ಬದುಕಿನ ಹೊಸ ತಿರುವಿನಲ್ಲಿ ನಿಂತಿದ್ದೇನೆ. ಇದು ಅವನಿಲ್ಲದ ತಿರುವು. ಇಂತಹದ್ದೊಂದು ತಿರುವು ಇರಬಹುದೆಂಬ ಸೂಚನೆಯನ್ನೂ ಕೊಡದೆ ಎದುರಾದ ತಿರುವು. ತಿರುವಲಿ ದೇವರೇ ಎದುರಾದರೆ ಅದು ಪ್ರೇಮವಂತೆ. ಆದರೆ ದೇವರೆ ಕಳೆದು ಹೋಗುವ ತಿರುವು ಎದುರಾದರೆ? ಅದಕ್ಕೇನು ಹೆಸರಿಡಲಿ?
ನಾನು ಮತ್ತು ದುಶ್ಯಂತ್ ದೂರದ ಸಂಬಂಧಿಗಳು. ಸಂಬಂಧ ದೂರದ್ದಾದರೂ ಮನೆಗಳು ಸಮೀಪದಲ್ಲಿದ್ದವು. ಮೊದಲಿಂದಲೂ ಜೊತೆಯಲ್ಲೆ ಬೆಳೆದವರು. ಒಂದೇ ಶಾಲೆ, ಒಂದೇ ಕಾಲೇಜುಗಳಲ್ಲಿ ಕಲಿತವರು. ಅವನು ತುಂಬಾ ಒಳ್ಳೆಯ ಹುಡುಗ. ಎಲ್ಲರೂ ಅವನ ಸ್ನೇಹ ಬಯಸುವವರೇ. ಹಾಗೆಯೇ ನಾನೂ ಕೂಡ. ನಮ್ಮದೇ ಪರಿವಾರದವನು ಎಂಬ ಕೊಂಚ ಜಾಸ್ತಿ ಸಲಿಗೆ ನನಗೂ, ಅವನಿಗೂ. ನಮ್ಮ ಪಿ.ಯು.ಸಿ. ಮುಗಿಯುವ ಸಮಯ. ಬಿ.ಇ. ಎಂಬ ಉದ್ಯೋಗ ಕೊಡಿಸುವ ಕಾರ್ಖಾನೆಯತ್ತ ಬದುಕು ದಾಪುಗಾಲಿಡಲಾರಂಭಿಸಿತು. ಜೊತೆಯಲ್ಲೆ ಬೆಳೆದ ನನಗೂ ದುಶ್ಯಂತ್ ಗೂ ಏನೋ ತಳಮಳ. ಹಾಗೆ ಒಂದಷ್ಟು ದಿನ ಕಳೆದವು. ತಳಮಳ ಮಾತ್ರ ತಣ್ಣಗಾಗಲಿಲ್ಲ. ಇಬ್ಬರಿಗೂ ಬೇರೆ ಬೇರೆ ಕಾಲೇಜುಗಳಲ್ಲಿ ಸೀಟ್ ಸಿಕ್ಕಿತು. ಕೊನೆಗೂ ದಿನವೂ ಒಬ್ಬರನ್ನೊಬ್ಬರು ಭೇಟಿ ಮಾಡಲಾಗದು ಎಂಬ ಕಟುಸತ್ಯಕ್ಕೆ ಸಿ.ಇ..ಟಿ. ಬೋರ್ಡ್ ಅನುಮೋದನೆ ನೀಡಿತು. ಕಣ್ಣಂಚು ನೆನೆದದ್ದು ಇಂಜಿನಿಯರಿಂಗ್ ಸೀಟು ಸಿಕ್ಕಿತೆನ್ನುವ ಖುಷಿಗೋ? ದುಷ್ಯಂತ್ ನ ಸನಿಹ ಸಿಗದೇ ಹೋಗುವ ದುಃಖಕ್ಕೋ? ಅರಿವಾಗಲಿಲ್ಲ.
