ಕಥೆ

ಸೆಳೆದೂ ಎಳೆದೊಯ್ಯಲಾಗದೇ…

“ಹರಯವೆನ್ನುವುದು ಮೀನಿನಷ್ಟೇ ಚುರುಕು, ಅಷ್ಟೇ ಚಂಚಲ ಕೂಡಎಂದು ಹಿಂದಿನ ದಿನ ಸಂಜೆ ಆಕ್ವೇರಿಯಂ ತಂದು ಜೋಡಿಸುವಾಗ ಅಪ್ಪ ಹೇಳಿದ್ದು ನೆನಪಾಗಿ ಸಣ್ಣದಾಗಿ ನಕ್ಕಳು ಮೇದಿನಿ. ಚಂದದ ಮೀನುಗಳು ತನ್ನ ಪ್ರತಿರೂಪವೆಂಬಂತೆ ಭಾಸವಾಯಿತು ಅವಳಿಗೆ. ಅತ್ತಿಂದಿತ್ತ ಈಜಾಡುತ್ತಲೇ ಇರುವ ಮೀನುಗಳು ತನ್ನನ್ನೂ ಚಂಚಲಗೊಳಿಸುತ್ತಿವೆ ಎಂಬ ಭ್ರಮೆ ಕಾಡತೊಡಗಿತು. “ನಿನ್ನೆ ಸಂಜೆ ಮನೆಗೆ ಆಕ್ವೇರಿಯಂ ಬಂದಾಗಿನಿಂದ ಪದೇ ಪದೇ ಹೋಗಿ ಮೀನುಗಳ ಓಡಾಟ ನೋಡುವುದೇ ಒಂದು ಆಟವಾಗಿಹೋಗಿದೆ ಹುಡುಗಿಗೆಎಂದು ಅಮ್ಮ ಅಣಕಿಸಿದ್ದೂ ಕೇಳಿಸಲಿಲ್ಲ ಅವಳಿಗೆ. ತನ್ನ ಚುರುಕುತನ ಬಗ್ಗೆ ಮನೆಯಲ್ಲಿ, ಕಾಲೇಜಿನಲ್ಲಿ, ಗೆಳತಿಯರ ಗುಂಪಿನಲ್ಲಿ ಹೊಗಳಿಕೆ ಆಗಾಗ ಕೇಳಿಸುತ್ತಲೇ ಇರುತ್ತದೆ; ಆದರೆ ತಾನೆಷ್ಟು ಚಂಚಲೆ ಎನ್ನುವುದನ್ನು ತಾನೇ ಅಳತೆ ಮಾಡಿಕೊಳ್ಳಬೇಕು ಎಂಬ ಯೋಚನೆಗೆ ತತ್ತರಿಸಿಹೋದಳು.

ಆಕ್ವೆರಿಯಂ ಒಳಗಿನ ಪ್ಲಾಸ್ಟಿಕ್ ಹೂವುಗಳು ಮೀನುಗಳ ಚಲನೆಗೆ ತೊನೆದು ತೊನೆದು ಒಂದು ಬಗೆಯ ಚಂದ ಮೂಡಿಸಿದರೂ, ತಳದ ಕಪ್ಪು ಕಲ್ಲುಗಳು ಮೀನುಗಳ ಬಣ್ಣಕ್ಕಾಗಲೀ ಹೂವುಗಳ ಬಣ್ಣಕ್ಕಾಗಲೀ ಸರಿಹೊಂದುತ್ತಿರಲಿಲ್ಲ. ಕಡಲ ತೀರದಿಂದ ಒಂದಷ್ಟು ಚಿಪ್ಪುಗಳನ್ನಾದರೂ ತಂದು ಅಲಂಕರಿಸಬೇಕೆಂಬ ಯೋಚನೆ ಬರುತ್ತಿದ್ದ ಹಾಗೆಯೇ, ಒಂದು ಪುಟ್ಟ ಚೀಲ ಹಿಡಿದು ಹೊರಟೇಬಿಟ್ಟಳು. ಮನೆಯ ಹಿಂದಿನ ತೆಂಗಿನ ತೋಟ ದಾಟಿ, ಕಚ್ಚಾ ರಸ್ತೆ ದಾಟಿ, ಕಿರಿದಾದ ದಿಬ್ಬವನ್ನು ಹತ್ತಿ ಇಳಿದರೆ ಮರಳಿನ ಮಹಾಪೂರ; ಮುಂದೆ ಒಂದನ್ನೊಂದು ಬೆನ್ನಟ್ಟಿ ಬರುವ ತೆರೆಗಳು. ಒಳಗೊಳಗೇ ಕಡೆದುಕೊಳ್ಳುವ ಸಮುದ್ರದ ನೀರು ಕಾದು ಆವಿಯಾಗುವುದಾದರೂ ಯಾವಾಗ ಎಂಬ ವಿಚಾರ ಅವಳಿಗ್ಯಾಕೋ ಬಂತು. ತಾನು ಬಂದ ಕೆಲಸವನ್ನೂ ಮರೆತು, ಕ್ಷಣಕಾಲಅರೆ, ಹೌದಲ್ಲ!” ಎಂಬ ಮುಖಮುದ್ರೆಯಲ್ಲಿ ನಿಂತಳು.

