ಕಥೆ

ಪುತ್ತೂರಿನ ಹುಡುಗನೂ.. ಗುಜರಾತಿ ಹುಡುಗಿಯೂ..!

೧೨.೩೦ರ ಮಟ ಮಟ ಮಧ್ಯಾಹ್ನ ಮಂಗಳೂರು ಜಂಕ್ಷನ್’ನಲ್ಲಿ ನಿಜಾಮುದ್ದೀನ್ ಎಕ್ಸ್’ಪ್ರೆಸ್ ರೈಲು ಹತ್ತಿದ್ದ ನನಗೆ ಹಸಿವೋ ಹಸಿವು.. ಗೆಳೆಯ ಶ್ರೀನಿಧಿ ಮನೆಯಿಂದ ಬಾಳೆಲೆಯಲ್ಲಿ ಕಟ್ಟಿ ತಂದಿದ್ದ ಸೇಮಿಗೆ-ಸಾಂಬಾರನ್ನು ಬಿಚ್ಚಿಟ್ಟಾಗಲಂತೂ ನನ್ನ ಮೇಲೆ ನನಗೇ ಕಂಟ್ರೋಲ್ ಇರಲಿಲ್ಲ. ಗಬಗಬ ತಿನ್ನುವುದು, ಮುಕ್ಕುವುದು ಅಂತೆಲ್ಲಾ ಹೇಳುತ್ತಾರಲ್ಲಾ ನಮ್ಮ ಕಡೆ, ಹಾಗೆಯೇ ಗರಿಗರಿ ಸೇಮಿಗೆಯನ್ನು ಹೊಟ್ಟೆಯೊಳಗಿಳಿಸಿಕೊಂಡು ಒಂದರ್ಧ ಲೀಟರ್ ನೀರು ಕುಡಿದೆ. ರೈಲು ಅದಾಗಲೇ ಕಂಕನಾಡಿ ನಿಲ್ದಾಣವನ್ನು ಬಿಟ್ಟಾಗಿತ್ತು.  ಸಾವರಿಸಿಕೊಂಡು ನಿದ್ದೆಗೆ ಜಾರಬೇಕೆನ್ನುವಷ್ಟರಲ್ಲಿ ಚಪ್ಪಾಳೆ ತಟ್ಟುತ್ತಾ ಬಂದ ತೃತೀಯ ಲಿಂಗಿಗಳು ಹತ್ತು ರೂಪಾಯಿ ಕೊಟ್ಟಿದ್ದು ಸಾಲದು ಅಂತ ಚೊರೆಕಟ್ಟುತ್ತಲೇ ಹತ್ತು ನಿಮಿಷ ವ್ಯರ್ಥ ಮಾಡಿ ಬಿಟ್ಟರು, ನನ್ನದೂ, ಅವರದ್ದೂ!

ಸುರತ್ಕಲ್, ಮೂಲ್ಕಿ, ಪಡುಬಿದ್ರಿ ಮುಂತಾದ ಸ್ಟೇಷನ್’ಗಳನ್ನು ದಾಟಿ ನಿಜಾಮುದ್ದೀನ್ ಮುನ್ನುಗ್ಗಲು ಶುರು ಮಾಡಿತು. ವಾರದಿಂದೀಚೆಗೆ ವಿಪರೀತ ಮಳೆಯಾಗಿದ್ದರಿಂದ ರೈಲುಹಳಿಯ ಆಚೀಚೆಗಿನ ಹೊಲಗದ್ದೆಗಳು ಅಡಿಕೆ ತೋಟಗಳು ಬಹುತೇಕ ಜಲಾವೃತ್ತವಾಗಿದ್ದವು. ನಡುನಡುವೆ ಸಿಕ್ಕ ಸಣ್ಣ-ಪುಟ್ಟ ಬೆಟ್ಟ ಗುಡ್ಡಗಳ ನಡುವಿಂದ ಜಿನುಗುತ್ತಿದ್ದ ಸಣ್ಣ-ಪುಟ್ಟ ಜಲಪಾತಗಳು ಅತಿ ಸುಂದರವಾಗಿದ್ದವು. ಜಲಾವೃತ್ತವಾಗದೇ ಇದ್ದ ಹೊಲಗದ್ದೆಗಳಲ್ಲಿ ನೇಜಿ ನೆಡುತ್ತಿದ್ದ ಹೆಂಗಳೆಯರು, ಹೊಲ ಊಳುತ್ತಿದ್ದ ಎತ್ತುಗಳು ಕಾಣಿಸಿದವು.  ಆವಾಗ ಬಂತು ನೋಡಿ ಉಡುಪಿ.