ಹೀಗೆ ಇನ್ನೊಂದೆರಡು ದಿನ ಕಳೆಯಿತು. ತೊಳಲಾಟ ಮಾತ್ರ ನಿಲ್ಲಲಿಲ್ಲ. ಕೊನೆಗೆ ಭೇಟಿಯಾಗುವ ನಿರ್ಧಾರವಾಯ್ತು. ಇಬ್ಬರಿಗೂ ಪರಸ್ಪರ ಹೇಳುವ ಮೊದಲೇ ಭೇಟಿಯ ಕಾರಣ ಅರಿವಿರುವಂತಹ ಭಾವ. ಅವನೇ ಮಾತು ಆರಂಭಿಸಿದ “ಹೇಳು, ಎಂಥ ಮಾಡುವ?”. “ನನ್ನ ಮದುವೆ ಆಗ್ತೀಯಾ?” ನೇರವಾಗೇ ಕೇಳಿಬಿಟ್ಟೆ. ಬಹುಶಃ ಇಷ್ಟು ದಿನದಿಂದ ಮನದಲ್ಲಿ ನಡೆಯುತ್ತಿದ್ದ ಗೊಂದಲ ವಿಷಯವನ್ನು ಇನ್ನಷ್ಟು ಮುಂದುವರಿಸಲು ಬಿಡಲಿಲ್ಲ. ಅವನ ಮುಖ ಖುಷಿಯಲ್ಲಿ ಅರಳಿತು. “ಸರಿ” ಅಂತಷ್ಟೇ ಹೇಳಿದ. “ನಾನೂ ಇದನ್ನೇ ಹೇಳಬೇಕೆಂದಿದ್ದೆ” ಅಂತೆಲ್ಲ ಡೈಲಾಗ್ ಹೇಳದೇ ಮೌನವನ್ನ ಇನ್ನಷ್ಟು ಚಂದವಾಗಿಸಿದ. ಅಂತೂ ನಮ್ಮ ನಿರ್ಧಾರ ಗಟ್ಟಿಮಾಡಿ ಬೀಳ್ಕೊಟ್ಟೆವು.
ಇನ್ನು ಮುಂದಿನದು ಮನೆಯವರಿಗೆ ವಿಷಯ ತಿಳಿಸುವುದು. ಆದಷ್ಟು ಬೇಗ ತಿಳಿಸಬೇಕೆಂಬುದು ನಮ್ಮಿಬ್ಬರ ಇಂಗಿತವಾಗಿತ್ತು. ಅಂತೆಯೇ ಅದೇ ಭಾನುವಾರ ಹೇಳಬೇಕೆನ್ನುವ ನಿಶ್ಚಯ ಮಾಡಿದೆವು. ಅವನು ಅವನ ಮನೆಯಲ್ಲಿ ಮೊದಲು ತಿಳಿಸಿ, ನಂತರ ನಮ್ಮ ಮನೆಗೆ ಬರುವುದು ಎಂದು ನಿರ್ಧಾರವಾಯ್ತು. ಮಧ್ಯಾಹ್ನ ಊಟದ ನಂತರ ಅದೇನೋ ಕಂಪನ. ದುಪಟ್ಟಾದ ಅಂಚನ್ನು ಅಲಂಕರಿಸಿದ್ದ ಜರಿನೂಲುಗಳು ಒಂದೊಂದಾಗಿ ಹೊರಬರತೊಡಗಿದವು, ದುಷ್ಯಂತ್ ಬಂದನೋ ಎಂದು ನೋಡಲೋ ಎನ್ನುವಂತೆ.
