ಅಂಕಣ

ಸಮಸ್ಯೆಯೆಂದರೆ ಸಾವಲ್ಲ, ಜೀವನ

 ಅವನು ಅಂದು ದೊಡ್ಡ ಪಾರ್ಟಿ ಏರ್ಪಡಿಸಿದ್ದ. ಅವನ ಸ್ನೇಹಿತರು, ಬಂಧುಬಳಗದವರೆಲ್ಲಾ ಆ ಪಾರ್ಟಿಯಲ್ಲಿ ಸೇರಿ ಸಂಭ್ರಮಿಸುತ್ತಿದ್ದರು. ವಿಪರ್ಯಾಸವೆಂದರೆ ಆ ಪಾರ್ಟಿಯಲ್ಲಿ ಭಾಗವಹಿಸಿದ ಯಾರಿಗೂ ಈ ಸಂಭ್ರಮದ ಪಾರ್ಟಿಗೆ ಕಾರಣವೇನೆಂಬುದೇ ತಿಳಿದಿರಲಿಲ್ಲ. ಆ ಪಾರ್ಟಿಯ ಸಂಭ್ರಮದ ಮತ್ತಿನಲ್ಲಿ ಕಾರಣ ಕೇಳುವುದನ್ನೂ ಮರೆತಿದ್ದರು. ಆದರೆ ಅವರಲ್ಲಿನ ಒಬ್ಬನಿಗೆ “ಈ ಪಾರ್ಟಿ ಯಾವ ಸಂತೋಷಕ್ಕಾಗಿ ನೀಡುತ್ತಿರುವುದು?” ಎಂಬ ಪ್ರಶ್ನೆ ಸ್ವಲ್ಪ ತಡವಾಗಿಯಾದರೂ ಅಕಸ್ಮಾತ್ ಉದ್ಭವಿಸಿತು. ಅಲ್ಲಿದ್ದ ಹಲವರನ್ನು ವಿಚಾರಿಸಿದ. ಆದರೆ ಯಾರಿಗೂ ಕಾರಣ ಗೊತ್ತಿಲ್ಲ. ಕೊನೆಗೆ ಕುತೂಹಲ ತಡೆಯಲಾರದೇ ಆ ಪಾರ್ಟಿ ಕೊಟ್ಟ ಮಹಾನುಭಾವನನ್ನೇ ಪ್ರಶ್ನಿಸಿದ. “ನನ್ನ 90 ಲಕ್ಷದ ಮರ್ಸಿಡೀಸ್ ಬೆಂಜ್ ಅಪಘಾತದಲ್ಲಿ ಸಂಪೂರ್ಣ ಹಾಳಾಯಿತು, ಅದಕ್ಕಾಗಿ ಪಾರ್ಟಿ..” ಎಂಬ ಉತ್ತರ ಕೇಳಿ ಆತ ಬೆಚ್ಚಿಬಿದ್ದ. “ಇದೆಂಥ ಖುಷಿಯ ವಿಚಾರ, ಯಾರಾದರೂ ದುಃಖಿಸಬೇಕಾದ ಈ ಸಂಗತಿಗೆ ಪಾರ್ಟಿ ಕೊಡ್ತಾರಾ..?” ಎಂದು ಆಶ್ಚರ್ಯದಿಂದ ಆತ ಮರು ಪ್ರಶ್ನಿಸಿದ. “ಕಾರು ನುಜ್ಜು, ಗುಜ್ಜಾಗಿರುವುದು ನೋಡಿದರೆ, ನನಗೇನೂ ಪೆಟ್ಟಾಗದೇ ಬದುಕಿ ಬಂದಿರುವುದೇ ಅತಿ ದೊಡ್ಡ ಸಂತಸ, ಇಲ್ಲಿ ನನ್ನ ಕಾರು ಮುಖ್ಯವಲ್ಲ, ಪ್ರಾಣ ಮುಖ್ಯ. ಆ ಪ್ರಾಣ ಉಳಿಸಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿ, ಅತೀವ ಸಂತೋಷದಿಂದ ಈ ಪಾರ್ಟಿ ಕೊಡುತ್ತಿದ್ದೇನೆ..” ಎಂದು ಆತ ಮುಗುಳು ನಗುತ್ತಾ ಪಾರ್ಟಿಯಲ್ಲಿ ಸಂಭ್ರಮಿಸತೊಡಗಿದ. ಇದನ್ನು ಕೇಳಿದವಗೆ “ಹೌದಲ್ಲಾ, ಹೀಗೂ ವಿಚಾರ ಮಾಡಿ ಸಂತೋಷಪಡಬಹುದಲ್ಲಾ..” ಎಂದು ಅನಿಸಿ ಮತ್ತಷ್ಟು ಖುಷಿಯಿಂದ ಪಾರ್ಟಿಯ ಸಂಭ್ರಮದಲ್ಲಿ ಒಂದಾದ.