ತೀರದಲ್ಲಿ ಚಿಪ್ಪುಗಳು ಅಪರೂಪವೇ ಆದರೂ, ಹುಡುಕಿದರೆ ಒಂದಷ್ಟು ಸಿಗದೇ ಇರುವುದಿಲ್ಲ. ಅಷ್ಟಿಷ್ಟು ದೂರಕ್ಕೆ ಸಿಗುವ ಒಂದೊಂದೇ ಚಿಪ್ಪುಗಳನ್ನು ಆಯ್ದು ಚೀಲಕ್ಕೆ ತುಂಬಿಕೊಳ್ಳುತ್ತ ಹೋದಳು. ಒಂದಿಷ್ಟು ದೂರವಂತೂ ಏನೇನು ಸಿಗಲಿಲ್ಲ. ತಲೆಯನ್ನು ಆಡಿಸುತ್ತ ಹುಡುಕುತ್ತಿದ್ದವಳನ್ನು ಮುದುಕನೊಬ್ಬ ಸಿಕ್ಕು ವಿಚಾರಿಸಿದ.

ಏನನ್ನು ಹುಡುಕುತ್ತಿದ್ದಿಯಮ್ಮ?”

ಚಿಪ್ಪುಗಳನ್ನು ಹುಡುಕಿ ಆರಿಸಿಕೊಳ್ಳುತ್ತಿದ್ದೇನೇ

ಓಹ್! ಏನೋ ಬೆಲೆಬಾಳುವುದನ್ನು ಹುಡುಕುತ್ತಿದ್ದೀಯೇನೋ ಎಂದುಕೊಂಡೆ. ಚಿಪ್ಪುಗಳನ್ನು ಏನು ಮಾಡುತ್ತಿಯಾ?”

ಆಕ್ವೇರಿಯಂಗೆ ಹಾಕಿ ಅಲಂಕರಿಸುತ್ತೆನೆ

ಹೌದೇ!?” ಎಂದು ತಾನಿನ್ನು ಬರುತ್ತೇನೆ ಎಂಬಂತೆ ತಲೆ ಅಲ್ಲಾಡಿಸಿ ಹೊರಟುಹೋದ. ಮೇದಿನಿ ಮತ್ತೊಂದಷ್ಟು ಚಿಪ್ಪುಗಳನ್ನಾರಿಸಿಕೊಂಡು ಮನೆಗೆ ಬಂದಳು.

ಚಿಪ್ಪು ಹಾಕಿದ ಮೇಲೆ ಆಕ್ವೇರಿಯಂ ಮತ್ತಷ್ಟು ಚೆನ್ನಾಗಿ ಕಾಣಿಸಿ, ತುಂಬಾ ಹೊತ್ತು ನೋಡುತ್ತ ನಿಂತಳು. ಮಧ್ಯಾಹ್ನ ಊಟವಾದ ಮೇಲಿನ ಮಂಪರಿಗೆ ಇನ್ನೇನು ಹೋಗಿ ಮಲಗಬೇಕು ಎನ್ನುವಷ್ಟರಲ್ಲಿ, ಅಮ್ಮ ಬಂದುಒಂಟಿ ಓಲೆ ಹಾಕಿಕೊಳ್ಳುವ ಫ್ಯಾಶನ್ ಹುಡುಗಿಯರವರೆಗೂ ಬಂತಾ!” ಎಂದು ಹೇಳುತ್ತಿದ್ದಂತೆ ಅವಳ ಕೈಗಳು ಕಿವಿಯನ್ನು ಮುಟ್ಟಿ ನೋಡಿಕೊಂಡವು. ಎಡಗಡೆಯ ಕಿವಿ ಬೋಳಾಗಿತ್ತು. “ಅಯ್ಯೋ ಅಮ್ಮ, ವಜ್ರದ ಓಲೆ!” ಎಂಬ ಉದ್ಗಾರ ಹೊರಟಿತು.