ಸುಮಾರು 4:30ಕ್ಕೆ ಬಂದ. ನನಗೋ ಎದೆಬಡಿತಕ್ಕೆ ಎಕ್ಸಲೇಟರ್ ನಿಂದ ಬಡಿತದ ವೇಗ ಹೆಚ್ಚಿಸಿದ ಅನುಭವ. ಅವನನ್ನು ಕಂಡ ಅಮ್ಮ “ಶಶಿ… ದುಷ್ಯಂತ ಬಂದ ನೋಡು…” ಅಂದಳು. “ಹಾ ಅಮ್ಮ ಬಂದೆ…” ಎಂದು ಸಹಜವಾಗೇ ಉತ್ತರಿಸಿದೆ. ಬಂದವನು ನಮ್ಮ ಹಳೆಯ ಮರದ ಕುರ್ಚಿಯೊಂದರಲ್ಲಿ ಕೂತ. ಒಂದೆರಡು ನಿಮಿಷಗಳಲ್ಲಿ ಅವರ ಅಪ್ಪ ಹಾಗೂ ಅಮ್ಮ ಸಹ ಬಂದರು. ಅವರ ಮುಖದಲ್ಲಿ ಅಸಹಜವಾದ ಭಾವಗಳೇನೂ ಕಾಣಿಸಲಿಲ್ಲ, ಆದಕಾರಣ ಅವರ ಒಪ್ಪಿಗೆ ಸಿಕ್ಕಿರಬಹುದೆಂಬ ಊಹೆಗೆ ಮನಸ್ಸು ಮುಂದಾಯಿತು.
“ಅರೆ, ಇದೆಂಥ ಆಶ್ಚರ್ಯ ಮಾರ್ರೆ ಕುಟುಂಬ ಸಮೇತ ಬಂದಿದ್ರಿಯಲಾ? ಮಗನಿಗೆ ಎಂಜಿನಿಯರಿಂಗ್ ಸೀಟಾದದ್ದೇ, ಮದುವೆ ಗಿದುವೆ ಗೊತ್ತು ಮಾಡಿದ್ರಿಯಾ ಹೇಗೆ?” ಎಂದರು ನಮ್ಮ ತಂದೆ. ಅವರೆಲ್ಲ ಒಮ್ಮೆ ಮುಖ ಮುಖ ನೋಡಿಕೊಂಡ್ರು. ದುಷ್ಯಂತ್ ನನ್ನತ್ತ ದಿಟ್ಟಿಸಿದ. ನಾನು ಕಣ್ ಸನ್ನೆಯಲ್ಲೇ “ನಾನೆಂತ ಸಹ ಹೇಳಲಿಲ್ಲ ಮಾರಾಯಾ…” ಅಂದೆ. ಅವನು ಕೂಡ “ಸರಿ ಸರಿ” ಎನ್ನುವಂತೆ ಸನ್ನೆ ಮಾಡಿದ. ಈ ಕಣ್ ಸನ್ನೆಗಿಂತ ಬೇರೆ ಚಂದದ ಭಾಷೆ ಇರಲಿಕ್ಕಿಲ್ಲ ಅನ್ನಿಸಿತು ಆ ಕ್ಷಣಕ್ಕೆ. ಅರೆಕ್ಷಣದಲ್ಲಿ “ಸುಮ್ಮನಿರು ಮಾರಾಯ್ತಿ, ಇಲ್ಲಿ ವಿಷಯ ಬೇರೆಯೇ ಉಂಟು. ನಿಂಗೆ ಈಗ ಯಾವ ಭಾಷೆ ಚಂದ ಎಂಬ ಜಿಜ್ಞಾಸೆ ಬೇಕಾ?” ಎಂದು ನನ್ನೊಳಗೇ ಯಾರೋ ಬೈದ ಹಾಗಾಯ್ತು; ವಾಸ್ತವತೆಗೆ ಮರಳಿ ತಲೆಗೊಮ್ಮೆ ಮೊಟಕಿಕೊಂಡೆ.