ಮೇಲಿನ ಈ ಕಥೆ ನಮಗೆ ಅದ್ಭುತ ಸಂದೇಶ ನಿಡುತ್ತದೆ. ನಾವು ಜೀವನದಲ್ಲಿ ಕಳೆದುಕೊಂಡಿರುವುದರ ಬಗ್ಗೆ ಅತಿಯಾಗಿ ಚಿಂತಿಸುತ್ತಾ, ನಮ್ಮಲ್ಲಿ ಇರುವುದರ ಕುರಿತು ಮರೆತು ಬಿಡುತ್ತೇವೆ. ನಮಗೆ ಎದುರಾಗುವ ಸಮಸ್ಯೆಗಳಿಗೆ ಹೆದರಿ ಕೈ ಚೆಲ್ಲಿ ಕುಳಿತು ಬಿಡುತ್ತೇವೆ. ನಿಮಗೆ ಗೊತ್ತಾ, ನಮಗೆ ಬರುವ ಅದೆಷ್ಟೋ ಸಮಸ್ಯೆಗಳು ಒಂದು ಕಡೆ ನಷ್ಟ ಉಂಟುಮಾಡಿದಂತೆ ಅನಿಸಿದರೂ ಮತ್ತೆಲ್ಲೋ ಆ ನಷ್ಟಕ್ಕಿಂತ ದೊಡ್ಡ ಲಾಭ ಮಾಡಿ ಹೋಗಿರುತ್ತದೆ. ನಾವು ಸಮಸ್ಯೆಯ ಕುರಿತು, ಅದರಿಂದಾದ ತೊಂದರೆಯ ಕುರಿತೇ ಅತಿಯಾಗಿ ಚಿಂತಿಸುವುದರಿಂದ ನಮಗಾದ ಲಾಭದ ಕುರಿತು ತಿಳಿಯುವುದೇ ಇಲ್ಲ. ಇನ್ನೊಂದು ಅರ್ಥದಲ್ಲಿ ಅದೂ ಕೂಡ ನಮಗೆ ನಷ್ಟದಂತೆ ಗೋಚರಿಸಲು ಪ್ರಾರಂಭಿಸುತ್ತದೆ. ಆದರೆ ನಾವು ಸಮಸ್ಯೆಯ ಆಚೆ ನಿಂತು ವಿಚಾರ ಮಾಡಿದರೆ, ನಮಗಾದ ಲಾಭ, ಸಮಸ್ಯೆಯಿಂದಾದ ನಷ್ಟವನ್ನೇ ಮರೆಸಿಬಿಡುವುದರ ಮಟ್ಟಿಗೆ ಖುಷಿಯನ್ನು ನೀಡುತ್ತದೆ. ಅದಕ್ಕೆ ಮೇಲೆ ನಾ ಹೇಳಿದ ಕಥೆಯೇ ಜ್ವಲಂತ ಉದಾಹರಣೆ. ಒಮ್ಮೆ ಸಮಸ್ಯೆಗಳೇ ಇಲ್ಲದ ಜೀವನವನ್ನು ಕಲ್ಪಿಸಿಕೊಳ್ಳಿ. ನಮ್ಮ ಜೀವನ ನಿಂತ ನೀರಂತೆ ಆಗಿಬಿಡುವುದು. ನಿಮಗೇ ಗೊತ್ತು ನಿಂತ ನೀರಲ್ಲೇ ಪಾಚಿ, ಕೊಳೆ, ಕಸ ಕಡ್ಡಿಗಳು, ರೋಗಕಾರಕ ಸೊಳ್ಳೆಗಳು ಬೆಳೆಯುವುದೆಂದು.