ಉಡುಪಿಯಲ್ಲಿ ನಿಜಾಮುದ್ದೀನ್ ಎರಡು ನಿಮಿಷ ನಿಲ್ಲುತ್ತದೆ. ಉಡುಪಿಯಿಂದ ಅಷ್ಟೇನೂ ಪ್ರಯಾಣಿಕರಿರಲಿಲ್ಲದಿದ್ದರೂ ನಾನಿದ್ದ ಎ.ಸಿ. ಕಂಪಾರ್ಟ್’ಮೆಂಟ್’ಗೆ ಒಂದಿಬ್ಬರು ವಿದ್ಯಾರ್ಥಿನಿಯರು ಹತ್ತಿದರು. ಹೆಚ್ಚಿನ ಹುಡುಗರು ದೂರ ಪ್ರಯಾಣಿಸುವಾಗ ಮನಸ್ಸಿನಲ್ಲೆ “ದೇವರೇ, ನನ್ನ ಪಕ್ಕದ ಸೀಟಿನಲ್ಲಿ ಚಂದದ ಹುಡುಗಿ ಇರಲಿ” ಅಂತ ಬೇಡಿಕೊಳ್ಳುತ್ತಾರೆ. ನಾನು ಆಥರವೇನೂ ಬೇಡಿಕೊಳ್ಳದಿದ್ದರೂ ‘ಲಡ್ಡು ಬಂದು ಬಾಯಿಗೆ ಬಿತ್ತು’ ಎನ್ನುತ್ತಾರಲ್ಲ, ಹಾಗೆಯೋ ಏನೋ?! ಆ ವಿದ್ಯಾರ್ಥಿನಿಯರಲ್ಲಿ ಒಬ್ಬಳು ನನ್ನ ಮೇಲಿನ ಬರ್ತ್’ನಲ್ಲಿ ಬಂದು ಕುಳಿತಳು.

ಕರಣಂ ಪವನ್ ಪ್ರಸಾದರ ‘ಕರ್ಮ’ವನ್ನು ಹಿಡಿದು ಕುಳಿತಿದ್ದ ನನ್ನ ಏಕಾಗ್ರತೆಗೆ ಭಂಗ ಬಂದಿದ್ದೇ ಆವಾಗ! ಕೈಯಲ್ಲಿ ಕ್ಷಣ ಕ್ಷಣಕ್ಕೂ ಕುತೂಹಲ ಇಮ್ಮಡಿಸುವಂತಿದ್ದ ಕಾದಂಬರಿ, ಪಕ್ಕದಲ್ಲಿ ಆ ಕುತೂಹಲವನ್ನೂ ಮೀರಿಸುವ ಸೌಂದರ್ಯವತಿ ಹುಡುಗಿ…! ಎಂತಹಾ ಚಂದ ಅವಳದ್ದು ಅಂತಾ ಕೇಳ್ತೀರಾ? ನೀಳವಾದ ತಲೆಕೂದಲು, ಚೂಪಾದ ತುದಿಯಿರುವ ಜೀನ್ಸ್ ಪ್ಯಾಂಟ್, ಚಿಕ್ಕವೂ  ಚೊಕ್ಕವೂ ಆದ ಮಿರಿ-ಮಿರಿ ಮಿಂಚುತ್ತಿದ್ದ ಕೆಂಪು ಬಣ್ಣದ ಟಿ-ಶರ್ಟ್, ಅದಕ್ಕೆ ಮ್ಯಾಚಿಂಗ್ ಇರುವ ನೈಲ್ ಪಾಲಿಶ್ ಮತ್ತು ಲಿಪ್’ಸ್ಟಿಕ್..! ಆಸುಪಾಸು ಇಪ್ಪತ್ತೆರಡರ ಹುಡುಗಿಯಾಗಿರಬಹುದು ಅಂತ ನನ್ನ ಅಂದಾಜು. ಮಾತನಾಡಿಸುವುದೋ ಬೇಡವೋ ಎನ್ನುವ ಗೊಂದಲ‌. ಗೊಂದಲ ಎನ್ನುವುದಕ್ಕಿಂತಲೂ ಫ್ಲಾಪ್ ಆಗುವುದೋ ಎನ್ನುವ ಭಯ. ಆಕೆಯೂ ಅಷ್ಟೇ, ನನ್ನತ್ತ ಮುಸುಡೂ ನೋಡದೆ ಕುಳಿತಿದ್ದಳು.

ಕಾದಂಬರಿಯ ಕಡೆಗೆ ಗಮನಹರಿಸಿದರೆ ಆಕೆಯನ್ನು ನೋಡದೇ ಇರಬಹುದು ಅಂತ ‘ಕರ್ಮ’ದ ಕಡೆ ಕಾನ್ಸನ್’ಟ್ರೇಟ್ ಮಾಡಿದೆ. ಕಾದಂಬರಿಯಲ್ಲೂ ರೋಚಕ ಲವ್ ಸ್ಟೋರಿಯಿದ್ದದ್ದರಿಂದ ನನ್ನ ಗಮನ ಆಗಾಗ ಆ ಹುಡುಗಿಯ ಮೇಲೆ ಬರುತ್ತಲೇ ಇತ್ತು. ರೈಲು ಗಂಟೆಗೆ ನೂರಿಪ್ಪತ್ತರ ವೇಗದಲ್ಲಿ ಬಾರ್ಕೂರು, ಕುಂದಾಪುರ, ಭಟ್ಕಳ, ಕುಮಟಾ ಹೀಗೆ ಒಂದೊಂದೇ ಸ್ಟೇಷನ್ನುಗಳನ್ನು ದಾಟಿ ಮುಂದುವರಿದಿತ್ತು. ಜೊತೆಗೆ ನನ್ನ ಮಾನಸಿಕ ತೊಳಲಾಟವೂ.

ಸಂಜೆ ಐದರ ಹೊತ್ತಿಗೆ ಕಾರವಾರ ನಿಲ್ದಾಣಕ್ಕೆ ಬಂತು ನೋಡಿ ರೈಲು. ಅಲ್ಲಿ ಮಧ್ಯಾಹ್ನದಿಂದ ದಣಿವರಿಯದೆ ಬಂದಿದ್ದ ನಮ್ಮ ರೈಲಿಗೆ ಅರ್ಧ ಘಂಟೆ ರೆಸ್ಟ್! ಹಾಗಾಗಿ ನಾನೂ ಶ್ರೀನಿಧಿಯೂ ಏನಾದರೂ ತಿನ್ನೋಣ ಆಂತ ರೈಲಿನಿಂದ ಕೆಳಗಿಳಿದೆವು. ಇಳಿದು ಹಿಂದಕ್ಕೆ ನೋಡಿದಾಗ ನಮಗೆ ಕಂಡಿದ್ದು ಜಿಟಿಜಿಟಿ ಮಳೆಯಲ್ಲಿ ಮಿಂದೇಳುತ್ತಿದ್ದ, ಮಂಜು ಮುಸುಕಿದ, ಸ್ವಚ್ಛ ಹಸಿರ ಕಾನನವನ್ನೇ ಪ್ರಭಾವಳಿಯಂತೆ ಧರಿಸಿಕೊಂಡಿದ್ದ, ಅದೇ ಕಾಡನ್ನು ಸೀಳಿ ಘೀಳಿಡುತ್ತಾ ಬಂದು ನಿಂತಿದ್ದ ನಿಜಾಮುದ್ದೀನ್ ಎಕ್ಸ್’ಪ್ರೆಸ್ ರೈಲಿಗೆ ಆಸರೆ ಒದಗಿಸಿದ್ದ ಕಾರವಾರ ರೈಲು ನಿಲ್ದಾಣ. ಬ್ಯೂಟಿ..! ರೈಲಿನ ಒಳಗೂ, ರೈಲಿನ ಹೊರಗೂ!