“ಮದುವೆ ಮಾಡುದಿಲ್ಲ ಹುಡುಗಿ ಗೊತ್ತುಮಾಡುವ ಅಂತ ಬಂದದ್ದು” ಅಂತ ದುಷ್ಯಂತ್ ನ ಅಪ್ಪ ಉತ್ತರಿಸಿದರು. ನಮ್ಮ ಅಪ್ಪನ ಮೊಗದಲ್ಲಿ ಸಹಜ ಅತಂಕ. ದುಷ್ಯಂತ್ ಅಪ್ಪ ಮಾತು ಮುಂದುವರಿಸಿದರು. “ನನ್ನ ಮಗ ನಿಮ್ಮ ಮಗಳು ಶಶಿಯನ್ನ ಇಷ್ಟಪಡ್ತಿದ್ದಾನಂತೆ. ನಮಗೂ ಇವತ್ತೇ ವಿಷಯ ಗೊತ್ತಾದದ್ದು. ನೀವೂ ಒಪ್ಪಿದರೆ ಇಬ್ಬರಿಗೂ ಜೋಡಿ ಮಾಡುವ ಅಂತ ನಮ್ಮ ಇಂಗಿತ. ನಮ್ಮ ಮಗ ಈವತ್ತು ವಿಷಯ ಪ್ರಸ್ತಾಪ ಮಾಡಿದ. ನಮಗೆ ಒಳ್ಳೆ ಹುಡುಗಿ, ಯಾಕಾಗಬಾರದು ಅನ್ನಿಸಿತು, ನಿಮಗೂ ಒಪ್ಪಿಗೆ ಇದ್ದರೆ…” ಎಂದು ಅರ್ಧವಿರಾಮ ಹಾಕಿದರು. ಈ ಅಚಾನಕ್ ನೆಂಟಸ್ತಿಕೆಯ ಪ್ರಸ್ತಾಪ ನಮ್ಮ ಅಪ್ಪ ಅಮ್ಮನ ಬಾಯಿ ಕಟ್ಟಿ ಹಾಕಿದಂತಿತ್ತು. ಇಂಥದೊಂದು ಸಂದರ್ಭ ಬರಬಹುದೆಂಬ ಕಲ್ಪನೆಯೂ ಇರಲಿಲ್ಲ ಅವರಿಗೆ. ಒಂದಷ್ಟು ಹೊತ್ತು ಯಾರೂ ಮಾತಾಡಲಿಲ್ಲ. ಆಮೇಲೆ, ದುಷ್ಯಂತ್’ನ ಅಪ್ಪನೇ ಮಾತು ಮುಂದುವರೆಸಿದರು. “ನೋಡಿ, ನಮ್ಮ ಮಗ ಇನ್ನೂ ಕಲಿಯುವುದಿದೆ, ಇನ್ನೂ ಒಂದು ನೆಲೆ ಕಂಡುಕೊಂಡಿಲ್ಲ, ಇಷ್ಟು ಆತುರವಾಗಿ ಹೇಗೆ ನಿರ್ಧಾರ ಮಾಡುವುದು ಎಂಬಿತ್ಯಾದಿ ಯೋಚನೆಗಳು ನಿಮ್ಮದಿರಬಹುದು. ನಮಗೂ ಅನ್ನಿಸಿತು. ಆದರೆ ನನ್ನ ಮಗನ ಬಗ್ಗೆ ನಂಬಿಕೆ ಇದೆ. ಅದೂ ಅಲ್ಲದೇ ನಾವು ಒಪ್ಪಿಗೆ ಸೂಚಿಸುವ ಮುನ್ನ “ನಿಮ್ಮ ನಿಮ್ಮ ಭವಿಷ್ಯ ಭದ್ರವಾದ ಖಚಿತತೆಯ ನಂತರ ಮಾತ್ರ ನಮ್ನ ಸಮ್ಮತಿಗೆ ಬೆಲೆ ಬರುತ್ತದೆ ಎಂಬ ಖಡಾಖಂಡಿತವಾದ ಶರತ್ತನ್ನು ಹಾಕಿದ್ದೇವೆ. ಹಾಗಾಗಿ ಇದಕ್ಕೆ ಹೊರತಾಗಿ ನಡೆದರೆ ಅವರೇ ಜವಾಬ್ದಾರಿ. ಅದಕ್ಕೆ ಈ ಇಬ್ಬರೂ ಮಕ್ಕಳು ಅವಕಾಶ ಕೊಡಲಾರರು ಎಂಬುದು ನಮ್ಮ ಭರವಸೆ” ಎಂದರು. ಇಷ್ಟೆಲ್ಲ ಕೇಳಿದ ಮೇಲೆ ಒಂದು ದೀರ್ಘ ನಿಟ್ಚುಸಿರು ಬಿಟ್ಟ ಅಪ್ಪ ಅಮ್ಮನ ಮುಖ ನೋಡಿದರು. ಅಮ್ಮ ಅಪ್ಪ ಇಬ್ಬರೂ ಒಳಗೆ ನಡೆದರು. ಹಿಂಬಾಲಿಸುವ ಮವಸ್ಸಾಯಿತು, ಆದರೂ ಅದೇನೋ ಗೊಂದಲ. ಹೋಗಲಿಲ್ಲ. ಸ್ವಲ್ಪ ಸಮಯದ ನಂತರ ಇಬ್ಬರೂ ಹೊರಬಂದರು. ನೋಡನೋಡುತ್ತಲೇ ತಮ್ಮ ಒಪ್ಪಿಗೆಯನ್ನು ಸಹ ಸೂಚಿಸಿದರು. ಇದೇನು ಕನಸೋ ನನಸೋ ಅರಿವಾಗಲಿಲ್ಲ. ಸಾವಿರಗಟ್ಟಲೆ ಸಿನಿಮಾಗಳು ಈ ಪ್ರೀತಿ ಮಾಡಿ ಒದ್ದಾಡಿರುವವರ, ವಿರೋಧಗಳ ನಡುವೆ ಒಂದಾಗಿರುವವರ ಕುರಿತಾಗಿಯೇ ನೋಡಿದ್ದ ನಾವು ಇಷ್ಟು ಸಲೀಸಿನ ಒಪ್ಪಿಗೆಯನ್ನ ಖಂಡಿತ ನಿರೀಕ್ಷಿಸಿರಲಿಲ್ಲ.
ಅಂತೂ ನವಪ್ರೇಮಿಗಳಾಗಿ ನಮ್ಮ ಇಂಜಿನಿಯರಿಂಗ್ ಕಲಿಕೆಯ ಬದುಕು ಆರಂಭವಾಯಿತು. ನನ್ನದು ಮಲೆನಾಡಿನ ಮಡಿಲ ಹಾಸನವಾದರೆ ಅವನದ್ದು ಉದ್ಯಾನನಗರಿ ಬೆಂಗಳೂರು. ಆದರೇನು ಮೊಬೈಲ್ ಎಂಬ ಆಧುನಿಕ ಪಾರಿವಾಳ ಇರುವಾಗ ದೂರವೆಲ್ಲ ಸನಿಹವೇ. ಅದೂ ಮನೆಯವರು ಕೂಡ ಒಪ್ಪಿರುವ ಪ್ರೇಮಕ್ಕೆ ತಡೆ ಯಾವುದಿದೆ. ವಾಟ್ಸಾಪ್ ಗೋಡೆಗಳ ಮೇಲೆ ಚಿತ್ತಾರಗಳು ಆರಂಭವಾದವು. ಅದೊಂತರಾ ಹೇಳಿ ತೀರದ ಸಂಭ್ರಮ. ಇವೆಲ್ಲದರ ಜೊತೆ ಜೊತೆಗೆ ಅಸೈನ್ಮೆಂಟ್’ಗಳು, ಟೆಸ್ಟ್’ಗಳು ಕೂಡ ಆರಂಭ. ನನ್ನದು ಐ.ಎಸ್. ಬ್ರಾಂಚ್; C, C++, JAVA, UNIX, HTML ಎಂಬೆಲ್ಲ ಹೊಸ ಹೊಸ ಲಿಪಿಗಳು ಬದುಕನ್ನು ಪ್ರವೇಶಿಸಿದವು. ತಮಿಳು, ತೆಲುಗು ಯಾವ ಭಾಷೆಯೂ ಬರದ ನನಗೆ ಆ ಒಂದಿಷ್ಟು ಭಾಷೆಗಳ ಪರಿಚಯವಾಗಿ ನನಗೂ ಒಂದಕ್ಕಿಂತ ಹೆಚ್ಚು ಭಾಷೆ ಬರ್ತದೆ ಎನ್ನುವಂತಾಯಿತು . ಹೀಗೆ ದಿನಗಳು ಕಳೆದವು. ಒಂದು ಸೆಮಿಸ್ಟರ್ ಮುಗಿದು ಊರಿಗೆ ತಲುಪಿದೆವು. ತುಂಬಾ ದಿನಗಳ ನಂಚರ ಅವನ ಮುಖತಃ ಭೇಟಿ. ಭಾವತೀವ್ರತೆ ಅತಿಯಾಗಿ ಮೌನದ ಅಪ್ಪುಗೆಯಲ್ಲಿ ಸಾಂತ್ವನಗೊಂಡಿತು. ಆಮೇಲೆ ಒಂದಿಷ್ಟು