ಪ್ರಸ್ತುತ ಸಮಸ್ಯೆಯ ವಿಚಾರಕ್ಕೆ ಬಂದರೆ, ಕೊರೋನಾದಿಂದಾದ ಕರ್ಮಕಾಂಡಗಳು, ದೇಶದೆಲ್ಲೆಡೆ ಜನ ಜೀವನ ಅಸ್ತವ್ಯಸ್ತವಾಗಿ ಜನರೆಲ್ಲಾ ಇಂದಿಗೂ ತೊಂದರೆ ಅನುಭವಿಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಹಾಗೆ ನೋಡಿದರೆ ಈಗ್ಗೆ 3 ತಿಂಗಳ ಹಿಂದೆ ಕೊರೋನಾದ ಕುರಿತಾಗಿ ಜನರ ಮನದಲ್ಲಿದ್ದ ಆತಂಕ ಇದೀಗ ಇಲ್ಲ. ಕೊರೋನಾ ಎಂದರೇನು ಎಂಬುದನ್ನು ಜನರು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಮತ್ತೂ ಮುಖ್ಯ ವಿಚಾರವೆಂದರೆ, ಜನರಲ್ಲಿ ಕೊರೋನಾದ ಕುರಿತು ಅನವಶ್ಯಕ ಆತಂಕ ಹುಟ್ಟಿಸುತ್ತಿದ್ದ ನ್ಯೂಸ್ ಚಾನಲ್ ಗಳಿಗೂ ಇದೀಗ ಬೇಸರ ಬಂದು ಬಿಟ್ಟಿದೆ. ಅದೆಲ್ಲಾ ಏನೇ ಇರಲಿ ಕೊರೋನಾ ಸಮಸ್ಯೆಯಿಂದ ನಷ್ಟವಾಗಿದ್ದು ಎಷ್ಟು ಸತ್ಯವೋ ಅದಕ್ಕಿಂತ ಹೆಚ್ಚಿನ ಲಾಭವಾಗಿದ್ದೂ ಅಷ್ಟೇ ಸತ್ಯ. ನಾವು ಅದರಿಂದಾದ ನಷ್ಟಗಳ ಕುರಿತೇ ವಿಚಾರ ಮಡುತ್ತಿರುವುದರಿಂದ ಬಹುತೇಕರಿಗೆ ಅದರಿಂದಾದ ಹಾಗೂ ಆಗುತ್ತಿರುವ ಲಾಭಗಳ ಕುರಿತು ಅರಿವಾಗುತ್ತಲೇ ಇಲ್ಲ.  ದೇಶಕ್ಕಾದ ಲಾಭ ನಷ್ಟಗಳ ವಿಷಯ ಬಿಟ್ಟುಬಿಡಿ. ನಾವು ನಮ್ಮನ್ನು ಮಾತ್ರ ಆತ್ಮಾವಲೋಕನ ಮಾಡಿಕೊಳ್ಳೋಣ. ಆಗ ತಿಳಿಯುತ್ತದೆ ನಮಗಾದ ಲಾಭಗಳ ಕುರಿತು. ಬನ್ನಿ ಒಂದು ಸಲ ಕೊರೋನಾದ ಆಚೆ ನಿಂತು ವಿಚಾರ ಮಾಡೋಣ.