ಅಲ್ಲಿ ಗುಡ್ಡೆ ಬಿಸ್ಕತ್ತನ್ನು ಚಹಾದೊಳಗೆ ಮುಳುಗಿಸಿ ಮುಳುಗಿಸಿ ತಿಂದೆವು. ತಿನ್ನುತ್ತಿರುವಾಗ ಗೆಳೆಯನ ಬಳಿ “ನೋಡೋ ನಿಧಿ, ಆ ಹುಡುಗಿ ಹತ್ರ ಮಾತಾಡೋಣ ಅನಿಸ್ತಿದೆ, ಬಟ್ ಧೈರ್ಯ ಬರ್ತಿಲ್ಲ, ಏನ್ಮಾಡ್ಲಿ?” ಅಂದೆ.. “ಜಸ್ಟ್ ಮಾತಾಡೋದ್ರಲ್ಲೇನಿದೆ ಮಾರಾಯ, ಅವ್ಳೇನು ನಿನ್ನನ್ ತಿಂತಾಳಾ?” ಅಂದ ಅವ. “ಅಲ್ಲಾ ಮಾರ್ರೆ, ಆದ್ರೂ….” ಅಂತ ನಾನು ರಾಗ ಎಳೆಯುತ್ತಿರುವಾಗಲೇ ಮಧ್ಯೆ ಬಾಯಿ ಹಾಕಿದ ನಿಧಿ “ನೀ ಮಾತಾಡೋದಾದ್ರೆ ಮಾತಾಡು, ಇಲ್ಲಾ ಅಂದ್ರೆ ನಾ ಮಾತಾಡ್ತೇನೆ” ಅಂತ ನಂಗೆ ಚುರುಕು ಮುಟ್ಟಿಸಿದ. ಒಲೆಯೊಳಗೆ ಆಡುತ್ತಿದ್ದ ಹೊಗೆಗೆ ಓಟೆಯಲ್ಲಿ ಗಾಳಿಯೂದಿ ಬೆಂಕಿ ಬರಿಸಿದಂತಿತ್ತು ಅವನ ಮಾತು.

ಆದದ್ದಾಗಲಿ, ಮಾತಾಡೋದು ಮಾತಾಡೋದೇ ಅಂತ ನಿರ್ಧರಿಸಿ ರೈಲನ್ನೇರಿದೆ. ಅಷ್ಟೊತ್ತಿಗೆ ರೈಲೂ ಹೊರಟಿತು. ಹೊರಡುವ ಮುನ್ನ ಕಾರವಾರದ ರೈಲು ನಿಲ್ದಾಣದ ಸುಂದರ ದೃಶ್ಯವನ್ನು ಕ್ಲಿಕ್ಕಿಸಲು ಮರೆಯಲಿಲ್ಲ. ನನ್ನ ಪಕ್ಕದ ಸೀಟಿನಲ್ಲೇ ಕುಳಿತಿದ್ದ ಆಕೆಯನ್ನು ನೋಡಿದ ನನಗೆ ಪರಮ ಸರ್’ಪ್ರೈಸ್ ಒಂದು ಕಾಡಿತ್ತು. ಉಡುಪಿಯಿಂದ ಕಾರವಾರದವರೆಗೂ ನನ್ನತ್ತ ಮುಸುಡೂ ನೋಡದ ಆಕೆ  ನನಗೆ ಸ್ಮೈಲ್ ಕೊಟ್ಟಿದ್ದಳು. ಮರುಭೂಮಿಯಲ್ಲಿ ಗಂಗಾನದಿಯೇ ಉದ್ಭವಾದಂತಹಾ ಅನುಭವ ನನಗೆ! ಹೇಗೋ ಧೈರ್ಯ ತಂದುಕೊಂಡು “ಹಾಯ್” ಎಂದೆ. ಆಕಡೆಯಿಂದ “ಹಲೋ” ಎನ್ನುವ ಉತ್ತರ ಬಂದ ಮೇಲೆ ಕೇಳಬೇಕೇ?! ಸ್ವರ್ಗಕ್ಕೆ ಮೂರೇ ಮೂರು ಗೇಣು!