ಮಾತುಕತೆಗಳು, ಸುತ್ತಾಟಗಳು, ಕೀಟಲೆಗಳು ನಡೆದವು. ನಮ್ಮ ಚಿಕ್ಕಂದಿನಿಂದ ನಡೆದ ಎಲ್ಲ ಭೇಟಿಗಳಿಗಿಂತ ಇದು ಭಿನ್ನವಾಗಿತ್ತು. ಹರೆಯದ ಚಿಗುರು ಬಯಕೆಗಳು ಇನ್ನಿಲ್ಲದ ಸಂತೋಷವನ್ನು ತಂದಿದ್ದವು. ಅವನ ಜೊತೆ ಮಾತಾಡುವುದನ್ನು ನಿಲ್ಲಿಸಲೇ ಮನಸಿರಲಿಲ್ಲ. ಮತ್ತೆ ಹಾಸನಕ್ಕೆ ಹೋಗಬೇಕಲ್ಲ ಎನ್ನುವ ಆಲೋಚನೆಯೇ ಅಳು ಬರಿಸುವಂತಾಗುತ್ತಿತ್ತು. ಆದರೆ ಅನಿವಾರ್ಯ. ಹೇಗೂ ಜೀವನ ಪರ್ಯಂತ ಜೊತೆಗಿರುವವರಲ್ಲವೇ ಎಂಬ ಸಮಾಧಾನ ತಂದುಕೊಂಡು ದಿನ ದೂಡುತ್ತಿದ್ದೆ. ಮತ್ತೆ ಕಾಲೇಜ್ ಆರಂಭವಾಯಿತು. ಮತ್ತದೇ ಜಂಗಮ ವಾಣಿಯ ಸಾಂಗತ್ಯ ನಮ್ಮ ಪ್ರೀತಿಗೆ.
ಹೀಗೆ ಕಳೆದೇ ಹೋದವು ನಾಲ್ಕು ವರ್ಷಗಳು. ಈ ನಡುವೆ ನಾವು ಮೂರನೇ ವರ್ಷದಲ್ಲಿರುವಾಗ ದುಷ್ಯಂತ್ ತಂದೆಯವರ ಮೂಲ ಸ್ಥಳದ ವ್ಯಾಜ್ಯದಲ್ಲಿದ್ದ ಒಂದಿಷ್ಟು ಎಕರೆ ಜಾಗ ಇವರ ಪಾಲಿಗೆ ದಕ್ಕಿತು. ಅವರು ತಾವಿದ್ದ ಮನೆಯ ಜಾಗವನ್ನು ಮಾರಾಟ ಮಾಡಿ, ಮೂಲಸ್ಥಳದಲ್ಲಿ ಮನೆ ಕಟ್ಟಲು ಆರಂಭಿಸಿದರು. ಹಾಗಾಗಿ ಕೊನೆಯ ಬಾರಿಯ ರಜೆಯಲ್ಲಿ ದುಷ್ಯಂತ್’ನನ್ನು ಭೇಟಿಮಾಡಲಾಗಲಿಲ್ಲ. ಈಗ ನಾಲ್ಕನೇ ವರ್ಷ ಮುಗಿದಿದೆ. ನನಗೆ ಒಂದು ಕಂಪನಿಯಲ್ಲಿ ಕೆಲಸ ಆಗಿದೆ, ಅವನಿಗೂ ಕೂಡ. ಅವರ ಮೂಲ ಸ್ಥಳದ ಹೊಸ ಮನೆ ಸಹ ಒಕ್ಕಲಿಗೆ ಸಿದ್ಧಗೊಂಡಿದೆ. ಅದೇ ಸಂಭ್ರಮದಲ್ಲಿ ಮಗನ ಮದುವೆ ಸಹ ಮಾಡಬೇಕೆನ್ನುವುದು ಅವರ ಇಂಗಿತ. ನಮ್ಮ ಮನೆಯವರಿಗೂ ಅಭ್ಯಂತರವೇನಿರಲಿಲ್ಲ. ನಮ್ಮಿಬ್ಬರಿಗೆ ಮಾತ್ರ ತುಂಬ ಬೇಗವಾಯಿತೇನೋ ಅನ್ನಿಸತೊಡಗಿತು. ಆದರೂ ಇಬ್ಬರೂ ಒಟ್ಟಿಗೆ ಇರಬಹುದೆಂಬ ಹಂಬಲ ಒಪ್ಪಿಗೆ ನೀಡುವಂತೆ ಮಾಡಿತು. ಅಂತೂ “ಆಹಾ ನನ್ ಮದ್ವೆಯಂತೆ” ಎಂದು ನಾನೂ ಹೇಳುವ ದಿನಗಳು ಬಂದೇ ಬಿಟ್ಟಿತು.