ತಾಯಿ ಮಗಳು ಮನೆಯೆಲ್ಲಾ ಹುಡುಕಿದರೂ ಎಲ್ಲೂ ಕಳೆದ ಓಲೆ ಸಿಗಲಿಲ್ಲ. ತಾನು ಚಿಪ್ಪು ಆರಿಸಲು ಹೋದ ಹಾದಿಯಲ್ಲಿ ಹುಡುಕಿಕೊಂಡು ಬರುತ್ತೇನೆ ಎಂದು ಹೊರಟಳು. ಎರಡೆರಡು ಬಾರಿ ನೋಡಿ ಬಂದರೂ ಓಲೆ ಮಾತ್ರ ಸಿಗಲೇ ಇಲ್ಲ. ಹುಡುಕಿ ಹುಡುಕಿ ಸುಸ್ತಾಗಿ ಮನೆಗೆ ಬಂದು ಕುಳಿತಳು. ನೋಟ ಆಕ್ವೆರಿಯಂ ಕಡೆಗೆ ಹೋಯಿತು. ಮೀನಿನ ಕಣ್ಣು ತನ್ನ ಓಲೆಯಲ್ಲಿನ ವಜ್ರದಂತೆಯೇ ಹೊಳೆಯುತ್ತಿದೆ ಎನ್ನಿಸಿತು ಅವಳಿಗೆ. ಒಂದು ವರ್ಷದ ಹಿಂದಷ್ಟೇ ತೀರಿಹೋದ ಪ್ರೀತಿಯ ಅಜ್ಜಿ ತನ್ನೆಲ್ಲ ಆಭರಣಗಳನ್ನು ಮೇದಿನಿಗೆ ಹಾಕಿಸಿ ಕಣ್ತುಂಬ ನೋಡುತ್ತಲೇ ಕೊನೆಯುಸಿರೆಳೆದಿದ್ದಳು. ಆಭರಣಗಳಲ್ಲಿ ಓಲೆ ಅವಳಿಗೆ ತುಂಬಾ ಹಿಡಿಸಿತ್ತು. ಅಷ್ಟೊಂದು ಬೆಲೆಬಾಳುವ ಓಲೆ ಬೇಡವೆಂದರೂ ಹಟಮಾಡಿ ನಿತ್ಯವೂ ಅದನ್ನೇ ಹಾಕಿಕೊಳ್ಳುತ್ತಿದ್ದಳು. ಅತಿಯಾಗಿ ಮುದ್ದು ಮಾಡುತ್ತಿದ್ದ ಅಜ್ಜಿಯ ಮುಖ ನೆನಪಾಯಿತು ಅವಳಿಗೆ. ಸಣ್ಣದಾಗಿ ಅಳತೊಡಗಿದಳು.

ಅಜ್ಜಿಯ ನೆನಪುಗಳು ಉರುಳುರುಳಿ ಬಂದು ಮುಗಿಬೀಳತೊಡಗಿದವು. ಅಜ್ಜಿ ಸತ್ತ ಮೇಲೆ ತಾನು ಯಾರನ್ನು ಹಚ್ಚಿಕೊಂಡಿದ್ದೇನೆ ಎಂಬ ಬಗ್ಗೆ ಯೋಚಿಸಿದಾಗ ಸಮುದ್ರ ಕಣ್ಣೆದುರಿಗೆ ಬಂತು. ತೀರಕ್ಕೆ ಬಂದು ಮರಳಿನ ಮೇಲೆ ಕುಳಿತವಳಿಗೆ ಅಜ್ಜಿ ಹೇಳುತ್ತಿದ್ದ ಕಥೆಗಳು ನೆನಪಾದವು. ಕಾಲ್ಪನಿಕ ಕಥೆಗಳು ಅವಳಿಗ್ಯಾವಾಗಲೂ ನೈಜ ಘಟನೆಗಳಂತೆಯೇ ಅನ್ನಿಸುತ್ತಿದ್ದವು. ಅಜ್ಜಿ ಭೂತವಾಗಿಯಾದರೂ ಬಂದಿದ್ದರೆ ಚೆನ್ನಾಗಿರುತ್ತಿತ್ತು ತನ್ನ ಬೇಜಾರನ್ನು ಹೇಳಿ ಹಗುರಾಗಬಹುದಿತ್ತು ಎಂದು ಯೋಚಿಸಿದವಳು, ತನ್ನ ಓಲೆ ಎಲ್ಲಿ ಬಿದ್ದು ಕಳೆದಿದೆ ಎನ್ನುವುದು ಅಜ್ಜಿಯ ಆತ್ಮಕ್ಕೆ ಕಾಣಿಸುತ್ತಿರಬಹುದೇನೋ ಎಂದುಕೊಂಡಳು.