ಶ್ರೀನಿಧಿಯ ಕೈಗೆ ‘ಕರ್ಮ’ವನ್ನು ಕೊಟ್ಟು ನಾನು ಆಕೆಯ ಜೊತೆಗೆ ‘ಪುಂಡಿ’ಗಿಳಿದೆ! (ಹುಡುಗ ಹುಡುಗಿಯ ಜೊತೆಗೆ ಹೆಚ್ಚಾಗಿ ಮಾತನಾಡುವುದಕ್ಕೆ ಮಂಗಳೂರಿನ ಕಡೆಗೆ ಪುಂಡಿ ಮಾಡುವುದು ಎನ್ನುತ್ತಾರೆ). ಗುಜರಾತಿನ ಹುಡುಗಿ, ಮಣಿಪಾಲದ ಎಮ್.ಐ.ಟಿ.ಯಲ್ಲಿ ಎಮ್.ಟೆಕ್. ಮಾಡುತ್ತಿದ್ದಾಳೆ ಎನ್ನುವುದು ತಿಳಿದಾಗ ವಯಸ್ಸು ಇಪ್ಪತ್ತೆರಡಾಗಿರಬಹುದು ನನ್ನ ಅಂದಾಜು ತಪ್ಪಾಗಿದೆ ಎನ್ನುವ ಅರಿವಾಯಿತು. ಎನಿ ವೇ, ನನಗಿಂತ ಸಣ್ಣವಳು ಎನ್ನುವ ವಿಷಯ ಮಾತ್ರ ತುಂಬಾನೇ ಸಮಾಧಾನ ತಂದು ಕೊಟ್ಟಿತು. ಗುಜರಾತಿಯಾದರೂ ಮಣಿಪಾಲಕ್ಕೂ ನನ್ನ  ಪುತ್ತೂರಿಗೂ ಹೆಚ್ಚು ದೂರವಿಲ್ಲ ಅಂತ ನನಗೆ ನಾನೇ ಸಮಾಧಾನ ಮಾಡಿಕೊಂಡೆ. ಆಕೆಯ ಜೊತೆ ಮಾತನಾಡುತ್ತಾ ಮಾತನಾಡುತ್ತಾ ಗೋವಾ ಮತ್ತು ಮುಂಬೈ ಭಾಗಗಳಲ್ಲಿ ರೈಲು ಸಂಚರಿಸುವಾಗ ಕಾಣುವ ಸೌಂದರ್ಯವೆಲ್ಲಾ ಕಣ್ಣಿಗೆ ಕಾಣದಾಗಿತ್ತು. ಯಾಕೆಂದರೆ ನಾನು ಮಾತನಾಡುವುದರಲ್ಲೇ ಮೈಮರೆತಿದ್ದೆ. ಹಾಸ್ಟೆಲ್’ನಿಂದ ಮನೆಗೆ ಹೋಗುತ್ತಿದ್ದುದರಿಂದ ಆಕೆಯ ಕೈಯಲ್ಲಿ ಎರಡು ಸಿಲ್ಕ್ ಚಾಕ್ಲೇಟ್ ಬಿಟ್ಟರೆ ತಿನ್ನುವುದಕ್ಕೆ ಬೇರೇನೂ ಇರಲಿಲ್ಲ. ಹಾಗಾಗಿ ಅಮ್ಮ ನನಗೆ ಬಹಳಾ ಪ್ರೀತಿ ಅಂತ ಕಡುಕೆಂಪು ಕೆಂಡದಲ್ಲಿ ಸುಟ್ಟು ಕೊಟ್ಟಿದ್ದ ಹಲಸಿನಕಾಯಿಯ ಹಪ್ಪಳ ಮತ್ತು ಒಂದಷ್ಟು ಸಾಂತಾಣಿಯನ್ನು ಆಕೆಯ ಮುಂದೆ ಹರವಿದೆ. ಮೆಲ್ಲುತ್ತಾ ಮೆಲ್ಲುತ್ತಾ ನಮ್ಮ ಮಾತುಕತೆ ಮುಂದುವರಿದಿತ್ತು.