ಅದೊಂದು ದಿನ ಯಾವುದೋ ಕೆಲಸದ ನಿಮಿತ್ತ ಇಬ್ಬರೂ ಹೊರಟಿದ್ದೆವು. ಸ್ವಲ್ಪ ದೂರ ಹೋಗುವಾಗ ಒಂದು ಲಾರಿ ಯಮವೇಗದಲ್ಲಿ ಬರುತ್ತಿರುವುದು ಕಾಣಿಸಿತು. ಇಬ್ಬರು ಪುಟಾಣಿಗಳು ರಸ್ತೆಯ ಆಚೆ ಬದಿಯಲ್ಲಿ ಹೋಗುತ್ತಿದ್ದರು. ಅದು ಹಳ್ಳಿಯ ರಸ್ತೆ, ತುಂಬಾ ಕಿರಿದಾಗಿತ್ತು. ಆ ಲಾರಿ ಅವರ ಸನಿಹವೇ ಬರತೊಡಗಿತು. ಅದರ ಪರಿವೇ ಇಲ್ಲದೇ ನಡೆಯುತ್ತಿದ್ದವು ಅವು. ಇದನ್ನು ಗಮನಿಸಿದ ನಾವಿಬ್ಬರೂ ತಳಮಳಗೊಂಡೆವು. ದುಷ್ಯಂತ್ ಕೂಡಲೇ ರಸ್ತೆ ದಾಟಿ ಆಚೆ ಹೋದ. ಮಕ್ಕಳನ್ನು ಆದಷ್ಟು ಬದಿಗೆ ಕೊಂಡೊಯ್ದ. ಆದರೆ ವಿಧಿಯ ಲೆಕ್ಕಾಚಾರ ಬೇರೆ ಇತ್ತು. ಅದು ಬಲಿ ತೆಗೆದುಕೊಳ್ಳಲು ಪಣ ತೊಟ್ಟು ಬಂದ ಲಾರಿಯಾಗಿತ್ತು. ಲಾರಿ ಡ್ರೈವರ್ ಕುಡಿದಿದ್ದ. ಆ ಎರಡು ಹಸುಗೂಸುಗಳ ಜೊತೆ ನನ್ನ ದುಷ್ಯಂತ್ ಕೂಡ ನೋಡನೋಡುತ್ತಲೇ ಕಾಣೆಯಾಗಿದ್ದ. ಬೇರೆ ಯಾರ ಜೀವನದಲ್ಲೂ ಅಂತಹ ಒಂದು ದೃಶ್ಯ ನೋಡುವಂತೆ ಮಾತ್ರ ಆಗದಿರಲಿ ಎಂದು ಬೇಡಿಕೊಳ್ಳುತ್ತೇನೆ. ಆ ಎಳೆ ಜೀವಗಳ ಮೇಲೆ ದೈತ್ಯ ಲಾರಿ; ಅಬ್ಬಾ!!! ನಾನದೆಷ್ಟು ಪಾಪ ಮಾಡಿದ್ದೆನೋ ಅನ್ನಿಸಿತು.
