಾಮೆಂಟ್ಸ್

ಲೇಖಕರ ಕುರಿತು

Dr. Abhijith A P C

ಲೇಖಕರಾದ ಡಾ. ಅಭಿಜಿತ್ ಎ.ಪಿ.ಸಿ ಹೋಮಿಯೋಪಥಿ ವೈದ್ಯಶಾಸ್ತ್ರವನ್ನೋದಿ ಮೈಸೂರಿನ ಜೆ.ಪಿ.ನಗರದಲ್ಲಿ ವೈದ್ಯ ಕೃಷಿ ಮಾಡುತ್ತಿದ್ದಾರೆ . ಆದರೂ ತಾವು ಹುಟ್ಟಿದ ನೆಲವನ್ನು ಮರೆಯಲಿಲ್ಲ . ಜೊತೆಜೊತೆಯಾಗಿ ತಮ್ಮ ಮನೆತನದ ಭೂಮಿಯಲ್ಲಿ ಅನ್ನದ ಕೃಷಿಯನ್ನೂ ಮಾಡುತ್ತಿ ದ್ದಾರೆ. ಈ ನಡುವೆ ಬೇಡವೆಂದರೂ ನಮ್ಮ ಸುತ್ತ ಹಾರುವ ಓಡಾಡುವ ಆ ಮೂಲಕ ಪ್ರಕೃತಿ ನೀತಿ ಪಾಠ ಹೇಳುವ ಖಗಮೃಗಗಳನ್ನು ನೋಡುತ್ತಾರೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!