ಮುಂದೆ ನಡೆದಿದ್ದೆಲ್ಲಾ ಇತಿಹಾಸ! ಲವ್ ಎಟ್ ಫಸ್ಟ್ ಮೀಟ್!  ಕಟ್ಟಾ ಸಂಪ್ರದಾಯವಾದಿ ಬ್ರಾಹ್ಮಣನಾಗಿದ್ದ ನನಗೆ ಆಕೆ ಗುಜರಾತಿ ಬ್ರಾಹ್ಮಣಳೆಂದು ಗೊತ್ತಾದಾಗ ದೇವರು ಈಕೆಯನ್ನು ಸೃಷ್ಟಿಸಿದ್ದು ನನಗಾಗಿಯೇ ಅಂತ ಅನಿಸಿದ್ದು ಮಾತ್ರ ಸುಳ್ಳಲ್ಲ. ಇಬ್ಬರೂ ಇಂಜಿನಿಯರ್ಸು ಅನ್ನುವುದಕ್ಕಿಂತಲೂ, ಇಬ್ಬರ ಅಭಿರುಚಿಗಳೂ ಹೆಚ್ಚು ಕಡಿಮೆ ಒಂದೇ ಆಗಿದ್ದುದರಿಂದ  ಬೇರೆ ರಾಜ್ಯದವಳು, ಬೇರೆ ಭಾಷೆಯವಳು ಎನ್ನುವ ಫೀಲ್ ಕೂಡ ಬರಲಿಲ್ಲ. ಮನೆಯವರು, ನೆಂಟರಿಷ್ಟರು ಏನು ಹೇಳಬಹುದೆನ್ನುವ ಗೋಜಿಗೂ ಹೋಗಲಿಲ್ಲ. ಮದುವೆಯಾದರೆ ಇವನನ್ನೇ/ಇವಳನ್ನೇ ಎನ್ನುವ ನಿರ್ಧಾರವನ್ನು ನಾವಿಬ್ಬರೂ ಮಾಡಿಯಾಗಿತ್ತು. ಅದೂ ಸಹ ಹದಿನಾರು ಘಂಟೆಗಳ ಪರಿಚಯದಲ್ಲಿ. ಉಡುಪಿಯಲ್ಲಿ ಅಪರಿಚಿತರಾಗಿದ್ದವರು ರೈಲು ಮುಂಬೈ ದಾಟುವಾಗ ಸತಿಪತಿಗಳಂತಾಗಿದ್ದೆವು! ನಮ್ಮ ಲವ್ವಿನ ವೇಗ ನಿಜಾಮುದ್ದೀನ್ ಎಕ್ಸ್’ಪ್ರೆಸ್ ರೈಲಿನ ವೇಗವನ್ನೂ ಮೀರಿಸಿತ್ತು!