ಇನ್ನು ನನ್ನ ದುಷ್ಯಂತ್. ಒಟ್ಟಿಗೆ ಆಡಿದೆವು, ಒಟ್ಟಿಗೆ ಶಾಲೆಗೆ ಹೊದೆವು, ಜಗಳಾಡಿದೆವು, ಒಂದಾದೆವು, ಒಳ್ಳೆಯ ಗೆಳೆಯ-ಗೆಳತಿಯರಾದೆವು, ಹದಿಹರೆಯದ ಸಹಜ ಪ್ರೇಮದ ಬಲೆಗೆ ಸಿಲುಕಿದೆವು, ಮುದ್ದು ಪ್ರೇಮಿಗಳಾಗಿ ನಾಲ್ಕು ವರ್ಷ ಎಣಿಸಲಾಗದಷ್ಟು ಚಂದದ ಕ್ಷಣಗಳ ಕೂಡಿಟ್ಟೆವು. ಅದೆಷ್ಟೋ ಹೊಸ ಮಿಡಿತಗಳ ಅನುಭವಿಸಿದೆವು. ನಲುಮೆಯ ನೌಕೆಯಲ್ಲಿ ಅಡೆತಡೆಗಳೆ ಇಲ್ಲದೇ ಅಲೆದಾಡಿದೆವು, ಮದುವೆ ಎಂಬ ಶಾಶ್ವತ ಬಂಧನಕ್ಕೆ ಮುಹೂರ್ತ ಇಟ್ಟೆವು. ಇವೆಲ್ಲ ಸಮಯದಲ್ಲೂ ನನ್ನ ನೆರಳಿಗೆ ಸಹ ಅವನ ನೆರಳಿನ ಸಹಚರ್ಯವನ್ನಿತ್ತವ ದುಷ್ಯಂತ್. ಎರಡು ಕ್ಷಣಗಳ ಮೊದಲು ನನ್ನ ಜೊತೆಯಿದ್ದ. ಆದರೆ ಈಗಿಲ್ಲ. ಇದೆಂಥ ಬದುಕು. ಒಂದು ಕ್ಷಣ, ಇಪ್ಪತ್ತೈದು ವಸಂತಗಳ ನಿರಂತರ ಸನಿಹವನ್ನ ಶಾಶ್ವತ ವಿರಹವಾಗಿ ಬದಲಿಸಿಬಿಟ್ಚರೆ ಅದೆಂಥ ಬದುಕು? ನಾ ಹೇಗೆ ಬದುಕಲಿ ಅವನಿಲ್ಲದೇ? ಗೊತ್ತಿಲ್ಲ. ನಾನೂ ಅವನ ಜೊತೆ ಆ ಮಕ್ಕಳನ್ನು ಬದುಕಿಸಲು ಏಕೆ ಹೋಗಲಿಲ್ಲ? ಈ ಕಡೆಯೇ ನಿಂತು ವಿಧಿಯ ಹುಚ್ಚಾಟ ನೋಡುತ್ತಿದ್ದೆನಲ್ಲ, ಯಾಕೆ? ಅದೂ ಗೊತ್ತಿಲ್ಲ. ನನ್ನ ಬದುಕಿನ ಕಥೆಗೆ ನಿರೀಕ್ಷೆಯಿರದ ತಿರುವು ನೀಡುವುದರಿಂದ ಉತ್ತಮ ಕಥೆಗಾರ ಎಂಬ ಬಿರುದು ಸಿಗುತ್ತದೆಯೇ ಆ ವಿಧಿಗೆ? ಗೊತ್ತಿಲ್ಲ. ಯಾವುದಕ್ಕೂ ಉತ್ತರವಿಲ್ಲ. ಬರಿ ಪ್ರಶ್ನೆಗಳು. ನನ್ನ ದೇವರಂಥ ಗೆಳೆಯ ಮಾತ್ರ ಕಥೆಯ ತಿರುವಿನಲ್ಲಿ ಮರೆಯಾಗಿ ಹೋದ.
ದೇವರೇ ಮರೆಯಾಗುವ ತಿರುವದು ಎದುರಾದರೆ ಅದೂ ಪ್ರೇಮವೇ? ಹ್ಮ… ಅದಕ್ಕೂ ಉತ್ತರವಿಲ್ಲ…