ಕೊರೋನಾ ಲಾಕ್‍ಡೌನ್‍ನಿಂದಾಗಿ ಪರಿಸರ ಸ್ವಚ್ಛವಾಗಿದ್ದು ಒಂದೆಡೆಯಾದರೆ, ಬಹಳಷ್ಟು ಜನರ ಆರೋಗ್ಯದ ಸ್ಥಿತಿ ತನ್ನಿಂದ ತಾನೇ ಸುಧಾರಿಸಿದ್ದು ಬಹುತೇಕರ ಅರಿವಿಗೆ ಬಂದಿರಲಿಕ್ಕಿಲ್ಲ. ಅನವಶ್ಯಕ ಓಡಾಟ, ಅನವಶ್ಯಕ ಖರ್ಚುಗಳಿಗೆ ಕೊರೋನಾ ಕಡಿವಾಣ ಹಾಕಿದ್ದರಿಂದ ನಮಗಾದ ಉಳಿತಾಯ ಲಾಭವಲ್ಲದೇ ಮತ್ತೇನು..? ಇದೆಲ್ಲಾ ಒತ್ತಟ್ಟಿಗಿರಲಿ, ಹಳ್ಳಿಯಲ್ಲಿರುವ ಮನೆಯನ್ನು, ಮನೆಯವರನ್ನು ಮರೆತು, ದೂರದ ಪೇಟೆಯಲ್ಲೋ, ಹೊರ ರಾಜ್ಯದಲ್ಲೋ, ಬೇರೆ ದೇಶದಲ್ಲೋ ಸೆಟಲ್ ಆಗಿದ್ದು, ಮತ್ಯಾವತ್ತೂ ಹಳ್ಳಿಯ ಕಡೆ ಮುಖವನ್ನೇ ಹಾಕಬಾರದು ಎಂದು ಅಂದುಕೊಂಡಿರುವ ಬಹುತೇಕ ಜನ ಹಳ್ಳಿಗೆ ವಾಪಸ್ಸಾಗಿದ್ದಾರೆ, ಮಾತ್ರವಲ್ಲ, ವಯಸ್ಸಾದ ತಂದೆ-ತಾಯಿಗೆ ನೆರವಾಗುತ್ತಾ, ಇಲ್ಲೇ ಇರುವುದು ಒಂದು ಲೆಕ್ಕದಲ್ಲಿ ಉತ್ತಮವೇ ಆಯಿತಲ್ಲ. ಎಷ್ಟೇ ಬಡಿದುಕೊಂಡರೂ ಸ್ವಚ್ಛತೆಯ ಕುರಿತು ತಲೆ ಕೆಡಿಸಿಕೊಳ್ಳದ ಜನ ಸ್ವಚ್ಛತೆಯ ಕುರಿತು ಮುತುವರ್ಜಿ ವಹಿಸತೊಡಗಿದ್ದು ಕೊರೋನಾದ ಭಯದಿಂದಲೇ. ಇದು ನಮಗೆ, ನಮ್ಮ ಆರೋಗ್ಯದ ವಿಷಯಕ್ಕಾದ ಅತಿ ದೊಡ್ಡ ಲಾಭ. ಯೋಗ, ಆಯುರ್ವೇದದಂತಹ ನಮ್ಮ ದೇಶದ ಸಂಸ್ಕøತಿಯ ಕುರಿತಾಗಿ ನಮ್ಮ ಜನ ಜಾಗೃತರಾಗಿದ್ದು ಕೊರೋನಾದಿಂದಲೇ ಎಂಬುದು ನಂಬಲಸಾಧ್ಯವಾದರೂ ಸತ್ಯ. ಇನ್ನು ಕೊನೆಯದಾಗಿ ಹಣವೊಂದಿದ್ದರೆ ಸಾಕು ಏನು ಬೇಕಾದರೂ ಮಾಡಬಹುದು ಎಂಬುದು ನಮ್ಮ ತಪ್ಪು ಕಲ್ಪನೆ ಎಂದು ತಿಳಿಯುವ ಹಾಗೆ ಮಾಡಿದ್ದು, ಅದೇ ಕೊರೋನಾ. ಇಷ್ಟೆಲಾ ಹೇಳಿದ್ದು ಯಾಕೆಂದರೆ, ಪ್ರತೀ ಸಮಸ್ಯೆಯಿಂದಲೂ ಏನಾದರೊಂದು ಲಾಭವಿದೆ. ಅದರ ಆಚೆಗೊಂದು ಅಮೂಲ್ಯವಾದ ಜೀವನವಿದೆ. ಇದನ್ನು ಅರಿತುಕೊಳ್ಳದೇ, ನಾವೆಲ್ಲಾ ಅನವಶ್ಯಕ ಭಯ ಪಡುತ್ತಾ, ಇಲ್ಲದ ಅವಾಂತರಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದೇವೆ. ಸಮಸ್ಯೆಗಳಿಗೆ ಹೆದರಿ ಆತ್ಮಹತ್ಯೆಯಂತಹ ಹೇಡಿತನದ ಕೃತ್ಯಗಳಿಗೆ ಕೈ ಹಾಕುತ್ತಿರುವುದು ನಿಜಕ್ಕೂ ವಿಷಾದನೀಯ. ಕೊನೆಯದಾಗಿ ವಿಚಿತ್ರವೆನಿಸಿದರೂ, ಸತ್ಯವಾದ ಒಂದು ವಿಷಯವನ್ನು ಹೇಳುತ್ತೇನೆ ಕೇಳಿ. ಇಲಿ, ಹೆಗ್ಗಣ, ರೋಗಕಾರಕ ಸೊಳ್ಳೆಗಳು, ಬೆಳೆ ನಾಶ ಮಾಡುವ ಕೀಟಗಳು, ಇವೆಲ್ಲಾ ಮನುಷ್ಯರಿಗೆ ಶತ್ರುಗಳು, ಉಪದ್ರವಕಾರಿಗಳು, ಸಮಸ್ಯೆ ಉಂಟು ಮಾಡುವವು ನಿಜ. ಆದರೆ ಇವುಗಳಿರುವುದರಿಂದಲೇ, ಇವುಗಳನ್ನು ನಾಶ ಮಾಡುವ ಔಷಧಗಳನ್ನು ತಯಾರಿಸುವ ಕಂಪೆನಿಗಳು ಹುಟ್ಟಿದ್ದು, ಆ ಕಂಪನಿಯಿಂದ ಅದೆಷ್ಟೋ ಸಾವಿರ ಜನ ಉದ್ಯೋಗಿಗಳಾಗಿ ಬದುಕನ್ನು ಕಟ್ಟಿಕೊಂಡಿರುವುದೂ ಕೂಡ ಅಷ್ಟೇ ವಾಸ್ತವ. ಅಂದಮೇಲೆ ಸಮಸ್ಯೆಯನ್ನು ಹೇಗೆ ತೆಗೆದುಕೊಳ್ಳಬೇಕು ಎಂಬ ವಿಚಾರ ನಿಮಗೇ ಬಿಟ್ಟದ್ದು..

Facebook ಕಾಮೆಂಟ್ಸ್

ಲೇಖಕರ ಕುರಿತು

Manu Vaidya

Hails from Sirsi and presently working at Snehakunja Trust, Ksarakod, Honnavar.

Hobby: Reading books, Writing poem, story, and articles. Writing a column named 'Mana-Dani’ in “Sirsi siri” news paper.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!