ಮಾತಿನ ನಡುನಡುವೆ ನನ್ನ ಇಮ್ಯಾಜಿನೇಶನ್  ಭವಿಷ್ಯದ ಕಡೆಗೂ ಹೊರಳಿತು. ಗುಜರಾತಿನಲ್ಲಿ ನಡೆಯುವ ನಮ್ಮ ಮದುವೆಗೆ ಮಂಗಳೂರಿನಿಂದ ನಮ್ಮಿಬ್ಬರ ಪ್ರೀತಿಗೆ ಅಡಿಪಾಯ ಹಾಕಿದ್ದ ಅದೇ ಒಂದು ಕಿಲೋಮೀಟರ್ ಉದ್ದದ ನಿಜಾಮುದ್ದೀನ್ ಎಕ್ಸ್’ಪ್ರೆಸ್ ರೈಲಿನಲ್ಲಿ ವರನ ದಿಬ್ಬಣ ಬರುವುದಂತೆ, ಹತ್ತಾರು ನೆಂಟರಿಷ್ಟರೆಲ್ಲಾ ಸೇರಿ ಒಂದೂವರೆ ದಿನದ ರೈಲು ಪ್ರಯಾಣವನ್ನು ಗಮ್ಮತ್ತ್ ಮಾಡುವುದಂತೆ, ಮದುವೆಯ ಹಿಂದಿನ ದಿನ ಪ್ರಮುಖ ಆಕರ್ಷಣೆಯಾಗಿ ಬಾಂಗ್ರಾ ನೃತ್ಯವಂತೆ, ಪಾನೀಪೂರಿ, ಮಸಾಲಪೂರೀಯಂತೆ, ಮದುವೆಯ ದಿನ ವರನನ್ನು ಕುದುರೆಯ ಸಾರೋಟಿನಲ್ಲಿ ಕರೆತರುವುದಂತೆ!  ಹೀಗೆ ಏನೇನೋ ಇಮ್ಯಾಜಿನೇಶನ್, ಆಸೆ-ಆಕಾಂಕ್ಷೆಗಳು! ಹಿಂದೆ ದುಬೈಗೆ ಹೋಗಿದ್ದಾಗ ಸ್ನೇಹಿತ ಶಿವಪ್ರಸಾದ್ ಸುರ್ಯ “ನೀವು, ಅರೆಬಿಯ ಹುಡುಗಿಯನ್ನು ಮದ್ವೆಯಾಗಿ ಮಾರ್ರೆ, ನಾವೆಲ್ಲ ಒಂಟೆಯ ಮೇಲೆ ಕುಳಿತು ದಿಬ್ಬಣ ಬರುತ್ತೇವೆ” ಎಂದಿದ್ದು ಮನಸ್ಸಿನಲ್ಲಿ ಹಾದು ಹೋಯಿತು. ಇನ್ನು ಈ ವಿಷಯದಲ್ಲಿ ಹೇಗೆಲ್ಲಾ ಕಿಚಾಯಿಸುತ್ತಾನೋ ಎನ್ನುವ ಹೆದರಿಕೆಯೂ! ಆವಾಗಾವಾಗ ‘ಚಾಯ್ ಚಾಯೇ… ಕಾssಫೀ’ ಅಂತ ಬರುತ್ತಿದ್ದವರ ಕಿರಿಕಿರಿ ನನ್ನ ಇಮ್ಯಾಜಿನೇಶನ್ನಿಗೆ ಆಗಾಗ ತಡೆಯೊಡ್ಡುತ್ತಲೇ ಇತ್ತು.

ನನ್ನ ಡೆಸ್ಟಿನೇಶನ್ ಗುಜರಾತಿನ ವಾಪಿ ರೈಲು ನಿಲ್ದಾಣವಾಗಿದ್ದರೆ, ಆಕೆಯದ್ದು ಅದಕ್ಕೆ ಒಂದು ಸ್ಟೇಷನ್ ಹಿಂದಿನದ್ದು, ವಾಸಾಯ್ ನಿಲ್ದಾಣ. ನಮ್ಮಿಬ್ಬರ ನಿಲ್ದಾಣಗಳೂ ಸಮೀಪಿಸುತ್ತಿತ್ತು. ಮೊದಮೊದಲು ಒಮ್ಮೆ ನಮ್ಮ ನಿಲ್ದಾಣ ಬರಲಿ ಎನ್ನುತ್ತಿದ್ದವರು, ಈಗ ಯಾಕಾದರೂ ನಮ್ಮ ನಿಲ್ದಾಣ ಇಷ್ಟು ಬೇಗ ಬರುತ್ತಿದೆ ಅಂತ ಬೇಸರಿಸಿಕೊಂಡೆವು. ಆದರೆ ಈ  ಅಗಲಿಕೆ ತಾತ್ಕಾಲಿಕ, ಮದುವೆ ಎನ್ನುವ ಸೇರುವಿಕೆ ನಿತ್ಯಸತ್ಯ ಎನ್ನುವ ಆಶಾವಾದ ಇದ್ದಿದ್ದರಿಂದ ಇಬ್ಬರೂ ಸಮಾಧಾನಗೊಂಡೆವು.