ಕೈಗಳು ಕಿವಿಯನ್ನು ಮುಟ್ಟಿ ಮುಟ್ಟಿ ಓಲೆ ಕಳೆದುಹೋದುದನ್ನು ಸಾರುತ್ತಿದ್ದವು. ತಾನು ಓಲೆಯನ್ನು ಯಾಕಾದರೂ ಹಟಮಾಡಿ ಹಾಕಿಕೊಂಡೆನೋ ಕಳೆದು ಹಾಕಲಿಕ್ಕೆ ಎಂದು ಬೈದುಕೊಂಡಳು. ತಾನು ದುಃಖಿಸುತ್ತಿರುವುದು ಅಜ್ಜಿಯ ಮೇಲಿನ ಪ್ರೀತಿಗೋ, ಓಲೆಯ ಮೇಲಿನ ಪ್ರೀತಿಗೋ ಎಂಬುದು ಸ್ಪಷ್ಟವಾಗದೆ ಒಂದು ಬಗೆಯ ಚಡಪಡಿಕೆಯಾಯಿತು. ಬಲಗಿವಿಯಿಂದ ಒಲೆಯನ್ನು ತೆಗೆದು ಕೈಯ್ಯಲ್ಲಿ ಹಿಡಿದರೆ, ಆಕಾಶದಿಂದ ಸುರಿಯುತ್ತಿರುವ ಮತ್ತು ಸಮುದ್ರದಿಂದ ಉಕ್ಕುತ್ತಿರುವ ಕಿತ್ತಳೆ ಬಣ್ಣದ ಬೆಳಕಿನಿಂದಾಗಿ ಓಲೆಯ ಹರಳು ಮಿನುಗಿ ಕಣ್ಕುಕ್ಕಿತು.

ಸೂರ್ಯಾಸ್ತವಾದೊಡನೆ ಅಜ್ಜಿ ಚಪ್ಪಾಳೆ ತಟ್ಟಿ ಕೇಕೆ ಹಾಕಿ ಖುಷಿಪಡುತ್ತಿದ್ದಳು. ಅವಳ ನಡೆಯನ್ನು ಚಿಕ್ಕಂದಿನಿಂದ ನೋಡಿದ್ದವಳಿಗೆ ಅದರಲ್ಲೇನೂ ಆಭಾಸವಾಗಲೀ, ವಿಶೇಷವಾಗಲೀ ಕಾಣಿಸುತ್ತಿರಲಿಲ್ಲ. ಅಜ್ಜಿಯ ಸಂತೋಷಕ್ಕೆ ಕಾರಣ ಹೀಗಿತ್ತು – ‘ಆಸೆಗಳೇ ಜೀವನದ ಎಲ್ಲಾ ಸೌಂದರ್ಯಗಳಿಗೂ, ಅವಗಡಗಳಿಗೂ ಕಾರಣಗಳು. ನಮ್ಮಂಥ ಸಾಮಾನ್ಯರಿಗೆಲ್ಲಿ ಆಸೆಯನ್ನು ಗೆಲ್ಲಲು ಸಾಧ್ಯ? ಆಸೆಯೆಂಬುದು ಸಾವಿನಲ್ಲೇ ಕೊನೆಗೊಳ್ಳುವ ಸತ್ಯ. ಆಸೆಬುರುಕ ಜೀವನದಲ್ಲಿ ಒಂದು ದಿನ ಮುಗಿದರೂ ಸಾವು ಅಷ್ಟೇ ಹತ್ತಿರಕ್ಕೆ ಬರುತ್ತದೆ; ಅಷ್ಟಕ್ಕೇ ಖುಷಿಪಡಬೇಕಷ್ಟೇ!’ ಅಜ್ಜಿಯ ಮಾತುಗಳು ಇಲ್ಲಿಯವರೆಗೆ ಅರ್ಥವೇ ಆಗಿರಲಿಲ್ಲ. ಹೌದು ಎಲ್ಲಾ ಸಂತೊಷಗಳಿಗೂ, ದುಃಖಗಳಿಗೂ ಆಸೆಗಳೇ ಕಾರಣವೆಂಬುದು ಜ್ಞಾನೋದಯವಾದಂತೆ ಪುಟಿದೆದ್ದು ನಿಂತಳು. ಉಕ್ಕಿ ಬರುವ ತೆರೆಗಳ ಕಡೆಗೆ ನಡೆದು ಹೊರಟಳು. ತೆರೆಗಳು ಅವಳನ್ನು ಸೊಂಟದವರೆಗೆ ಸುತ್ತುವರಿದು ಸೆಳೆದೂ ಎಳೆದೊಯ್ಯಲಾಗದೇ ಹಿಂತಿರುಗಿ ಹೋದವು. ಹೋಗುವಾಗ ಅವಳ ಕೈಲಿದ್ದ ಓಲೆಯನ್ನು ಕೊಂಡೊಯ್ದವು. ಜೀವನದಲ್ಲೇನೋ ಗೆದ್ದ ಸಮಾಧಾನ ಅವಳನ್ನು ಆವರಿಸಿತು. ತನ್ನ ಬಗ್ಗೆಯೇ ಹೆಮ್ಮೆ ಮೂಡಿತು ಅವಳಿಗೆ. ಸೂರ್ಯ ಪಶ್ಚಿಮ ಸಮುದ್ರದೊಳಗೆ ಬಿದ್ದಾಗಿತ್ತು;ಕತ್ತಲೆ ಕವಿಯಲು ಬಹಳ ಹೊತ್ತಿರಲಿಲ್ಲ. ಪೂರ್ವದ ಕಡೆಗೆ ಮುಖಮಾಡಿ ಹೊರಟವಳಿಗೆ ಮೋಹವನ್ನು ಕಳಚಿಕೊಂಡೆ ಎಂಬ ಭಾವನೆಗೆ ತನ್ನ ಮುಖ ಬೆಳಗುತ್ತಿದೆಯೇನೋ ಎಂಬ ಭ್ರಮೆ ಹೊಸ ಹುರುಪನ್ನು ಕೊಟ್ಟಿತು. ಮನಸ್ಸಿನೊಳಗೇ ಕುಣಿದು ಕುಪ್ಪಳಿಸುತ್ತ ಮನೆಯ ಹಾದಿ ಹಿಡಿದಳು.

ಮನೆಯನ್ನು ಪ್ರವೇಶಿಸುತ್ತಿದ್ದಂತೆ ಎದುರಿಗೆ ಸಿಕ್ಕ ಅಪ್ಪನ ಮೈ ಕೈ ಎಲ್ಲಾ ಪುಟ್ಟ ಪುಟ್ಟ ಗಾಯಗಳಾಗಿರುವುದು ಗಮನಕ್ಕೆ ಬಂದು ಗಾಬರಿಯಾದಳು. ಅಪ್ಪನೇ ಹೇಳಿಕೊಂಡ

ಸಣ್ಣ ಆಕ್ಸಿಡೆಂಟ್

ಅಯ್ಯೋ ದೇವರೇ!”

ಜಾಸ್ತಿಯೇನೂ ಆಗಿಲ್ಲ. ಗ್ರಹಚಾರ! ಇಷ್ಟಕ್ಕೇ ಮುಗಿಯಿತು ಎಂದುಕೊಳ್ಳಬೇಕುಎಂದವನು ಮಾತು ಮುಂದುವರಿಸಿದನೀನು ಅಜ್ಜಿ ಕೊಟ್ಟಿದ್ದ ಓಲೆಯನ್ನು ಕಳೆದುಕೊಂಡೆಯಂತೆ? ನನಗೂ ಹೀಗಾಗಿ ಹೋಯಿತು ನೋಡು. ಆಕ್ವೇರಿಯಂ ತಂದಮೇಲೆ ಯಾಕೋ ಏನೂ ಸರಿಯಿಲ್ಲ ಎನ್ನಿಸುತ್ತಿದೆ. ಯಾವತ್ತೂ ಪ್ರಾಣಿ ಪಕ್ಷಿಗಳನ್ನು ಬಂಧಿಸಿಟ್ಟು ನೋಡಿ ಖುಷಿಪಟ್ಟವರಲ್ಲ ನಾವು. ಹಾಗೆ ಮಾಡಿದರೆ ಒಳ್ಳೆಯದಾಗುವುದಿಲ್ಲ ನಮಗೆ. ಅವು ಸಿಹಿನೀರಿನ ಮೀನುಗಳಂತೆ. ಪಕ್ಕದ ಕೆರೆಗೆ ಬಿಟ್ಟು ಬರುತ್ತೇನೆಎಂದು ಹೇಳಿ, ಒಂದು ಬಕೀಟಿಗೆ ಮೀನುಗಳ ಸಮೇತವಾಗಿ ಆಕ್ವೇರಿಯಂ ನೀರನ್ನು ಸುರಿದು ಹಿಡಿದು ಹೊರಟ.