ಅಂತೂ ಆಕೆಯ ಸ್ಟೇಷನ್ ಬಂದೇ ಬಿಟ್ಟಿತು. ವೆಕೇಷನ್ ಮುಗಿಸಿಕೊಂಡು ಮಣಿಪಾಲಕ್ಕೆ ಬರುವಾಗ ಮೀಟಾಗೋಣ ಎನ್ನುತ್ತಾ ರೈಲಿನಿಂದ ಕೆಳಗಿಳಿದಳು. ಮೊದಲ ಭೇಟಿಯ ನೆನಪಿಗಾಗಿ ಏನಾದರೂ ಕೊಡೋಣವೆಂದರೆ ಆ ನಿಲ್ದಾಣದಲ್ಲಿ ಏನೂ ಇಲ್ಲ. ಕಡೆಗೆ ಬೇಕರಿಯಂತಿದ್ದ ಅಂಗಡಿಯೊಂದರಿಂ‍ದ ಒಂದು ಬಾಕ್ಸ್ ದೋಕ್ಲಾ ತೆಗೆದುಕೊಟ್ಟೆ.  ಹೊರಡುವ ಮುನ್ನ ಹಗ್ ಮಾಡೋಣ ಅಂತ ಕೈ ಚಾಚಿದೆ. ಆಕೆ ಮಣಿಪಾಲದ ಎಮ್.ಐ.ಟಿ.ಯ ಹುಡುಗಿ ಹೌದು ಎನ್ನುವುದನ್ನು ತೋರಿಸುವುದಕ್ಕಾಗಿಯೋ ಏನೋ ಅಷ್ಟೊಂದು ಜನರ ಮುಂದೆ ಆಕೆಯೇ ನನ್ನ ಹಣೆಗೆ ಮುತ್ತಿಕ್ಕಿದಳು. ರೈಲು ಹೊರಡುವವರೆಗೂ ಹೀಗೆಯೇ ಇರೋಣ ಎಂದೆ. ಆಕೆ ಮತ್ತೂ ಮುಂದುವರಿದು ತುಟಿಗೆ ತುಟಿ ತಾಗಿಸಿ ಮುತ್ತಿಕ್ಕಲು ಹೊರಟಳು. ಆ ಕ್ಷಣ ರೋಗಿ ಬಯಸಿದ್ದೂ ಅದೇ; ವೈದ್ಯ ನೀಡಿದ್ದೂ ಅದೇ ಎನ್ನುವಂತಿತ್ತು.  ಇನ್ನೇನು ಲಿಪ್ ಲಾಕ್ ಆಗಬೇಕೆನ್ನುವಷ್ಟರಲ್ಲಿ ನನ್ನ ಫೋನ್ ರಿಂಗಣಿಸಿತು. ಹಲೋ ಎಂದೆ. ಆ ಕಡೆಯಿಂದ ವಾಪಿ ನಿಲ್ದಾಣದಲ್ಲಿ ನಮ್ಮನ್ನು ಸ್ವಾಗತಿಸಲು ಮುಂಜಾನೆಯೇ ಬಂದು ಕಾದು ಕುಳಿತಿದ್ದ ಸ್ನೇಹಿತೆ “ನಿಮ್ಮ ನಿಲ್ದಾಣ ಬಂತು, ಸಾಕು ಮಲಗಿದ್ದು” ಅಂತ ಹೇಳುವುದು ಕೇಳಿಸಿತು. ಅಲ್ಲಿಗೆ ನನ್ನ ವರ್ಣರಂಜಿತ ಕನಸಿಗೆ ತೆರೆ ಬಿತ್ತು! ಅಷ್ಟು ಚಂದದ ಹುಡುಗಿಯನ್ನು ಕನಸಿನಲ್ಲಿ ಕಾಣಿಸಿ ಕಡೆಗೆ ಏನೂ ಇಲ್ಲದಂತೆ ಮಾಡಿದ ದೇವರಿಗೂ, ಕರೆ ಮಾಡಿ ಕನಸಿಗೆ ತಡೆಯೊಡ್ಡಿದ ಸ್ನೇಹಿತೆಗೂ ಹಿಡಿಶಾಪ ಹಾಕುತ್ತಾ ಹೆಜ್ಜೆ ಹಾಕಿದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!