ಮಾರನೆಯ ದಿನ ಬೆಳಿಗ್ಗೆ ಅಪ್ಪ ಮೇದಿನಿಗೆ ಹೇಳಿದಪುಟ್ಟಿ, ಆಕ್ವೇರಿಯಂನಲ್ಲಿರೋ ಕಲ್ಲು ಮತ್ತು ಚಿಪ್ಪುಗಳನ್ನು ತೆಗೆದು ಹೂಕುಂಡದ ಬುಡಕ್ಕೆ ಹಾಕಿ ಅಲಂಕರಿಸು. ಚೆನ್ನಾಗಿ ಕಾಣಬಹುದು.” ಅವಳಿಗೂ ರಜೆಯ ದಿನಗಳಲ್ಲಿ ಹೊತ್ತು ಕಳೆಯಲು ಏನಾದರೂ ಬೇಕಿತ್ತು. ಆಕ್ವೇರಿಯಂನ್ನು ಹೊರಗೆ ತಂದಿಟ್ಟುಕೊಂಡು, ಕಲ್ಲು ಮತ್ತು ಚಿಪ್ಪುಗಳನ್ನು ಮುಷ್ಟಿಯಲ್ಲಿ ಹಿಡಿದು ಹೂ ಕುಂಡಗಳ ಬುಡಕ್ಕೆ ಹಾಕತೊಡಗಿದಳು. ಹೀಗೇ ಹಾಕುತ್ತ ಹಾಕುತ್ತ, ಒಮ್ಮೆ ಏನೋ ಹೊಳೆದಂತೆನ್ನಿಸಿ ಗ್ರಹಿಸಿ ನೋಡಿದಳು. “ಅರೆ ಓಲೆ!” ಎಂದು ಪೆಚ್ಚಾಗಿ ಓಲೆಯನ್ನೆತ್ತಿಕೊಂಡು ನೋಡುತ್ತ ನಿಂತುಬಿಟ್ಟಳು. ಒಳಗಿನಿಂದ ಅಮ್ಮ ಬಂದವಳುಅಯ್ಯೋ, ಇನ್ನೂ ಓಲೆ ಹಿಡಿದುಕೊಂಡು ನೊಡುತ್ತಾ ಕಣ್ಣೀರು ಹಾಕುತ್ತಿದ್ದೀಯಾ? ಕೊಡು ಇಲ್ಲಿ. ಅಕ್ಕಸಾಲಿಗನಿಗೆ ಇನ್ನೊಂದು ಮಾಡಿಸಿಕೊಡಲು ಕೇಳಿ ನೋಡೋಣಎಂದು ಹೇಳಿ ಎದುರಿಗೆ ಬಂದ ಅಪ್ಪನೊಡನೆ ಮಾತಾಡಲು ತೊಡಗಿದ್ದು ಮೇದಿನಿಗೆ ಗೊತ್ತಾದರೂ, ಸಮುದ್ರದ ಭೋರ್ಗರೆತ ಕಿವಿಯೊಳಗೇ ಹೊಕ್ಕಂತಾಗಿ ಏನೇನೂ ಕೇಳಿಸಲಿಲ್ಲ.

Facebook ಕಾಮೆಂಟ್ಸ್

ಲೇಖಕರ ಕುರಿತು

ಶ್ರೀಕಲಾ ಹೆಗಡೆ ಕಂಬ್ಳಿಸರ

ಹುಟ್ಟಿದ್ದು, ಬೆಳೆದದ್ದು ಸಿರಸಿಯ ಪುಟ್ಟ ಹಳ್ಳಿಯೊಂದರಲ್ಲಿ.
ಓದಿದ್ದು ವಾಣಿಜ್ಯಶಾಸ್ತ್ರ. ಐದು ವರ್ಷಗಳು ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡಿದ ಅನುಭವ. ಈಗ ಗೃಹಿಣಿಯಾಗಿದ್ದು, ಬರವಣಿಗೆ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!